ಲೋಕಮತ
ಲೋಕೇಶ್ ಕಾಯರ್ಗ
ಅವರು ಮೈಸೂರಿನ ಚಿರಪರಿಚಿತ ಉದ್ಯಮಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸುಸಂಸ್ಕೃತ ಕುಟುಂಬ. ಪ್ರತಿಷ್ಠಿತ ಕಾರು ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಒಬ್ಬನೇ ಮಗನ ವಿವಾಹ ನೆರವೇರಿದಾಗ ಮೈಸೂರಿನ ಬಹುಪಾಲು ಗಣ್ಯರು ಭಾಗವಹಿಸಿದ್ದರು.
ಕುಟುಂಬ ಸದಸ್ಯರೆಲ್ಲರೂ ಸೇರಿ ಅವರನ್ನು ಬರಮಾಡಿಕೊಂಡು ಸಂಭ್ರಮಿಸಿದ್ದರು. ಆದರೆ ಈ ಸಂಭ್ರಮ, ಸಂತಸ
ಹೆಚ್ಚು ದಿನ ಉಳಿಯಲಿಲ್ಲ. ಒಂದು ವರ್ಷದೊಳಗೆ ಯುವ ದಂಪತಿ ನಡುವೆ ಮನಸ್ತಾಪ ಆರಂಭವಾಗಿತ್ತು. ಕುಟುಂಬ ದಲ್ಲಿ ಪಾಲು ಪಡೆದು ಪ್ರತ್ಯೇಕ ಬ್ಯುಸಿನೆಸ್ ಆರಂಭಿಸೋಣ ಎಂದು ಪತ್ನಿ ಒತ್ತಡ ಹೇರಲಾರಂಭಿಸಿದ್ದಳು. “ಅಪ್ಪ- ಅಮ್ಮನಿಗೆ ನಾನೊಬ್ಬನೇ ಮಗ. ಪಾಲು ಪಡೆಯುವ ಅವಶ್ಯಕತೆ ಏನು” ಎಂದು ಆತ ಪತ್ನಿಯ ಪ್ರಸ್ತಾಪಕ್ಕೆ ಸೊಪ್ಪು ಹಾಕಲಿಲ್ಲ.
ಒತ್ತಡ ಇನ್ನಷ್ಟು ಹೆಚ್ಚಿದಾಗ ಮಹಾರಾಷ್ಟ್ರದ ನಗರವೊಂದರಲ್ಲಿ ಕೆಲಸ ಮಾಡುತ್ತಿದ್ದ ಆತ ಕೆಲಸ ತೊರೆದು ಮೈಸೂರಿಗೆ ಮರಳಿದ್ದ. ಆದರೆ ಪತ್ನಿ ಹೊಸ ವರಸೆ ಆರಂಭಿಸಿದ್ದಳು. ತಂದೆಯ ಬಳಿ ಪಾಲು ಕೇಳದಿದ್ದರೆ ಕೌಟುಂಬಿಕ
ದೌರ್ಜನ್ಯ ತಡೆ ಕಾಯಿದೆಯಡಿ ಎಲ್ಲರ ಮೇಲೆ ಕೇಸು ದಾಖಲಿಸುವುದಾಗಿ ಪದೇ ಪದೆ ಬೆದರಿಕೆ ಹಾಕಲಾರಂಭಿಸಿದಳು. ಅಪ್ಪನಿಗೆ ನಾಲ್ವರು ತಮ್ಮಂದಿರು, ಐವರು ತಂಗಿಯಂದಿರು. ಅವರ ಕುಟುಂಬವೂ ಸೇರಿದರೆ ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮಂದಿರು, ಅತ್ತೆ, ಮಾವಂದಿರು, ಅವರ ಮಕ್ಕಳು, ಸೊಸೆಯಂದಿರು ಸೇರಿ 20ಕ್ಕೂ ಹೆಚ್ಚು ಸದಸ್ಯರ ತುಂಬು ಕುಟುಂಬ. ಈತ ಯೋಚಿಸಲಾರಂಭಿಸಿದ. ಪತ್ನಿ ಕೇಸು ಹಾಕಿದರೆ ಎದುರಿಸಬಹುದು. ಆದರೆ ಒಂದು ದಿನದ ಮಟ್ಟಿಗಾದರೂ ಕುಟುಂಬ ಸದಸ್ಯರೆಲ್ಲರೂ ಜೈಲಿಗೆ ಹೋಗಬೇಕಾಗುತ್ತದ್ದಲ್ಲ ಎಂದು ಪರಿತಪಿಸಿದ.
ಕೊನೆಗೊಂದು ನಿರ್ಧಾರಕ್ಕೆ ಬಂದ, “ ನಾನು ಬದುಕಿದರೆ ತಾನೇ ಇವಳು ಕೇಸು ಹಾಕುವುದು. ನಾನೇ ಸತ್ತರೇ..?” ಎಂದು ಯೋಚಿಸಿದ. ಮರುಕ್ಷಣವೇ ನೇಣಿಗೆ ಕೊರಳೊಡ್ಡಿ ಕೈಯಾರೆ ಸಾವು ತಂದುಕೊಂಡ. ಆದರೆ ಆತ ಎಣಿಸಿದಂತೆ ಪ್ರಕರಣ ಇಲ್ಲಿಗೇ ಕೊನೆಗೊಳ್ಳಲಿಲ್ಲ. ಯಾವುದು ಆಗಬಾರದೆಂದು ಸಾವಿಗೆ ಶರಣಾಗಿದ್ದನೋ, ಅದು ನಡೆದೇ
ಹೋಯಿತು. ಪೋಸ್ಟ್ಮಾರ್ಟಂ ವೇಳೆ ಖುದ್ದು ಹಾಜರಾಗಿ ತಮಗೆ ಬೇಕಾದ ರೀತಿಯಲ್ಲಿ ಪೊಲೀಸರ ಬಳಿ ಹೇಳಿಕೆ ಕೊಟ್ಟ ಪತ್ನಿ ಕಡೆಯವರು ಸ್ಮಶಾನದತ್ತ ತಲೆ ಹಾಕಲಿಲ್ಲ. ಅಂತ್ಯಕ್ರಿಯೆಗೂ ಬರಲಿಲ್ಲ.
ತಂದೆ- ತಾಯಿ ಪುತ್ರ ಶೋಕದಲ್ಲಿರುವಾಗಲೇ ಆಸ್ತಿಯಲ್ಲಿ ಪಾಲು ಕೇಳಿ ಸೊಸೆಯ ರಿಜಿಸ್ಟರ್ಡ್ ಪೋಸ್ಟ್ ಬಂತು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಅತ್ತೆ- ಮಾವ ವರದಕ್ಷಿಣೆಗೆ ಪೀಡಿಸಿದ ಕಾರಣದಿಂದಲೇ ಗಂಡನ ಸಾವಿಗೆ ಶರಣಾದ ಎಂದು ಎಂದು ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅಂತ್ಯಕ್ರಿಯೆ ಮುಗಿಸಿದ ಬೆನ್ನಿಗೇ ಉದ್ಯಮಿ ಜೈಲು
ಸೇರುವಂತಾಯಿತು. ಸೊಸೆಯ ಕಿರುಕುಳವನ್ನು ಕೋರ್ಟ್ ಮುಂದಿಟ್ಟು ಜಾಮೀನು ಪಡೆದು ಹೊರಬರುವಷ್ಟರಲ್ಲಿ 4 ದಿನಗಳು ಕಳೆದಿದ್ದವು. ಪತ್ನಿಗೆ ಬಂಧನಕ್ಕೆ ಮೊದಲೇ ನಿರೀಕ್ಷಣಾ ಜಾಮೀನು ಲಭಿಸಿದ್ದರಿಂದ ಜೈಲು ಸೇರುವುದು ತಪ್ಪಿತು. ಇದಾಗಿ ಎರಡು ವರ್ಷಗಳ ಬಳಿಕ ಕುಟುಂಬದ ಉಳಿದ ಸದಸ್ಯರನ್ನೂ ಪ್ರತಿವಾದಿಗಳನ್ನಾಗಿಸಿ ಮತ್ತೊಂದು
ವರದಕ್ಷಿಣೆ ಕಿರುಕುಳದ ಕೇಸು ಬಿತ್ತು.
ಅಂದು ಜೈಲಿಗೆ ಹೋದ ಕುಟುಂಬ, ಮಗನನ್ನು ನೆನಪಿಸಿಕೊಂಡು ಇಂದಿಗೂ ಮರುಗುತ್ತಿದೆ. ಎರಡು ವರದಕ್ಷಿಣೆ ಪ್ರಕರಣಗಳಲ್ಲಿ ಒಂದು ಕೇಸು ಸುಳ್ಳು ಎಂದು ಸಾಬೀತಾಗಿ ಇತ್ಯರ್ಥಗೊಂಡಿದೆ. ಇನ್ನೊಂದು ಕೇಸಿನ ವಿಚಾರಣೆ ಈಗಲೂ ಮುಂದುವರಿದಿದೆ. ಈ ನಡುವೆ ಆಸ್ತಿಯಲ್ಲಿ ಪಾಲು ಪಡೆದ ಸೊಸೆ ತನ್ನ ಹಳೆಯ ಪ್ರಿಯತಮನನ್ನು
ಮದುವೆಯಾಗಿ ‘ಸುಖೀ’ ಜೀವನ ನಡೆಸುತ್ತಿದ್ದಾಳೆ. ಒಬ್ಬನೇ ಮಗನನ್ನು ಕಳೆದುಕೊಂಡ ತಂದೆ-ತಾಯಿ ಈ ದು:ಖ ದಿಂದ ಇನ್ನೂ ಹೊರ ಬಂದಿಲ್ಲ.
ನೂರೆಂಟು ಕಥೆಗಳು ಇದು ಒಂದು ಉದಾಹರಣೆ ಮಾತ್ರ. ಕರುಳು ಹಿಂಡುವ ಇಂತಹ ನೂರಾರು ಕಥೆಗಳಿವೆ. ಸಂಪ್ರ
ದಾಯ, ಸಂಸ್ಕೃತಿಯನ್ನು ಇನ್ನು ಉಳಿಸಿಕೊಂಡಿರುವ ಮೈಸೂರಿನಂತಹ ನಗರದಲ್ಲಿ ಒಂದೂವರೆ ದಶಕದ ಹಿಂದೆಯೇ ವರದಕ್ಷಿಣೆ ಕಾನೂನಿನ 498 (ಎ) ವಿರುದ್ಧ ಹೋರಾಟ ಆರಂಭವಾಗಿತ್ತು. ನವೆಂಬರ್ 19ರ ಅಂತಾ ರಾಷ್ಟ್ರೀಯ ಪುರುಷರ ದಿನದಂದು, ನೊಂದವರು, ಸಂತ್ರಸ್ತರು ಸೇರಿ “ನಮ್ಮನ್ನು ಕಾಪಾಡಿ, ಕಾನೂನಿನ ಭಯೋ ತ್ಪಾದನೆಯನ್ನು ನಿಲ್ಲಿಸಿ. ಸುಳ್ಳು ಕೇಸು ದಾಖಲಿಸಿ ಕುಟುಂಬ ಸದಸ್ಯರನ್ನು ಜೈಲಿಗೆ ತಳ್ಳುವ ಪತ್ನಿಯರಿಂದ ರಕ್ಷಣೆ ಕೊಡಿ, ಗಂಡಂದಿರ ಆತ್ಮಹತ್ಯೆಯನ್ನು ತಡೆಗಟ್ಟಿ” ಎಂದು ಘೋಷಣೆ ಕೂಗಿ, ಮೆರವಣಿಗೆ ನಡೆಸುವ ಪರಿಪಾಠ ಆರಂಭವಾಗಿತ್ತು. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ನವೆಂಬರ್ 19ರಂದು ಭಾರತೀಯ ದಂಡ ಸಂಹಿತೆಯ 498 (ಎ) ಮತ್ತು 406 ರ ವಿರುದ್ಧ ಪ್ರತಿಭಟನೆ, ಘೋಷಣೆಗಳು ಕೇಳಿ ಬರುತ್ತವೆ. ಇವರಲ್ಲಿ ಹೆಚ್ಚಿನವರು 25ರಿಂದ 45 ವರ್ಷಗಳ ವಯೋಮಾನದವರು.
ಬಹುತೇಕರು ಕೈ ತುಂಬಾ ಸಂಬಳ ಪಡೆಯುವ ವೃತ್ತಿಪರ ಉದ್ಯೋಗದಲ್ಲಿರುವವರು. ಈ ಕಾನೂನಿನ ದುರ್ಬಳಕೆ ತಪ್ಪಿಸಿ ಎನ್ನುವುದು ಇವರೆಲ್ಲರ ಒಕ್ಕೊರಲ ಬೇಡಿಕೆ. ನೂರು ಅಪರಾಧಿಗಳು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂದು ನಮ್ಮ ಕಾನೂನಿನ ಮೂಲ ಆಶಯ. ಆದರೆ 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ತಿದ್ದುಪಡಿ ಯಾಗಿ ಬಂದ ಬಳಿಕ, ಜೈಲು ಸೇರಿದವರಲ್ಲಿ ಅಪರಾಧಿಗಳು ಮಾತ್ರವಲ್ಲ ನಿರಪರಾಧಿಗಳು
ಸೇರಿದ್ದರು. ನಮ್ಮ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪೈಕಿ ಬಹುಪಾಲು ಮಂದಿ ಇದೇ ಕಾನೂನಿನಡಿ ಕಾರಾಗೃಹ ಸೇರುತ್ತಿದ್ದಾರೆ. ಅಂದರೆ ಇದರ ಉಪಯೋಗ ಮತ್ತು ದುರುಪಯೋಗ ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂದು ಯಾರೂ ಊಹಿಸಬಹುದು.
ಕಾಯಿದೆಯ ಲೋಪಕ್ಕೆ ಮತ್ತೊಂದು ಬಲಿ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಈ ಕಾನೂನಿನ ದುರುಪಯೋಗವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. 24 ಪುಟಗಳ ಆತ್ಮಹತ್ಯೆ ಪತ್ರದಲ್ಲಿ ಅತುಲ್
ಬರೆದಿರುವ ವಿವರಗಳು ಈ ಕಾನೂನು ಮಾತ್ರವಲ್ಲ ದೇಶದ ಭ್ರಷ್ಟ ವ್ಯವಸ್ಥೆಯ ಮೇಲೂ ಬೆಳಕು ಚೆಲ್ಲಿದೆ. ಜನರ ಪಾಲಿಗೆ ನ್ಯಾಯದ ಕೊನೆಯ ಆಶಾಕಿರಣ ಎಂದರೆ ನ್ಯಾಯಾಂಗ. ಆದರೆ ಈ ಕಾನೂನನ್ನು ಬಳಸಿ ನ್ಯಾಯಾಂಗದ ಅಧಿಕಾರಿಗಳೂ ಹೇಗೆ ಶೋಷಣೆ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅತುಲ್ ತನ್ನ ಮರಣ ಪತ್ರದಲ್ಲಿ
ವಿವರಿಸಿದ್ದಾನೆ.
ಮೈಸೂರಿನ ಉದ್ಯಮಿಯ ಪ್ರಕರಣದಂತೆ ಇಲ್ಲೂ ಪತ್ನಿ ಅತ್ತೆ- ಮಾವ ಮತ್ತು ಗಂಡನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅದರ ಇತ್ಯರ್ಥಕ್ಕೆ ಮೂರು ಕೋಟಿ ರೂಪಾಯಿ ಬೇಡಿಕೆ ಮುಂದಿಟ್ಟಿದ್ದಳು. ವರದಕ್ಷಿಣೆ ಪ್ರಕರಣವಲ್ಲದೆ
ಕೊಲೆ ಯತ್ನ, ಲೈಂಗಿಕ ದುರ್ನಡತೆ, ಹಣಕ್ಕಾಗಿ ಕಿರುಕುಳ, ಗೃಹಹಿಂಸೆ ಸೇರಿ ೯ ಪ್ರಕರಣಗಳಲ್ಲಿ ಪತಿಯನ್ನು ಸಿಲುಕಿಸಿ ದ್ದಳು. ಅತುಲ್ ದುರದೃಷ್ಟಕ್ಕೆ ಮಧ್ಯಸ್ಥಿಕೆ ನ್ಯಾಯಾಲಯ ಕೂಡಾ ಸುಪ್ರೀಂಕೋರ್ಟ್ ನಿಯಮಾವಳಿ ಯನ್ವಯ ಕಾರ್ಯ ನಿರ್ವಹಿಸಿರಲಿಲ್ಲ.
ಆತ ಮರಣಪತ್ರದಲ್ಲಿ ಉಲ್ಲೇಖಿಸಿರುವಂತೆ ನ್ಯಾಯಾಧೀಶರೇ ಜಾಮೀನಿಗಾಗಿ ಲಂಚ ಕೇಳಿದ್ದರು. “ಮಗ ಕನಿಷ್ಠ 40 ಬಾರಿ ಬೆಂಗಳೂರಿನಿಂದ ಉತ್ತರಪ್ರದೇಶದ ಜುನಾಪುರಕ್ಕೆ ಹೋಗಿದ್ದ. ಆಕೆ ಒಂದರ ಮೇಲೊಂದರಂತೆ ಪ್ರಕರಣ ದಾಖಲಿಸುತ್ತಿದ್ದಳು. ಹತಾಶನಾಗಿದ್ದ ಆತ ನಮಗೆ ಬೇಸರವಾಗಬಾರದೆಂದು ಯಾವುದನ್ನೂ ತೋರ್ಪಡಿಸುತ್ತಿರಲಿಲ್ಲ.
ಆದರೆ ಸಾವಿಗೆ ಮೊದಲು ತಮ್ಮನಿಗೆ ಇ-ಮೇಲ್ ಸಂದೇಶ ಕಳುಹಿಸಿದ್ದ. ಪತ್ನಿ ಮತ್ತು ಆಕೆಯ ಕುಟುಂಬದ ಬಗ್ಗೆ ಆತ ಮಾಡಿದ ಆರೋಪ ಶೇಕಡ 100ರಷ್ಟು ನಿಜ. ಆತ ಎದುರಿಸಿದ ಸಂಕಷ್ಟಗಳನ್ನು ಬಣ್ಣಿಸುವುದು ಅಸಾಧ್ಯ” ಎಂದು ಕುಟುಂಬಸ್ಥರು ಹೇಳುತ್ತಾರೆ. ಇದು ಅತುಲ್ ಮಾತ್ರವಲ್ಲ, ಈ ಪ್ರಕರಣಗಳಲ್ಲಿ ಸಿಲುಕಿದ ಬಹುತೇಕರ ಅಭಿಪ್ರಾಯವೂ ಹೌದು.
ಸುಪ್ರೀಂಕೋರ್ಟ್ ಕಳವಳ ಕೇವಲ ಸಂತ್ರಸ್ತರು ಮಾತ್ರವಲ್ಲ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳು, ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ದುರ್ಬಳಕೆಯ ಬಗ್ಗೆ ಹಲವು ಸಲ ಪ್ರಸ್ತಾಪಿಸಿವೆ. ಈ
ಕಾಯಿದೆಯನ್ನು ಉದ್ದೇಶಿಸಿಯೇ ಸುಪ್ರೀಂಕೋರ್ಟ್ ನ್ಯಾಯಪೀಠ ‘ಕಾನೂನಿನ ಭಯೋತ್ಪಾದನೆ’ ಎಂಬ ಪದ ಬಳಸಿದೆ. “ ಸಮಾಜದಿಂದ ವರದಕ್ಷಿಣೆ ಪದ್ಧತಿಯನ್ನು ತೊಡೆದು ಹಾಕುವುದು ಕಾನೂನಿನ ಮುಖ್ಯ ಗುರಿ. ಇದನ್ನು ಸಂತ್ರಸ್ತರು ಗುರಾಣಿಯಾಗಿ ಬಳಕೆ ಮಾಡಬೇಕೇ ಹೊರತು ಅಸ್ತ್ರವಾಗಿ ಅಲ್ಲ, ಕೆಲವು ಮಹಿಳೆಯರು ಗಂಡನ
ದೌರ್ಜನ್ಯದ ಹೆಸರಿನಲ್ಲಿ ಕಾನೂನಿನ ದುರ್ಬಳಕೆ ಮಾಡಿದರೆ ಕೊನೆಗೊಂದು ದಿನ ಅವರ ಸಂಕಷ್ಟ ತೋಳ ಬಂತು ತೋಳದ ಕತೆಯಾಗಬಹುದು” ನ್ಯಾಯಾಲಯ ಎಚ್ಚರಿಕೆ ನೀಡಿದೆ.
ವರದಕ್ಷಿಣೆ ವಿರೋಧಿ ಕಾನೂನಿನಡಿ ಕೇಸು ದಾಖಲಿಸುವ ಹೆಚ್ಚಿನ ಮಹಿಳೆಯರು, ಗಂಡನ ವಿರುದ್ದ ಮಾತ್ರ ಕೇಸು ದಾಖಲಿಸುತ್ತಿಲ್ಲ, ಅತ್ತೆ, ಮಾವ, ನಾದಿನಿಯಿಂದ ಹಿಡಿದು ಕುಟುಂಬದ ಹಿರಿಯರು, ಕಿರಿಯರೆನ್ನದೆ ಎಲ್ಲರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ಜಾಮೀನುರಹಿತ ಪ್ರಕರಣವಾದ ಕಾರಣ ಇವರೆಲ್ಲರೂ ಒಂದೆರಡು ದಿನಗಳಾದರೂ ಜೈಲು ಸೇರುವುದು ಅನಿವಾರ್ಯವಾಗುತ್ತದೆ. ಸುಳ್ಳು ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವುದಕ್ಕಿಂತ ದೊಡ್ಡ ಅವಮಾನವಿಲ್ಲ.
ಇಂತಹ ಕೆಲವು ಪ್ರಕರಣಗಳಲ್ಲಿ ಜೈಲು ಸೇರಿದ ಆರೋಪಿಯ ಅವಿವಾಹಿತ ಸಹೋದರಿಯರು ಆತ್ಮಹತ್ಯೆ ಮಾಡಿ ಕೊಂಡ ನಿದರ್ಶನಗಳಿವೆ. ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶಿವನಾರಾಯಣ್ ಧಿಂಗ್ರಾ 10 ವರ್ಷಗಳ ಹಿಂದೆಯೇ ಈ ಕಾನೂನಿನ ತಿದ್ದುಪಡಿಯಾಗಬೇಕೆಂದು ಸೂಚಿಸಿದ್ದರು.
ಎಸ್ಐಎಫ್ ಎಫ್ ಸಂಘಟನೆಯ ಪ್ರಕಾರ ಪ್ರತಿ ವರ್ಷ 30 ಸಾವಿರ ಪುರುಷರು ಪತ್ನಿಯರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಪುರುಷರು ಆರ್ಥಿಕ ಕಾರಣಗಳಿಗಿಂತಲೂ ಸಾಮಾಜಿಕ ಕಾರಣ ಗಳಿಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಸಂಘಟನೆಯ ಅಭಿಮತ. ಈ ಮಾತನ್ನು ನಾವು ಪೂರ್ಣವಾಗಿ ನಂಬಲು ಸಾಧ್ಯವಿಲ್ಲವಾದರೂ ಆಧುನಿಕ ಸಮಾಜದಲ್ಲಿ ಮಹಿಳೆಯರಂತೆ ಪುರುಷರೂ ಶೋಷಣೆಗೆ ಗುರಿ ಯಾಗುತ್ತಿದ್ದಾರೆ ಎನ್ನುವುದು ಸತ್ಯ.
ಪರಿಹಾರ ಧನದ ಆಸೆ ಆರ್ಥಿಕ ಸ್ವಾವಲಂಬನೆ ಹೊಂದಿದ ಕುಟುಂಬದಲ್ಲಿ ಪತಿ-ಪತ್ನಿಯರ ಸಣ್ಣಪುಟ್ಟ ಮನಸ್ತಾಪ ಗಳೂ ಪೊಲೀಸರಿಗೆ ದೂರು ನೀಡುವ ಮಟ್ಟಕ್ಕೆ ತಲುಪುತ್ತಿವೆ. ಕೆಲವು ವಿದ್ಯಾವಂತ ಮಹಿಳೆಯರು ವಿಚ್ಛೇದನ ಪಡೆಯುವ ಕಾರಣಕ್ಕಾಗಿಯೇ ಈ ಕಾಯಿದೆಯಡಿ ದೂರು ದಾಖಲಿಸುತ್ತಿದ್ದಾರೆ. ಶ್ರೀಮಂತ ಪತಿಯಿಂದ ಭಾರಿ ಪ್ರಮಾಣದ ಪರಿಹಾರ ಪಡೆಯುವ ಆಸೆಯಿಂದ ದೂರು ದಾಖಲಿಸುವವರಿಗೂ ಕೊರತೆ ಇಲ್ಲ ಎನ್ನುತ್ತಾರೆ
ಎಸ್ಐಎಫ್ ಎಫ್ ಸಂಘಟನೆಯ ಸದಸ್ಯ, ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಸಂದೀಪ್. ’ಈ ಕಾನೂನು ಜಾರಿಗೆ ಬಂದಿರುವುದು ಮಹಿಳೆಯರ ರಕ್ಷಣೆಗಾಗಿ. ಆದರೆ ಮಹಿಳೆಯರೇ ಅತಿ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಗೊಳಗಾಗುತ್ತಿದ್ದಾರೆ. ವರದಕ್ಷಿಣೆ ಮತ್ತು ಕಿರುಕುಳ ನೀಡಿದ ಆರೋಪದಲ್ಲಿ ಕುಟುಂಬದ ಎಲ್ಲ ಸದಸ್ಯರನ್ನೂ ಬಂಧಿಸಲಾಗುತ್ತಿದೆ.
ಆಗ ವಯಸ್ಸಾದ ತಾಯಿ, ಅಕ್ಕ-ತಂಗಿಯರು ಕೂಡ ಬಂಧನಕ್ಕೊಳಗಾದ ನಿದರ್ಶನಗಳಿವೆ’ ಎನ್ನುತ್ತಾರೆ ಸಂಗ್ಯಾ ಬಾಳ್ಯಾ ಸಂಘಟನೆಯ ನವೀನ್. ಈ ಮಾತನ್ನು ಅನುಮೋದಿಸುವ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವರದಕ್ಷಿಣೆ ಪ್ರಕರಣದಲ್ಲಿ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಸದಸ್ಯರು ವಿಚಾರಣಾಧೀನ ಕೈದಿಗಳಾಗಿ ಕಾರಾಗೃಹ
ಸೇರಿರುವುದನ್ನು ಉಲ್ಲೇಖಿಸುತ್ತಾರೆ.
ಶತಮಾನದಿಂದಲೂ ಮಹಿಳೆಯರು ನಿರಂತರ ಶೋಷಣೆ ಮತ್ತು ದೌರ್ಜನ್ಯಕ್ಕೊಳಗಾಗುತ್ತ ಬಂದಿರುವುದು ಸತ್ಯ. ಈ ಹಿನ್ನೆಲೆಯಲ್ಲಿ ಭಾರತ ಮಾತ್ರವಲ್ಲ ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನುಗಳಿವೆ. ಆದರೆ ಸಿಐಎ- ಎ- ಸದಸ್ಯರೊಬ್ಬರು ಹೇಳುವಂತೆ ಈ ಕಾನೂನು ರಚನೆಯಾಗಿರುವುದು “ಸೀತೆಯರಿಗಾಗಿ ಹೊರತು ಶೂರ್ಪನಖಿಯರಿಗೆ ಅಲ್ಲ, ಅಪರಾಧಕ್ಕೆ ಲಿಂಗಭೇದವಿಲ್ಲವೆಂದು ತಿಳಿದು ನ್ಯಾಯ ದೊರಕಿಸುವುದಕ್ಕಾಗಿ ಕಾನೂನು ಬಳಕೆಯಾದರೆ ಆಕ್ಷೇಪಗಳಿಗೆ ಅವಕಾಶವಿರಲಾರದು.
ನವೆಂಬರ್ 19 ಮಹಿಳಾ ಶಕ್ತಿಯ ಪ್ರತೀಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನವೂ ಹೌದು. ಇದೇ ದಿನ ಪುರುಷರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವುದು ಕಾಲಚಕ್ರದ ಮಹಿಮೆಯೇ ಇರಬೇಕು.
ಇದನ್ನೂ ಓದಿ: Lokesh Kayarga Column: ಮನಸ್ಸಿನ ಬಡತನಕ್ಕೆ ಪಡಿತರ ಉಂಟೇ ?