Wednesday, 18th December 2024

Davanagere Mukunda Column: ಇದು ಅತಿರೇಕ ಎನಿಸುತ್ತೆ..

ಪ್ರತಿಸ್ಪಂದನ

ದಾವಣಗೆರೆ ಮುಕುಂದ

ಸುರೇಂದ್ರ ಪೈ, ಭಟ್ಕಳ ಇವರು ಬರೆದ ‘ವಾರದಲ್ಲಿ 70 ಗಂಟೆ ಕೆಲಸ ಯಾರಿಗಾಗಿ, ಯಾವುದಕ್ಕಾಗಿ, ಅದರ ಲಾ ಯಾರಿಗೆ’ ಎಂಬ ಲೇಖನಕ್ಕೆ (ವಿಶ್ವವಾಣಿ ಡಿ.14) ಈ ಪ್ರತಿಕ್ರಿಯೆ. ಮೊದಲಿಗೆ ಒಂದು ಉದಾಹರಣೆ: ನನ್ನ ಮನೆಯ ಎಡಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮನೆಗಳನ್ನು ಕಟ್ಟುತ್ತಿದ್ದಾರೆ. ಪಕ್ಕದಲ್ಲಿ ಕಟ್ಟುತ್ತಿರುವ ಮನೆಯ ಕೆಲಸಗಾರರು ಬೆಳಗ್ಗೆ 9 ಗಂಟೆಗೆ ಕೆಲಸ ಶುರುಮಾಡಿ, ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಹೋಗುತ್ತಾರೆ. ನಂತರ 2 ಗಂಟೆಗೆ ಮತ್ತೆ ಕೆಲಸ ಶುರುಮಾಡಿ ಸಂಜೆ 6 ಗಂಟೆವರೆಗೆ ಅದರಲ್ಲೇ ವ್ಯಸ್ತರಾಗುತ್ತಾರೆ. ಭಾನುವಾರ ಕೆಲಸ ಮಾಡುವುದಿಲ್ಲ.

ಅಂದರೆ ವಾರಕ್ಕೆ 6 X 8 = 48 ಗಂಟೆ ಕೆಲಸ ಮಾಡುತ್ತಾರೆ. ನಮ್ಮ ಮನೆಯ ಹಿಂಬದಿಯಲ್ಲಿ ಕಟ್ಟುತ್ತಿರುವ ಕಟ್ಟಡ ದಲ್ಲಿ ಕೆಲಸಗಾರರು ಬೆಳಗ್ಗೆ 6 ಗಂಟೆಗೆ ಕೆಲಸ ಶುರುಮಾಡಿ ರಾತ್ರಿ 8ರ ತನಕ ಅದರಲ್ಲೇ ವ್ಯಸ್ತರಾಗಿರುತ್ತಾರೆ. ಮಧ್ಯೆ ಅರ್ಧಗಂಟೆ ಊಟಕ್ಕೆ ಹೋಗುತ್ತಾರೆ. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಕೆಲಸ
ಮಾಡುತ್ತಾರೆ. ಅಂದರೆ, ವಾರಕ್ಕೆ 13.5 X 6 = 81+8 = 89 ಗಂಟೆ ಕೆಲಸ ಮಾಡುತ್ತಾರೆ. ಅದು ಕೆಲವು ದಿನ ಬೆಳಗ್ಗೆ 5 ಗಂಟೆಗೆ ಶುರುವಾಗಿ, ರಾತ್ರಿ 10-11 ಗಂಟೆವರೆಗೂ (ನಾವು ಗಲಾಟೆ ಮಾಡಿ ‘ನಿಲ್ಲಿಸಿ’ ಅನ್ನುವವರೆಗೂ) ನಡೆಯು ತ್ತಿರುತ್ತದೆ.

ಈಗ ಹೇಳಿ- ಯಾರು ಯಾರಿಗೋಸ್ಕರ ಕೆಲಸ ಮಾಡುತ್ತಿದ್ದಾರೆ ಅಂತ. ನಾನು ವಿಚಾರಿಸಲಾಗಿ ತಿಳಿದ ವಿಷಯವೆಂದರೆ, ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿರುವವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನವರು; ಅವರು ಸಂಸಾರ ಸಮೇತರಾಗಿ ಬೆಂಗಳೂರಿನಲ್ಲೇ ನೆಲೆಸಿರುವವರು. ನಮ್ಮ ಹಿಂಭಾಗದ ಮನೆಯ ಕಟ್ಟಡ ಕಾಮಗಾರಿಯಲ್ಲಿ ದುಡಿಯುತ್ತಿರುವವರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಒಡಿಶಾದವರು. ಅವರಲ್ಲಿ ಬಹುತೇಕರು ತಂತಮ್ಮ ಕುಟುಂಬಿಕರನ್ನು ತಮ್ಮ ಊರಿನಲ್ಲೇ ಬಿಟ್ಟು ಕೆಲಸಕ್ಕೋಸ್ಕರ ನಮ್ಮಲ್ಲಿಗೆ ಬಂದಿರುವವರು.

ಈಗ ಎರಡನೇ ಉದಾಹರಣೆ: ನಾನು ಒಂದು ದೊಡ್ಡ ಹಾಗೂ ಪ್ರಸಿದ್ಧ ಬ್ಯಾಂಕ್‌ನಲ್ಲಿ ಸುಮಾರು 40 ವರ್ಷ ಕೆಲಸ ಮಾಡಿದ್ದೇನೆ. ನನ್ನ ಅನುಭವದಲ್ಲಿ ಹೇಳುವುದಾದರೆ, ‘ಅಧಿಕಾರಿ’ ವರ್ಗದಲ್ಲಿರುವವರು ಆಫೀಸಿನಲ್ಲಿ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡಬೇಕಿತ್ತು (ಕೆಲವರನ್ನು ಹೊರತುಪಡಿಸಿ). ಮಧ್ಯಾಹ್ನ 15-20 ನಿಮಿಷ ಅವಧಿಯನ್ನು ಊಟಕ್ಕೆ ವಿನಿಯೋಗಿಸಿದರೂ,೬ ದಿನದ ವಾರದಲ್ಲಿ 70 ಗಂಟೆ ಕೆಲಸ ಮಾಡಿದ ಹಾಗಾಯಿತು. ಎಷ್ಟೋ ಸಂದರ್ಭದಲ್ಲಿ ಶನಿವಾರದಂದು ಅರ್ಧದಿನಕ್ಕೆ ಬದಲಾಗಿ ಪೂರ್ತಿದಿನ ಹಾಗೂ ರಜೆಯ ದಿನವಾದ ಭಾನುವಾರ ಇಡೀ ದಿನ ಕೆಲಸ ಮಾಡಬೇಕಾಗುತ್ತಿತ್ತು.

ಹೀಗಾಗಿ, ನನ್ನ ಅಭಿಪ್ರಾಯದಲ್ಲಿ, ವಾರಕ್ಕೆ 70-75 ಗಂಟೆಯಷ್ಟು ಕೆಲಸ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ, ಸಂಸಾರವು ತೊಂದರೆಗೆ ಒಳಗಾಗುತ್ತದೆ ಎನ್ನುವುದು ಸ್ವಲ್ಪ ಅತಿರೇಕ ಎನಿಸುತ್ತದೆ. 70-80 ಗಂಟೆ ಕೆಲಸ ಮಾಡಿಯೂ ಯಾವುದೇ ತೊಂದರೆಗೆ ಒಳಗಾಗದವರನ್ನು ನಾನು ಕಂಡಿದ್ದೇನೆ. ಇನ್ನೊಂದು ವಿಷಯ- ಯಾವುದೇ ಉದ್ಯೋಗ ದಲ್ಲಾಗಲಿ ಎಲ್ಲರೂ ಶೇ.100ರಷ್ಟು ಕೆಲಸ ಮಾಡಲು ಸಾಧ್ಯವಿಲ್ಲ. ಕೆಲವರು ಶೇ.60ರಷ್ಟು, ಮತ್ತೆ ಕೆಲವರು ಶೇ.70ರಷ್ಟು ಮಾತ್ರ ಕೆಲಸ ಮಾಡಲು ಸಾಧ್ಯವಿರುತ್ತದೆ.

ಅಂಥವರ ಕೆಲಸವನ್ನು ಮಿಕ್ಕವರು ಮಾಡಬೇಕಾಗುತ್ತದೆ. ಆಗ ಅವರ ಕೆಲಸದ ವೇಳೆ ಜಾಸ್ತಿ ಆಗಿಯೇ ಆಗುತ್ತದೆ. ‘ಕೆಲ ದೇಶಗಳಲ್ಲಿ ವಾರಕ್ಕೆ 40, 50 ಅಥವಾ 60 ಗಂಟೆ ಕೆಲಸ ಮಾಡುತ್ತಾರೆ’ ಎಂದು ಲೇಖಕರು ತಮ್ಮ ಬರಹದಲ್ಲಿ ತಿಳಿಸಿಔದ್ದಾರೆ; ಆದರೆ ಅವೆಲ್ಲ ಬಹಳ ಮುಂದುವರಿದ ದೇಶಗಳು. ಅವು ಹಾಗೆ ‘ಮುಂದುವರಿದ ದೇಶ’ಗಳಾಗುವುದಕ್ಕೆ
ಮುಂಚೆ ಅಲ್ಲಿಯ ಜನರು ಎಷ್ಟು ಗಂಟೆ ಕೆಲಸ ಮಾಡುತ್ತಿದ್ದರು ಎಂಬುದು ಬಹಳ ಮುಖ್ಯವಾಗುತ್ತದೆ.

ಹೀಗಾಗಿ ನನ್ನ ಅಭಿಪ್ರಾಯದಲ್ಲಿ, ನಮ್ಮದು ‘ಮುಂದುವರಿದ ದೇಶ’ ಆಗುವವರೆಗೂ, ಉದ್ಯೋಗಿಗಳೆಲ್ಲರೂ ದೇಶದ ಮತ್ತು ತಮ್ಮ ಸಂಸ್ಥೆಯ ಒಳಿತಿಗಾಗಿ ಗರಿಷ್ಠ ಕಾರ್ಯಾವಽಯನ್ನು ಮುಡುಪಾಗಿ ಇಡುವುದು ಒಳ್ಳೆಯದು.

(ಲೇಖಕರು ಬ್ಯಾಂಕ್‌ನ ನಿವೃತ್ತ ಅಧಿಕಾರಿ)

ಇದನ್ನೂ ಓದಿ: Surendra Pai Column: ನಲುಗುತ್ತಿದೆ ಮೂಲ ಅಸ್ಮಿತೆ