Wednesday, 18th December 2024

Sammelana in Mandya: ಕನ್ನಡಮ್ಮನ ಪದತಲಕ್ಕೆ ಕೃತಿಸುಮಗಳ ಸಮರ್ಪಣೆ

ಸಕ್ಕರೆನಾಡು ಮಂಡ್ಯದಲ್ಲಿ ಡಿ. 20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ‘ಅಕ್ಷರ ವ್ಯಾಮೋಹಿ’ಗಳ ಈ ಜಾತ್ರೆಯಲ್ಲಿ ಸಹಭಾಗಿಯಾಗುತ್ತಿರುವ ‘ವಿಶ್ವವಾಣಿ ಪುಸ್ತಕ’ ಪ್ರಕಾಶನ ಸಂಸ್ಥೆ ತನ್ನ ಮಳಿಗೆಯನ್ನು ಅಲ್ಲಿ ತೆರೆದಿಟ್ಟು, ಭೂರಿ ಭೋಜನದಂತಿರುವ ಹಲವು ಪುಸ್ತಕ ಗಳನ್ನು ಅಕ್ಷರಪ್ರೇಮಿ ಗಳಿಗೆ ಮಾರಲಿದೆ. ಈ ಹಿನ್ನೆಲೆಯಲ್ಲಿ, ಪ್ರಕಾಶನದ ಕೆಲ ಪುಸ್ತಕಗಳ ಕುರಿತಾದ ಅಭಿಪ್ರಾಯಗಳ ಸಾರಸಂಗ್ರಹ ರೂಪವನ್ನು ಇಲ್ಲಿ ನೀಡಲಾಗಿದೆ. ಇದು ಬರೀ ‘ಟೈಟಲ್ ಕಾರ್ಡ್’ ಅಷ್ಟೇ, ಪಿಕ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತ್..!

ಕುಡಿಯೋಣು ಬಾರಾ
ಕನ್ನಡ ಪತ್ರಿಕೆಗಳಲ್ಲಿ ಎಲ್ಲ ವಿಷಯಗಳ ಬಗ್ಗೆಯೂ ಲೇಖನಗಳಿರುತ್ತವೆ, ಆದರೆ ಗುಂಡಿನ (ಮದ್ಯ) ಬಗ್ಗೆ ಇರುವುದಿಲ್ಲ ಎನ್ನುತ್ತಿದ್ದರು” ಪತ್ರಕರ್ತ ವೈಎನ್‌ಕೆ. “ನೀವೇ ಅದನ್ನು ಆರಂಭಿಸಬಹುದಲ್ಲ?” ಎಂದು ಕೇಳಿದಾಗ, “ಅನೇಕರು ದಿನಾ ಕುಡಿಯುತ್ತಾರೆ, ಆದರೆ ಕುಡಿತದ ಬಗ್ಗೆ ಅರಿಯಲು ಬಯಸುವುದಿಲ್ಲ. ಮದ್ಯಲೋಕಕ್ಕೂ ಸಾಂಸ್ಕೃತಿಕ ಆಯಾಮಗಳಿವೆ ಅಂದ್ರೆ ಒಪ್ಪುವುದಿಲ್ಲ. ಹೀಗಾಗಿ ಅವರಿಗೆ ತಮ್ಮಿಷ್ಟದ ಕುಡಿತದ ಬಗ್ಗೆ ಏನೂ ಗೊತ್ತಿರುವುದಿಲ್ಲ. ಇಂಥವನ್ನು ಇಂಗ್ಲಿಷ್ ಪತ್ರಿಕೆಗಳು ಬರೆಯುತ್ತವೆ. ಕುಡಿಯುವವರೇ ಇದನ್ನು ಬರೆಯಬೇಕು ಎಂದೇನಿಲ್ಲ, ಕುಡಿಯ ದವರೂ ಬರೆಯಬಹುದು. ಆದರೆ ಅವರಿಗೆ ಮದ್ಯಲೋಕದ ಬಗ್ಗೆ ಆಸಕ್ತಿಯಿರಬೇಕು” ಎಂದು ತಮ್ಮ ಕನಸಿನ ‘ಗುಂಡಿನ ಅಂಕಣ’ದ ಬಗ್ಗೆ ಹೇಳಿದ್ದರು. ಆದರೆ ಅದು ಈಡೇರಲಿಲ್ಲ.

‘ವಿಶ್ವವಾಣಿ’ ಆರಂಭಿಸಿದಾಗ, ವೈಎನ್‌ಕೆ ಹೇಳಿದ್ದನ್ನು ಜಾರಿಗೊಳಿಸಿ, ‘ಕುಡಿಯೋಣು ಬಾರಾ’ ಅಂಕಣವನ್ನು ಭಾನುವಾರದ ಪುರವಣಿಯಲ್ಲಿ ಆರಂಭಿಸಿದೆ. “ಭಟ್ಟರು ಇಂಥ ಅಂಕಣ ಬರೆಯುತ್ತಾರಾ?” ಎಂದು ಓದುಗರು ಉದ್ಗರಿಸಬಹುದೆಂದು, ಇದನ್ನು ಬರೆವವರ ಬಗ್ಗೆ ಕುತೂಹಲವಿರಲಿ ಎಂದು ‘ಗುಂಡಾಭಟ್ಟ’ ಎಂಬ ಹೆಸರಿನಲ್ಲಿ ಬರೆಯುತ್ತಿದ್ದೆ. ಅದು ನಿರೀಕ್ಷಿಸಿ ದಂತೆಯೇ ಜನಪ್ರಿಯವಾಯಿತು.

“ಬೇಂದ್ರೆ ‘ಕುಣಿಯೋಣು ಬಾರಾ’ ಅಂದ್ರು. ನೀವು ‘ಕುಡಿಯೋಣು ಬಾರಾ’ ಎಂದಿದ್ದೀರಿ. ಕುಡಿಯುವವರಿಗೂ ಒಂದು ಅಂಕಣ ಕೊಟ್ಟು ನ್ಯಾಯ ಒದಗಿಸಿದ್ದೀರಿ, ಇದು ವೈಎನ್‌ಕೆಗೆ ನೀವು ಕೊಟ್ಟ ಬೆಸ್ಟ್‌ ಗಿಫ್ಟ್” ಎಂದು ಸಾಹಿತಿ ಗಿರೀಶ್ ಕಾರ್ನಾಡರು ಹೇಳಿದಾಗ ನನಗೆ ತುಸು ಆಶ್ಚರ್ಯ ಮತ್ತು ಸಮಾಧಾನ ಆಗಿದ್ದವು. “ಇಂಗ್ಲಿಷಿನಲ್ಲಿ ರಸೆಲ್, ಟ್ರೈನ್, ವುಡ್ ಹೌಸ್ ಸೇರಿದಂತೆ ಅನೇಕರು ಗುಂಡಿನ ಸ್ವಾರಸ್ಯಲೋಕದ ಕುರಿತು‌ ಬರೆದಿದ್ದಾರೆ.

ಅಮೆರಿಕ, ಬ್ರಿಟನ್ ಪತ್ರಿಕೆಗಳಲ್ಲಿ ಅನೇಕರು ವಾರವಾರ ಅಂಕಣ ಬರೆಯುವುದಿದೆ. ಆದರೆ ಕುಡಿತಕ್ಕೇ ಮೀಸಲಾದ ಅಂಕಣವನ್ನು ಯಾವ ಕನ್ನಡ ಪತ್ರಿಕೆಯೂ ಪ್ರಕಟಿಸುವುದಿಲ್ಲ. ಇಂಥ ವಿಷಯದಲ್ಲಿ ಮಡಿವಂತಿಕೆ ಬಿಡಬೇಕು” ಎಂದಿದ್ದರು ಕಾರ್ನಾಡ್. ಈ ಪುಸ್ತಕದಲ್ಲಿರುವುದು ಕುಡಿತವನ್ನು ಪ್ರಚೋದಿಸುವ ಅಥವಾ ವಿರೋಧಿಸುವ ಬರಹ ಗಳಲ್ಲ. ಕಾರಣ, ನಾನು ಕುಡಿತದ ಪರವೂ ಅಲ್ಲ, ವಿರೋಽಯೂ ಅಲ್ಲ. ಕುಡಿತವನ್ನೇ ಚಟವಾಗಿ ಮಾಡಿಕೊಳ್ಳುವುದು ತಪ್ಪು ಎಂದು ಭಾವಿಸಿರುವವ ನಾನು. ಗುಂಡಿನ ಲೋಕದ ಸುತ್ತಲಿರುವ ಸ್ವಾರಸ್ಯಕರ ಕಥೆಗಳು ನನಗಿಷ್ಟ. ಪಾರ್ಟಿ, ಪೆಗ್, ಕಿಕ್ ಆಚೆಗೂ ಒಂದು ಲೋಕವಿದೆ, ಅದಕ್ಕೊಂದು ವಿಶಿಷ್ಟ ಆಯಾಮವಿದೆ ಎಂಬುದಷ್ಟೇ ಇಲ್ಲಿನ ಕಾಳಜಿ.

“ಕುಡಿದರೆ ಕೆಟ್ಟವನು, ಕುಡಿಯದಿದ್ದರೆ ಒಳ್ಳೆಯವನು ಎಂಬ ಎರಡೂ ಶುದ್ಧ ಬುರುಡೆ; ನಿಜವಾಗಿ ಸುಖಿಸಲು ಓಪನ್ ಮಾಡಿ ಬಾಟಲಿ ಬಿರಡೆ”! ಎಂದಿದ್ದರು ಯೋಗಿ ದುರ್ಲಭ ಜೀ. ಒಂದಷ್ಟು ಮಜಾ, ಮತ್ತಿನ, ಗಮ್ಮತ್ತಿನ ಕ್ಷಣಗಳಿಗೆ ಈ ಅಕ್ಷರಗಳನ್ನು ‘ಸಿಪ್’ ಮಾಡಬಹುದು.

ದೂರದೇಶವಾಸಿ


‘ವಿಶ್ವವಾಣಿ’ಯಲ್ಲಿ ‘ವಿದೇಶವಾಸಿ’ ಹೆಸರಿನ ಅಂಕಣ ಬರೆಯುತ್ತಿರುವ ಕಿರಣ್ ಉಪಾಧ್ಯಾಯ ಅವರು, ಅದಕ್ಕಾಗಿ ಸಂಗ್ರಹಿಸುವ ಮಾಹಿತಿ, ಅದನ್ನು ನಿರೂಪಿಸುವ ಕ್ರಮ, ಎಲ್ಲವನ್ನೂ ಮತ್ತೊಂದು ದಿಕ್ಕಿನಿಂದ ನೋಡುವ ಸ್ಪಷ್ಟತೆ ಗಳ ಮೂಲಕ ಓದುಗರ ಪ್ರೀತಿ ಗಳಿಸಿಕೊಂಡಿದ್ದಾರೆ. ಸಾಹಿತ್ಯ, ಕಲೆ, ಸಂಗೀತ, ಲೋಕಾಭಿರಾಮ, ವಿದ್ವತ್ತಿಗೆ ಸಂಬಂಧಿ ಸಿದ ಅಂಕಣಗಳ ಸೊಗಸೆಂದರೆ ಅವನ್ನು ಪುರುಸೊತ್ತಾದಾಗ ಓದಬಹುದು.

ಹೀಗೆ ಓದುಗನಿಗೆ ಅಪಾರ ಸ್ವಾತಂತ್ರ್ಯ-ಸಂತೋಷ ಒದಗಿಸುವ ಅಂಕಣಗಳ ಸಾಲಿನಲ್ಲಿ ‘ವಿದೇಶವಾಸಿ’ಯೂ ಇದೆ. ಇಲ್ಲಿನ ಬರಹಗಳ ಮತ್ತೊಂದು ಗುಚ್ಛವೇ ‘ದೂರದೇಶವಾಸಿ’. ಕಿರಣ್ ಆಯ್ದುಕೊಳ್ಳುವ ‘ವಸ್ತು-ವೈವಿಧ್ಯ’ವೇ ಅವರ ಅಂಕಣದ ಶಕ್ತಿ. ಮುಂಬಯಿಯ ಡಬ್ಬಾವಾಲಾ, ಪೀಲೆಯ ವಿಚಿತ್ರ ಮನಸ್ಥಿತಿ, ಯಕ್ಷಗಾನದ ಮಜಾ ಜಗತ್ತು- ಹೀಗೆ ಅವರಿಗೆ ಹೊಳೆಯುವ ವಿಷಯಗಳು ಅಸಂಖ್ಯ. ಅವರ ಬರವಣಿಗೆಯ ಶೈಲಿ, ಅಭಿರುಚಿ ಮತ್ತು ಗ್ರಹಿಕೆಗಳ ಕುರಿತು ಅವರ ಹಿಂದಿನ ಪುಸ್ತಕಗಳೇ ಹೇಳುತ್ತವೆ. ಕಿರಣ್ ಓದುಗರನ್ನು ಮೆಚ್ಚಿಸಲಿಕ್ಕೆ ಸುಳ್ಳು ಹೇಳುವುದಿಲ್ಲ.

ತಾವು ಇಡಿಯಾಗಿ ಅರ್ಥಮಾಡಿಕೊಳ್ಳದ ಸಂಗತಿಗಳ ಕುರಿತು ಬರೆಯುವುದಿಲ್ಲ. ಅಧ್ಯಯನಶೀಲತೆ, ಶ್ರದ್ಧೆ ಮತ್ತು ವಿಸ್ತಾರಗಳು ಅಂಕಣ ಬರಹಗಳಿಗೆ ಅಗತ್ಯವೆಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ಅವರ ಅಂಕಣಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ಕಿರಣ್‌ರ ಅಂಕಣಗಳಲ್ಲಿ ಕೆಲವು ಕಾವ್ಯಮಯವಾಗಿರುವುದನ್ನೂ ಕಂಡಿದ್ದೇನೆ. ಯಕ್ಷ ಗಾನದ ಮಾತು ಬಂದಾಗ ಅವರು ಕವಿಯಾಗುತ್ತಾರೆ. ಮಿಕ್ಕಂತೆ ಅರ್ಥಶಾಸ್ತ್ರಜ್ಞ, ಸಮಾಜಶಾಸ್ತ್ರಜ್ಞ, ರಾಜಕೀಯ
ತಜ್ಞನಂತೆ ಯೋಚಿಸುತ್ತಾರೆ. ಈ ಬರಹಗಳು ನನಗೆ ನೀಡಿದ ಸಂತೋಷ ನಿಮಗೂ ದಕ್ಕುತ್ತದೆ ಎಂಬ ನಂಬಿಕೆ ನನ್ನದು.

  • ಜೋಗಿ, ಖ್ಯಾತ ಲೇಖಕರು ಮತ್ತು ಪತ್ರಕರ್ತರು
  • ಒಂದೊಳ್ಳೆ ಮಾತು 3
  • ರೂಪಾ ಗುರುರಾಜ್ ಅವರು ವಿಶ್ವವಾಣಿಯ ‘ಒಂದೊಳ್ಳೆ ಮಾತು’ ಅಂಕಣದಲ್ಲಿ ಒಂದು ಕಥೆಯನ್ನೋ, ಘಟನೆಯನ್ನೋ ಕೇಂದ್ರವಾಗಿಟ್ಟುಕೊಂಡು ವಿಷಯವನ್ನು ನಿರೂಪಿಸುವ ಶೈಲಿ ಅಪರೂಪದ್ದು. ಅವರ ಮಾತಿನಂತೆ ಬರಹಗಳೂ ಮೋಹಕ, ಪ್ರಭಾವಪೂರ್ಣ. ಈ ಕೃತಿಯಲ್ಲಿ ಪೌರಾಣಿಕ, ಐತಿಹಾಸಿಕ, ವರ್ತಮಾನದ ವಿಷಯಗಳ ವಿಭಿನ್ನ ಚಿತ್ರಣವಿದೆ. ಅವರ ಜೀವನಾನುಭವದ ನೆಲೆಯಲ್ಲಿ ಮೂಡಿಬಂದ ಇಲ್ಲಿನ ಅಂಕಣಗಳು ಓದುಗರಲ್ಲಿ ಜೀವನೋತ್ಸಾಹ ಉಂಟುಮಾ ಡುವಂಥದ್ದಾಗಿವೆ. ‘ಸ್ವಂತಿಕೆ ಇಲ್ಲದೆ ನಕಲು ಮಾಡುವುದು
    ಯಶಸ್ಸಿಗೆ ಕಾರಣವಾಗಲಾರದು’ ಎಂಬ ಲೇಖನದಲ್ಲಿರುವ ಅರ್ಜುನನ ಅಹಂಭಾವ ಭಗ್ನಗೊಳಿಸಿದ ಹನುಮಂತನ ಕಥನ, ಪ್ರಾರ್ಥನೆಯಿಂದ ಆಗುವ ಲಾಭ, ಸಹಬಾಳ್ವೆಯಲ್ಲಿ ಸಿಗುವ ಸುಖ ಹೀಗೆ ವಿಭಿನ್ನ ವಿಷಯಗಳನ್ನು ಓದುಗರಿಗೆ ಮುಟ್ಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಂಕಣ ಬರಹಕ್ಕೆ ದೀರ್ಘ ಅಧ್ಯಯನ, ಸಮಯ ಪ್ರಜ್ಞೆ, ಶಿಸ್ತು ಅತ್ಯಗತ್ಯ. ಇವು ರೂಪಾರಲ್ಲಿ ಕೆನೆಗಟ್ಟಿವೆ. ವೈಯಕ್ತಿಕ ಬದುಕು, ಸಾರ್ವಜನಿಕ ಕ್ಷೇತ್ರದ ಜವಾಬ್ದಾರಿಗಳ ನಡುವೆಯೂ ದೀರ್ಘಕಾಲದಿಂದ ಅಂಕಣ ಬರೆಯುತ್ತ ಜ್ಞಾನರತ್ನ ಗಳನ್ನು ಕೊಡುಗೆಯಾಗಿ ನೀಡುತ್ತಿರುವ ರೂಪಾ ಅವರಲ್ಲಿ ವಾಗ್ದೇವಿ ವಿಶಿಷ್ಟ ಚೈತನ್ಯವನ್ನು ತುಂಬಿದ್ದಾಳೆ. ಒಳ್ಳೆಯ ಹೃದಯವಿದ್ದರೆ ಮಾತ್ರ ಒಳ್ಳೆಯ ಮಾತು ಹೊರಹೊಮ್ಮಲಿಕ್ಕೆ ಸಾಧ್ಯ. ಅದಕ್ಕೆ ಈ ಕೃತಿಯೇ ಸಾಕ್ಷಿ.
  • ಡಾ. ಸಿ.ಸೋಮಶೇಖರ,
    ಅಧ್ಯಕ್ಷರು, ಅಖಿಲ ಭಾರತ ಶರಣ
    ಸಾಹಿತ್ಯ ಪರಿಷತು

ಶಿಶಿರಕಾಲ 2

ಅಮೆರಿಕದಲ್ಲಿದ್ದುಕೊಂಡು ಕನ್ನಡ ಪತ್ರಿಕೆಗೆ ಬರೆಯುವುದೆಂದರೆ, ಸಮುದ್ರತಟದಲ್ಲಿ ಕುಳಿತು ಬಾವಿಯನ್ನು ಕಣ್ಮುಂದೆ ಕಲ್ಪಿಸಿ ಬರೆದಂತೆ. ವಿಷಯಗಳ ಆಯ್ಕೆಯಿಂದ ಹಿಡಿದು, ಯಾವ ವಿಷಯವನ್ನು ಎಷ್ಟು ಕೊಡಬೇಕು, ಓದುಗ ಬಯಸುವುದೇನು, ನನಗೆ ಗೊತ್ತಿದೆಯೆಂದು ಹೇಳುತ್ತಾ ಹೋದರೆ ಅವು ಓದುಗನಿಗೆ ಹಿಡಿಸುವುದಾ…? ಹೀಗೆ
ಹತ್ತಾರು ಸವಾಲುಗಳು ಲೇಖಕನನ್ನು ಕಾಡುವುದುಂಟು. ಮುಖ್ಯವಾಗಿ, ಅಮೆರಿಕದಲ್ಲಿದ್ದು ಬರೆವ ಅಂಕಣಕಾರನಿಗೆ ತನ್ನ ಓದುಗರನ್ನು ಕಂಡುಕೊಳ್ಳುವ, ಅರ್ಥಮಾಡಿಕೊಳ್ಳುವ ವಿಶೇಷ ಮೂಗಾಳಿ ಬೇಕು. ಆ ಆಘ್ರಾಣಿಸುವ ಗುಣ ವನ್ನು ಬೆಳೆಸಿಕೊಳ್ಳದೇ ಏನೇ ಬರೆದರೂ ಅದು ಓದುಗನನ್ನು ತಟ್ಟದು. ಈ ವಿಷಯದಲ್ಲಿ ಶಿಶಿರ ಹೆಗಡೆಯವರ
ಸಾಮರ್ಥ್ಯವನ್ನು ಮೆಚ್ಚಲೇಬೇಕು. ಅಮೆರಿಕದಲ್ಲಿದ್ದರೂ, ಈ ಮಣ್ಣಿನ ಯೋಚನೆ, ಚಿಂತನಾಕ್ರಮ, ಶಿಸ್ತನ್ನು ಅವರು ರೂಢಿಸಿಕೊಂಡಿರುವುದರಿಂದ, ಅಲ್ಲಿ ಕಂಡ ಹೊಸ ವಿಷಯಗಳನ್ನು ಕನ್ನಡ ಮತ್ತು ಕರ್ನಾಟಕದ ಸಂದರ್ಭದಲ್ಲಿ ಪ್ರಸ್ತುತವಾಗುವಂತೆ ನಿವೇದಿಸುವುದು ಅವರಿಗೆ ಸಾಧ್ಯವಾಗಿದೆ. ಸ್ಥಳೀಯ ಸಮಸ್ಯೆಯೊಂದನ್ನು ಜಾಗತಿಕ ಮಟ್ಟಕ್ಕೇ ರಿಸಿ ಅಥವಾ ಇಳಿಸಿ ನೋಡುವುದೂ ಅವರಿಗೆ ಸುಲಭವಾಗಿದೆ. ಹೀಗಾಗಿ ಶಿಶಿರರು ಭಾರತದ ಹಗಲಿನ ಬಗ್ಗೆ ಅಮೆರಿ ಕದ ರಾತ್ರಿಯಲ್ಲಿ ಬರೆದರೂ, ದಿನದ ಒಟ್ಟು ಸೊಬಗು ಅನುಭವಕ್ಕೆ ಸಿಗುತ್ತದೆ. ಇದು ಖಂಡಾಂತರದಲ್ಲಿ ನೆಲೆಸುವ ಲೇಖಕ ತನ್ನನ್ನು ಕಂಡುಕೊಳ್ಳುತ್ತಾ ಓದುಗನನ್ನು ಶೋಧಿಸುವ, ಓದುಗನಿಗೆ ಶೋಭಿಸುವ ಪರಿಯೂ ಹೌದು.

ಹೊಸಮುಖ

ಪತ್ರಕರ್ತ ರಾಜು ಅಡಕಳ್ಳಿ ಅವರು ಉತ್ತರ ಕನ್ನಡ ಜಿಲ್ಲೆಯ ‘ಲೋಕಧ್ವನಿ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ವ್ಯಕ್ತಿ-ಶಕ್ತಿ’ ಅಂಕಣ ಸಾಕಷ್ಟು ಜನಪ್ರಿಯ. ಇದು ಅಸಲಿಗೆ ಆ ಜಿಲ್ಲೆಯ ಸಾಧಕರ ಪರಿಚಯ-ಕಥನ. ಈ ಅಂಕಣಕ್ಕಾಗಿ ಅಡಕಳ್ಳಿಯವರು ಆಯ್ದುಕೊಂಡ ಸಾಧಕರಪಟ್ಟಿ ವೈವಿಧ್ಯದ ದೃಷ್ಟಿಯಿಂದ ಬೆರಗು ಹುಟ್ಟಿಸುವಂಥದ್ದು. ಸಮಾಜದ ವಿವಿಧ ರಂಗಗಳ ಸಾಧಕರನ್ನು ಹೆಕ್ಕಿ, ಅವರೊಂದಿಗೆ ಮಾತಾಡಿ, ಅವರ ಸಾಧನೆಯ ಮಹತ್ವವನ್ನು ಅರ್ಥೈಸಿಕೊಂಡು, ಸ್ಥಳೀಯ ಪರಿಸರದ ಭಾಷೆ ಮತ್ತು ನುಡಿಗಟ್ಟುಗಳೊಂದಿಗೆ ಅವರನ್ನು ಪರಿಚಯಿಸಿರುವುದು ಇಲ್ಲಿನ ವಿಶೇಷ. ಹೀಗಾಗಿ ಇದು ಒಬ್ಬ ಸಾಧಕನೊಂದಿಗೆ ನಡೆಸಿದ ಆಪ್ತ ಅನುಸಂಧಾನವೂ ಹೌದು. ಓದುಗರಿಗೆ ಇಲ್ಲಿನ ವ್ಯಕ್ತಿಯ ಪರಿಚಯ ಆರಂಭದಲ್ಲಿ ಇಲ್ಲದಿದ್ದರೂ ಮುಂದುವರಿದಂತೆ ‘ನಮ್ಮ ವರು’ ಅನಿಸುತ್ತಾ ಹೋಗುತ್ತಾರೆ, ಅವರೊಂದಿಗೆ ಒಂದು ಅವ್ಯಕ್ತ ಒಡನಾಟದ ಅನುಭವವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಪರಿಚಯಿಸುವಾಗ, ನಿರ್ವಹಿಸಬೇಕಾದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಜತೆಗೆ ಆತನ ವ್ಯಕ್ತಿತ್ವಕ್ಕೊಂದು ಘನತೆ ತಂದು ಕೊಡುವ ಕೆಲಸವನ್ನೂ ಅಡಕಳ್ಳಿಯವರು ಈ ಕೃತಿಯಲ್ಲಿ ಮಾಡಿರುವುದು ವಿಶೇಷ. ಒಂದೇ ಕೃತಿಯಲ್ಲಿ ಅನೇಕರ ಸಾಧನೆಯ ಶಿಖರವೇರಿದ ಅನುಭವ ಓದುಗನಿಗೆ ದಕ್ಕುತ್ತದೆ.

ವಿಶ್ವೇಶ್ವರ ಭಟ್ , ಪ್ರಧಾನ ಸಂಪಾದಕ, ವಿಶ್ವವಾಣಿ

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ