ಬೆಂಗಳೂರು: ತನ್ನ 20 ದಿನದ ಮಗುವನ್ನು ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಆತನ ಹೆಂಡತಿಯ ಸಹೋದರರೇ ಸೇರಿ ಕೊಲೆ (Murder Case) ಮಾಡಿದ್ದಾರೆ. ಕೊಲೆಯಾದವನ ಮೇಲೂ ಆರು ಪ್ರಕರಣಗಳಿದ್ದು, ಇದೀಗ ಕೊಲೆ ಮಾಡಿದವರು ಜೈಲು (Bengaluru crime news) ಸೇರಿದ್ದಾರೆ.
ಈ ಘಟನೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ. ಸಲ್ಮಾನ್ ಖಾನ್ (29) ಕೊಲೆಯಾದ ಪತಿ. ಪತ್ನಿಯ ಸಹೋದರರಾದ ಉಮರ್ , ಶೊಯೇಬ್ ಹಾಗೂ ಅನ್ವರ್ ಕೊಲೆ ಆರೋಪಿಗಳಾಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರದಲ್ಲಿ ವಾಸವಾಗಿದ್ದ ಸಲ್ಮಾನ್ ಖಾನ್, ಬೀರು ತಯಾರಿಸುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಆಯೆಷಾ, ದಂಪತಿಗೆ 20 ದಿನದ ಮಗುವಿದೆ. ಕುಡಿತಕ್ಕೆ ದಾಸನಾಗಿದ್ದ ಸಲ್ಮಾನ್ ಕೆಲವು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯಪಾನ ಮಾಡಿ ಮನೆಗೆ ಬಂದು ಹೆಂಡತಿಯೊಂದಿಗೆ ಸದಾ ಜಗಳ ಮಾಡುತ್ತಿದ್ದ.
ಡಿಸೆಂಬರ್ 16ರಂದು ರಾತ್ರಿ ಸಹ ಕುಡಿದ ನಶೆಯಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದ. ಈತನ ಕಾಟ ತಾಳಲಾರದೆ 112ಕ್ಕೆ ಕರೆ ಮಾಡಿ ಪೋಲೀಸರನ್ನ ಕರೆಯಿಸಿಕೊಳ್ಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ. ಡಿಸೆಂಬರ್ 17ರ ಬೆಳಗಿನ ಜಾವ ಮನೆಗೆ ಬಂದು ಪೊಲೀಸರನ್ನ ಕರೆಸುತ್ತೀರಾ ಎಂದು ಕ್ಯಾತೆ ತೆಗೆದು ಮನೆ ಮುಂದೆ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿದ್ದ. ಇದರಿಂದ ಆತಂಕಗೊಂಡ ಪತ್ನಿ ತನ್ನ ಸಹೋದರರನ್ನ ಸ್ಥಳಕ್ಕೆ ಕರೆಯಿಸಿಕೊಂಡಿದ್ದಳು.
ಈ ವೇಳೆ ತನ್ನ 20 ದಿನದ ಮಗುವಿಗೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದ. ಆಗ ಪತ್ನಿಯ ಸಹೋದರರು ಆತನಿಗೆ ಹೊಡೆದು ಮಗುವನ್ನು ಕಸಿದುಕೊಂಡಿದ್ದಾರೆ.. ಬಳಿಕ ಸಲ್ಮಾನ್ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ಆತನಿಗೆ ತಿವಿದಿದ್ದಾರೆ. ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಲ್ಮಾನ್ ಮೃತಪಟ್ಟಿದ್ದಾನೆ.
ಮೃತನ ವಿರುದ್ಧ ಇದುವರೆಗೂ ಆರು ಪ್ರಕರಣ ದಾಖಲಾಗಿದ್ದವು. ಈ ಬಗ್ಗೆ ಸಿದ್ದಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದಡಿ ಸಲ್ಮಾನ್ ಹೆಂಡ್ತಿಯ ಮೂವರು ಸಹೋದರರನ್ನು ಆರೆಸ್ಟ್ ಮಾಡಲಾಗಿದೆ.