Wednesday, 18th December 2024

Pushpa 2 Stamped: ಪುಷ್ಪಾ 2 ಸಿನಿಮಾ ವೇಳೆ ಕಾಲ್ತುಳಿತ- ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

stampede

ನವದೆಹಲಿ: ಅಲ್ಲು ಅರ್ಜುನ್‌(Allu Arjun) ನಟನೆಯ ಪುಷ್ಫಾ 2(Pushpa 2) ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ(Pushpa 2 Stamped) ಗಂಭೀರವಾಗಿ ಗಾಯಗೊಂಡಿದ್ದ ಪುಟ್ಟ ಕಂದಮ್ಮ ಜೀವನ್ಮರಣದ ನಡುವೆ ಹೋರಾಡುತ್ತಿದೆ. ಮಗುವಿನ ಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ವೆಂಟಿಲೇಟರ್‌ ಸಹಾಯದಿಂದ ಮಗು ಉಸಿರಾಡುತ್ತಿದೆ ಎನ್ನಲಾಗಿದೆ.

ಹೈದರಾಬಾದ್‌ನಲ್ಲಿ ಡಿಸೆಂಬರ್‌ 4 ರಂದು ನಡೆದ ಕಾಲ್ತುಳಿತದಲ್ಲಿ 35 ವರ್ಷದ ಮೊಗುಡಂಪಲ್ಲಿ ರೇವತಿ ಸಾವನ್ನಪ್ಪಿದ್ದು ಮತ್ತು ಅವರ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡಿದ್ದ. ಮಗುವನ್ನು ಹೈದರಾಬಾದ್‌ನ ಕಿಮ್ಸ್ ಕಡ್ಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮಗುವಿನ ಸ್ಥಿತಿ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ಶ್ರೀ ತೇಜ್‌ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾಣದೇ ಇರುವುದರಿಂದ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಡಿ. 4ರಂದು ‘ಪುಷ್ಪ 2’ ಸಿನಿಮಾದ ಪ್ರೀಮಿಯರ್‌ ಶೋ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ನಿಧನ ಹೊಂದಿದ್ದರು. ಜತೆಗೆ ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ನಂತರ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್​ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ನಾಂಪಲ್ಲಿ ನ್ಯಾಯಾಲಯ ಅಲ್ಲು ಅರ್ಜುನ್​ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಅದೇ ದಿನ ಹೈಕೋರ್ಟ್‌ ​ ಮಧ್ಯಂತರ ಜಾಮೀನು ನೀಡಿತ್ತು.

ಮೃತ ರೇವತಿ ಅವರ ಪತಿ ಭಾಸ್ಕರ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಅಲ್ಲು ಅರ್ಜುನ್‌ ಅವರನ್ನು ವಶಕ್ಕೆ ಪಡೆದಿದ್ದರು. ಇದೀಗ ಭಾಸ್ಕರ್‌ ಯೂಟರ್ನ್‌ ಹೊಡೆದಿದ್ದು, ದೂರು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಭಾಸ್ಕರ್‌, ʼʼದೂರನ್ನು ಹಿಂಪಡೆಯಲು ನಾನು ಸಿದ್ಧ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್‌ ನಿರಪರಾಧಿ. ಅಲ್ಲು ಅರ್ಜುನ್‌ ಅವರನ್ನು ಬಂಧಿಸುತ್ತಾರೆ ಎಂದುಕೊಂಡಿರಲಿಲ್ಲ. ಕಾಲ್ತುಳಿತದಿಂದ ಪತ್ನಿ ಮರಣ ಹೊಂದಿದ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Allu Arjun: ಜೈಲಿನಿಂದ ಹೊರಬಂದ ನಟ ಅಲ್ಲು ಅರ್ಜುನ್‌