Wednesday, 18th December 2024

FIFA World Cup 2034: ಸೌದಿಯಲ್ಲಿ ಮದ್ಯ ನಿಯಮ ಸಡಿಲಿಕೆ ಅನುಮಾನ?

ಸೌದಿ ಅರೇಬಿಯಾ: 2034ರ ಫಿಫಾ ಫುಟ್‌ಬಾಲ್ ವಿಶ್ವಕಪ್(FIFA World Cup 2034) ಆತಿಥ್ಯ ಸೌದಿ ಅರೇಬಿಯಾದ(Saudi Arabia) ಪಾಲಾಗಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಸೌದಿ ಅರೇಬಿಯಾ ಸರ್ಕಾರವು, ಪಂದ್ಯಾವಳಿಗಾಗಿ ತಮ್ಮ ದೇಶದ ಕಠಿಣ ಮದ್ಯದ ನಿಯಮಗಳನ್ನು ಸಡಿಲಗೊಳಿಸಿಸುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗಿದೆ.

ಸೌದಿ ಅರೇಬಿಯಾ 1952ರಿಂದಲೂ ತನ್ನ ದೇಶದಲ್ಲಿ ಮದ್ಯ ಮತ್ತು ಮದ್ಯಪಾನವನ್ನು ನಿಷೇಧಿಸಿದೆ. ವಿದೇಶಿಗರಿಗೂ ಈ ನಿಯಮಗಳು ಇಲ್ಲಿ ಅನ್ವಯ. ಒಂದೊಮ್ಮೆ ಈ ನಿಯಮವನ್ನು ಫಿಫಾ ವಿಶ್ವಕಪ್‌ ವೇಳೆ ಸಡಿಲಿಕೆ ಮಾಡದೇ ಹೋದರೆ ಮದ್ಯ ಪ್ರಿಯರಾದ ವಿದೇಶಿ ಕ್ರೀಡಾಭಿಮಾನಿಗಳು ಪಂದ್ಯ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಬರುವುದು ಅನುಮಾನ. ಟೂರ್ನಿ ಆರಂಭಕ್ಕೆ ಇನ್ನೂ 10 ವರ್ಷಗಳ ಸಮಯವಿದೆ. 2022ರಲ್ಲಿ ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ವೇಳೆ ಆರಂಭದಲ್ಲಿ ಕತಾರ್‌ ಸರ್ಕಾರ ಮದ್ಯಪಾನಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಆ ಬಳಿಕ ನಿಮಯ ಸಡಿಲಿಕೆ ಮಾಡಿತ್ತು.

ಇತ್ತೀಚೆಗೆ ಝೂರಿಚ್‌ನಲ್ಲಿ ಫಿಫಾ ಅಧ್ಯಕ್ಷ ಗ್ಯಾನಿ ಇನ್ಫ್ಯಾಂಟಿನೊ ನೇತೃತ್ವದಲ್ಲಿ ನಡೆದಿದ್ದ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಫಿಫಾ ಸದಸ್ಯರು, 2034ರ ವಿಶ್ವಕಪ್ ಆತಿಥ್ಯಕ್ಕೆ ಸೌದಿ ಅರೇಬಿಯಾ ಹೊರತುಪಡಿಸಿ ಬೇರೆ ಯಾರೂ ಬಿಡ್ ಸಲ್ಲಿಸದೆ ಇದ್ದುದರಿಂದ ಸರ್ವಾನುಮತದಿಂದ ಸೌದಿ ಅರೇಬಿಯಾಗೆ ವಿಶ್ವಕಪ್ ಆತಿಥ್ಯ ನೀಡಲು ಅನುಮೋದಿಸಿದ್ದರು.

ಇದನ್ನೂ ಓದಿ Vijay Hazare Trophy: ವಿದರ್ಭ ತಂಡಕ್ಕೆ ಕರುಣ್ ನಾಯರ್ ನಾಯಕ

2034ರ ಆವೃತ್ತಿಯು ಒಂದೇ ಆತಿಥೇಯ ರಾಷ್ಟ್ರದಲ್ಲಿ ಮೊದಲ ಬಾರಿಗೆ 48 ತಂಡಗಳ ಪಂದ್ಯಾವಳಿಯನ್ನು ಆಯೋಜಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸೌದಿ ಅರೇಬಿಯಾದ ಐದು ನಗರಗಳಾದ ರಿಯಾದ್, ಜೆಡ್ಡಾ, ಅಲ್ ಖೋಬರ್, ಅಭಾ ಮತ್ತು ನಿಯೋಮ್‌ನ 15 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ರಿಯಾದ್‌ನ 92,000-ವೀಕ್ಷಕರ ಸಾಮರ್ಥ್ಯ ಹೊಂದಿರುವ ಕಿಂಗ್ ಸಲ್ಮಾನ್ ಸ್ಟೇಡಿಯಂನಲ್ಲಿ ಆರಂಭಿಕ ಮತ್ತು ಫೈನಲ್ ಪಂದ್ಯಗಳು ನಡೆಯುವ ನಿರೀಕ್ಷೆ ಇದೆ

2030ರ ಫಿಫಾ ಪುರುಷರ ಫುಟ್‌ಬಾಲ್‌ ವಿಶ್ವಕಪ್‌ನ ಆತಿಥ್ಯವನ್ನು ಆರು ದೇಶಗಳಿಗೆ ಜಂಟಿಯಾಗಿ ವಹಿಸಲಾಗಿದೆ. 2030ರ ವಿಶ್ವಕಪ್ ಆತಿಥ್ಯ ವಹಿಸಲು ಸ್ಪೇನ್, ಪೋರ್ಚುಗಲ್ ಹಾಗೂ ಮೊರೊಕ್ಕೊ ಜಂಟಿಯಾಗಿ ಬಿಡ್ ಸಲ್ಲಿಸಿದ್ದವು. ಇದರೊಂದಿಗೆ ಅರ್ಜೆಂಟೀನಾ, ಪೆರುಗ್ವೆ ಹಾಗೂ ಉರುಗ್ವೆ ದೇಶಗಳೂ ಈ ಬಿಡ್‌ನಲ್ಲಿ ಸೇರ್ಪಡೆಯಾಗಲು ಯಶಸ್ವಿಯಾಗಿದ್ದು, ಪ್ರತಿ ದೇಶವೂ ಈ ಕ್ರೀಡಾಕೂಟದ ಒಂದೊಂದು ಹಂತವನ್ನು ಆಯೋಜಿಸುವ ಮೂಲಕ, ಈ ಕ್ರೀಡಾಕೂಟವನ್ನು ಆರು ದೇಶಗಳ ಯೋಜನೆಯನ್ನಾಗಿಸಲಿವೆ.