ಲಖನೌ: ಕೆಲವರು ಸಾಕು ಪ್ರಾಣಿಪಕ್ಷಿಗಳನ್ನು ತಮ್ಮ ಮನೆಯ ಸದಸ್ಯರಂತೆ ಕಾಣುತ್ತಾರೆ. ಅವುಗಳನ್ನು ಅಷ್ಟೇ ಮುದ್ದಿನಿಂದ ಸಾಕುತ್ತಾರೆ. ಹಾಗಾಗಿ ಅವುಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇತ್ತೀಚೆಗೆ ವ್ಯಕ್ತಿಯೊಬ್ಬರು ತಮ್ಮ ಸಾಕು ಗಿಳಿ ಕಾಣೆಯಾದ ಬಗ್ಗೆ ತಿಳಿಸಿ ಅದನ್ನು ಹುಡುಕಿಕೊಟ್ಟವರಿಗೆ ದೊಡ್ಡ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಉತ್ತರ ಪ್ರದೇಶದ ಬುಲಂದ್ಶೆಹರ್ ನಿವಾಸಿ ನವೀನ್ ಪಾಠಕ್ ಎಂಬ ವ್ಯಕ್ತಿ ತನ್ನ ಸಾಕು ಗಿಳಿ ವಿಷ್ಣುವನ್ನು ಕಳೆದುಕೊಂಡಿದ್ದೇನೆ ಎಂದು ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ. ಗಿಳಿ ಪತ್ತೆಯಾಗದ ಕಾರಣ ಕುಟುಂಬವು ದುಃಖದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್ 10 ರಂದು ಗಿಳಿ ಕಾಣೆಯಾಗಿರುವುದು ತಿಳಿದುಬಂದಿದೆ. ಅವರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಗಿಳಿ ಎಲ್ಲೂ ಪತ್ತೆಯಾಗದನ್ನು ಕಂಡು ನಿರಾಶೆಗೊಳಗಾಗಿದ್ದಾರೆ. ಇನ್ನು ವಿಷ್ಣುವನ್ನು ಕಳೆದುಕೊಂಡು ಅವರ ಕುಟುಂಬವು ದುಃಖಿತರಾಗಿದ್ದಾರಂತೆ. ಗಿಳಿ ಮನೆಯಿಂದ ಹೊರಗೆ ಹೋದ ನಂತರ ಕುಟುಂಬದ ಚಿಕ್ಕ ಮಕ್ಕಳು ಕೂಡ ಸರಿಯಾಗಿ ಊಟ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಗಿಳಿ ಕಾಣೆಯಾದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ತನ್ನ ಸಾಕುಗಿಳಿಯನ್ನು ಕಂಡು ಅದನ್ನು ತನಗೆ ಒಪ್ಪಿಸಿದವರಿಗೆ ದೊಡ್ಡ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಗಿಳಿಯನ್ನು ಕಂಡುಹಿಡಿದು ತಂದು ಒಪ್ಪಿಸಿದವರಿಗೆ ಪಾಠಕ್ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ನೀಡಲಿದ್ದಾರಂತೆ.
ಈ ಸುದ್ದಿಯನ್ನೂ ಓದಿ:ಪ್ರಿಯತಮನ ಜತೆ ಹೆಂಡ್ತಿಯ ಲವ್ವಿ-ಡವ್ವಿ… ಕಣ್ಣಾರೆ ಕಂಡ ಪತಿ ಮಾಡಿದ್ದೇನು ಗೊತ್ತಾ?
ಪಾಠಕ್ ವಿಷ್ಣುವನ್ನು ಹೇಗೆ ಭೇಟಿಯಾದರು ಎಂಬ ಕಥೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕುಪ್ರಾಣಿ ಪ್ರೇಮಿಯಾದ ಪಾಠಕ್ ಸುಮಾರು ಎರಡು ವರ್ಷಗಳ ಹಿಂದೆ ಗಾಯಗೊಂಡ ಈ ಗಿಳಿಯನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪಾಠಕ್ ಕುಟುಂಬವು ಗಿಳಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿತು ಮತ್ತು ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಅದನ್ನು ಆರೈಕೆ ಮಾಡಿದ್ದಾರೆ. ಇದರಿಂದಾಗಿ ಶೀಘ್ರದಲ್ಲೇ, ಗಿಳಿ ಅವರ ಕುಟುಂಬದ ಭಾಗವಾಗಿದೆ. ವಿಷ್ಣು ಮುನುಷ್ಯರ ಧ್ವನಿಗಳನ್ನು ಅನುಕರಿಸುತ್ತಿತ್ತು ಮತ್ತು ನವೀನ್ ಅವರನ್ನು “ಪಾಪಾ” ಎಂದು ಕರೆಯುತ್ತಿತ್ತು ಮತ್ತು ಅವರ ಹೆಂಡತಿಯನ್ನು “ಮಮ್ಮಿ” ಎಂದು ಸಂಬೋಧಿಸುತ್ತಿತ್ತು ಎನ್ನಲಾಗಿದೆ.