Wednesday, 18th December 2024

Viral Video: ಹಿರಿಯ ನಾಗರಿಕರಿಗೆ ಸ್ಪಂದಿಸದ ಸಿಬ್ಬಂದಿಗೆ IAS ಅಧಿಕಾರಿ ಕೊಟ್ಟ ಶಿಕ್ಷೆ ಏನು ಗೊತ್ತಾ? ವಿಡಿಯೊ ನೋಡಿದ ನೆಟ್ಟಿಗರು ಫುಲ್‌ ಖುಷ್‌

ನೊಯ್ಡಾ: ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಬೆಂಚಿನ ಮೇಲೆ ನಿಲ್ಲಿಸಿ ಶಿಕ್ಷೆ ನೀಡುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಐಎಎಸ್ (IAS) ಅಧಿಕಾರಿಯೊಬ್ಬರು ನೊಯ್ಡಾ ರೆಸಿಡೆನ್ಷಿಯಲ್ ಪ್ಲಾಟ್ ವಿಭಾಗದ (Noida residential plot department) ಸಿಬ್ಬಂದಿಗಳನ್ನು ತಮ್ಮ ಕುರ್ಚಿ ಬಿಟ್ಟು 20 ನಿಮಿಷಗಳ ಕಾಲ ನಿಲ್ಲುವ ಶಿಕ್ಷೆ ನೀಡಿದ ಸುದ್ದಿ ಹಾಗೂ ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ (Viral Video). ಹಿರಿಯ ನಾಗರಿಕರೊಬ್ಬರ ಕೆಲಸಕ್ಕೆ ತಕ್ಷಣಕ್ಕೆ ಸ್ಪಂದಿಸಿದ ತಪ್ಪಿಗೆ ಈ ಐಎಎಸ್ ಅಧಿಕಾರಿ ಸಿಬ್ಬಂದಿಗಳಿಗೆ ಈ ಶಿಕ್ಷೆ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಘಟನೆಯ ಹಿನ್ನಲೆ:
ಡಿ.16ರಂದು ಐಎಎಸ್ (IAS) ಅಧಿಕಾರಿ ಡಾ ಲೋಕೇಶ್ (Dr Lokesh) ಅವರು ತಮ್ಮ ಕಚೇರಿಯ ಸಿಬ್ಬಂದಿಗಳು ಹಿರಿಯ ನಾಗರಿಕರೊಬ್ಬರನ್ನು ಒಂದು ಗಂಟೆಗಳಿಗೂ ಅಧಿಕ ಸಮಯ ಕಾಯುವಂತೆ ಮಾಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಅವರು ತಮ್ಮ ಕಚೇರಿಯ 16 ಸಿಬ್ಬಂದಿಗಳು ಅವರಿದ್ದ ಜಾಗದಲ್ಲೇ ನಿಲ್ಲುವಂತೆ ಮಾಡಿ ಅದೇ ಸ್ಥಿತಿಯಲ್ಲಿ ತಮ್ಮ ತಮ್ಮ ಕೆಲಸವನ್ನು ಮಾಡುವಂತೆ ಆದೇಶಿಸಿದ್ದಾರೆ.

ಈ ಮೂಲಕ ಕಚೇರಿಗೆ ಕೆಲಸ ಮಾಡಿಸಿಕೊಳ್ಳಲೆಂದು ಬಂದವರನ್ನು ಅನಗತ್ಯ ಕಾಯುವಂತೆ ಮಾಡಿದರೆ ಅವರಿಗೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ಸಿಬ್ಬಂದಿಗಳಿಗೆ ಮನದಟ್ಟು ಮಾಡಿಸುವ ಉದ್ದೇಶದಿಂದ ಡಾ. ಲೋಕೇಶ್ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನ್ಯೂ ಓಕ್ಲಾ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿಯ (New Okhla Industrial Development Authority) ಹೊಸ ಕಚೇರಿಯಲ್ಲಿ ಸಿಬ್ಬಂದಿಗಳ ಕೆಲಸ ಕಾರ್ಯಗಳನ್ನು ನಿಗಾವಹಿಸಲು ಮತ್ತು ಸುಗಮ ಕಾರ್ಯ ನಿರ್ವಹಣೆಯ ಉದ್ದೇಶದಿಂದ 65 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ನೊಯ್ಡಾ ಸಿಇಒ ಡಾ. ಲೋಕೇಶ್ ಇವುಗಳಲ್ಲಿ ಒಂದು ಫೂಟೇಜ್ ನಲ್ಲಿ ರೆಸಿಡಿನ್ಷಿಯಲ್ ಡಿಪಾರ್ಟ್ಮೆಂಟ್ ಕೌಂಟರ್ ನಲ್ಲಿ ಹಿರಿಯ ನಾಗರಿಕರೊಬ್ಬರು ಕಾಯುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಅಲ್ಲಿಗೆ ಆಗಮಿಸಿದ ಅವರು, ಹಿರಿಯ ನಾಗಿಕರ ಸಮಸ್ಯೆ ಏನು ಎಂದು ಯಾಕೆ ಕೇಳಿಲ್ಲ ಎಂದು ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅವರ ಕೆಲಸವನ್ನು ಅಟೆಂಡ್ ಮಾಡುವಂತೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: CM Siddaramaiah: “ಅಂಬೇಡ್ಕರ್‌ ಇಲ್ಲದಿದ್ದರೆ ಮೋದಿಯವರು ಚಹಾ ಮಾರಿಕೊಂಡು ಇರಬೇಕಿತ್ತು!” ಅಮಿತ್‌ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿ

ಹಿರಿಯ ನಾಗರಿಕ ವ್ಯಕ್ತಿಯ ಆಸ್ತಿ ಸಂಬಂಧಿತ ಸಮಸ್ಯೆಯನ್ನು ಸಿಬ್ಬಂದಿಗಳು ಬಗೆಹರಿಸಿಕೊಡದೇ ಇದ್ದುದನ್ನು ನಾನು ಸಿಸಿಟಿವಿ ಮೂಲಕ ನೋಡಿದೆ ಮತ್ತು ಅವರು ತನ್ನ ಕೆಲಸಕ್ಕಾಗಿ ಸುಮಾರು ಒಂದು ಗಂಟೆಗಳವರೆಗೆ ಅಲ್ಲಿ ಕಾಯುತ್ತಿದ್ದರು. ಇಷ್ಟು ಮಾತ್ರವಲ್ಲದೇ ನಾನು ಗಮನಿಸಿದಂತೆ ನಮ್ಮ ಸಿಬ್ಬಂದಿಗಳಲ್ಲಿ ಒಬ್ಬರು ಆ ಸಂದರ್ಭದಲ್ಲಿ ಸುಮ್ಮನೆ ಕುಳಿತಿದ್ದರು. ಇದನ್ನು ಕಂಡ ನಾನು ಕೂಡಲೇ ಆ ವಿಭಾಗಕ್ಕೆ ಧಾವಿಸಿ 20 ನಿಮಿಷಗಳ ಕಾಲ ಎಲ್ಲಾ ಸಿಬ್ಬಂದಿಗಳಿಗೂ ತಾವಿದ್ದ ಜಾಗದಲ್ಲೇ ನಿಲ್ಲುವಂತೆ ತಿಳಿಸಿದೆ ಎಂದು ಲೋಕೇಶ್ ನಡೆದ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ತಮ್ಮ ಕಚೇರಿಗೆ ಕೆಲಸ ಮಾಡಿಸಿಕೊಳ್ಳಲು ಬಂದ ಹಿರಿಯ ನಾಗರಿಕರೊಬ್ಬರನ್ನು ಅನವಶ್ಯಕವಾಗಿ ಕಾಯುವಂತೆ ಮಾಡಿದ ತಪ್ಪಿಗೆ ಆ ಸಿಬ್ಬಂದಿಗಳು ಶಾಲೆಯಲ್ಲಿ ಸಿಗುತ್ತಿದ್ದ ಡೆಸ್ಕ್ ಮೇಲೆ ನಿಲ್ಲುವ ಶಿಕ್ಷೆಯ ರಿತಿಯ ಶಿಕ್ಷೆಯನ್ನು ಪಡೆದುಕೊಂಡಿರುವುದು ಇದೀಗ ನೆಟ್ಟಿಗರ ವಲಯದಲ್ಲಿ ಟ್ರೆಂಡಿಂಗ್ ಚರ್ಚೆಯನ್ನು ಹುಟ್ಟುಹಾಕಿದೆ.