Wednesday, 18th December 2024

Narendra Modi: ʼಅಂಬೇಡ್ಕರ್‌ಗೆ ನೀವು ಮಾಡಿದ ಅವಮಾನ ಮರೆಮಾಚಲು ಸಾಧ್ಯವಿಲ್ಲʼ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಫುಲ್‌ ಕ್ಲಾಸ್

ನವದೆಹಲಿ: ನಿನ್ನೆ(ಡಿ.17) ರಾಜ್ಯಸಭೆಯಲ್ಲಿ(Rajyasabha) ಬಿ.ಆರ್ ಅಂಬೇಡ್ಕರ್(BR Ambedkar) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್(Congress) ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) “ಡಾ. ಅಂಬೇಡ್ಕರ್‌ ಅವರಿಗೆ ಈ ಹಿಂದೆ ಕಾಂಗ್ರೆಸ್ ಅವಮಾನಿಸಿರುವುದನ್ನು ಸುಳ್ಳುಗಳಿಂದ ಮರೆಮಾಚಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಿತ್‌ ಶಾ ಅವರ ವಿವಾದಕ್ಕೆ ಸಂಬಂಧ ಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸುದೀರ್ಘವಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ. “ಡಾ. ಅಂಬೇಡ್ಕರ್ ಅವರನ್ನು ಅವಮಾನಿಸುವ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಕಡೆಗಣಿಸುವ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನು ಸಂಸತ್ತಿನಲ್ಲಿ ನಿನ್ನೆ ಗೃಹ ಸಚಿವ ಅಮಿತ್‌ ಶಾ ತೆರೆದಿಟ್ಟರು. ಅವರು ಹೇಳಿದ ಸತ್ಯಗಳನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೆಸ್ಸಿಗರು ದಿಗ್ಭ್ರಾಂತರಾಗಿದ್ದಾರೆ. ಅದಕ್ಕಾಗಿಯೇ ಅವರು ಈ ರೀತಿಯ ನಾಟಕವಾಡುತ್ತಿದ್ದಾರೆ. ಜನರಿಗೆ ಸತ್ಯವನ್ನು ತಿಳಿಸಿರುವುದರಿಂದ ಕಾಂಗ್ರೆಸ್‌ಗೆ ಅತೀವ ನೋವಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಇಂದು ನಾವು ಏನಾಗಿದ್ದೇವೆಯೋ ಅದಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಕಾರಣ ಎಂದಿರುವ ಪ್ರಧಾನಿ ಮೋದಿ, “ಕಳೆದ ದಶಕದಲ್ಲಿ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ನಮ್ಮ ಸರ್ಕಾರ ಸಾಕಷ್ಟು ಶ್ರಮಿಸಿದೆ. ಪ್ರತಿ ಕ್ಷೇತ್ರದಲ್ಲೂ ದುರ್ಬಲ ಜನರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದೇವೆ. 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸುವುದು, ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ಬಲಪಡಿಸುವುದು, ನಮ್ಮ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಾದ ಸ್ವಚ್ಛ ಭಾರತ, ಪಿಎಂ ಆವಾಸ್ ಯೋಜನೆ, ಜಲ ಜೀವನ್ ಮಿಷನ್, ಉಜ್ವಲ ಯೋಜನೆಗಳು ಬಡ ಮತ್ತು ಸಮಾಜದ ಕಟ್ಟಕಡೆಯ ಜನರಿಗೂ ತಲುಪಿದೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಕೊಳೆತ ಯೋಚನಾ ಲಹರಿಯು ತಮ್ಮ ದುರುದ್ದೇಶಪೂರಿತ ಸುಳ್ಳುಗಳು ತಮ್ಮ ಹಲವಾರು ವರ್ಷಗಳ ದುಷ್ಕೃತ್ಯಗಳನ್ನು ಮರೆಮಾಡಬಹುದು ಎಂದು ಭಾವಿಸಿದೆ. ವಿಶೇಷವಾಗಿ ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಅವರು ಮರೆತಿದ್ದಾರೆ. ಡಾ. ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಅವಮಾನಿಸಲು ಒಂದು ರಾಜವಂಶದ ನೇತೃತ್ವದ ಒಂದು ಪಕ್ಷವು ಸಾಧ್ಯವಿರುವ ಎಲ್ಲ ಕೊಳಕು ತಂತ್ರಗಳಲ್ಲಿ ಹೇಗೆ ತೊಡಗಿದೆ ಎಂಬುದನ್ನು ಭಾರತದ ಜನರು ಮತ್ತೆ ಮತ್ತೆ ನೋಡಿದ್ದಾರೆ ಎಂದು ಟೀಕಿಸಿದ್ದಾರೆ.

ಅಂಬೇಡ್ಕರ್ ಅವರ ವಿಷಯದಲ್ಲಿ ಕಾಂಗ್ರೆಸ್ ಮಾಡಿದ ಮಹಾ ಪಾಪಗಳ ಪಟ್ಟಿ ಹೀಗಿದೆ ಎಂದು ಪಟ್ಟಿ ಮಾಡಿರುವ ಮೋದಿ, “ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಒಂದಲ್ಲ ಎರಡು ಬಾರಿ, ಪಂಡಿತ್ ನೆಹರೂ ಅವರ ವಿರುದ್ಧ ಪ್ರಚಾರ ಮಾಡಿ ಅವರ ಸೋಲನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡರು. ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನಿರಾಕರಿಸಿದರು, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರಕ್ಕೆ ಸ್ಥಾನವನ್ನು ನೀಡದೆ ಅಪಮಾನಿಸಿದರು. ಇದು ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಸಾಲು ಸಾಲು ಅವಮಾನಗಳು” ಎಂದು ಮೋದಿ ಹೇಳಿದ್ದಾರೆ.

“ಕಾಂಗ್ರೆಸ್ ತನಗೆ ತೋಚಿದ್ದು ಮಾಡಬಹುದು. ಆದರೆ ಎಸ್‌ಸಿ/ಎಸ್‌ಟಿ ಸಮುದಾಯಗಳ ವಿರುದ್ಧ ಅತ್ಯಂತ ಕೆಟ್ಟ ಹತ್ಯಾಕಾಂಡಗಳು ಅವರ ಆಡಳಿತದಲ್ಲಿ ನಡೆದಿವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಾಕಷ್ಟು ವರ್ಷಗಳ ಕಾಲ ಅವರು ಅಧಿಕಾರದ ಗದ್ದುಗೆಯಲ್ಲಿದ್ದರು. ಆದರೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ಸಬಲೀಕರಣಕ್ಕಾಗಿ ಯಾವ ಕೆಲಸವನ್ನೂ ಮಾಡಲಿಲ್ಲ” ಎಂದು ಪ್ರಧಾನಿ ಟೀಕಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Ambedkar Row: ಅಂಬೇಡ್ಕರ್‌ ಫೋಟೊ ಹಿಡಿದು ಸಂಸತ್‌ ಎದುರು ಪ್ರತಿಪಕ್ಷಗಳ ಪ್ರೊಟೆಸ್ಟ್‌- ಅಮಿತ್‌ ಶಾ ರಾಜೀನಾಮೆಗೆ ಆಗ್ರಹ