Wednesday, 18th December 2024

R Ashwin Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ವಿದಾಯ ಹೇಳಲು ಕಾರಣವೇನು?

IND vs AUS: what made Ravichandran Ashwin retirement in the middle of the Border-Gavaskar series?

ಬ್ರಿಸ್ಬೇನ್‌: ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು (R Ashwin Retirement) ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದರು. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೂರನೇ ಟೆಸ್ಟ್‌ ಪಂದ್ಯ ಡ್ರಾ ಆದ ಬಳಿಕ ಸ್ಪಿನ್‌ ಆಲ್‌ರೌಂಡರ್‌ ನಿವೃತ್ತಿ ನಿರ್ಧಾರವನ್ನು ಪ್ರಕಟಿಸುವ ಮೂಲಕ ಟೀಮ್‌ ಇಂಡಿಯಾದ ತಮ್ಮ ಸಹ ಆಟಗಾರರಲ್ಲದೆ ಕ್ರಿಕೆಟ್‌ ಅಭಿಮಾನಿಗಳು ಶಾಕ್‌ ನೀಡಿದ್ದಾರೆ.

ಅಂದ ಹಾಗೆ ಆರ್‌ ಅಶ್ವಿನ್‌ ಅವರ ವಯಸ್ಸು ಇನ್ನೂ 38 ವರ್ಷಗಳು ಹಾಗೂ ಅವರಿನ್ನೂ ಎರಡು ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟ್‌ ಆಡಬಹುದಿತ್ತು. ಆದರೆ, ಅವರು ಬುಧವಾರ ಹಠಾತ್‌ ನಿವೃತ್ತಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆರ್‌ ಅಶ್ವಿನ್‌ ಹಠಾತ್‌ ನಿವೃತ್ತಿ ಹೇಳಲು ಕಾರಣವೇನೆಂದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ನಿವೃತ್ತಿ ಘೋಷಿಸಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಆರ್‌ ಅಶ್ವಿನ್‌ ತಮ್ಮ ಈ ನಿರ್ಧಾರದ ಹಿಂದಿನ ಅಸಲಿ ಕಾರಣವೇನೆಂಬು ಬಹಿರಂಗೊಡಿಸಿಲ್ಲ. ಆದರೆ, ಅವರು 2023ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಸುಳಿವು ನೀಡಿದ್ದರು. ಏಕೆಂದರೆ ಅವರು ಮೊಣಕಾಲಿನ ಗಾಯದಿಂದ ದೀರ್ಘಾವಧಿ ಬಳಲುತ್ತಿದ್ದರು.

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವುದಕ್ಕೂ ಮುನ್ನ ಆರ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ತನ್ನ ಪ್ರದರ್ಶನ ಹೇಗೆ ಮೂಡಿಬರಲಿದೆ ಎಂಬುದನ್ನು ನೋಡಿಕೊಂಡು ನಿವೃತ್ತಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಬ್ರಿಸ್ಬೇನ್‌ ಟೆಸ್ಟ್‌ ಕೊನೆಯ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತೇನೆಂದು ಅಶ್ವಿನ್‌, ಡಿಸೆಂಬರ್‌ 18 ರಂದು ಮಂಗಳವಾರ ರಾತ್ರಿ ತಮ್ಮ ಕಟುಂಬಕ್ಕೆ ತಿಳಿಸಿದ್ದರು.

R Ashwin Retires: ಆರ್‌.ಅಶ್ವಿನ್‌ ಕ್ರಿಕೆಟ್‌ ಸಾಧನೆಯ ಇಣುಕು ನೋಟ

ಆರ್‌ ಅಶ್ವಿನ್‌ ಜೊತೆ ಸುದೀರ್ಘ ಚರ್ಚೆ ನಡೆಸಿದ್ದ ರೋಹಿತ್‌ ಶರ್ಮಾ

ಪರ್ತ್‌ಗೆ ಬಂದಿಳಿದಿದ್ದಾಗ ಅಡಿಲೇಡ್‌ ಟೆಸ್ಟ್‌ಗೂ ಮುನ್ನ ನಿವೃತ್ತಿ ಪಡೆಯುವ ಬಗ್ಗೆ ಆರ್‌ ಅಶ್ವಿನ್‌ ಜತೆ ದೀರ್ಘಾವಧಿ ಚರ್ಚೆ ನಡೆಸಲಾಗಿತ್ತು ಎಂದು ನಾಯಕ ರೋಹಿತ್‌ ಶರ್ಮಾ ಬಹಿರಂಗಪಡಿಸಿದ್ದಾರೆ. ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಆರ್‌ ಅಶ್ವಿನ್‌ ಅವರನ್ನು ಆಡಿಸಲು ಉದ್ದೇಶಿಸಲಾಗಿತ್ತು. ಆದರೆ, ಅಂತಿಮವಾಗಿ ರವೀಂದ್ರ ಜಡೇಜಾಗೆ ಮಣೆ ಹಾಕಲಾಗಿತ್ತು. ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮಧ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಆರ್‌ ಅಶ್ವಿನ್‌ ದಿ ಗಬ್ಬಾದಲ್ಲಿ ಪ್ರತಿಯೊಬ್ಬ ಆಟಗಾರರ ಬಳಿ ಪ್ರತ್ಯೇಕವಾಗಿ ಮಾತನಾಡಿದ್ದರು. ಅಂದ ಹಾಗೆ ಆರ್‌ ಅಶ್ವಿನ್‌ ಅವರನ್ನು ಮೆಲ್ಬೋರ್ನ್‌ ಹಾಗೂ ಸಿಡ್ನಿಯಲ್ಲಿ ಆಡಿಸುವ ಸಾಧ್ಯತೆ ಇತ್ತು. ಆದರೆ, ಅವರು ಇದಕ್ಕೂ ಮುನ್ನ ನಿವೃತ್ತಿ ಹೇಳಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ.

ಆರ್‌ ಅಶ್ವಿನ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌

ರವೀಂದ್ರ ಜಡೇಜಾ ಅವರು ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಇದೀಗ ಬಾಕ್ಸಿಂಗ್‌ ಡೇ ಟೆಸ್ಟ್‌ಗೂ ಜಡೇಜಾ ಅವರು ಮುಂದುವರಿಯುವ ಸಾಧ್ಯತೆ ಇದೆ. ಅಂದ ಹಾಗೆ ಭಾರತ ಟೆಸ್ಟ್‌ ತಂಡದಲ್ಲಿ ಆರ್‌ ಅಶ್ವಿನ್‌ ಅವರ ಸ್ಥಾನವನ್ನು ಮತ್ತೊಬ್ಬ ಆಫ್‌ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ತುಂಬಲಿದ್ದಾರೆ.

ಬಾಂಗ್ಲಾ ಟೆಸ್ಟ್‌ ಸರಣಿಯಲ್ಲಿ ಮಿಂಚಿದ್ದ ಅಶ್ವಿನ್‌

ತವರಿನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆರ್‌ ಅಶ್ವಿನ್‌ ಶತಕದ ಜೊತೆಗೆ ಮಿಂಚಿನ ಪ್ರದರ್ಶನ ತೋರಿದ್ದರು. ಆ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಈ ವೇಳೆ ಆರ್‌ ಅಶ್ವಿನ್‌ ಅವರು ಮುಂದಿನ ಎರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲಿದ್ದಾರೆಂದು ಹೇಳಲಾಗಿತ್ತು. ಆದರೆ, ಆರ್‌ ಅಶ್ವಿನ್‌ ಅವರ ಮೊಣಕಾಲು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಕೂಡ ಅವರಿಗೆ ಕಾಡುತ್ತಿದೆ.

R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ

ದೇಶಿ ಕ್ರಿಕೆಟ್‌ ಆಡಲಿರುವ ಅಶ್ವಿನ್‌

ಗುರುವಾರ ಆರ್‌ ಅಶ್ವಿನ್‌ ಅವರು ತವರಿಗೆ ಮರಳಲಿದ್ದಾರೆ ಹಾಗೂ ತಮಿಳುನಾಡು ತಂಡದ ಪರ ದೇಶಿ ಕ್ರಿಕೆಟ್‌ ಆಡುವ ಸಾಧ್ಯತೆ ಇದೆ. ತಮಿಳುನಾಡು ತಂಡಕ್ಕೆ ರಣಜಿ ಟ್ರೋಫಿ ಗೆದ್ದುಕೊಡುವುದು ತಮ್ಮ ಕನಸು ಎಂದು ಅವರು ಈ ಹಿಂದೆ ಹೇಳಿಕೆ ಕೊಟ್ಟಿದ್ದರು. ಇದೀಗ ಅವರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಬಹುದು. ಇನ್ನು ಮುಂದಿನ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆರ್‌ ಅಶ್ವಿನ್‌ ಆಡಲಿದ್ದಾರೆ.