ಬ್ರಿಸ್ಬೇನ್: ವೇಗಿ ಮೊಹಮ್ಮದ್ ಶಮಿ ಆಸ್ಟ್ರೇಲಿಯಾಕ್ಕೆ(IND vs AUS) ತೆರಳಲು ಸಿದ್ಧವಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದೆ. ಇದೀಗ ನಾಯಕ ರೋಹಿತ್ ಶರ್ಮ ಅವರು ಶಮಿ(Rohit Sharma) ಕಮ್‌ಬ್ಯಾಕ್ ವಿಚಾರದಲ್ಲಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಬ್ರಿಸ್ಬೇನ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಲಭ್ಯತೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(NCA) ಫಿಸಿಯೋಗಳಿಗೆ ಸೇರಿದ್ದು ಎಂದು ಹೇಳಿದ್ದಾರೆ.
ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮೊಹಮ್ಮದ್ ಶಮಿಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ದೈಹಿಕಕ್ಷಮತೆಯ ಪ್ರಮಾಣಪತ್ರ ದೊರಕಲಿದ್ದು, ಆಸ್ಟ್ರೇಲಿಯಾಕ್ಕೆ ತೆರಳಲು ಸಿದ್ಧವಾಗಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಡಿ.26ರಿಂದ ಮೆಲ್ಬೊರ್ನ್‌ನಲ್ಲಿ ಆರಂಭವಾಗುವ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು 5ನೇ ಟೆಸ್ಟ್‌ನಲ್ಲಿ ಅವರು ಆಡುವುದು ಖಚಿತ ಎಂದು ಮೂಲಗಳು ಹೇಳಿತ್ತು. ಇದೇ ಕಾರಣಕ್ಕೆ ಪತ್ರಕರ್ತರು ಪಂದ್ಯದ ಬಳಿಕ ಶಮಿ ಕಮ್‌ಬ್ಯಾಕ್ ಬಗ್ಗೆ ರೋಹಿತ್‌ಗೆ ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ರೋಹಿತ್, “ಶಮಿ ಕಮ್‌ಬ್ಯಾಕ್ ಬಗ್ಗೆ, ಎನ್‌ಸಿಎಯಿಂದ ಸ್ಪಷ್ಟ ಉತ್ತರ ಸಿಗಲಿದೆ. ನಾನು ಇದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಗಾಯದ ಚೇತರಿಕೆ ಬಗ್ಗೆ ನನಗೆ ತಿಳಿದಿಲ್ಲ. ನಿಮಗೆ ಬೇಕಾದ ಕೊನೆಯ ವಿಷಯವೆಂದರೆ ಆಟಗಾರನು ಇಲ್ಲಿಗೆ ಯಾವಾಗ ಬರುತ್ತಾನೆ ಎನ್ನುವುದು.ನಾವು 100 ಪ್ರತಿಶತ, 200 ಪ್ರತಿಶತ ಖಚಿತವಾಗಿಲ್ಲದ ಹೊರತು ಆ ಅವಕಾಶವನ್ನು ತೆಗೆದುಕೊಳ್ಳಲು ನಾವು ಬಯಸುವುದಿಲ್ಲ. ಎನ್‌ಸಿಎಯಲ್ಲಿರುವ ಅಧಿಕಾರಿಗಳಿಗೆ ಶಮಿ ಫಿಟ್‌ನೆಸ್ ಸರಿ ಎಂದು ಭಾವಿಸಿದರೆ ಅವರಿಗೆ ತಂಡದಲ್ಲಿ ಬಾಗಿಲು ತೆರೆದಿರುತ್ತದೆ. ಅವರ ಕಮ್‌ಬ್ಯಾಕ್ ಬಗ್ಗೆ ನಾವು ಕೂಡ ಕಾತರದಿಂದ ಕಾಯುತ್ತಿದ್ದೇವೆ” ಎಂದು ರೋಹಿತ್ ಹೇಳಿದರು.
ಶಮಿ ಸಂಪೂರ್ಣ ಫಿಟ್ ಆಗದ ಕಾರಣ ಇದೀಗ ಉಮೇಶ್ ಯಾದವ್ ಅವರನ್ನು ಆಯ್ಕೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ನಾಲ್ಕನೇ ಟೆಸ್ಟ್ ಪಂದ್ಯ ಡಿ.26 ರಿಂದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿದೆ.
ಉಮೇಶ್ ಯಾದವ್ ಅವರು ಭಾರತ ಪರ 57 ಟೆಸ್ಟ್ ಪಂದ್ಯಗಳನ್ನಾಡಿ 170 ವಿಕೆಟ್ ಕಿತ್ತಿದ್ದಾರೆ. ಉಮೇಶ್ ಭಾರತ ಪರ ಕೊನೆಯ ಪಂದ್ಯವನ್ನಾಡಿದ್ದು 2023ರಲ್ಲಿ. ಆಸೀಸ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಇದಾಗಿತ್ತು. ಆ ಬಳಿಕ ಅವರು ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ.