Wednesday, 18th December 2024

Supreme Court: ರೈತರ ಬೇಡಿಕೆ ಆಲಿಸಲು ಸದಾ ಸಿದ್ಧ; ಸುಪ್ರೀಂ ಕೋರ್ಟ್‌ ಭರವಸೆ

Supreme Court

ಹೊಸದಿಲ್ಲಿ: ಪಂಜಾಬ್ ಸರ್ಕಾರ ರಚಿಸಿದ ಸಮಿತಿಯೊಂದಿಗೆ ಸಹಕರಿಸಲು ಪ್ರತಿಭಟನಾ ನಿರತ ರೈತರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಬೇಡಿಕೆಗಳು ಮತ್ತು ಸಮಸ್ಯೆಗಳನ್ನು ಆಲಿಸಲು ಸದಾ ಸಿದ್ಧ ಎಂಬುದಾಗಿ ಸುಪ್ರೀಂ ಕೋರ್ಟ್ (Supreme Court) ಭರವಸೆ ನೀಡಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರೊಂದಿಗೆ ಹಲವು ಸುತ್ತಿನ, ವಿಸ್ತೃತ ಸಭೆಗಳನ್ನು ನಡೆಸಲಾಗಿದ್ದರೂ, ರೈತರು ರಾಜ್ಯದ ಉನ್ನತಾಧಿಕಾರ ಸಮಿತಿಯೊಂದಿಗೆ ಸಹಕರಿಸಲು ನಿರಾಕರಿಸಿದ್ದಾರೆ ಎಂದು ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ʼʼರಾಜ್ಯ ಮಟ್ಟದ ಸಮಿತಿಯು ಡಿ. 17ರಂದು ಮಾತುಕತೆಗೆ ರೈತರನ್ನು ಆಹ್ವಾನಿಸಿತ್ತು. ಆದರೆ ಪ್ರತಿಭಟನಾ ನಿರತ ರೈತರು ಅಧಿಕಾರಿಗಳ ಆಹ್ವಾನವನ್ನು ತಿರಸ್ಕರಿಸಿದ್ದರು. ರೈತರ ಮನವೊಲಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಅದೇ ರೀತಿ ಅವರ ಕುಂದುಕೊರತೆಗಳನ್ನು ನ್ಯಾಯಾಲಯದ ಗಮನಕ್ಕೆ ತರಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆʼʼ ಎಂಬುದಾಗಿ ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಹೇಳಿದ್ದಾರೆ. ಅವರ ಸಲಹೆಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠ, “ರೈತರ ನೇರ ಮಾತುಕತೆ ಅಥವಾ ಅವರ ಅಧಿಕೃತ ಪ್ರತಿನಿಧಿಯ ಮೂಲಕ ಯಾವುದೇ ಸಲಹೆ ಅಥವಾ ಬೇಡಿಕೆಗಳನ್ನು ಆಲಿಸಲು ನ್ಯಾಯಾಲಯದ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಹೇಳಿದೆ.

ಪ್ರತಿಭಟನಾ ನಿರತ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ ಶೀಘ್ರದಲ್ಲೇ ಅವರಿಗೆ ಚಿಕಿತ್ಸೆ ನೀಡುವಂತೆ ಪಂಜಾಬ್‌ ಸರ್ಕಾರಕ್ಕೆ ಸೂಚಿಸಿತು. ಜಗಜಿತ್ ಸಿಂಗ್ ದಲ್ಲೆವಾಲ್ ಈಗಾಗಲೇ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಪಟಿಯಾಲಾದ ಸರ್ಕಾರಿ ರಾಜೀಂದ್ರ ಆಸ್ಪತ್ರೆಯ ಸಿಬ್ಬಂದಿ ದಿನದ 24 ಗಂಟೆಯೂ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದು, ನಿಯಮಿತವಾಗಿ ತಪಾಸಣೆ ನಡೆಸುತ್ತಿದೆ.

ಕ್ಯಾನ್ಸರ್ ರೋಗಿಯೂ ಆಗಿರುವ 70 ವರ್ಷದ ದಲ್ಲೆವಾಲ್, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿ ಸೇರಿದಂತೆ ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ನ. 26ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದಲ್ಲೆವಾಲ್ ಅವರ 23 ದಿನಗಳ ಉಪವಾಸದ ಹೊರತಾಗಿ, ರೈತರು ರಾಜ್ಯದಾದ್ಯಂತ 52 ಸ್ಥಳಗಳಲ್ಲಿ ‘ರೈಲ್ ರೋಕೋ’ಗೆ ಮುಂದಾಗಿದ್ದಾರೆ.

ಡಿ. 6, ಡಿ. 8 ಮತ್ತು ಮತ್ತೆ ಡಿ. 14ರಂದು ಪ್ರತಿಭಟನಾನಿರತ ರೈತರು ಕಾಲ್ನಡಿಗೆಯ ಮೂಲಕ ದಿಲ್ಲಿಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಹರಿಯಾಣದ ಭದ್ರತಾ ಸಿಬ್ಬಂದಿ ಅವರಿಗೆ ಮುಂದುವರಿಯಲು ಅನುಮತಿ ಕೊಡಲಿಲ್ಲ. ದಿಲ್ಲಿಗೆ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರು. ಇದರಿಂದ ಸುಮಾರು 17 ಜನರು ಗಾಯಗೊಂಡಿದ್ದರು.

ಈ ಸುದ್ದಿಯನ್ನೂ ಓದಿ: Farmers Protest: ಕೇಂದ್ರದ ವಿರುದ್ಧ ರೈಲ್ ರೋಕೋ ಪ್ರತಿಭಟನೆಗೆ ರೈತ ನಾಯಕ ಪಂಧೇರ್ ಕರೆ