Wednesday, 18th December 2024

ಆಂಬ್ಯುಲೆನ್ಸ್‌ ವಿಳಂಬದಿಂದ ಬುಡಕಟ್ಟು ಮಹಿಳೆಯ ಮೃತದೇಹ ಆಟೋರಿಕ್ಷಾದಲ್ಲಿ ಸಾಗಿಸಿದ ಕುಟುಂಬ; ಸಂಸದೆ ಪ್ರಿಯಾಂಕಾ ವಿರುದ್ಧ ಬಿಜೆಪಿ ನಾಯಕ ಕಿಡಿ

ತಿರುವನಂತಪುರಂ: ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ (Ambulance) ಲಭ್ಯವಿಲ್ಲದ ಕಾರಣ ವಯೋವೃದ್ಧ ಬುಡಕಟ್ಟು ಮಹಿಳೆಯೊಬ್ಬರ (Tribal Woman) ಶವವನ್ನು ಆಟೋರಿಕ್ಷಾದಲ್ಲಿ ಸಾರ್ವಜನಿಕ ಚಿತಾಗಾರಕ್ಕೆ ಸಾಗಿಸಿರುವ ಮನ ಕಲುಕುವ ಘಟನೆಯೊಂದು ವಯನಾಡಿನಲ್ಲಿ ವರದಿಯಾಗಿದೆ. ಘಟನೆಯ ಬಗ್ಗೆ ಕೇರಳದ ಬಿಜೆಪಿ ನಾಯಕ ಅನೂಪ್ ಆಂಟೋನಿ (Anoop Antony) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳೆ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿಯಿದೆ. ಆಕೆಯ ಕುಟುಂಬ ಸದಸ್ಯರು ಶವವನ್ನು ಸಾಗಿಸಲು ಬುಡಕಟ್ಟು ಅಭಿವೃದ್ಧಿ ಕಚೇರಿಯ ಆಂಬ್ಯುಲೆನ್ಸ್‌ಗಾಗಿ ಗಂಟೆಗಟ್ಟಲೆ ಕಾದಿದ್ದು, ತೀರಾ ವಿಳಂಬವಾದ ಹಿನ್ನೆಲೆ ಬೇರೆ ದಾರಿಯಿಲ್ಲದೆ ಆಟೋರಿಕ್ಷಾದಲ್ಲಿ ಹೆಣವನ್ನು ಸಾಗಿಸಿದ್ದಾರೆ. 80 ವರ್ಷದ ಚುಂಡಮ್ಮ ಅವರ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಆಟೋರಿಕ್ಷಾದಲ್ಲಿ ಸಾಗಿಸುತ್ತಿರುವ ದೃಶ್ಯಗಳು ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗಿವೆ ಎನ್ನಲಾಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಸಾಕಷ್ಟು ಪ್ರತಿಭಟನೆಗಳು ನಡೆದವು.

ಇನ್ನು ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ವಯನಾಡಿನ ಬಿಜೆಪಿ ನಾಯಕ ಅನೂಪ್ ಆಂಟೋನಿ ಸಂಸದೆ ಪ್ರಿಯಾಂಕಾ ಗಾಂಧಿ ಅವರ ವಿರುದ್ಧ ಕಿಡಿಕಾರಿದ್ದಾರೆ. “ಇವರ ಸಹೋದರ ಸಂಸದರಾಗಿದ್ದಾಗ ವಯನಾಡು ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆ. ಈಗ ಇವರ ಅಧಿಕಾರದ ಅವಧಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು” ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್‌ನ ಕಾರ್ಯಕರ್ತರು ಗಿರಿಜನ ಅಭಿವೃದ್ಧಿ ಕಚೇರಿ ಎದುರು ಸತ್ಯಾಗ್ರಹ ಧರಣಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಸತ್ತಿಗೆ ಪ್ಯಾಲೆಸ್ತೀನ್ ಬ್ಯಾಗ್ ಹಿಡಿದು ಬಂದ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್​ ಸಂಸದೆ ಪ್ರಿಯಾಂಕಾ ಗಾಂಧಿ ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್​ ಹಿಡಿದುಕೊಂಡು ನಿನ್ನೆ(ಡಿ.17) ಸಂಸತ್ತಿಗೆ ಆಗಮಿಸಿದ್ದರು. ಈ ಚಿತ್ರವನ್ನು ಕಾಂಗ್ರೆಸ್ ವಕ್ತಾರ ಶಾಮಾ ಮೊಹಮ್ಮದ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ ಬಳಿಕ ವಿವಾದವು ಭುಗಿಲೆದ್ದಿತ್ತು. ಇದನ್ನು ಬಿಜೆಪಿ ಮುಸ್ಲಿಂ ಓಲೈಕೆ ಎಂದು ಟೀಕಿಸಿತ್ತು. ಪ್ಯಾಲೆಸ್ತೀನ್ ಪರ ತಮ್ಮ ಬೆಂಬಲವನ್ನು ಸೂಚಿಸುವುದರ ಸಂಕೇತವಾಗಿ ಈ ಬ್ಯಾಗ್ ಹಿಡಿದುಕೊಂಡಿದ್ದಾರೆ ಎಂದು ಎಕ್ಸ್​ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಭಾರತವು ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳನ್ನು ಸೋಲಿಸಿದ ದಿನವಾದ ವಿಜಯ್ ದಿವಸದಂದು ಹಮಾಸ್‌ನಂತಹ ಸಂಘಟನೆಯನ್ನು ಬೆಂಬಲಿಸುವುದು ಒಳ್ಳೆಯದಲ್ಲ ಎಂದು ಇನ್ನೊಬ್ಬರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ:Narendra Modi: ʼಅಂಬೇಡ್ಕರ್‌ಗೆ ನೀವು ಮಾಡಿದ ಅವಮಾನ ಮರೆಮಾಚಲು ಸಾಧ್ಯವಿಲ್ಲʼ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಫುಲ್‌ ಕ್ಲಾಸ್