Wednesday, 18th December 2024

IND vs AUS: ಎಂದಿಗೂ ನಾಯಕನಾಗದ ಐವರು ಭಾರತೀಯ ಕ್ರಿಕೆಟ್‌ ದಿಗ್ಗಜರು!

IND vs AUS: R Ashwin To Yuvraj Singh-5 Indian Legends Who Were Never Given Captaincy

ನವದೆಹಲಿ: ಭಾರತ ತಂಡದ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್‌ ಪಂದ್ಯ (IND vs AUS) ಡ್ರಾ ಆದ ಬಳಿಕ ಆರ್‌ ಅಶ್ವಿನ್‌ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಅಂದ ಹಾಗೆ ಈ ಸರಣಿಗೂ ಮುನ್ನ ಆರ್‌ ಅಶ್ವಿನ್‌ ಅವರು ವಿದಾಯ ಹೇಳಲು ಬಯಸಿದ್ದರು. ಆದರೆ, ಅಡಿಲೇಡ್‌ ಟೆಸ್ಟ್‌ ಆಡುವಂತೆ ಅವರನ್ನು ಮನವೋಲಿಸಲಾಗಿತ್ತು.

ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆರ್‌ ಅಶ್ವಿನ್‌ ಅವರು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಐಸಿಸಿ ಏಕದಿನ ವಿಶ್ವಕಪ್‌ ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡದಲ್ಲಿ ಆಡಿದ್ದರು. ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಗಳನ್ನು ತೋರಿದ ಹೊರತಾಗಿಯೂ ಅವರು ಒಮ್ಮೆಯೂ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಪಡೆಯಲಿಲ್ಲ.‌

R Ashwin Retirement: ʻಟೆಸ್ಟ್‌ ಸರಣಿಯ ಬಳಿಕ ನೀಡಬಹುದಿತ್ತುʼ-ಅಶ್ವಿನ್‌ ನಿರ್ಧಾರವನ್ನು ಟೀಕಿಸಿದ ಸುನೀಲ್‌ ಗವಾಸ್ಕರ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಭಾರತ ತಂಡವನ್ನು ಮುನ್ನಡೆಸದ ಐವರು ಭಾರತೀಯ ದಿಗ್ಗಜ ಕ್ರಿಕೆಟಿಗರು

ಆರ್‌ ಅಶ್ವಿನ್‌

2011 ರಿಂದ 2017ರ ವರೆಗೆ ಭಾರತ ತಂಡದ ಮೂರೂ ಸ್ವರೂಪಗಳಲ್ಲಿ ಆರ್‌ ಅಶ್ವಿನ್‌ ನಿಯಮಿತವಾಗಿ ಆಡಿದ್ದರೂ ಅವರು ಒಮ್ಮೆಯೂ ನಾಯಕ ಅಥವಾ ಉಪ ನಾಯಕನಾಗಲಿಲ್ಲ. ಎಂಎಸ್‌ ಧೋನಿಗೆ ಉಪ ನಾಯಕನಾಗಿದ್ದ ವಿರಾಟ್‌ ಕೊಹ್ಲಿ, ನಂತರ ಭಾರತ ತಂಡದ ಮೂರೂ ಸ್ವರೂಪಗಳಿಗೆ ನಾಯಕರಾಗಿ ನೇಮಕಗೊಂಡಿದ್ದರು. 2017ರಲ್ಲಿ ಆರ್‌ ಅಶ್ವಿನ್‌ ಅವರನ್ನು ಕಡೆಗಣಿಸಿ ಟೆಸ್ಟ್‌ಗೆ ಅಜಿಂಕ್ಯ ರಹಾನೆ ಮತ್ತು ವೈಟ್‌ ಬಾಲ್‌ ತಂಡಗಳಿಗೆ ರೋಹಿತ್‌ ಶರ್ಮಾ ಅವರನ್ನು ಉಪ ನಾಯಕನಾಗಿ ನೇಮಿಸಲಾಗಿತ್ತು. 2018 ಮತ್ತು 2019ರ ಟೂರ್ನಿಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಿದ್ದರು.

ಯುವರಾಜ್‌ ಸಿಂಗ್‌

ಮಾಜಿ ಆಲ್‌ರೌಂಡರ್‌ ಭಾರತ ತಂಡದಲ್ಲಿ ದೀರ್ಘಾವಧಿ ಉಪ ನಾಯಕನಾಗಿ ಆಡಿದ್ದರು ಹಾಗೂ ಒಂದು ಹಂತದಲ್ಲಿ ಭಾರತ ತಂಡಕ್ಕೆ ನಾಯಕನಾಗಲು ಯುವರಾಜ್‌ ಸಿಂಗ್‌ಗೆ ಅವಕಾಶವಿತ್ತು. ಆದರೆ, ಈ ಅವಕಾಶವನ್ನು ಎಂಎಸ್‌ ಧೋನಿ ಕಸಿದುಕೊಂಡಿದ್ದರು. 2007ರಲ್ಲಿ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಟಿ20 ವಿಶ್ವಕಪ್‌ ಗೆದ್ದುಕೊಟ್ಟ ಬಳಿಕ ಎಂಎಸ್‌ ಧೋನಿ ನಾಯಕನಾಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು. ನಂತರ ಎಂಎಸ್‌ ಧೋನಿಗೆ ಉಪ ನಾಯಕನಾಗಿ ವೀರೇಂದ್ರ ಸೆಹ್ವಾಗ್‌ ನೇಮಕಗೊಂಡಿದ್ದರು.

ಹರ್ಭಜನ್‌ ಸಿಂಗ್‌

ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಸ್ಪಿನ್ನರ್‌ಗಳಲ್ಲಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಆದರೆ, ಅವರು ಒಮ್ಮೆಯೂ ಭಾರತ ತಂಡವನ್ನು ಮುನ್ನಡೆಸಿಲ್ಲ. 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಯಲ್ಲಿ ಹರ್ಭಜನ್‌ ಸಿಂಗ್‌ ಅವರನ್ನು ಉಪ ನಾಯಕನನ್ನಾಗಿ ನೇಮಿಸಲಾಗಿತ್ತು, ಆದರೆ ಅವರು ತಂಡವನ್ನು ಮುನ್ನಡೆಸಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ದೀರ್ಘಾವಧಿ ಪ್ರತಿನಿಧಿಸಿದ್ದ ಹರ್ಭಜನ್‌ ಸಿಂಗ್‌, ತಾವು ನಿವೃತ್ತಿ ಘೋಷಿಸುವುದಕ್ಕೂ ಮುನ್ನ ಎರಡು ವಿಶ್ವಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ವಿವಿಎಸ್‌ ಲಕ್ಷ್ಮಣ್‌

ಭಾರತೀಯ ಟೆಸ್ಟ್‌ ಕ್ರಿಕೆಟ್‌ನ ಅತ್ಯಂತ ವಿಶೇಷ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದ ವಿವಿಎಸ್‌ ಲಕ್ಷ್ಮಣ್‌ ಅವರು ಕೂಡ ಭಾರತ ತಂಡವನ್ನು ಒಮ್ಮೆಯೂ ಮುನ್ನಡೆಸಿಲ್ಲ. ಅವರು ತಮ್ಮ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾ ಎದುರಿನ ಹಲವು ಟೆಸ್ಟ್‌ ಪಂದ್ಯಗಳಲ್ಲಿ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದಾರೆ. ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 134 ಪಂದ್ಯಗಳನ್ನು ಆಡಿರುವ ಅವರು 8781 ರನ್‌ಗಳನ್ನು ಕಲೆ ಹಾಕಿದ್ದಾರೆ. ತಮ್ಮ ಬ್ಯಾಟಿಂಗ್‌ನಲ್ಲಿನ ಯಶಸ್ಸಿನ ಹೊರತಾಗಿಯೂ ಅವರು ಭಾರತ ತಂಡವನ್ನು ಮುನ್ನಡೆಸಿಲ್ಲ.

ಚೇತೇಶ್ವರ್‌ ಪೂಜಾರ

2012 ರಿಂದ 2022ರವರೆಗೆ ಭಾರತ ಟೆಸ್ಟ್‌ ತಂಡದ ಮೂರನೇ ಕ್ರಮಾಂಕದಲ್ಲಿ ಆಡುವ ಮೂಲಕ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಸ್ಥಾನವನ್ನು ಚೇತೇಶ್ವರ್‌ ಪೂಜಾರ ತುಂಬಿದ್ದರು. ಆದರೆ, ಪೂಜಾರಾಗೆ ಭಾರತ ತಂಡವನ್ನು ಮುನ್ನಡೆಸಲು ಒಮ್ಮೆಯೂ ಅವಕಾಶ ನೀಡಿಲ್ಲ. ಟೆಸ್ಟ್‌ ತಂಡದಲ್ಲಿ ಅಜಿಂಕ್ಯ ರಹಾನೆಗೆ ಉಪ ನಾಯಕತ್ವ ನೀಡುವ ಮೂಲಕ ಚೇತೇಶ್ವರ್‌ ಪೂಜಾರ ಅವರನ್ನು ಕಡೆಗಣಿಸಲಾಗಿತ್ತು. ಕೆಲ ಪಂದ್ಯಗಳಲ್ಲಿ ಉಪ ನಾಯಕನಾಗಿ ಆಡಿದ್ದರೂ ಅವರು ಒಮ್ಮೆಯೂ ಭಾರತವನ್ನು ಮುನ್ನಡೆಸಿಲ್ಲ.

ಈ ಸುದ್ದಿಯನ್ನು ಓದಿ: R Ashwin Retires: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆರ್‌.ಅಶ್ವಿನ್‌ ನಿವೃತ್ತಿ ಘೋಷಣೆ