ಬೆಳಗಾವಿ: ಕರ್ನಾಟಕ ಸರ್ಕಾರದ ಬಹು ಮಹತ್ವದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಹಣವನ್ನು ವಿವಿಧ ರೀತಿಯಲ್ಲಿ ಸದುಪಯೋಗಪಡಿಸಿಕೊಂಡ ಆಯ್ದ 21 ಫಲಾನುಭವಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಪರಿಚಯಿಸಿಕೊಟ್ಟರು.
ವಿಪಕ್ಷಗಳ ಅಪಪ್ರಚಾರಕ್ಕೆ ಇದು ತಿರುಗೇಟಾಗಿದೆ
ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಬೋರ್ವೆಲ್ ಕೊರೆಸಿದ ಗದಗ ಜಿಲ್ಲೆಯ ಗಜೇಂದ್ರಗಢದ ಅತ್ತೆ-ಸೊಸೆ ಮಾಬುಬಿ ಹಾಗೂ ರೋಷನ್ ಬೇಗಂ ಅವರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು. ಗೃಹಲಕ್ಷ್ಮೀ ಯೋಜನೆ ಹಣದಿಂದ ಅತ್ತೆ-ಸೊಸೆ ನಡುವೆ ಜಗಳ ಆಗಲಿದೆ ಎನ್ನುತ್ತಿದ್ದ ವಿಪಕ್ಷಗಳ ಅಪಪ್ರಚಾರಕ್ಕೆ ಇದು ತಿರುಗೇಟಾಗಿದೆ ಎಂದು ಸಚಿವರು ಹೇಳಿದರು.
ವಿದ್ಯಾಥಿಗಳ ಅನುಕೂಲಕ್ಕಾಗಿ ಲೈಬ್ರರಿ ಆರಂಭಿಸಿದ ರಾಯಭಾಗದ ಮಲ್ಲವ್ವಾ ಮೇಟಿ, ಫ್ಯಾನ್ಸಿ ಸ್ಟೋರ್ ಆರಂಭಿಸಿದ ಶಿಗ್ಗಾವ್ನ ದ್ರಾಕ್ಷಾಯಣಿ ಪಾಟೀಲ್, ತರಕಾರಿ ವ್ಯಾಪಾರ ಆರಂಭಿಸಿದ ಬಾಗಲಕೋಟೆಯ ಮುಧೋಳದ ಗೌರಿ ಕೃಷ್ಣಾ ಲಮಾಣಿ ಸೇರಿದಂತೆ ಪ್ರತಿಯೊಬ್ಬರನ್ನು ಮುಖ್ಯಮಂತ್ರಿಗಳಿಗೆ ಸಚಿವರು ಪರಿಚಯಿಸಿಕೊಟ್ಟರು. ಗೃಹಲಕ್ಷ್ಮೀ ಯೋಜನೆ ಪಡೆದ ಲಿಂಗತ್ವ ಅಲ್ಪಸಂಖ್ಯಾತರು ಇದೇ ವೇಳೆ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳಕರ್!
ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ ಉಪಸ್ಥಿತರಿದ್ದರು.