ಉಜಿರೆ: ‘’ವಿದ್ಯಾರ್ಥಿಗಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕಠಿಣ ಪರಿಶ್ರಮದ ಮೂಲಕ, ಸಾಧನೆಯ ಅಧ್ಯಯನದ ಸಹಾಯದಿಂದ ಯಶಸ್ಸಿನ ಪಥದಲ್ಲಿ ಸಾಗಬಹುದು. ಕ್ರೀಡೆ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡರೆ ಅಧ್ಯಯನದಲ್ಲಿ ಉತೃಷ್ಟ ಸಾಧನೆ ಮಾಡಲು ಸಾಧ್ಯ. ಪ್ರತೀ ವರ್ಷ ಉತ್ತಮ ಫಲಿತಾಂಶದಿಂದ ಸಂಸ್ಥೆಗೆ ಕೀರ್ತಿ ತರುವಂತವರಾಗಬೇಕುʼʼ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ (Dr D. Veerendra Heggade) ಅವರು ನುಡಿದರು.
ಅವರು ಡಿ. 17ರಂದು ಉಜಿರೆ (Ujire) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ (SDMIT) ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ʼʼನಮ್ಮ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಅನುಕೂಲತೆಗಳನ್ನು ಕಲ್ಪಿಸಿಕೊಡುತ್ತಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಇಲ್ಲಿ ಉತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದೇಶದಲ್ಲೂ ಉನ್ನತ ಉದ್ಯೋಗದಲ್ಲಿ ತೊಡಗಿ ಸಂಸ್ಥೆಯ ಕೀರ್ತಿಯನ್ನು ಬೆಳಗಿಸುತ್ತಿದ್ದಾರೆ. ಕಾಲೇಜಿನಿಂದ ಹೊರಬರುತ್ತಲೇ ಕ್ಯಾಂಪಸ್ ಸೆಲೆಕ್ಷನ್‌ನಿಂದ ಉತ್ತಮ ಉದ್ಯೋಗಾವಕಾಶಗಳು ಕಾದಿರುತ್ತವೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಪ್ರತಿ ವರ್ಷ ವಿಶ್ವವಿದ್ಯಾಲಯದ ರ‍್ಯಾಂಕ್‌ಗಳು ವಿದ್ಯಾರ್ಥಿಗಳ ಪಾಲಾಗುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿ ವಿ.ವಿ.ಯ 9ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಹಾಗೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳುʼʼ ಎಂದು ಡಾ. ಹೆಗ್ಗಡೆ ಹೇಳಿದರು.
ಈ ಸಂದರ್ಭದಲ್ಲಿ ಅವರು ಕಾಲೇಜಿನ ವಿ.ವಿ.ಯ 9ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ, ಶಿಕ್ಷಣ, ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಮೂವರು ಪಿ.ಎಚ್.ಡಿ. ಪಡೆದ ಉಪನ್ಯಾಸಕರನ್ನು ಪುರಸ್ಕರಿಸಿದರು.
ಇದನ್ನೂ ಓದಿ: Sahitya Akademi Award 2024: ಕನ್ನಡದ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ
ಮಣಿಪಾಲ ಕಾರ್ಮಿಕ್ ಡಿಸೈನ್ ಪ್ರೈ .ಲಿಮಿಟೆಡ್ ನ ಡೈರೆಕ್ಟರ್ ಮತ್ತು ಚೀಫ್ ಟೆಕ್ನಿಕಲ್ ಆಫೀಸರ್ ಗುರುರಾಜ್ ಬಂಕಾಪುರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾರ್ಯಕ್ರಮ ಸಂಯೋಜಕರಾದ, ಮೆಕ್ಯಾನಿಕಲ್ ವಿಭಾಗದ ಡಾ. ಬಸವ, ಸಿವಿಲ್ ವಿಭಾಗದ ಡಾ. ಕೃಷ್ಣಪ್ರಸಾದ್ ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವರದಿ ಮಂಡಿಸಿದರು. ಸಂದೀಪ್ ಸ್ವಾಗತಿಸಿ, ಸಿವಿಲ್ ಎಂಜಿನೀಯರಿಂಗ್ ವಿಭಾಗದ ಶ್ರೀನಿಧಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು.