Wednesday, 18th December 2024

Kannada sahitya sammelana: ಸಾಹಿತ್ಯ ಸಮ್ಮೇಳನ ಹಿನ್ನೆಲೆ ಡಿ.20ರಿಂದ 22ರವರೆಗೆ ಮಂಡ್ಯ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

Kannada sahitya sammelana

ಮಂಡ್ಯ: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada sahitya sammelana) ಆಯೋಜಿಸಿರುವ ಹಿನ್ನೆಲೆಯಲ್ಲಿ ಡಿ.20ರಿಂದ 22ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಾದ್ಯಂತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢಶಾಲೆ ವಿಭಾಗದ ನಿರ್ದೇಶಕರು ಜ್ಞಾಪನಾ ಪತ್ರ ಹೊರಡಿಸಿದ್ದು, ಮಂಡ್ಯ ನಗರದಲ್ಲಿ ದಿನಾಂಕ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಈ ಸಮ್ಮೇಳನಕ್ಕೆ ಆಗಮಿಸಲಿರುವ ಸಾಹಿತ್ಯಾಸಕ್ತರು ಹಾಗೂ ನೋಂದಣಿ ಮಾಡಿಕೊಂಡ ಪ್ರತಿನಿಧಿಗಳಿಗೆ ಮಂಡ್ಯ ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿರುವ ಹಿನ್ನೆಲೆಯಲ್ಲಿ ರಜೆಯನ್ನು ಘೋಷಿಸುವುದು ಅವಶ್ಯವಿದೆ.

ಅಲ್ಲದೇ ಜಿಲ್ಲಾಧಿಕಾರಿಗಳ ಮನವಿಯಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರು ಕೂಡ ಸಮ್ಮೇಳನದಲ್ಲಿ ಭಾಗವಹಿಸುವಂತಾಗಲು ಸಮ್ಮೇಳನ ನಡೆಯುವ ದಿನಗಳಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲು ಕೋರಿದ್ದಾರೆ. ಸದರಿ ಕಾರ್ಯಕ್ರಮದ 2 ದಿನಗಳ ರಜೆ ಅವಧಿಯನ್ನು ಮುಂದಿನ ಸರ್ಕಾರಿ ರಜಾ ದಿನಗಳಂದು ಪಾಠ, ಪ್ರವಚನ ನಡೆಸಲು ಆದೇಶ ನೀಡುವಂತೆ ಕೋರಿರುತ್ತಾರೆ. ಹೀಗಾಗಿ ಡಿ.20ರಿಂದ 21 ರವರೆಗೆ ಮಂಡ್ಯ ಜಿಲ್ಲೆಯಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ (ಡಿ.22 ರಂದು ಭಾನುವಾರ ರಜೆ ಇರುತ್ತದೆ).

ಇನ್ನು ಕಾರ್ಯಕ್ರಮದ 2 ದಿನಗಳ ರಜೆ ಅವಧಿಯನ್ನು ಮುಂದಿನ ಸರ್ಕಾರಿ ರಜಾ ದಿನಗಳಂದು ಪಾಠ, ಪ್ರವಚನ ನಡೆಸಿ ಸರಿದೂಗಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಅವರಿಗೆ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Kannada Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ; ಇಷ್ಟೆಲ್ಲಾ ಇದೆ ವಿಶೇಷ!

ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ

mandya kannada sahitya sammelana

ಮಂಡ್ಯ: ಮಂಡ್ಯದಲ್ಲಿ (Mandya News) ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024ದ (Mandya kannada sahitya sammelana) ವೇದಿಕೆ ನಿರ್ಮಾಣ ಮತ್ತಿತರ ಕಾರ್ಯಕ್ರಮಗಳಿಗೆ ಭೂಮಿ ಪೂಜೆಯನ್ನು (Bhumi puja) ಶುಕ್ರವಾರ ನೆರವೇರಿಸಲಾಯಿತು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಭೂಮಿ ಪೂಜೆ ನೆರವೇರಿಸಿದರು.

ಮಂಡ್ಯದ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21 ಹಾಗೂ 22 ರಂದು 3 ದಿನಗಳ ಕಾಲ ನಡೆಯಲಿದೆ. ಸಮ್ಮೇಳನಕ್ಕೆ ಕೇವಲ ಒಂದು ತಿಂಗಳು ಬಾಕಿ ಇದೆ. ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ್ದು, ಇಂದಿನಿಂದ ವೇದಿಕೆ ನಿರ್ಮಾಣದ ಚಟುವಟಿಕೆಗಳು ಪ್ರಾರಂಭವಾಗಲಿದೆ.

ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿರುವ ಬಗ್ಗೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿರುವುದು ಬಹಳ ಸಂತೋಷದ ವಿಷಯ. ಅವರಿಗೆ ಕೇಂದ್ರ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಮಂಡ್ಯ ಜಿಲ್ಲೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಎಲ್ಲಾ ಸಾಹಿತಿಗಳು, ಕನ್ನಡಾಭಿಮಾನಿಗಳು, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಹಾಗೂ ಅನೇಕ ಗಣ್ಯರು ಸಮ್ಮೇಳನಕ್ಕೆ ಆಗಮಿಸಲಿದ್ದಾರೆ. ಸಮ್ಮೇಳನದ ಜವಾಬ್ದಾರಿಯು ಕೇಂದ್ರ ಸಾಹಿತ್ಯ ಪರಿಷತ್ತು, ಜಿಲ್ಲಾ ಸಾಹಿತ್ಯ ಪರಿಷತ್ತು, ಸರ್ಕಾರ, ಜಿಲ್ಲಾಡಳಿತ, ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಮೇಲಿದ್ದು, ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಲು ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 3 ಲಕ್ಷದಿಂದ 4 ಲಕ್ಷದವರೆಗೆ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದ್ದು, ಬರುವವರಿಗೆ ಊಟ, ಪಾರ್ಕಿಂಗ್ ವ್ಯವಸ್ಥೆ, ಗೋಷ್ಠಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಎಲ್ಲಾ ಸಮಿತಿಗಳೊಂದಿಗೆ ಚರ್ಚಿಸಿ ವೇದಿಕೆ ನಿರ್ಮಾಣದಿಂದ ಹಿಡಿದು ಸಮ್ಮೇಳನಕ್ಕೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯವರೆಗೂ ಕ್ರಿಯಾಯೋಜನೆಯ ಪ್ರಕಾರ ಕೆಲಸಗಳು ಜರುಗುತ್ತಿವೆ. ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಮಧು.ಜಿ ಮಾದೇಗೌಡ, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ ಎಂ ನರೇಂದ್ರಸ್ವಾಮಿ, ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್, ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಶಾಸಕ ಎಬಿ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿ ಡಾ ಮೀರಾಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್ (ನಾಗೇಶ್), ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿ.ಡಿ ಗಂಗಾಧರ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.