ವಾಷಿಂಗ್ಟನ್: ಮೊನ್ನೆ ತಾನೆ ಇಸ್ರೇಲ್ (Israel)ನಲ್ಲಿ ಕಮೋಡ್‌ನಲ್ಲಿ ಐಸ್ ಕ್ರೀಂ (Ice Cream) ಸರ್ವ್ ಮಾಡಿರುವ ವಿಡಿಯೊ ವೈರಲ್ ಆಗಿತ್ತು. ಇದೀಗ ಪಿಜ್ಜಾ (Pizza) ಸರದಿ! ಆದರೆ ಇದು ‘ವ್ಯಾಕ್…ವ್ಯಾಕ್…’ ಸುದ್ದಿಯಲ್ಲ ಬದಲಿಗೆ ‘ವಾಹ್ಹ್.. ವಾಹ್ಹ್..’ ಎನ್ನುವಂತಹ ಸುದ್ದಿ. ಇಲ್ಲೊಂದು ಚೆಂದದ ಮನೆಯನ್ನು ನಿರ್ಮಿಸಿದ್ದಾರೆ. ಈ ಮನೆಯ ವಿಶೇಷತೆಯೆಂದರೆ ಇಲ್ಲಿ ಎಲ್ಲವೂ ಪಿಜ್ಜಾದಿಂದಲೇ ತಯಾರಾಗಿದೆ. ಪಿಜ್ಜಾ ಮಾಡು, ಪಿಜ್ಜಾ ಗೋಡೆ, ಪಿಜ್ಜಾ ಮಂಚ! ಹೀಗೆ ಎಲ್ಲವೂ ಪಿಜ್ಜಾಮಯ. ಈ ಆಲ್ ಆಫ್ ಆಲ್ ಪಿಜ್ಜಾ ಹೌಸ್ ನ (House Of Pizzas) ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪಿಜ್ಜಾ ಪ್ರಿಯರನ್ನು ಮಾತ್ರವಲ್ಲದೇ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವುತ್ತಾ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಹಾಗೆಂದು, ಇದೇನು ನಿಜವಾಗ್ಲೂ ಪಿಜ್ಜಾದಿಂದ್ಲೇ ನಿರ್ಮಿಸಿದ ಮನೆ ಅಂದ್ಕೊಂಡ್ರೋ ನೀವು ಮೋಸ ಹೋದಂತೆ ಸರಿ! ಅಂದ ಹಾಗೆ ಇದು ಎಐ (AI) ಜನರೇಟೆಡ್ ರಚನೆಯಾಗಿದೆ. ಆದರೆ ಇದು ಯಾವ ನೈಜತೆಗೂ ಕಡಿಮೆ ಇಲ್ಲದಂತೆ ಮೂಡಿಬಂದಿದೆ. ಇಲ್ಲಿ ಆವಾಗ್ಲೇ ಹೇಳಿದಂತೆ ಬೆಡ್ ರೂಂನಿಂದ ಹಿಡಿದು ಬಾತ್ ರೂಂವರೆಗೂ ಎಲ್ಲವೂ ಪಿಜ್ಜಾಮಯವೇ!
ಈ ರಚನೆಯು, ಸಾಮಾನ್ಯ ಮನೆ ನಿರ್ಮಾಣದ ಪರಿಕಲ್ಪನೆಗೆ ವ್ಯತಿರಿಕ್ತವಾಗಿ ಮೂಡಿಬಂದ್ದಿದ್ದು, ಇಲ್ಲಿ ಇಟ್ಟಿಗೆ ಮತ್ತು ಸಿಮೆಂಟ್ ಬದಲಿಗೆ ಎಲ್ಲೆಡೆ ಪಿಜ್ಜಾವನ್ನೇ ಬಳಸಿದ ಪರಿಕಲ್ಪನೆಯಲ್ಲಿ ಇದನ್ನು ರೂಪಿಸಲಾಗಿದೆ. ಇದ್ರ ಬಗ್ಗೆ ನಾವು ಹೇಳೊದಕ್ಕಿಂತ ನೀವೇ ಒಮ್ಮೆ ನೋಡ್ಕೊಂಡು ಬರೋದು ಒಳ್ಳೇದು!
ಇಲ್ಲಿ ಮನೆಯ ಹೊರಭಾಗ ಮಾತ್ರವೇ ಈ ಇಟಾಲಿಯನ್ ಫುಡ್‌ನಿಂದ ಆವರಿಸಲ್ಪಟ್ಟಿರುವುದಲ್ಲ, ಬದಲಾಗಿ ಮನೆಯ ಒಳಾಂಗಣದಲ್ಲೂ ನಿಮಗೆ ಎಲ್ಲೆಲ್ಲೂ ‘ಯಮ್ಮಿ..ಯಮ್ಮಿ..’ ಪಿಜ್ಜಾ ದರ್ಶನವೇ ಆಗುತ್ತದೆ.
ಈ ಮನೆಯ ಹೊರಭಾಗ ಮತ್ತು ಒಳಭಾಗ ಪಿಜ್ಜಾ ಪ್ರಿಯರ ಕನಸಿನ ಮನೆಯಂತೆ ನಿರ್ಮಾಣಗೊಂಡಿರುವುದು ವಿಶೇಷ. ಇಲ್ಲಿನ ಗೋಡೆಗಳು ಪಿಜ್ಜಾ ಬೇಸ್‌ನಿಂದ ಆವರಿಸಲ್ಪಟ್ಟಿದೆ ಮತ್ತು ಮನೆ ಛಾವಣಿ ಮತ್ತು ಇಲ್ಲಿರುವ ಪೀಠೋಪಕರಣಗಳೂ ಸಹ ಪಿಜ್ಜಾದಿಂದಲೇ ಆವರಿಸಲ್ಪಟ್ಟಿವೆ.
ಈ ವಿಡಿಯೊವನ್ನು ನೋಡುವಾಗ ಇದು ಪಿಜ್ಜಾ ಡಿಸೈನ್‌ನಿಂದ ರೂಪಿಸಲಾದ ಚಿತ್ರವೆಂದು ಕಾಣಿಸುವುದಿಲ್ಲ. ಬದಲಾಗಿ ನಿಜವಾಗ್ಲೂ ಪಿಜ್ಜಾದಿಂದಲೇ ನಿರ್ಮಾಣಗೊಂಡಿರುವ ಮನೆಯಂತೆ ನಮಗೆ ಕಾಣಿಸುತ್ತದೆ. ಈ ಮನೆಯಲ್ಲಿರುವ ಸ್ವಿಮ್ಮಿಂಗ್ ಪೂಲ್ ಸಹ ಪಿಜ್ಜಾ ರೂಪಿತವೇ ಆಗಿದೆ! ಮಾತ್ರವಲ್ಲದೇ ಮನೆಯ ಗೊಡೆಗೆ ಅಳವಡಿಸಿರುವ ಟಿವಿ ಯೂ ಸಹ ಪಿಜ್ಜಾವೇ ಮಾರ್ರೆ!
ಇನ್ನು ಈ ಪಿಜ್ಜಾ ಮನೆಯ ವಿಡಿಯೋ ನೋಡಿದ ನೆಟ್ಟಿಗರು ಫುಲ್ ರಾಕ್ & ಶಾಕ್ ಆಗಿದ್ದಾರೆ! ಈ ಎಐ ರೂಪಿತ ಮಾರ್ವಲೆಸ್ ಪಿಜ್ಜಾ ಮನೆ ವಾಷಿಂಗ್ಟನ್ (Washington) ಮೂಲದ ಅಲಾನ್ ಮಟರಾಜ್ಹೋ ಎಂಬ ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದಿದೆ. ಇದನ್ನು ಅಲಾನ್ ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ (Instagram) ಅಪ್‌ಲೋಡ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು, ‘ಪಿಜ್ಜಾ ಪ್ರಿಯರ ಸ್ವರ್ಗ ಇದು..!’ ಎಂದು ಉದ್ಘರಿಸಿದ್ದಾರೆ.
ಕಳೆದ ಅಕ್ಟೋಬರ್‌ನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಇಲ್ಲಿಯವರೆಗೆ 33 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಹಾಗೂ 8 ಲಕ್ಷಕ್ಕಿಂತಲೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.