Wednesday, 18th December 2024

Boat Capsized: 13 ಮಂದಿಯ ಬಲಿ ಪಡೆದ ಮುಂಬೈ ಬೋಟ್‌ ಅಪಘಾತದ ಕಾರಣ ಬಹಿರಂಗ; ಹೇಗಾಯ್ತು ಈ ದುರಂತ?

Boat Capsized

ಮುಂಬೈ: ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೋಣಿ ದುರಂತವೊಂದು ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ನೀಲ್‌ ಕಮಲ್ ಹೆಸರಿನ ದೋಣಿಗೆ ಭಾರತೀಯ ನೌಕಾಪಡೆಯ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆದು 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 10 ಮಂದಿ ಪ್ರವಾಸಿಗರು ಮತ್ತು 3 ಮಂದಿ ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ. ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ನೌಕಾಪಡೆಯ ಬೋಟ್‌ ಡಿಕ್ಕಿಯಾಗುತ್ತಿದ್ದಂತೆ ಪ್ರವಾಸಿಗರ ದೋಣಿ ಮುಳುಗಲು ಆರಂಭಿಸಿತ್ತು. ಇದೀಗ ಅವಘಡದ ಕಾರಣ ಬಹಿರಂಗಗೊಂಡಿದೆ (Boat Capsized).

ಸ್ಪೀಡ್ ಬೋಟ್ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರಿದ್ದ ದೋಣಿಗೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಸ್ಪೀಡ್‌ ಬೋಟ್‌ನ ಎಂಜಿನ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಅದು ಪ್ರಯಾಣಿಕರಿದ್ದ ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ನೌಕಾಪಡೆ ತಿಳಿಸಿದೆ.

“ಬುಧವಾರ (ಡಿ. 18) ಭಾರತೀಯ ನೌಕಾಪಡೆಯು ಮುಂಬೈ ಬಂದರಿನಲ್ಲಿ ಎಂಜಿನ್‌ನ ಕಾರ್ಯಕ್ಷಮತೆ ಪರೀಕ್ಷಿಸುವ ಪ್ರಯೋಗ ನಡೆಸುವಾಗ ತಾಂತ್ರಿಕ ದೋಷದಿಂದಾಗಿ ಸ್ಪೀಡ್‌ ಬೋಟ್‌ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದೋಣಿ ಮಗುಚಿ ಬಿದ್ದಿದೆ” ಎಂದು ನೌಕಾಪಡೆ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ನೌಕಾಪಡೆ ತಿಳಿಸಿದೆ. “ಇಲ್ಲಿಯವರೆಗೆ 13 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿವೆ. ಘಟನಾ ಸ್ಥಳದಿಂದ ರಕ್ಷಿಸಲಾದ ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತಕ್ಷಣವೇ ಪ್ರಾರಂಭಿಸಲಾಗಿದ್ದು, 4 ನೌಕಾ ಹೆಲಿಕಾಪ್ಟರ್‌ಗಳು, 11 ನೌಕಾ ಕ್ರಾಫ್ಟ್‌ಗಳು, 1 ಕೋಸ್ಟ್ ಗಾರ್ಡ್ ಬೋಟ್‌ ಮತ್ತು 3 ಸಾಗರ ಪೊಲೀಸ್ ಕ್ರಾಫ್ಟ್‌ಗಳನ್ನು ಕಾರ್ಯಾಚರಣೆಗೆ ಬಳಸಲಾಗುತ್ತಿದೆʼʼ ಎಂದು ತಿಳಿಸಿದೆ.

ಸಿಎಂ ದೇವೇಂದ್ರ ಫಡ್ನವೀಸ್‌ ಹೇಳಿದ್ದೇನು?

ಘಟನೆ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು, 101 ಮಂದಿಯನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಹೇಳಿದ್ದಾರೆ. ಅಪಘಾತಕ್ಕೀಡಾದ ನೀಲ್‌ ಕಮಲ್‌ ದೋಣಿಯಲ್ಲಿ ಎಷ್ಟು ಜನರಿದ್ದು ಎನ್ನುವುದು ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಮುಂಬೈಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಎಲಿಫಾಂಟಾ ದ್ವೀಪ ಕೂಡ ಒಂದಾಗಿದ್ದು, ಇಲ್ಲಿಗೆ ಪ್ರತಿದಿನ ನೂರಾರು ಮಂದಿ ತೆರಳುತ್ತಾರೆ.

ರಾಜನಾಥ್‌ ಸಿಂಗ್ ಸಂತಾಪ

ಮೃತರ ಕುಟುಂಬಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ. “ಮುಂಬೈ ಬಂದರಿನಲ್ಲಿ ಪ್ರಯಾಣಿಕರ ದೋಣಿ ಮತ್ತು ಭಾರತೀಯ ನೌಕಾಪಡೆಯ ಸ್ಪೀಡ್‌ ಬೋಟ್‌ ನಡುವೆ ಸಂಭವಿಸಿದ ಅವಘಡದಲ್ಲಿ 13 ಮಂದಿ ಮೃತಪಟ್ಟಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ನೌಕಾ ಸಿಬ್ಬಂದಿ ಮತ್ತು ಎರಡೂ ಬೋಟ್‌ಗಳ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾದವರನ್ನು ಪತ್ತೆಹಚ್ಚಲು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ. ರಕ್ಷಣಾ ಪ್ರಯತ್ನ ಮುಂದುವರಿದಿದೆʼʼ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Boat Capsized: ಮುಂಬೈ ಬೋಟ್‌ ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ: ಅಪಘಾತದ ವಿಡಿಯೊ ವೈರಲ್‌