Thursday, 19th December 2024

KAS Exam: ರದ್ದುಗೊಳಿಸಿದ್ದ ಕೆಎಎಸ್‌ ಹುದ್ದೆಗಳ ಮರು ಪರೀಕ್ಷೆ ಡಿ.29ರಂದು ನಿಗದಿ

ಬೆಂಗಳೂರು: ಭಾಷಾಂತರ ದೋಷದಿಂದಾಗಿ ರದ್ದುಗೊಳಿಸಲಾಗಿದ್ದ ಕೆಎಎಸ್‌ ಹುದ್ದೆಗಳ ಪರೀಕ್ಷೆಯನ್ನು (KAS Exam) ಡಿಸೆಂಬರ್ 29ರಂದು ಮರುನಿಗದಿಪಡಿಸಲಾಗಿದೆ. ಒಟ್ಟು 384 ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆ ನಡೆಯಲಿದ್ದು, ಪೇಪರ್ 1 ಮತ್ತು 2 ಪರೀಕ್ಷೆಗಳು ಒಂದೇ ದಿನ ನಡೆಯಲಿವೆ.

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು (KPSC) ಗೆಜೆಟೆಡ್ ಪ್ರೊಬೇಷನ್ ಅಡಿಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ 384 ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಆಡಳಿತ ಸೇವೆಗಳ (ಕೆಎಎಸ್) ಮರು ಪರೀಕ್ಷೆಯನ್ನು ಡಿಸೆಂಬರ್ 29ರಂದು ನಡೆಸಲು ಸಜ್ಜಾಗಿದೆ. ಕನ್ನಡ ಭಾಷಾಂತರ ಎಡವಟ್ಟಿನಿಂದ ಕೆಎಎಸ್ ಪರೀಕ್ಷೆ ರದ್ದುಗೊಂಡಿತ್ತು. ಡಿ.29ರಂದು ಒಂದೇ ದಿನ ಪೇಪರ್‌-1, ಪೇಪರ್‌-2 ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್‌-1 ಪರೀಕ್ಷೆ ನಡೆದರೆ, ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪೇಪರ್‌-2 ಪರೀಕ್ಷೆ ನಡೆಯಲಿದೆ.

ವಿವಿಧ ಇಲಾಖೆಗಳಲ್ಲಿ ತಹಸೀಲ್ದಾರ್, ಸಹಾಯಕ ನಿರ್ದೇಶಕರು ಮತ್ತು ಇತರ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಕೆಪಿಎಸ್​ಸಿ ಒಟ್ಟು ಹುದ್ದೆಗಳ ನೇಮಕಾತಿಗಾಗಿ ಪ್ರಾಥಮಿಕ ಪರೀಕ್ಷೆಗಳನ್ನು ಇದೇ ವರ್ಷ ಆಗಸ್ಟ್​ನಲ್ಲಿ ನಡೆಸಲಾಗಿತ್ತು. ಆದರೆ ಆ ದಿನದ ಪ್ರಶ್ನೆ ಪತ್ರಿಕೆಯನ್ನು ಕಳಪೆಯಾಗಿ ಭಾಷಾಂತರ ಮಾಡಲಾಗಿದೆ ಎಂದು ಸುದ್ದಿಯಾಗಿತ್ತು.

ಇದರಿಂದ ಕೆಪಿಎಸ್​ಸಿ ವ್ಯಾಪಕ ಟೀಕೆ ಗುರಿಯಾಗುವಂತಾಗಿತ್ತು. ಬಳಿಕ ಸಿಎಂ ಸಿದ್ದರಾಮಯ್ಯ ಮರು ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದರು. ಅದರ ಬೆನ್ನೆಲ್ಲೇ ಮರು ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್​ 29ರಂದು ನಿಗದಿ ಮಾಡಲಾಗಿದೆ.

ಈ ಬಗ್ಗೆ ಕೆಪಿಎಸ್​ಸಿ ಟ್ವೀಟ್ ಕೂಡ ಮಾಡಿತ್ತು. 2023-24ನೇ ಸಾಲಿನ ಗೆಜ಼ೆಟೆಡ್‌ ಪ್ರೊಬೆಷನರ್ಸ್‌ ಗ್ರೂಪ್‌-ಎ ಮತ್ತು ಗ್ರೂಪ್‌-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: KAS Exam: ಕೆಎಎಸ್‌ ಮರು ಪರೀಕ್ಷೆಗೆ ಸಿಎಂ ಆದೇಶ; 2 ತಿಂಗಳೊಳಗೆ ನಡೆಸಲು ಕೆಪಿಎಸ್‌ಸಿಗೆ ಸೂಚನೆ