ಅವಲೋಕನ
ಡಾ.ಕರವೀರಪ್ರಭು ಕ್ಯಾಲಕೊಂಡ
Our need will be the Real Creator – Plato’s Republic 375BC ಪ್ರಾಗೈತಿಹಾಸಿಕ ಕಾಲದಿಂದಲೂ (5000BC)ರೋಗಗಳು ಅಥವಾ ಅನಾರೋಗ್ಯ ಬದುಕಿನ ಅವಿಭಾಜ್ಯ ಅಂಗ. ಅನಾರೋಗ್ಯ ದೇವರ ಸಿಟ್ಟಿನ ಕೊಡುಗೆ. ದುಷ್ಟ ಶಕ್ತಿ ಶರೀರ ಪ್ರವೇಶಿಸುವು ದರ ಪರಿಣಾಮ.
ನಕ್ಷತ್ರ, ಗ್ರಹಗಳ ಪ್ರಭಾವದ ಫಲ ಎಂದು ನಂಬಿದ್ದರು. ಗುಣಪಡಿಸುವ ಸಲುವಾಗಿ ದೇವರಿಗೆ ಸಮಾಧಾನ ಮಾಡಲು ಧಾರ್ಮಿಕ
ಪ್ರಾರ್ಥನೆ, ಪೂಜೆ, ಪುನಸ್ಕಾರ, ಹೋಮ ಹವನ, ಬಲಿದಾನ ಮಾಡುತ್ತಿದ್ದರು. ಪ್ರಾಗೈತಿಹಾಸಿಕ ಕಾಲದ ಚಿಕಿತ್ಸೆ ಮೂಢನಂಬಿಕೆ, ಧಾರ್ಮಿಕ ಕಂದಾಚಾರ, ಮಾಟ ಮಂತ್ರ, ವಾಮಾಚಾರಗಳನ್ನೆಲ್ಲ ಒಳಗೊಂಡಿತ್ತು. ಭಾರತ ಪ್ರಾಚೀನ ಕಾಲದಲ್ಲಿ ಸಾಂಸ್ಕೃತಿಕ ಪರಂಪರೆಗಳ ಶ್ರೀಮಂತ ನಾಡಾಗಿತ್ತು.
ವೈದ್ಯಕೀಯ ವಿಜ್ಞಾನಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟು ಮುಂಚೂಣೆಯಲ್ಲಿದ್ದ ರಾಷ್ಟ್ರವಾಗಿತ್ತು. ವೇದ ಕಾಲದಲ್ಲಿ (500BC) ವೈದ್ಯಕೀಯ ವೃತ್ತಿಗೈಯುವವರಿಗೆ ಗೌರವವಿತ್ತು. ದೇವರ ಸ್ಥಾನದಲ್ಲಿ ಅವರನ್ನು ಕಾಣುತ್ತಿದ್ದರು. ಅಶ್ವಿನಿಕುಮಾರರು, ಧನ್ವಂತರಿ ಯವರಿಗೆ ದೈವಿಕ ಸ್ಥಾನಮಾನ ಕೊಟ್ಟಿದ್ದರು. ಆ ಕಾಲದಲ್ಲಿ ಆಯುರ್ವೇದವೇ ಭಾರತೀಯ ವೈದ್ಯಪದ್ಧತಿಗೆ ಪರ್ಯಾಯವಾಗಿತ್ತು. ಆಯುರ್ವೇದವೆಂದರೆ Science of life – (Ayur = life ,Veda = Knowledge) .
ಗಿಡಮೂಲಿಕೆಗಳು, ಲವಣಾಂಶಗಳನ್ನು ರೋಗ ಗುಣಪಡಿಸಲು ಬಳಸುತ್ತಿದ್ದರು. ಆತ್ರೆಯ ಸಂಹಿತೆ ಪ್ರಪಂಚದಲ್ಲಿಯೇ ಪ್ರಾಚೀನ ವೈದ್ಯಕೀಯ ಗ್ರಂಥ. ಮಹರ್ಷಿ ಆತ್ರೆಯ ಭಾರತದ ಪ್ರಥಮ ವೈದ್ಯ ಮತ್ತು ಗುರು ಎಂದು ಪರಿಗಣಿಸಲಾಗಿದೆ. ಇವರು ಹಿಪೊಕ್ರೆಟಿಸ್ ಪ್ರತಿಜ್ಞಾವಿಧಿಗಿಂತ 150ವರ್ಷ ಮೊದಲೇ ವೈದ್ಯಕೀಯ ನೀತಿಶಾಸ್ತ್ರ (Code of Medical ethics)ರಚಿಸಿದ್ದರು ಎಂಬುದೇ
ಭಾರತೀಯರಾದ ನಮಗೆಲ್ಲ ಹೆಮ್ಮೆಯ ಸಂಗತಿ.
ಭಾರತೀಯ ವೈದ್ಯಕೀಯಕ್ಕೆ 800BC ಯಿಂದ 600BC ಕಾಲ ಸುವರ್ಣ ಯುಗವೆಂದೇ ಖ್ಯಾತಿ. ಈ ಕಾಲಾವಧಿಯಲ್ಲಿ ಚರಕ ಮತ್ತು ಶುಶ್ರೂತ ಸಂಹಿತೆಗಳು ಅರೇಬಿಕ್ ಭಾಷೆಗೆ ಬಗ್ದಾದ ಖಲೀ- ಹಾರಲ್ ಅಲ್ಲ – ರಸೀದ ಅವರಿಂದ ಭಾಷಾಂತರ ಗೊಂಡಿತು. ಬುದ್ದಿಷ್ಟ ಯುಗದಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿತು. ಇಂಡಿಯನ್ ಮಟೀರಿಯಾ ಮೆಡಿಕಾ ಬೆಳಕಿಗೆ ಬಂತು. ಹಿಂದು ರಾಜಾ ಶ್ರಯದಲ್ಲಿ ರಾಜಿಸುತ್ತಿದ್ದ ಅಹಿಂಸಾ ಸಿದ್ದಾಂತ (Doctrine of Ahimsa)ದಿಂದಾಗಿ ಶಸ್ತ್ರಕ್ರಿಯೆ ಹಿನ್ನಡೆ ಅನುಭವಿಸಿತು. ಅಲ್ಲಿಂದ ಅದು ಚಿಗಿಯಲೇ ಇಲ್ಲ. ಪಾಲನೆ ಪೋಷಣೆ ಸಿಗದೇ ಕಮರಿಬಿಟ್ಟಿತು.
ಅದರ ಪುನಶ್ಚೇತನಕ್ಕೆ ಯಾರೂ ಮುಂದಾಗದೇ ಇದ್ದುದರಿಂದ ಅದು ಮೂಲೆಗುಂಪಾಯಿತೇ ವಿನಃ ಯಾವುದೇ ಪಥಿಗಳ ದಾಳಿಯಿಂದಲ್ಲ ಎಂಬುದು ಗಮನಿಸಬೇಕಾದ ಅಂಶ. ಭಾರತ ಮುಸ್ಲಿಮರ ಆಕ್ರಮಣಕ್ಕೆ ತುತ್ತಾಯಿತು. ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿ ಹೇಳಹೆಸರಿಲ್ಲದಂತಾಯಿತು. ಆಗ ಅದಕ್ಕೆ ರಾಜ ರಕ್ಷಣೆಯೂ ಸಿಗಲಿಲ್ಲ. ಜನರ ಬೆಂಬಲವೂ ಇರಲಿಲ್ಲ. ಫಿರೋಜ ಶಾ ತಘಲಕ್ (1385ರಲ್ಲಿ) ಯುನಾನಿ ಪದ್ಧತಿಗೆ ರಾಜ ಮರ್ಯಾದೆ ನೀಡಿದ. ಅಷ್ಟೇ ಅಲ್ಲ ಅದನ್ನು ಬೆಳೆಸಿದನೂ ಕೂಡ. ಹೀಗಾಗಿ ಆಯುರ್ವೇದಕ್ಕೆ ಗ್ರಹಣ ಹಿಡಿಯಿತು.
ಕತ್ತಲಾವರಿಸಿತು. ಗ್ರಹಣದಿಂದ ಮುಕ್ತಿ ಸಿಗಲಿಲ್ಲ. ಆಯುರ್ವೇದ ಪಂಡಿತರೂ ಅದಕ್ಕೆ ಪ್ರಯತ್ನಿಸಲಿಲ್ಲ. 16ನೇ ಶತಮಾನದಲ್ಲಿ ಪೋರ್ಚಗೀಸರು ಪಾಶ್ಚಾತ್ಯ ವೈದ್ಯ ಪದ್ಧತಿಯನ್ನು ಭಾರತದಲ್ಲಿ ಬಿತ್ತಿದರು. ಭಾರತೀಯ ವೈದ್ಯ ಪದ್ಧತಿಯಲ್ಲಿ ಅವರಿಗೆ ವಿಶ್ವಾಸ ವಿರಲಿಲ್ಲ. ಪಾಶ್ಚಾತ್ಯ ವೈದ್ಯ ಪದ್ಧತಿ ಎವಿಡೆನ್ಸ್ ಬೇಸ್ಡ್ ಮೆಡಿಸಿನ್ ಆಗಿದ್ದರಿಂದ ಭಾರತೀಯರನ್ನು ಸಾಕಷ್ಟು ಆಕರ್ಷಿಸಿತು. ಬ್ರಿಟಿಷ್ ಕಾಲದಲ್ಲಿ ಮತ್ತಷ್ಟು ಬೆಳೆಯಿತು. ವೈದ್ಯಕೀಯ ಮಹಾವಿದ್ಯಾಲಯಗಳು ಪ್ರಾರಂಭವಾದವು. ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳು ಹುಟ್ಟಿಕೊಂಡವು.
ಸಾಂಕ್ರಾಮಿಕ ರೋಗಗಳ (ಪ್ಲೇಗ್, ಕಾಲರಾ, ಮಲೇರಿಯಾ, ಮೈಲಿಬೇನೆ, ಕ್ಷಯ ಇತ್ಯಾದಿ)ಅಧ್ಯಯನ, ಒಪ್ಪಬಹುದಾದ ಚಿಕಿತ್ಸೆ ಗಳು ಬೆಳಕಿಗೆ ಬಂದವು. ಔಷಧಗಳಿಗೆ ಗುಣವಾಗದ ರೋಗಿಗಳ ತೊಳಲಾಟವನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಗುಣಪಡಿಸಿ ದರು. ಇದು ಅನೇಕ ರೋಗಿಗಳ ಜೀವ ಉಳಿಸುವಲ್ಲಿ ಯಶಸ್ವಿಯಾಯಿತು. ಜನಮಾನಸದ ಗಮನ ಸೆಳೆಯುವಲ್ಲಿಯೂ ಯಶಸ್ವಿ ಯಾಯಿತು. ಶಸ್ತ್ರ ಚಿಕಿತ್ಸಾ ಕ್ಷೇತ್ರಕ್ಕೆ ಬ್ರಿಟಿಷರ ಪ್ರೋತ್ಸಾಹ, ಜನಬೆಂಬಲ ಸಿಕ್ಕಿದ್ದರಿಂದ ಸಾಕಷ್ಟು ಬೆಳೆಯಿತು.
ಜನಾರೋಗ್ಯದಲ್ಲಿ ಕ್ರಾಂತಿಯ ಕಹಳೆಯನ್ನು ಊದಿತು. ಭಾರತದಲ್ಲಿಯ ಜನಾರೋಗ್ಯ ಚಿತ್ರ ಆಗ ಮನಕಲಕುವಂತಿತ್ತು. ಇದನ್ನು ಭಾರತೀಯ ವೈದ್ಯಕೀಯ ಸಂಘದ ಜಿಮಾ(JIMA)ಸಂಪಾದಕೀಯ ಬಯಲು ಮಾಡಿತ್ತು- In this unfortunate country we have never had Public health services in the sense in which they are understood in the West. We have a few hospitals and dispensaries, hardly one for a taluka considering the vastness of the population. We have no facilities for the curative and preventive side of disease…….No country in the world is medically so badly served as India because the Govern ment never considered the health of the people as its first and foremost concern and its national wealth, as much as it considers law and order and the police and the military to be -JIMA Editorial,April ,1946 ಶಸ್ತ್ರ ಚಿಕಿತ್ಸಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ.
ನೂರಾರು ವರ್ಷಗಳ ಪರಿಶ್ರಮದ ಫಲವಾಗಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ಲೆಪ್ರೋಸ್ಕೋಪಿಕ್ ಸರ್ಜರಿ, ಟೆಲಿ ಸರ್ಜರಿ, ರೊಬೊಟಿಕ್ ಸರ್ಜರಿ, ಪ್ರೋಟಾನ್ ಸ್ಕಾಲ್ ಪೆಲ್ ಸರ್ಜರಿ, ನ್ಯೂರೋಸರ್ಜರಿ, ಭ್ರೂಣ ಶಸ್ತ್ರ ಚಿಕಿತ್ಸೆ..ಹೊಸ ಹೊಸ
ಆವಿಷ್ಕಾರಗಳು ಬಂದಿವೆ. ಜನರು ಅವುಗಳನ್ನು ಮೆಚ್ಚಿಕೊಂಡಿದ್ದಾರೆ.
ನೆನಪಿಡಿ: ಇದು ದಿನ ಬೆಳಗಾಗುವುದರೊಳಗಾಗಿ ಸಾಧ್ಯವಾಗಿಲ್ಲ. ಇನ್ನು ‘ಬ್ರಿಡ್ಜ್ ಕೋರ್ಸ್’ ಮುಗಿಸಿದವರಿಗೆ ಶಸ್ತ್ರ ಚಿಕಿತ್ಸೆಗೆ ಅನುಮತಿ ಕೊಟ್ಟರೆ ಜನರ ಜೀವವನ್ನು ದೇವರಿಗೂ ಕಾಪಾಡಲು ಸಾಧ್ಯವಾಗುವುದಿಲ್ಲ. ಅವಸರದ ನಿರ್ಧಾರದಿಂದ ಆಯುರ್ವೇದವರು ಶಸ್ತ್ರಕ್ರಿಯೆ ಪ್ರಾರಂಭಿಸಿದರೆ, ಜನರ ಬದುಕು ತೊಡಕು ತೊಂದರೆಗಳ ಗೂಡಾಗುವುದು. ತೊಂದರೆಗಳ ನಿವಾರಣೆಗೆ ಮತ್ತೆ ನುರಿತ ಶಸ್ತ್ರಚಿಕಿತ್ಸಕರ ಮೊರೆ ಹೋಗಬೇಕಾಗಬಹುದು.
ಇದರಿಂದ ಚಿಕಿತ್ಸಾ ವೆಚ್ಚ ಇನ್ನಷ್ಟು ಹೆಚ್ಚಾಗಬಹುದು. ಹಿಂದು ರಾಜಾಶ್ರಯವಿದ್ದಾಗಲೇ ಶಸ ಚಿಕಿತ್ಸೆಯಲ್ಲಿ ಹಿನ್ನಡೆ ಪಡೆದ
ಆಯುರ್ವೇದಕ್ಕೆ, ಶಸ್ತ್ರ ಚಿಕಿತ್ಸೆಗೆ ಸಜ್ಜಾಗಿ ಎಂದರೆ ಹೇಗೆ? ಆಯುರ್ವೇದಕ್ಕೆ ಅಪಾರ ಗೌರವವಿರುವ ಈ ನಾಡಿನಲ್ಲಿ, ಮೊದಲು ಅದರ ಅಭಿವೃದ್ಧಿಗೆ ನಾಂದಿ ಹಾಡಲಿ. ಸಂಶೋಧನಾ ಕೇಂದ್ರಗಳು ನಾಡಿನುದ್ದಕ್ಕೂ ಸ್ಥಾಪಿತಗೊಳ್ಳಲಿ. ಕಾರ್ಯನಿರ್ವಹಿಸಲಿ. ಅದರಲ್ಲಿಯ ಗ್ರಂಥಗಳು ಈ ಕಾಲಘಟ್ಟಕ್ಕೆ ತಕ್ಕಂತೆ ಪರಿಷ್ಕರಣೆಗೊಳ್ಳಲಿ.
ಅದರಲ್ಲಿ ಅಭ್ಯಾಸ ಮಾಡಿದವರು, ಆ ಪದ್ಧತಿಯಲ್ಲಿಯೇ ಪ್ರ್ಯಾಕ್ಟೀಸ್ ಮಾಡುವ ಮನೋಭಾವ ಬೆಳೆಸಿಕೊಳ್ಳಲಿ. ಆಯುರ್ವೇದ ದಲ್ಲಿ ಹೊಸ ಹೊಸ ಸಂಶೋಧನೆಗಳಾಗಲಿ. ಅದಕ್ಕೆ ಸರಕಾರ ಪ್ರೋತ್ಸಾಹಿಸಲಿ. ಅವರದೇ ಆದ ಜೀವಿರೋಧಕಗಳು, ಅರವಳಿಕೆ ಔಷಧಗಳು, ಶಸಕ್ರಿಯೆ ಪರಿಕರಗಳು, ಶಸ್ತ್ರಕ್ರಿಯೆ ಪೂರ್ವ, ಶಸ್ತ್ರಕ್ರಿಯೆ ನಂತರದ ಔಷಧಗಳು ಆವಿಷ್ಕಾರಗೊಳ್ಳಲಿ.
ಎಲ್ಲ ಆಯಾಮಗಳಲ್ಲಿ ಸ್ವಂತಿಕೆ ಶ್ರೀಮಂತಗೊಳ್ಳಲಿ. ಆಗ ಯಾರಪ್ಪನ ಅಂಜಿಕೆಯೂ ಇರುವುದಿಲ್ಲ. ಇದನ್ನು ಬಿಟ್ಟು ಬೇರೆ ಯವರ ಮನೆಯ ಮುಂದೆ ಅಂಗಲಾಚುತ್ತ ಕೈಚಾಚುವುದು ಬೇಡ. ಇದರಿಂದ ನಮ್ಮ ಪೂರ್ವಜರಿಗೆ ಅವಮಾನಮಾಡಿ ದಂತಾಗುವುದು. ಅಲೆಹಬ್ಬದ ಹುಲಿಗಳ ಹಾಗೇ ಹಾರಾಡದೇ ನಿಜವಾದ ಹುಲಿಗಳಾಗಿ. ಆಗ ಆತ್ಮನಿರ್ಭರತೆ ಅರ್ಥಪೂರ್ಣ ವಾದೀತು! ಈ ಪೂರ್ವ ಸಿದ್ದತೆಗಳಿಲ್ಲದೇ ಅಖಾಡಕ್ಕಿಳಿದರೆ ಜೇನುಹುಟ್ಟಿಗೆ ಕೈಹಾಕಿದಂತಾದೀತು! ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವ ಹುಚ್ಚು ಹವ್ಯಾಸ ಬೇಡ!
ಎಲ್ಲಾ ಪಥಿಗಳು ಒಂದೇ ಸೂರಿನಡಿಯಲ್ಲಿ ಸಿಗಲಿ. ಆಯ್ಕೆ ಮಾಡುವ ಹಕ್ಕನ್ನು ಜನರಿಗೆ ಬಿಡಲಿ. ಅದನ್ನು ಬಿಟ್ಟು ಅವರ
ಶಾಸ್ತ್ರದಲ್ಲಿಯ ಕೆಲವೊಂದು ಭಾಗವನ್ನು ಇವರಿಗೆ, ಇವರ ಶಾಸ್ತ್ರದಲ್ಲಿಯ ಕೆಲವೊಂದು ಅವರಿಗೆ ಕಲಿಸಿದರೆ ಯಾರೂ, ಎದರಲ್ಲೂ ಪರಿಣಿತರಾಗುವುದಿಲ್ಲ. Jack of all trades master of none ಸ್ಥಿತಿ ವೈದ್ಯಕೀಯ ವಿಜ್ಞಾನಕ್ಕೆ ಬರುವುದು ಬೇಡ. ಇದು ಸಾಧುವೂ ಅಲ್ಲ. ಸಮಂಜಸವೂ ಅಲ್ಲ. ಈ ಕಿಚಡಿ(Mixopathy) ವೈದ್ಯರ ನಿರ್ಮಿತಿಯಿಂದ ಜನಾರೋಗ್ಯ ಪಚಡಿಯಾಗುವುದರಲ್ಲಿ ಸಂಶಯವಿಲ್ಲ ಹಠ ಧೋರಣೆಯಿಂದ ಸರಕಾರ ಹೊರಬರಲಿ ಇಲ್ಲವಾದರೆ ಬೆಕ್ಕಿಗೆ ಬೆಣ್ಣೆ ಹಂಚಿದ ಮಂಗನ ಕತೆಯಂತಾದೀತು!
ತಜ್ಞರ ಸಮಿತಿ ರಚನೆಯಾಗಲಿ. ಅಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲದಿರಲಿ. ಅವರ ಸಲಹೆ ಸೂಚನೆ ಪಡೆಯಲಿ.
ಕಾನೂನು ಮಾಡುವ ನಮ್ಮನ್ನಾಳುವ ಪ್ರಭುಗಳು ರಾಜಕೀಯದಲ್ಲಿ ಚಾಣಕ್ಯ ಆಗಿರಬಹುದು? ವೈದ್ಯಕೀಯದಲ್ಲಿ! ತೊಗಲಾಗೇನ ಬಲ್ಲ ತಮ್ಮಣ್ಣ ಅನ್ನುವ ಹಾಗೆ ಆಗುವುದು ಖಂಡಿತ ಬೇಡ. ಕಾಣದ ಕೈ ಕೈವಾಡದ ಕುತಂತ್ರಕ್ಕೆ ಮಣಿದು, ಮಾಡಿದ್ದೇ ಮಾರ್ಗ ಎಂದು ಮುನ್ನಡೆದಲ್ಲಿ ಮುಂದೊಂದು ದಿನ ಯುನಾನಿ, ಸಿದ್ಧ, ಹೋಮಿಯೋ, ನ್ಯಾಚುರೋಪಥಿ, ಅಕ್ಯುಪಂರ್ಚದವರನ್ನು ಬಡಿ, ಅಳಲೆಕಾಯಿ ಪಂಡಿತರು, ಮಾಟ ಮಂತ್ರದವರು, ವಾಮಾಚಾರಿಗಳು ಕಿಚಡಿ ವೈದ್ಯರಾಗಲು ಹಕ್ಕೊತ್ತಾಯಕ್ಕೆ ಸಜ್ಜಾಗ ಬಹುದು! ವೈದ್ಯರ ಕೊರತೆ ನೀಗಿಸಲು ಕಿಚಡಿ ವೈದ್ಯರ ನಿರ್ಮಿಸುವುದು ಪರ್ಯಾಯ ಮಾರ್ಗವಲ್ಲ!
Where the mind is without fear …..my Father ,let my country awake ಗೀತಾಂಜಲಿಯಲ್ಲಿ ರವೀಂದ್ರನಾಥ್ ಟ್ಯಾಗೋರ್ ಹೇಳಿದಂತೆ – ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯರು ಇಂದು ಬೀದಿಗಿಳಿಯಬೇಕಾಗಿದೆ. ಜನರಿಗೆ ಮನವರಿಕೆ ಮಾಡಿಕೊಟ್ಟು, ಹಳ್ಳಿಯ ಜನರ ಆರೋಗ್ಯ ಹರಾಜುಹಾಕಲು ಹೊರಟಿರುವ ಸರಕಾರದ ವಿರುದ್ಧ ಸೆಡ್ಡು ಹೊಡೆಯಬೇಕಿದೆ. ಇಲ್ಲವಾದಲ್ಲಿ
ಕಿಚಡಿ ವೈದ್ಯರು ಕೊಂದ ರುಂಡಗಳ ಮಾಲೆ ಭಾರತಾಂಬೆಯ ಕೊರಳಲ್ಲಿ ಕಂಗೊಳಿಸಿಯಾವು!
ನಾವು ಆತ್ರೆಯ, ಧನ್ವಂತರಿ, ಚರಕ, ಶುಶ್ರೂತರ
ನಾಡಿನವರೆಂದು ಒಣ ಹೆಮ್ಮೆಪಟ್ಟರೆ ಸಾಲದು. ಅವರ ವಂಶಸ್ಥರು ಎಂದು ಹೇಳಿಕೊಳ್ಳುವವರು ಆ ಶಾಸಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಡಲು ಸಜ್ಜಾಗಬೇಕು. ಬರೀ ಗತವೈಭವ ಮೆಲಕು ಹಾಕುವುದರಲ್ಲಿ ನಿಸ್ಸೀಮರು ನಾವು. ಆಚಾರ್ಯ ಜಗದೀಶ್ಚಂದ್ರ ಬೋಸರ ಮಾತನ್ನು ಇಲ್ಲಿ ಉದಾಹರಿಸುವುದು ಸೂಕ್ತ – it would be our worst enemy who could wish us to live only on the glories of the past and die off from the face of the earth in sheer passivity .By continuous
achievement alone we can justify our great ancestry.
ಕೊನೆಯ ಮಾತು: ಕಲಬೆರಿಕೆ ವೈದ್ಯರಾಗಲು ಹಾತೊರೆಯುವುದು ಬೇಡ. ಅದು ಕಲಬೆರಿಕೆ ಆಹಾರದಷ್ಟೇ ಅಪಾಯಕಾರಿ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿಯನ್ನು ನೀವೂ ಗಮನಿಸಿರಬೇಕು. ಆಯುರ್ವೇದ ನೀರು, ಅಲೋಪತಿ ಹಾಲು. ಸ್ವತಂತ್ರ ರೀತಿಯಲ್ಲಿ ಎರಡೂ ಶುದ್ಧ. ಹಾಲಿಗೆ ನೀರು ಬೆರೆತರೆ ಗುಣಮಟ್ಟ ತಗ್ಗುತ್ತದೆ. ನೀರಿಗೆ ಹಾಲು ಬೆರೆತರೆ, ನೀರು ಸಂಪೂರ್ಣ ಹಾಳಾಗುತ್ತದೆ.
ಆದ್ದರಿಂದ ಕಲಬರಿಕೆಯಾಗಿ ಕೆಡುವುದು ಬೇಡ. ನೀರು ನೀರಾಗಿಯೇ ಇರಲಿ. ಹಾಲು ಹಾಲಾಗಿಯೇ ಇರಲಿ. ಇಬ್ಬರೂ ಶುದ್ಧವಾಗಿ ರೋಣ. ಬದ್ಧವಾಗಿರೋಣ. ಇದಕ್ಕೆ ನೀವೆನಂತಿರಿ?