Sunday, 15th December 2024

ಒಂದೇ ಕಿಡ್ನಿ: ಅಂಜದೇ ಪದಕ ಗೆದ್ದಿದ್ದ ಅಂಜು

ವಿಶೇಷ ವರದಿ: ವಿರಾಜ್‌ ಕೆ.ಅಣಜಿ

ವಾರದ ತಾರೆ ಅಂಜು ಬಾಬಿ ಜಾರ್ಜ್‌

ದೇಹಕ್ಕೆ ದಣಿವೇ ಆಗುವಂತಿಲ್ಲ ಎಂದು ವೈದ್ಯರು ಹೇಳಿರುವಾಗ, ದೇಹವನ್ನೇ ದಿನನಿತ್ಯ ದಂಡಿಸಬೇಕಾದ ಯಜ್ಞ ಮಾಡುವ ಶಪಥ.

2003, ಪ್ಯಾರೀಸ್. ವಿಶ್ವ ಅಥ್ಲೆಟಿಕ್ಸ್‌ ಕ್ರೀಡಾಕೂಟ ನಡೆಯುತ್ತಿತ್ತು. ಲಾಂಗ್ ಜಂಪ್‌ನ ಫೈನಲ್ ರೌಂಡ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಅಂಜು ಬಾಬಿ ಜಾರ್ಜ್ ನಿಂತಿದ್ದರು. ತನ್ನ ದೇಶಕ್ಕೆ ಪದಕ ತಂದು ಕೊಡಲೇಬೇಕು ಎಂಬ ಹಟ, ಉತ್ಕಟ ಬಯಕೆ ಅಂಜು ಮನದೊಳಗೆ ಜಿಗಿಯುತ್ತಿತ್ತು. ಆ ಕ್ಷಣ, ನನ್ನ ದೇಹದಲ್ಲಿರುವುದು ಒಂದೇ ಕಿಡ್ನಿ, ನನ್ನಿಂದ ಏನಾದರೂ ಜಿಗಿಯಲು ಆಗದಿದ್ದರೆ ಹೇಗೆ ಎಂಬ ಸಣ್ಣ ಸಂದೇಹವೂ ತಮ್ಮೊಳಗೆ ಇಣುಕಲು ಬಿಟ್ಟುಕೊಳ್ಳದೇ ಅಂಜು ಗಟ್ಟಿಯಾಗಿ ನಿಂತಿದ್ದರು.

ತಮ್ಮೆಲ್ಲ ಪರಿಶ್ರಮವನ್ನು ಕಣ್ತುಂಬ ತಂದುಕೊಂಡು ಜಂಪ್ ಮಾಡಿದ್ದರು. ಆ ದೂರದ ನೆಗತ ಮುಗಿದಾಗ ವಿಶ್ವ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟ ಮೊದಲ ಕ್ರೀಡಾಪಟು ಎಂಬ ಗರಿ ಅವರ ಮುಡಿಗೇರಿತ್ತು. ಅಂಜು ಕಂಚಿನ ಪದಕವನ್ನು ಎದೆಗೇರಿಸಿ ಕೊಂಡಿದ್ದರು. ಇಡೀ ಭಾರತವೇ ಅಂಜು ಸಾಧನೆಗೆ ಹೆಮ್ಮೆ ಪಟ್ಟಿತ್ತು.

ಆದರೆ ಈಗೇಕೆ ಅಂಜು ಬಾಬಿ ಜಾರ್ಜ್ ಸುದ್ದಿ? ಏಕೆಂದರೆ, ಅಂದು ಪದಕ ಗೆದ್ದ ‘ಹಿಂದಿನ ಕತೆ’ ಯನ್ನು ಟ್ವೀಟ್ಟರ್‌ನಲ್ಲಿ ಅಂಜು ಈಗ ಹಂಚಿಕೊಂಡಿದ್ದಾರೆ. ಪ್ರತಿ ಸಾಧಕನ ಹಿಂದೆಯೂ ಛಲ ವಿದೆ, ಅಳುವಿದೆ, ಸೋಲಿದೆ, ನೋವಿದೆ, ಕೊನೆಗೆ ಖಂಡಿತ ಗೆಲುವಿದೆ ಎಂಬುದು ಅಂಜು ಅವರ ಕತೆಯಲ್ಲೂ ಮತ್ತೊಮ್ಮೆ ಸಾಬೀತಾಗಿದೆ.

ಅದು 2001ರ ಸಮಯ, ದೇಶಿಯ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅಂಜು ಹಲವು ಪದಕಗಳನ್ನು ಗೆಲ್ಲುತ್ತಿದ್ದರು. ಇದಕ್ಕಿಂದ್ದಂತೆ ಒಮ್ಮೆ ವಿಪರೀತ ಆಯಾಸ, ಊದಿಕೊಂಡ ಕಾಲು ಮತ್ತು ಮೂಳೆಗಳ ನೋವು ಅಸಾಧ್ಯವೆನ್ನುವಂತೆ ಅಂಜು ಅವರನ್ನು ಹಿಂಡಿದವು. ತೀವ್ರ ಅಭ್ಯಾಸದ ಕಾರಣ ಎಂದು ಭಾವಿಸಿ, ವೈದ್ಯರ ಬಳಿ ಚಿಕಿತ್ಸೆಗೆ ಹೋದಾಗ ವೈದ್ಯರು ಹೇಳಿದ್ದು ‘ನಿಮಗೆ ಒಂದೇ ಕಿಡ್ನಿ ಮಾತ್ರ ಕೆಲಸ ಮಾಡುತ್ತದೆ’ ಎಂಬ ಕಠೋರ ಸತ್ಯ.

ಕ್ರೀಡಾಪಟು ಆಗಬೇಕು ಎಂದು ಬಾಲ್ಯದಿಂದಲೇ ಕನಸಿಟ್ಟುಕೊಂಡು ಅದಕ್ಕಾಗಿ ಬದುಕು ಸವೆಸಿ, ಬೆವರು ಹರಿಸಿದ್ದವರಿಗೆ, ಇನ್ನು ಮುಂದೆ ನೀವು ಆಟ ಆಡುವಂತಿಲ್ಲ ಎಂದರೆ ಹೇಗಾಗಿರಬೇಡ? ಆದರೂ ಅಂದು ಅಂಜು ಸಾವರಿಸಿಕೊಂಡಿದ್ದರು. ಅಂದು ತಮ್ಮ
ಕೋಚ್, ಈಗ ಅವರ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಮನಸ್ಸಿದ್ದರೆ ಮಾರ್ಗ ಎಂಬುದನ್ನು ಮತ್ತೆ ಸಾಬೀತು ಮಾಡಲು ಮತ್ತೆ ಪುಟಿದೆದ್ದರು. ಆದರದು ಅಷ್ಟು ಸುಲಭವಾಗಿರಲಿಲ್ಲ.

ದೇಹಕ್ಕೆ ದಣಿವೇ ಆಗುವಂತಿಲ್ಲ ಎಂದು ವೈದ್ಯರು ಹೇಳಿರುವಾಗ, ದೇಹವನ್ನೇ ದಿನನಿತ್ಯ ದಂಡಿಸಲೇಬೇಕಾದ ಯಜ್ಞ ಮಾಡ ಬೇಕಿತ್ತು. ಹೆಚ್ಚೆಚ್ಚು ನೀರು ಕುಡಿಯಬೇಕು ಎಂಬುದು ವೈದ್ಯರು ಹೇಳಿದ ಸುಲಭ ಉಪಾಯವಾಗಿತ್ತು. ಅದೇ ರೀತಿ ಹೆಚ್ಚು ನೀರು ಕುಡಿದರೆ ಇರುವ ಇನ್ನೊಂದು ಕಿಡ್ನಿಗೆ ಒತ್ತಡ ಬೀಳುವ ಅಪಾಯವೂ ಇತ್ತು. ಒಮ್ಮೊಮ್ಮೆ ದೇಹ ಒಣಗಿದಂತಾಗಿ ಅಂಜು ಕುಸಿಯುತ್ತಿದ್ದರು. ತಲೆ ಸಿಡಿಯಿತೆನ್ನುವಷ್ಟು ನೋವು ಬರುತ್ತಿತ್ತು.

ಒಮ್ಮೊಮ್ಮೆ ಮೂಗು ಸೋರಿ ರಕ್ತ ಜಿನುಗುತಿತ್ತು. ಪ್ರೋಟೀನ್ ಒಂದಷ್ಟು ಆಚೀಚೆ ಆದರೂ ಮೇಲೇಳಲೂ ಆಗದಂಥ ಸೂಕ್ಷ್ಮತೆ ಯಲ್ಲಿ ದೇಹ ಸೊರಗಿತ್ತು. ಇದರ ಜತೆಗೆ ಇತರ ಕ್ರೀಡಾಪಟುಗಳು ಪಡೆದಂತೆ ಕಠಿಣ ತರಬೇತಿ ಪಡೆಯದೇ ಸುಲಭ ಎನಿಸುವ ಅಭ್ಯಾಸವನ್ನು ಅಂಜು ಪಡೆಯ ಬೇಕಿತ್ತು. ಅಂಜು ಆಯ್ದುಕೊಂಡಿದ್ದ ದಾರಿ ಈ ನಾಲ್ಕೈದು ಸಾಲಿನಲ್ಲಿ ಹೇಳಿದಷ್ಟು ಸುಲಭ ವಾಗಿರಲಿಲ್ಲ, ಆದರೆ ಗುರಿ ಅಚಲವಾಗಿತ್ತು. ಛಲ ಬಿಡದೆ ತರಬೇತಿ ಪಡೆದಿದ್ದ ಅಂಜು ವಿಶ್ವ ಅಥ್ಲೆಟಿಕ್ಸ್‌ ಭಾಗವಹಿಸಿ ಕಂಚು ಗೆದ್ದಿದ್ದರು.

2005ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌, ಏಷಿಯನ್ ಚಾಂಪಿಯನ್ ಷಿಪ್‌ನಲ್ಲಿ ಬಂಗಾರ, ಸೇರಿ ಹಲವು ಕ್ರೀಡಾಕೂಟಗಳಲ್ಲಿ ಹಲವು ಪದಕ ಗೆದ್ದು ದೇಶದ ಹೆಮ್ಮೆ ಎನಿಸಿದರು. ಡಿಸೆಂಬರ್ 3ರಂದು ವಿಶ್ವ ಅಂಗವೈಕಲ್ಯದ ದಿನವೆಂದು ಆಚರಿಸಿದ ಸಂದರ್ಭದಲ್ಲೇ, ತಮ್ಮ ಅಂಗ ವೈಕಲ್ಯದ ಬಗ್ಗೆ ಅಂಜು ಮನಬಿಚ್ಚಿ ಟ್ವೀಟ್ಟರ್‌ನಲ್ಲಿ ಹೇಳಿಕೊಂಡಿದ್ದು, ತಮ್ಮ ಸಾಧನೆಯ ಶ್ರೇಯವನ್ನು ತಮ್ಮ
ಕೋಚ್(ಪತಿ)ಗೆ ಅರ್ಪಿಸಿ, ಧನ್ಯತೆ ಮೆರೆದಿದ್ದಾರೆ.

ಹೆಸರು ‘ಅಂಜು’ (ಹೆದರು) ಎಂದಿದ್ದರೂ ಬದುಕಿನ ಸವಾಲಿಗೆ ಅಂಜದೇ ಸಾಧನೆ ತೋರಿದ ಅಂಜು ಬಾಬಿ ಜಾರ್ಜ್ ಎಲ್ಲರಿಗೂ ಸದಾ ಸ್ಪೂರ್ಥಿ ಸೆಲೆ. ಮುದುಡುತ್ತಿದ್ದ ಪ್ರತಿಭೆಗೆ ಪ್ರೋತ್ಸಾಹ, ಛಲ ತುಂಬಿದ ಪತಿ ರಾಬರ್ಟ್ ಬಾಬಿ ಜಾರ್ಜ್ ಅವರೂ ಇದೇ
ಸಮಯದಲ್ಲಿ ಗೌರವಕ್ಕೆ ಅರ್ಹರು.

ತಮ್ಮಲ್ಲಿ ಎಲ್ಲ ಇದ್ದರೂ ನಮಗೆ ಅದಿಲ್ಲ, ಇದಿಲ್ಲ ಎಂದು ಸಬೂಬು ಹೇಳುವರೇ ಹೆಚ್ಚು. ನಮ್ಮ ದೇಹದಲ್ಲಿ ದೇವರು ಏನನ್ನೇ ಕಿತ್ತುಕೊಂಡಿದ್ದರೂ, ಎಲ್ಲರೊಳಗೂ ಇಚ್ಛಾಶಕ್ತಿಯೆಂಬ ದೀಪವನ್ನು ಹಚ್ಚಿರುತ್ತಾನೆ. ಅದನ್ನು ಅರಿತು ಬೆಳಗಬೇಕಾದವರು ನಾವೇ.