Saturday, 23rd November 2024

ಗಡ್ಡಕ್ಕೆ ಬೆಂಕಿ ಹೊತ್ತಿದಾಗ…

ಸುಧಕ್ಕನ ಕಥೆಗಳು

ಸುಧಾಮೂರ್ತಿ

ನಿನ್ನೆಯ ಟ್ರಿಪ್ ನಂತರ ಮಕ್ಕಳು ತುಂಬಾ ಸಂತೋಷದಿಂದ ಇದ್ದರು. ಅವರನ್ನು ಬೆಟ್ಟದಿಂದ ಕೆಳಗೆ ಇಳಿಸಿ ಮನೆಗೆ
ಕರೆದು ಕೊಂಡು ಹೋಗುವುದು ಅಜ್ಜ – ಅಜ್ಜಿಯರಿಗೆ ಸಾಕು ಸಾಕಾಯಿತು.

ರಾತ್ರಿ ಅಜ್ಜಿ ದೀಪ ಆರಿಸುವ ಮುನ್ನವೇ ಮಕ್ಕಳು ನಿದ್ರೆಗೆ ಜಾರಿದರು. ಮರುದಿನ ಅಜ್ಜ – ಅಜ್ಜಿಯರು ಎಂದಿನಂತೆ ಎದ್ದು ತಮ್ಮ ಕೆಲಸಮುಗಿಸಿದರೂ, ಮಕ್ಕಳು ಇನ್ನೂ ಎದ್ದಿರಲೇ ಇಲ್ಲ. ‘ಮಕ್ಕಳು ಧಣಿದಿದ್ದಾರೆ’ ಎಂದು ಅಜ್ಜಿ ಮೊದಲು ಅಂದುಕೊಂಡು ಗಂಟೆ ಹತ್ತು ಆದರೂ ಏಳದ ಮಕ್ಕಳನ್ನು ತರಾಟೆಗೆ ತೆಗೆದುಕೊಂಡಳು.‘ಮಕ್ಕಳೇ ಆಲಸಿಯಾಗಬೇಡಿ. ಇಲ್ಲಾದ್ರೆ ಈ ಹೊತ್ತು ನಿಮಗೆ ಬೆಳಗಿನ ತಿಂಡಿ ಸಿಗೋದೆ ಇಲ್ಲ’.

ಮಕ್ಕಳು ತಿಂಡಿಯ ಮಾತು ಕೇಳಿ ಕೂಡಲೇ ಎದ್ದರು. ‘ಅಜ್ಜಿ ಇಂದಿನ ತಿಂಡಿ ಏನು?’ ‘ಈ ಹೊತ್ತು ಮಸಾಲೆ ದೋಸೆ’ ಎಂದಳು ಅಜ್ಜಿ. ಕೂಡಲೇ ಮಕ್ಕಳು ಬೇಗನೆ ಸ್ನಾನದ ಮನೆಗೆ ಓಡಿದರು. ಕೆಲವರು ಗಡಿಬಿಡಿಯಿಂದ ಹಲ್ಲು ಉಜ್ಜಲು ಪರದಾಡಿದರು.

ಆದರೆ ಮೀನು ಮಲಗಿದ್ದ ಜಾಗದಿಂದ ಏಳಲೇ ಇಲ್ಲ. ಅಜ್ಜಿ ‘ಯಾಕೆ ಮೀನು ಹುಷಾರಿಲ್ಲವೇ? ಎಂದು ಆತಂಕಗೊಂಡಳು.
‘ಇಲ್ಲ ಅಜ್ಜಿ ನನಗೆ ಹಾಸಿಗೆಯ ಮೇಲೆ ಏನೂ ಕೆಲಸವಿಲ್ಲದೆ ಮಲಗಲು ತುಂಬಾ ಆಸೆ. ಸುಮ್ಮನೇ ಏನೂ ಕೆಲಸ ಇಲ್ಲದೇನೇ ಇರೋದು ಎಷ್ಟು ಸುಖ’ ಎಂದಳು.

ಅಜ್ಜಿ ನಗುತ್ತ ‘ಆಲಸ್ಯತನ ಸೊಗಸಲ್ಲ. ಅದರಲ್ಲಿ ಏನೂ ಸುಖ ಇಲ್ಲ. ಅಲ್ಲದೇ ಜನರು ಆಲಸಿಗರನ್ನು ತೀರ ಕನಿಷ್ಠರಂತೆ ನೋಡ್ತಾರೆ. ಮಕ್ಕಳೆಲ್ಲಾ ದೋಸೆಗೆ ಓಡಿಬಂದರು. ಸವಕಾಶನಾಗಿ ಮೀನು ಅವರಲ್ಲಿ ಸೇರಿದಳು. ‘ಮೀನು ನೀನು ಸ್ನೇಹಮಾಡಿಬಂದರೆ ಮಾತ್ರ ದೋಸೆ’ ಎಂದು ಅಜ್ಜಿ ಕರಾರು ಹಾಕಿದಳು.

‘ಯಾಕೆ ನಾನು ನಿನ್ನೆ ಮಾಡಿದ್ದೆನ್ನಲ್ಲಾ’ ಎಂದು ಮೀನು ರಾಗ ತೆಗೆದಳು. ‘ಇಲ್ಲಾದ್ರೆ ನಿನ್ನದು ಬೀರು ಥರ ಕಥೆ ಆಗ್ತದೆ’
ಎಂದಳು ಅಜ್ಜಿ ದೋಸೆಯನ್ನು ಹೂಯ್ಯುತ್ತ. ‘ಅಜ್ಜಿ ಬೀರು ಯಾರು?’ ಎಂದು ಮಕ್ಕಳು ಒಂದೇ ಸಲಕ್ಕೆ ಕೇಳಿದರು. ಅಜ್ಜಿ ನಗುತ್ತ ‘ನಮ್ಮೂರಿನಲ್ಲಿ ಬೀರು ಅಂತಾ ಒಬ್ಬ ಆಲಸಿ ಇದ್ದ…’ ಹೀಗೆ ಶುರುವಾಯಿತು ಅಜ್ಜಿಯ ಕಥೆ.

ಬನ್ನಿ ನಾವೇಲ್ಲರೂ ಮಸಾಲೆ ದೋಸೆ ತಿನ್ನುತ್ತ ಅಜ್ಜಿಯ ಕಥೆಯನ್ನು ಕೇಳೋಣವೇ?

ಬೀರು ಮಹಾ ಆಲಸಿ, ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅವನ ತಾಯಿ ಪಾರ್ವತಿ ಮತ್ತು ಹೆಂಡತಿ ಶಾಂತಿ ಅವನ ಸಲುವಾಗಿ ಸಾಕಾಗಿ ಹೋಗಿದ್ದರು. ಬೀರುಗೆ ತನ್ನ ಗಡ್ಡದ ಬಗ್ಗೆ ಅಪಾರ ಅಭಿಮಾನ. ಅವನದು ಕಪ್ಪಾದ ನೀಳವಾದ ಗಡ್ಡ.
ಅದನ್ನು ಕಾಲಕಾಲಕ್ಕೆ ಬಾಚುವುದನ್ನು ಬಿಟ್ಟರೆ ಮತ್ಯಾವ ಕೆಲಸವನ್ನೂ ಆತ ಮಾಡುತ್ತಿರಲಿಲ್ಲ.

‘ಬೀರು ತೆಂಗಿನಕಾಯಿ ಕಿತ್ತು’ ಎಂದು ಪಾರ್ವತಿ ಹೇಳಿದರೆ ‘ತೆಂಗಿನಕಾಯಿ ಇನ್ನೂ ಬಲಿತಿಲ್ಲ. ಬಲಿತಾಗ ತಗೆಯುತ್ತೇನೆ’ ಬೀರು ರಾಗ ಎಳೆಯುತ್ತಿದ್ದ. ‘ಬೀರು ಬಾವಿಯಿಂದ ನೀರು ಸೇದಿಕೊಂಡು ಬಾ’ ಎಂದರೆ ‘ಬಾವಿ ಬತ್ತಿದೆಯಲ್ಲ’ ‘ನಿನಗೆ ಯಾರು ಹೇಳಿದ್ರು?’
‘ನನ್ನ ಸ್ನೇಹಿತ ರಾಜು ಹೇಳಿದ’ ರಾಜುವು ಅವನಂತೆಯೇ ಮಹಾ ಆಲಸಿ ‘ಬೀರು ಕೆರೆಯಿಂದ ನೀರು ತರಬೇಕು’ ‘ಕೆರೆ ದೂರ ಇದೆಯಲ್ಲಾ’ ‘ನೀವು ಹೊಲದಲ್ಲಿ ನನ್ನ ಜತೆ ಊಳೋದಕ್ಕೆ ಬನ್ನಿ’ ಎಂದು ಶಾಂತಿ ಹೇಳಿದರೆ ‘ಬಿಸಿಲು ನನ್ನ ಮೈಗೆ ಆಗುವುದಿಲ್ಲ’
‘ಹಾಗಿದ್ದರೆ ನೀವು ಮನೆ ನೋಡ್ಕೋಳ್ಳಿ.

ನಾನೂ ಅತ್ತೆಯವರೂ ಹೊಲಕ್ಕೆ ಹೋಗ್ತೀವಿ’ ಎಂದಳು ಶಾಂತಿ. ‘ನೋಡೋದಿಕ್ಕೆ ಮನೆಯಲ್ಲಿ ಏನಿದೆ?’ ಎಂದು ಉಡಾಫೆ ಮಾತಾಡ್ತಿದ್ದ ಬೀರು. ಆದರೆ ಊಟದ ಸಮಯದಲ್ಲಿ ಎಲ್ಲರಿಗಿಂತಲೂ ಮುಂದು, ಅಲ್ಲದೇ ಊಟದಲ್ಲಿ ತಪ್ಪು ತೆಗೆಯುತ್ತಿದ್ದ.
‘ಸಾರು ಬಿಸಿಯಿಲ್ಲ. ಅನ್ನ ಮುದ್ದೆಯಾಗಿದೆ. ಪಲ್ಯಕ್ಕೆ ಉಪ್ಪು ಕಡಿಮೆ… ಅದೇ ಊರಲ್ಲಿ ಆಲಸಿಗರ ಗುಂಪು ಬಂದಿತ್ತು.

ಅದಕ್ಕೆ ಬೀರೂನೇ ಅಧ್ಯಕ್ಷ. ಪ್ರತಿದಿನ ಸಂಜೆ ಎಲ್ಲರೂ ಸೇರಿ ಕಾಲಹರಣ ಮಾಡುತ್ತಿದ್ದರು. ಒಂದು ದಿನ ಎಂದಿನಂತೆ ಅವರೆಲ್ಲಾ ಸಭೆ ಸೇರಿದರು. ಎಲ್ಲರೂ ಒಮ್ಮತವಾಗಿ ‘ಸೂರ್ಯ’ನನ್ನು ಬಯ್ದರು. ‘ಪ್ರತಿದಿನ, ಸರಿವೇಳೆಗೆ ಸೂರ್ಯದೇವ ಬರ‍್ತಾನೆ. ಎಂಥಾ ಸುಂದರವಾದ ವಾತವರಣ. ಒಳ್ಳೇ ನಿದ್ದೆ ಬಂದಿರ‍್ತದೆ. ಬಿಸಿಲು ಬಿದ್ದ ತಕ್ಷಣ ಮನೆಯಲ್ಲಿ ಎಲ್ಲರೂ‘ ಹೊತ್ತಾಯ್ತು ಎಳು ಎಳು ಎಂದು ನಿದ್ದೆ ಕೆಡಿಸಿಬಿಡ್ತಾರೆ’ ಎಂದರು.

‘ನನಗಂತೂ ಹಾಸಿಗೆಯಲ್ಲಿ ಊಟ ಮಾಡೋಕ್ಕೆ ತುಂಬಾ ಸಂತೋಷ’ ಎಂದ ರಾಜು. ‘ನನಗೆ ಅಡುಗೆ ಪಾತ್ರೆಯಲ್ಲಿ ಊಟ ಮಾಡೋಕ್ಕೆ ಪ್ರೀತಿ. ಸುಮ್ಮನೆ ತಟ್ಟೆಗೆ ಹಾಕಿ ಊಟ ಮಾಡಿದ್ರೆ, ನೀರು ಖರ್ಚು ಹೆಚ್ಚಾಗುತ್ತದೆ’ ಎಂದ ಮನೋಜ. ‘ನನಗೆ ಹಾಸಿಗೆ ಸುತ್ತೋದು ಸೇರೋದೇ ಇಲ್ಲ. ಬೆಳಿಗ್ಗೆ ಸುತ್ತ ಬೇಕು. ರಾತ್ರಿ ಮತ್ತೆ ಹಾಸಬೇಕು’ ಎಂದ ಸೋಮಾರಿ ಸೋಮು.

ಹೀಗೆ ತಲೆಗೆ ಒಂದೊಂದು ಉಪಾಯ ಹೇಳಿಕೊಂಡು ಕಾಲಹರಣ ಮಾಡುವಾಗ ಹೊರಗೆ ಗದ್ದಲ ಕೇಳಿಸಿತು. ‘ಏನಿರಬೇಕು?’ ಎಂದು ಯಾರೂ ಒಬ್ಬರು ಎಳದೇ ಕೇಳಿದರು. ‘ಸುಮ್ಮನೆ ಜನ ಗಲಾಟೆ ಮಾಡ್ತಾರೆ. ನನಗಂತೂ ಬೇಗನೇ ಕೆಲಸಮಾಡುವವರನ್ನು ಕಂಡರೆ ಆಗುವದೇ ಇಲ್ಲ. ನೋಡಿ ನನ್ನ ಗಡ್ಡಕ್ಕೆ ಬೆಂಕಿ ಹತ್ತಿದಾಗ ನಾನು ಬಾವಿ ತೋಡಿ, ನೀರು ಸೇದಿ ಬೆಂಕಿ ಆರಿಸ್ತಿನಿ ಹೊರ್ತು
ಮೊದಲೇ ಬಾವಿ ತೋಡಿ ನೀರು ತಂದು ಇಡೋಕ್ಕೆ ಆಗೋದೆ ಇಲ್ಲ’ ಎಂದ ಬೀರು.

ಎಲ್ಲರು ‘ಹೌದು ಹೌದು ನೀನು ನಮ್ಮ ಅಧ್ಯಕ್ಷ ನಿನ್ನ ಮಾತು ಸರಿ’ ಎಂದರು. ಹೊರಗಿನ ಗದ್ದಲ ಹೆಚ್ಚಾಯಿತು. ಆಲಸಿಗರು
ಕಿಟಕಿಯಿಂದ ನೋಡಿದರು. ಅಲ್ಲಿ ಹೊಗೆ ಕಂಡಿತು. ‘ಹೊಗೆ ಇದೆಯಲ್ಲ’ ಎಂದ ರಾಜು. ‘ಯಾರೋ ಕಿಡಿಗೇಡಿಗಳು ಒಣಗಿದ ಕಸಕ್ಕೆ ಬೆಂಕಿ ಹಾಕಿರಬಹುದು’ ಎಂದ ಸೋಮು. ಅದನ್ನು ಮರೆತು ಆಲಸಿಗರ ಮತ್ತೆ ತಮ್ಮ ಮಾತನ್ನು ಮುಂದುವರಿಸಿದರು.

ಹೊರಗೆ ನಿಜವಾಗಿ ಬೆಂಕಿ ಬಿದ್ದಿತು. ಜನರು ತಮ್ಮ ತಮ್ಮ ಮನೆಗಳನ್ನು ಸಂಭಾಳಿಸಿಕೊಳ್ಳಲು ಗಡಿಬಿಡಿಯಿಂದ ಓಡುತ್ತಿದ್ದರು. ಕೆಲವರು ನೀರನ್ನು ಹೊಯ್ದು ಬೆಂಕಿ ಆರಿಸಲು ಪ್ರಯತ್ನಿಸುತ್ತಿದ್ದರು. ಈ ಆಲಸಿಗರು ಕುಳಿತ ಜಾಗದಿಂದ ಎಳಲಿಲ್ಲ. ಬೆಂಕಿಯ ಕೆನ್ನಾಲಿಗೆಯಿಂದ ಒಂದು ಗುಡಿಸಲಿನಿಂದ ಇನ್ನೊಂದು ಗುಡಿಸಲಿಗೆ ಹೀಗೆ ಬೆಂಕಿ ಹತ್ತುತ್ತಾ ಇತ್ತು. ಇವರು ಕುಳಿತ ಜಾಗದಲ್ಲಿ ಬೆಂಕಿ ಆವರಿಸಿತು. ಹೊಗೆ ವಿಪರೀತವಾಯಿತು.

ಎಲ್ಲರನ್ನು ಸಮಾಧಾನ ಪಡಿಸುತ್ತಾ ಬೀರು ಹೇಳಿದ ‘ಗಾಬರಿಯಾಗಬೇಡಿ. ಗಾಳಿ ವಿರುದ್ಧ ಬೀಸುತ್ತಿದೆ. ಬೆಂಕಿ ಇನ್ನೇನು ಆರಬ ಹುದು’. ಆದರೆ ಅವನು, ಮಿತ್ರರು ಬೆಂಕಿಯ ನಾಲಿಗೆಯನ್ನು ಕಂಡು ಹೆದರಿದರು. ‘ಎಲ್ಲರೂ ಹೊರಗೆ ಹೋಗೋಣ’ ಎಂದರು. ‘ಇನ್ನೇನು ಬೆಂಕಿ ಆರುತ್ತದೆ. ಕೂತ್ಕೊಳ್ಳಿ’ ಎಂದ ಬೀರು. ಅವನ ಮಾತನ್ನು ಕೇಳದೇ ಅವರೆಲ್ಲ ಓಡಿಹೋದರು.

ಸೂರಿನಿಂದ ಬೆಂಕಿಯ ತುಂಡೊಂದು ಬೀರುವಿನ ಗಡ್ಡದ ಮೇಲೆ ಬಿದ್ದಿತು. ಅಂತೂ ಗಡ್ಡಕ್ಕೆ ಬೆಂಕಿ ಹತ್ತಿತು. ಬೀರು ಈಗ ಹೌಹಾರಿದ. ಏನೂ ಮಾಡದೇ ಚೀರಾಡಿದ. ‘ಕಾಪಾಡಿ ಕಾಪಾಡಿ ನನ್ನ ಗಡ್ಡಕ್ಕೆ ಬೆಂಕಿ ಹತ್ತಿದೆ’ ‘ಈಗ ಬಾವಿ ತೋಡಪ್ಪಾ. ನೀರು ಮುಂದೆ ಬಂದರೆ ಆಗ ಆರಿಸಬಹುದು’ ಎಂದು ಯಾರೋ ಹೊರಗಿನಿಂದ ಕೂಗಿದರು.

‘ಅಯ್ಯೋ ಕಾಪಾಡಿ, ಕಾಪಾಡಿ’ ಎಂದು ಕೂಗಿದ ಬೀರು. ಅಷ್ಟರಲ್ಲಿ ಯಾರೋ ನೀರನ್ನು ಎರಚುವುದನ್ನು ನೋಡಿದ. ಬೆಂಕಿ ನಂದತೊಡಗಿತು. ಬೀರುವಿನ ಗಡ್ಡ ಅರ್ಧ ಉಳಿಯಿತು. ನಾಚಿಕೆಯಿಂದ ಆತ ಹೊರಗೆ ಬಂದ. ತನ್ನ ಗಡ್ಡಕ್ಕೆ ಬೆಂಕಿಹತ್ತಿದಾಗ ಯಾರು ನೀರು ಹೊಯ್ದರು ಎಂದು ನೋಡಿದ. ಪಾರ್ವತಿ ಮತ್ತು ಶಾಂತಿ ಇಬ್ಬರ ಕೈಯಲ್ಲಿಯೂ ನೀರಿನ ಬಿಂದಿಗೆ ಇದ್ದವು.
ಅವನಿಗೆ ಅವಮಾನ ಅನಿಸಿತು.

ಈ ಹೆಂಗಸರು ಒಂದು ಕೊಡ ನೀರು ತಂದು ಕೊಡು ಎಂದು ಬೀರುವಿಗೆ ಹೇಳಿದಾಗ ಆತ ನೂರಾರು ಸಬೂಬು ಹೇಳಿ ಪಾರಾ ಗುತ್ತಿದ್ದ. ಆದರೆ ಅವನ ಗಡ್ಡಕ್ಕೆ ಬೆಂಕಿಹತ್ತಿದಾಗ ಅವರು ಅವನನ್ನುಬೆಂಕಿಯಿಂದ ಪಾರುಮಾಡಿದ್ದರು. ಅಂದಿನಿಂದ ಬೀರು ಬೇರೆಯ ಮನುಷ್ಯನಾದ. ಆಲಸ್ಯವನ್ನು ತೊರೆದು ಎಲ್ಲರಿಗೂ ಸಹಾಯ ಮಾಡಿದ. ಎಲ್ಲರೂ ಅವನನ್ನು ಗೌರವಿಸುತ್ತಿದ್ದರು.