Saturday, 23rd November 2024

ವಿದ್ಯಾರ್ಹತೆ ಮಾನದಂಡವಾಗಲಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣಾ ಕಾವು ದಿನಗಳೆದಂತೆ ರಂಗೇರುತ್ತಿದೆ. ಅಭ್ಯರ್ಥಿಗಳು ಮತದಾರರ ಓಲೈಕೆಗೆ ನಾನಾ ಕಸರತ್ತು, ಗಿಮಿಕ್‌ಗಳನ್ನು ಮಾಡುತ್ತಾ ಬರುತ್ತಿವೆ.

ರಾಜಕೀಯ ಪಕ್ಷಗಳಿಗೆ ಮೀಸಲು ಕಾರಣದಿಂದ ಅಭ್ಯರ್ಥಿಯ ಆಯ್ಕೆಯೂ ಕೂಡಕೆಲ ಭಾಗಗಳಲ್ಲಿ ತಲೆನೋವಾಗಿ ಪರಿಣಮಿಸಿದೆ.
ಈ ಕಾರಣಕ್ಕಾಗಿ ಕೆಲ ಭಾಗಗಳಲ್ಲಿ ಚುನಾವಣಾ ಪೂರ್ವವೇ ಅವಿರೋಧ ಆಯ್ಕೆಗಳು ನಡೆದಿವೆ. ಚುನಾವಣೆಗಳು ಬಂದಾಗ ಅಭ್ಯರ್ಥಿಗಳು ಮತದಾರರ ಮನೆ ಬಾಗಿಲಿಗೆ ಬಂದು ಮತ ಬೇಟೆ ತೊಡಗುವ ಸಂದರ್ಭ ಅದೇ ರಾಗ, ಅದೇ ಹಾಡು, ಅದೇ ತಾಳ ಎಂಬಂತೆ ಸುಳ್ಳು ಆಶ್ವಾಸನೆಗಳು, ಆಮೀಷಗಳನ್ನು ಒಡ್ಡುವುದು, ಪರಸ್ಪರ ಅನ್ಯ ಪಕ್ಷಗಳ ದೋಷಾರೋಪದಲ್ಲಿ ತೊಡಗುವುದು ಸರ್ವೇ ಸಾಮಾನ್ಯ ಎಂಬಂತಿದೆ.

ಪ್ರಸ್ತುತ ಚುನಾವಣೆಯಲ್ಲಿ ಆಯೋಗದ ನಿಬಂಧನೆಗಳಿಗೆ ಕ್ಯಾರೇ ಅನ್ನದ ರಾಜಕೀಯ ಪಕ್ಷಗಳು ನಿಯಮಗಳನ್ನು ಗಾಳಿಗೆ ತೂರು ತ್ತಿರುವುದು ಕೂಡ ಕಂಡು ಬರುತ್ತಿವೆ. ಇವು ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳ ಕಥೆಯಾದರೆ, ಮತದಾರರಿಗೂ ಗ್ರಾ.ಪಂ ಚುನಾವಣೆಯೆಂದರೆ ಒಂದು ರೀತಿಯ ತಾತ್ಸಾರ ಭಾವನೆಯಿದೆ.

ಇದಕ್ಕೂ ಕಾರಣಗಳು ಇಲ್ಲದಿಲ್ಲ. ಗ್ರಾ.ಪಂ ಎಂದರೆ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಪ್ರಮುಖ ಕೇಂದ್ರ ಮತ್ತು ವ್ಯವಸ್ಥೆ. ಇಲ್ಲಿ ಸಾಮಾನ್ಯ ಜನರಿಗೆ, ಪರಿಶಿಷ್ಟ ವರ್ಗ, ಪಂಗಡ, ವೃದ್ದರಿಗೆ, ಅಂಗವಿಕಲರಿಗೆ, ವಿಧವೆ ಯರಿಗೆ ಒಂದಷ್ಟು ಸವಲತ್ತುಗಳು, ಸೂರಿಲ್ಲದ ಬಿಪಿಎಲ್ ಕಾರ್ಡ್‌ದಾರರಿಗೆ ಬಸವ ವಸತಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಕೃಷಿ ಉತ್ಪಾದನೆ, ಉದ್ಯೋಗ ಖಾತ್ರಿ ಯೋಜನೆಯಂತಹ ಒಂದಷ್ಟು ಯೋಜನೆಗಳನ್ನು ಜನಸಾಮಾನ್ಯರಿಗೆಂದೇ ಕೇಂದ್ರ, ರಾಜ್ಯ ಸರಕಾರಗಳು ಮೀಸಲಿಟ್ಟಿವೆ.

ಇವುಗಳನ್ನು ಸಮರ್ಪಕವಾಗಿ ಸಾಮಾನ್ಯ ಜನರ ಬಾಗಿಲಿಗೆ ತಲುಪಿಸುವಲ್ಲಿ ಆ ಭಾಗದ ಸದಸ್ಯ ಸಫಲನಾಗಿದ್ದಾನೆಯೇ? ಒಂದು
ವಾರ್ಡ್‌ನ ಸದಸ್ಯ ಆ ಭಾಗದ ಜನರ ಕುಡಿಯುವ ನೀರು, ಸ್ವಚ್ಚತೆ,ರಸ್ತೆ, ದಾರಿದೀಪ ಅಳವಡಿಸುವಲ್ಲಿ ಮುತುವರ್ಜಿ ವಹಿಸಿದ್ದಾನೆಯೇ? ಪಂಚಾಯತ್ ನ ಸಾಮಾನ್ಯ ಸಭೆ, ಗ್ರಾಮ ಸಭೆ, ವಾರ್ಡ್ ಸಭೆಯಲ್ಲಿ ತಾವು ಚುನಾಯಿಸಲ್ಪಟ್ಟ ಪ್ರತಿನಿಧಿಯ
ಕಡ್ಡಾಯ ಹಾಜರಾತಿ ಮತ್ತು ತಮ್ಮ ವಾರ್ಡ್‌ನ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲು ಬದ್ಧನಿದ್ದಾನೆಯೇ? ಜತೆಗೆ ಕಳಂಕ ರಹಿತನಾಗಿ, ಭ್ರಷ್ಟಾಚಾರ ರಹಿತನಾಗಿ ರಾಜಕೀಯನ್ನೇ ವೃತ್ತಿಯಾಗಿಸದೇ ಅಭಿವೃದ್ಧಿ ಪರ ಸ್ವತಂತ್ರವಾಗಿ ಯೋಚಿಸುವ ದೂರದೃಷ್ಟಿತ್ವವುಳ್ಳವ ನಾಗಿರಬೇಕಾದುದು ಒಂದು ನೈಜ ಗ್ರಾ.ಪಂ ಸದಸ್ಯನ ಲಕ್ಷಣ.

ಆದರೆ ಪ್ರಸ್ತುತ ಚುನಾವಣೆ ಘೋಷಣೆಯಾದಾಗ ಮೀಸಲಾತಿಯ ಅಭ್ಯರ್ಥಿಯನ್ನು ಹುಡುಕುವುದು, ಅಭ್ಯರ್ಥಿಗೆ ವಿದ್ಯಾಭ್ಯಾಸ ವಿಲ್ಲದಿದ್ದರೂ ಕಾಟಾಚಾರಕ್ಕೆಂಬಂತೆ ಒತ್ತಾಯಪೂರ್ವಕವಾಗಿ ನಿಲ್ಲಿಸುವುದು, ಪಂಚಾಯತ್ ಸಭೆಗಳಿಗೆ ಹಾಜರಾಗದಿರುವುದು, ಜಾತಿಯನ್ನು ಮುಂದಿಟ್ಟು ಮತಭಿಕ್ಷೆ ಎತ್ತುವುದು ಈ ಎ ಬೆಳವಣಿಗೆಗಳಿಂದ ಅರ್ಹರಲ್ಲದವರು ಹೆಚ್ಚಿನ ಪ್ರಮಾಣದಲ್ಲಿ ಆರಿಸಿ
ಬರುತ್ತಿರುವುದು ರೂಢಿ ಎಂಬಂತಿದೆ. ಈ ಕಾರಣಕ್ಕಾಗಿ ಇಂತಹ ರಾಜಕೀಯ ಪುಡಾರಿಗಳು ನಮ್ಮ ಶಿಕ್ಷಣ, ನಮ್ಮ ಕನಸು,ಭವಿಷ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಿರುವುದು ವಿಪರ್ಯಾಸ.

ಸರಕಾರಗಳು, ಚುನಾವಣಾ ಆಯೋಗಗಳು ಸ್ಥಳೀಯ ಚುನಾವಣಾ ಸ್ಪರ್ದೆಗೆ ಪಿಯುಸಿ ಅಥವಾ ಅದರಿಂದ ಮೇಲ್ಪಟ್ಟ ಪದವಿ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳಿಗೆ ಕಡ್ಡಾಯ ಮಾನದಂಡವಾಗಿಸಬೇಕು. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಕನಿಷ್ಠ ಜ್ಞಾನ, ಅಭ್ಯರ್ಥಿಗಳಿಗೆ ಸಮರ್ಪಕ ತರಬೇತಿ ನೀಡಿ ಅದಕ್ಕೆಂದೇ ಅರ್ಹತಾ ಪರೀಕ್ಷೆ ನಡೆಸಿ ಅದರಲ್ಲಿ ತೇರ್ಗಡೆ ಹೊಂದಿದವರಿಗೆ
ಚುನಾವಣಾ ಸ್ಪರ್ದೆಗೆ ಅವಕಾಶ ಕಲ್ಪಿಸಬೇಕು.

ಭಾರತವು ಹಳ್ಳಿಗಳಿಂದ ಕೂಡಿರುವ ದೇಶವಾದ್ದರಿಂದ ಹಳ್ಳಿಗಳು ಅಭಿವೃದ್ಧಿ ಹೊಂದಿದರೇ ದೇಶ ಅಭಿವೃದ್ಧಿಯಾಗಲು ಸಾಧ್ಯ. ಇದಕ್ಕೆಂದೇ ಸಮರ್ಪಕವಾದ ಯೋಗ್ಯ ಪ್ರಥಮ ಪ್ರಜೆಯನ್ನು ಆರಿಸುವ ಕೆಲಸಗಳಾಗಬೇಕಾದುದು ಒಂದು ಭಾಗವಾದರೆ, ಗ್ರಾ.ಪಂ ಸದಸ್ಯನಿಗೆ ಕನಿಷ್ಠ ತನ್ನ ವಾರ್ಡ್‌ಗೆ ಬರುವ ಅನುದಾನಗಳ ಬಗ್ಗೆ ತಿಳುವಳಿಕೆ,ಅದನ್ನು ಸಮರ್ಪಕವಾಗಿ ಬಳಸುವ ಕನಿಷ್ಠ ಸಾಮಾನ್ಯ ಜ್ಞಾನವಾದರೂ ಇರಬೇಕು.