Saturday, 23rd November 2024

ಅನ್ನದಾತನ ಮನೆ ಬಾಗಿಲಿಗೇ ತೆರಳಿ ಶಿರಬಾಗಿ ನಮಿಸಿದ ಡಿಸಿಎಂ

ರೈತ ದಿನದಂದು ಶುಭಕೋರಿ ಕೃಷಿ ಕಾಯ್ದೆಗಳ ಕುರಿತ ಅನುಮಾನ ತಿಳಿಸಿಗೊಳಿಸಿದ ಡಾ.ಅಶ್ವತ್ಥನಾರಾಯಣ

ಮಾಗಡಿ: ಅನ್ನದಾತನ ಮನೆ ಬಾಗಿಲಿಗೇ ತೆರಳಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರೈತ ದಿನದ ಶುಭಾಶಯ ಕೋರಿ ಅಭಿವಂದನೆ ಸಲ್ಲಿಸಿದರಲ್ಲದೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿರುವ ಅನುಮಾನಗಳನ್ನು ನಿವಾರಿಸಿದರು.

ಬುಧವಾರ ಬೆಳಗ್ಗೆಯೇ ಬೆಂಗಳೂರಿನಿಂದ ಮಾಗಡಿ ತಾಲ್ಲೂಕಿನ ಉಕ್ಕಡ-ಗುಡ್ಡಹಳ್ಳಿ ಗ್ರಾಮಕ್ಕೆ ಬಂದ ಡಿಸಿಎಂ, ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರಲ್ಲಿಗೆ ತೆರಳಿ ಶುಭಾಶಯ ಕೋರಿ ಶಿರಬಾಗಿ ನಮಿಸಿ ಅಭಿವಂದನೆ ಸಲ್ಲಿಸಿದರು. ರೈತರಾದ ನಾರಾಯ ಣಪ್ಪ, ನಾಗರಾಜ ಮತ್ತು ನರಸಿಂಹಯ್ಯ ಅವರಿಗೆ ಹೂವಿನ ಹಾರ ಹಾಕಿ‌ ಗೌರವಿಸಿದರು.

ಯಾವ ಮುನ್ಸೂಚನೆಯೂ ಇಲ್ಲದೆ ಸ್ವತಃ ಉಪ ಮುಖ್ಯಮಂತ್ರಿಗಳೇ ರಸ್ತೆಯಲ್ಲಿ ಕಾರು ನಿಲ್ಲಿಸಿ ಯಾವ ಶಿಷ್ಠಾಚಾರದ ಹಮ್ಮುಬಿಮ್ಮೂ ಇಲ್ಲದೆ ತಾವಿದ್ದ ಜಾಗಕ್ಕೇ ನಡೆದುಬಂದು ಹೂಮಾಲೆ ಹಾಕಿ ಶುಭ ಕೋರಿದ್ದನ್ನು ಕಂಡು ರೈತರು, ಆ ಊರಿನ ಜನರೆಲ್ಲರೂ ಚಕಿತರಾದರು. ಕ್ಷಣ ಮಾತ್ರದಲ್ಲಿ ಇಡೀ ಊರಿನ ರೈತಾಪಿ ಜನರು, ಹಿರಿಯರು, ಮಹಿಳೆಯರು, ಯುವಕರು ಅಲ್ಲಿ ಸೇರಿಕೊಂಡರಲ್ಲದೆ, ಡಿಸಿಎಂ ಸರಳತೆ ಬಗ್ಗೆ ಅಗಾಧ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತರೊಂದಿಗೆ ಸಂವಾದ: ಇದೇ ವೇಳೆ ರೈತರ ಜತೆ ಸಂವಾದ ನಡೆಸಿದ ಉಪ ಮುಖ್ಯಮಂತ್ರಿ, ಮುಖ್ಯವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ಬಗ್ಗೆ ಜನರಲ್ಲಿದ್ದ ಅನುಮಾನ-ಗೊಂದಲಗಳನ್ನು ತಿಳಿಗೊಳಿಸಿದರು. “ಅನೇಕ ವರ್ಷಗಳಿಂದ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಕಾಯ್ದೆಗೆ ಕ್ರಾಂತಿಕಾರಕ ತಿದ್ದುಪಡಿಗಳನ್ನು ತರಲಾಗಿದೆ. ಇಷ್ಟು ನೀವು ಬೆಳೆದ ಬೆಳೆಯನ್ನು ನೀವೇ ಕಟಾವು ಮಾಡಿಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಬೇಕಾಗಿತ್ತು. ಅಲ್ಲಿ ದಳ್ಳಾಳಿಗಳದ್ದೇ ದರ್ಬಾರ್‌ ಆಗಿತ್ತು. ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದ ದರಕ್ಕೆ ಮಾರಾಟವಾಗುತ್ತಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ನೀವೆಲ್ಲ ರಾತ್ರಿಹೊತ್ತು ಮಾರುಕಟ್ಟೆ ಯಲ್ಲಿ ಮಲಗಿರಬೇಕಾದ ದುಸ್ಥಿತಿ ಇತ್ತು. ಕಾಯ್ದೆಯನ್ನು ಬದಲಾವಣೆ ಮಾಡಿದ ಪರಿಣಾಮ ನೀವೆಲ್ಲರೂ ಇನ್ನು ಮುಂದೆ ಮಾರುಕಟ್ಟೆಗೆ ಹೋಗಬೇಕಾದ ಅಗತ್ಯವಿಲ್ಲ. ಖರೀದಿದಾರನೇ ನಿಮ್ಮಲ್ಲಿಗೇ ಬಂದು ಬೆಳೆಯನ್ನು ಖರೀದಿ ಮಾಡುತ್ತಾನೆ” ಎಂದು ರೈತರಿಗೆ ಉಪ ಮುಖ್ಯಮಂತ್ರಿ ವಿವರಿಸಿದರು.

“ಇದುವರೆಗೂ ನಿಮ್ಮ ಶೋಷಣೆ ಆಗಿದ್ದು ಸಾಕು. ರೈತನೆ ದೇಶದ ಬೆನ್ನೆಲುಬು ಎನ್ನುವ ಹಾಗೆ ಅದಕ್ಕೆ ಶಕ್ತಿ ತುಂಬುವ ಉದ್ದೇಶ ದಿಂದ ನರೇಂದ್ರ ಮೋದಿ ಅವರ ಸರಕಾರ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಿದೆ. ಇದುವರೆಗೂ ದಲ್ಲಾಳಿಗಳ ಕೈಗೊಂಬೆಯಾಗಿದ್ದ ಪ್ರತಿಪಕ್ಷಗಳು ವಿನಾಕಾರಣ ನಿಮ್ಮನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ. ಅಂತಹ ವಿವಾರಗಳಿಗೆ ಕಿವಿಗೊಡ ಬೇಡಿ” ಎಂದು ರೈತರಲ್ಲಿ ಡಿಸಿಎಂ ಮನವಿ ಮಾಡಿದರು.

ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್, ಮಾಗಡಿ ತಾಲ್ಲೂಕಿನ ಬಿಜೆಪಿ ಅಧ್ಯಕ್ಷ ಧನಂಜಯ, ಬಿಜೆಪಿ ಮುಖಂಡ ಎಚ್.ಎಂ.ಕೃಷ್ಣಮೂರ್ತಿ, ಪಕ್ಷದ ವಿವಿಧ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.