ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
If a tiger had sex with a tornado and then their tiger&nado baby got married to an earthquake, their offspring would be Rajinikanth.. ಈ ಒಂದು ವಾಕ್ಯವನ್ನು ‘ಇಂಡಿಯಾ ಟುಡೇ’ ಸಂಪಾದಕ ಅರುಣ್ ಪೂರಿ ಅವರ ಮುಂದೆ ಹೇಳಿ.
ಈ ಚಳಿಯಲ್ಲೂ ಸಣ್ಣಗೆ ಬೆವೆತುಕೊಂಡಾರು. ಸುಮಾರು ಹತ್ತು ವರ್ಷಗಳ ಹಿಂದೆ, ‘ಇಂಡಿಯಾ ಟುಡೇ’ ನಿಯತಕಾಲಿಕ ದಕ್ಷಿಣ ಭಾರತದ ಆವೃತ್ತಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕುರಿತು ಮುಖಪುಟ ಲೇಖನ ಪ್ರಕಟಿಸಿತ್ತು. ರಜನಿಕಾಂತ್ ಬಗ್ಗೆ ತಾವೇಕೆ
ಮುಖಪುಟ ಲೇಖನ ಪ್ರಕಟಿಸಿದ್ದೇವೆ ಎಂಬ ಬಗ್ಗೆ ಸಂಪಾದಕ ಪೂರಿ ತಮ್ಮ ಟಿಪ್ಪಣಿಯಲ್ಲಿ ಬರೆದಿದ್ದರು. ಒಂದೆಡೆ ತಮ್ಮ ಆ
ಬರಹ ದಲ್ಲಿ (ಹುಲಿಯೊಂದು ಸುಂಟರಗಾಳಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ, ಆಗ ಹುಟ್ಟುವ ಸುಂಟರಹುಲಿ ಭೂ ಕಂಪದ ಜತೆ ಮದುವೆಯಾದರೆ, ಅವರಿಗೆ ಹುಟ್ಟುವ ಮಗುವೇ ರಜನಿಕಾಂತ್) ಮೇಲಿನ ವಾಕ್ಯವನ್ನು ಪ್ರಸ್ತಾಪಿಸಿದ್ದರು.
ನಿಜಕ್ಕೂ ಇದೊಂದು ಸುಂದರ ಹೋಲಿಕೆ ಅಥವಾ ಕಲ್ಪನೆ. ರಜನಿಕಾಂತ್ ಅವರನ್ನು ಒಂದೇ ವಾಕ್ಯದಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ ಕಟ್ಟಿಕೊಡುವ ಪ್ರಯತ್ನವಿದು. ಕೆಲವು ವಾಕ್ಯಗಳನ್ನು ಎಲ್ಲರೂ ಬರೆಯಲಾರರು. ‘ಮಲೆಗಳಲ್ಲಿ ಮದು ಮಗಳು’ ಕಾದಂಬರಿಯನ್ನು ಕುವೆಂಪು ಮಾತ್ರ ಬರೆಯಲು ಸಾಧ್ಯ. ಅದನ್ನು ಬರಗೂರು ರಾಮಚಂದ್ರಪ್ಪ ಬರೆಯಲಾರರು. ಒಂದು ವೇಳೆ ಅವರು ಬರೆದರೆ, ಸಂದೇಹ ಬರುತ್ತದೆ. ಅರುಣ್ ಪೂರಿ ಬರಹದಲ್ಲಿ ಈ ವಾಕ್ಯ ಬಂದಾಗ, ಅವರ ಬರಹಗಳ ಖಾಯಂ ಓದುಗರಿಗೆ,
ಸಹಜವಾಗಿ ಸಂದೇಹ ಬಂದಿತು.
ಕೆಲವರಂತೂ ಪೂರಿ ಈ ವಾಕ್ಯ ಬರೆಯಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡರು. ಅವರೆಲ್ಲರ ಊಹೆ ನಿಜವಾಗಿತ್ತು. ಅಮೆರಿಕದ ‘ಸ್ಲೇಟ್’ ಆನ್ ಲೈನ್ ಮ್ಯಾಗಜಿನ್ SUPERSTAR Rajinikanth! The biggest movie star you’ve probably never heard of ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಸುದೀರ್ಘ ಲೇಖನ ಪ್ರಕಟಿಸಿತ್ತು. ಅದನ್ನು ಗ್ರಾಡಿ ಹೆಂಡ್ರಿಕ್ಸ್ ಎಂಬುವವರು ಬರೆದಿದ್ದರು.
ಆ ಲೇಖನದಲ್ಲಿನ ಎರಡು ಪ್ಯಾರಾಗಳನ್ನು ಪೂರಿ ಯಥಾವತ್ತು ಎಗರಿಸಿದ್ದು ದೊಡ್ಡ ವಿವಾದವೇ ಆಯಿತು. ತಾನು ಈ ರೀತಿ ಸಿಕ್ಕಿ ಬೀಳುತ್ತೇನೆಂದು ಪೂರಿ ಅಂದುಕೊಂಡಿರ ಲಿಕ್ಕಿಲ್ಲ. ಅಮೆರಿಕದ ಅಷ್ಟೇನೂ ಜನಪ್ರಿಯವಲ್ಲದ ಆನ್ ಲೈನ್ ಮ್ಯಾಗಜಿನ್ನಲ್ಲಿ ಪ್ರಕಟವಾದ ಲೇಖನವೊಂದರ ಎರಡು ಪ್ಯಾರಾಗಳನ್ನು ಕದ್ದರೆ, ಯಾರಿಗೆ ಗೊತ್ತಾಗುತ್ತದೆ ಎಂದು ‘ಇಂಡಿಯಾ ಟುಡೇ’ ಸಂಪಾ ದಕರು ಭಾವಿಸಿರಬೇಕು. ಆದರೆ ಈ ಗೂಗಲ್ ಸರ್ಚ್ ಎಂಜಿನ್ ಜಮಾನದಲ್ಲಿ, ಸ್ವಂತ ಬರೆಯುವುದೇ ಸುಲಭ, ಕಳುವು ಮಾಡು ವುದು ಕಷ್ಟ. ತಕ್ಷಣ ಮಾನ ಹರಾಜಾಗಿಬಿಡುತ್ತದೆ.
ಪೂರಿ ಬೆತ್ತಲೆಯಾದರು. ತಮ್ಮ ಪತ್ರಿಕೆಯಲ್ಲಿ ಕ್ಷಮೆ ಯಾಚಿಸಿದರು. ತಾವು ಅಮೆರಿಕದಲ್ಲಿದ್ದಾಗ ಈ ಲೇಖನ ಬರೆದೆನೆಂದೂ, ಅಲ್ಲಿದ್ದಾಗ ರಜನಿಕಾಂತ್ ಬಗ್ಗೆ ಕೆಲವು ಟಿಪ್ಪಣಿ ಕಳಿಸುವಂತೆ ದಿಲ್ಲಿ ಆಫೀಸಿಗೆ ಕೇಳಿದೆನೆಂದೂ, ಅವರು ಗ್ರಾಡಿ ಹೆಂಡ್ರಿಕ್ಸ್ ಲೇಖನ ದಲ್ಲಿನ ಎರಡು ಪ್ಯಾರಾಗಳನ್ನು ಸೇರಿಸಿ ಕಳಿಸಿದರೆಂದೂ, ಸುದೀರ್ಘ ವಿಮಾನ ಪ್ರಯಾಣ ಮತ್ತು ಜೆಟ್ ಲ್ಯಾಗ್ನಿಂದ ಬಳಲಿದ್ದ ರಿಂದ ಅದನ್ನು ಯಥಾವತ್ತು ಬರೆದೆನೆಂದೂ, ಜೆಟ್ ಲ್ಯಾಗ್ ಪತ್ರಿಕೋದ್ಯಮದ ಆರೋಗ್ಯಕ್ಕೆ ಹಾನಿಕಾರಕವೆಂದೂ ಬರೆದು ಮರ್ಯಾದೆ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದರು.
ಆದರೆ ಅಷ್ಟರೊಳಗೇ ನಗ್ನರಾಗಿದ್ದರಿಂದ, ಮುಚ್ಚಿಕೊಳ್ಳುವುದೇನೂ ಇರಲಿಲ್ಲ. ಪ್ರಿಂಟ್ ಪತ್ರಕರ್ತ ಕೃತಿಚೌರ್ಯ ಮಾಡಿದರೆ, ತಲೆತಗ್ಗಿಸುವ ಹೊರತಾಗಿ, ಬೇರೆ ಯಾವ ಉಪಕ್ರಮವೂ ಇರುವುದಿಲ್ಲ. ಕಾರಣ ಆತ ಮಾಲು ಸಮೇತ ಸಿಕ್ಕಿ ಬಿದ್ದಿರುತ್ತಾನೆ. ಯಾವುದೇ ಸಮಜಾಯಿಷಿ ಕೊಟ್ಟರೂ ಓದುಗರು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಅಲ್ಲದೇ ಆತನ ಕಳ್ಳತನವನ್ನು ಅಳಿಸಿ ಹಾಕಲು ಆಗುವುದಿಲ್ಲ. ಅದು ಶಾಶ್ವತವಾಗಿ ಇರುತ್ತದೆ.
ಕಾರಣ ಅಕ್ಷರಗಳಿಗೆ ಸಾವಿಲ್ಲ. (ಅಷ್ಟಕ್ಕೂ ಅಕ್ಷರ ಅಂದರೆ ಕ್ಷರವಿಲ್ಲದ್ದು, ಸಾವಿಲ್ಲದ್ದು ಎಂದರ್ಥವಲ್ಲವೇ?) ಇಂದಿಗೂ ಪತ್ರಕರ್ತರ
ಅಥವಾ ಸಂಪಾದಕರ ಕೃತಿಚೌರ್ಯದ ವಿಷಯ ಪ್ರಸ್ತಾಪವಾದಾಗಲೆಲ್ಲ ಬೇಡವೆಂದರೂ ಪೂರಿ ನೆನಪಾಗುತ್ತಾರೆ. ಪ್ರತಿ ಸಲ ಅವರ ಬರಹ ಓದುವಾಗಲೂ, ಈ ಪ್ರಸಂಗ ನೆನಪಾಗುತ್ತದೆ.ಅವರು ತಾವೇ ಒಂದು ಒಳ್ಳೆಯ ವಾಕ್ಯ ಬರೆದಾಗಲೂ, ಈ ವಾಕ್ಯವನ್ನು ಬೇರೆಡೆಯಿಂದ ಎಗರಿಸಿರಬಹುದಾ ಎಂಬ ಅನುಮಾನ ಅಯಾಚಿತವಾಗಿ ಹಾದುಹೋಗುತ್ತದೆ.
ಒಮ್ಮೆ ಓದುಗರ ಮುಂದೆ, ಈ ರೀತಿ ಬೆತ್ತಲಾದರೆ, ಮರಳಿ ವಿಶ್ವಾಸ ಗಳಿಸುವುದು ಕಷ್ಟ. ಓದುಗರು ಯಾವತ್ತೂ ಕ್ಷಮಿಸುವುದಿಲ್ಲ.
ಮಗುವಿನ ಮುಂದೆ ಚಾಕಲೇಟ್ ಇಟ್ಟರೆ, ಅದು ಕೈ ಹಾಕಿ ತಿನ್ನದೇ ಹೋಗುವುದಿಲ್ಲ. ಲೇಖಕನ ಕಣ್ಣಿಗೆ ಒಳ್ಳೆಯ ವಿಚಾರ, ಚೆಂದ ವಾದ ವಾಕ್ಯ ಕಣ್ಣಿಗೆ ಬಿದ್ದರೂ, ಅದನ್ನು ಎಗರಿಸುವ ಆಸೆಯಾಗುತ್ತದೆ. ಚಾಕಲೇಟ್ ಕದ್ದ ಮಗುವಿಗೆ ಕ್ಷಮೆ ಇದೆ. ಆದರೆ ಲೇಖಕನಿಗೆ ಇಲ್ಲ. ಕೃತಿಚೌರ್ಯದ ಆಸೆಯನ್ನು ಲೇಖಕನಾದವನು ಅದುಮಿಡಲಾರದಿದ್ದರೆ, ಅದು ಅವನ ವಿಶ್ವಾಸಾರ್ಹತೆಗೇ ಘಾತ!
ಚೆಂದದ ವಾಕ್ಯಗಳೆಂದರೆ ಸುಂದರ ತರುಣಿಯಿದ್ದಂತೆ. ಅವಳನ್ನು ಕತ್ತೆತ್ತಿ ನೋಡುತ್ತಲೇ ಇರಬೇಕೆನಿಸುತ್ತದೆ. ಪದೇ ಪದೆ ಕಣ್ಣು ಹಾಯಿಸಬೇಕೆನಿಸುತ್ತದೆ. ಲೇಖಕನಾದವನು ಕೃತಿಚೌರ್ಯದ ಹಾದರಕ್ಕಿಳಿಯುವುದು ಆಗಲೇ. ಟಿ.ಎಸ್.ಎಲಿಯಟ್ ಹೇಳಿದಂತೆ Immature poets imitate; mature poets steal. ನುರಿತ ಲೇಖಕನಾದವನು ಕಳುವು ಮಾಡುತ್ತಾನೆ. ತಾನು ಕದ್ದದ್ದು ಬೇರೆ
ಯಾರಿಗೂ ಗೊತ್ತಾಗುವುದಿಲ್ಲ ಎಂದು ಭಾವಿಸುತ್ತಾನೆ. ಆದರೆ ಲೇಖಕನಿಗಿಂತ ಓದುಗ ಬುದ್ಧಿವಂತ ಎಂಬ ಸರಳ ಸತ್ಯವನ್ನು
ತಿಳಿದುಕೊಳ್ಳುವುದೇ ಇಲ್ಲ. ಮಾಲು ಸಹಿತ ಸಿಕ್ಕಿ ಬಿದ್ದು ಮರ್ಯಾದೆ ಕಳೆದುಕೊಳ್ಳುತ್ತಾನೆ.
ಎಲ್ಲಾ (ಒಳ್ಳೆಯ) ಲೇಖಕರೂ ಕೃತಿಚೌರ್ಯ ಎಂಬ ಮೋಹ, ಲೋಭವನ್ನು ಮೆಟ್ಟಿ ನಿಂತವರೇ. ಹಾಗಂತ ಯಾರೂ ಬೇರೆಯವರ ವಿಚಾರ ಅಥವಾ ವಾಕ್ಯವನ್ನು ತುಡು ಮಾಡುವುದಿಲ್ಲ ಎಂದಲ್ಲ. ಕೆಲವರು ವಾಕ್ಯ ಅಥವಾ ಪ್ಯಾರವನ್ನಲ್ಲ, ಪುಟವನ್ನೇ ಕದಿಯುತ್ತಾರೆ. ಆದರೆ ಅವರು ತಾವು ಎಲ್ಲಿಂದ ಎತ್ತಿದ್ದು ಎಂಬುದನ್ನು ಹೇಳಿ, ಸೌಜನ್ಯದಿಂದ ಮೂಲವನ್ನು ಸ್ಮರಿಸುತ್ತಾರೆ. ಆಗ ಎಲ್ಲವೂ ಮಾಫ್ ! ಕಳಲೇಬೇಕು ಎಂದೆನಿಸಿದಾಗ, ಮೂಲ, ಆಕರವನ್ನು ಹೇಳುವುದು ಲೇಖಕನ ಮೂಲಧರ್ಮ.
ಇದು ಬರಹಗಾರನ ಬದ್ಧತೆ, ಅವನ ಕರ್ಮಸಿದ್ಧಾಂತ. ಅದು ಬರಹಗಾರನ ವಿಶ್ವಾಸಾರ್ಹತೆಯ ಪ್ರತೀಕ. ತನ್ನನ್ನು ಕಳ್ಳ ಎಂದು ಕರೆಯುವುದರಿಂದ ನಿರೀಕ್ಷಣಾ ಜಾಮೀನು ಪಡೆದಂತೆ. ಲೇಖಕನಾದವನು ಮೂಲವನ್ನು ಸ್ಮರಿಸುವುದನ್ನು ವೃತ್ತಿ ಧರ್ಮ ಆಚರಣೆಯ ಉನ್ನತ ಶಿಷ್ಟಾಚಾರ. ಇದಕ್ಕೆ ವಿಶಾಲ ಮನೋಭಾವ ಬೇಕು. ಒಂದು ಒಳ್ಳೆಯ ವಾಕ್ಯ ರಚನೆಯ ಕ್ರೆಡಿಟ್ಟನ್ನು ಬೇರೆಯವರಿಗೆ ಕೊಡಲು ತಕ್ಷಣ ಮನಸ್ಸು ಬರುವುದಿಲ್ಲ. ಈ ಘಳಿಗೆಯ ಲೇಖಕ ಕಳ್ಳನಾಗುವುದು. ಓದುಗರ ವಿಶ್ವಾಸವನ್ನು ಕಳೆದುಕೊಳ್ಳುವುದು.
ಒಮ್ಮೆ ಕೃತಿಚೌರ್ಯ ಮಾಡಿ ಸಿಕ್ಕಿ ಬಿದ್ದರೆ, ಶೀಲ ಕಳೆದುಕೊಂಡ ಯುವತಿಯಂತೆ. ಅದು ಮತ್ತೆಂದೂ ವಾಪಸು ಬರುವುದಿಲ್ಲ.
ಆಗ ಅದಕ್ಕಿಂತ ಮುನ್ನ ಬರೆದ ಬರಹ, ಕೃತಿಗಳ ಸಾಚಾತನವೇನು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕನಿಷ್ಠ, ಈ ಕೃತಿಯಲ್ಲಿ
ಹೇಳಿದಂತೆ.. ಈ ಲೇಖಕ ಬರೆದಂತೆ.. ಎಂದಾದರೂ ಹೇಳುವ ಸೌಜನ್ಯ ಮೆರೆಯುವುದು ಲೇಖಕನ ಮೂಲಭೂತ ಕರ್ತವ್ಯ.
ಇದನ್ನೂ ಹೇಳದವ ಕಳುವು ಮಾಡುವ ಉದ್ದೇಶವನ್ನೇ ಹೊಂದಿರುತ್ತಾನೆ. ಅವನಿಗೆ ಕ್ಷಮೆ ಇಲ್ಲ.
ಓದುಗನ ಕಣ್ಣಲ್ಲಿ ಬಹುಬೇಗ ಖಳನಾಯಕನಾಗುವುದೇ ಇಲ್ಲಿ. ಒಂದು ವಿಚಾರದಿಂದ ಪ್ರೇರಣೆ ಪಡೆಯುವುದಕ್ಕೂ, ಅದನ್ನು ಕಳುವುದಕ್ಕೂ ಬಹಳ ವ್ಯತ್ಯಾಸವಿದೆ. ಇದನ್ನೇ ಲೇಖಕನೊಬ್ಬ ಹೀಗೆ ಹೇಳಿದ್ದಾನೆ – I think the line between inspiration and plagiarism is often so thin, that you risk falling into the latter one.. ನೀವು ವಿಚಾರಗಳನ್ನು ಕಳುವುದಕ್ಕೂ, ವಿಚಾರವನ್ನು ಎರವಲು ತರುವುದಕ್ಕೂ ಸಹ ವ್ಯತ್ಯಾಸವಿದೆ.
ಎರವಲು ತರುವುದು ಸಹಜ. ಆಗಲೂ ಎರವಲು ಮೂಲವನ್ನು ಹೇಳಬೇಕು. ಅಷ್ಟಕ್ಕೂ ಮೂಲಕ್ಕೆ ಶ್ರೇಯಸ್ಸು ಕೊಡುವುದರಿಂದ
ಲೇಖಕನ ಮಟ್ಟವೇನೂ ಕಡಿಮೆ ಯಾಗುವುದಿಲ್ಲ. ಅದರ ಬದಲು ಆತನ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಮೂಲವನ್ನು ಸ್ಮರಿಸಿದರೆ ಕಳ್ಳತನದ ಆಪಾದನೆ ಯಿಂದ ರಕ್ಷಣೆ ಪಡೆದಂತೆ.
ಇದನ್ನೂ ಮಾಡದವರು ಸಿಕ್ಕಿ ಬಿದ್ದು ಮರ್ಯಾದೆ ಮೂರಾಬಟ್ಟೆ ಮಾಡಿಕೊಳ್ಳುತ್ತಾರೆ. ಬೇರೆಯವರ ವಾಕ್ಯವನ್ನು ಎಗರಿಸುವುದು,
ಐಡಿಯಾವನ್ನು ಕಳುವುದೆಂದರೆ, ಎಂಜಲು ಬಾಳೆಯಲ್ಲಿ ಊಟ ಮಾಡಿದಂತೆ ಎಂಬ ಪ್ರಜ್ಞೆ ಲೇಖಕನಿಗಿರಲೇಬೇಕು. ಮೂಲ
ಲೇಖಕನಿಗೆ ಶ್ರೇಯಸ್ಸನ್ನು ಕೊಟ್ಟರೆ ಅದರಿಂದ ನಮಗೇನೂ ಹಾನಿಯಾಗುವುದಿಲ್ಲ. ಹಾನಿಯಾಗುವುದು ಕ್ರೆಡಿಟ್ಟನ್ನು ಕೊಡದಿ ದ್ದಾಗ.
ನಾವು ಬೇರೆಯ ಕೃತಿಯಿಂದ ಪ್ರಭಾವಿತರಾಗಿ, ಸ್ವತಂತ್ರ ಕೃತಿಯನ್ನು ರಚಿಸಿದಾಗಲೂ, ಲೇಖಕನ ಮಾತು, ನನ್ನುಡಿ ಅಥವಾ ಮುನ್ನುಡಿಯದರೂ ತಾನು ಪ್ರೇರಣೆ ಪಡೆಡಿದ್ದರ ಬಗ್ಗೆ ಹೇಳುವ ಮುಕ್ತ ಮತ್ತು ದೊಡ್ಡ ಮನಸ್ಸನ್ನು ಪ್ರದರ್ಶಿಸುವುದು ಲೇಖಕನಿಗೆ ಶೋಭೆ. ಈ ವಿಷಯದಲ್ಲಿ ಚೌಕಾಶಿ ಮಾಡಲೇಬಾರದು. ಬೇರೆಯವರ ಬಗ್ಗೆ ಶ್ರೇಯಸ್ಸನ್ನು, ಋಣವನ್ನು ಸಂದಾಯ ಮಾಡಿ ದಷ್ಟೂ ಲೇಖಕ ದೊಡ್ಡವನಾಗುತ್ತಾ ಹೋಗುತ್ತಾನೆ.
ಇಲ್ಲಿ ನನಗೆ ವಿ.ಎನ್.ನಾರಾಯಣನ್ ನೆನಪಾಗುತ್ತಾರೆ. ಈಗಿನ ಕಾಲದ ಪತ್ರಕರ್ತರು ಮತ್ತು ಓದುಗರು ಅವರ ಹೆಸರನ್ನು ಕೇಳಿ ರುವ ಸಾಧ್ಯತೆ ಕಮ್ಮಿ. ಅವರು ‘ದಿ ಟ್ರಿಬ್ಯೂನ್’ ಮತ್ತು ‘ಹಿಂದೂಸ್ತಾನ್ ಟೈಮ್ಸ’ ಪತ್ರಿಕೆಯ ಸಂಪಾದಕರಾಗಿದ್ದರು. ಬೆಂಗಳೂರಿನ ‘ಇಂಡಿಯನ್ ಎಕ್ಸ್ ಪ್ರೆಸ್ ಸ್ಥಾನಿಕ ಸಂಪಾದಕರಾಗಿದ್ದ ನರಸಿಂಹನ್ ಅವರ ಪುತ್ರರಾದ ನಾರಾಯಣನ್, ಇಂಗ್ಲಿಷ್ ಪತ್ರಿಕೋದ್ಯಮ ದಲ್ಲಿ ದೊಡ್ಡ ಹೆಸರು.
ಕೆಲ ಕಾಲ (‘೭೯-’೮೧) ಇವರೂ ಬೆಂಗಳೂರು ‘ಇಂಡಿಯನ್ ಎಕ್ಸ್ ಪ್ರೆಸ್’ ಸ್ಥಾನಿಕ ಸಂಪಾದಕರಾಗಿದ್ದರು. ಮೂಲತಃ ಉತ್ತಮ ಲೇಖಕರಾಗಿದ್ದ ಅವರು, ಇಂಗ್ಲಿಷ್ ಸಾಹಿತ್ಯ, ರಾಜಕೀಯ, ಸಂಗೀತ, ಸಂಸ್ಕೃತಿಗಳ ಬಗ್ಗೆ ಚೆನ್ನಾಗಿ ಓದಿಕೊಂಡವರಾಗಿದ್ದರು. ಏನೇ ಹೇಳಿದರೂ, ಅದಕ್ಕೆ ಸಮಾನವಾದ ಇನ್ನೊಂದು ಘಟನೆ ಹೇಳಿ, ಸುದ್ದಿಮನೆಯಲ್ಲಿ ತಮ್ಮ ಸಹೋದ್ಯೋಗಿಗಳನ್ನು ದಂಗು ಬಡಿಸುತ್ತಿದ್ದರು. ಇಂಗ್ಲಿಷ್ ಸಾಹಿತ್ಯದ ಕ್ಲಾಸಿಕ್ ಕೃತಿಗಳನ್ನು ಉದ್ಧರಿಸುತ್ತಿದ್ದರು. ಪುರಾಣ, ಚರಿತ್ರೆಯ ಪಾತ್ರಗಳೆಲ್ಲವೂ ಅವರಿಗೆ ಚಿರಪರಿಚಿತ ವಾಗಿತ್ತು.
ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತದ ದಿಗ್ಗಜರ ಜತೆ ನಾರಾಯಣನ್ ಅವರಿಗೆ ನಿಕಟ ಸಂಬಂಧವಿತ್ತು. ಹಿಂದಿ ಸಿನಿಮಾ ಹಾಡು, ವೇದ ಮಂತ್ರ, ಸುಬ್ಬುಲಕ್ಷ್ಮಿ ಸಂಗೀತ, ರಫಿ ಹಾಡುಗಳ ಬಗ್ಗೆ ಅವರು ಮಾತಾಡುತ್ತಿದ್ದರು ಕಿರಿಯ ಸಹೋದ್ಯೋಗಿಗಳು ಆಸಕ್ತಿಯಿಂದ ಕೇಳುತ್ತಿದ್ದರು. ಅವರು ಸುದ್ದಿಮನೆಯ ದೊಡ್ಡಣ್ಣ ಎಂದೇ ಕರೆಯಿಸಿಕೊಂಡವರು. ಅವರಿಗೆ ಗೊತ್ತಿಲ್ಲದ ವಿಷಯಗಳಿರಲಿಲ್ಲ. ಅವರೊಬ್ಬರು ಧೀಮಂತ ಸಂಪಾದಕ ಎಂದೇ ಸರ್ವಮಾನ್ಯರಾದವರು.
ಪಂಜಾಬಿಗೆ ಸೀಮಿತವಾಗಿದ್ದ ‘ದಿ ಟ್ರಿಬ್ಯೂನ್’ ಪತ್ರಿಕೆಯನ್ನು ಅವರು ರಾಷ್ಟ್ರವಾಹಿನಿಗೆ ಕರೆ ತಂದರು. ಅವರು ಅಲ್ಲಿದ್ದಾಗಲೇ,
ಅವರಿಗೆ ‘ಟೈಮ್ಸ ಆಫ್ ಇಂಡಿಯ’ ಸಂಪಾದಕರಾಗುವಂತೆ ಆಹ್ವಾನ ಬಂದಿತ್ತು. ಆದರೆ ಅವರನ್ನು ‘ಹಿಂದೂಸ್ತಾನ್ ಟೈಮ್ಸ್’
ಪತ್ರಿಕೆ ಆಡಳಿತ ಮಂಡಳಿ ಅಚ್ಚರಿಯ ಬೆಳವಣಿಗೆಯಲ್ಲಿ ತನ್ನೆಡೆಗೆ ಸೆಳೆದುಕೊಂಡಿತು. ಆಗ ಅದು ಸುದ್ದಿಮನೆಯ ಕ್ಷಿಪ್ರ ಕ್ರಾಂತಿ
ಎಂದೇ ಕರೆಯಿಸಿಕೊಂಡಿತ್ತು.
ನಾರಾಯಣನ್ ಅಂಥ ಬೇಡಿಕೆಯುಳ್ಳ ಸಂಪಾದಕರಾಗಿದ್ದರು. ಇವರು ‘ಹಿಂದೂಸ್ತಾನ್ ಟೈಮ್ಸ್’ ನಲ್ಲಿ ಬರೆಯುತ್ತಿದ್ದ I Muse, Therefore I am ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು ಮತ್ತು ಅವರ ಬಹುಮುಖಿ ವ್ಯಕ್ತಿತ್ವಕ್ಕೆ ಕೈಗನ್ನಡಿಯಾಗಿತ್ತು. ಸುಮಾರು ನಲವತ್ತು ವರ್ಷಗಳ ಕಾಲ ದೇಶದ ಪ್ರಮುಖ ಪತ್ರಿಕೆಗಳಲ್ಲಿ ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದ ಎಪ್ಪತ್ತೈದು ವರ್ಷದ ನಾರಾಯಣನ್, ತಮ್ಮ ವೃತ್ತಿಯ ಕೊನೆಯ ದಿನಗಳಲ್ಲಿ ಮಾಡಬಾರದ ತಪ್ಪು ಮಾಡಿಬಿಟ್ಟರು.
ಬ್ರಿಟಿಷ್ ಪತ್ರಕರ್ತ ಬ್ರಯಾನ್ ಆಪಲ್ ಯಾರ್ಡ್ ಬರೆದ ಅಂಕಣದ ಬಹುಭಾಗವನ್ನು ಯಥಾವತ್ತು ಕಾಪಿ ಮಾಡಿ, ತಮ್ಮ I Muse,
Therefore I am ಅಂಕಣದಲ್ಲಿ ಪೇಸ್ಟ್ ಮಾಡಿ, For ever in Transit ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿಬಿಟ್ಟರು. ಈ ಕೃತಿಚೌರ್ಯವನ್ನು ಪ್ರತಿಸ್ಪರ್ಧಿ ಪತ್ರಿಕೆ ‘ಪಯೋನಿಯರ್’ಗೆ ಬರೆಯುತ್ತಿದ್ದ ಬಿ.ಎನ್.ಉನಿಯಲ್ ಎಂಬ ಪತ್ರಕರ್ತ ಬಟಾ ಬಯಲು ಮಾಡಿಬಿಟ್ಟ. ನಾರಾಯಣನ್ ವಿವಸ್ತ್ರರಾಗಿದ್ದರು. ಅವರಲ್ಲಿ ಯಾವ ಸಮರ್ಥನೆಯೂ ಇರಲಿಲ್ಲ. ತನ್ನನ್ನು ಉನಿಯಲ್ ಸಾಯಿಸಿಬಿಟ್ಟ ಎಂದು ನಾರಾಯಣನ್ ತಮ್ಮ ಆಪ್ತ ಸ್ನೇಹಿತರ ಮುಂದೆ ಅಲವತ್ತುಕೊಂಡರು.
ಅವರ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ‘ಹಿಂದೂಸ್ತಾನ್ ಟೈಮ್ಸ’ ಸಂಪಾದಕ ಹುzಯಿಂದ ತೀರಾ ಮುಖಹೀನರಾಗಿ, ಕಳಂಕ ಹೊತ್ತುಕೊಂಡು, ಇಷ್ಟು ವರ್ಷಗಳ ಕಾಲ ಗಳಿಸಿದ ಪ್ರಸಿದ್ಧಿಯನ್ನು ಮಣ್ಣುಪಾಲು ಮಾಡಿಕೊಂಡು ನಿರ್ಗಮಿಸ ಬೇಕಾಯಿತು. ಅವರು ಭಾರತದ ಅತ್ಯಂತ ಪ್ರಮುಖ ಸಂಪಾದಕರ ಸಾಲಿಗೆ ಸೇರಿದರು. ಆದರೆ ಕೈಯಾರೆ, ಆ ಸ್ಥಾನದಿಂದ ಪತನರಾದರು. ಸುದ್ದಿಮನೆಯ ಎಲ್ಲರ ಬಾಯಿಗೆ ಎಲೆಅಡಕೆಯಾಗಿಬಿಟ್ಟರು.
ಈ ಒಂದು ಕೃತಿಚೌರ್ಯ ಪ್ರಕರಣ ಅವರ ಇಡೀ ವೃತ್ತಿಜೀವನಕ್ಕೆ ಕಂಟಕವಾಗಿ ಹೋಯಿತು. ಅವರು ಅಷ್ಟು ವರ್ಷ ಮಾಡಿದ ಸಾಧನೆಗಳೆಲ್ಲ ಕೊಚ್ಚಿ ಹೋದವು. ‘ಸ್ಕಾಲರ್ ಎಡಿಟರ್’ ಎಂದೇ ಕರೆಯಿಸಿಕೊಂಡಿದ್ದ ನಾರಾಯಣನ್ ಈ ಘಟನೆಯಿಂದ ಚೇತರಿಸಿಕೊಳ್ಳಲೇ ಇಲ್ಲ. ಈ ಘಟನೆಯ ನಂತರ, ಅವರಿಗೆ ದಿಲ್ಲಿಯಲ್ಲಿರಲು ಸಾಧ್ಯವಾಗಲೇ ಇಲ್ಲ. ಬೆಂಗಳೂರಿಗೆ ಬಂದು ನೆಲೆಸಿದರು. ಆ ದಿನಗಳಲ್ಲಿ ನಾನು ಅವರನ್ನು ಭೇಟಿ ಮಾಡುತ್ತಿದ್ದೆ. ಬೇಡವೆಂದರೂ ಆಗಾಗ ಆ ಕೃತಿಚೌರ್ಯದ ಪ್ರಕರಣ ನೆನಪಾಗಿ ಅವರನ್ನು ಒಳಗಿಂದೊಳಗೆ ಸುಡುತ್ತಿತ್ತು. ಬೆಂಗಳೂರಿನ ಭಾರತೀಯ ವಿದ್ಯಾಭವನದ ಚಟುವಟಿಕೆಗಳಿಗೆ ತಮ್ಮನ್ನು
ಸೀಮಿತಗೊಳಿಸಿಕೊಂಡಿದ್ದರು.
‘ವಿಜಯ ಕರ್ನಾಟಕ’ಕ್ಕೆ ಬರೆಯುವಂತೆ ಕೇಳಿಕೊಂಡೆ. ಇಂಗ್ಲೀಷಿನಲ್ಲಿ ಬರೆದಿದ್ದನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸುವು ದಾಗಿ ಹೇಳಿದೆ. ಆದರೆ ಅವರು ಪತ್ರಿಕೋದ್ಯಮಕ್ಕೆ ಬೆನ್ನು ಮಾಡಿ ಹೊರಟಂತಿತ್ತು. ನನ್ನ ಒತ್ತಾಯಕ್ಕೆ ಒಂದು ಲೇಖನ ಕಳಿಸಿದ್ದರು. ಏನಾಯಿತೋ ಏನೋ, ನಂತರ ಬರೆಯಲೇ ಇಲ್ಲ. ಅವರ ಸಂಕಟ, ತಳಮಳ, ಬೇಗುದಿ ಅರ್ಥವಾಗುತ್ತಿತ್ತು. ಅವರು ಕ್ಷಣ ಕ್ಷಣಕ್ಕೂ
ಕುಬ್ಜರಾಗುತ್ತಿದ್ದರೆ ಎಂದು ಅನಿಸುತ್ತಿತ್ತು. ನಾರಾಯಣನ್ ಆ ಆಘಾತದಿಂದ ಚೇತರಿಸಿಕೊಳ್ಳಲು ಇಲ್ಲ.
ಲೇಖಕನಾದವ ಮಾಡುವ ಮಹಾಪಾಪವೆಂದರೆ ಕೃತಿಚೌರ್ಯ. ಆತ ತನಗೆ ತಾನು ಮಾಡಿಕೊಳ್ಳುವ ದೊಡ್ಡ ದ್ರೋಹ ಅಂದರೆ ಕೃತಿಚೌರ್ಯ ಮಾಡಿ ಸಿಕ್ಕಿ ಬೀಳುವುದು ಎಂದು ನಾರಾಯಣನ್ ಹೇಳುತ್ತಿದ್ದರು. ಇದು ತೊಳೆದುಕೊಳ್ಳಲು ಆಗದ ಪಾಪ, ಕಳ್ಳನಿಗೆ
ಕ್ಷಮೆಯಿದೆ ಆದರೆ ಕೃತಿಚೌರ್ಯ ಮಾಡಿದವನಿಗಿಲ್ಲ ಎಂದು ವಿಷಾದದಿಂದ ಹೇಳುತ್ತಿದ್ದರು. ಐದು ವರ್ಷಗಳ ಹಿಂದೆ, ಸಿಂಗಾಪುರ ದಲ್ಲಿರುವ ತಮ್ಮ ಮಗಳ ಮನೆಯಲ್ಲಿ ನಾರಾಯಣನ್ ನಿಧನರಾದರು.
ಭಾರತದ ಯಾವ ಪತ್ರಿಕೆಯಲ್ಲೂ ಅವರ ನಿಧನ ಸುದ್ದಿ ಪ್ರಕಟವಾಗಲಿಲ್ಲ. ಕಾರಣ ಅವರು ತೀರಿಕೊಂಡ ಎರಡು ತಿಂಗಳುಗಳ ನಂತರ ಅವರ ಕುಟುಂಬ ಆ ಸುದ್ದಿಯನ್ನು ಬಹಿರಂಗಪಡಿಸಿತು. ಆ ಕೃತಿಚೌರ್ಯ ಪ್ರಕರಣ ಒಬ್ಬ ಉತ್ತಮ ಸಂಪಾದಕನನ್ನು ಬಲಿ ತೆಗೆದುಕೊಂಡುಬಿಟ್ಟಿತು !