ನವದೆಹಲಿ: ದೇಶಾದ್ಯಂತ ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆಯನ್ನು ಜಾರಿಗೊಳಿಸುವ ಕುರಿತಂತೆ ನಡೆದ ಪ್ರತಿಭಟನೆಗೆ ಕುಮ್ಮಕ್ಕು ನೀಡುವಲ್ಲಿ ಬೆನ್ನೆಲುಬಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮೂಲಗಳಿಂದ ಆರ್ಥಿಕ ಸಹಕಾರ ದೊರೆಯುತ್ತಿದೆ ಎಂದು ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ ಹೇಳಿದೆ.
ಹವಾಲಾ ಚಾನೆಲುಗಳ ಮೂಲಕ ಪಿಎಫ್‌ಐ ವಿದೇಶಿ ಮೂಲಗಳಿಂದ ಹಣ ಪಡೆದುಕೊಂದು ದೇಶದಲ್ಲಿ ನಡೆಯುವ ಪ್ರತಿಭಟನೆಗಳಿಗೆ ಪರೋಕ್ಷವಾಗಿ ಆರ್ಥಿಕ ಸಹಾಯ ಮಾಡುತ್ತಿದೆ. ಆದರೆ,ಇದಕ್ಕೆ ಪಿಎಫ್‌ಐ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ಊಹಾಪೋಹದ ಆರೋಪವಾಗಿದ್ದು, ತಾನು ಯಾವುದೇ ಪ್ರತಿಭಟನೆಗಳಿಗೆ ಧನ ಸಹಾಯ ಮಾಡಿಲ್ಲ ಎಂದು ಹೇಳಿದೆ.
2014ರಿಂದಲೂ ಪಿಎಫ್‌ಐ ನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿತ್ತು. ಇದರ ಮೂಲಕ ಪಿಎಫ್‌ಈ, ಸಿಎಎ ಹಾಗೂ ಎನ್‌ಆರ್‌ಸಿ ಕಾಯಿದೆ ವಿರೋಧಿ ಪ್ರತಿಭಟನೆಗಳಿಗೆಲ್ಲ ಧನ ಸಹಾಯ ಮಾಡಿದೆ. ವಿದೇಶದಿಂದ ಪಿಎಫ್‌ಐ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಸುಮಾರು ನೂರು ಕೋಟಿ ರೂಪಾಯಿಗಳು ವರ್ಗಾವಣೆಯಾಗಿರುವ ಕುರಿತು ಸಂಘಟನೆಯ ಉಪಾಧ್ಯಕ್ಷ ರೌಫ್ ಶರೀಫ್ ಅವರ ವಿಚಾರಣೆ ವೇಳೆ ತಿಳಿದು ಬಂದಿದೆ. ಹಾಗೂ ಈ ಭಾರೀ ಮೊತ್ತದ ಹಣದ ವರ್ಗಾವಣೆ 2013 ರಿಂದ 2016ರ ನಡುವೆ ನಡೆದಿದೆ.
ಶರೀಫ್ ಅವರನ್ನು ವಾರದ ಹಿಂದಷ್ಟೇ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಹಾಗೂ ಅವರ ನಿವಾಸಕ್ಕೂ ದಾಳಿ ಮಾಡಲಾಗಿತ್ತು. ಪಿಎಫ್‌ಐ ಹಿರಿಯ ಅಧಿಕಾರಿಗಳ ನಿವಾಸಕ್ಕೆ ದಾಳಿ ನಡೆಸುವ ವೇಳೆ, ಅಕ್ರಮ ಹಣ ವರ್ಗಾವಣೆಯನ್ನು ಖಚಿತಪಡಿಸುವ ಸಾಕ್ಷ್ಯಾಧಾರಗಳು ಹಲವು ದಾಖಲೆಗಳು ಲಭ್ಯವಾಗಿವೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.