Sunday, 15th December 2024

ಇವು ಸಮರ ಸಾಹಸಿ ಮಿಲಿಟರಿ ಮಾರ್ಜಾಲಗಳು !

ತಿಳಿರುತೋರಣ

ಶ್ರೀವತ್ಸಜೋಶಿ

ಅಕ್ಷೌಹಿಣಿ ಸೇನೆ ಅಂದರೆ ಅದರಲ್ಲಿ 21870 ಆನೆಗಳು ಮತ್ತು 65610 ಕುದುರೆಗಳು ಇರುತ್ತವೆ. ಆನೆಗಳಷ್ಟೇ ಸಂಖ್ಯೆಯ ರಥಗಳು, ಮತ್ತು ಅದರ ಐದರಷ್ಟು ಸಂಖ್ಯೆಯ ಕಾಲಾಳುಗಳು. ಒಟ್ಟು ಎಷ್ಟಾಗಬಹುದು ಅಂದಾಜಿಸಿ.

ಮಹಾಭಾರತ ಯುದ್ಧದಲ್ಲಿ ಪಾಂಡವರ ಪಕ್ಷದಲ್ಲಿ ಏಳು ಅಕ್ಷೌಹಿಣಿ ಸೇನೆಗಳು ಮತ್ತು ಕೌರವರ ಕಡೆ ಹನ್ನೊಂದು ಅಕ್ಷೌಹಿಣಿ ಸೇನೆಗಳು ಇದ್ದುವಂತೆ. ಸಂಖ್ಯೆಗಾಗಿ ಅಲ್ಲ, ಆ ಸೇನೆಗಳಲ್ಲಿ ಆನೆಗಳೂ, ಕುದುರೆಗಳೂ ಇದ್ದವು ಎಂಬ ಅಂಶಕ್ಕಾಗಿಯಷ್ಟೇ ಇದನ್ನಿಲ್ಲಿ
ಪ್ರಸ್ತಾವಿಸಿದೆ. ಚದುರಂಗದಲ್ಲಿ ಆನೆ ಮತ್ತು ಕುದುರೆ ಇರುವುದಕ್ಕೆ ಅಕ್ಷೌಹಿಣಿಯ ಸಂರಚನೆಯೇ ಮೂಲವೆಂದು ಹೇಳುತ್ತಾರೆ. ಚೆಸ್
ಆಟದ ಬಿಷಪ್ ಕಾಯಿಯನ್ನು ಕೆಲವರು ಒಂಟೆ ಎಂದು ಗುರುತಿಸುವುದಿದೆ, ಅಲ್ಲಿಗೆ ಅದೂ ಒಂದು ಪ್ರಾಣಿಯೇ ಆಯ್ತಲ್ಲ!

ರಾಮಾಯಣ ದಲ್ಲಿ ಸೈನ್ಯದ ಲೆಕ್ಕಾಚಾರ ಅಕ್ಷೌಹಿಣಿಗಳಲ್ಲಲ್ಲ, ಅಲ್ಲಿ ವಾನರರು ‘ಏಷಾಂ ಕೋಟಿಸಹಸ್ರಾಣಿ ನವ ಪಂಚಮ ಸಪ್ತ ಚ| ತಥಾ ಶಂಖಸಹಸ್ರಾಣಿ ತಥಾ ವೃಂದಶತಾನಿ ಚ|’ ಸಂಖ್ಯೆಯಲ್ಲಿದ್ದ ರಂತೆ. ಶತ, ಸಹಸ್ರ, ಕೋಟಿ, ಶಂಖ, ವೃಂದ ಇವೆಲ್ಲ ಸಂಖ್ಯಾಸೂಚಕ ಪದಗಳು. ಒಟ್ಟು ಸುಮಾರು ಹತ್ತರ ಘಾತ ಹದಿನಾರಕ್ಕೆ ಹತ್ತಿರದ ದೊಡ್ಡದೊಂದು ಸಂಖ್ಯೆ ಅಂತಿಟ್ಕೊಳ್ಳೋಣ.

ಇಲ್ಲೂ ಅಷ್ಟೇ. ಸಂಖ್ಯೆಗಾಗಿ ಅಲ್ಲ, ರಾಮನ ಸೇನೆಯಲ್ಲಿ ಲಕ್ಷ್ಮಣ ಮತ್ತು ವಿಭೀಷಣನನ್ನು ಹೊರತುಪಡಿಸಿದರೆ ಜಾಂಬವಂತ ನೆಂಬ ಕರಡಿಯೂ, ಮಿಕ್ಕವರೆಲ್ಲ ಕಪಿಗಳೂ ಇದ್ದದ್ದು ಎಂಬ ಅಂಶಕ್ಕಾಗಿಯಷ್ಟೇ ನೆನಪಿಸಿದೆ. ಸೇತುನಿರ್ಮಾಣ ಯೋಜನೆ ಯಲ್ಲಿ ಭಾಗಿಯಾಗಿದ್ದ ಅಳಿಲು ಆಮೇಲೆ ರಾಮನ ಜೊತೆಗೂಡಿ ಲಂಕೆಗೂ ಹೋಗಿತ್ತೇ, ರಾಮ – ರಾವಣ ಯುದ್ಧದಲ್ಲೂ ಏನಾದರೂ ಗಮನಾರ್ಹ ‘ಅಳಿಲುಸೇವೆ’ ಗೈದಿತ್ತೇ ನನಗೆ ಗೊತ್ತಿಲ್ಲ.

ವಿಷಯ ಇಷ್ಟೇ: ಯುದ್ಧಗಳಲ್ಲಿ ಮನುಷ್ಯನು ತನ್ನ ದೈಹಿಕ ಶಕ್ತಿ ಮತ್ತು ತನ್ನಲ್ಲಿರುವ ಶಸ್ತ್ರಾಸ್ತ್ರಗಳ ಶಕ್ತಿಯ ಜೊತೆಗೆ ಪ್ರಾಣಿಗಳ
ಶಕ್ತಿಸಾಮರ್ಥ್ಯವನ್ನು ಬಳಸಿಕೊಳ್ಳುವುದು ಪುರಾಣಕಾಲದಿಂದಲೂ ಚಾಲ್ತಿಯಲ್ಲಿದೆ. ಆನೆ, ಕುದುರೆ, ಒಂಟೆಗಳಷ್ಟೇ ಅಲ್ಲದೆ, ಸಂದೇಶವಾಹಕಗಳಾಗಿ ಪಾರಿವಾಳಗಳು ಬಳಕೆಯಾಗಿವೆ.

ಬೇಹುಗಾರರಾಗಿ ಬಾವಲಿಗಳು; ವಾಸನಾಬಲದಿಂದ ವೈರಿಯನ್ನು ಪತ್ತೆ ಮಾಡಬಲ್ಲವೆಂದು ನಾಯಿಗಳು; ಪಾಶ್ಚಾತ್ಯ ಯುದ್ಧ ಚರಿತ್ರೆಗಳನ್ನು ತಿರುವಿದರೆ, ಗ್ರೀಕ್ – ರೋಮನ್ ಸಾಮ್ರಾಜ್ಯಗಳ ಕಾಲದಷ್ಟು ಹಿಂದೆಹೋದರೆ, ಕತ್ತೆ, ಹೇಸರಗತ್ತೆ, ಎತ್ತು, ಕರಡಿ, ಡಾಲ್‌ಫಿನ್, ಜೇನುನೊಣ, ಚೇಳು ಮುಂತಾದುವನ್ನೆಲ್ಲ ಯುದ್ಧಗಳಲ್ಲಿ ಬಳಸಿರುವುದು ಕಂಡುಬರುತ್ತದೆ. ನಮ್ಮ ಭಾರತದಲ್ಲೇ, ಮುನ್ನೂರೈವತ್ತು ವರ್ಷಗಳ ಹಿಂದೆ, ಶಿವಾಜಿಯ ಸೇನಾಧಿಕಾರಿಯಾಗಿದ್ದ ತಾನಾಜಿಗೆ ಸಿಂಹಗಢ ಕೋಟೆಯನ್ನು ಆಕ್ರಮಿಸಲಿಕ್ಕೆ ‘ಯಶವಂತ’ ಎಂಬ ಹೆಸರಿನ ಉಡ(ಹಲ್ಲಿ) ನೆರವಾದ ಸಾಹಸಗಾಥೆ ಇದೆಯಲ್ಲ!

ಉಡದ ಟೊಂಕಕ್ಕೆ ಹಗ್ಗ ಕಟ್ಟಿ ಕೋಟೆಯ ಮೇಲಕ್ಕೆ ಹತ್ತಿಸಿ ಬಲವಾಗಿ ಹಿಡಿದುಕೊಳ್ಳುವಂತೆ ಹೇಳಿ ಆಮೇಲೆ ಅದೇ ಹಗ್ಗದ ಸಹಾಯದಿಂದ ತಾನಾಜಿಯ ಸೈನಿಕರು ಒಬ್ಬೊಬ್ಬರಾಗಿ ಕೋಟೆಯನ್ನೇರಿದ್ದರಂತೆ. ಅದಕ್ಕಿಂತಲೂ ಪ್ರಸಿದ್ಧವಾದುದು ರಾಜಸ್ಥಾನದ ಮಹಾರಾಣಾ ಪ್ರತಾಪನ ನೆಚ್ಚಿನ ಕುದುರೆ ‘ಚೇತಕ್’. ಗಾಯಗೊಂಡರೂ ತನ್ನೊಡೆಯನನ್ನು ಯುದ್ಧಭೂಮಿ ಯಿಂದ ಸುರಕ್ಷಿತವಾಗಿ ಹೊರತಂದ ಸಾಹಸಿ ಕುದುರೆ. ಬಜಾಜ್ ಕಂಪನಿಯು ಸ್ಕೂಟರ್ ಮಾಡೆಲ್‌ಗೆ ‘ಚೇತಕ್’ ಎಂಬ ಹೆಸರಿ ಟ್ಟದ್ದು ಅದರ ನೆನಪಲ್ಲೇ ಅಂತೆ.

ಇಷ್ಟೆಲ್ಲ ಪ್ರಾಣಿಗಳ ಹಾಗೆಯೇ ಬೆಕ್ಕುಗಳೂ ಯುದ್ಧಗಳಲ್ಲಿ ಸೈನಿಕರಿಗೆ ನೆರವಾಗಿರುವ ಉದಾಹರಣೆಗಳಿವೆ ಎಂದರೆ ತುಸು
ಆಶ್ಚರ್ಯದ ಸಂಗತಿಯೇ. ಏಕೆಂದರೆ ಬೆಕ್ಕು ಮಹಾ ಆಲಸಿ ಪ್ರಾಣಿ, ದಿನದಲ್ಲಿ ಹದಿನೆಂಟು ಗಂಟೆ ಕಾಲ ನಿದ್ದೆ ಮಾಡಿಕೊಂಡಿರು
ತ್ತದೆ, ನಾಯಿಯಂತೆ ಆಜ್ಞಾಪಾಲಕನಲ್ಲ, ನಂಬುಗೆಯ ಸೇವಕನಲ್ಲ, ತನ್ನ ಆಹಾರಕ್ಕೆಂದು ಇಲಿಗಳನ್ನು ಹಿಡಿದೀತೇ ವಿನಾ
ನಮಗೆ ಉಪಕಾರಕ್ಕಂತಲ್ಲ. ಆದರೂ ನಾವು ಬೇರೆಲ್ಲ ಸಾಕುಪ್ರಾಣಿಗಳಿಗಿಂತ ಹೆಚ್ಚಿನ ಸ್ವಾತಂತ್ರ್ಯ ಸುಖಸುಪ್ಪತ್ತಿಗೆಗಳನ್ನು
ಬೆಕ್ಕಿಗೆ ಒದಗಿಸುತ್ತೇವೆ.

ಅಂಥದು ಯುದ್ಧದಲ್ಲಿ ಏನು ಮಹಾ ಸಾಹಸ ಮಾಡೀತು… ಎಂದುಕೊಳ್ಳುತ್ತೇವೆ. ಬೆಕ್ಕಿನ ಯುದ್ಧಗಾಥೆಗಳನ್ನು ನಂಬುವುದು ನಮಗೆ ಕಷ್ಟವಾಗುತ್ತದೆ. ಮೇರಿಲಿನ್ ಸಿಂಗರ್ ಎಂಬೊಬ್ಬ ಅಮೆರಿಕನ್ ಲೇಖಕಿ, ಮಕ್ಕಳ ಕಥೆಪುಸ್ತಕಗಳೂ ಸೇರಿದಂತೆ ನೂರಾರು ಕೃತಿಗಳನ್ನು ರಚಿಸಿದವಳು, Cats to the Rescue- True Tales of Heroic Felines ಎಂಬ ಪುಸ್ತಕದಲ್ಲಿ ಬೆಕ್ಕುಗಳ ಬಗ್ಗೆ, ಅದರಲ್ಲೂ ಸೈನಿಕರೊಂದಿಗೆ ಯುದ್ಧಗಳಲ್ಲಿ ಭಾಗವಹಿಸಿದ ಬೆಕ್ಕುಗಳ ಬಗ್ಗೆ ಬರೆದಿದ್ದಾಳೆ.

ಆ ಪುಸ್ತಕವನ್ನು “To my talkative cat, August’ಎಂದು ತನ್ನ ಪ್ರೀತಿಯ ಬೆಕ್ಕಿಗೆ ಅರ್ಪಣೆ ಮಾಡಿದ್ದಾಳೆ! ಪುಸ್ತಕದ ಪ್ರಸ್ತಾವನೆ ಯಲ್ಲಿ ಮೆರಿಲಿನ್ ಸಹ ಬೆಕ್ಕುಗಳ ಬಗ್ಗೆ ಮನುಷ್ಯರಿಗಿರುವ ಪೂರ್ವಗ್ರಹವನ್ನು ಉಲ್ಲೇಖಿಸಿದ್ದಾಳೆ. ಚೈನಿಸ್ ಪಂಚಾಂಗದಲ್ಲಿ ಹನ್ನೆರಡು ವರ್ಷಗಳ ಆವರ್ತನದಲ್ಲಿ ಒಂದೊಂದು ವರ್ಷಕ್ಕೆ ಒಂದೊಂದು ಪ್ರಾಣಿ ಅಧಿಪತಿಯಾಗಿ ಇರುವ ಸಂಪ್ರದಾಯದಲ್ಲಿ ಬೆಕ್ಕು ಏಕೆ ಇಲ್ಲ ಎಂಬುದನ್ನೂ ವಿವರಿಸಿದ್ದಾಳೆ. ಅದೊಂದು ಕಟ್ಟುಕಥೆಯೇ ಆದರೂ ಸ್ವಾರಸ್ಯಕರವಾಗಿದೆ: ಪ್ರಾಚೀನ ಕಾಲದಲ್ಲಿ ಇಲಿ ಮತ್ತು ಬೆಕ್ಕು ಸ್ನೇಹಿತರಾಗಿಯೇ ಇದ್ದುವಂತೆ.

ವರ್ಷದ ಅಧಿಪತಿಗಳಾಗಿ ಹನ್ನೆರಡು ಪ್ರಾಣಿಗಳ ಆಯ್ಕೆ ನಡೆಯಲಿದೆ, ಅದಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬುದ್ಧ ಘೋಷಿಸಿದನಂತೆ. ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೆ ಬುದ್ಧನಿದ್ದಲ್ಲಿಗೆ ಒಟ್ಟಿಗೇ ಹೋಗೋಣ ಎಂದು ಇಲಿ ಮತ್ತು ಬೆಕ್ಕು ಮಾತಾಡಿ ಕೊಂಡವು. ಬೆಳಗ್ಗೆ ಮೊದಲು ಎಚ್ಚರಾದವರು ಇನ್ನೊಬ್ಬರನ್ನು ಎಬ್ಬಿಸಬೇಕು ಎಂದು ಒಪ್ಪಂದ ಮಾಡಿದವು. ಮಾರನೆದಿನ ಬೆಳಗ್ಗೆ ಬೇಗ ಎದ್ದ ಇಲಿ ತನ್ನ ಮಾತನ್ನು ಮರೆತು ಎತ್ತಿನ ಬೆನ್ನೇರಿಕೊಂಡು ಬುದ್ಧನಿದ್ದಲ್ಲಿಗೆ ಹೋಯ್ತು. ಅಲ್ಲಿ ಎತ್ತಿನ ಬೆನ್ನ ಮೇಲಿಂದ ಛಂಗನೆ ಜಿಗಿದು ತಾನೇ ಮೊದಲು ಬಂದದ್ದು, ತನಗೇ ಮೊದಲ ಸ್ಥಾನ ಎಂದು ಚೀರಿತು.

ತಥಾಸ್ತು ಎಂದ ಬುದ್ಧ, ಕ್ರಮವಾಗಿ ಇಲಿ ಮತ್ತು ಎತ್ತಿಗೆ ಮೊದಲೆರಡು ಸ್ಥಾನಗಳನ್ನು ಕೊಟ್ಟನು. ಅಷ್ಟುಹೊತ್ತಿಗೆ ಬೇರೆ ಕೆಲ ಪ್ರಾಣಿಗಳೂ ಅಲ್ಲಿಗೆ ಬಂದವು; ಹನ್ನೆರಡೂ ಸ್ಥಾನಗಳು ಭರ್ತಿಯಾದವು. ಬೆಕ್ಕು ಇನ್ನೂ ಮನೆಯಲ್ಲಿ ಮಲಗಿಕೊಂಡೇ ಇತ್ತು. ಹಠಾತ್ತಾಗಿ ಎಚ್ಚರವಾಗಿ ಬುದ್ಧನಿದ್ದಲ್ಲಿಗೆ ಓಡಿಹೋದಾಗ ಸ್ಥಾನಗಳ ಬಟವಾಡೆ ಆಗಿಹೋಗಿತ್ತು. ಅಂತೂ ಬೆಕ್ಕಿಗೆ ಚೈನಿಸ್
ಪಂಚಾಂಗದಲ್ಲಿ ಸ್ಥಾನವಿಲ್ಲವಾಯ್ತು, ಮಾತ್ರವಲ್ಲ ಅಂದಿನಿಂದ ಇಲಿ ಮತ್ತು ಬೆಕ್ಕು ಬದ್ಧವೈರಿಗಳಾದರು.

ಮೆರಿಲಿನ್‌ಳ ಪುಸ್ತಕದಲ್ಲಷ್ಟೇ ಅಲ್ಲದೆ ಅಮೆರಿಕ ಮತ್ತು ಬ್ರಿಟನ್ ಮಿಲಿಟರಿ ದಾಖಲೆಗಳಲ್ಲಿ, ವೆಬ್‌ಪುಟಗಳಲ್ಲಿಯೂ, ಆಯಾ
ದೇಶಗಳ ಸೇನೆಯಲ್ಲಿ ಸೇವೆ ಸಲ್ಲಿಸಿದ ಬೆಕ್ಕುಗಳ ವಿವರಗಳಿವೆ. 1850ರ ದಶಕದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಸಾರ್ಡಿನಿಯಾ
ದೇಶಗಳು ಸೇರಿ ಒಟ್ಟೊಮನ್ ಸಾಮ್ರಾಜ್ಯವೆಂದು ಹೇಳಿಕೊಂಡು ರಷ್ಯದ ಮೇಲೆ ದಾಳಿ ನಡೆಸಿದ್ದವು. ಚರಿತ್ರೆಯಲ್ಲಿ ಅದರ ಹೆಸರು
ಕ್ರೈಮಿಯನ್ ಯುದ್ಧ. ರಷ್ಯದ ಸೆವಾಸ್ಟಪೊಲ್ ಎಂಬ ಪಟ್ಟಣವು ಯಾರಿಗೆ ಸೇರಬೇಕೆಂದು ನಡೆದ ಭೀಕರ ಕಾಳಗದಲ್ಲಿ ಸರ್ವ ನಾಶವಾಗಿತ್ತು.

ಬ್ರಿಟಿಷ್ ಸೇನೆಯ ಲೆಫ್ಟಿನೆಂಟ್ ವಿಲಿಯಂ ಗೈರ್ ಅಲ್ಲೆಲ್ಲಾದರೂ ಆಹಾರ ಸಿಗಬಹುದೇ ಎಂದು ಹುಡುಕುತ್ತಿದ್ದ. ಆಗ ಅವನಿಗೆ ಕಲ್ಲುಮಣ್ಣಿನ ರಾಶಿಯ ಮೇಲೆ ಕುಳಿತು ಪಿಳಿಪಿಳಿ ಕಣ್ಣು ಬಿಡುತ್ತಿದ್ದ ಒಂದು ಬೆಕ್ಕು ಕಾಣಿಸಿತು. ಅದರ ಮೈಗೆಲ್ಲ ಧೂಳು ಮೆತ್ತಿ ಕೊಂಡಿತ್ತು. ಸ್ವಚ್ಛಗೊಳಿಸಿ ಪ್ರೀತಿಯಿಂದ ತ್ತಿಕೊಂಡು ಬೆಕ್ಕನ್ನು ತನ್ನ ಶಿಬಿರಕ್ಕೆ ತೆಗೆದುಕೊಂಡು ಹೋದನು.

ಅದಕ್ಕೆ ಟಾಮ್ ಎಂದು ಹೆಸರಿಟ್ಟನು. ಯುದ್ಧ ಮುಂದುವರಿದಿದ್ದಾಗ ಅದು ದಿನವೂ ಎಲ್ಲಿಗೋ ಹೋಗಿ ಸಂಜೆಗೆ ಸೈನಿಕರ
ಶಿಬಿರಕ್ಕೆ ಮರಳುತ್ತಿತ್ತು. ಸರಿಯಾಗಿ ತಿಂದುಂಡು ಬರುತ್ತಿದೆ ಎಂದು ಗೊತ್ತಾಗುತ್ತಿತ್ತು. ಒಂದು ದಿನ ಅದರ ಜಾಡನ್ನು ಹಿಡಿದು ಹೋದಾಗ ದೊಡ್ಡದೊಂದು ಕೋಠಿಯಲ್ಲಿ ಅದು ಇಲಿಗಳನ್ನು ಹಿಡಿಯುತ್ತದೆಂದೂ, ಅದೊಂದು ಆಹಾರ ಸಾಮಗ್ರಿಗಳ ಉಗ್ರಾಣವೆಂದೂ ತಿಳಿದುಬಂತು. ಆಮೇಲೆ ಆ ಬೆಕ್ಕು ಬ್ರಿಟಿಷ್ ಸೈನಿಕರ ಸಂಗಾತಿಯೇ ಆಗಿಹೋಯಿತು.

ಇಲಿಗಳನ್ನು ಹಿಡಿಯುವ ನೆಪದಲ್ಲಿ ಸೆವಾಸ್ಟಪೊಲ್ ಪಟ್ಟಣದ ಆಯಕಟ್ಟಿನ ಪ್ರದೇಶಗಳನ್ನೆಲ್ಲ ಅವರಿಗೆ ಪರಿಚಯಿಸಿತು. ಯುದ್ಧ
ಮುಗಿದ ಮೇಲೆ ವಿಲಿಯಂ ಗೈರ್‌ನು ಆ ಬೆಕ್ಕನ್ನು ಇಂಗ್ಲೇಂಡ್‌ಗೆ ತೆಗೆದುಕೊಂಡು ಹೋದನು. ಕೆಲವರ್ಷಗಳಾದ ಮೇಲೆ ಅದು
ಸತ್ತುಹೋದಾಗ, ಆಗಿನ ಪದ್ಧತಿಯಂತೆ ಅದರ ಚರ್ಮವನ್ನು ಉಳಿಸಿಕೊಂಡು ಗೊಂಬೆಯಾಗಿಸಿ ರಾಯಲ್ ಯುನೈಟೆಡ್ ಸರ್ವಿಸಸ್ ಸಂಸ್ಥೆಯಲ್ಲಿ ಗೌರವಪ್ರದರ್ಶನಕ್ಕೆ ಇಡಲಾಯ್ತು. ‘ಕ್ರೈಮಿಯನ್ ಟಾಮ್’ ಎಂದು ಲೇಬಲ್ ಇರುವ ಒಂದು ಗೊಂಬೆ – ಬೆಕ್ಕು ಈಗಲೂ ಅಲ್ಲಿ ಪ್ರದರ್ಶನದಲ್ಲಿದೆಯಂತೆ.

ಎರಡನೆಯ ಪ್ರಪಂಚಯುದ್ಧದ ವೇಳೆ, 1941ರಲ್ಲಿ ಮಿತ್ರರಾಷ್ಟ್ರಗಳು ಜರ್ಮನಿಯ ಮೇಲೆ ಭೀಕರ ರಕ್ತಪಾತದ ಯುದ್ಧ ನಡೆಸಿ ಯುದ್ಧನೌಕೆ ಬಿಸ್ಮಾರ್ಕ್‌ಅನ್ನು ನಾಶಪಡಿಸುವುದರಲ್ಲಿ ಯಶಸ್ವಿಯಾದವು. ಮುಳುಗುತ್ತಿದ್ದ ಹಡಗಿನಿಂದ ಒಂದು ಬೆಕ್ಕು ಹೊರ ಬಂತು. ಆಗೆಲ್ಲ ಯುದ್ಧನೌಕೆಗಳಲ್ಲೂ ಇಲಿ – ಹೆಗ್ಗಣಗಳನ್ನು ಕೊಲ್ಲುವುದಕ್ಕಾಗಿ ಬೆಕ್ಕುಗಳನ್ನು ಸಾಕುತ್ತಿದ್ದರು. ಬಿಸ್ಮಾರ್ಕ್ ಹಡಗಿನಿಂದ ಹೊರಬಂದ ಬೆಕ್ಕಿಗೆ ಬ್ರಿಟಿಷ್ ನಾವಿಕರು ‘ಆಸ್ಕರ್’ ಎಂದು ಹೆಸರಿಟ್ಟು ತಮ್ಮ ಯುದ್ಧನೌಕೆ ‘ಕೊಸಾಕ್’ನ ಒಳಕ್ಕೆ ಬಿಟ್ಟುಕೊಂಡರು.

ಐದು ತಿಂಗಳ ಬಳಿಕ ಜರ್ಮನಿಯ ಸೈನಿಕರು ಕೊಸಾಕ್ ನೌಕೆಯನ್ನು ಹೊಡೆದುರುಳಿಸಿ ದರು. ಆಗಲೂ ಆ ಬೆಕ್ಕು ತನಗೇನೂ
ಆಗಿಲ್ಲವೆಂಬಂತೆ ನೌಕೆಯಿಂದ ಹೊರಬಂತು. ಬ್ರಿಟಿಷರು ಅದನ್ನು ಜರ್ಮನರಿಗೆ ಒಪ್ಪಿಸಲಿಲ್ಲ. ‘ಅನ್‌ಸಿಂಕೆಬಲ್ ಸ್ಯಾಮ್’ ಎಂದು
ಅದನ್ನು ಮತ್ತಷ್ಟು ಗೌರವಿಸಿ ಆರ್ಕ್ ರಾಯಲ್ ಯುದ್ಧನೌಕೆಗೆ ವರ್ಗಾಯಿಸಿದರು. ಅದೇ ವರ್ಷದ ನವೆಂಬರ್‌ನಲ್ಲಿ ಆ ನೌಕೆ ಯನ್ನೂ ಜರ್ಮನಿಯ ಸೈನಿಕರು ಮುಳುಗಿಸಿದರು.

ಅದರಲ್ಲಿ ಬದುಕುಳಿದವರನ್ನು ಬೇರೊಂದು ಬ್ರಿಟಿಷ್ ನೌಕೆಗೆ ವರ್ಗಾಯಿಸುವಾಗ ಆಶ್ಚರ್ಯ ವೆಂಬಂತೆ ಸ್ಯಾಮ್ ಒಂಚೂರೂ
ಗಾಯಗಳಿಲ್ಲದೆ ಹೊರಬಂದಿತ್ತು! ಆಮೇಲೆ ಅದನ್ನು ಮಿಲಿಟರಿಯಿಂದ ನಿವೃತ್ತಗೊಳಿಸಿ ಜೀಬ್ರಾಲ್ಟರ್ ವಸಾಹತಿನ ಗವರ್ನರನಿಗೆ ಸಾಕುವುದಕ್ಕೆ ಕೊಡಲಾಯಿತು. ಎರಡನೆಯ ಪ್ರಪಂಚಯುದ್ಧದಲ್ಲಿ ಸ್ಟಾಲಿನ್‌ಗ್ರಾಡ್ ಕಾಳಗ ಸಹ ರಕ್ತಸಿಕ್ತ ಮುಖಾಮುಖಿಯೆಂದೇ ಕುಪ್ರಸಿದ್ಧ. ಅದರ ಭೀಕರತೆ ಎಷ್ಟಿತ್ತೆಂದರೆ ಗುಪ್ತಸಂದೇಶಗಳನ್ನು ಸಾಗಿಸಲು ಸೈನಿಕರನ್ನು ಕಳುಹಿಸುವುದೂ ಅಪಾಯದ ಪರಿಸ್ಥಿತಿ.

ಮೋರ್ಕಾಎಂಬ ಹೆಸರಿನ ಬೆಕ್ಕನ್ನು ರಷ್ಯನ್ ಆರ್ಮಿ ಹೆಡ್‌ಕ್ವಾರ್ಟರ್ಸ್‌ನಲ್ಲಿ ಸಾಕಲಾಗಿತ್ತು. ಸ್ಟಾಲಿನ್‌ಗ್ರಾಡ್‌ನ ಯಾವ ಮೂಲೆ ಯಲ್ಲಿ ಬಿಟ್ಟರೂ ಅದು ಹೆಡ್‌ಕ್ವಾರ್ಟರ್ಸ್‌ಗೆ ಮರಳುವ ಚಾಣಾಕ್ಷತೆ ಹೊಂದಿತ್ತು. ಅದನ್ನು ಸೈನಿಕರೊಂದಿಗೆ ಕಳುಹಿಸಿ ಜರ್ಮನ್ ಟ್ರೂಪ್‌ಗಳ ಬಗ್ಗೆ ಗುಪ್ತ ಸಂದೇಶ ಬರೆದು ಅದರ ಕೊರಳ ಪಟ್ಟಿಯಡಿಯಲ್ಲಿ ಅಡಗಿಸಿ ರಷ್ಯನ್ ಹೆಡ್‌ಕ್ವಾರ್ಟರ್ಸ್‌ಗೆ ಕಳುಹಿಸ ಲಾಗುತ್ತಿತ್ತು. ಮೋರ್ಕಾ ಯಾರಿಗೂ ಅನುಮಾನ ಬರದಂತೆ ಸಂದೇಶದ ಚೀಟಿಯನ್ನು ಕಮಾಂಡರನಿಗೆ ತಂದುಕೊಡುತ್ತಿತ್ತು.

ಅಮೆರಿಕ ಸಂಯುಕ್ತ ಸಂಸ್ಥಾನವು ಎರಡನೆಯ ಪ್ರಪಂಚ ಯುದ್ಧದಲ್ಲಿ ಧುಮುಕಲಿಕ್ಕೆ ಕಾರಣವಾದುದು ‘ಪರ್ಲ್ ಹಾರ್ಬರ್’ ಮೇಲೆ ಜಪಾನ್ ನಡೆಸಿದ ದಾಳಿ. ಅದು ನಡೆದದ್ದು ಡಿಸೆಂಬರ್ 1941ರಲ್ಲಿ. ಆಮೇಲೂ ಅಲ್ಲಿ ಅಮೆರಿಕದ ನೌಕಾದಳ ಠಿಕಾಣಿ ಮುಂದುವರಿಸಿತ್ತು. 1944ರ ಜುಲೈ 4ರಂದು, ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯಂದು, ಪರ್ಲ್ ಹಾರ್ಬರ್ ನೇವಿ ಬೇಸ್‌ನಲ್ಲಿ ಒಂದು ಬೆಕ್ಕಿನ ಮರಿ ಕಾಣಿಸಿಕೊಂಡಿತು.

ಬಹುಶಃ ಅಲ್ಲೇ ಇದ್ದ ಯಾವುದೋ ಬೆಕ್ಕಿಗೆ ಹುಟ್ಟಿದ್ದದು. ಪಟ್ಟೆಪಟ್ಟೆಗಳಿಂದ ಮುದ್ದಾಗಿ ಕಾಣುತ್ತಿದ್ದ ಅದಕ್ಕೆ ಅಲ್ಲಿಯ ನಾವಿಕರು ಪ್ರಿನ್ಸೆಸ್ ಪೆಪ್ಯುಲೆ ಎಂದು ಹೆಸರಿಟ್ಟರು. ಅದು ಸ್ವಲ್ಪ ದೊಡ್ಡದಾದ ಮೇಲೆ, ನೌಕಾದಳದ ‘ಫ್ರೆಮಾಂಟ್’ ಯುದ್ಧನೌಕೆಯ ಕ್ಯಾಪ್ಟನ್ ಜೇಮ್ಸ್ ಲಿಂಚ್ ಅದನ್ನು ನೌಕೆಯ ಡ್ಯೂಟಿಗೆ ಸೇರಿಸಿಕೊಂಡ. ಅದಕ್ಕೆ ಪೂಲಿ ಎಂದು ಹೆಸರಿಟ್ಟ.

ಡ್ಯೂಟಿ ಅದೇ- ಹಡಗಿನಲ್ಲಿ ಸೇರಿಕೊಳ್ಳುವ ಇಲಿಗಳನ್ನು ಹಿಡಿಯುವುದು. ಇಲಿಗಳ ಉಪಟಳ ಹೆಚ್ಚಾದಷ್ಟೂ, ಶೇಖರಿಸಿಟ್ಟ
ಆಹಾರಕ್ಕೂ ತೊಂದರೆ, ಅಲ್ಲದೇ ನಾವಿಕರಿಗೆ ಪ್ಲೇಗ್ ಬಾಧೆಯ ಭೀತಿ. ಫ್ರೆಮಾಂಟ್ ಯುದ್ಧನೌಕೆಯು ಆಗ ಪೆಸಿಫಿಕ್ ಸಾಗರದಲ್ಲಿ
ಕಾರ್ಯಾಚರಣೆ ಮಾಡುತ್ತಿದ್ದ ಮುಖ್ಯ ನೌಕೆ. ಅಲ್ಲಿನ ನೂರಾರು ದ್ವೀಪಗಳನ್ನು ಆಕ್ರಮಣ ಮಾಡಿದಂತೆಲ್ಲ ಯುದ್ಧದ ಕಾವು
ಏರುತ್ತಿತ್ತು. ಸಿಡಿಗುಂಡುಗಳ ಆರ್ಭಟದ ವೇಳೆ ಪೂಲಿ ನೌಕೆಯ ಅಂಚೆಕೋಣೆಯಲ್ಲಿ ತೆಪ್ಪಗೆ ಬಿದ್ದುಕೊಂಡಿರುತ್ತಿತ್ತಂತೆ.

ಸಾಗರದಲ್ಲಿ ನೌಕೆಗಳು ಭೂಮಧ್ಯರೇಖೆಯನ್ನು ದಾಟುವಾಗ ಇದೇ ಮೊದಲ ಸಲ ದಾಟುತ್ತಿರುವ ನಾವಿಕರಿದ್ದರೆ ಅವರಿಗೊಂದು ತೇರ್ಗಡೆಯ ವಿಶೇಷ ಸಮಾರಂಭ ಏರ್ಪಡಿಸುವುದಿದೆ. ಅಲ್ಲಿಯ ವರೆಗೆ ಅನನುಭವಸ್ಥ ‘ಪೊಲ್ಲಿವಾಗ್ಸ್’ ಎಂದು ಕರೆಸಿಕೊಳ್ಳುವ ನಾವಿಕರು ಭೂಮಧ್ಯರೇಖೆ ದಾಟಿದರೆ ಅನುಭವಸ್ಥ ‘ಶೆಲ್‌ಬ್ಯಾಕ್ಸ್’ ಎಂದು ಕರೆಸಿಕೊಳ್ಳುತ್ತಾರೆ. ಆ ವರ್ಷ ಭೂಮಧ್ಯರೇಖೆ ದಾಟುವ ಸಮಾರಂಭದಲ್ಲಿ ಪೂಲಿಯನ್ನೂ ಸೇರಿಸಿಕೊಳ್ಳಲಾಗಿತ್ತು.

ಒಂದು ಮಿಲಿಟರಿ ಯುನಿಫಾರ್ಮ್, ಮೇಲೆ ಮೂರು ಸರ್ವಿಸ್ ರಿಬ್ಬನ್ ಗಳು, ನಾಲ್ಕು ಸ್ಟಾರ್‌ಗಳನ್ನೂ ಅದಕ್ಕೆ ತೊಡಿಸಲಾಗಿತ್ತು.
ನೌಕಾದಳಕ್ಕೆ ಪೂಲಿ ಸಲ್ಲಿಸಿದ ಸೇವೆಗೆ ಸಂದ ಗೌರವವದು. 15ನೆಯ ಹುಟ್ಟುಹಬ್ಬದಂದು ಲಾಸ್‌ಏಂಜಲೀಸ್ ಟೈಮ್ಸ್ ಪತ್ರಿಕೆ ಯಲ್ಲಿ ಸಂದರ್ಶನಕ್ಕಾಗಿ ಪೂಲಿಗೆ ಅದೇ ಯುನಿಫಾರ್ಮ್ ತೊಡಿಸಿದರು. ಇಲ್ಲಿ ಪ್ರಕಟಿಸಿರುವುದು ಅದೇ ಚಿತ್ರ. 1948ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಲಂಗರುಹಾಕಿದ್ದ ಅಮೇಥಿಸ್ಟ್ ಎಂಬ ಬ್ರಿಟಿಷ್ ನೌಕೆಯ ನಾವಿಕ ಜಾರ್ಜ್ ಹಿಕನ್‌ಬಾಟಮ್ ಅಲ್ಲೆಲ್ಲೋ ಅಡ್ಡಾಡಿಕೊಂಡಿದ್ದ ಒಂದು ಬೀದಿಬೆಕ್ಕನ್ನು ನೌಕೆಯೊಳಕ್ಕೆ ಸೇರಿಸಿಕೊಂಡನು.

ಅದಕ್ಕೆ ಸೈಮನ್ ಎಂದು ನಾಮಕರಣ ಮಾಡಿದನು. ಅದಾಗಿ ಕೆಲದಿನಗಳಲ್ಲೇ ಅಮೇಥಿಸ್ಟ್ ನೌಕೆಯನ್ನು ಚೀನಾದ ಯಾಂಗ್ಜಿ ನದಿಯಗುಂಟ ಬ್ರಿಟಿಷ್ ರಾಯಭಾರ ಕಚೇರಿಯ ಕಾವಲುಗಾರನಾಗಿ ನೇಮಿಸಲಾಯಿತು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ನೌಕೆಯ ಮೇಲೆ ದಾಳಿ ಮಾಡಿತು. ಆಗ ಸಿಡಿದಿದ್ದ ಒಂದು ಗುಂಡು, ನೌಕೆಯನ್ನು ಸೀಳಿ ಒಳಗೆ ಬಂದಿತು. ಕ್ಯಾಬಿನ್‌ ನಲ್ಲಿ ಮಲಗಿದ್ದ ಸೈಮನ್‌ನ ಕಾಲುಗಳಿಗೆ ತಾಕಿತು. ಜ್ವಾಲೆಯಿಂದ ಅದರ ಮುಖ ಮತ್ತು ಬೆನ್ನು ಸುಟ್ಟಿತು.

ಅಷ್ಟಾದರೂ ಸೈಮನ್ ಧೃತಿಗೆಡದೆ ತನ್ನ ಡ್ಯೂಟಿ ಮುಂದುವರಿಸಿತ್ತು. ನೌಕೆಯಲ್ಲಿ ಆಹಾರ ಶೇಖರಣೆ ಕಡಿಮೆಯಾಗಿದ್ದರಿಂದ ಇಲಿಗಳಿಂದ ರಕ್ಷಿಸುವುದು ಮುಖ್ಯವಾಗಿತ್ತು. ನಾವಿಕರು ತಮಾಷೆಗಾಗಿ ‘ಮಾವೊತ್ಸೆತುಂಗ್’ ಎಂದು ಗುರುತಿಸಿದ್ದ ಒಂದು ದೊಡ್ಡ ಇಲಿಯನ್ನೂ ಸೈಮನ್ ಗಬಕ್ಕನೆ ಹಿಡಿದು ತಿಂದಿತು.

ಬಹುಮಾನವಾಗಿ ಅದಕ್ಕೆ ಅಮೇಥಿಸ್ಟ್ ರಿಬ್ಬನ್ ಮತ್ತು ಏಬಲ್ ಸೀ – ಕ್ಯಾಟ್ ಎಂಬ ಉಪಾಽಯ ಗೌರವ ಸಿಕ್ಕಿತು. 101 ದಿನಗಳ
ಕಾಲ ಒತ್ತೆಯಾಳಾಗಿದ್ದ ಅಮೇಥಿಸ್ಟ್ ನೌಕೆಯು ಚೀನಾದ ಬಿಗಿಮುಷ್ಟಿಯಿಂದ ಬಿಡಿಸಿಕೊಂಡು ಇಂಗ್ಲೇಂಡ್‌ಗೆ ಮರಳಿತು. ಸೈಮನ್ ಸೇರಿದಂತೆ ನಾವಿಕರಿಗೆಲ್ಲ ವಿಜಯಮಾಲೆಯ ಭವ್ಯ ಸ್ವಾಗತ. ಸೈಮನ್ ತೋರಿದ ಸಾಹಸಕ್ಕೆ ಬ್ರಿಟನ್ ಸರಕಾರದ ಶ್ರೇಷ್ಠ ಗೌರವ ವಾದ ಡಿಕಿನ್ ಮೆಡಲ್ ಪುರಸ್ಕಾರ. ಕೆಲ ವರ್ಷಗಳ ಬಳಿಕ ಸೈಮನ್ ಸತ್ತುಹೋದಾಗ ಸಕಲ ಸರಕಾರಿ ಮರ್ಯಾದೆ ಗಳೊಂದಿಗೆ ಅಂತ್ಯಸಂಸ್ಕಾರ.

ಇನ್ನೊಂದು ಉಲ್ಲೇಖಾರ್ಹ ಬೆಕ್ಕು, ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಸೇನೆಯು ಇರಾಕ್‌ನಿಂದ ಹಿಂದಿರುಗಿದಾಗ ಸಾರ್ಜೆಂಟ್ ರಿಕ್ ಬೌಸ್‌ಫೀಲ್ಡ್ ತನ್ನ ಜತೆಗೆ ಕರೆದುತಂದ ಹ್ಯಾಮ್ಮರ್ ಎಂಬ ಬೆಕ್ಕು. ಅದು ಈಜಿಪ್ಟಿಯನ್ ಮೌ ಎಂಬ ತಳಿಯದು. ಅದಕ್ಕೆ ಚಿರತೆಯಂತೆ ಮೈಮೇಲೆಲ್ಲ ಚುಕ್ಕಿಗಳು. ಬಗ್ದಾದ್‌ನಿಂದ 50 ಮೈಲು ದೂರದಲ್ಲಿ ಬಲಾಡ್ ಏರ್‌ಬೇಸ್‌ನಲ್ಲಿ ಅದು ಅಮೆರಿಕನ್ ಯೋಧರೊಂದಿಗೆ ವಾಸವಾಗಿತ್ತು.

ಇಲಿಗಳನ್ನು ಹಿಡಿಯುವುದಷ್ಟೇ ಅಲ್ಲದೆ, ಯುದ್ಧದಲ್ಲಿ ಬೆಂದು ಬಸವಳಿದ ಯೋಧರಿಗೆ ಸ್ಟ್ರೆಸ್ ರಿಲೀವರ್ ಆಗಿಯೂ ಅದು ಕೆಲಸ
ಮಾಡುತ್ತಿತ್ತು. ತಂಡದ ಒಬ್ಬ ಸದಸ್ಯನಂತೆಯೇ ಅದನ್ನು ನೋಡಿಕೊಳ್ಳಲಾಗುತ್ತಿತ್ತು. ಅಮೆರಿಕವು ಇರಾಕ್‌ನಿಂದ ಸೇನೆಯನ್ನು ಹಿಂದೆ ಕರೆಸಿದಾಗ ರಿಕ್ ಬೌಸ್‌ಫೀಲ್ಡ್‌ನಿಗೆ ಹ್ಯಾಮ್ಮರ್ ನನ್ನು ಬಿಟ್ಟುಬರುವುದು ತೀವ್ರ ದುಃಖವೆನಿಸಿತು. ಆತ ಅಮೆರಿಕದ
ಮಾರ್ಜಾಲಸಂರಕ್ಷಕ ಸಂಘಟನೆಗಳ ಸಹಾಯ ಕೋರಿದ.

ಅಧಿಕಾರಿಗಳ ಮನವೊಲಿಸಿದ. ಹ್ಯಾಮ್ಮರ್‌ನ ನಿರ್ವೀರ್ಯೀಕರಣ, ಅಮೆರಿಕವನ್ನು ಪ್ರವೇಶಿಸಬೇಕಿದ್ದರೆ ಕಡ್ಡಾಯವಾಗಿ
ಆಗಬೇಕಾದ ಚುಚ್ಚುಮದ್ದುಗಳು, ಸಂಬಂಧಿಸಿದ ಕಾಗದಪತ್ರ ಗಳು, ಕುವೈತ್‌ನಿಂದ ವಿಮಾನಯಾನ – ಇವೆಲ್ಲದರ ಖರ್ಚು
ಸರಿದೂಗಿಸಲು ಅಮೆರಿಕದ ಸಂಘಟನೆಗಳು 2500 ಡಾಲರ್‌ಗಳ ಮೊತ್ತ ಸಂಗ್ರಹಿಸಿದವು. ಕೊನೆಗೂ ಹ್ಯಾಮ್ಮರ್ ಕುವೈತ್‌ನಿಂದ
ಸ್ಯಾನ್‌ಫ್ರಾನ್ಸಿಸ್ಕೊಗೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಬಂದು ಅಲ್ಲಿಂದ ಕೊಲರಾಡೊ ಸ್ಪ್ರಿಂಗ್ ಪಟ್ಟಣಕ್ಕೆ ಡೊಮೆಸ್ಟಿಕ್
ಫ್ಲೈಟ್‌ನಲ್ಲಿ ಬಂತು.

ರಿಕ್ ಬೌಸ್‌ಫೀಲ್ಡ್‌ನ ಮನೆಯನ್ನು ತಲುಪಿತು. ಅಲ್ಲಿ ಆಗಲೇ ಇದ್ದ ಐದು ಬೆಕ್ಕುಗಳು ಮತ್ತು ಎರಡು ನಾಯಿಗಳು ಹ್ಯಾಮ್ಮರ್‌ನನ್ನು ತಮ್ಮೊಡನೆ ಸೇರಿಸಿಕೊಂಡವು. ರೋಚಕವಿದೆಯಲ್ಲವೇ ಬೆಕ್ಕುಗಳ ಕಥೆ? ಇನ್ನುಮುಂದೆ ನೀವು ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ? ಎಂದು ಕೇಳಿದರೆ, ‘ರಾಣಿಯ ಮಂಚದ ಕೆಳಗಡೆ ಕಂಡೆನು ಚಿಲಿಪಿಲಿ ಇಲಿಯೊಂದ…’ ಬದಲಿಗೆ ‘ರಣಾಂಗಣದಾ ನಡುವಲಿ ಕಂಡೆನು ಕೊಬ್ಬಿದ ಇಲಿಯೊಂದ…’ ಎಂಬ ಉತ್ತರ ಬಂದೀತು, ಗೊತ್ತಿರಲಿ!