Saturday, 23rd November 2024

ರಹಾನೆ ಅಜೇಯ ಅರ್ಧಶತಕ, ಇನ್ನಿಂಗ್ಸ್ ಮುನ್ನಡೆಯತ್ತ ಭಾರತ

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದ ಚಹಾ ವಿರಾಮದ ಹೊತ್ತಿಗೆ ಭಾರತ ತಂಡ, ನಾಯಕ ಅಜಿಂಕ್ಯ ರಹಾನೆ ಅಜೇಯ ಅರ್ಧಶತಕದ ನೆರವಿ ನಿಂದ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.

ಈಗ ಕ್ರೀಸಿನಲ್ಲಿರುವ ನಾಯಕ ಅಜಿಂಕ್ಯ ರಹಾನೆ (53*) ಹಾಗೂ ರವೀಂದ್ರ ಜಡೇಜ (4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸೀಸ್‌ನ 195 ರನ್‌ಗಳಿಗೆ ಉತ್ತರವಾಗಿ 36/1 ಎಂಬಲ್ಲಿದ್ದ ಎರಡನೇ ದಿನದಾಟ ಮುಂದುವರಿಸಿದ ಭಾರತ ತಂಡವನ್ನು ಡೆಬ್ಯು ಓಪನರ್ ಶುಭಮನ್ ಗಿಲ್ ಹಾಗೂ ಚೇತೇಶ್ವರ ಪೂಜಾರ ಮುನ್ನಡೆಸಿದರು. ಆಸೀಸ್ ಫೀಲ್ಡರ್‌ಗಳು ಕ್ಯಾಚ್ ಕೈಚೆಲ್ಲುವುದರೊಂದಿಗೆ ಗಿಲ್‌ಗೆ ಅದೃಷ್ಟ ಸಾಥ್ ನೀಡಿತು.

ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 65 ಎಸೆತಗಳನ್ನು ಎದುರಿಸಿದ ಗಿಲ್ ಎಂಟು ಬೌಂಡರಿಗಳಿಂದ 45 ರನ್ ಗಳಿಸಿದರು. ಈ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಭರವಸೆ ಮೂಡಿಸಿದರು. ಬೆನ್ನಲ್ಲೇ ಅನುಭವಿ ಚೇತೇಶ್ವರ ಪೂಜಾರ ಅವರಿಗೂ ಕಮಿನ್ಸ್ ಪೆವಿಲಿಯನ್ ಹಾದಿ ತೋರಿಸಿದರು. 17 ರನ್ ಗಳಿಸಿದ ಪೂಜಾರಗೆ ಮಗ ದೊಮ್ಮೆ ನಿರಾಸೆ ಕಾದಿತ್ತು.

ಬಳಿಕ ಜೊತೆಗೂಡಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ತಂಡವನ್ನು ಎಚ್ಚರಿಕೆಯಿಂದ ಮುನ್ನಡೆಸುವ ಪ್ರಯತ್ನ ಮಾಡಿದರು. ಊಟದ ವಿರಾಮದ ಹೊತ್ತಿಗೆ ಭಾರತ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು.

ಅತ್ತ ನಾಯಕನ ಆಟವಾಡಿದ ಅಜಿಂಕ್ಯ ರಹಾನೆ ತಂಡವನ್ನು ಇನ್ನಿಂಗ್ಸ್ ಮುನ್ನಡೆಯತ್ತ ಮುನ್ನಡೆಸಿದರು. ಇವರಿಗೆ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರಿಂದ ಉತ್ತಮ ಸಾಥ್ ದೊರಕಿತು.