Sunday, 15th December 2024

ಕನ್ನಡ ಕಾಳಜಿಯ ರಸಋಷಿ

ತನ್ನಿಮಿತ್ತ

ಎಲ್‌.ಪಿ.ಕುಲಕರ್ಣಿ

2020ರ ಡಿಸೆಂಬರ್ – 29ರಂದು ನಮ್ಮ ನಾಡು ಕಂಡ ಶ್ರೇಷ್ಠ ಕವಿ, ರಸ ಋಷಿ, ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ 116ನೇ ಜನ್ಮ ವರ್ಷಾಚರಣೆ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಎಂಬುದು ಅವರ ಪೂರ್ಣ ಹೆಸರು.

ಹುಟ್ಟಿದ್ದು 1904ರ ಡಿಸೆಂಬರ್ 29ರಂದು. ತಾಯಿಯ ತವರೂರು ಹಿರೇಕೋಡಿಗೆ, ಕೊಪ್ಪ ತಾಲೂಕು, ಚಿಕ್ಕಮಗಳೂರು ಜಿಲ್ಲೆ. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ. ಕುವೆಂಪು ಅವರ ಪ್ರಾಥಮಿಕ ಶಿಕ್ಷಣವು ಕೂಲಿಮಠದಲ್ಲಿ ಪ್ರಾರಂಭವಾಯಿತು. ಕೆಲವು ಸಮಯ ಕ್ರೈಸ್ತ ಪಂಗಡದ ಗುರುಗಳಿಂದಲೂ ಭೋದನೆಯಾಯಿತು.

ಇವರದು ಸುಸಂಸ್ಕೃತ ಕುಟುಂಬವಾದ್ದರಿಂದ ಮನೆಯಲ್ಲಿ ಆಗಿಂದ್ದಾಗೆ ನಡೆಯುತ್ತಿದ್ದ ಜೈಮಿನಿ ಭಾರತ, ರಾಮಾಯಣ, ಮಹಾ ಭಾರತದ ವಚನಗಳು ಬಾಲಕ ಕುವೆಂಪುವಿನ ಮೇಲೆ ಗಾಡವಾದ ಪ್ರಭಾವ ಬೀರಿದವು. ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯ ವನ್ನು ನೋಡುತ್ತಾ, ಅಲ್ಲಿ ದಟ್ಟವಾಗಿ ಬೆಳೆದ ತೋಪುಗಳಿಗೆ ಹೋಗುವುದು ಹೀಗೆ ಅವರ ಬಾಲ್ಯ ಜೀವನ ಸುಗಮವಾಗಿ ಸಾಗಿತು. 1918 ರಲ್ಲಿ ಪ್ರೌಢ ಶಿಕ್ಷಣಕ್ಕೆ ಅವರು ಮೈಸೂರಿಗೆ ಬಂದು ನೆಲೆಸಿದರು. ಹಾರ್ಡ್ವಿಕ್ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಅಲ್ಲಿರು ವಾಗಲೇ ಆಂಗ್ಲ ಸಾಹಿತ್ಯದ ಒಲವು ಬೆಳೆಸಿಕೊಂಡು ಹಲವಾರು ಆಂಗ್ಲ ಸಾಹಿತ್ಯದ ಪುಸ್ತಕಗಳನ್ನು ಓದಿಕೊಂಡು ಬೆಳೆದರು.

ಶಾಲೆಯಲ್ಲಿ ಜಾಣ ಹಾಗೂ ಉತ್ತಮ ಬರವಣಿಗೆ ವಿದ್ಯಾರ್ಥಿಯೆಂದು ಗುರುತಿಸಿಕೊಂಡರು. ಪ್ರಾರಂಭದಲ್ಲಿ ಅಂದರೆ 1920ರಲ್ಲಿ ಕುವೆಂಪು ಅವರು ಇಂಗ್ಲೀಷ್‌ನಲ್ಲಿ ಪದ್ಯರಚನೆಗೆ ತೊಡಗಿದರು. 1922ರಲ್ಲಿ ಬಿಗಿನರ್ಸ್ ಮ್ಯೂಸ್ ಎಂಬ ತಲೆಬರಹ ದೊಂದಿಗೆ ತಮ್ಮ ಆ ಪದ್ಯಗಳನ್ನು ಪ್ರಕಟಿಸಿದರು. ಇವರು ಮೊದಲು ಸಾಹಿತ್ಯಕ್ಕೆ ಪ್ರಭಾವಿ ಭಾಷೆ ಇಂಗ್ಲೀಷ್ ಎಂದು ಭಾವಿಸಿದ್ದರು. ಐರಿಷ್ ಕವಿ ಜೆ.ಎಚ್.ಕಸಿನ್ಸ್‌ ಎಂಬುವರು ಶ್ರೀರಂಗಪಟ್ಟಣಕ್ಕೆ ಬಂದಾಗ ಕುವೆಂಪು ತಾವು ರಚಿಸಿದ ಕವನ ಸಂಕಲನಗಳನ್ನು ತೋರಿಸಿ ದರು.

ಕಸಿನ್ಸ್ ಕವನಗಳನ್ನೊಮ್ಮೆ ನೋಡಿ ಕನ್ನಡದಲ್ಲಿ ಪದ್ಯ ರಚಿಸಲು ಸಲಹೆ ನೀಡಿದರು. ಆಗ ಕುವೆಂಪು ಇಂಗ್ಲೀಷಿನ ಹಾಗೆ ಕನ್ನಡ ದಲ್ಲಿ ಭಾವನೆಗಳನ್ನು ಮೂಡಿಸಲು ಸಾಧ್ಯವೇ? ಆ ಅಸಾಧಾರಣ ಸಾಮರ್ಥ್ಯ ಈ ಕನ್ನಡಕ್ಕಿದೆಯೇ ಎಂಬ ಸಂದೇಹ ವ್ಯಕ್ತ ಪಡಿಸಿದ್ದರು. ಇದನ್ನು ತಿಳಿದ ಕಸಿನ್ಸ್‌ ಹಾಗೆ ಭಾವಿಸಬೇಕಿಲ್ಲ. ಒಂದು ಭಾಷೆ ಮತ್ತೊಂದು ಭಾಷೆಗಿಂತ ಕೀಳೇನಲ್ಲ. ಪ್ರತಿಭೆಯುಳ್ಳ
ಜನ ಬಳಸಿದರೆ ಯಾವ ಭಾಷೆಯೂ ಪ್ರಭಾವ ಬೀರಬಲ್ಲದ್ದಾಗುತ್ತದೆ ಎಂದರು.

ಈ ಮಾತಿನಿಂದ ಪ್ರಭಾವಿತರಾದ ಕುವೆಂಪು ಆವತ್ತಿನಿಂದ ಕನ್ನಡದಲ್ಲಿ ಬರೆಯಲು ನಿರ್ಧರಿಸಿದರು. ಮೊದಲು ಸ್ವಾಮಿ
ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕೃತಿಗಳನ್ನು ಓದಿ ಅವರ ಆದರ್ಶಕ್ಕೆ ಒಳಗಾದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ತಾವೂ ಖಾದಿ ತೊಡಲು ಶುರು ಮಾಡಿದರು.

ಮೊದಲು ಅಮಲನ ಕಥೆ ಎಂಬ ಕನ್ನಡ ಪುಸ್ತಕ ಪ್ರಕಟಿಸಿದರು. ಇದೊಂದು ಕಾವ್ಯಕೃತಿಯಾಗಿ ಹೊರ ಹೊಮ್ಮಿತು. ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ ಅಲ್ಲಿನ ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್.ವೆಂಕಣ್ಣಯ್ಯ ಹಾಗೂ ಎ.ಆರ್. ಕೃಷ್ಣಶಾಸ್ತ್ರಿಗಳ
ಪ್ರೋತ್ಸಾಹದಿಂದ ಕನ್ನಡದ ಮೇಲಿನ ಅಭಿಮಾನ ಇವರಲ್ಲಿ ಇಮ್ಮಡಿಗೊಂಡಿತು. 1927ರಲ್ಲಿ ತತ್ವಶಾಸ್ತ್ರದೊಂದಿಗೆ ಬಿ.ಎ ಪಾಸು ಮಾಡಿಕೊಂಡು ಟಿ.ಎಸ್.ವೆಂಕಣ್ಣಯ್ಯನವರ ಒತ್ತಾಯಕ್ಕೆ ಮಣಿದು ಕನ್ನಡ ಎಂ.ಎ ತರಗತಿ ಸೇರಿದರು.

1928ರಲ್ಲಿ ಪ್ರಸಿದ್ಧ ಕೃತಿ ಬೊಮ್ಮನಹಳ್ಳಿ ಕಿಂದರಜೋಗಿ ಪ್ರಕಟವಾಗಿ ಕುವೆಂಪು ಕನ್ನಡ ನಾಡಿನಲ್ಲಿ ಹೆಸರುವಾಸಿಯಾದರು. 1929ರಲ್ಲಿ ಕೋಲ್ಕತಾಗೆ ಹೋಗಿ ಸ್ವಾಮಿ ವಿವೇಕಾನಂದರ ಕೊಠಡಿ ದರ್ಶನ ಪಡೆದು ತಾವೂ ವಿರಕ್ತರಂತೆ ಬ್ರಹ್ಮಚಾರಿಯಾಗಿ
ಉಳಿಯುವಂತೆ ನಿರ್ಧರಿಸಿ ಏಳೆಂಟು ವರ್ಷಗಳು ಹಾಗೇ ನಡೆದುಕೊಂಡರು. ಮುಂದೆ ಎಂ.ಎ ಮುಗಿಸಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾಾರ್ಥಿಗಳಿಗೆ ಕನ್ನಡ ಬೋಧಿಸಿದರು.

1937ರಲ್ಲಿ ಹೇಮಾವತಿ ಯವರೊಂದಿಗೆ ವಿವಾಹವಾದರು. ಇಬ್ಬರು ಗಂಡು ಮಕ್ಕಳು ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇಂದುಕಲಾ, ತಾರಿಣಿ ಎಂಬ ನಾಲ್ಕು ಮಕ್ಕಳ ತಂದೆಯಾಗಿ ಸುಂದರ ಕುಟುಂಬ
ನಿರ್ವಹಿಸಿದರು. 1956 ರಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ ಮುಂದೆ 1960ರಲ್ಲಿ ಮಾನಸ ಗಂಗೋತ್ರಿ ಯನ್ನು ಸ್ಥಾಪಿಸಿದರು. ಇದರ ಮೂಲಕ ಕನ್ನಡ ಭಾಷೆ ವಿಷಯದ ಬಗ್ಗೆ ಬೋಧನಾ ತಳಹದಿ ಹಾಕಿದರು. ಮೈಸೂರಿನ ಪಬ್ಲಿಕ್
ಲೈಬ್ರರಿ ಅವರಿಗೊಂದು ತೀರ್ಥಕ್ಷೇತ್ರದಂತಿತ್ತು.

ಕುವೆಂಪು ದ್ವಿಭಾಷಾ ಸೂತ್ರ ಎತ್ತಿಹಿಡಿದರೂ ಅನ್ಯ ಭಾಷೆಗಳ ಮೇಲೆ ಎಂದೂ ಅಗೌರವ ತೋರಲಿಲ್ಲ. ಅವರಿಗೆ ಕರ್ನಾಟಕ ಹೇಗೋ ಭಾರತವೂ ಹಾಗೆ. ಕರ್ನಾಟಕ ಮಾತೆಯನ್ನು ಕುವೆಂಪು ಭಾರತ ಜನನಿಯ ತನುಜಾತೆ ಎಂದು ಹಾಡಿ ಹೊಗಳಿದರು.
ಎಲ್ಲಾದರೂ ಇರು; ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಜೈ ಭಾರತದ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಜಯ ಸುಂದರ ನದಿವನಗಳನಾಡೇ ಜಯ ಹೇ ರಸ ಋಷಿಗಳ ಬೀಡೆ…..

ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ. ಎಂಬ ಈ ಕವಿತೆಗಳು ಕುವೆಂಪು ಅವರ ಕನ್ನಡ
ಪ್ರೇಮವನ್ನು ಎತ್ತಿ ಹಿಡಿದವು. ಸಂಕುಚಿತ ಮನೋಭಾವ ಮುಂದುವರಿಸಿಕೊಂಡರೆ ನಮ್ಮ ನಾಶ ಕಟ್ಟಿಟ್ಟ ಬುತ್ತಿ, ಆದ್ದರಿಂದ ನಾವು ವಿಶ್ವ ಮಾನವರಾಗಬೇಕು ಎಂದು ಕುವೆಂಪು ಅವರು ತಮ್ಮ ಈ ಎರಡು ಸೂತ್ರಗಳನ್ನು ಹೇಳಿದರು. ಮನುಜ ಮತ,
ವಿಶ್ವಪಥ.

ಕುವೆಂಪು ಬಹುಮುಖ್ಯವಾಗಿ ವಿಚಾರಶೀಲ ವ್ಯಕ್ತಿಯಾಗಿದ್ದು ಕ್ರಾಂತಿಕಾರಕ ಮನೋಭಾವವುಳ್ಳವರಾಗಿದ್ದರು. ಸಮಾಜದಲ್ಲಿನ ಎಲ್ಲ ಬಗೆಯ ಅಸಮಾನತೆಗಳು ತೊಲಗಬೇಕು ಎಂದು ಅವರು ಪದ್ಯ ಹಾಗೂ ಗದ್ಯಗಳೆರಡರಲ್ಲೂ ವಾದಿಸಿದ್ದಾರೆ. ಮೌಢ್ಯವನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಜಾತಿ ಪದ್ಧತಿ ನಿರ್ಮೂಲನೆಗೊಳ್ಳದಿದ್ದರೆ ಜನರು ಉದ್ಧಾರಗೊಳ್ಳರು ಎಂದು ಅವರು ನಂಬಿದ್ದರು. ವಿಶ್ವಮಾನವ ಮಂತ್ರವನ್ನು ಅವರು ಸದಾ ಜಪಿಸುತ್ತಿದ್ದರು.

ಪ್ರಿಯ ಸತಿ ಮರಣ ಹೊಂದಿದ ಮೇಲೆ ಅವರು ಏಕಾಂಗಿಯಾದ ತಪಸ್ವಿಯಂತೆ ಬಾಳಿದರು. ಜಾತಿ, ದೇಶ, ಭಾಷೆಯ ಕಿರುಬಂಧನ ದಿಂದ ಮನುಷ್ಯ ಒಂದಲ್ಲ ಒಂದು ದಿನ ಹೊರಬಂದು ವಿಶಾಲವಾದ ವಿಶ್ವ ಮಾನವನಾಗುತ್ತಾನೆ ಎಂದು ಅವರು ವಿಶ್ವಾಸವಿಟ್ಟು
ಕೊಂಡಿದ್ದರು. ಕುವೆಂಪು ಕನ್ನಡ ವಸಂತವನದಲ್ಲಿ ಸದಾ ಕೂಜನ ಹಾಯಿಸುತ್ತಿರುವ ಕವಿ ಕೋಗಿಲೆಯಾಗಿದ್ದರು. ದರ್ಪ ದೌರ್ಜನ್ಯಗಳಿಗೆ ಎಂದೂ ತಲೆಬಾಗದ ಸ್ವಾಭಿಮಾನಿಗಳಾಗಿದ್ದರು. ವಸಂತವನದಲ್ಲಿ ಕೂಗುವ ಕೋಗಿಲೆ ರಾಜನ ಬಿರುದನ್ನು ಬಯಸುವುದಿಲ್ಲ ಎಂದು ಅವರು ಹಾಡಿದ್ದರು.

ಸಂಪ್ರದಾಯ ವಿರೋಧಿಗಳಾಗಿದ್ದರೂ ಪರಂಪರೆಗೆ ಬದ್ಧರಾಗಿದ್ದರು. ಅವರದ್ದು ಅನಿಕೇತನ ಪ್ರಜ್ಞೆ. ಅಂಧ ಸಂಪ್ರದಾಯವನ್ನು ಕಂಡರೆ ಕಿಡಿಕಿಡಿಯಾಗುತ್ತಿದ್ದರು. ಪಾಶ್ಚಾತ್ಯರಂತೆ ನಮ್ಮಲ್ಲಿ ವೈಚಾರಿಕ ಪ್ರಜ್ಞೆ ಮೂಡಿಲ್ಲ ಎಂದು ಮರುಗುತ್ತಿದ್ದರು. ವಿದ್ಯಾವಂತರು ಕೂಡಾ ವಿಚಾರಮತಿಗಳಾಗಿಲ್ಲ ಎಂದು ಖಂಡಿಸುತ್ತಿದ್ದರು. ಅವರು ಜನಿವಾರ ಹಾಕಿಕೊಳ್ಳಲಿಲ್ಲ. ತೀರ್ಥಗಳಿಗೆ ಯಾತ್ರೆ ಹೋಗಲಿಲ್ಲ. ಜ್ಯೋತಿಷ್ಯವನ್ನು ನಂಬಲಿಲ್ಲ. ಅಂತಹ ಕ್ರಾಂತಿಕಾರಕ ಮನೋಧರ್ಮ ಕುವೆಂಪು ಅವರದ್ದು.
ಕನ್ನಡಕ್ಕೆ ಕೀರ್ತಿ ತರುವಂತೆ ಕನ್ನಡಿಗರು ನಡೆದುಕೊಳ್ಳಬೇಕು. ನಾಡು ಒಂದಾಗಬೇಕು. ನುಡಿ ಒಂದಾಗಿ ಭಾವೈಕ್ಯತೆ ಬೆಳೆಯಬೇಕು ಎಂದು ಅವರು ಹಂಬಲಿಸಿದ್ದರು. ಕನ್ನಡ ಆಡಳಿತ ಭಾಷೆಯಾಗಬೇಕು, ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು ಎಂದು
ಅವರು ಆಶಿಸಿದ್ದರು.

ಹೀಗೆ ಕನ್ನಡದ ಶಕ್ತಿಯಾಗಿ, ರಕ್ಷೆಯಾಗಿ ನಿರ್ಭೀತಿಯಿಂದ ನುಡಿದು, ತಪಸ್ವಿಯಂತೆ ಬದುಕಿದ್ದವರು ರಾಷ್ಟ್ರಕವಿ ಕುವೆಂಪು. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿ ಈ ಪಂಚತಂತ್ರ ಮುಂದಿನ ದೃಷ್ಟಿಯಾಗಬೇಕು ಎಂದು ಅವರು ಬಯಸಿದ್ದರು. ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವುದೇ ಪೂರ್ಣ ದೃಷ್ಟಿ ಎಂದು ಅವರು ಭಾವಿಸಿದ್ದರು. 1994ರ ನವೆಂಬರ್ 10ರಂದು ಕನ್ನಡದ ಕಂಪನ್ನು ವಿಶ್ವಕ್ಕೆಲ್ಲಾ ಬೀರಿದ ಈ ಮಹಾಕವಿ ನಮ್ಮನ್ನೆಲ್ಲಾ ಅಗಲಿದರು.

ಶ್ರೀಕುವೆಂಪು ಎಂಬ ಕೃತಿಯಲ್ಲಿ ಕುವೆಂಪು ಅವರ ಮಗ ಖ್ಯಾತ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಹೀಗೆ ಹೇಳುತ್ತಾರೆ – ಕುವೆಂಪು ಅವರ ಎರಡು ಕಾದಂಬರಿ ಲೌಕಿಕ! ಅವರ ಮಹಾಕಾವ್ಯ ಅಲೌಕಿಕ!. ಹಾಗೆಯೇ ಇನ್ನು ಕುವೆಂಪು ಅವರ ಬರಹದಲ್ಲಿ ಪರಿಸರದ
ಚಿತ್ರಣ, ಪಶ್ಚಿಮ ಘಟ್ಟದ ಸೊಬಗು, ಅಲ್ಲಿನ ಜನರ ಬದುಕು – ಬವಣೆ ಎಲ್ಲವೂ ಎದ್ದು ಕಾಣುತ್ತಿದ್ದವು. ಹೀಗಾಗಿಯೇ ‘ಅಮೂರ್ತ ಪರಿಸರ’ ಕೃತಿಯಲ್ಲಿ ಸಾಹಿತಿ ರಾಜೇಂದ್ರ ಚೆನ್ನಿ ಕುವೆಂಪು ಕುರಿತು ಹೀಗೆ ಹೇಳುತ್ತಾರೆ-’ ಕುವೆಂಪು ಕಾದಂಬರಿಗಳಲ್ಲಿ ಪರಿಸರ
ಚಿತ್ರಣ ಪ್ರಮುಖವಾದರೆ, ಅವರ ಕಾವ್ಯ ಮತ್ತು ಮಹಾಕಾವ್ಯಗಳು ಅಮೂರ್ತ!.

ಅಲ್ಲದೇ ನಾಡಿನ ಹಿರಿಯರಾದ ಕೀರ್ತಿನಾಥ ಕುರ್ತುಕೋಟಿಯವರು – ಕುವೆಂಪು ಈ ತಲೆಮಾರಿನ ಹಿರಿಯ ಕವಿಗಳಲ್ಲೊಬ್ಬ ರಾಗಿದ್ದಾರೆ. ರಚನಾ ಕ್ರಮದಲ್ಲಿ ದೋಷಗಳನ್ನು ತೋರಿಸಬಹುದಾದರೂ ಅವರ ಕಾವ್ಯಶಕ್ತಿ ಸಹಜವಾದದ್ದು. ಅದು ಮುಖ್ಯವಾಗಿ
‘ರೊಮ್ಯಾಂಟಿಕ್’ ಜಾತಿಯ ಪ್ರತಿಭೆಯಾಗಿದ್ದರಿಂದ ಭಾವಾವೇಶ ಅಲ್ಲಿ ಅನಿವಾರ್ಯವಾಗುತ್ತದೆ. ಆದರೆ ಕುವೆಂಪುರವರ ಕಾವ್ಯದ ಶ್ರೇಷ್ಠತೆಯಿರುವುದು ಅದು ಸಮಕಾಲೀನ ಜೀವನದ ಎಲ್ಲ ಅಂಶಗಳಿಗೂ ಪ್ರತಿಸ್ಪರ್ಧಿಯಾಯಿತೆಂಬುದೇ.

ನಿಸರ್ಗದ ಚೆಲುವು, ದೇಶ ಪ್ರೇಮ, ಆದರ್ಶಪ್ರಿಯತೆ, ಕ್ರಾಂತಿಯ ವೀರಭಾವ, ಅಧ್ಯಾತ್ಮಿಕತೆ ಮೊದಲಾದ ಎಲ್ಲ ವಿಷಯಗಳಿಗೂ ಅವರ ಕಾವ್ಯ ಇಂಬುಕೊಟ್ಟಿದೆ. ಹೀಗಾಗಿ ಹೊಸಗನ್ನಡ ಕಾವ್ಯದ ಇತಿಹಾಸದಲ್ಲಿ ಅವರ ಸ್ಥಾನ ಭದ್ರವಾಗಿದೆಯೆಂಬುದರಲ್ಲಿ  ಯಾವ ಸಂಶಯವೂ ಇಲ್ಲ. ತಾರುಣ್ಯದಲ್ಲೇ ಪೆನ್ನು ಹಿಡಿದ ಕುವೆಂಪು ಎಪ್ಪತ್ತನೆಯ ವಯಸ್ಸಿನ ಹೊತ್ತಿಗೆ ತಮ್ಮ ಪ್ರಮುಖ  ಕೃತಿಗಳನ್ನೆಲ್ಲ ಬರೆದಿದ್ದರು. ಎಂಬತ್ತರ ವಯಸ್ಸಿನಲ್ಲಿ ನೆನಪಿನ ದೋಣಿಯಲ್ಲಿ’ ಆತ್ಮಕತೆಯ ಪಯಣವನ್ನು ನಿಲ್ಲಿಸಿದ ಅವರು ಸಾಹಿತ್ಯದ ಎಲ್ಲ ಮೂಲ ಪ್ರಕಾರಗಳಲ್ಲೂ ಬರೆದಿದ್ದರು.

ಕುವೆಂಪು ಬರಹಗಳು ಹತ್ತಿರ ಹತ್ತಿರ ಹನ್ನೆರಡು ಸಾವಿರ ಪುಟಗಳಷ್ಟಾಗುತ್ತದೆ. ಇನ್ನೂ ಪ್ರಕಟವಾಗಬೇಕಾದ ಬರಹಗಳಿವೆ. ಮುದ್ರಿತ ರೂಪದಲ್ಲೂ, ಇದೀಗ ಮೊದಲ ಬಾರಿಗೆ ಡಿಜಿಟಲ್ … (https://play.google. com/store/books/author?id=kuvempu) ರೂಪದಲ್ಲೂ ಕೆ.ಸಿ.ಶಿವಾರೆಡ್ಡಿಯವರ ಸಂಪಾದಕತ್ವದಲ್ಲಿ ಕನ್ನಡ ವಿಶ್ವವಿದ್ಯಾಲಯ ಹೊರತಂದಿರುವ
ಕುವೆಂಪು ಸಮಗ್ರ ಬರಹಗಳ 12 ಸಂಪುಟಗಳಲ್ಲಿರುವ ಬರಹಗಳ ಆಳ, ವ್ಯಾಪ್ತಿ ವಿಸ್ಮಯ ಹುಟ್ಟಿಸುತ್ತದೆ.

ಆಧುನಿಕ ಕನ್ನಡದ ಮಹಾಕವಿಯೊಬ್ಬ ಎಪ್ಪತ್ತು ವರ್ಷಗಳ ಕಾಲ ತನ್ನ ಕೈ ಬರಹದಲ್ಲೇ ಬರೆದ ಈ ಕೃತಿಗಳು ಹಬ್ಬಿಸುತ್ತಲೇ ಬಂದಿರುವ ಆರೋಗ್ಯಕ್ಕೆ ಕನ್ನಡಿಗರು ಕೃತಜ್ಞರಾಗಿರಬೇಕು. ಕರ್ನಾಟಕ ಸರಕಾರವು 2015ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನ ವಾದ ಡಿಸೆಂಬರ್-29ನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಇದು ಈ ಮಹಾನ್ ಚೇತನಕ್ಕೆ ಕೊಟ್ಟ ಅತಿ ದೊಡ್ಡ ಗೌರವ ಅಲ್ಲವೇ.

1920ರಲ್ಲಿ ಕುವೆಂಪು ಅವರು ಇಂಗ್ಲೀಷ್‌ನಲ್ಲಿ ಪದ್ಯರಚನೆಗೆ ತೊಡಗಿದರು. 1922ರಲ್ಲಿ ಬಿಗಿನರ್ಸ್ ಮ್ಯೂಸ್ ಎಂಬ ತಲೆಬರಹ ದೊಂದಿಗೆ ತಮ್ಮ ಆ ಪದ್ಯಗಳನ್ನು ಪ್ರಕಟಿಸಿದರು. ಇವರು ಮೊದಲು ಸಾಹಿತ್ಯಕ್ಕೆ ಪ್ರಭಾವಿ ಭಾಷೆ ಇಂಗ್ಲೀಷ್ ಎಂದು ಭಾವಿಸಿ ದ್ದರು. ಐರಿಷ್ ಕವಿ ಜೆ.ಎಚ್.ಕಸಿನ್ಸ್‌ ಎಂಬುವರು ಶ್ರೀರಂಗಪಟ್ಟಣಕ್ಕೆ ಬಂದಾಗ ಕುವೆಂಪು ತಾವು ರಚಿಸಿದ ಕವನ ಸಂಕಲನ ಗಳನ್ನು ತೋರಿಸಿದರು. ಕಸಿನ್ಸ್‌ ಕವನಗಳನ್ನೊಮ್ಮೆನೋಡಿ ಕನ್ನಡದಲ್ಲಿ ಪದ್ಯ ರಚಿಸಲು ಸಲಹೆ ನೀಡಿದರು.

ಪ್ರಮುಖ ಕೃತಿಗಳು
ಶ್ರೀರಾಮಾಯಣ ದರ್ಶನಂ, ಚಿತ್ರಾಂಗದಾ, ಕೊಳಲು, ಪಾಂಚಜನ್ಯ, ನವಿಲು, ಕಲಾಸುಂದರಿ, ಕಥನಗಳು, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಪ್ರೇಮ ಕಾಶ್ಮೀರ, ಅಗ್ನಿಹಂಸ, ಕೃತ್ತಿಕೆ, ಪಕ್ಷಿಕಾಶಿ, ಸನ್ಯಾಸಿ ಮತ್ತು ಇತರ ಕಥೆಗಳು, ನನ್ನ ದೇವರು ಮತ್ತು ಇತರ ಕಥೆಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಹೀಗೆ ಹತ್ತು ಹಲವು.

ಪ್ರಶಸ್ತಿಗಳು
*ಕೇಂದ್ರ ಸಾಹಿತ್ಯ ಅಕಾಡೆಮಿ – 1955.
*ಮೈಸೂರು ವಿಶ್ವವಿದ್ಯಾಲಯ ಗೌರವ ಡಿ.ಲಿಟ್ – 1956.
*ಪದ್ಮ ಭೂಷಣ – 1958.
*ರಾಷ್ಟ್ರಕವಿ ಪುರಸ್ಕಾರ – 1964.
*ಕರ್ನಾಟಕ ವಿಶ್ವ ವಿದ್ಯಾಲಯದಿಂದ ಗೌರವ ಡಿ.ಲಿಟ್ – 1966.
*ಜ್ಞಾನ ಪೀಠ ಪ್ರಶಸ್ತಿ – 1968.
*ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ – 1969.
*ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ – 1979.
*ಪಂಪ ಪ್ರಶಸ್ತಿ – 1988.
*ಪದ್ಮ ವಿಭೂಷಣ – 1989.
*ಕರ್ನಾಟಕ ರತ್ನ -1992.
*ನಾಡೋಜ ಪ್ರಶಸ್ತಿ (ಮರಣೋತ್ತರ).
*1957ರಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವ ಸ್ವೀಕಾರ.