Friday, 1st November 2024

ಕಾರಜೋಳ ಸಿಎಂ ಹುದ್ದೆಯನ್ನು ಎರಡೆರಡು ಬಾರಿ ಮುಂದೂಡಿದ್ದೇಕೆ ?

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಒಮ್ಮೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ದೆಹಲಿಗೆ ಹೋದರು. ಹೀಗೆ ಹೋದವರು ತಮ್ಮ ಬಳಿ ಇದ್ದ ಲೋಕೋಪ  ಯೋಗಿ ಮತ್ತು ಸಮಾಜ ಕಲ್ಯಾಣ ಖಾತೆಗೆ ಸಂಬಂಧಿಸಿದ ಪ್ರಪೋಸಲ್ಲುಗಳನ್ನು ಸಂಬಂಧ ಪಟ್ಟವರಿಗೆ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ನರೇಂದ್ರಮೋದಿ ಸಂಪುಟದಲ್ಲಿ ಮಂತ್ರಿಯಾಗಿದ್ದ ಜೆ.ಪಿ.ನಡ್ಡಾ ಅವರಿಂದ ದೂರವಾಣಿ ಕರೆ ಬಂತು.
ಹೇಗಿದ್ದರೂ ದಿಲ್ಲಿಗೆ ಬಂದಿದ್ದೀರಿ. ನಿಮ್ಮ ಬಳಿ ಮಾತನಾಡುವುದಿದೆ. ಬಂದು ಹೋಗಿ ಎಂದರು.

ಸರಿ, ಗೋವಿಂದ ಕಾರಜೋಳ ಅವರು ತಮ್ಮ ಕೆಲಸ ಮುಗಿಸಿ ಜೆ.ಪಿ.ನಡ್ಡಾ ಅವರನ್ನು ನೋಡಲು ಹೋದರು. ಹೀಗೆ ಬಂದ ಕಾರಜೋಳ ಅವರನ್ನು ಸ್ವಾಗತಿಸಿದ ನಡ್ಡಾ ಮಾತುಕತೆಗೆ ಕುಳಿತಾಗ ನೇರವಾಗಿ ವಿಷಯಕ್ಕೆ ಬಂದರು. ಕಾರಜೋಳ ಜೀ,  ನಿಮ ಗೊಂದು ವಿಷಯ ಹೇಳಬೇಕು ಎಂದು ಕರೆಸಿದೆ. ಅಂದ ಹಾಗೆ ಪ್ರಧಾನಿ ಮೋದಿ ಯವರಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರಿಗೆ ಒಂದು ಯೋಚನೆ ಯಿದೆ.

ಈ ದೇಶದ ಮೂರು ಅಥವಾ ನಾಲ್ಕು ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿದ ನಾಯಕರನ್ನು ಮುಖ್ಯಮಂತ್ರಿ ಹುದ್ದೆ ಗೇರಿಸಬೇಕು. ಆ ಮೂಲಕ ದೇಶದ ಜನತೆಗೆ ಒಂದು ಪಾಸಿಟಿವ್ ಸಂದೇಶ ರವಾನೆಯಾಗಬೇಕು ಎಂಬುದು ಆ ಯೋಚನೆ. ಇವತ್ತು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಕೂಗು ಶುರುವಾಗಿದೆ. ಪರಿಸ್ಥಿತಿ ನೋಡಿದರೆ ಇದು ಯಾವ ಹಂತದಲ್ಲಾ ದರೂ ವಿಕೋಪಕ್ಕೆ ಹೋಗಬಹುದು. ಅಂತಹ ಸಂದರ್ಭದಲ್ಲಿ ಪರ್ಯಾಯವಾಗಿ ಯಾರನ್ನು ತರಬೇಕು ಎಂದು ಯೋಚಿಸುವು
ದಕ್ಕಿಂತ ಈಗಲೇ ಯೋಚಿಸುವುದು ಒಳ್ಳೆಯದು ಎಂಬುದು ಈ ನಾಯಕರ ಭಾವನೆ.

ಅವರ ಲೆಕ್ಕಾಚಾರದ ಪ್ರಕಾರ ಯಡಿಯೂರಪ್ಪ ಅವರು ಕೆಳಗಿಳಿಯುವ ಸನ್ನಿವೇಶ ಸೃಷ್ಟಿಯಾದರೆ ಮುಂದಿನ ಮುಖ್ಯಮಂತ್ರಿ ಯಾಗಲು ನೀವು ಸಿದ್ಧರಾಗಿರಬೇಕು. ಇದನ್ನು ಹೇಳಬೇಕೆಂದೇ ನಿಮ್ಮನ್ನು ಇಲ್ಲಿ ಕರೆಸಿದೆ ಎಂದರು ಜೆ.ಪಿ.ನಡ್ಡಾ. ಹೀಗೆ ನಡ್ಡಾ ಅವರಾಡಿದ ಮಾತು ಕೇಳಿದ ಗೋವಿಂದ ಕಾರಜೋಳ ತುಂಬ ವಿನಯದಿಂದ ನಡ್ಡಾಜೀ, ನನ್ನನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ವರಿಷ್ಠರ ಚಿಂತನೆಗೆ ನಾನು ಆಭಾರಿಯಾಗಿದ್ದೇನೆ ಎಂದು ಕೈ ಮುಗಿದರು.

ಹಾಗೆಯೇ ಮುಂದುವರಿದು, ಈ ಮಧ್ಯೆಯೂ ನಿಮಗೊಂದು ಮಾತು ಹೇಳುವುದು ನನ್ನ ಕರ್ತವ್ಯ. ಅದೆಂದರೆ, ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಯೋಚನೆ ನಿಶ್ಚಿತವಾಗಿ ದುಬಾರಿಯಾಗುತ್ತದೆ ನಡ್ಡಾಜಿ ಎಂದರು.
ಅವರ ಮಾತು ಕೇಳಿದ ನಡ್ಡಾ ವಿಸ್ಮಿತರಾಗಿ ನೋಡುತ್ತಿದ್ದರೆ ಮುಂದುವರಿದ ಕಾರಜೋಳ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದ್ದರೆ ಅದಕ್ಕೆ ಯಡಿಯೂರಪ್ಪ ಅವರು ನೇರ ಕಾರಣ.

ರಾಜ್ಯ ಬಿಜೆಪಿಯಲ್ಲಿ ಅವರನ್ನು ಸರಿಗಟ್ಟುವ ಜನ ನಾಯಕ ಇಲ್ಲ. ಹೀಗಾಗಿ ಏನೇ ಹೆಚ್ಚು ಕಡಿಮೆಯಾದರೂ ಪಕ್ಷಕ್ಕೆ ಹಾನಿ ಯಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಅವರನ್ನು ಬದಲಿಸುವುದು ಬೇಡ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಹಿಂದೆ
ಕರ್ನಾಟಕದಲ್ಲಿ ಒಂದು ಬೆಳವಣಿಗೆ ನಡೆದಿತ್ತು. ಆ ಸಂದರ್ಭದಲ್ಲಿ ವೀರೇಂದ್ರಪಾಟೀಲರು ಕರ್ನಾಟಕದ  ಮುಖ್ಯಮಂತ್ರಿಯಾಗಿ ದ್ದರು. ಮರು ವರ್ಷವೇ ಅವರನ್ನು ಪಕ್ಷ ಅಧಿಕಾರದಿಂದ ಕೆಳಗಿಳಿಸಿತು. ಅದಕ್ಕೆ ಅವರೇನೇ ಕಾರಣ ಕೊಟ್ಟರೂ ವೀರೇಂದ್ರ ಪಾಟೀಲರ ಮನವೊಲಿಸಿ ಆ ಕೆಲಸವನ್ನು ಕಾಂಗ್ರೆಸ್ ವರಿಷ್ಠರು ಮಾಡಬೇಕಿತ್ತು. ಹಾಗೆ ಮಾಡದ ಪರಿಣಾಮವಾಗಿ ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಇವತ್ತಿಗೂ ಕಾಂಗ್ರೆಸ್‌ನಿಂದ ದೂರವಿದೆ.

ನಾಳೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಬಿಜೆಪಿಗೂ ಅದೇ ಸ್ಥಿತಿ ಬರಬಹುದು. ಅವರ ಜಾಗಕ್ಕೆ ಯಾರು ಬರಬೇಕು ಎಂಬು ದನ್ನು ಹೈಕಮಾಂಡ್ ತೀರ್ಮಾನಿಸಲಿ. ಆದರೆ ಅದೇ ಕಾಲಕ್ಕೆ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದರೆ ಗಂಭೀರ ಹಾನಿಯಾಗುತ್ತದೆ ಎಂಬ ನನ್ನ ಅಭಿಪ್ರಾಯವನ್ನು ನೀವು ವರಿಷ್ಠರಿಗೆ ತಲುಪಿಸಿ ಎಂದರು ಗೋವಿಂದ ಕಾರಜೋಳ.
ಅವರ ಮಾತು ಕೇಳಿದ ಜೆ.ಪಿ.ನಡ್ಡಾ ನಗುತ್ತಾ, ಇದೇನು ಕಾರಜೋಳ, ಮುಂದಿನ ಮುಖ್ಯಮಂತ್ರಿಯಾಗಲು ರೆಡಿ ಆಗಿ ಎಂದು ಬೇರೆಯವರಿಗೇನಾದರೂ ನಾನು ಹೇಳಿದ್ದರೆ ಅವರು ತಕ್ಷಣವೇ ಅಣಿಯಾಗುತ್ತಿದ್ದರು.

ಆದರೆ ನೀವು ಅಣಿಯಾಗುವುದಿರಲಿ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎನ್ನುತ್ತಿದ್ದೀರಿ ಎಂದು
ಪ್ರಶ್ನಿಸಿದರು. ಆಗ ಕಾರಜೋಳರು ಸೌಜನ್ಯದ ನಗು ಬೀರಿ ಪಕ್ಷ ನನ್ನನ್ನು ಗುರುತಿಸಿ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ. ಅದಕ್ಕೆ ನಾನು ಕೃತಜ್ಞ, ಆದರೆ ಇದು ಸಿಕ್ಕಿದೆ ಎಂದು ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣು ಹಾಕುವ ಕೆಲಸ ಮಾಡಲಾರೆ. ನನಗೆ ಅಧಿಕಾರ ಸಿಗಲಿ, ಬಿಡಲಿ, ಆದರೆ ಪಕ್ಷ, ಸರಕಾರ ಮುಖ್ಯ ಎಂದರು.

ಇದೇ ರೀತಿ ಗೋವಿಂದ ಕಾರಜೋಳ ಹಿಂದಿದ್ದ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದರು. ಇನ್ನೇನು 2013ರ ವಿಧಾನಸಭಾ ಚುನಾವಣೆ ಹತ್ತಿರ ಬಂತು ಎನ್ನುವಾಗ ಬಿಜೆಪಿಯ ಹಿರಿಯ ನಾಯಕ ಅನಂತ ಕುಮಾರ್ ಅವರು ಕಾರಜೋಳ ಅವರನ್ನು ಭೇಟಿ
ಮಾಡಿದರು. ಗೋವಿಂದ ಕಾರಜೋಳ ದಲಿತ ವರ್ಗದ ಎಡಗೈ ಸಮುದಾಯಕ್ಕೆ ಸೇರಿದವರು. ದಲಿತರಲ್ಲಿ ಬಲಗೈ ಸಮುದಾಯ ದವರು ರಾಜಕೀಯವಾಗಿ ಪ್ರಬಲರಾದರೆ, ಸಂಖ್ಯೆಯಲ್ಲಿ ಎಡಗೈ ಪಂಗಡದವರು ಹೆಚ್ಚು.

ಮೀಸಲಾತಿಯ ಲಾಭವನ್ನು ಬಲಗೈನವರು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಎಡಗೈನವರು ಸಂಕಷ್ಟದ
ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ದಲಿತರ ಮೀಸಲಾತಿಯಲ್ಲಿ ಒಳಮೀಸಲಾತಿ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಕೂಗು  ಮುಂಚಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬಲಗೈನವರ ಪ್ರಭಾವ ಹೆಚ್ಚಿರುವುದರಿಂದ ಅವರು ಒಳಮೀಸಲಾತಿ ವ್ಯವಸ್ಥೆ ರೂಪುಗೊಳ್ಳಲು ಬಿಡುತ್ತಿಲ್ಲ ಎಂಬುದು ಎಡಗೈ ಸಮುದಾಯದ ಆರೋಪ.

ಇದೇ ಕಾರಣಕ್ಕಾಗಿ ದಲಿತರಲ್ಲಿ ಎಡಗೈನವರು 2004ರ ವಿಧಾನಸಭಾ ಚುನಾವಣೆಯ ವೇಳೆಗೆ ಬಿಜೆಪಿಯ ಕಡೆ ವಾಲಿಕೊಂಡರು. ಅವರು ಬಿಜೆಪಿಯತ್ತ ಹೆಚ್ಚು ಆಕರ್ಷಿತರಾಗಲು ಮುಖ್ಯ ಕಾರಣ, ಆ ಸಮುದಾಯದ ಗೋವಿಂದ ಕಾರಜೋಳ, ರಮೇಶ್
ಜಿಗಜಿಣಗಿ ಸೇರಿದಂತೆ ಹಲ ನಾಯಕರು ಬಿಜೆಪಿ ಪಾಳೆಯದ ಮುಂಚೂಣಿಗೆ ಬಂದು ನಿಂತಿದ್ದು. ಗಮನಿಸಬೇಕಾದ ಸಂಗತಿ ಎಂದರೆ ಎಡಗೈ ಸಮುದಾಯದ ನಾಯಕರು ಹೀಗೆ ಬಿಜೆಪಿಯತ್ತ ಆಕರ್ಷಿತರಾಗಲು ಮುಖ್ಯ ಕಾರಣ ಅನಂತ ಕುಮಾರ್.

ಜಾತಿ ಲೆಕ್ಕಾಚಾರದಲ್ಲಿ ಮಾಸ್ಟರ್ ಆಗಿದ್ದ ಅನಂತ ಕುಮಾರ್ ಇದೇ ಕಾರಣಕ್ಕಾಗಿ 2013ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾರಜೋಳರನ್ನು ಭೇಟಿ ಮಾಡಿದರು. ಹೀಗೆ ಭೇಟಿ ಮಾಡಿದವರು ಕಾರಜೋಳ ಅವರೇ, ಯಡಿಯೂರಪ್ಪ ಅವರು ಪಕ್ಷ ತೊರೆದು ಈಗಾಗಲೇ ಕೆಜೆಪಿ ಕಟ್ಟುತ್ತಿದ್ದಾರೆ. ಇಂತಹ ಕಾಲದಲ್ಲಿ ಬಿಜೆಪಿಗೆ ಅನುಕೂಲವಾಗಬೇಕು ಎಂದರೆ ನೀವು ಪಕ್ಷದ
ರಾಜ್ಯಾಧ್ಯಕ್ಷರಾಗಬೇಕು ಎಂದರು. ಅನಂತ ಕುಮಾರ್ ಅವರ ಈ ಮಾತನ್ನು ಕೇಳಿದ ಕಾರಜೋಳ ಅವರು ಸಾರ್, ಈ ಹುದ್ದೆ ಯನ್ನು ನಿರ್ವಹಿಸಲು ಅಪಾರ ಸಂಪನ್ಮೂಲ ಬೇಕು.ಅಷ್ಟು ಹಣ ಹೊಂದಿಸಿ,ಪಕ್ಷ ಮುನ್ನಡೆಸುವುದು ನನ್ನಿಂದ ಸಾಧ್ಯವಿಲ್ಲ.

ಹೀಗಾಗಿ ಈ ಜವಾಬ್ದಾರಿ ನನಗೆ ಬೇಡ ಎಂದು ಕೈ ಮುಗಿದರು. ಆದರೆ ಜಗ್ಗದ ಅನಂತಕುಮಾರ್ ಪಕ್ಷ ಮುನ್ನಡೆಸಲು
ಅಗತ್ಯವಾದ ಸಂಪನ್ಮೂಲವನ್ನು ನಾವು ನೋಡಿಕೊಳ್ಳುತ್ತೇವೆ. ಹೇಗಿದ್ದರೂ ಇರುವುದೇ ನಮ್ಮ ಸರಕಾರ. ಹೀಗಾಗಿ ಹಣಕಾಸಿನ ಬೆಂಬಲ ನೀಡಲು ಹಲವು ನಾಯಕರಿದ್ದಾರೆ. ನೀವೇಕೆ ಅದರ ಬಗ್ಗೆ ಚಿಂತೆ ಮಾಡುತ್ತೀರಿ? ಇವತ್ತು ಅಧ್ಯಕ್ಷರಾದರೆ ನಾಳೆ ನೀವು
ಸಿಎಂ ಹುದ್ದೆಯ ಕ್ಯಾಂಡಿಡೇಟ್ ಎಂಬುದನ್ನು ಮರೆಯಬೇಡಿ ಎನ್ನುತ್ತಾರೆ.

ಆಗ ನೇರವಾಗಿ ವಿಷಯಕ್ಕೆ ಬಂದ ಗೋವಿಂದ ಕಾರಜೋಳ ಹೇಳುತ್ತಾರೆ. ಸಾರ್, ಏನೇ ಇದ್ದರೂ ಈ ಜವಾಬ್ದಾರಿ ನನಗೆ ಬೇಡ. ಯಾಕೆಂದರೆ ದಲಿತ ಸಮುದಾಯದ ನಾಯಕ ಡಾ.ಜಿ. ಪರಮೇಶ್ವರ್ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಒಂದು
ವೇಳೆ ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಕಣಕ್ಕಿಳಿದರೆ ಆ ಸಮುದಾಯದ ಮತಗಳು ಒಡೆಯುತ್ತವೆ. ಹಾಗೊಂದು ವೇಳೆ ದಲಿತ ಸಮುದಾಯದ ಮತಗಳು ಒಡೆದು ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಾರದೆ ಹೋದರೆ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ದಲಿತ ಸಮುದಾಯಕ್ಕೆ ಸೇರಿದ ನಾಯಕರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವನ್ನು ನಾನು ತಪ್ಪಿಸಿ ದಂತಾಗುತ್ತದೆ.

ಅಂತಹ ಕಳಂಕವನ್ನು ಹೊರುವುದು ನನಗಿಷ್ಟವಿಲ್ಲ ಸಾರ್. ಗೋವಿಂದ ಕಾರಜೋಳ ಅವರಾಡಿದ ಈ ಮಾತುಗಳನ್ನು ಕೇಳಿ
ಜಾತಿ ಲೆಕ್ಕಾಚಾರದಲ್ಲಿ ಮಾಸ್ಟರ್ ಅನ್ನಿಸಿಕೊಂಡ ಅನಂತಕುಮಾರ್ ಮೂಕ ವಿಸ್ಮಿತರಾಗಿ ನಿಲ್ಲುತ್ತಾರೆ.