Saturday, 23rd November 2024

ಇನ್ನೆರಡು ದಿನಗಳಲ್ಲಿ ಐಟಿ ರಿಟರ್ನ್​ ಸಲ್ಲಿಕೆ ಮಾಡದಿದ್ದರೆ ಬೀಳುತ್ತೆ ಫೈನ್

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವುದನ್ನು ಜುಲೈ 31ರಿಂದ ಡಿಸೆಂಬರ್​ 31ರವರೆಗೆ ಮುಂದೂಡಲಾಗಿತ್ತು. ಹಲವರು ಇನ್ನೂ ಆದಾಯ ತೆರಿಗೆ (ಐಟಿಆರ್​) ಸಲ್ಲಿಕೆ ಮಾಡಿಲ್ಲ. ಇಲ್ಲದಿದ್ದರೆ ಬೀಳಬಹುದು 10 ಸಾವಿರ ರೂಪಾಯಿ ದಂಡ!

ಇಷ್ಟು ವರ್ಷ ಐದು ಸಾವಿರ ರೂಪಾಯಿವರೆಗೆ ಇದ್ದ ದಂಡದ ಮೊತ್ತವನ್ನು ಈ ವರ್ಷ 10 ಸಾವಿರ ರೂಪಾಯಿಗೆ ಏರಿಕೆ ಮಾಡಲಾ ಗಿದೆ.

ಪ್ರಸಕ್ತ ಹಣಕಾಸು ವರ್ಷದ ನಿವ್ವಳ ಆದಾಯ ಐದು ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಇದ್ದಲ್ಲಿ ಐಟಿ ರಿಟರ್ನ್​ ಸಲ್ಲಿಕೆ ಮಾಡಬೇಕು. ಒಂದು ವೇಳೆ ಐದು ಲಕ್ಷ ರೂಪಾಯಿಗಿಂತ ಹೆಚ್ಚಿಗೆ ಆದಾಯ ಹೊಂದಿದ್ದು ಡಿ.31ರ ಒಳಗೆ ಅದನ್ನು ಪಾವತಿ ಮಾಡದೇ ಹೋದರೆ ಅಂಥವರಿಗೆ 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ. ಒಂದು ವೇಳೆ ಐದು ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇದ್ದು, ನೀವು ಐಟಿಆರ್​ ಫೈಲ್​ ಮಾಡದೇ ಹೋದರೆ ದಂಡದ ಮೊತ್ತ 1 ಸಾವಿರ ರೂಪಾಯಿ ಆಗಲಿದೆ.

2021ರ ಮಾರ್ಚ್​ ಅಂತ್ಯದವರೆಗೆ ಇದನ್ನು ಫೈಲ್​ ಮಾಡಲು ಅವಕಾಶವಿದೆ. ಆದರೆ ಡಿಸೆಂಬರ್​ 31ರ ನಂತರ ಅಂದರೆ ಜನವರಿ 1 ರಿಂದ ಮಾರ್ಚ್​ 31ರ ಒಳಗೆ ಫೈಲ್​ ಮಾಡಿದರೆ ಈ ದಂಡವನ್ನು ಕಟ್ಟುವುದು ಅನಿವಾರ್ಯ.

ಯಾರ ಆದಾಯವು ವಿನಾಯಿತಿಯ ಮಿತಿಯನ್ನು ಮೀರಿ, ಸಂಪೂರ್ಣ ತೆರಿಗೆಯನ್ನು ಈಗಾಗಲೇ ಪಾವತಿ ಮಾಡಿದ್ದರೂ ಡಿ.31ನೇ ತಾರೀಕಿನೊಳಗೆ ಐಟಿಆರ್ ಫೈಲ್ ಮಾಡದಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಆದಾಯ ತೆರಿಗೆ ವೆಬ್​ಸೈಟ್​ ಪ್ರಕಾರ, ಒಂದು ವೇಳೆ ಆದಾಯದ ಮಿತಿ 25 ಲಕ್ಷ ರೂಪಾಯಿಯನ್ನು ದಾಟಿದ್ದರೂ ಐಟಿಆರ್​ ಫೈಲ್​ ಮಾಡದಿದ್ದರೆ ಅಂಥವರಿಗೆ 6 ತಿಂಗಳಿನಿಂದ 7 ವರ್ಷದವರೆಗೆ ಜೈಲು ಕೂಡ ವಿಧಿಸುವ ಅವಕಾಶವಿದೆ.