Sunday, 15th December 2024

ಹೀಗೊಂದು ಉಪ್ಪಿನಕಾಯಿ ಪುರಾಣ

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು. ಕೋಗಿಲೆ ಹಾಡಲೆ ಬೇಕು. ಎಲ್ಲ ಮದುವೆ ವಿಡಿಯೋ ಕೆಸೆಟ್‌ಗಳಲ್ಲಿ ಈ ಹಾಡು ಇರಲೇ ಬೇಕು ಎಂಬ ಅಲಿಖಿತ ಕಾನೂನು ಇದ್ದ ಕಾಲವೊಂದು ಈಗ ಕ್ರಮೇಣ ಮುಗಿದಂತಿದೆ.

ಕೆಲವೊಂದು ಹಾಡುಗಳನ್ನು ಕೇಳಿದಾಕ್ಷಣ ಏನೇನೋ ನೆನಪುಗಳು ಚಲನಚಿತ್ರದ ಆಚೆ ನಮ್ಮ ಜೀವನದಲ್ಲಿ ಘಟಿಸಿದ್ದು ನೆನಪಾಗುತ್ತದೆ. ಹಾಡು – ಸಂಗೀತವೇ ಹಾಗೆ. ಹಾಡೊಂದು ಹಿನ್ನೆಲೆಯಲ್ಲಿರುವಾಗ ನಡೆದ ಘಟನೆ ಆ ಹಾಡು ಮತ್ತೆ ಕೇಳಿದಾಗ ಥಟ್ಟನೆ ನೆನಪಿಗೆ ಬರುತ್ತದೆ. ಅದೇ ಹಾಡು ಇನ್ನೊಮ್ಮೆ ಕೇಳಿದಾಗ ಅಂಥದ್ದೇ ಘಟನೆ ನಮ್ಮೆದುರಿಗೆ ಇನ್ನೊಮ್ಮೆ ನಡೆದರಂತೂ ಅದರಷ್ಟು bಛ್ಜಿZ q ಅನುಭವ ಇನ್ನೊಂದಿಲ್ಲ.

ಕೆಟ್ಟ ಘಳಿಗೆಯಲ್ಲಿ ಕೇಳಿದ ಸುಂದರ ಹಾಡು ಇನ್ನೊಮ್ಮೆ ಕೇಳಲು ಮನಸ್ಸಾಗುವುದಿಲ್ಲ. ಒಳ್ಳೆಯ ನೆನಪುಗಳ ಜತೆ ಕೇಳಿದ ಹಾಡನ್ನು ಇನ್ನೊಮ್ಮೆ ಕೇಳಿದಾಗ ಮನಸ್ಸು ಉಲ್ಲಸಿತವಾಗುತ್ತದೆ. ಹಳೆಯ ನೆನಪುಗಳ ಸಾಮ್ಯತೆಯನ್ನು ಹೊಸ ಅನುಭವದಲ್ಲಿ ಹುಡುಕುವ ಮನಸ್ಸಿನ ಅಭ್ಯಾಸದಿಂದಾಗಿ ಕೆಲವು ಹಾಡುಗಳ ಜತೆ ನಾವು ಭಾವನಾತ್ಮಕವಾಗಿ ಬೆಸೆದುಕೊಂಡುಬಿಡುತ್ತೇವೆ.

ಹಳೆಯ ಹಾಡು ಬಾಲ್ಯ, ದುಃಖ, ಸಂತಸ ಹೀಗೆ ಏನೇನೋ ವಿಹ್ವಲತೆಯನ್ನು ಪ್ರಸ್ತುತಕ್ಕೆ ತಂದು ನಿಲ್ಲಿಸುತ್ತದೆ. ನಾವು ಚಿಕ್ಕಂದಿನಲ್ಲಿ ಸಿನಿಮಾ ಹಾಡನ್ನು ನಮಗೆ ಬೇಕಾದಂತೆ ಬದಲಾಯಿಸಿಕೊಂಡು ಅದೇ ಧಾಟಿಯಲ್ಲಿ, ತಾಳದಲ್ಲಿ ಹಾಡುವುದಿತ್ತು. ನಿಮ್ಮಲ್ಲಿಯೂ ಹಲವರು ಇದನ್ನು ಮಾಡಿದವರೇ ಇರುತ್ತೀರಿ. ಈ ವಸಂತ ಕಾಲ ಬಂದಾಗ ಎನ್ನುವ ಹಾಡನ್ನು ನಾವು ಮುಂದುವರಿಸಿ – ಮಾವು ಚಿಗುರಲೇ ಬೇಕು, ಹೂವು ಬರಲೇ ಬೇಕು.

ಮಾವಿನ ಕಾಯಿ ಬಿಟ್ಟಾಗ – ಉಪ್ಪಿನಕಾಯಿ ಮಾಡಲೇ ಬೇಕು ಎಂದು ಮಷ್ಕಿರಿಗೆ ಹಾಡುತ್ತಿದ್ದೆವು. ಇಂದಿಗೂ ಆ ಕಾರಣಕ್ಕೆ ಈ ಹಾಡು ಕೇಳಿದಾಗಲೆಲ್ಲ ಅಜ್ಜಿ ಉಪ್ಪಿನಕಾಯಿ ಮಾಡುವ ಸಂಪೂರ್ಣ ಪ್ರಕ್ರಿಯೆ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಮಾವಿನ ಮರದಲ್ಲಿ ಹೂವು ಬಿಟ್ಟ ತಕ್ಷಣ ಅಜ್ಜಿಗೆ ಒಂದು ರೀತಿಯ ಟೆನ್ಷನ್ ಶುರುವಾಗುತ್ತಿತ್ತು. ಮಾವಿನ ಹೂವು ಚೆನ್ನಾಗಿ ಬಿಟ್ಟರೆ ಅದನ್ನು ತೀರಾ ಗುಟ್ಟಿನ ವಿಚಾರದಂತೆ ಯಾರಲ್ಲಿಯೂ ಅಜ್ಜಿ ಹೇಳುತ್ತಿರಲಿಲ್ಲ. ಮನೆಯವರು ಯಾರಾದರೂ ಆ ಸುದ್ದಿ ತೆಗೆದರೆ ಹುಶ್ ಎಂದು ಅಲ್ಲಿಯೇ ಸುಮ್ಮನಾಗಿಸುತ್ತಿದ್ದರು.

ಹಾಗೆ  ಹೇಳಿದರೆ, ಮಾತನಾಡಿಕೊಂಡರೆ ಯಾರದ್ದಾದರೂ ಕಣ್ಣು ಬೀಳಬಹುದು ಎನ್ನುವುದು ಅವರ ನಂಬಿಕೆ. ಯಾರಾದರೂ
ಹೊರಗಿನವರು ಮಾವಿನ ಮರದಲ್ಲಿನ ಹೂವನ್ನು ನೋಡಿ ಬಂದು ಅಜ್ಜಿಯ ಬಳಿ ಬಂದು ಪ್ರಸ್ತಾಪಿಸಿದರೆ ಅವರ ತಲೆಬಿಸಿ
ಇಮ್ಮಡಿಸುತ್ತಿತ್ತು. ಹಾಳಾದವನ ಕಣ್ಣು ಬಿತ್ತು ಎಂದು ಗೊಣಗುತ್ತಿದ್ದರು ಮತ್ತು ತಕ್ಷಣ ಮಾತು ಬದಲಿಸುತ್ತಿದ್ದರು. ದಿನಕ್ಕೊಮ್ಮೆ ಮಾವಿನ ಮರಕ್ಕೊಂದು ಸುತ್ತು ಹಾಕಿ, ಮಾವಿನ ಮಿಡಿ ಎಷ್ಟು ದೊಡ್ಡದಾಗಿದೆ ಎಂದು ನೋಡಿ ಬರುವುದು ಮತ್ತು ಅದರ ಬೆಳವಣಿಗೆಯನ್ನು ಗುಟ್ಟಾಗಿಯೇ ಇಡುವುದು. ಈ ಮಾವಿನ ಹೂವು ಮಿಡಿಯಾಗುವ ಸಮಯದಲ್ಲಿ ಕಪ್ಪು ಮೋಡ ಕಟ್ಟಿದರೆ ಅಜ್ಜಿಗೆ ಎಲ್ಲಿಲ್ಲದ ತಲೆಬಿಸಿ.

ಕೆಲವೊಮ್ಮೆ ಈ ರೀತಿ ಮೋಡ ಕಟ್ಟಿ ಹುಸಿ ಮಳೆಯಾಯಿತೆಂದರೆ, ಅಥವಾ ಜೋರಾಗಿ ಗಾಳಿ ಬೀಸಿದರೆ ಈ ಮಾವಿನ ಹೂವುಗಳೆಲ್ಲ ಉದುರಿ ಹೋಗುತ್ತಿದ್ದವು. ಉಪ್ಪಿನಕಾಯಿಗಾಗುವ ಮಾವೇ ಬೇರೆ – ಹಣ್ಣಿಗಾಗುವ ಮಾವೇ ಬೇರೆ. ಅಂತೂ ಎಲ್ಲ ಪ್ರಕೃತಿಯ
ಸವಾಲುಗಳನ್ನು ಮೆಟ್ಟಿ ಮಾವಿನ ಕಾಯಿ ಉಪ್ಪಿನಕಾಯಿಗೆ ಹದವಾಗಿ ಬೆಳೆದ ನಂತರ ಅದನ್ನು ಕೊಯ್ಯುವವರನ್ನು ಕರೆಸುವುದು ಇನ್ನೊಂದು ಸವಾಲು. ಈ ಎಳೆ ಮಾವಿನಕಾಯಿಯನ್ನು ಕೊಯ್ಯುವುದು ಸ್ವಲ್ಪ ತಡವಾದರೂ ಕಾಯಿ ಬೆಳೆದುಬಿಡುತ್ತಿತ್ತು.

ಅಡಿಕೆ ತೆಂಗಿನ ಮರಗಳನ್ನು ಹತ್ತುವವರೆಲ್ಲ ಮಾವಿನ ಮರವನ್ನು ಹತ್ತುವುದಿಲ್ಲ. ಈ ಮಾವಿನ ಮರವನ್ನು ಹತ್ತುವ ಮನುಷ್ಯ ಜಾತಿಯೇ ಬೇರೆ. ಈ ಮಾವಿನ ಮಿಡಿಯನ್ನು ಕೊಯ್ದು ಮರದಿಂದ ಕೆಳಕ್ಕೆ ಬಿಸಾಕುವಂತೆ ಇಲ್ಲ. ಅದನ್ನು ಸೊಂಟಕ್ಕೆ ಕಟ್ಟಿದ ಗೋಣಿ ಚೀಲದಲ್ಲಿ ಹಾಕಿಕೊಂಡು ಕೆಳಕ್ಕಿಳಿಯಬೇಕು. ಮಾವಿನ ಮಿಡಿಗೆ ಒಂದು ಚೂರು ಕೂಡ ಗಾಯವಾಗುವಂತಿಲ್ಲ. ಹೆಚ್ಚಿನ ಮಾವಿನ ಮರಗಳಲ್ಲಿ ಕೆಂಪು ಇರುವೆಗಳ ಕಾಟ ಬೇರೆ. ಹೀಗೆ ಜಾಗ್ರತೆಯಿಂದ ಇಳಿಸಿದ ಮಾವಿನ ಮಿಡಿ ಅಜ್ಜಿ ಕೈ ಸೇರಿದ ಕ್ಷಣದಿಂದ ಅದು ಅಜ್ಜಿಯ ಸ್ವತ್ತು.

ಅಜ್ಜಿಗೆ ಅದು ಯಾವುದೇ ಆಸ್ತಿಗಿಂತ ಕಡಿಮೆಯಲ್ಲ. ಅಜ್ಜನಿಗೆ ಬೇರೆ ಬೆಳೆಗಳ ಚಿಂತೆಯಾದರೆ ಅಜ್ಜಿಗೆ ಮಾವಿನ ಕಾಯಿಯ ಚಿಂತೆ !
ಈ ಮಾವಿನ ಮಿಡಿಗಾಯಿಯನ್ನು ನೀರಿಗೆ ಹಾಕಿ ತೊಳೆಯುವಂತಿಲ್ಲ. ಅದನ್ನು ಬಟ್ಟೆಯಿಂದ ಒಂದೊಂದೇ ಆರಿಸಿ ಒರೆಸಬೇಕು. ಸ್ವಲ್ಪವೇ ಹುಳುಕಿದ್ದರೂ ಅದನ್ನು ಎಸೆಯಬೇಕು ಅಥವಾ ತಕ್ಷಣದ ಅಡುಗೆಗೆ ಬಳಸಿಕೊಳ್ಳಬೇಕು. ಅದರ ಚೊಟ್ಟುಮುರಿದು, ಹೀಣು ತೆಗೆದು ಉಪ್ಪಿನ ಭರಣಿಯಲ್ಲಿ ಉಪ್ಪಿನ ಜೊತೆ ತುಂಬುವುದು. ಕಲ್ಲು ಉಪ್ಪನ್ನು ಕೂಡ ಒಮ್ಮೆ ಬಾಣಲೆಗೆ ಹಾಕಿ ಕಾಯಿಸಿ ಅದರಲ್ಲಿ ಒಂದು ಅಂಶವೂ ನೀರಿಲ್ಲದಂತೆ ನೋಡಿಕೊಳ್ಳಬೇಕು.

ನಂತರ ಒಂದು ಹಾಸು ಮಾವಿನ ಮಿಡಿ – ಒಂದು ಹಾಸು ಉಪ್ಪು, ಹೀಗೆ ಪದರಗಳಲ್ಲಿ ಹಾಕಿ, ಭರಣಿಯನ್ನು ಬಟ್ಟೆ ಕಟ್ಟಿ, ಮೇಲಿಂದ ಮುಚ್ಚಳ ಹಾಕಿ, ಉಪ್ಪರಿಗೆಯ ಒಂದು ಅಜ್ಞಾತ ಸ್ಥಳದಲ್ಲಿ ತಿಂಗಳುಗಟ್ಟಲೆ ಇಡಬೇಕು. ನಂತರ ಉಪ್ಪಿನ ಕಾಯಿಯ ಸಾಂಬಾರು ಮಿಶ್ರಣ ತಯಾರಿಸುವ ಸಮಯ. ಇದು ಕೂಡ ಮಳೆಗಾಲ ಶುರುವಾಗುವುದರ ಒಳಗೆ ನಡೆಯಬೇಕು. ಈ ಉಪ್ಪಿನ ಕಾಯಿ ತಯಾರಿಸುವ ಪ್ರಕ್ರಿಯೆಯಲ್ಲಿ ಬಳಸಲ್ಪಡುವ ಎಲ್ಲ ಪರಿಕರಗಳಲ್ಲಿ ಎಲ್ಲಿಯೂ ನೀರಿನ ಪಸೆ ಕೂಡ ತಾಗುವಂತಿಲ್ಲ. ನಂತರ ಉಪ್ಪಿನಕಾಯಿ ತಯಾರಾದ ಮೇಲೆ ಕೂಡ ಅದನ್ನು ಭರಣಿಯಿಂದ ಹೊರ ತೆಗೆಯುವುದು ಕೂಡ ಅಷ್ಟೇ ನಾಜೂಕಿನ ಕೆಲಸ. ನಿಗದಿತ ದಿನ – ನಿಗದಿತ ಸಮಯಕ್ಕಷ್ಟೇ ಈ ಉಪ್ಪಿನಕಾಯಿಯನ್ನು ಭರಣಿಯಿಂದ ತೆಗೆಯುವ ಕಾರ್ಯಕ್ರಮವಿರುತ್ತಿತ್ತು. ಆ ಸಮಯಕ್ಕಿಂತ ಮುಂಚೆ ಮನೆಯಲ್ಲಿ ಉಪ್ಪಿನ ಕಾಯಿ ಖಾಲಿಯಾದರೆ ಆ ಸಮಯಕ್ಕೆ ಕಾಯಬೇಕು.

ರಾಜಕುಮಾರ್ ಹಾಡಿನಂತೆ ಆಯಾ ಸಮಯಕ್ಕೆ ಆಯಾ ಕ್ರಿಯೆ ಘಟಿಸಬೇಕು. ಅಜ್ಜಿಯ ಈ ಉಪ್ಪಿನಕಾಯಿ ತಯಾರಿಸುವ ಮತ್ತು ಬಳಸುವ ಇಡೀ ಕಾರ್ಯಕ್ರಮ ಯಾವುದೇ ರಸಾಯನ ಶಾಸದ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಪಾಲಿಸುವ ಮುನ್ನೆಚ್ಚರಿಕೆ ಗಳಿಗೆ ಕಡಿಮೆಯಿರಲಿಲ್ಲ. ಈ ಇಡೀ ಕಾರ್ಯಕ್ರಮದಲ್ಲಿ ಸ್ವಲ್ಪವೇ ಹೆಚ್ಚುಕಡಿಮೆಯಾದರೂ ಭರಣಿಯಲ್ಲಿ ಶಿಲೀಂದ್ರ – -ಂಗಸ್ ಬೆಳೆದು ಉಪ್ಪಿನಕಾಯಿ ಕೆಡುತ್ತಿತ್ತು. ಆಗೆಲ್ಲ ಈ ಎಚ್ಚರಿಕೆಗಳು ನಗು ತರುವಷ್ಟು ಅತೀ ಎಂದೆನಿಸಿದರೂ ಈಗ ನೋಡಿದರೆ ಅದೆಲ್ಲ
ನಡೆಗಳ ಹಿಂದಿನ ವೈಜ್ಞಾನಿಕ ಕಾರಣಗಳು ಅರ್ಥವಾಗಿ ಅಜ್ಜಿಯ ಆ ಸೂಕ್ಷ್ಮತೆ ಆಶ್ಚರ್ಯವೆನಿಸುತ್ತದೆ.

ಈ ಉಪ್ಪಿನಕಾಯಿ ಮಾಡುವ ಇಡೀ ನಾಜೂಕಿನ ಪ್ರಕ್ರಿಯೆ ವಂಶವಾಹಿನಿಯಾಗಿ ಹರಿದುಬಂದ ಪರಂಪರೆ ಎಂದು ಈಗ ಅರ್ಥವಾಗುತ್ತದೆ. ನೂರೆಂಟು ಉಪ್ಪಿನಕಾಯಿಗಳು ಬಜಾರಿನಲ್ಲಿ ಸಿಕ್ಕರೂ ಇಂದಿಗೂ ಅಜ್ಜಿಯ ಉಪ್ಪಿನಕಾಯಿಯ ರುಚಿಯೇ ಬೇರೆ ಆಗಿರುವುದಕ್ಕೆ ಕೇವಲ ಭಾವನಾತ್ಮಕ ಕಾರಣವೊಂದೇ ಅಲ್ಲ ಎನ್ನುವ ಅರಿವಾಗುತ್ತದೆ.

ಯಾವುದೇ ಆಹಾರ ವಸ್ತುವನ್ನು ಕೆಡದಂತೆ ಇಡಲು ಉಪ್ಪಿನಲ್ಲಿ, ಲವಣ ದ್ರಾವಣದಲ್ಲಿ ಶೇಖರಿಸಿಡುವ ರೂಢಿ ಇಂದು ನಿನ್ನೆಯ ದಲ್ಲ. ಅದೆಷ್ಟೋ ಸಾವಿರ ವರ್ಷದ ಇತಿಹಾಸ ಈ ಪದ್ಧತಿಗಿದೆ. ಈ ಅಭ್ಯಾಸ ಯಾವಾಗ ಶುರುವಾಯಿತು ಎಂದು ಹುಡುಕುತ್ತ ಹೋದರೆ ಯಾವುದೇ ಒಂದು ಸಮಂಜಸ ಉತ್ತರ ಸಿಗುವುದಿಲ್ಲ. ಬಹುಷಃ ಕೆಲವು ಸೀಸನ್‌ಗಳಲ್ಲಿ ಸಿಗದ ಆಹಾರವನ್ನು ಯಥೇಚ್ಛವಾಗಿ ಸಿಗುವ ಸಮಯದಲ್ಲಿ ಸಂಪಾದಿಸಿ ಶೇಖರಿಸಿಡುವ ಆದಿಮಾನವನ ಅನಿವಾರ್ಯತೆ ಇಂಥದ್ದೊಂದು ಆವಿಷ್ಕಾರಕ್ಕೆ ಕಾರಣವಾಗಿರಬಹುದು.

ಇತಿಹಾಸವನ್ನು ಕೆದಕಿದರೆ ಕ್ರಿಸ್ತ ಪೂರ್ವ 2400ರಲ್ಲಿ ಈ ರೀತಿ ಉಪ್ಪಿನಕಾಯಿ ಮಾಡಿ ಆಹಾರ ಶೇಖರಿಸಿಡುವ ಪದ್ಧತಿಯ ವಿವರಣೆ ಭಾರತ ಮತ್ತು ಮೆಸಪೊಟೋಮಿಯಾದಲ್ಲಿ ಇತ್ತು ಎಂದು ನ್ಯೂಯೋರ್ಕ್ ಫುಡ್ ಮ್ಯೂಸಿಯಂನ ಜರ್ನಲ್‌ಗಳಲ್ಲಿ ಕಾಣಸಿಗು ತ್ತದೆ. ಜಗತ್ತಿನ ಎಲ್ಲ ಆವಿಷ್ಕಾರಗಳ ಮೂಲವೂ ಭಾರತಕ್ಕೆ ಹೋಗಿ ಮುಟ್ಟುವ ರೀತಿ ಉಪ್ಪಿನ ಕಾಯಿಯ ಮೂಲ ಕೂಡ ಭಾರತವನ್ನು ತಲುಪುತ್ತದೆ. ಆ ಕಾಲದಲ್ಲಿಯೇ ಭಾರತದ ಸವತೆ ಕಾಯಿಯನ್ನು ಲವಣ ದ್ರಾವಣದಲ್ಲಿ ಶೇಖರಿಸಿ ಅಂದಿನ ಟೈಗ್ರಿಸ್ ಕೊಳ್ಳಕ್ಕೆ (ಇಂದಿನ ಇರಾಕ್) ರಫ್ ಮಾಡಲಾಗುತ್ತಿತ್ತಂತೆ.

ಈ ಇತಿಹಾಸವನ್ನು ನೋಡಿದರೆ ಭಾರತದ ರುಚಿ ಹೊರ ದೇಶದವರಿಗೆ ಮೊದಲು ಹತ್ತಿದ್ದು ಉಪ್ಪಿನಕಾಯಿಯಿಂದಲೇ ಇರಬಹುದು ಎಂದೆನಿಸುತ್ತದೆ. ಆ ಪ್ರಾಂತ್ಯದಲ್ಲಿ ಸವತೇಕಾಯಿ ಬೆಳೆಯದ ಕಾರಣ ಭಾರತದಿಂದ ಸವತೇಕಾಯಿಯನ್ನು ಬ್ರೈನ್‌ನ ಜೊತೆ ಡಬ್ಬಿಗಳಲ್ಲಿ ತುಂಬಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅಂದಿನ ಭಾರತದ ಸವತೇಕಾಯಿ ಉಪ್ಪಿನಕಾಯಿ (ಸಾಂಬಾರು ರಹಿತ) ಈಜಿಪ್ತ್ ಮತ್ತು ಹಲವು ಮಧ್ಯ ಪ್ರಪಂಚದ ದೇಶಗಳ ಜನರಲ್ಲಿ  ಹುಚ್ಚು ಹಿಡಿಸಿತ್ತು.

ಆ ಕಾಲದಲ್ಲಿ ಉಪ್ಪಿನಲ್ಲಿ ಸಂಗ್ರಹಿಸಿದ ಭಾರತದ ಸವತೇಕಾಯಿ ಸೇವಿಸುವುದು ಎಂದರೆ ಅದೊಂದು ಪ್ರೆಸ್ಟೀಜಿಯಸ್ ವಿಷಯ ವಾಗಿತ್ತು. ಮೊದಲೆಲ್ಲ ಇದು ಕೇವಲ ರಾಜ ರಾಣಿಯರ ಕೈಗಷ್ಟೇ ಎಟುಕುತ್ತಿತ್ತು. ಈಜಿಪ್ಟ್‌ನ – ಸೌಂದರ್ಯಕ್ಕೆ ಹೆಸರುವಾಸಿಯಾದ ರಾಣಿ ಕ್ಲಿಯೋಪಾತ್ರಾಳ ಊಟದಲ್ಲಿ ಉಪ್ಪಿನಕಾಯಿ ಇರಲೇಬೇಕಿತ್ತು. ಆಕೆಯ ಸೌಂದರ್ಯದ ಗುಟ್ಟೇ ಉಪ್ಪಿನಕಾಯಿ ಎಂದು ನಂಬಿಕೆ ಬೆಳೆದಿತ್ತು. ಹಾಗಾಗಿ ಜನರು ಸೌಂದರ್ಯ ವಧಿಸಲು ಭಾರತದ ಉಪ್ಪಿನ ಸವತೇಕಾಯಿ ಬಳಸಬೇಕು ಎನ್ನುವ ಒಂದು
ಟ್ರೆಂಡ್ ಇತ್ತು. ಅಲ್ಲದೆ ದೇಹದ ವಯೋ ಸಹಜ ಮುಪ್ಪು – ಬೆಳವಣಿಗೆಯನ್ನು ನಿಧಾನವಾಗಿಸಲು ಕೂಡ ಉಪ್ಪಿನಕಾಯಿ ಸೇವಿಸ ಬೇಕು ಎಂಬ ನಂಬಿಕೆ.

ಇದೆಲ್ಲದರ ಜೊತೆ ಉಪ್ಪಿನಕಾಯಿ ದೇಹದ ಶಕ್ತಿ ವರ್ಧಕ ಎಂದು ಕ್ಲಿಯೋಪಾತ್ರಾಳ ಪ್ರೇಮಿ ಜೂಲಿಯಸ್ ಸೀಸರ್ ನಂಬಿದ್ದ. ಆ ಕಾರಣಕ್ಕೆ ತನ್ನ ಸೈನಿಕರು ಉಪ್ಪಿನಕಾಯಿ ಸೇವಿಸುವಂತೆ ನೋಡಿಕೊಳ್ಳುತ್ತಿದ್ದ. ಇದೇ ನಂಬಿಕೆ ಹಲವು ರೋಮನ್ ರಾಜ ರಲ್ಲಿಯೂ ಇತ್ತು. ಇದಲ್ಲದೇ, ಅರಿಸ್ಟಾಟಲ್ ಕೂಡ ಭಾರತದ ಉಪ್ಪಿನಕಾಯಿಯಲ್ಲಿ ಔಷಧಿಯ ಗುಣಗಳಿವೆ ಎಂದು ನಮೂದಿಸಿ ದ್ದಾನೆ.

ಹೀಗೆ ಉಪ್ಪಿನಕಾಯಿ ಕ್ರಮೇಣ ಜಗತ್ತಿನ ಬೇರೆ ಬೇರೆ ಸ್ಥಳ ಗಳಲ್ಲಿ ಪರಿಚಯವಾಗುತ್ತ ಹಲವು ಮಾರ್ಪಾಡುಗಳನ್ನು ಕಾಣುತ್ತ ಹೋಯಿತು. ಯುರೋಪಿಯನ್ನರು ಈ ರೀತಿ ಲವಣದ ಜತೆ ಶೇಖರಿಸಿಡುವ ಸವತೇಕಾಯಿಗೆ ಸುಮಾತ್ರಾದ ಸಬ್ಬಸಿಗೆ (ಡಿಲ) ಅನ್ನು ಸೇರಿಸಿದರು. ಈ ರೀತಿಯ ಪಿಕಲ್ ಅನ್ನು ನಂತರದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಪರಿಚಯಿಸಿದವರು ಬ್ರಿಟೀಷರು. ಹಡಗಿನಲ್ಲಿ ತಿಂಗಳುಗಟ್ಟಲೆ ಪ್ರಯಾಣ ಮಾಡುವಾಗ ವಿಟಮಿನ್ ಸಿ ಕೊರತೆಯಿಂದ ಸ್ಕರ್ವಿ ರೋಗ ಆ ಕಾಲದಲ್ಲಿ ತೀರಾ ಸಾಮಾನ್ಯವಾಗಿತ್ತು. ಈ ರೋಗವನ್ನು ದೂರವಿಡಲು ಕೊಲಂಬಸ್‌ನಿಂದ ಹಿಡಿದು ಎಲ್ಲ ಹಡಗುಗಳಲ್ಲಿ ಯಥೇಚ್ಛವಾಗಿ ಉಪ್ಪಿನ (ಸವತೆ)ಕಾಯಿಯನ್ನು ತುಂಬಿಸಿ ಕೊಂಡು ಹೋಗಲಾಗುತ್ತಿತ್ತು.

ಕಾಲಾನಂತರ ಹಡಗುಗಳ ಓಡಾಟ ಹೆಚ್ಚಿದಂತೆಲ್ಲ ಈ ಸವತೆ ಉಪ್ಪಿನಕಾಯಿಯ ಅವಶ್ಯಕತೆಗಳು ಜಾಸ್ತಿಯಾದವು. ಆ ಕಾರಣಕ್ಕೆ ಜಗತ್ತಿನ ಅದೆಷ್ಟೋ ದ್ವೀಪಗಳಲ್ಲಿ ಸವತೇಕಾಯಿ ಬೆಳೆಯುವಂತೆ, ಉಪ್ಪಿನಕಾಯಿ ತಯಾರಿಸುವಂತೆ ಆಂಗ್ಲರು ನೋಡಿಕೊಂಡರು. ಹಲವಾರು ದ್ವೀಪಗಳಲ್ಲಿ ಉಪ್ಪಿನಕಾಯಿ ತುಂಬಿಸಿಕೊಳ್ಳಲೆಂದೇ ಹಡಗುಗಳು ಲಂಗರು ಹಾಕುತ್ತಿದ್ದವು.

ಉಪ್ಪಿನಕಾಯಿಯನ್ನು ಅಮೆರಿಕಾಕ್ಕೂ ಪರಿಚಯಿಸಿದವರು ಯುರೋಪಿಯನ್ನರೇ. ಹದಿನಾರನೇ ಶತಮಾನದಲ್ಲಿ ಇಂದಿನ
ನ್ಯೂಯೋರ್ಕ್‌ನ ಬ್ರೂಕ್ಲಿನ್‌ನಲ್ಲಿ ಉಪ್ಪಿನಕಾಯಿಗೆ ಬೇಕಾಗುವ ಸವತೆ ಮತ್ತು ಮೆಣಸು ಬೆಳೆಸುವ ತೋಟಗಳಿದ್ದವು. ಇದೆಲ್ಲ
ನಡೆಯುವಾಗ ಉಪ್ಪಿನಕಾಯಿಯನ್ನು ಇನ್ನಷ್ಟು ದೀರ್ಘ ಕಾಲ ಶೇಖರಿಸಿಡುವುದು ಹೇಗೆ ಎನ್ನುವುದು ಕೂಡ ಎಲ್ಲಿಲ್ಲದ ಮಹತ್ವ ವನ್ನು ಪಡೆದುಕೊಂಡಿತ್ತು.

ನೆಪೋಲಿಯನ್ ಬೋನಾಪಾರ್ಟೆ ಉಪ್ಪಿನಕಾಯಿಯನ್ನು ಹಾಳಾಗದಂತೆ ಇಡುವ ಅತ್ಯುತ್ತಮ ಆವಿಷ್ಕಾರಕ್ಕೆ 1200 ಫ್ರಾಂಕ್ಸ್ ಅನ್ನು ಪ್ರಶಸ್ತಿಯ ಹಣವಾಗಿ ಮೀಸಲಿಟ್ಟು ಒಂದು ಸ್ಪರ್ಧೆಯನ್ನೇ ನಡೆಸಿದ್ದ. ಆ ಅಂದಿನ ಮೊತ್ತ ಇಂದಿನ 1.8 ಕೋಟಿ ರುಪಾಯಿಗೆ ಸಮ. ಒಂದೊಂದು ವಿಚಾರವೇ ಸಾಕು, ಅಂದಿನ ಕಾಲದಲ್ಲಿ ಉಪ್ಪಿನಕಾಯಿಗೆ ಎಷ್ಟು ಮಹತ್ವವಿತ್ತೆಂದು ತಿಳಿಯಲು. ನೀರು ತಾಕದೇ – ಗಾಳಿ ಓಡಾಡದಂತೆ ವ್ಯಾಕ್ಸ್‌ನಿಂದ ಸೀಲ್ ಮಾಡಿ ಸಂರಕ್ಷಿಸಬೇಕು ಎಂದು ಕಂಡುಹಿಡಿದ ನಿಕೊಲಸ್ ಆ
ಪ್ರಶಸ್ತಿಯನ್ನು ಅಂದು ಗೆದ್ದಿದ್ದನಂತೆ.

ಆದರೆ ಆ ಕಾಲದಲ್ಲಿಯೇ ಭಾರತೀಯರಿಗೆ ಉಪ್ಪಿನಕಾಯಿಯನ್ನು ಶೇಖರಿಸಿಡುವುದು ಹೇಗೆ ಎಂದು ತಿಳಿದಿತ್ತು ಎನ್ನುವುದು ಬೇರೆ ವಿಚಾರ. ಪ್ಯಾರಾಫಿನ್ ಆವಿಷ್ಕಾರ ಮತ್ತು ನಿರ್ವಾತದ ಪರಿಕಲ್ಪನೆ, ಶಿಲೀಂದ್ರದ ಬೆಳವಣಿಗೆ ಇವೆಲ್ಲ ಉಪ್ಪಿನಕಾಯಿಯ ಸುತ್ತ
ಅವಿಷ್ಕಾರಗೊಂಡ ವಿಚಾರಗಳೇ. ಇಂದಿನ ಅತಿ ದೊಡ್ಡ ಫುಡ್ ಪ್ರೊಸೆಸ್ಸಿಂಗ್ ಕಂಪನಿ ಹೈನ್ಸ್ ಮೂಲದಲ್ಲಿ ಹುಟ್ಟಿದ್ದು ಕೂಡ
ಉಪ್ಪಿನಕಾಯಿ ಕಂಪೆನಿಯಾಗಿಯೇ. ಈ ಸವತೇಕಾಯಿ ಪಿಕಲ್ ಇಂದಿಗೂ ಪಾಶ್ಚಾತ್ಯ ಜಗತ್ತಿನಲ್ಲಿ ಪ್ರಸಿದ್ಧ. ಯುರೋಪ್, ಉತ್ತರ
ಮತ್ತು ದಕ್ಷಿಣ ಅಮೆರಿಕಾದಲ್ಲಿ ಪಿಕಲ್ ಎಂದರೆ ಬ್ರೈನ್‌ನಲ್ಲಿ ಸಬ್ಬಸಿಗೆಯ ಜತೆ ಶೇಖರಿಸಿಟ್ಟ ಸವತೇಕಾಯಿ.

ಇದು ಇಂದು ಮಲ್ಟಿ ಮಿಲಿಯನ್ ಡಾಲರ್ ಉದ್ಯಮ. ಇತ್ತ ಭಾರತದಲ್ಲಿ ಅದೇ ಸಮಯದಲ್ಲಿ ಉಪ್ಪಿನಕಾಯಿಗೆ ಸಾಂಬಾರು ಪದಾರ್ಥ ಮತ್ತು ಮೆಣಸನ್ನು ಬೆರೆಸುವ ಪದ್ಧತಿ ರೂಢಿಗೆ ಬಂದಿತು. ಇಂದು ಮೂಲದಲ್ಲಿ ಒಂದೇ ಆಗಿದ್ದರೂ ಪಾಶ್ಚಾತ್ಯ ದೇಶದ ಪಿಕಲ್ ಬೇರೆ – ಭಾರತದ ಪಿಕಲ್ ಎಂದು ಕರೆಯಲ್ಪಡುವ, ನಾವು ಸವಿಯುವ ಉಪ್ಪಿನಕಾಯಿ ಬೇರೆ. ಪಾಶ್ಚಾತ್ಯ ಪಿಕಲ್‌ಗೂ ನಮ್ಮ ಪಿಕಲ್‌ಗೂ ಅಜ – ಗಜಾಂತರ ವ್ಯತ್ಯಾಸ ನಿರ್ಮಾಣವಾಗಿದೆ. ಇಂದಿಗೂ ಪಾಶ್ಚಾತ್ಯ ದೇಶಗಳಲ್ಲಿ ಪಿಕಲ್ ಎಂದರೆ ಉಪ್ಪಿನ ದ್ರಾವಣದಲ್ಲಿ ಶೇಖರಿಸಿದ ಸವತೆ ಕಾಯಿ.

ಕಾಲಾನಂತರ ಉಪ್ಪಿನಕಾಯಿ ಹಲವು ದೇಶಗಳಲ್ಲಿ ಹಲವಾರು ಮಾರ್ಪಾಡುಗಳನ್ನು ಹೊಂದಿದೆ. ಇಂದು ಜಗತ್ತಿನ ಎಲ್ಲರ ಆಹಾರದಲ್ಲೂ ಉಪ್ಪಿನಕಾಯಿ ಮುಖ್ಯ ಒಂದು ಭಾಗವೇ. ಜಪಾನಿನಲ್ಲಿ ಕ್ಯೂರಿ ಜ್ಯುಕ್, ಇಸ್ರೇಲ್‌ನಲ್ಲಿ ತೊಶಿರ್, ದಕ್ಷಿಣ ಕೊರಿಯಾದಲ್ಲಿ ಕಿಮ್ಚಿ, ಫ್ರಾನ್ಸ್‌ನಲ್ಲಿ ಕೊರ್ನಿಚೊನ್ ಹೀಗೆ ಬೇರೆ ಬೇರೆ ಹೆಸರಲ್ಲಿ ಉಪ್ಪಿನಕಾಯಿಯನ್ನು ಕೆರೆದರೂ ಅದೆಲ್ಲದರ ಮೂಲ ಒಂದೇ.

ಇಂದು ಅಮೆರಿಕಾ ಒಂದರ ಸುಮಾರು ಇಪ್ಪತ್ತಮೂರು ಲಕ್ಷ ಕೆಜಿ ಪಿಕಲ್ ಸೇವಿಸಲಾಗುತ್ತದೆ. ಲೆಕ್ಕ ಹಾಕಿದರೆ ಪ್ರತಿಯೊಬ್ಬ ವ್ಯಕ್ತಿ ವಾರ್ಷಿಕ ನಾಲ್ಕು ಕೆಜಿ ಸರಾಸರಿ ಪಿಕಲ್ ಸೇವಿಸುತ್ತಾನೆ ಎಂದಾಯಿತು. ನ್ಯೂಯಾರ್ಕ್ ಸಿಟಿಯಲ್ಲಿ ಪ್ರತೀ ವರ್ಷ ಒಂದು ದಿನವನ್ನು ಪಿಕಲ್ ದಿನ ಎಂದೇ ಆಚರಿಸಲಾಗುತ್ತದೆ. ಜಗತ್ತಿನ ಸುಮಾರು ಹತ್ತು ಸಾವಿರ ರೀತಿಯ ಪಿಕಲ್ – ಉಪ್ಪಿನಕಾಯಿಗಳನ್ನು ಈ ದಿನ ಪ್ರದರ್ಶಿಸಲಾಗುತ್ತದೆ.

ಅಲ್ಲಿ ಸಾವಿರಾರು ರೀತಿಯ ಭಾರತೀಯ ಉಪ್ಪಿನಕಾಯಿಗಳು ಕೂಡ ಪ್ರದರ್ಶನಗೊಳ್ಳಲ್ಪಡುತ್ತದೆ. ೨೦೧೮ರ ಊಉಆಐ ಆಹಾರ
ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ ಆಹಾರ ಭಾರತದ ಅಮೇರಿಕನ್ ಉಪ್ಪಿನಕಾಯಿ ಬ್ರೂಕ್ಲಿನ್ ಪಿಕಲ. ಮೊನ್ನೆ ಕ್ರಿಸ್ಮಸ್ ದಿನ ನ್ಯೂಯೋರ್ಕ್ ಟೈಮ್ಸ ಈ ವರ್ಷದ ಇಪ್ಪತ್ತೈದು ವಿಶೇಷ ಲೇಖನಗಳನ್ನು ಪುನರ್ ಪ್ರಕಟಿಸಿತ್ತು. ಅದರಲ್ಲಿ ಗಮನ ಸೆಳೆದದ್ದು ಇಂಡಿಯನ್ ಪಿಕಲ್ ಕ್ವೀನ್’ ಎಂಬ ಲೇಖನ. ಈ ಉಪ್ಪಿನಕಾಯಿ ರಾಣಿಯ ಹೆಸರು ಉಷಾ ಪ್ರಭಾಕರನ್. ವೃತ್ತಿಯಲ್ಲಿ ವಕೀಲೆ ಯಾಗಿದ್ದ ಉಷಾಗೆ ಉಪ್ಪಿನಕಾಯಿಯೆಂದರೆ ಎಲ್ಲಿಲ್ಲದ ಪ್ರೀತಿ. ಆ ಕಾರಣದಿಂದ ಬೇರೆ ಬೇರೆ ಉಪ್ಪಿನಕಾಯಿಯನ್ನು ತಯಾರಿಸುವ ವಿಧಾನಗಳನ್ನು ಆಕೆ ಪಟ್ಟಿ ಮಾಡುತ್ತ ಹೋದವಳು. ಆಕೆ ಹೀಗೆ ಹವ್ಯಾಸಕ್ಕೆ ಬರೆದುಕೊಳ್ಳುತ್ತ ಹೋದ ಅಡುಗೆ ಪುಸ್ತಕ Usha’s pickle digest ಇಂದು ಭಾರತದ ಉಪ್ಪಿನಕಾಯಿಯ ಮಹಾ ಗ್ರಂಥ ಎಂದೇ ಕರೆಯಲ್ಪಡುತ್ತದೆ.

ಆಕೆ ಬರೋಬ್ಬರಿ ಒಂದು ಸಾವಿರ ದಕ್ಷಿಣ ಭಾರತೀಯ ಉಪ್ಪಿನಕಾಯಿಯನ್ನು ಒಟ್ಟು ಹಾಕಿ ಪುಸ್ತಕವನ್ನು ಪ್ರಕಟಿಸಿದ್ದಾಳೆ. ಈ ಪುಸ್ತಕ ಅಮೆಜಾನ್‌ನ ಆಹಾರ ಪುಸ್ತಕ ವಿಭಾಗದಲ್ಲಿ ಐದನೇ ಅತಿ ಹೆಚ್ಚು ಮಾರಾಟವಾಗಿರುವ ಪುಸ್ತಕ. ಆಕೆಯ ಕಥೆಯನ್ನು Indian pickle queen+new york times ಎಂದು ಗೂಗಲ್ ಮಾಡಿ ಓದಬಹುದು.

ನಮ್ಮ ದೇಶದಲ್ಲಿ ಸುಮಾರು 19500 ಭಾಷೆ ಉಪಭಾಷೆ ಡೈಲೆಕ್ಟ್‌ಗಳಿವೆಯಂತೆ. ಬಹುಷಃ ಅದಕ್ಕಿಂತ ಜಾಸ್ತಿ ವೈವಿಧ್ಯದ
ಉಪ್ಪಿನಕಾಯಿ ಇರಬಹುದೇನೋ. ಕರ್ನಾಟಕದಲ್ಲಿಯೇ ಪ್ರತೀ ಊರಿನಲ್ಲಿ ಉಪ್ಪಿನಕಾಯಿಯ ವೈವಿಧ್ಯವನ್ನು ನೋಡಬಹುದು. ಭಾಷೆ ಬದಲಾಗುವ ಅಂತರಕ್ಕೂ ಮುಂಚೆ ಉಪ್ಪಿನಕಾಯಿಯ ರುಚಿ ಬದಲಾಗಿರುತ್ತದೆ. ಮಯ್ಯಾಸ್, IS, Iಈಏ, ಪ್ರಿಯಾ ಮೊದ ಲಾದ ಹತ್ತಾರು ಬ್ರಾಂಡ್‌ಗಳ ಉಪ್ಪಿನಕಾಯಿ ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಮಾರಾಟವಾಗುತ್ತವೆ. ಈ ಕಂಪನಿಗಳಿಗೆಲ್ಲ ಜಾಗತಿಕ ಮೌಲ್ಯಕ್ಕೆ ಉಪ್ಪಿನಕಾಯಿಯೇ ಕಾರಣ ಎಂದರೆ ಅತಿಶಯವಲ್ಲ.

ಆದರೂ ಮನೆಯಲ್ಲಿ ಅಮ್ಮ – ಅಜ್ಜಿ ಮಾಡಿದ ಉಪ್ಪಿನಕಾಯಿಯ ರುಚಿ ಅವಕ್ಕಿಲ್ಲ. ಆ ಕಾರಣಕ್ಕಾಗಿಯೇ ಊರಿನಿಂದ ಬರುವಾಗ
ನಮ್ಮೆಲ್ಲ ಸಾಮಾನು ಸರಂಜಾಮುಗಳ ಜತೆ ಉಪ್ಪಿನಕಾಯಿ ಇದ್ದೇ ಇರುತ್ತದೆ. ನೆಂಟರು ಮನೆಗೆ ಬಂದರೆ, ಬಂದವರು ಯಾರು, ಎಷ್ಟು ಹತ್ತಿರದವರು ಎನ್ನುವುದರ ಮೇಲೆ ಯಾವ ಉಪ್ಪಿನಕಾಯಿ ಹೊರಬರಬೇಕು ಎನ್ನುವುದು ನಿರ್ಧರಿತವಾಗುತ್ತದೆ. ಹಲವು ಕಡೆ ಉಪ್ಪಿನಕಾಯಿಯ ಜತೆ ಪ್ರಯಾಣ ಮಾಡುವುದು ಒಳ್ಳೆಯದಲ್ಲ ಎಂಬ ನಂಬಿಕೆಯಿದೆ.

ಅಲ್ಲದೇ ಬಹುತೇಕ ದೇಶಗಳಲ್ಲಿ ಹೊರ ದೇಶಗಳಿಂದ ಯಾವುದೇ ಆಹಾರ ತರುವುದು ಕಾನೂನು ಬಾಹಿರ. ಅದೆಂತಹ ನಂಬಿಕೆ, ಕಾನೂನು ಪಾಲಿಸು ವವನು ಕೂಡ ಉಪ್ಪಿನಕಾಯಿ ವಿಚಾರದಲ್ಲಿ ಕಾಂಪ್ರೊಮೈಸ್ ಮಾಡಿಕೊಳ್ಳುತ್ತಾನೆ. ನನ್ನನ್ನೂ ಸೇರಿಸಿ ಭಾರತದಿಂದ ವಿದೇಶಕ್ಕೆ ಹೋಗುವ ಎಲ್ಲರೂ ಅಮ್ಮ – ಅಜ್ಜಿ ಮಾಡಿದ ಉಪ್ಪಿನಕಾಯಿಯನ್ನು ಸೂಟ್‌ಕೇಸ್‌ನ ಬಟ್ಟೆಗಳ ಮಧ್ಯೆ ಸ್ಮಗಲ್ ಮಾಡುವವರೇ. ಊಟಕ್ಕಿಲ್ಲದ ಉಪ್ಪಿನಕಾಯಿ ಎನ್ನುವ ಬಳಕೆ ಸಾಮಾನ್ಯವಾದರೂ ಉಪ್ಪಿನಕಾಯಿಯಿಲ್ಲದ ಊಟ ಹುಟ್ಟಿ ಹಾಕುವ ನಿರ್ವಾತವೇ ದೊಡ್ಡದು.

ಅಡುಗೆ ಹೇಗೆ ಆದರೂ ಅದನ್ನು ಸಂಭಾಳಿಸಿಕೊಂಡು ಹೋಗುವ ತಾಕತ್ತಿರುವುದು ಉಪ್ಪಿನಕಾಯಿಗೆ ಮಾತ್ರ. ಉಪ್ಪಿನಕಾಯಿ
ಎನ್ನುವುದು ಊಟಕ್ಕೆ ಚೆರ್ರಿ ಆನ್ ಟಾಪ್.

ಕೊನೆಯಲ್ಲಿ: ಅದೆಷ್ಟೋ ರುಚಿಯಾಗದ ಊಟದ ಮೇಲೆ ಬರುವ ಆರೋಪವನ್ನು ತಪ್ಪಿಸುವ ಉಪ್ಪಿನಕಾಯಿಯ ಮೇಲೆ ಇರುವ ಒಂದೇ ಒಂದು ಆರೋಪವೆಂದರೆ – ಅದರ ಸುತ್ತಲಿರುವ ಲಿಂಗಬೇಧ. ಉಪ್ಪಿನಕಾಯಿಯನ್ನು ಗಂಡಸು ಬರೀ ಬಾಯಲ್ಲಿ ಚಪ್ಪರಿಸಿ ದರೆ ಒಂದು ಅರ್ಥ – ಹೆಂಗಸು ಚಪ್ಪರಿಸಿದರೆ ಇನ್ನೊಂದು ಅರ್ಥ. ಇತಿ ಉಪ್ಪಿನಕಾಯಿ ಪುರಾಣಂ.