Sunday, 15th December 2024

ಪುರಾಣಗಳಲ್ಲಿ ಕಣ್ಣು ಕುಕ್ಕುವ ಮೂರು ಕಥೆಗಳು ಇವು !

ತಿಳಿರುತೋರಣ

ಶ್ರೀವತ್ಸ ಜೋಶಿ

ಅಸುರಗುರು ಶುಕ್ರಾಚಾರ್ಯರು ಒಕ್ಕಣ್ಣನಾದ ಕಥೆ ಬಹುಶಃ ನಮ್ಮಲ್ಲೆಲ್ಲರಿಗೂ ಗೊತ್ತಿದೆ. ಶುಕ್ರಾಚಾರ್ಯರ ಪೌರೋಹಿತ್ಯದಲ್ಲಿ ಬಲಿ ಚಕ್ರವರ್ತಿಯು ವಿಶ್ವಜಿದ್ಯಾಗ ಮಾಡುತ್ತಾನೆ. ಯಾಗದ ಅಂಗವಾಗಿ ದೊಡ್ಡದೊಡ್ಡ ದಾನಗಳನ್ನು ಕೊಡುತ್ತಾನೆ. ಕೇಳಿದವರಿಗೆ ಕೇಳಿದ್ದನ್ನೆಲ್ಲ ಕೊಡುತ್ತ ಸಾಗುತ್ತಾನೆ.

ಬಲಿ ಚಕ್ರವರ್ತಿಯ ಪರಾಕ್ರಮವನ್ನು ತಗ್ಗಿಸಲು ಇದೇ ಸುಸಮಯವೆಂದು ವಿಷ್ಣುವು ವಾಮನಾವತಾರದಲ್ಲಿ ಬಾಲಬ್ರಹ್ಮಚಾರಿ ಯಾಗಿ ಅಲ್ಲಿಗೆ ಬರುತ್ತಾನೆ. ಆ ವಟುವನ್ನು ಸತ್ಕರಿಸಿ ಏನು ಬೇಕೆಂದು ಕೇಳುವಂತೆ ಬಲಿ ಚಕ್ರವರ್ತಿ ಬಿನ್ನವಿಸುತ್ತಾನೆ. ತನಗೆ ಕೇವಲ ಮೂರು ಅಡಿಗಳಷ್ಟು ಅಳತೆಯ ಭೂಮಿ ಬೇಕು ಅಷ್ಟೇ ಸಾಕು ಎಂದು ವಟು ವಾಮನ ಹೇಳುತ್ತಾನೆ. ಇದು ಹೀಗೆಯೇ ಮುಂದು ವರಿದರೆ ಅಪಾಯ ಕಾದಿದೆಯೆಂದು ಅರಿತ ಶುಕ್ರಾಚಾರ್ಯರು ಬಲಿ ಚಕ್ರವರ್ತಿಗೆ ಬಗೆಬಗೆಯಾಗಿ ಬುದ್ಧಿ ಹೇಳುತ್ತಾರೆ.

ವಟುವಿನ ರೂಪದಲ್ಲಿ ಬಂದವನು ಬೇರಾರೂ ಅಲ್ಲ ಶ್ರೀಮನ್ನಾರಾಯಣನೇ ಎಂಬ ಸತ್ಯ ಅವರಿಗೆ ಗೊತ್ತಿರುತ್ತದೆ. ಕೊಟ್ಟ ಮಾತಿಗೆ ತಪ್ಪಿದರೂ ಚಿಂತೆಯಿಲ್ಲ. ಆದರೆ ದಯವಿಟ್ಟು ಮುಂದುವರಿಯಬೇಡ ಎಂದು ಬಲಿ ಚಕ್ರವರ್ತಿಯನ್ನು ಎಚ್ಚರಿಸುತ್ತಾರೆ. ಬಲಿ
ಯಾವುದಕ್ಕೂ ಜಗ್ಗುವುದಿಲ್ಲ. ಕೊನೆಯ ಪ್ರಯತ್ನವೊಂದನ್ನು ಮಾಡುವುದಕ್ಕಾಗಿ ಶುಕ್ರಾಚಾರ್ಯರು ಒಂದು ನೊಣದ ರೂಪ
ಧರಿಸಿ ಅರ್ಘ್ಯಪಾತ್ರೆಯ ಅಂದರೆ ನೀರು ತುಂಬಿರುವ ಗಿಂಡಿಯ ಮೂತಿಯೊಳಗೆ ನುಸುಳಿಬಿಡುತ್ತಾರೆ.

ಧಾರಾದತ್ತ ದಾನಕ್ಕೆ ಬೇಕಾದ ನೀರು ಗಿಂಡಿಯಿಂದ ಬೀಳದಿದ್ದಾಗ ಗಾಬರಿಯಾದ ಬಲಿ ಚಕ್ರವರ್ತಿಗೆ ವಟುರೂಪಿ ವಾಮನನೇ ಒಂದು ಉಪಾಯ ಸೂಚಿಸುತ್ತಾನೆ. ಎಷ್ಟೆಂದರೂ ಶುಕ್ರಾಚಾರ್ಯನ ಕುಯುಕ್ತಿ ಭಗವಂತನಿಗೆ ಗೊತ್ತಿಲ್ಲದಿರುತ್ತದೆಯೇ? ದರ್ಭೆಹುಲ್ಲಿನ ಒಂದು ಕಡ್ಡಿಯಿಂದ ಗಿಂಡಿಯ ಮೂತಿಯಲ್ಲಿ ಸಿಕ್ಕಿಕೊಂಡ ವಸ್ತುವನ್ನು ತೆಗೆಯಬಹುದೆಂದು ವಾಮನ ಹೇಳುತ್ತಾನೆ. ಹಾಗೆ ಮಾಡಿದಾಗ ಬಲಿಯಾದದ್ದು ನೊಣದ ರೂಪ ಧರಿಸಿದ್ದ ಶುಕ್ರಾಚಾರ್ಯರ ಒಂದು ಕಣ್ಣು! ದರ್ಭೆಹುಲ್ಲಿನ ತಿವಿತದಿಂದಾಗಿ ಶುಕ್ರಾಚಾರ್ಯ ಒಕ್ಕಣ್ಣನಾದರು.

ಆವತ್ತಿಂದ ಅವರಿಗೆ ಒಕ್ಕಣ್ಣ ಶುಕ್ರಾಚಾರ್ಯ ಎಂಬ ಅನ್ವರ್ಥನಾಮ ರೂಢಿಗೆ ಬಂತು. ಒಂದು ಕಣ್ಣು ಕುರುಡಾಗಿರುವವರನ್ನು ಒಕ್ಕಣ್ಣ ಶುಕ್ರಾಚಾರ್ಯ ಎಂದು ಕರೆಯುವುದು ವಾಡಿಕೆಯಾಯಿತು. ಈ ಕಥೆಯನ್ನು ನಾನು ಮೊದಲ ಬಾರಿಗೆ ಓದಿದ್ದು ಅಮರ
ಚಿತ್ರಕಥೆ ಪುಸ್ತಕದಲ್ಲೆಂದು ನೆನಪು. ಏಕೆಂದರೆ ಕಥೆಯ ನಿರೂಪಣೆಗಿಂತಲೂ ನನಗೆ ಸ್ಪಷ್ಟವಾಗಿ ನೆನಪಿರುವುದು ಜತೆಯಲ್ಲಿದ್ದ ಚಿತ್ರ. ಬಲಿ ಚಕ್ರವರ್ತಿಯ ಕೈಯಲ್ಲೊಂದು ಗಿಂಡಿ. ಅದರ ಮೂತಿಯೊಳಗೆ ನೊಣದ ರೂಪದಲ್ಲಿ ಶುಕ್ರಾಚಾರ್ಯರು.

ಮೂತಿಯಲ್ಲಿ ದರ್ಭೆಹುಲ್ಲಿನ ಕಡ್ಡಿ ತೂರಿಸುತ್ತಿರುವ ವಟು ವಾಮನ. ಬೇರೆ ಕೆಲವು ಪುಸ್ತಕಗಳಲ್ಲಿ ಶುಕ್ರಾಚಾರ್ಯರು ನೊಣದ ರೂಪದಲ್ಲಲ್ಲ, ಕಪ್ಪೆಯಾಗಿ ಕಮಂಡಲುವಿನ ಕೊರಳೊಳಗೆ ಕುಳಿತದ್ದು ಎಂದು ಕೂಡ ಇದೆ. ನೊಣ ನೀರಿನಲ್ಲಿ ಇರಲಾರದು, ಕಪ್ಪೆಗಾದರೆ ನೀರಿನೊಳಗೆ ಇರುವುದು ಸಾಧ್ಯವಾಗುತ್ತದೆಂಬ ತರ್ಕವಿರಬಹುದು. ಅದೇನಿದ್ದರೂ ದರ್ಭೆ ಹುಲ್ಲಿನ ತುದಿಯಿಂದ ಕುಕ್ಕಿದ್ದು ಶುಕ್ರಾಚಾರ್ಯರ ಕಣ್ಣಿಗೆ ಎನ್ನುವುದು ಮುಖ್ಯ.

ಅದೂ ಬೇರಾರೂ ಅಲ್ಲ ಸ್ವತಃ ಭಗವಂತನೇ ಕುಕ್ಕಿದ್ದು! ಬಲಿ ಚಕ್ರವರ್ತಿ ಕೊನೆಗೂ ವಾಮನನಿಗೆ ಮೂರಡಿ ದಾನ ಕೊಟ್ಟೇಬಿಡು ತ್ತಾನೆ. ವಾಮನ ತ್ರಿವಿಕ್ರಮನಾಗಿ ಮೂರು ಅಡಿಗಳಿಂದ ಮೂರು ಲೋಕಗಳನ್ನು ಅಳೆದು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ
ದೂಡುತ್ತಾನೆ, ವರ್ಷಕ್ಕೊಮ್ಮೆ ಭೂಮಿಗೆ ಬಂದುಹೋಗುವಂತೆ ಅಪ್ಪಣೆ ಕೊಡುತ್ತಾನೆ ಅಂತೆಲ್ಲ ಕಥೆ. ಗಂಗಾನದಿಯ ಉದ್ಭವ ವಾಗುವುದೂ ಆ ಸನ್ನಿವೇಶದಲ್ಲೇ. ಮತ್ತೆ, ಕುಶಾಗ್ರದಿಂದ ಕಣ್ಣು ಕುಕ್ಕಿಸಿಕೊಂಡು ಒಕ್ಕಣ್ಣನಾದ ಶುಕ್ರಾಚಾರ್ಯರಿಗೆ ಏನಾಗುತ್ತದೆ? ಆ ವಿವರಗಳು ಕಥೆಯಲ್ಲಿಲ್ಲ. ಆದರೆ ನಾನು ಬೇರೆಲ್ಲೋ ಓದಿದ ಪ್ರಕಾರ, ತಮಿಳುನಾಡಿನಲ್ಲಿ ಈಗಿನ ಚೆನ್ನೈ ನಗರದ  ಮೈಲಾಪುರ ದಲ್ಲಿ ವೆಲ್ಲೀಶ್ವರ ದೇವಾಲಯವಿರುವಲ್ಲಿ ಶುಕ್ರಾಚಾರ್ಯರು ಶಿವನನ್ನು ಮೆಚ್ಚಿಸಲು ಕಠೋರ ತಪಸ್ಸು ಮಾಡಿ ಕಣ್ಣಿನ ದೃಷ್ಟಿಯನ್ನು ಮತ್ತೆ ಪಡೆದರಂತೆ.

ಆ ದೇವಾಲಯವು ಶುಕ್ರಾಚಾರ್ಯರಿಗೊಲಿದ ಈಶ್ವರನದು ಎಂದೇ ಅಲ್ಲಿ ಪ್ರತೀತಿಯಿದೆಯಂತೆ. ಭಗವಂತನು ಕಣ್ಣು ಕುಕ್ಕಿದ ಎರಡನೆಯ ಕಥೆ ರಾಮಾಯಣದ ಸುಂದರಕಾಂಡದಲ್ಲಿ ಬರುವುದು. ಇದು ವಾಲ್ಮೀಕಿ ಮಹರ್ಷಿ ಬರೆದ ಮೂಲ ರಾಮಾಯಣ ದಲ್ಲೇ ಇದೆ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಶಾಪ ಮತ್ತು ವರಗಳನ್ನು ಸೊಗಸಾಗಿ ಬಣ್ಣಿಸಿರುವ ಪುಸ್ತಕ, ಶ್ರೀಪಾದ ರಘುನಾಥ ಭಿಡೆ ಎಂಬುವ ಲೇಖಕರು ಮರಾಠಿಯಲ್ಲಿ ಬರೆದಿದ್ದನ್ನು ಸರಸ್ವತಿ ಗಜಾನನ ರಿಸಬೂಡ ಅವರು ಕನ್ನಡಕ್ಕೆ ಅನುವಾದಿಸಿರುವಂಥದ್ದು, 2011ರಲ್ಲಿ ಬೆಳಗಾವಿಯಲ್ಲಿ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದೆ.

ಇದರ ಪಿಡಿಎಫ್ ಆವೃತ್ತಿಯು ಅಂತರಜಾಲದಲ್ಲಿ ಉಚಿತವಾಗಿ ಸಿಕ್ಕಿದ್ದು ನನ್ನ ಸಂಗ್ರಹದಲ್ಲಿದೆ. ಸಾಗರೋಲ್ಲಂಘನ ಮಾಡಿ ಲಂಕೆಯನ್ನು ತಲುಪಿದ ಹನುಮಂತನು ಅಲ್ಲಿ ಅಶೋಕವನದಲ್ಲಿ ಬಂದಿಯಾಗಿದ್ದ ಸೀತೆಯನ್ನು ಪತ್ತೆಹಚ್ಚುತ್ತಾನೆ.  ಆದರೆ ಮರಳಿ ರಾಮನಲ್ಲಿಗೆ ಬಂದು ವರದಿ ಮಾಡುವಾಗ ತಾನು ಭೇಟಿಯಾದದ್ದು ಸೀತೆಯನ್ನೇ ಎಂಬುದಕ್ಕೆ ಪುರಾವೆ ಬೇಕಲ್ಲ? ಸೀತೆಯೇನೋ ಗುರುತಿಗೆಂದು ಚೂಡಾಮಣಿಯನ್ನು ಕೊಟ್ಟು ಕಳುಹಿಸಿದ್ದಳಾದರೂ ಅದಕ್ಕಿಂತಲೂ ನಿಖರವಾದ ಪುರಾವೆ ಬೇಕು.

ಅದಕ್ಕೋಸ್ಕರ, ಅಲ್ಲಿಯವರೆಗೆ ಸೀತೆ ಮತ್ತು ರಾಮನಿಗೆ ಮಾತ್ರ ಗೊತ್ತಿದ್ದ ರಹಸ್ಯ ಪ್ರಸಂಗದ ಕಥೆಯನ್ನು ಸೀತೆ ಹನುಮಂತನಿಗೆ ಹೇಳುತ್ತಾಳೆ. ಅದನ್ನು ರಾಮನಿಗೆ ತಿಳಿಸಿದರೆ ಆತನಿಗೆ ಮನವರಿಕೆ ನಿಶ್ಚಿತವಾಗಿ ಆಗುವುದೆಂದು ಸೀತೆಯ ಆಲೋಚನೆ. ಆ ಕಥೆ ಹೀಗಿದೆ: ರಾಮ – ಸೀತೆ ಮತ್ತು ಲಕ್ಷ್ಮಣ ಚಿತ್ರಕೂಟ ಪರ್ವತದ ತಪ್ಪಲಲ್ಲಿ ಮಂದಾಕಿನೀ ನದೀತೀರದಲ್ಲಿ ವಾಸವಾಗಿದ್ದ ದಿನಗಳವು. ಒಂದು ದಿನ ಊಟವಾದ ಬಳಿಕ ಮಿಕ್ಕಿದ ಆಹಾರವನ್ನು ಕಾಯುತ್ತ ಸೀತೆ ಕುಳಿತಿದ್ದಳು. ಅವಳ ಹತ್ತಿರದಲ್ಲೇ ರಾಮನೂ ಇದ್ದನು. ಯಥಾಪ್ರಕಾರ ಲಕ್ಷ್ಮಣ ಹೊರಗೆಲ್ಲೋ ಆಹಾರಸಂಗ್ರಹಕ್ಕೆ ಹೋಗಿದ್ದನು.

ಪತಿಪತ್ನಿಯರಲ್ಲಿ ಮೃದುವಾಗಿ ಸರಸಸಲ್ಲಾಪ, ಶೃಂಗಾರಚೇಷ್ಟೆಗಳು ನಡೆದಿದ್ದವು. ಆಗ ಆಹಾರದ ಆಸೆಯಿಂದ ಒಂದು ಕಾಗೆಯು
ಅಲ್ಲಿಗೆ ಬಂದಿತು. ಸೀತೆಯು ಒಂದು ಮಣ್ಣಿನ ಹೆಂಟೆಯಿಂದ ಹೊಡೆದು ಅದನ್ನು ಹಾರಿಸಲು ಯತ್ನಿಸಿದಳು. ಆದರೆ ಆ ಕಾಗೆಯು ಮತ್ತೆ ಅವಳ ಸಮೀಪ ಬರಹತ್ತಿತು. ಸೀತೆಯ ಮುಖವನ್ನು ತನ್ನ ಕೊಕ್ಕಿನಿಂದ ಕುಕ್ಕಿ ಉಗುರುಗಳಿಂದ ಪರಚಿ ನೋವನ್ನುಂಟು ಮಾಡಿತು. ಸೀತೆಗೆ ಅತಿಯಾದ ಕೋಪ ಬಂತು.

ಕಾಗೆಯು ಇನ್ನಷ್ಟು ಉಪದ್ರವ ಕೊಟ್ಟು ಸೀತೆಯನ್ನು ಸತಾಯಿಸಿತು. ಆಮೇಲೆ ಸೀತೆ ದಣಿದು ವಿಶ್ರಮಿಸಲೆಂದು ರಾಮನ ತೊಡೆಯ ಮೇಲೆ ಮಲಗಿದಳು. ರಾಮ ಮತ್ತು ಸೀತೆ ಇಬ್ಬರಿಗೂ ನಿದ್ದೆಯ ಜೊಂಪು ಹತ್ತಿತು. ಆ ಕಾಗೆಯೋ ಪುನಃ ಅಲ್ಲಿಗೆ ಬಂತು. ಸೀತೆಯು ಎಚ್ಚತ್ತು ರಾಮನ ತೊಡೆಯ ಮೇಲಿನಿಂದ ಎದ್ದು ಬದಿಗೆ ಕುಳಿತಳು. ಕಾಗೆ ಮತ್ತೊಮ್ಮೆ ಎರಗಿ ಸೀತೆಯ ವಕ್ಷಸ್ಥಳವನ್ನು ಪರಚಿತು. ಸೀತೆಯ ಎದೆಯ ಭಾಗದಿಂದ ಬಿದ್ದ ರಕ್ತದ ಹನಿಗಳ ಕಾರಣ ರಾಮನು ಎಚ್ಚರ ಗೊಂಡನು.

ಸೀತೆಯ ಸ್ತನಗಳೆರಡಕ್ಕೂ ಪರಚಿದ ಗಾಯಗಳಾಗಿರುವುದನ್ನು ಗಮನಿಸಿದ ರಾಮನು ಸಿಡಿಮಿಡಿಗೊಂಡನು. ಯಾರು ನಿನ್ನನ್ನು ಪರಚಿದರು? ಈ ಕುಚೇಷ್ಟೆಯ ಕ್ರೀಡೆಯನ್ನು ಮಾಡಿದವರಾರು? ಎಂದೆನ್ನುತ್ತಿದ್ದಂತೆಯೇ ರಾಮನ ದೃಷ್ಟಿಯು ಆ ಕಾಗೆಯತ್ತ ಹೋಯಿತು. ತತ್‌ಕ್ಷಣ ಅದು ಪೊದೆಯ ಮರೆಯಾಯಿತು. ಪಕ್ಷಿಗಳಲ್ಲಿ ಚಾಣಾಕ್ಷವೆನಿಸಿದ ಆ ಕಾಗೆ ನಿಜವಾಗಿಯೂ ಇಂದ್ರನ ಮಗನೇ ವೇಷಮರೆಸಿ ಬಂದದ್ದಾಗಿತ್ತು! ಕ್ರೋಧಗೊಂಡ ರಾಮನು ಬ್ರಹ್ಮಾಸ್ತ್ರದಿಂದ ಮಂತ್ರಿಸಿದ ಒಂದು ದರ್ಭೆಯನ್ನು ಆ ಕಾಗೆಯ ಮೇಲೆ ಬಿಟ್ಟನು. ಕಾಗೆ ಪೊದೆಯಿಂದ ಹೊರಬಂದು ಆಕಾಶದತ್ತ ಹಾರಿತು.

ಕಾಗೆ ಹೋದತ್ತ ದರ್ಭೆಯೂ ಬೆನ್ನಟ್ಟಿತು. ಕಾಗೆ ಮೂರೂ ಲೋಕಗಳನ್ನು ಸುತ್ತಿತು. ಎಲ್ಲಿಯೂ ಅದಕ್ಕೆ ಆಸರೆ ಸಿಗಲಿಲ್ಲ.  ಹೋದಲ್ಲೆಲ್ಲ ದರ್ಭೆಯು ಬೆನ್ನುಹತ್ತಿತು. ಕೊನೆಗೆ ಕಾಗೆಯು ಮರಳಿಬಂದು ರಾಮನಿಗೆ ಶರಣಾಯಿತು. ಪ್ರಾಣವನ್ನು ಉಳಿಸು ಎಂದು ಪ್ರಾರ್ಥಿಸಿತು. ಶರಣಾಗತರಿಗೆ ಅಭಯವನ್ನೀಯುವುದು ರಾಮನ ತತ್ತ್ವ. ಅಲ್ಲದೆ ಕಾಗೆಯ ಮೇಲೆ ರಾಮನಿಗೆ ದಯೆ
ಬಂತು. ‘ಬ್ರಹ್ಮಾಸ್ತ್ರ ಎಂದಿಗೂ ವ್ಯರ್ಥವಾಗದು. ಆದ್ದರಿಂದ ನಿನ್ನ ದೇಹದ ಯಾವ ಭಾಗವು ನಾಶವಾಗಲಿ ಎಂಬುದನ್ನು, ಆ
ಅವಯವದ ಆಸೆ ಬಿಟ್ಟು ಹೇಳು’ ಎಂದು ಕಾಗೆಗೆ ಹೇಳಿದನು.

ಕಾಗೆಯು ‘ಹಾಗಾದರೆ ಅಸ್ತ್ರವನ್ನು ನನ್ನೊಂದು ಕಣ್ಣಿನ ಮೇಲೆ ಪ್ರಯೋಗಿಸು’ ಎಂದಿತು. ಅಂದಿನಿಂದ ಕಾಗೆ ಒಂದು ಕಣ್ಣಿನದಾ ಯಿತು. ಇದು ರಾಮನ ಶಾಪವಲ್ಲ, ಕಾಗೆ ಮಾಡಿದ ಕುಕೃತ್ಯಕ್ಕೆ ಸಿಕ್ಕ ಶಿಕ್ಷೆ ಅಷ್ಟೇ. ರಾಮಾಯಣದ ಬೇರೆ ಕೆಲವು ಆವೃತ್ತಿಗಳಲ್ಲಿ ಈ ಕಥೆಯ ವಿವರಗಳು ಅಷ್ಟಿಷ್ಟು ಬದಲಾಗಿರುವುದೂ ಇರಬಹುದು. ಕಾಗೆಯು ಕಾಕಾಸುರನೆಂಬ ರಕ್ಕಸನ ರೂಪ, ಅದು ಸೀತೆಯ ಕೊರಳಲ್ಲಿರುವ ಹಾರದವರೆಗೆ ಅತಿರೇಕ ಮಾಡಿದ ವರ್ಣನೆ, ರಾಮನು ಕಾಗೆಗೆ ಶಿಕ್ಷೆ ವಿಧಿಸಲು ಐಷಿಕಾಸ್ತ್ರದಿಂದ ಮಂತ್ರಿಸಿ ಒಂದು ಕಡ್ಡಿಯನ್ನು ಬಾಣದಂತೆ ಕಾಗೆಗೆ ಬಿಟ್ಟನೆಂಬ ವರ್ಣನೆ ಇತ್ಯಾದಿ.

ನಮಗಿಲ್ಲಿ ಮುಖ್ಯವೇನೆಂದರೆ ರಾಮನು ಕಾಗೆಯ ಕಣ್ಣುಗಳನ್ನು ಕುಕ್ಕಿದನು ಎಂಬುದಷ್ಟೇ. ಕಣ್ಣು ಕುಕ್ಕಿದ ಮೂರನೆಯ ಪ್ರಸಂಗ ಬರುವುದು ಚ್ಯವನ ಮಹರ್ಷಿಯ ಕಥೆಯಲ್ಲಿ. ಅದೇ, ಚ್ಯವನಪ್ರಾಶ ಎಂಬ ಅಮೃತತುಲ್ಯ ಔಷಧದ ಹೆಸರಿಗೆ ಕಾರಣವಾದ ಚ್ಯವನ
ಮಹರ್ಷಿಯ ಕಥೆ. ನನ್ನಲ್ಲಿರುವ ಪುರಾಣನಾಮ ಚೂಡಾಮಣಿ ಪುಸ್ತಕದಿಂದ ಇದರ ಸಾರಾಂಶವನ್ನಿಲ್ಲಿ ಕೊಡುತ್ತಿದ್ದೇನೆ.

ಚ್ಯವನನು ಭೃಗು ಮಹರ್ಷಿಯ ಮಗ. ಶುಕ್ರಾಚಾರ್ಯನ ಸಹೋದರ. ಈತ ತನ್ನ ಜನನಿಯಾದ ಪುಲೋಮೆಯ ಗರ್ಭದಲ್ಲಿದ್ದಾಗ ಒಬ್ಬ ರಾಕ್ಷಸನು ಪುಲೋಮೆಯನ್ನು ಅಪಹರಿಸಿದನು. ಪುಲೋಮೆ ಭಯಗ್ರಸ್ತೆಯಾದಳು. ಅವಳ ಕಣ್ಣೀರಕೋಡಿಯು ವಧೂಸರಾ ಎಂಬ ನದಿಯಾಗಿ ಹರಿಯಿತು. ಪುಲೋಮೆಯ ಗರ್ಭದಿಂದ ಶಿಶುವು ಧರೆಗೆ ಉದುರಿತು. ಅರ್ಥಾತ್ ಚ್ಯುತಿ ಆಯಿತು, ಆದ್ದರಿಂದಲೇ ಚ್ಯವನ ಎಂದು ಹೆಸರಾಯಿತು.

ಶಿಶುವಿನ ದೃಷ್ಟಿಯು ಎಷ್ಟು ಕಾಂತಿಯುಕ್ತವಾಗಿತ್ತೆಂದರೆ ಆ ರಾಕ್ಷಸನನ್ನು ಒಮ್ಮೆ ಅದು ನೋಡಿದಾಗ ರಾಕ್ಷಸ ಅಲ್ಲಿಯೇ
ಬೂದಿ ಯಾದನು. ಮುಂದೆ ಚ್ಯವನನು ಬೆಳೆದು ಮನುಪುತ್ರಿಯಾದ ಅರುಷಿಯನ್ನು ಮದುವೆಯಾಗಿ ಔರ್ವನೆಂಬ ಮಗನನ್ನು ಪಡೆದನು. ಹಾಗೆಯೇ, ಶರ್ಯಾತಿ ರಾಜನ ಮಗಳಾದ ಸುಕನ್ಯೆಯನ್ನು ಮದುವೆಯಾಗಿ ಪ್ರಮತಿಯೆಂಬ ಮಗನನ್ನು ಪಡೆದನು. ಅದಕ್ಕಿಂತ ಮೊದಲು ನಡೆದ ಪ್ರಸಂಗವಿದು. ಚ್ಯವನ ಮಹರ್ಷಿ ತಪೋನಿರತನಾಗಿದ್ದಾಗ ದೇಹದ ಸುತ್ತಲೂ ಹುತ್ತ ಬೆಳೆದರೂ ಆತನಿಗೆ ಅದರ ಪರಿವೆಯೇ ಇಲ್ಲ.

ಯಾವ ಪ್ರಕಾರದಲ್ಲಿ ಹುತ್ತ ಬೆಳೆದಿತ್ತೆಂದರೆ ಚ್ಯವನನ ಕಣ್ಣುಗಳು ಮಾತ್ರ ಹುತ್ತದ ರಂಧ್ರಗಳ ಮೂಲಕ ಮಿನುಗುತ್ತಿದ್ದವು. ಒಮ್ಮೆ ಶರ್ಯಾತಿ ರಾಜ ತನ್ನ ಸೇನೆಯೊಂದಿಗೆ ಚ್ಯವನ ಮುನಿಯ ಆಶ್ರಮದ ಬಳಿ ಬಿಡಾರ ಮಾಡಿದ. ಶರ್ಯಾತಿಯೊಂದಿಗೆ ಬಂದಿದ್ದ ಸುಕನ್ಯೆಯು ಸಖಿಯರೊಡಗೂಡಿ ಅತ್ತಿತ್ತ ತಿರುಗಾಡುತ್ತ ಆ ಹುತ್ತದ ಬಳಿ ಬಂದಳು. ಕಂಡಿಗಳ ಮೂಲಕ ಬರುತ್ತಿದ್ದ ಬೆಳಕನ್ನು ಕಂಡು ಕುತೂಹಲದಿಂದ ಒಂದು ಮುಳ್ಳಿನ ಕೊನೆಯಿಂದ ಆ ಕಣ್ಣುಗಳಿಗೆ ಕುಕ್ಕಿದಳು. ಉರಿ ತಾಳದೆ ಚ್ಯವನನು ಸಿಟ್ಟಾಗಿ ಶರ್ಯಾತಿಯ ಬಳಗವನ್ನೆಲ್ಲ ಶಪಿಸಿದನು. ಅವರೆಲ್ಲರಿಗೆ ಮಲಮೂತ್ರ ನಿಂತುಹೋದವು.

ಇದಕ್ಕೆ ಕಾರಣವೇನೆಂಬುದನ್ನು ಯೋಚಿಸುತ್ತಿದ್ದ ರಾಜ ಕಟ್ಟಕಡೆಗೆ ತನ್ನ ಮಗಳ ಮೂಲಕವಾಗಿಯೇ ಆಕೆಯಿಂದ  ನಡೆದು ಹೋದ ಅಪಚಾರವನ್ನು ತಿಳಿದುಕೊಂಡನು. ‘ನಾನಲ್ಲಿ ತಿರುಗಾಡುತ್ತಿದ್ದಾಗ ಹುತ್ತದ ಒಳಗಿಂದ ಹೊರಸೂಸುವ ಬೆಂಕಿಯಂತೆ ಹೊಳೆಯುತ್ತಿರುವುದನ್ನು ನೋಡಿದೆ. ಅದೊಂದು ಬೆಂಕಿಯ ಹುಳುವಾಗಿರಬಹುದು ಎಂದುಕೊಂಡು ಅದನ್ನು ಕಡ್ಡಿಯಿಂದ ಕುಕ್ಕಿದೆ’ ಎಂದು ಸುಕನ್ಯೆಯು ತಂದೆಯಲ್ಲಿ ಎಲ್ಲವನ್ನೂ ವಿವರಿಸಿದಳು. ಶರ್ಯಾತಿ ರಾಜನು ಚ್ಯವನನಲ್ಲಿಗೆ ಹೋಗಿ ಕ್ಷಮೆ ಕೇಳಿದನು. ಆಗ ಆ ಮುನಿಯು, ಕುರುಡನಾದ ತನ್ನ ಶುಶ್ರೂಷೆಗಾಗಿ ಸುಕನ್ಯೆಯನ್ನು ತನಗೆ ಕೊಡುವಂತೆ ಕೇಳಿದನು.

ಶರ್ಯಾತಿ ಚಿಂತಾಕ್ರಾಂತ ನಾದನು. ಸುಕನ್ಯೆಯು ತನ್ನ ಒಬ್ಬಳ ಸಲುವಾಗಿ ಅಷ್ಟು ಮಂದಿಯೂ ಪ್ರಾಣ ಕಳೆದುಕೊಳ್ಳುವುದು ಯುಕ್ತವಲ್ಲವೆಂದು ಪಶ್ಚಾತ್ತಾಪ ವ್ಯಕ್ತಪಡಿಸಿದಳು. ಚ್ಯವನನು ವಯೋವೃದ್ಧನಾಗಿದ್ದರೂ ರಾಜನು ಬೇರೆ ನಿರ್ವಾಹವಿಲ್ಲದೆ ಸುಕನ್ಯೆಯ ಮದುವೆಯನ್ನು ಚ್ಯವನನೊಡನೆ ಮಾಡಿಕೊಟ್ಟನು. ಚ್ಯವನನನ್ನು ಮದುವೆಯಾದ ಸುಕನ್ಯೆ ಅಲ್ಲಿಯೇ ಅವನ ಶುಶ್ರೂಷೆ ಮಾಡಿಕೊಂಡಿದ್ದಳು.

ಇದರಿಂದ ಸಂತೃಪ್ತನಾದ ಚ್ಯವನನ ಸಿಟ್ಟು ಇಳಿದು ಶರ್ಯಾತಿಯ ಪರಿವಾರಕ್ಕೆ ಈ ಮೊದಲು ಕೊಟ್ಟಿದ್ದ ಶಾಪದ ಪ್ರಭಾವ ಕಡಿಮೆಯಾಗಿ ಅವರೆಲ್ಲರೂ ಆರೋಗ್ಯ ಹೊಂದುವಂತಾಯಿತು. ಒಂದು ದಿನ ಸುಕನ್ಯೆ ಕೊಳದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿ
ಹೊರಬರುತ್ತಿದ್ದಾಗ ಅಶ್ವಿನೀದೇವತೆಗಳು ಅವಳನ್ನು ಕಂಡು ಮೋಹಭರಿತರಾಗಿ, ವೇಷಮರೆಸಿ, ತಮ್ಮ ಅಭಿಪ್ರಾಯವನ್ನು
ಆಕೆಗೆ ಸೂಚಿಸಿದರು. ಸುಕನ್ಯೆ ಅವರನ್ನು ಶಪಿಸುವವಳಿದ್ದಳು.

ಅಷ್ಟರಲ್ಲಿ ಅಶ್ವಿನೀದೇವತೆಗಳು ತಮ್ಮ ನಿಜರೂಪ ತೋರಿ ವರ ಬೇಡುವಂತೆ ಹೇಳಿದರು. ಸುಕನ್ಯೆ ತನ್ನ ಪತಿಗೆ ಯೌವನವನ್ನು
ಬೇಡಿದಳು. ಆಗ ಅಶ್ವಿನೀದೇವತೆಗಳು ಚ್ಯವನನನ್ನು ಬರಮಾಡಿಸಿ, ಆತನೊಂದಿಗೆ ತಾವೂ ಅದೇ ಕೊಳದಲ್ಲಿಯೇ ಸ್ನಾನಮಾಡಿ ದರು. ಮೇಲಕ್ಕೆ ಬಂದಾಗ ಮೂವರದೂ ಒಂದೇ ರೂಪ! ಸುಕನ್ಯೆ ತನ್ನ ಪಾತಿವ್ರತ್ಯ ಮಹಿಮೆಯಿಂದ ಚ್ಯವನನನ್ನು ಗುರುತಿಸಿ ಕೈಹಿಡಿದಳು. ಈ ರೀತಿಯಲ್ಲಿ ಚ್ಯವನನು ಅಶ್ವಿನೀ ದೇವತೆಗಳ ಮೂಲಕ ಮತ್ತೆ ತಾರುಣ್ಯ ಪಡೆದ ಕಾರಣ ಪ್ರತಿಫಲ ರೂಪವಾಗಿ ತನ್ನ ಮಾವನಾದ ಶರ್ಯಾತಿ ರಾಜನಿಂದ ಯಜ್ಞ ಮಾಡಿಸಿ ಆ ಯಜ್ಞದಲ್ಲಿ ಅಶ್ವಿನೀದೇವತೆಗಳಿಗೆ ಹವಿಸ್ಸನ್ನು ಕೊಡಿಸಿದನು. ಅದುವರೆಗೂ ಯಜ್ಞಗಳಲ್ಲಿ ಅಶ್ವಿನೀದೇವತೆಗಳಿಗೆ ಹವಿಸ್ಸು ಸಂದದ್ದಿಲ್ಲ.

ಆದರೆ ಚ್ಯವನನಿಂದಾಗಿ ಅದು ಸಾಧ್ಯವಾಯ್ತೆಂದು ಅರಿತ ದೇವೇಂದ್ರ ಸಿಟ್ಟಾದ. ಅಶ್ವಿನೀದೇವತೆಗಳು ಚಿಕಿತ್ಸಕರು. ಅವರೇನಿ ದ್ದರೂ ವೈದ್ಯಕೀಯ ಸೇವೆಗಷ್ಟೇ ಇರುವವರು. ಅವರಿಗೆ ಯಜ್ಞದ ಹವಿಸ್ಸಿನಲ್ಲಿ, ಸೋಮರಸದಲ್ಲಿ ಪಾಲು ಪಡೆಯಲಿಕ್ಕೆ ಅರ್ಹತೆ ಯಿಲ್ಲ ಎಂದು ಇಂದ್ರನ ಅಂಬೋಣ. ಹಾಗಾಗಿ ಚ್ಯವನನನ್ನು ಕೊಲ್ಲಲು ಇಂದ್ರನು ಅನೇಕ ತಂತ್ರಗಳನ್ನು ಹೂಡಿದನು. ವಜ್ರಾಯುಧವನ್ನೂ ಪ್ರಯೋಗಿಸಿದನು. ಚ್ಯವನನಾದರೋ ತನ್ನ ಮಂತ್ರಬಲದಿಂದ ಅವುಗಳನ್ನೆಲ್ಲ ತಪ್ಪಿಸಿಕೊಂಡನು. ಅಷ್ಟೇ ಅಲ್ಲ, ಇಂದ್ರನನ್ನು ಸಂಹರಿಸುವುದಕ್ಕಾಗಿ ‘ಮದ’ವೆಂಬ ದುರ್ದೇವತೆಯ ಸೃಷ್ಟಿ ಮಾಡಿದನು. ಕೊನೆಗೂ ಇಂದ್ರನು ಸೋತು ಅಶ್ವಿನೀದೇವತೆಗಳಿಗೆ ಹವಿಸ್ಸು ಸಲ್ಲುವುದಕ್ಕೆ ಒಪ್ಪಿದನು.

ಚ್ಯವನನ ಸಿಟ್ಟು ಇಳಿಯಿತು. ತನ್ನ ಸೃಷ್ಟಿಯಾದ ಮದ ದೇವತೆಯನ್ನು ಭಾಗಗಳಾಗಿಸಿ ಒಂದೊಂದರಂತೆ ಮೊದಲೇ ಸೃಷ್ಟಿ ಯಾಗಿದ್ದ ಮಾದಕ ಪದಾರ್ಥಗಳಲ್ಲಿ, ಸ್ತ್ರೀಯರಲ್ಲಿ, ಜೂಜಿನಲ್ಲಿ, ಮತ್ತು ಬೇಟೆಯಲ್ಲಿ ಹಂಚಿದನು. ಆಮೇಲೊಮ್ಮೆ ಚ್ಯವನನು ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದಾಗ ಬೆಸ್ತರ ಬಲೆಯಲ್ಲಿ ಸಿಕ್ಕಿಬಿದ್ದದ್ದೂ ಇದೆ. ಆಗ ಅವನನ್ನು ಬಿಡಿಸಲಿಕ್ಕೆ ನಹುಷ ಮಹಾರಾಜ ಬರಬೇಕಾಯ್ತು.

ಕ್ಷತ್ರಿಯನಾದ ಕುಶಿಕನ ವಂಶದೊಂದಿಗೆ ಬ್ರಾಹ್ಮಣನಾದ ಭೃಗು ಮುನಿಯ ವಂಶ ಕಲೆತುಹೋಗುವುದೆಂಬುದಾಗಿ ದೇವತೆಗಳಿಂದ
ತಿಳಿದು ಅದನ್ನು ಸಹಿಸಲಾರದೆ ಕುಶಿಕನ ಸಂಹಾರಕ್ಕಾಗಿ ಅವನ ಮನೆಗೆ ಚ್ಯವನ ಹೋಗಿದ್ದನು. ವಿಪರ್ಯಾಸವೆಂಬಂತೆ,
ಕುಶಿಕನನ್ನು ಕೊಲ್ಲುವ ಬದಲಿಗೆ, ಪತ್ನೀಸಮೇತನಾಗಿ ಕುಶಿಕ ಮಾಡಿದ್ದ ಆತಿಥ್ಯಕ್ಕೆ ಮೆಚ್ಚಿ ತನ್ನ ಯೋಗಮಹಿಮೆಯಿಂದ ಒಂದು
ಸ್ವರ್ಗವನ್ನು ಸೃಷ್ಟಿಮಾಡಿ ಅವರಿಗೆ ತೋರಿ ಕುಶಿಕ ವಂಶದಲ್ಲಿ ಬ್ರಾಹ್ಮಣನು ಜನಿಸುವಂತೆ ವರವನ್ನಿತ್ತ ಮಹಾನುಭಾವ ಚ್ಯವನ.
ಆ ಕುಶಿಕವಂಶಜನೇ ಗಾಽ ರಾಜನಿಗೆ ಮಗನಾಗಿ ಹುಟ್ಟಿದ ಕೌಶಿಕ, ಆಮೇಲೆ ವಿಶ್ವಾಮಿತ್ರ ಮಹರ್ಷಿಯಾದವನು.

ಇನ್ನೊಂದು ಕುತೂಹಲಕಾರಿ ಅಂಶವನ್ನು ಹೇಳಿ ಈ ಪುರಾಣವನ್ನು ಮುಗಿಸುತ್ತೇನೆ. ಅದೇನೆಂದರೆ ಒಂದು ಮೂಲದ ಪ್ರಕಾರ, ಚ್ಯವನ ಮಹರ್ಷಿಯ ಮಗ ವಾಲ್ಮೀಕಿ! ತಾನು ಭೃಗು ಮಹರ್ಷಿಯ ವಂಶದವನು ಭಾರ್ಗವ ಎಂದು ವಾಲ್ಮೀಕಿಯು ಹೇಳಿಕೊಳ್ಳುವ ಶ್ಲೋಕಗಳಿವೆ. ಭೃಗುವಿನ ಮಗ ಚ್ಯವನ, ಚ್ಯವನನ ಮಗ ವಾಲ್ಮೀಕಿ ಎಂದು ಆ ಕುಲವೃತ್ತಾಂತ. ಅದರ ಇತರ ವಿವರಗಳು ನಮಗಿಲ್ಲಿ ಅಪ್ರಸ್ತುತ. ಆದರೆ, ಕಣ್ಣು ಕುಕ್ಕುವ ಮೂರೂ ಕಥೆಗಳಿಗೆ ಸ್ವಾರಸ್ಯಕರವಾದೊಂದು ಕೊಂಡಿ ಇದೆಯಂತಾಯಿತು.

ಹೇಗೆಂದರೆ ಶುಕ್ರಾಚಾರ್ಯ ಮತ್ತು ಚ್ಯವನ ಮಹರ್ಷಿ ಸೋದರರು. ಇಬ್ಬರೂ ಕಣ್ಣು ಕುಕ್ಕಿಸಿಕೊಂಡವರು. ವಾಲ್ಮೀಕಿಯು ರಾಮಕಥೆಯಲ್ಲಿ ಕಾಗೆಯ ರೂಪದ ಇಂದ್ರಪುತ್ರನ ಕಣ್ಣುಗಳನ್ನು ಕುಕ್ಕಿಸಿದವನು. ಈಗ, ಇದೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕಿದ್ದರೆ ಬಹುಶಃ ನಾವೆಲ್ಲರೂ ಒಂದು ಚಮಚೆಯಷ್ಟು ಚ್ಯವನಪ್ರಾಶವನ್ನು ಸೇವಿಸುವುದು ಒಳ್ಳೆಯದು. ಅಶ್ವಿನೀದೇವತೆಗಳು ಚ್ಯವನ
ಮಹರ್ಷಿಗೆ ಚಿರತಾರುಣ್ಯಕ್ಕಾಗಿ, ಲವಲವಿಕೆಗಾಗಿ ತಯಾರಿಸಿ ಕೊಟ್ಟಿದ್ದ ಲೇಹ್ಯ ಅದು!