ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ
ನಿಗಮ ನಡೆಸಲು ಹಣವಿಲ್ಲವೆಂದು ಸಾಲ ಮಾಡಿದ್ದ ಹಣದಲ್ಲಿ ಬಸ್ ಖರೀದಿಗೆ ಮುಂದಾದ ಬಿಎಂಟಿಸಿ
ಬೆಂಗಳೂರು: ನಿಗಮ ಮಂಡಳಿ ಮುನ್ನಡೆಸಲು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಕಾರಣ ಸಾಲ ಪಡೆದುಕೊಂಡಿರುವ ಬಿಎಂಟಿಸಿ, ಇದೀಗ ಈ ಸಾಲದಲ್ಲಿ ನೂತನ ಬಸ್‌ಗಳ ಖರೀದಿಗೆ ಮುಂದಾಗಿದೆ.
ದೇಶದಲ್ಲಿ ಕರೋನಾ ಕಾಣಿಸಿಕೊಂಡ ಬಳಿಕ ಶುರುವಾದ ಲಾಕ್‌ಡೌನ್‌ನಿಂದ ಸಾರಿಗೆ ಇಲಾಖೆ ನಷ್ಟಕ್ಕೆ ಸಿಲುಕಿದೆ. ಇದರಿಂದ ಹೊರಬರಲು ಬಸ್ ಹಾಗೂ ಕಟ್ಟಡಗಳನ್ನು ಅಡವಿಟ್ಟು ಸಾಲ ಪಡೆಯಲು ಮುಂದಾಗಿತ್ತು. ಇದೀಗ ಸಾಲದ ಮೊತ್ತ ಕೈ ಸೇರು ತ್ತಿದ್ದಂತೆ, ಸಮಸ್ಯೆೆಗಳನ್ನು ಬಗೆಹರಿಸಿಕೊಳ್ಳುವ ಬದಲು, ನೂತನವಾಗಿ 643 ಬಸ್‌ಗಳನ್ನು ಖರೀದಿಸಲು ಮುಂದಾಗಿದೆ. ಇದಕ್ಕೆ ಸಾರಿಗೆ ಇಲಾಖೆಯ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ ಬಿಎಸ್ 6 ಗುಣಮಟ್ಟದ 643 ನಾನ್ ಎಸಿ ಖರೀದಿಗೆ ಮುಂದಾಗಿದೆ. ಈ ಸಂಬಂಧ ಟೆಂಡರ್ ಕರೆದಿರುವ ಬಿಎಂಟಿಸಿ ನಡೆಗೆ ವಿರೋಧ ವ್ಯಕ್ತವಾಗಿದ್ದು, ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ ಇರುವ ವ್ಯವಸ್ಥೆೆಯಲ್ಲಿಯೇ ಎಲ್ಲವನ್ನೂ ನಿಭಾಯಿಸುವ ಬದಲು ಈ ರೀತಿ ನೂತನವಾಗಿ ಬಸ್ ಖರೀದಿಸುವ ತುರ್ತು ಏನಿತ್ತು? ಎಂದು ಪ್ರಶ್ನಿಸಲಾಗಿದೆ.
ಇರುವ ಬಸ್‌ನಲ್ಲಿ ಜನರಿಲ್ಲ: ಕರೋನಾ ಸಮಯದಲ್ಲಿ ಇರುವ ಬಸ್‌ಗಳಿಗೆ ಪ್ರಯಾಣಿಕರಿಲ್ಲ, ನೂತನ ಬಸ್ ಖರೀದಿಸುವ ಅಗತ್ಯವೇನಿತ್ತು? ಬೆಂಗಳೂರಿನ ವಿವಿಧ ರೂಟ್‌ಗಳಲ್ಲಿ ಖಾಲಿ ಬಸ್‌ಗಳು ಓಡುತ್ತಿವೆ. ಆದ್ದರಿಂದ ಈಗಿರುವ ಬಸ್‌ಗಳನ್ನೇ ಬಳಸಿ ಕೊಂಡು, ಸಂಚಾರ ನಡೆಸಬಹುದಾಗಿತ್ತು. ಅದನ್ನು ಬಿಟ್ಟು, ನೂತನ ಬಸ್‌ಗಳನ್ನು ಖರೀದಿ ಮಾಡಲು ಮುಂದಾಗಿರುವುದು ಕೆಟ್ಟ ತೀರ್ಮಾನ. ಇದರಿಂದ ಬಿಎಂಟಿಸಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವುದರೊಂದಿಗೆ, ಮುಂದಿನ ದಿನದಲ್ಲಿ ಸಿಬ್ಬಂದಿ ವೇತನ ಕ್ಕೂ ಸಮಸ್ಯೆಯಾಗಲಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಜ.15ರೊಳಗೆ ಪ್ರಿ-ಬಿಡ್ ಸಲ್ಲಿಸಿ, ಫೆ.1ರೊಳಗೆ ಟೆಂಡರ್ ಸಲ್ಲಿಸಲು ಅವಕಾಶ ಕಲ್ಪಿಸ ಲಾಗಿದೆ. ಫೆ.12ಕ್ಕೆೆ ಕಮರ್ಷಿಯಲ್ ಟೆಂಡರ್ ಕರೆಯಲು ಬಿಎಂಟಿಸಿ ನಿರ್ಧರಿಸಿದೆ. ಮೂಲಗಳ ಪ್ರಕಾರ 643 ಬಸ್‌ಗಳ ಖರೀದಿಗೆ ಸರಕಾರ ಮುಂದಾದರೆ, ಇದೀಗ ಪಡೆದಿರುವ ಸಾಲದ ಮೊತ್ತಕ್ಕಿಂತ ಹೆಚ್ಚು ಖರ್ಚಾಗಲಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ವೇತನಕ್ಕೆ ದುಡ್ಡಿಲ್ಲದಿರುವಾಗ ಖರೀದಿ ಅನಗತ್ಯ
ರಾಜ್ಯದಲ್ಲಿ ಕರೋನಾ ಕಾಣಿಸಿಕೊಂಡ ಬಳಿಕ ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯ ನಾಲ್ಕು ನಿಗಮ ಮಂಡಳಿಗಳಲ್ಲಿ ವೇತನ ನೀಡುವುದಕ್ಕೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಸರಕಾರದಿಂದ ಹಣ ಪಡೆದು, ಸಿಬ್ಬಂದಿಗೆ ವೇತನ ನೀಡ ಲಾಗಿತ್ತು.
ಈಗಲೂ ಅದೇ ಪರಿಸ್ಥಿತಿ ಇದೆ. ಆದ್ದರಿಂದ ವೇತನ ಸೇರಿದಂತೆ ವಿವಿಧ ಅಗತ್ಯ ಕಾರ್ಯಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶ ದಿಂದ ಸಾಲ ಪಡೆಯಲು ಬಿಎಂಟಿಸಿ ಮುಂದಾಗಿತ್ತು. ಆದರೆ ಈ ಮೊತ್ತದಲ್ಲಿ ಪುನಃ 643 ಬಸ್‌ಗಳ ಖರೀದಿಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಬ್ಯಾಟರಿಗಳನ್ನು ಅಡವಿಟ್ಟಿರುವ ನಿಗಮ
213 ಕೋಟಿ ರು. ಸಾಲ ಪಡೆದಿರುವ ಬಿಎಂಟಿಸಿ, ಈ ಮೊತ್ತಕ್ಕೆ ಬಸ್‌ಗಳು, ಕಟ್ಟಡ ಮಾತ್ರವಲ್ಲದೇ ಬ್ಯಾಟರಿಗಳನ್ನು ಸಹ ಅಡವಿಡ ಲಾಗಿತ್ತು. ಈ ರೀತಿ ಬ್ಯಾಟರಿಗಳನ್ನು ಅಡವಿಟ್ಟು ಹೊಸ ಬಸ್‌ಗಳನ್ನು ಖರೀದಿ ಮಾಡುವ ಅಗತ್ಯವೇನಿತ್ತು? ಸಂಕಷ್ಟದ ಸಮಯ ದಲ್ಲಿ ನಿಗಮ ಮಂಡಳಿಯನ್ನು ಉಳಿಸುವುದಕ್ಕೆ ಅಗತ್ಯವಿರುವ ಕೆಲಸವನ್ನು ಮಾಡುವ ಬದಲು, ಈ ರೀತಿ ನೂತನ ಬಸ್‌ಗಳನ್ನು ಖರೀದಿಸಿರುವುದು ಸರಿಯಲ್ಲ ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳಿದ್ದಾರೆ.