ವಿದೇಶವಾಸಿ
ಕಿರಣ್ ಉಪಾಧ್ಯಾಯ ಬಹ್ರೈನ್
ಎರಡು ವಾರದ ಹಿಂದೆ ‘ಈ ತೈಲ ಮಹಿಮೆ ಏನಾದರೂ ಬಲ್ಲಿರಾ…’ ಅಂಕಣದಲ್ಲಿ ಕೃಷ್ಣ ಸುಂದರಿ, ಕಪ್ಪು ಚಿನ್ನ ಎಂದು ಕರೆಯ ಲ್ಪಡುವ ಕಚ್ಚಾ ತೈಲದ ವಿಷಯ ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಓದುಗರ ಕುತೂಹಲ, ಪ್ರಶ್ನೆಗಳು ಸಾಗರೋಪಾದಿಯಲ್ಲಿ ಹರಿದು ಬಂದಿವೆ.
ಮದುವೆಯಾಗುವ ಗಂಡೊಂದು ಮದುವೆಗೆ ಮುನ್ನ ಹೆಣ್ಣಿನ ಕುಲ, ಗೋತ್ರ, ರಾಶಿ, ನಕ್ಷತ್ರ ವಿಚಾರಿಸಿದಂತೆ ಕೆಲವರಿಗೆ ಕೃಷ್ಣ ಸುಂದರಿಯ ಜಾತಕ ತಿಳಿಯುವ ಬಯಕೆ. ಕೆಲವರ ಕುತೂಹಲ ಎಲ್ಲಿಯವರೆಗೆ ಎಂದರೆ, ಈ ಕಚ್ಚಾ ತೈಲಕ್ಕೇನಾದರೂ ಜೀವ ಇದ್ದಿದ್ದರೆ ಮದುವೆಯಾಗುತ್ತಿದ್ದರೇನೋ ಎನ್ನುವಷ್ಟರ ಮಟ್ಟಿಗೆ.
ವಿಶೇಷ ಏನಿಲ್ಲ ಬಿಡಿ, ಭೂಮಾತೆಯ ಒಡಲಲ್ಲಿ ಅಡಗಿರುವ ಕಪ್ಪು ಸಮುದ್ರದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ಭೂಗರ್ಭ ದಲ್ಲಿ ಅಡಗಿರುವ ಕಡಲ ಒಡಲ ಆಳವನ್ನು ಶಬ್ದದಲ್ಲಿ ಕಟ್ಟಿಕೊಡಲಾದೀತೇ? ಅದೊಂದು ಬತ್ತದ ಅಕ್ಷಯ ಪಾತ್ರೆ. ಅಗೆದಷ್ಟೂ
ಆಶ್ಚರ್ಯ, ಬಗೆದಷ್ಟೂ ಬೆರಗು, ಮೊಗೆದಷ್ಟೂ ವಿಸ್ಮಯ. ಈ ಸುಂದರಿಯ ಜನ್ಮ ರಹಸ್ಯದ ಹಿಂದೆ ಕೆಲವು ಮಿಲಿಯನ್ ವರ್ಷಗಳ ಹಿಂದಿನ ಇತಿಹಾಸವಿದೆ ಎಂದರೆ ನಂಬಲೇಬೇಕು.
ಸುಮಾರು ಇನ್ನೂರ ಐವತ್ತು ಮಿಲಿಯನ್ ಅಥವಾ ಅದಕ್ಕೂ ಹೆಚ್ಚು ವರ್ಷಗಳ ಹಿಂದೆ ಈಗ ತೈಲ ನಿಕ್ಷೇಪ ಇರುವ ಕಡೆಯ ಜಲಚರಗಳೂ, ದೊಡ್ಡ ಪ್ರಮಾಣದ ಅಲ್ಗೆ ಮುಂತಾದ ಸಸ್ಯಗಳೂ, ಜೀವಿಗಳೂ ಇದ್ದವು. ಭೌಗೋಳಿಕವಾಗಿ ಆದ ಬದಲಾವಣೆ ಯಿಂದ ಅವೆಲ್ಲ ಭೂಮಿಯ ಅಡಿಯಲ್ಲಿ ಸೇರಿಕೊಂಡವು. ತೀವ್ರ ಪ್ರಮಾಣದಲ್ಲಿ ಉಷ್ಣತೆ ಮತ್ತು ಒತ್ತಡದ ಪರಿಣಾಮದಿಂದ ಅವುಗಳು ಕೊಳೆತು ಭೂಮಿಯಲ್ಲಿರುವ ಇತರ ಖನಿಜಾಂಶಗಳ ಜೊತೆ ಸೇರಿ ಕಪ್ಪು ಬಣ್ಣದ ಕಚ್ಚಾ ತೈಲವಾಗಿ ಜನ್ಮತಾಳಿತು.
ಭೂಮಿಯೊಳಗಿನ ತೈಲ ನಿಕ್ಷೇಪವನ್ನು ಕಂಡು ಹಿಡಿಯುವುದು ಹೇಗೆ? ಮುಂಚಿನ ದಿನಗಳಲ್ಲಿ ಭೂಮಿಯನ್ನು ಸ್ಪೋಟಗೊಳಿಸಿ ದಾಗ ಭೂಮಿಯಲ್ಲುಂಟಾಗುವ ಕಂಪನವನ್ನು ಅವಲೋಕಿಸಿ ತೈಲ ನಿಕ್ಷೇಪ ಪತ್ತೆ ಹಚ್ಚುತ್ತಿದ್ದರು. ಇದು ಹಳೆಯ ವಿಧಾನ.
ಇತ್ತೀಚಿನ ದಿನಗಳಲ್ಲಿ ನಿಕ್ಷೇಪ ಪತ್ತೆ ಹಚ್ಚಲು ವಿಶೇಷ ವಾಹನವನ್ನು ಬಳಸುತ್ತಾರೆ. ಭಾರೀ ಗಾತ್ರದ ಶಕ್ತಿಯುತವಾದ ವಾಹನ ಮರುಭೂಮಿಯಲ್ಲೂ ಚಲಿಸಬಲ್ಲ ಚಕ್ರ ಹೊಂದಿರುತ್ತದೆ. ವಾಹನದ ಕೆಳಭಾಗದಲ್ಲಿ ಲೋಹದ ದಪ್ಪಗಿನ ತಟ್ಟೆ ಅಳವಡಿಸಿರು
ತ್ತಾರೆ. ಹೈಡ್ರಾಲಿಕ್ ಜ್ಯಾಕ್ ಮೂಲಕ ಭೂಮಿಯನ್ನು
ಸ್ಪರ್ಶಿಸಿ, ಭೂಮಿಯಲ್ಲಿ ಕಂಪನ ಸೃಷ್ಟಿಸುವುದು ಇದರ ಕೆಲಸ. ಇಂತಹ ಎಂಟು ಹತ್ತು ವಾಹನಗಳು ಒಂದು ಸ್ಥಳದಲ್ಲಿ ಒಟ್ಟಿಗೆ ನಿಂತು ಏಕಕಾಲದಲ್ಲಿ ಭೂಮಿ ಕಂಪಿಸುವಂತೆ ಮಾಡಿದಾಗ ಭೂಮಿಯ ಒಡಲಲ್ಲಿ ವ ದ್ರವಸಾಗರದಲ್ಲಿ ಅಲೆ ಉಂಟಾಗುತ್ತದೆ. ಆ
ಅಲೆಯ ಪ್ರಮಾಣ, ಗಾತ್ರಗಳು ಅದೇ ವಾಹನದಲ್ಲಿರುವ ಯಂತ್ರಗಳಲ್ಲಿ ದಾಖಲಾಗುತ್ತದೆ. ಮನುಷ್ಯನ ದೇಹದ ಎಕ್ಸ್ರೇ, ಇಸಿಜಿ ದಾಖಲು ಮಾಡಿದಂತೆಯೇ, ಈ ಯಂತ್ರ ಭೂಮಿಯ (ವಿಶೇಷವಾಗಿ ತೈಲ ಸರೋವರದ) ಎಕ್ಸ್ರೇ, ಇಸಿಜಿ ಇತ್ಯಾದಿಗಳನ್ನು ದಾಖಲಿಸುತ್ತದೆ.
ಅದಕ್ಕನುಗುಣವಾಗಿ ಆ ಸ್ಥಳದಲ್ಲಿ ಎಷ್ಟು ತೈಲವಿದೆ, ಯಾವ ಗಾತ್ರದ ಬಾವಿ ಕೊರೆಯಬೇಕು ಇತ್ಯಾದಿಗಳು ನಿರ್ಣಯಿಸಲ್ಪಡುತ್ತವೆ. ಮುಂದಿನ ಕಾರ್ಯ ‘ರಿಗ್’ ನದ್ದು. ತೈಲ ಜಗತ್ತಿನ ಭಾಷೆಯಲ್ಲಿ ರಿಗ್ ಎಂದರೆ ತೈಲವನ್ನು ಭೂಮಿಯಿಂದ ಹೊರತೆಗೆಯಲು
ಬಳಸುವ ಯಂತ್ರ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯವಸ್ಥೆ. ಇದು ನಮ್ಮಲ್ಲಿ ಬೋರ್ವೆಲ್ ಅಥವಾ ಕೊಳವೆ ಬಾವಿಯಲ್ಲಿ ನಡೆಯುವ ಪ್ರಕ್ರಿಯೆ ಇದ್ದಂತೆಯೇ. ಪ್ರಮಾಣದಲ್ಲಿ, ಗಾತ್ರದಲ್ಲಿ ಅದಕ್ಕಿಂತ ದೊಡ್ಡದು ಎನ್ನಬಹುದು.
ತೈಲದ ಬಾವಿ ಕೊರೆಯಲು ದೊಡ್ಡ ಗಾತ್ರದ, ತುದಿಯಲ್ಲಿ ವಜ್ರದ ಆಕಾರವಿರುವ (ಡೈಮಂಡ್ ಟಿಪ್) ಡ್ರಿಲ್ ಬಿಟ್ (ಅಥವಾ ಡ್ರಿಲ್ಲಿಂಗ್ ಶಾಫ್ಟ್) ಬಳಸಲಾಗುತ್ತದೆ. ಬಾವಿಯ ವ್ಯಾಸಕ್ಕೆ ಬೇಕಾದ ವ್ಯಾಸ ಹೊಂದಿರುವ ಈ ಶಾಪ್ಟ್ ಸುಮಾರು ಹತ್ತು ಮೀಟರ್ ಉದ್ದವಿರುತ್ತದೆ. ಪ್ರತಿ ಗಂಟೆಗೆ ಸುಮಾರು ಐದು ಮೀಟರ್ ಆಳ ಕೊರೆಯುವ ಈ ಯಂತ್ರ ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯ ನಿರ್ವಹಿಸುತ್ತದೆ.
ಕೊರೆಯುವ ವೇಳೆ ಉಷ್ಣತೆ ಹೆಚ್ಚಾಗದಂತೆ ತಡೆಯಲು ಶಾಫ್ಟ್ ತುದಿಗೆ ನೀರು ಸಿಂಪಡಿಸಲಾಗುತ್ತದೆ. ಸುಲಭವಲ್ಲದ ಈ ಕ್ರಿಯೆ ಯಲ್ಲಿ ಸಹಿಸಲಾರದ ಶಬ್ದ ಮತ್ತು ವಾಸನೆ ಆ ಕೆಲಸದಲ್ಲಿ ತೊಡಗಿದವರನ್ನು ಹೈರಾಣಾಗಿಸುತ್ತದೆ. ಜತೆಗೆ ಭೂಮಿಯೊಳ ಗಿನ ವಿಷಾನಿಲ ಸೋರುವ ಭಯವಂತೂ ಇದ್ದದ್ದೇ. ಆ ಕಾರಣಕ್ಕಾಗಿಯೇ ರಿಗ್ಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೋ, ಒಂದುವರೆ ತಿಂಗಳಿಗೋ ಒಮ್ಮೆ ಕಮ್ಮಿಯೆಂದರೂ ಹದಿನೈದು ದಿನಗಳ ರಜೆ ಇರುತ್ತದೆ.
ತೈಲದ ಬಾವಿ ಕೊರೆಯಬೇಕಾದ ಸ್ಥಳವನ್ನು ‘ಸೆರ್ ಏರಿಯಾ’ ಎಂದು ಕರೆಯುತ್ತಾರೆ. ರಿಗ್ (ಪ್ಲಾಟಾರ್ಮ್)ನ ನಾಲ್ಕೂ ಮೂಲೆಗಳು ಸಮನಾಗಿ ಭೂಮಿಯ ಮೇಲೆ ಇರುವುದು ಅವಶ್ಯಕವಾದ್ದರಿಂದ, ಆ ಸ್ಥಳದ ಸುತ್ತಲೂ ಸುಮಾರು ಇಪ್ಪತ್ತೈದರಿಂದ ಐವತ್ತು ಮೀಟರ್ ಸುತ್ತಳತೆಯಲ್ಲಿ, ರಿಗ್‌ನ ಸಾಮರ್ಥ್ಯಕ್ಕೆ ಬೇಕಾದಂತೆ ಭೂಮಿಯನ್ನು ಸಮತಟ್ಟು ಮಾಡಲಾಗುತ್ತದೆ. ಇಲ್ಲವಾದರೆ, ಭೂಮಿಯ ಒಳಗೆ ಕಿಲೋಮೀಟರ್‌ಗಟ್ಟಲೆ ದೂರ ಸಾಗುವ ಬೋರ್ (ಬಾವಿ ಕೊರೆತ) ನೇರವಾಗಿರದೇ, ಓರೆಕೋರೆಯಾಗಿ ಬೇರೆ ಸ್ಥಳವನ್ನು ತಲುಪುವ ಸಾಧ್ಯತೆ ಇರುತ್ತದೆ.
ಹೊಸ ತೈಲ ನಿಕ್ಷೇಪದ ಬಾವಿ ತೋಡಲು ಕಮ್ಮಿಯೆಂದರೂ ಮೂರರಿಂದ ನಾಲ್ಕು ವಾರ ಸಮಯ ಬೇಕಾಗುತ್ತದೆ. ಬಾವಿ ಕೊರೆದ ನಂತರ ಬಾವಿಯ ಒಳಗೆ ಲೋಹದ ಕೊಳವೆಯನ್ನು ಇಳಿಸಲಾಗುತ್ತದೆ. ಈ ಕೊಳವೆಯ ಬುಡದಲ್ಲಿರುವ ರಂಧ್ರಗಳಿಂದ ತೈಲ ಮೇಲೆ ಬರುತ್ತದೆ. ಈ ಕೊಳವೆ ಭೂಮಿಯ ಮೇಲೆ ಬರುತ್ತಿದ್ದಂತೆ ಅದಕ್ಕೆ ‘ಕ್ರಿಸ್ಮಸ್ ಟ್ರೀ’ ಅಳವಡಿಸಲಾಗುತ್ತದೆ. ತಪ್ಪು ತಿಳಿಯಬೇಡಿ, ಈ ಕ್ರಿಸ್ಮಸ್ ಟ್ರೀ ತೈಲ ಪ್ರವಾಹದ ಗತಿ, ಒತ್ತಡಗಳನ್ನು ನಿಯಂತ್ರಿಸಲು ಇರುವ ಕವಾಟ (ವಾಲ್ವ್) ಗಳನ್ನು ಹೊಂದಿದ, ಲೋಹದ ಬುರುಡೆಯೇ ವಿನಃ ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಕ್ಕೆ ಬಳಸುವ ಹಸಿರು ಅಥವಾ ಬಿಳಿಯ ಬಣ್ಣದ ಗಿಡವಲ್ಲ.
ಕೊಲ್ಲಿ ರಾಷ್ಟ್ರಗಳಲ್ಲಿ, ಅದರಲ್ಲೂ ಸೌದಿ ಅರೇಬಿಯಾದಲ್ಲಿ ನೈಸರ್ಗಿಕ ಒತ್ತಡದಿಂದಲೇ ತೈಲ ಭೂಮಿಯ ಮೇಲ್ಭಾಗಕ್ಕೆ ಬರುತ್ತದೆ. ಹಾಗೆ ನೈಸರ್ಗಿಕವಾಗಿ ಬರುವ ತೈಲದ ಒತ್ತಡವನ್ನು ನಿಯಂತ್ರಿಸಿ, ತನ್ಮೂಲಕ ಕೊಳವೆಗಳು ಒಡೆಯುವ ಅಪಾಯ ವನ್ನು ತಪ್ಪಿಸುವಲ್ಲಿ ಕ್ರಿಸ್ಮಸ್ ಟ್ರೀ ಮಹತ್ತರ ಪಾತ್ರವಹಿಸುತ್ತದೆ. ಸೌದಿ ಅರೇಬಿಯಾದಂತಹ ದೇಶದಲ್ಲಿ ತೈಲ ಸರೋವರದ
ಬುಡದಲ್ಲಿ ನೀರನ್ನು ಇಂಜೆಕ್ಟ್ ಮಾಡುತ್ತಾರೆ. ಇದು ಸ್ವಾಭಾವಿಕವಾಗಿ ತೈಲದ ಮಟ್ಟ ಮೇಲೆ ಏರಲು ಸಹಕಾರಿಯಾಗುತ್ತದೆ.
ಜತೆಗೆ, ತೈಲ ತೆಗೆದ ಜಾಗವನ್ನು ಆವರಿಸಿಕೊಳ್ಳುತ್ತದೆ, ತನ್ಮೂಲಕ ಆ ಪ್ರದೇಶ ನಿರ್ವಾತ ಪ್ರದೇಶವಾಗುವುದನ್ನೂ, ಟೊಳ್ಳಾಗುವು ದನ್ನೂ ತಪ್ಪಿಸುತ್ತದೆ. ಈ ಕಾರ್ಯಕ್ಕೆ ಸಮುದ್ರದ ನೀರನ್ನು ಪೈಪ್‌ಲೈನ್ ಮೂಲಕ ನೂರಾರು ಕಿಲೋ ಮೀಟರ್ ದೂರ ಹರಿಸಿ ತರುವುದೂ ಇದೆ. ಕೆಲವು ದೇಶಗಳಲ್ಲಿ ನೀರಿನ ಬದಲು ಅಥವಾ ನೀರಿನೊಂದಿಗೆ ವಿವಿಧ ನಿಲಗಳು, ಆಮ್ಲಗಳು, ಉಗಿಯನ್ನು ಭೂಮಿಯೊಳಗೆ ಇಳಿಸುವ ಕ್ರಮವೂ ಇದೆ. ನೈಸರ್ಗಿಕವಾಗಿ ಒತ್ತಡ ಇಲ್ಲದ ಸ್ಥಳಗಳಲ್ಲಿ ಕೊಳವೆಯ ಬುರುಡೆಗೆ ಪಂಪ್ ಅಳವಡಿಸಿ, (ಚುಚ್ಚುಮದ್ದಿನ ಸಿರಿಂಜ್ ಬಳಸಿ ರಕ್ತ ತೆಗೆಯುವಂತೆ) ತೈಲವನ್ನು ಭೂಮಿಯಿಂದ ಹೊರಗೆ ಎಳೆದು ತರುತ್ತಾರೆ.
ನೋಡಲು ನಮ್ಮಲ್ಲಿಯ ಏತ ನೀರಾವರಿಯಂತೆ ಕಾಣುವ, ತೈಲವನ್ನು ಮೇಲೆತ್ತುವ ಈ ರೇಚಕ ಯಂತ್ರಕ್ಕೆ ಪಂಪಿಂಗ್ ಜ್ಯಾಕ್
ಅಥವಾ ನೋಡಿಂಗ್ ಡಾಂಕಿ (ತಲೆ ಅಡಿಸುವ ಕತ್ತೆ) ಎಂದು ಹೆಸರು. ಬಹುಷಃ ದಿನವಿಡೀ ಇದು ತಲೆ ಅಡಿಸುವುದರಿಂದ ಈ ಹೆಸರು ಬಂದಿರಬಹುದಾ? ಗೊತ್ತಿಲ್ಲ, ಇರಲೂ ಬಹುದು! ಆದರೆ ಈ ಕತ್ತೆಯ ತಲೆ ಭೂಮಿಯೊಳಗಿನ ದಿವ್ಯ ದ್ರವವನ್ನೂ, ದ್ರವ್ಯವನ್ನೂ ಹೊರಗೆ ತರುವುದಂತೂ ಸತ್ಯ.
ಭೂಮಿಯ ಮೇಲೆ ಬಂದ ತೈಲವನ್ನು ಪೈಪ್‌ಲೈನ್ ಮೂಲಕ ಸಂಸ್ಕರಣಾ ಸ್ಥಾವರಕ್ಕೆ ಕೊಂಡೊಯ್ಯಲಾಗುತ್ತದೆ. ಈ ಪೈಪ್‌ಲೈನ್‌ಗಳ ತಪಾಸಣೆಗೆಂದು ಅದರ ಪಕ್ಕದಲ್ಲಿ ವಾಹನ ಸಂಚಾರಕ್ಕೆಂದು ಕಚ್ಚಾ ರಸ್ತೆ ನಿರ್ಮಿಸಿರುತ್ತಾರೆ. ಆ ಹಾದಿ ಪೈಪ್‌ಲೈನ್‌ನ ಬಲಕ್ಕಿದ್ದರೂ, ಎಡಕ್ಕಿದ್ದರೂ, ಅದಕ್ಕೆ ‘ರೈಟ್ ಆಫ್ ವೇ’ ಎಂದೇ ಹೆಸರು.
ಸಂಸ್ಕರಿಸದ ಕಚ್ಚಾ ತೈಲ ಯಾವ ಕೆಲಸಕ್ಕೂ ಬಾರದ ನಿಷ್ಪ್ರಯೋಜಕ ದದ್ದೋಡಿ. ಅದರಲ್ಲಿ ಪೆಟ್ರೋಲ್, ಡಿಸೆಲ್‌ನಂಥ ವಸ್ತುಗಳಿದ್ದರೂ, ಅದನ್ನು ಹಾಗೆಯೇ ವಾಹನಗಳಲ್ಲಿ, ಯಂತ್ರಗಳಲ್ಲಿ ಬಳಸುವಂತಿಲ್ಲ. ಅದರಲ್ಲಿ ನೀರಿನ ಅಂಶದಿಂದ
ಹಿಡಿದು, ಖನಿಜದ, ಅಲ್ಪ ಪ್ರಮಾಣದ ಅನಿಲದ ಅಂಶಗಳೂ ಸೇರಿರುತ್ತವೆ. ಇವನ್ನೆಲ್ಲ ಬೇರ್ಪಡಿಸುವ ಸ್ಥಾವರದಲ್ಲಿ ದೊಡ್ಡ ಟ್ಯಾಂಕ್ಗಳನ್ನು ಅಳವಡಿಸಲಾಗಿರುತ್ತದೆ.
ಕಚ್ಚಾ ತೈಲದ ಸಂಸ್ಕಾರ ಕ್ರಿಯೆ ನಡೆಯುವುದು ಈ ಟ್ಯಾಂಕ್‌ಗಳಲ್ಲಿಯೇ. ಕಚ್ಚಾ ತೈಲವೆಂದರೆ ಪ್ರಮುಖವಾಗಿ ಹೈಡ್ರೋ ಕಾರ್ಬನ್‌ನ ಮಿಶ್ರಣ. ಇದರಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ಇಂಗಾಲದ ಪರಮಾಣುಗಳು (ಕಾರ್ಬನ್ ಆಟಮ) ಸೇರಿಕೊಂಡಿರು ತ್ತವೆ. ಇದರ ತೂಕದಲ್ಲಿಯೂ ವ್ಯತ್ಯಾಸವಿರುತ್ತದೆ. ಇವುಗಳಲ್ಲಿ ಅತಿ ಹಗುರವಾಗಿದ್ದದ್ದು ಪ್ರೊಪೇನ್ ಮತ್ತು ಅತಿ ಭಾರವಾಗಿದ್ದದ್ದು ಡಾಂಬರ್ (ಅಶಾಲ್ಟ್) ತಯಾರಿಸುವಲ್ಲಿ ಬಳಕೆಯಾಗುತ್ತದೆ. ಕ್ರೂಡ್ ಆಯಿಲ್‌ನಿಂದ ಪೆಟ್ರೊಲ್ ತೆಗೆಯುವ ಕಾರ್ಯವೂ ಒಂದು ಸಾಹಸವೇ. ಪೈಪ್‌ಲೈನ್‌ನಿಂದ ಬರುವ ಕಚ್ಚಾ ತೈಲವನ್ನು ಸುಮಾರು ಮುನ್ನೂರ ಐವತ್ತು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ, ದೊಡ್ಡ ಲೋಹದ ಟ್ಯಾಂಕ್‌ನ ಕೆಳಭಾಗಕ್ಕೆ ತರಲಾಗುತ್ತದೆ.
ಈ ಬಿಸಿ ತೈಲದ ಉಗಿ ಮೇಲೇಳುವಾಗ ಅದರಲ್ಲಿರುವ ಅಣುಗಳನ್ನು ಬೇರೆ ಬೇರೆ ಸ್ಥರದಲ್ಲಿ ಸೋಸಿ, ತಣ್ಣಗೆ ಮಾಡುತ್ತಾರೆ. ಈ ಕ್ರಿಯೆ ಯಲ್ಲಿ ಭಾರವಾಗಿರುವ ಅಣುಗಳು ಕೆಳಗಿನ ಸ್ಥರದಲ್ಲಿ ಡಾಂಬರ್ ಅಥವಾ ಆಶಾಲ್ಟ್ ಆಗಿ ಉಳಿದುಕೊಳ್ಳುತ್ತದೆ. ಅಣುಗಳು
ಎಲ್ಲಕ್ಕಿಂತ ಮೇಲಿನ ಸ್ಥಾಯಿ ತಲುಪಿದಾಗ, ಇಪ್ಪತ್ತು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶಕ್ಕೆ ತಂದಾಗ ಲಿಕ್ವಿಫೈಡ್ ಪೆಟ್ರೋಲಿಯಮ್ ಗ್ಯಾಸ್ (ಅಡುಗೆ ಅನಿಲಕ್ಕೆ ಬಳಸುವ ಎಲ್ಪಿಜಿ) ಆಗಿ ಮಾರ್ಪಾಡಾಗುತ್ತದೆ. ಅದರ ಕೆಳಗೆ ಸ್ಥಾಯಿಯಾದ ಅಣುಗಳು ಪ್ರೊಪೇನ್ ಆಗಿ
ಬೇರ್ಪಡುತ್ತದೆ. ಅದರ ಕೆಳಗಿನ ಮನೆಯ ಅಣುಗಳು, ಮೂವತ್ತರಿಂದ ನೂರ ಐವತ್ತು ಡಿಗ್ರಿಗೆ ಬಂದಾಗ ನಳನಳಿಸುವ ಪೆಟ್ರೋಲ್ ಮತ್ತು ಅದರ ಕೆಳಗಿನ ಮನೆಯ ಅಣುಗಳು ನಾಫ್ತಾ (ಪ್ಲಾಸ್ಟಿಕ್, ಕಾಸ್ಮೆಟಿಕ್ಸ್, ಔಷಧಗಳಲ್ಲಿ ಬಳಸಲಾಗುತ್ತದೆ), ಅದಕ್ಕೂ
ಕೆಳಗಿನದ್ದು (ಸುಮಾರು ಇನ್ನೂರು ಡಿಗ್ರಿ) ಕೆರೋಸಿನ್, ಅದಕ್ಕೂ ಕೆಳಗಿನದ್ದು ಡಿಸೆಲ್ ಆಗಿ ಬೇರ್ಪಡುತ್ತವೆ.
ಎಲ್ಲಕ್ಕಿಂತ ಕೆಳಗೆ ಉಳಿಯುವ ಅಣುಗಳು (ಸುಮಾರು ನಾಲ್ಕು ನೂರ ಐವತ್ತು ಡಿಗ್ರಿ) ಹಡಗಿನ ಇಂಧನ, ಡಾಂಬರ್ ಆಗಿ ಉಳಿಯುತ್ತದೆ. ಸಾಮಾನ್ಯವಾಗಿ ಒಂದು ಬ್ಯಾರೆಲ್‌ನಲ್ಲಿರುವ ನೂರ ಐವತ್ತೊಂಬತ್ತು ಲೀಟರ್ ಕಚ್ಚಾ ತೈಲದಿಂದ ಎಪ್ಪತ್ತ ಮೂರು ಲೀಟರ್ ಪೆಟ್ರೋಲ, ಮೂವತ್ತೈದು ಲೀಟರ್ ಡಿಸೆಲ್, ಇಪ್ಪತ್ತು ಲೀಟರ್ ಜೆಟ್ ಫ್ಯೂಯೆಲ್, ಆರು ಲೀಟರ್ ಪ್ರೊಪೇನ್ ಉತ್ಪಾದಿಸಲಾಗುತ್ತದೆ.
ಉಳಿದವು ಸಲ್ಫರ್, ಬ್ಯುಟೀನ್, ಅಕ್ರಲಿಕ್, ಪ್ಯರಾಕ್ಸಲೀನ್, ಪ್ಲಾಸ್ಟಿಕ್, ಪೆಸ್ಟಿಸೈಡ್ಸ್ (ಕೀಟನಾಶಕಗಳು), ಡಾಂಬರ್ ಇತ್ಯಾದಿ
ಗಳನ್ನು ಉತ್ಪಾದಿಸಲು ಬಳಕೆಯಾಗುತ್ತದೆ. ವಿಶ್ವದ ಅತಿ ದೊಡ್ಡ ತೈಲ ನಿಕ್ಷೇಪ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಅಮೆರಿಕದ ಟೆಕ್ಸಸ್ ಪ್ರದೇಶ. ಈ ಪ್ರದೇಶದಲ್ಲಿ ತೈಲ ನಿಕ್ಷೇಪ ಗುರುತಿಸಿದ್ದು 1890 ರ ಮಧ್ಯಭಾಗದಲ್ಲಿ. ಆ ಪ್ರದೇಶದಿಂದ ಕಳೆದ ನೂರಾ
ಇಪ್ಪತ್ತೈದು ವರ್ಷಗಳಲ್ಲಿ ಇದುವರೆಗೆ ಸುಮಾರು ಅರವತ್ತು ಬಿಲಿಯನ್ ಬ್ಯಾರೆಲ್ ತೈಲವನ್ನು ಹೊರಗೆ ತೆಗೆದಿದ್ದು, ಇನ್ನೂ ಹತ್ತು ಬಿಲಿಯನ್ ಬ್ಯಾರೆಲ್‌ನಷ್ಟು ತೈಲ ನಿಕ್ಷೇಪ ಬಾಕಿ ಉಳಿದಿದೆಯಂತೆ.
ಕೊಲ್ಲಿ ರಾಷ್ಟ್ರಗಳಲ್ಲಿ ಮೊಟ್ಟ ಮೊದಲ ತೈಲ ನಿಕ್ಷೇಪವನ್ನು ಗುರುತಿಸಿದ್ದು ದ್ವೀಪ ರಾಷ್ಟ್ರ ಬಹ್ರೈನ್‌ನಲ್ಲಿ. 1931ರಲ್ಲಿ
ಬಹ್ರೈನ್‌ನ ತೈಲ ನಿಕ್ಷೇಪ ಪತ್ತೆಯಾದ ಏಳು ವರ್ಷದ ನಂತರ ಸೌದಿ ಅರೇಬಿಯಾದ ಮೊದಲ ತೈಲದ ಬಾವಿ ಕಾರ್ಯಾರಂಭ ಮಾಡಿತು. ಮುಂಚಿನ ದಿನಗಳಲ್ಲಿ ಡಾಂಬರ್‌ಗಾಗಿ ಬಳಸುತ್ತಿದ್ದ ಕಚ್ಚಾ ತೈಲಕ್ಕೆ ಮೊದಲು ಬೇಡಿಕೆ ಬಂದದ್ದು ವಿಶ್ವ ಯುದ್ಧದ ಸಂದರ್ಭದಲ್ಲಿ. ಯುದ್ಧ ವಿಮಾನ, ಯುದ್ಧ ವಾಹನಗಳು ಮತ್ತು ಯಂತ್ರಗಳಲ್ಲಿ ಬಹಳಷ್ಟು ಪೆಟ್ರೋಲ್ ಬಳಕೆಯಾಯಿತು.
ನಂತರದ ದಿನಗಳಲ್ಲಿ ಹೆಚ್ಚಾದ ವಾಹನ ಸಂಚಾರದಿಂದ ಇನ್ನಷ್ಟು ಬೇಡಿಕೆ ಬಂತು. ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ , ಡಿಸೆಲ್, ಪ್ಲಾಸ್ಟಿಕ್ ಮೊದಲಾದವುಗಳ ಬಳಸುವಿಕೆ ಪರಿಸರ ಮತ್ತು ಹವಾಮಾನದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ ಎನ್ನುವುದಂತೂ ಸತ್ಯ. ಪರಿಸರ ಮಾಲಿನ್ಯದ ಶೇಕಡಾವಾರು ಪ್ರಮಾಣದಲ್ಲಿ ಇವುಗಳ ಪಾತ್ರವೇ ಹೆಚ್ಚು. ಆ ಕಾರಣದಿಂದಲೇ ವಿಶ್ವದಾದ್ಯಂತ ಇಂದು ಪರ್ಯಾಯ ವ್ಯವಸ್ಥೆಗೆ ಹುಡುಕಾಟ ನಡೆದಿದೆ. ಅದರ ಪರಿಣಾಮವಾಗಿ ಸೌರ ಇಂಧನ (ಸೋಲಾರ್) ಜೈವಿಕ ಇಂಧನ (ಬಯೋ ಫ್ಯೂಯೆಲ್) ಮೊದಲಾದವುಗಳು ಪೆಟ್ರೋಲಿಯಂ ಉತ್ಪನ್ನಗಳ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತಿವೆ.
ಈ ಬದಲಾವಣೆ ಎಷ್ಟೇ ಕ್ಷಿಪ್ರ ಗತಿಯದರೂ, ಕೃಷ್ಣ ಸುಂದರಿ ಯೌವನದಿಂದ ಮುಪ್ಪಿಗೆ ಜಾರಲು ಇನ್ನೂ ಮೂವತ್ತರಿಂದ ನಲವತ್ತು ವರ್ಷಗಳೇ ಬೇಕು. ನೋಡಲು ಕಪ್ಪು. ಮುಟ್ಟಿದರೆ ಸ್ವಲ್ಪ ಅಂಟಂಟು. ಬಟ್ಟೆಗೆ ತಾಗಿದರೆ ಕಲೆ ಶಾಶ್ವತ. ಹತ್ತಿರ ಹೋದರೆ,
ಕೊಳೆತ ಕೋಳಿ ಮೊಟ್ಟೆಯಂತಹ ವಾಸನೆ. ಆದರೆ ವಿಶ್ವದಾದ್ಯಂತ ಪ್ರತಿನಿತ್ಯ ನೂರು ಮಿಲಿಯನ್ ಬ್ಯಾರೆಲ್ ಬಳಸುವಿಕೆಯಿಂದ ಬರುವ ಆದಾಯದ ಮುಂದೆ ಅದೆಲ್ಲ ಯಾವ ಮೂಲೆಯ ಲೆಕ್ಕ? ಕಪ್ಪು ಬಂಗಾರವೆಂದು ಕರೆಸಿಕೊಳ್ಳುವ ಕಚ್ಚಾ ತೈಲವೆಂದರೆ
ರೊಕ್ಕವೋ ರೊಕ್ಕ!