Thursday, 12th December 2024

ಧಾರ್ಮಿಕ ಭಾವನೆಗೆ ಧಕ್ಕೆ ಕಾನೂನಿನ ಕಡಿವಾಣವೇ ಸೂಕ್ತ

ಅಭಿವ್ಯಕ್ತಿ

ಉಮಾ ಮಹೇಶ ವೈದ್ಯ

ನಮ್ಮ ಗಣರಾಜ್ಯದ ಸಂಧಾನ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅಭಿಪ್ರಾಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಿಸುವ ಹಕ್ಕನ್ನು ನೀಡಿದ ಬಗ್ಗೆ ನಮಗೆಲ್ಲ ಗೊತ್ತಿರುವ ಸಂಗತಿ. ಹಕ್ಕನ್ನು ನೀಡಲಾಗಿದೆ ಎಂದು ಬೇಕಾಬಿಟ್ಟಿಯಾಗಿ ಚಲಾಯಿಸಿ ಇತರರ ಹಕ್ಕು ಗಳನ್ನು ಉಲ್ಲಂಘಿಸದಂತೆ, ಕಾನೂನಿನ ಕೆಲವು ನಿರ್ದಿಷ್ಠ ನಿಯಮಗಳನ್ನು ಮೀರದಂತೆ ಸೀಮಿತ ಪರಿಧಿಯನ್ನೂ ಸಹ ಸಂಧಾನ ದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದರೆ ಆಗುತ್ತಿರುವುದೇನು? ಓದಿಕೊಂಡಿದ್ದೇನೆ, ಮಾತನಾಡಲು ಬರುತ್ತದೆ, ಅಭಿವ್ಯಕ್ತಿಯ ಹಕ್ಕಿದೆ ಎಂದು ಇನ್ನೊಬ್ಬರ ಭಾವನೆ ಗಳಿಗೆ ಧಕ್ಕೆ ಆಗುವಂತೆ ನಡೆದುಕೊಂಡರೆ ಆಗ ರಕ್ಷಣೆಯ ಬದಲು ಭಾರತೀಯ ದಂಡ ಸಂತೆಯ ಅಡಿಯಲ್ಲಿ ದಂಡ ಅನುಭವಿಸ ಬೇಕಾದೀತು. ಇತ್ತೀಚೆಗೆ, ಬುದ್ಧಿಜೀವಿ ಎನಿಸಿಕೊಂಡವರು, ರಾಮಪ್ರಭುತ್ವದ ಸಂಕೇತ, ಹನುಮ ದಾಸ್ಯದ ಸಂಕೇತ.

ಇದು ಸನಾತನಿಗಳು ಸಮಾಜದ ಮೇಲೆ ದಾಸ್ಯ ಭಾವನೆ ಯನ್ನು ಹೇರುವ ಹುನ್ನಾರ ಎನ್ನುವ ರೀತಿಯಲ್ಲಿ ಮಾತನಾಡಿದ್ದನ್ನು ಸುದ್ದಿ ವಾಹಿನಿಗಳಲ್ಲಿ ನೋಡಿದ್ದೇವೆ. ಇದಕ್ಕೆ ಖಾರವಾಗಿ ಹಾಗೂ ಸಿಹಿಯಾಗಿ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದವು. ಆದರೆ ಈಗೆಲ್ಲ ಶಾಂತ.

ಮತ್ತೇ ದಸರಾ ಹಬ್ಬ ಪ್ರಾರಂಭದ ಹೊಸ್ತಿಲಿನಲ್ಲಿ ಮಹೀಷ ಹಬ್ಬವನ್ನು ಆಚರಿಸಲು ಮತ್ತದೇ ಬುದ್ಧಿಜೀವಿಗಳೆನೆಸಿಕೊಂಡವರು ಚಾಮುಂಡಿ ದೇವಿಗೆ ಹೀಯಾಳಿಸುವ ರೀತಿಯಲ್ಲಿ ಮತ್ತೇ ಸುದ್ದಿಗೋಷ್ಠಿ ನಡೆಸುವರು, ಮತ್ತದೇ  ರೀತಿಯಲ್ಲಿ ಸಂಪ್ರದಾಯಿಗಳು ಪ್ರತಿಭಟನೆ ಮಾಡಿ ತಮ್ಮ ಪಾತ್ರ ಮುಗಿಯಿತು ಎಂದು ಮುಂದಿನ ಘಟನೆಗೆ ಕಾಯುತ್ತ ಕುಳಿತು ಕೊಳ್ಳುವರು. ಈ ರೀತಿಯ ಪ್ರಹಸನಗಳು ಪುನರಾವರ್ತನೆ ಆಗುತ್ತಲೇ ಇರುತ್ತವೆ. ಇದಕ್ಕೆ ಕಡಿವಾಣವಿಲ್ಲವೇ? ಖಂಡಿತ ಇದೆ, ಧರ್ಮ, ಹಾಗೂ ತಮ್ಮ ಧರ್ಮದ ಆಚರಣೆ ಹಾಗೂ ನಂಬಿಕೆಗಳನ್ನು ಪಾಲಿಸಿಕೊಂಡು ಬರುವ ಹಕ್ಕನ್ನೂ ಸಹ ನಮ್ಮ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ನೀಡಿದೆ.

ಅಭಿಪ್ರಾಯದ ಹಕ್ಕನ್ನು ಹಾಗೂ ಧರ್ಮಾಚರಣೆಯ ಹಕ್ಕನ್ನು ಪರಸ್ಪರ ಹೋಲಿಸಿ ಯಾವುದು ಪ್ರಮುಖ ವಾದದು ಎಂದು
ಜಿಜ್ಞಾಸೆ ಮಾಡಿದರೆ, ಮೇಲ್ನೋಟಕ್ಕೆ ಕಂಡು ಬರುವುದು ಪ್ರತಿಯೊಬ್ಬ ಪ್ರಜೆ ತಾನು ನಂಬಿದ ಧರ್ಮವನ್ನು ಪಾಲಿಸಿ ಶಾಂತ
ರೀತಿಯಾಗಿ ಬದಕುವ ಹಕ್ಕು ಎನ್ನುವುದು ಸ್ಪಷ್ಟವಾಗುತ್ತದೆ. ಇಷ್ಟು ಪ್ರಬಲ ಮೂಲಭೂತ ಹಕ್ಕನ್ನು ಹೊಂದಿದ್ದರೂ ಪದೇ ಪದೆ
ಅಭಿವ್ಯಕ್ತಿಯ ಹಕ್ಕಿನ ಬೇಜವಾಬ್ದಾರಿ ಚಲಾವಣೆಗೆ ಕಡಿವಾಣ ಹಾಕಲು ಭಾರತ ದಂಡ ಸಂಹಿತೆಯ ಕಲಂ 295 ರಿಂದ 298
ಪರಿಣಾಮಕಾರಿ ಯಾದ ಅಸಗಳಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇವುಗಳನ್ನು ಉಪಯೋಗಿಸಿ ಪ್ರಕರಣ ದಾಖಲಿಸಿದರೆ, ಇನ್ನೊಂದು ಧರ್ಮ, ಮತ, ಅಥವಾ ಆಚರಣೆಗಳನ್ನು ಹೀಯಾಳಿಸುವ ಮನೋವಿಕೃತ ಮನಸ್ಸುಗಳನ್ನು ಶಾಶ್ವತವಾಗಿ ಕಟ್ಟಿಹಾಕಲು ಸಾಧ್ಯ. ಸುಮಾರು ವರ್ಷಗಳ ಹಿಂದೆ ನಡೆದ ಘಟನೆ. ಬ್ರಾಹ್ಮಣ
ಸಮಾಜವನ್ನು ದ್ವೇಷಿಸುವ ಮೇಲಾಽಕಾರಿಯೊಬ್ಬ ಧಾರವಾಡದ ಕಚೇರಿಗೆ ಪರಿವೀಕ್ಷಣೆಗೆ ಬಂದರು. ಕೆಳ ಅಧಿಕಾರಿಗಳನ್ನು
ಔಪಚಾರಕವಾಗಿ ಮಾತನಾಡಿಸುತ್ತ ಬರುವಾಗ, ಒಬ್ಬ ಅಧಿಕಾರಿ ಅವನು ಧರಿಸಿದ ಧಾರ್ಮಿಕ ಚಿಹ್ನೆಗಳನ್ನು ನೋಡಿ ಆತ ಬ್ರಾಹ್ಮಣ ಎಂದು ಗೊತ್ತಾದಾಗ ಅವರ ಬ್ರಾಹ್ಮಣ ದ್ವೇಷ ಜಾಗೃತಗೊಂಡು ಇತರರ ಸಮಕ್ಷಮ ಬ್ರಾಹ್ಮಣ ಸಮಾಜದ ಬಗ್ಗೆ ಹಾಗೂ ಆ ಅಧಿಕಾರಿಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂತೆ ಮಾತನಾಡಿ ಹಣೆಯ ಮೇಲಿನ ಕುಂಕುಮವನ್ನು ತಕ್ಷಣವೇ ಅಳಿಸಿ
ಹಾಕಲು ಸೂಚನೆ ನೀಡತೊಡಗಿದರು.

ಇದಕ್ಕೆ ಒಪ್ಪದ ಆ ಕೆಳ ಅಧಿಕಾರಿಗೆ ನಿನ್ನ ಜನಿವಾರದಿಂದಲೇ ನಿನಗೆ ನೇಣು ಹಾಕುತ್ತೇನೆ ನೋಡುತ್ತಿರು ಎಂದು ದಬಾಯಿಸಿ ಹೋದರು. ಘಟನೆಗೆ ಸಾಕ್ಷಿಯಾಗಿದ್ದ ಸಹೋದ್ಯೋಗಿಗಳು ಆ ಕಿರಿಯ ಅಧಿಕಾರಿಗೆ ಎಂದಿನಂತೆ ಸಮಾಧಾನ ಮಾಡಿ ಹೋದರು. ಆದರೆ ಮೇಲಾಧಿಕಾರಿಗಳ ಭೇಟಿ ನೆನಪಿನಲ್ಲಿರಲಿ ಎಂದು ಮಾಡಿಸಿದ್ದ ವಿಡಿಯೋ ಚಿತ್ರೀಕರಣ ದೃಶ್ಯಗಳಲ್ಲಿ ಈ ಎಲ್ಲ ಘಟನೆ
ಸೆರೆಯಾಗಿತ್ತು. ಮೇಲಾಧಿಕಾರಿಯ ಈ ದುಷ್ಟ ವರ್ತನೆಯಿಂದ ಮನ ನೊಂದ ಕಿರಿಯ ಅಧಿಕಾರಿ ಈ ಬಾರಿ ಸುಮ್ಮನಿರಬಾರದು
ಕಾನೂನಿನ ಮೊರೆ ಹೋಗಲೇ ಬೇಕೆಂಬ ದೃಢ ನಿಶ್ಚಯದಿಂದ ಈಗಾಗಲೇ ಆ ಮೇಲಾಧಿಕಾರಿಯ ಕಿರುಕುಳಕ್ಕೆ ಬೇಸತ್ತ ಬೆರಳಣೆಕೆ
ಯ ಸಹೋದ್ಯೋಗಿಗಳನ್ನು ಭೇಟಿ ಮಾಡಿ ತಾನು ಆ ಮೇಲಾಧಿಕಾರಿಯ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಇಚ್ಚಿಸಿದ್ದು, ನಡೆದ ಘಟನೆ ಬಗ್ಗೆ ಸಾಕ್ಷಿ ನುಡಿಯಲು ವಿನಂತಿಸಿಕೊಂಡು, ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ
ನ್ಯಾಯವಾದಿಗಳ ಮೂಲಕ ಆ ಮೇಲಾಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿದ.

ದೂರಿನಲ್ಲಿ ಭಾರತ ದಂಡ ಸಂಹಿತೆಯ ಕಲಂ 295A ಹಾಗೂ 298 ಅಡಿ ಆ ಆರೋಪಿತ ಮೇಲಾಧಿಕಾರಿ ಅಪರಾಧ ಮಾಡಿದ್ದು ಸೂಕ್ತ ಶಿಕ್ಷೆ ವಿಧಿಸುವಂತೆ ಕೋರಿಕೊಳ್ಳಲಾಗಿತ್ತು. ಪ್ರಕರಣ ದಾಖಲಾದ ಸುದ್ದಿ ತಿಳಿದು ಕೆಂಡಾಮಂಡಲ ವಾದ ಅ ಮೇಲಾಧಿಕಾರಿ ಆ ದೂರುದಾರ ಕಿರಿಯ ಅಧಿಕಾರಿಗೆ ಕಿರುಕುಳ ನೀಡತೊಡಗಿದ, ಅನಗತ್ಯ ಇಲಾಖಾ ವಿಚಾರಣೆ ಕೈಗೊಂಡ. ಆದರೆ ಇವೆಲ್ಲವು ಗಳನ್ನು ಧೈರ್ಯದಿಂದ ಎದುರಿಸಿದ ಆ ಕಿರಿಯ ಅಧಿಕಾರಿ ನ್ಯಾಯಾಲಯದ ಮುಂದೆ ದಾಖಲಿಸಿದ ಪ್ರಕರಣವನ್ನು ಮುನ್ನಡೆಸ ತೊಡಗಿದ.

ಇತ್ತ ಮೇಲಾಧಿಕಾರಿ ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮುಂದಿನ ಹುದ್ದೆಗೆ ಮುಂಬಡ್ತಿ ಹೊಂದ ಲಿಲ್ಲ. ಜತೆಗೆ ವಯೋ ನಿವೃತ್ತಿಯಾದ ಮೇಲೆ ಬರಬೇಕಾದ ಪಿಂಚಣಿ ಇತ್ಯರ್ಥ ವಾಗಲಿಲ್ಲ. ಹಲವಾರು ವರ್ಷ ನ್ಯಾಯಾಲಯ ದೆದುರು ಆರೋಪಿಯಾಗಿ ಬಂದು ನಿಂತು ಅನುಭವಿಸುವ ಮನೋವೇದನೆ ಆ ನಿವೃತ್ತ ಅಧಿಕಾರಿಯಲ್ಲಿ ತನ್ನ ಅಪರಾಧದ ಪಶ್ಚಾತಾಪ ಮೂಡುವಂತೆ ಮಾಡಿತ್ತು. ತನ್ನ ದೂಷಣೆಯ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದುದರಿಂದ ಈ ಬಡ ಬ್ರಾಹ್ಮಣ ಏನು ಮಾಡ ಬಲ್ಲ ಎಂಬ ಭಾವನೆ ತಪ್ಪಾಗಿತ್ತು ಎಂದು ಅನಿಸಿ ಕೊನೆಗೆ ಕುಟುಂಬ ಸಮೇತ ಬಂದು ಆ ಕಿರಿಯ ಅಧಿಕಾರಿಯ ಮನೆಗೆ ಹೋಗಿ ಕ್ಷಮೆ ಕೇಳಿ ಯಾರಿಗೂ ಅವರ ಧಾರ್ಮಿಕ ಭಾವನೆಗೆಳಿಗೆ ಧಕ್ಕೆ ತರದಂತೆ ನಡೆದುಕೊಳ್ಳುವೆ ದಯವಿಟ್ಟು ಪ್ರಕರಣವನ್ನು ರಾಜೀ ಮಾಡಿಕೊಳ್ಳಿ ಎಂದು ಬಿನ್ನಯಸಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿತು.

ಈ ಒಂದು ಪ್ರಕರಣದಿಂದ ನಂತರ ಪರಿವೀಕ್ಷಣೆಗೆ ಬಂದ ಮೇಲಾಧಿಕಾರಿಗಳು ಕೇವಲ ಕಚೇರಿ ಕೆಲಸಗಳ ಬಗ್ಗೆ ಮಾತನಾಡು ತ್ತಿದ್ದರೇ ಹೊರತು ಕೆಳ ಅಧಿಕಾರಿಗಳ ಧಾರ್ಮಿಕ ಆಚರಣೆ ಹಾಗೂ ಭಾವನೆಗಳ ಬಗ್ಗೆ ಚಕಾರ ವೆತ್ತುತ್ತಿರಲಿಲ್ಲ. ಧಾರ್ಮಿಕ ಭಾವನೆಗಳಿಗೆ ಪೆಟ್ಟು ಕೊಡುವವರಿಗೆ ಕಾನೂನಿ ನಿಂದಲೇ ಕಟ್ಟಿ ಹಾಕಬೇಕೆ ಹೊರತು ಸಾಮಾಜಿಕ ಜಾಲತಾಣಗಳಲ್ಲಿ
ಪ್ರತಿಭಟಿಸುವ ಅಥವಾ ಸುದ್ದಿ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದರ ಮೂಲಕವಲ್ಲ. ಈ ಭಾರತೀಯ ದಂಡ ಸಂಹಿತೆ
ಕಲಂ 295A ಹೇಳುವುದಾದರೂ ಏನು ? 295A. Deliberate and malicious acts, intended to outrage religious feelings of
any class by insulting its religion or religious beliefs.— Whoever, with deliberate and malicious intention of outraging the religious feelings of any class of citizens of India, by words, either spoken or written, or by signs or by visible
representations or otherwise insults or attempts to insult the religion or the religious beliefs of that class, shall be
punished with imprisonment of either description for a term which may extend to three years], or with fine, or with both.

ಈ ಕಾನೂನಿನ ನಿಬಂಧನೆಯನ್ನು ಗಮನಿಸಿದಾಗ, ಸ್ಪಷ್ಟವಾಗುವುದೇನೆಂದರೆ, ಪ್ರತಿಯೊಬ್ಬ ತನ್ನ ಧರ್ಮವನ್ನು, ಆಚರಣೆ ಗಳನ್ನು ಹಾಗೂ ನಂಬಿಕೆಗಳನ್ನು ಯಾವುದೇ ಧಕ್ಕೆ ಬರದಂತೆ ಆಚರಿಸಿಕೊಂಡು ಹೋಗುವುದರ ಜತೆಗೆ ಇತರರ ಧಾರ್ಮಿಕ ಭಾವನೆಗೆಳಿಗೆ ತನ್ನಿಂದ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳುವುದು ಎಂದು. ಇದಕ್ಕೆ ತಪ್ಪಿದಲ್ಲಿ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಇತ್ತೀಚೆಗೆ ನಾನು ನೋಡುತ್ತಿರುವಂತೆ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮತಗಳ ಶ್ರೇಷ್ಠತೆಯನ್ನು ಪ್ರತಿಪಾದಿಸಲು
ಧಾರ್ಮಿಕ ಭಾವನೆಗೆಳಿಗೆ ಸಂಬಂಧಿಸಿದಂತೆ ಪರಸ್ಪರ ದೂಷಣೆಯ ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಕೃತ್ಯಗಳೂ ಸಹ
ಅಪರಾಧಿಕ ಕೃತ್ಯಗಳು ಎಂಬುದನ್ನು ಮರೆಯಬಾರದು.

ಪ್ರಾರ್ಥನಾ ಮಂದಿರಗಳಲ್ಲಿ, ಮಠ, ಮಂದಿರಗಳಲ್ಲಿ ಪ್ರವಚನದ ಹೆಸರಿನಲ್ಲಿ ಇನ್ನೊಂದು ಮತದ ತತ್ತ್ವಗಳನ್ನು ಖಂಡಿಸಿ ಉದ್ದೇಶ ಪೂರ್ವಕವಾಗಿ ಹೀಯಾಳಿಸುವುದು, ವಾಚನಗಳೂ ಸಹ ಅಪರಾಧಿಕ ಕೃತ್ಯಗಳಾಗುತ್ತವೆ. ಆಗ, ಬಾಧಿತ ವ್ಯಕ್ತಿ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಆ ವಿಷಯಗಳ ಸ್ಕ್ರೀನ್ ಶಾಟ್ ಅಥವಾ ವಿಡಿಯೋ ಪ್ರತಿ ತೆಗೆದುಕೊಂಡು ಅದು ಯಾವ ಖಾತೆಯಲ್ಲಿ ಪೋಸ್ಟ್ ಆಗಿದೆ ಎಂದು ಕಂಡುಕೊಳ್ಳಬೇಕು.

ಉದಾಹರಣೆಗೆ ಫೇಸ್‌ಬುಕ್‌ನಲ್ಲಿ ಕಲ್ಲಪ್ಪ ಎನ್ನುವವರ ಖಾತೆಯಲ್ಲಿ ಈ ದೂಷಣೆಯ ಸುದ್ದಿ ಹಾಕಲಾಗಿದೆ. ಆ ಖಾತೆಯ ಫೇಸ್‌ಬುಕ್ ಲಿಂಕ್ ಈ ರೀತಿಯಾಗಿರುತ್ತದೆ ಎಂದು ಅಗತ್ಯ ವಿಷಯಗಳನ್ನು ನಮೂದಿಸಿ ಯಾವ ರೀತಿಯಾಗಿ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂಬುದನ್ನು ವಿವರವಾಗಿ ದೂರನ್ನು ತಯಾರಿಸಿ ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಬಹುದು. ಒಂದು ವೇಳೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸ್ವೀಕರಿಸಲು ನಿರಾಕರಿಸಿದರೆ, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅಂಚೆ ಮೂಲಕ ದೂರು ಸಲ್ಲಿಸಬಹುದು.

ಇದಕ್ಕೂ ಸೂಕ್ತ ಸ್ಪಂದನೆ ಸಿಗದಿದ್ದರೆ, ನೇರವಾಗಿ ಇವೆಲ್ಲ ಸಂಗತಿಗಳನ್ನು ವಿವರಿಸಿ ನ್ಯಾಯಾಲಯಕ್ಕೆ ದೂರನ್ನು ದಾಖಲಿಸ ಬಹುದು. ಈ ರೀತಿಯ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡರೆ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿರುವರ ಹಾಗೂ ಸಾಮಾಜಿಕ ಜಾಲ ತಾಣಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು ತಣ್ಣಗಾಗುವುದರಲ್ಲಿ ಸಂಶಯವಿಲ್ಲ. ತಮ್ಮ ಧರ್ಮ, ಮತ ಹಾಗೂ ತತ್ತ್ವಗಳನ್ನು ಪ್ರತಿಪಾದಿಸುವುದು ತಪ್ಪಲ್ಲ. ಆದರೆ ಹೋಲಿಕೆಯ ನೆಪದಲ್ಲಿ ಇನ್ನೊಂದು ಧರ್ಮ, ಮತ, ಧಾರ್ಮಿಕ ಗುರುಗಳನ್ನು ನಿಂದಿಸುವ ಕೃತ್ಯಗಳು ಈ ಅಪರಾಧಿಕ ಕೃತ್ಯದ ವ್ಯಾಪ್ತಿಯಲ್ಲಿ ಬರುತ್ತವೆ.

ಆದರೆ ಕೆಲ ಜನ ಹೇಳಬಹುದು, ನಮ್ಮ ಶಾಸಗಳಲ್ಲಿ, ಕೆಲವು ಗ್ರಂಥಗಳಲ್ಲಿ ಪರ ಮತದ ನಿಂದನೆ ಹಾಗೂ ಧಾರ್ಮಿಕ ಗುರುಗಳ ನಿಂದನೆ ಇದೆ. ಆದ್ದರಿಂದ ನಾವು ಆ ಗ್ರಂಥಗಳಂತೆ ನಡೆದುಕೊಳ್ಳುತ್ತೇವೆ ಎಂದರೆ ಸದ್ಯದ ಕಾನೂನಿನಡಿ ಅಪರಾಧವಾಗುತ್ತದೆ. ಏಕೆಂದರೆ ನಾವೆಲ್ಲ ಒಪ್ಪಿ ಅಪ್ಪಿಕೊಂಡ ಸಂವಿಧಾನವೇ ನಮ್ಮ ಸದ್ಯದ ಪವಿತ್ರ ಗ್ರಂಥ. ಇದರ ಆಶಯಕ್ಕೆ ವಿರುದ್ಧವಾದ ಇತರೆ ಎಲ್ಲ ಗ್ರಂಥಗಳು ಅಥವಾ ಅದರಲ್ಲಿನ ಸಂಗತಿಗಳು ಗ್ರಹಣಗ್ರಸ್ತ ಎಂದರೆ ತಪ್ಪಾಗಲಿಕ್ಕಿಲ್ಲ. ಒಂದು ವೇಳೆ, ಗ್ರಂಥಗಳಲ್ಲಿನ ಆಕ್ಷೇಪಿತ ಸಂಗತಿಗಳ ಸತ್ಯಾಸತ್ಯತೆಯನ್ನು ಪುನಃ ಪರಿಶೀಲಿಸುವಂತೆ ಆ ಸಮುದಾಯದ ಅಥವಾ ಮತದ ಧಾರ್ಮಿಕ ಮುಖಂಡರು ಗಳಿಗೆ ಅಥವಾ ಸ್ವಾಮೀಜಿಗಳಿಗೆ ಮನವಿ ಪತ್ರ ಸಲ್ಲಿಸುವುದು ಸೂಕ್ತ.

ಒಂದು ವೇಳೆ ಧಾರ್ಮಿಕ ಮುಖಂಡರು ಅಸಹಾಯಕತೆ ವ್ಯಕ್ತಪಡಿಸಿದರೆ, ಆ ಗ್ರಂಥದಲ್ಲಿನ ಆಕ್ಷೇಪಿತ ಭಾಗವನ್ನು ತಗೆದು ಹಾಕುವಂತೆ ಕೋರಿ ಉಚ್ಛ ನ್ಯಾಯಾಲಯ ಅಥವಾ ಸರ್ವೊಚ್ಛ ನ್ಯಾಯಾಲಯದೆದುರು ಅರ್ಜಿ ಸಲ್ಲಿಸುವುದು ಸೂಕ್ತ. ಇಲ್ಲಿಯ ವರೆಗೂ ಈ ರೀತಿಯ ಯಾವುದೇ ಪ್ರಯತ್ನ ಆಗದೇ ಇದ್ದರೂ ಈ ನಿಟ್ಟಿನಡೆ ಕಾನೂನಿನ ಸಂಘರ್ಷ ಅನೇಕ ದಾರಿಗಳಿಗೆ ಹುಟ್ಟು ಹಾಕಬಹುದು. ಒಂದು ವೇಳೆ ಮೇಲ್ನೋಟಕ್ಕೆ ಗ್ರಂಥದಲ್ಲಿನ ಆಕ್ಷೇಪಿತ ಭಾಗ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದು ಆ ಭಾಗವನ್ನು ಉಪಯೋಗಿಸುವ ಬಗ್ಗೆ ನಿರ್ಬಂಧಕಾಜ್ಞೆಯನ್ನು ಪಡೆದುಕೊಂಡಿರೋ ಅಲ್ಲಿಗೆ ನಿಮ್ಮ ಯಶಸ್ಸಿನ ಮೊದಲ ಮೆಟ್ಟಲು ಏರಿದಂತೆ.

ಇದನ್ನು ಬಿಟ್ಟು ಹಗಲು ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ದೂಷಣೆಯಿಂದ ಕಾಲಹರಣ ಹಾಗೂ ಮಾನಸಿಕ ಶಾಂತಿಗೆ ಧಕ್ಕೆ ಹೊರತು ಯಾವುದೇ ಪರಿಹಾರ ಕಂಡುಕೊಳ್ಳಲಾಗದು. ಈ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸಲೆಂದೇ ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಅಥವಾ ಹೀಯಾಳಿಸುವ ಮನೋವಿಕಾರಿಗಳಿಗೆ ಕಡಿವಾಣ ಹಾಕಲು ಸಾಧ್ಯ. ಸೂಕ್ತ ಕಾನೂನು ಕ್ರಮಗಳಿಂದ ನಮ್ಮ ಹಕ್ಕನ್ನು ರಕ್ಷಿಸಿಕೊಳ್ಳುವ ಹಾಗೂ ಪ್ರತಿಪಾದನೆ ಇರಬೇಕೇ ಹೊರತು ಸಾಮಾಜಿಕ ಜಾಲತಾಣಗಳಲ್ಲಿ ನಿರರ್ಥಕ ಪೋಸ್ಟ್‌ಗಳ ಮೂಲಕವಲ್ಲ.

ಆದರೆ ಗಮನದಲ್ಲಿರಬೇಕು. ನಾವು ಹಾಕುವ ಪೋಸ್ಟ್‌ಗಳು ನಮ್ಮ ವಿರುದ್ಧವೇ ಸಾಕ್ಷಿಯಾಗಿ ಪರಿಗಣಿತವಾಗುತ್ತವೆ ಎಂದು. ಭಾವನೆಯ ಸೆಳತದಲ್ಲಿ ಆತುರಾತುರವಾಗಿ ಹಾಕುವ ನಿಂದನಾ ಪೋಸ್ಟ್‌ಗಳು ನಿಮ್ಮ ಭವಿಷ್ಯವನ್ನೇ ಮಂಕಾಗಿಸಬಲ್ಲವು. ಅದಕ್ಕೆ ಸದಾ ಸ್ಮರಣೆಯಲ್ಲಿರಬೇಕು. ಮಾತು ಬೆಳ್ಳಿ ಮೌನ ಬಂಗಾರ.