Saturday, 14th December 2024

ಇದು ಅಂತಃಸತ್ವದ ಮಾತು: ಅಂದರ್‌ ಕೀ ಬಾತ್‌

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ನೀನು ಕೊಲ್ಲದಿದ್ದರೆ, ನೀನೇ ಕೊಲ್ಲಲ್ಪಡುತ್ತೀಯ ಎಂಬ ನಂಬಿಕೆಯ ಮೇಲೆ ಯೋಧ ಕರ್ತವ್ಯ ನಿರ್ವಹಿಸುತ್ತಾನೆ. ವಿಶೇಷವಾಗಿ ವಿಶ್ವಸಮರದ ನಂತರ ಮಿಲಿಟರಿ ಆಧುನಿಕರಣವಾಗುತ್ತಲೇ ಬಂದಿದ್ದು ಎಲೆಕ್ಟ್ರಾನಿಕ್ ನಿಯಂತ್ರಿತ ಶಸ್ತ್ರಾಸ್ತ್ರಗಳ ಬಳಕೆ
ಹೆಚ್ಚುತ್ತಿದೆ.

ಸಾಂಪ್ರದಾಯಿಕ ರಣರಂಗದಂತೆ ಕತ್ತಿ – ಗುರಾಣಿಗಳ ಬಳಕೆ ಇಲ್ಲವಾಗಿದೆ. ಆದರೂ, ಕಳೆದ ವರ್ಷ ಡೋಕ್ಲಾಮ್‌ನಲ್ಲಿ ನಡೆದಂತೆಯೋ ಅಥವಾ ಕಾರ್ಗಿಲ್‌ನಲ್ಲಿ ನಡೆದಂತೆ ಎದುರುಬದುರು ಸೆಣಸಾಡುವುದು ಅಪರೂಪವಾದರೂ ನಡೆಯುತ್ತಿರುತ್ತೆ. ರಣೋನ್ಮಾದ ಕಣ್ಮರೆಯಾಗಿಲ್ಲ. ಆದರೆ, ಅದು ಹೇಗೆ ಸಮವಸ ತೊಡುವ ಮತ್ತೊಂದು ಸೇವೆಯಲ್ಲಿನ ಪೊಲೀಸರು ಆವೇಶ ಭರಿತರಾಗುತ್ತಾರೆ ಎಂಬುದು ಕುತೂಹಲದ ಸಂಗತಿ.

ಒಂದಿಬ್ಬರು ಪೊಲೀಸರನ್ನು ಕೇಳಿಯೂ ಇದ್ದೇನೆ. ಉದಾಹರಣೆಗೆ, ಒಬ್ಬ ಅಪರಾಧಿಯನ್ನು ವಿಚಾರಣೆಗೆ ಗುರಿಪಡಿಸಲಾಗುವ ಸಂದರ್ಭದಲ್ಲಿ ಅದು ಹೇಗೆ ಅಷ್ಟು ಉದ್ವಿಗ್ನರಾಗುತ್ತಾರೆ. ಅಪರಾಧವೆಂದರೆ ಸಮಾಜಕ್ಕೋ, ಸಮಾಜದ ಒಂದು ಅಂಗವಾದ ವ್ಯಕ್ತಿಗೋ ಬಾಧೆಯಾಗುವಂತೆ ವರ್ತಿಸುವುದು. ಹಾಗೆ ಹಾನಿ ಮಾಡಿದವನ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸುವಪೊಲೀಸಿಗೆ ಆ ಮಟ್ಟಿನ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯಿದ್ದಲ್ಲಿ ಮಾತ್ರವೇ ಅಪರಾಧಿ ಸುವ್ಯವಸ್ಥೆಗೆ ಭಂಗ ತಂದನೆಂದು ಕೆಂಡಾಮಂಡಲ ವಾಗುವುದು ಸಹಜ.

ಅಂತಹ ಕಾಳಜಿ ನಮ್ಮ ಪೊಲೀಸರಿಗಿದ್ದಲ್ಲಿ ಪೊಲೀಸ್ ಇಲಾಖೆಯೇಕೆ ಅಷ್ಟು ಭ್ರಷ್ಟವಾಗಿದೆ ಎಂಬ ಪ್ರಶ್ನೆ ಏಳುತ್ತದೆ. ನನ್ನ ಅನುಮಾನವನ್ನು ಬಗೆಹರಿಸಲು ಯತ್ನಿಸಿದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಒಮ್ಮೆ ಹೇಳಿದ್ದು ನಾವು ಕೋಪಗೊಳ್ಳುವುದಿಲ್ಲ, ವಿಚಾರಣಾಧೀನ ಆರೋಪಿಯ ಮುಂದೆ ಕೋಪಗೊಂಡಂತೆ ವರ್ತಿಸುತ್ತೇವೆ ಎಂದು. ಅವರ ಮಾತು ನಿಜವಾಗಿದ್ದಲ್ಲಿ, ಕಸ್ಟಡಿ ಯಲ್ಲಿ ಸಾವು ನೋವುಗಳಾಗುವುದಿಲ್ಲ ಹಾಗೂ ತಪ್ಪಿತಸ್ಥರಲ್ಲದ ಜನಸಾಮಾನ್ಯರನ್ನೂ ಅಗೌರವದಿಂದ ಕಾಣುವುದಿಲ್ಲ.

ಒಮ್ಮೆ ಪೊಲೀಸ್ ಠಾಣೆಗೆ ಕಾಲಿಟ್ಟರೆ, ಕಾಲಿಟ್ಟ ಸಾಮಾನ್ಯನ ಘನತೆಗೆ ಚ್ಯುತಿ ಬರದೇ ಹೊರಬರುವುದು ಕಷ್ಟಸಾಧ್ಯ ಎಂಬುದು ಹಳೆಯ ಮಾತು. ಹಿಂದೊಮ್ಮೆ ಸ್ಕೂಟರ್ ಕಳೆದುಕೊಂಡು ದೂರು ನೀಡಲು ಹೋದಾಗ ಅನುಚಿತವಾಗಿ ನಡೆದುಕೊಂಡ ಪೊಲೀಸಪ್ಪನನ್ನು ದಬಾಯಿಸಿದ್ದೆ. ಅಷ್ಟು ಹೊತ್ತಿಗಾಗಲೆ ಕಳ್ಳನನ್ನು ಹಿಡಿದು ಸ್ಕೂಟರ್ ವಶಪಡಿಸಿಕೊಂಡಿದ್ದರು. ನಾನು ಪತ್ರಕರ್ತನೆಂದು ಹೇಳಿದ ಮೇಲೆ ಆತನ ದನಿಯೇ ಬದಲಾಯಿತು.

ಆದರೆ ನಾನು ದನಿ ಏರಿಸಿದ್ದರಿಂದ ಆತ ನನಗೆ ಅನಾನುಕೂಲ ಮಾಡಿದ. ಸಾರ್ವಜನಿಕರನ್ನು ಅನಾದರಿಂದ ಕಾಣುವುದಲ್ಲದೆ ಅವರಿಗೆ ಕಿರುಕುಳ ಕೊಡುವುದು ನಮ್ಮ ಪೊಲೀಸರಿಗಷ್ಟೇ ಅಲ್ಲದೆ ಎಲ್ಲಾ ಇಲಾಖೆಗಳ ಸಿಬ್ಬಂದಿಗೆ ರಕ್ತಗತವಾಗಿದೆ. ಎರಡು
ನಿಮಿಷದ ಕೆಲಸಕ್ಕೆ ನಾಲ್ಕು ದಿನ ಅಲೆಸುವುದು, ಲಂಚಕ್ಕಾಗಿ ಪೀಡಿಸುವುದು, ಕರ್ತವ್ಯದ ಬಗ್ಗೆ ಉದಾಸೀನ ಮಾಡುವುದು,
ಕಾಣಲು ಬರುವ ನಾಗರಿಕರನ್ನು ಕೀಳಾಗಿ ಕಾಣುವುದು ಮುಂತಾದ ಋಣಾತ್ಮಕ ಗುಣಗಳು ತಲೆಮಾರುಗಳಿಂದಲೂ
ಬಂದಿರುವುದು ಬ್ರಿಟಿಷರ ಬಳುವಳಿ.

ನೋಡಿ ಮತ್ತೆ, ನಾನೂ ಬ್ರಿಟಿಷ್ ಅಂತಲೇ ಬಳಸಿದೆ. ನಾನೂ ಇದೇ ವ್ಯವಸ್ಥೆಯ ಭಾಗವೇ ಆಗಿದ್ದು ನಮ್ಮನ್ನಾಳಿದವರು ಬ್ರಿಟಿಷ್ ಅಂತಲೇ ತಲೆಗೆ ತುಂಬಲಾಗಿದೆ ವಿನಃ ಕಿರಿಸ್ತಾನರೆಂದಲ್ಲ. ಇಸ್ಲಾಂ (ದುರಾ)ಆಡಳಿತಕ್ಕೆ ಒಳಪಟ್ಟಿದ್ದೆವು ಎಂದು ಹೇಳಬಹು ದಾದಲ್ಲಿ ಕ್ರಿಶ್ಚಿಯನ್ಸ್ (ದುರಾ)ಆಡಳಿತಕ್ಕೆ ಒಳಗಾಗಿದ್ದವೆಂದು ಹೇಳಲಿಕ್ಕೆ ನಾಲಗೆ ಬಾರದೇಕೆ? ಕರಾರುವಕ್ಕಾಗಿ ನಾವು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡು ಯಾವುದೊ ಕಾಲವಾಯಿತು.

ಬ್ರಿಟಿಷರು ನಮ್ಮನ್ನು (ಸುಮಾರು) ಎರಡು ಶತಮಾನಗಳಷ್ಟು ಕಾಲ ಆಳಿದರು ಎನ್ನುವುದು ಮತ್ತೊಂದು ತಪ್ಪು. ಭಾರತವನ್ನು
ಅವರು ಆವರಿಸತೊಡಗಿದ್ದು ಕ್ರಮೇಣವಾಗಿ. ಅದಕ್ಕೆ ನೂರು ವರ್ಷ ಬೇಕಾಯಿತು. ಆ ನಂತರ ನೂರು ವರ್ಷ ನಮ್ಮನ್ನಾಳಿದರು ಎನ್ನುವುದು ಸರಿ. ಆಂಗ್ಲರ ಹೈ ಕಮಾಂಡ್ ಇದ್ದದ್ದು ಇಂಗ್ಲೆಂಡಿನಲ್ಲಿ. ವಸಾಹತುವಾಗಿದ್ದ ಭಾರತವನ್ನು ಸ್ಥಳೀಯರೇ ಗುತ್ತಿಗೆ ಪಡೆದುಕೊಂಡಿದ್ದರು ಎಂದರೂ ನಡೆಯುತ್ತದೆ. ಆಡಳಿತದ ಚುಕ್ಕಾಣಿ ಕಿರಿಸ್ತಾನರ ಬಳಿಯೇ ಇತ್ತು. ಅವರ ಮೇಲ್ವಿಚಾರಣೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದ ಮಿಲಿಟರಿ, ಪೊಲೀಸ್, ಮತ್ತಿತರ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದವು.

ನಾಗರಿಕರನ್ನು ಹದ್ದುಬಸ್ತಿನಲ್ಲಿಡುವುದೇ ಅಧಿಕಾರಿಗಳ ಮುಖ್ಯ ಗುರಿಯಾಗಿತ್ತು. ಅವರನ್ನು ಸತತ ಭಯದಲ್ಲಿಡುವುದರ ಮೂಲಕ
ಆ ಗುರಿಯನ್ನು ಮುಟ್ಟಲು ಸಾಧ್ಯವಾಗಿತ್ತು. ಆ ಪದ್ಧತಿ ಅಡೆತಡೆಯಿಲ್ಲದೆ ಮುಂದುರಿವರೆದಿದೆ. ಆಡಳಿತದ ಗುತ್ತಿಗೆ ಹಿಡಿದ ನಮ್ಮ ಜನರಿಗೆ ನಮ್ಮ ಜನರ ಮೇಲೆ ದರ್ಪ ತೋರಿಸುವುದು ಸಹಜಗುಣವಾಗಿ ಮೈಗೂಡಿತು. ದರೋಡೆ ಮಾಡುವುದೇ ವಿಲಾಯಿತಿ ಕಿರಿಸ್ತಾನರ ಏಕೈಕ ಉದ್ದೇಶವಾಗಿದ್ದರಿಂದ ಜನಸಾಮಾನ್ಯರ ಕುರಿತು ಕಾಳಜಿ ಎಲ್ಲಿ ಬರಬೇಕು? ದೀನದಲಿತರ ಬಗ್ಗೆ ಅಧಿಕಾರಶಾಹಿ ಸೂಕ್ಷ್ಮ ಸಂವೇದನೆ ಕಳೆದುಕೊಂಡದ್ದು ಹೀಗೆ. ಆ ಅನಿಷ್ಟ ಪದ್ಧತಿಯೇ ಅವ್ಯಾಹತವಾಗಿ ಮುಂದುವರಿದಿದೆ.

ಸೊಸೆಯಾಗಿ ಬರುವ ಹೆಣ್ಣು ಹೊಸ ವಾತಾವರಣಕ್ಕೆ ಹೊಂದುಕೊಳ್ಳುವ ಪರಿಯೇ ವಿಶಿಷ್ಟವಾದದ್ದು. ನಾಚಿಕೆ, ಆತಂಕ, ಮುಜುಗರಗಳಿಂದಲೇ ಗಂಡನ ಮನೆಗೆ ಕಾಲಿರಿಸುವ ಆಕೆ ಅಲ್ಲಿನ ಪ್ರತಿ ವಿಷಯವನ್ನೂ ವಾರೆಗಣ್ಣಿಂದಲೇ ಸೂಕ್ಷ್ಮವಾಗಿ ಅವಲೋಕನ ಮಾಡಿ, ಮನದ ಯಾರ‍್ಯಾರು ಏನೆಂದು ನೋಟ್ ಮಾಡಿಕೊಂಡು ಬಂದ ಮೂರು ತಿಂಗಳುಗಳಲ್ಲಿ ಮನೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾಳೆ.

ಆಂಗ್ಲರು ಮಾಡಿದ್ದಾದರೂ ಅದನ್ನೇ. ದೇಶಕ್ಕೆ ಹೊಸದಾಗಿ ಕಾಲಿಟ್ಟ ಅವರು ವಾಸಿಸುವುದಾದರೂ ಎಲ್ಲಿ? ಆತಿಥೇಯರನ್ನು ಒಲಿಸಿಕೊಳ್ಳದಿದ್ದರೆ ಅನ್ನ ಹುಟ್ಟಬೇಕೇ! ಸ್ಥಳೀಯ ಸಂಸ್ಕೃತಿ, ಪದ್ಧತಿಗಳನ್ನು ವಿರೋಧ ಮಾಡದೆ ಶುರುಮಾಡಿದ ಅವರ ನಿಜರೂಪ ಕ್ರಮೇಣ ಬದಲಾಯಿತು. ದೂರದ ಶೈತ್ಯ ದೇಶದಿಂದ ಬಂದಿದ್ದ ಆಂಗ್ಲ ಅಧಿಕಾರಿಗಳಿಗೆ ಸಾಂಗತ್ಯ ಬೇಕಿತ್ತಲ್ಲ. ಸ್ಥಳೀಯ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಮೈ ಬೆಚ್ಚಗೆ ಮಾಡಿಕೊಂಡರು. ಸ್ಥಳೀಯ ಸಂಸ್ಕೃತಿಯಿಂದ ಪ್ರಭಾವಿತರಾಗದಂತೆ ಗಿರಿಧಾಮಗಳನ್ನು ನಿರ್ಮಿಸಿ ಸಂಸಾರ(!) ಹೂಡಿದರು.

ತಮ್ಮ ಯೋಜನೆಗಳಿಗೆ ಯಶಸ್ಸು ಕೋರಿ ಯೇಸುವಿನ ಭಜನೆಗೆ ಶುರುವಿಟ್ಟು ಕೊಂಡರು. ಅವರದ್ದೇ ಬಿಬಿಸಿ ದಾಖಲಿಸಿರುವಂತೆ
ವಿಕ್ಟೊರಿಯಾ ಬ್ರಿಟನ್‌ನ ಮುಖ್ಯ ಗೀಳಾದ ಕ್ರೈಸ್ತ ಧರ್ಮದ ಪ್ರಚಾರ ಮತ್ತು ವಾಣಿಜ್ಯೋದ್ಯಮಗಳು ಬೇರು ಬಿಟ್ಟವು. ವಾಸ್ತವವಾಗಿ ಅಂದಿನಿಂದ ಇಂದಿನವರೆಗೂ ಕ್ರಿಶ್ಚಿಯಾನಿಟಿ ಮತ್ತು ವ್ಯಾಪಾರ – ವಹಿವಾಟುಗಳೆರಡೂ ಒಂದಕ್ಕೊಂದು ಮಿಳಿತವಾಗಿವೆ.

Victoria’s Secret (ವಿಕ್ಟೊರಿಯಾಳ ರಹಸ್ಯ!) ಮತ್ತು Christian Dior (ಕ್ರಿಶ್ಚಿಯನ್ ಡಿಯೊರ್) ಎಂಬ ಎರಡು ಪ್ರಮುಖ ಅಂತಾರಾಷ್ಟ್ರೀಯ ಫ್ಯಾಷನ್ ಕಂಪನಿಗಳಿಗಿಂತ ಸಾಮ್ರಾಜ್ಯಶಾಹಿ ಅಜೆಂಡಾ ಅಡರುವ ಹೆಸರುಗಳು ಬೇಕೇ? ಮೊದಲನೆಯದು ಅಮೆರಿಕಾದ್ದು, ಎರಡನೆಯದು ಫ್ರೆಂಚ್ (ಸರಳವಾಗಿ ಕಿರಿಸ್ತಾನರಿದ್ದೆನ್ನಬಹುದು). ವಿಕ್ಟೊರಿಯಾ (lingerie) ಲಾಂಜರೀಗೆ
ಹೆಸರುವಾಸಿ, ಡಿಯೊರ್ (perfume) ಪರ್ಫ್ಯೂಮ್ಸ್‌ಗೆ ಜಗತ್ಪ್ರಸಿದ್ಧಿ.

ಇಂತಹ ಹೆಸರುಗಳ ವಿರುದ್ಧ ಕಮಕ್ ಕಿಮಿಕ್ ಎನ್ನದ ಒಬ್ಬ ಹಿಂದೂ ಪತ್ರಕರ್ತ ಅಮೆರಿಕದಲ್ಲಿ ಬ್ರಾಹ್ಮಿನ್ ಹೆಸರಿನ ಅಂಗಡಿ ಯೊಂದನ್ನು ಲೇವಡಿ ಮಾಡಿ ಬರೆಯುತ್ತಾನೆ. ಆತನ ಹೆಂಡತಿ ಕ್ರಿಶ್ಚಿಯನ್ ಎಂಬುದು ಒಳಚಡ್ಡಿಯ ಜಾಹೀರಾತೊಂದರ ಘೋಷ ವಾಕ್ಯ ಹೇಳುವಂತೆ ಅಂದರ್ ಕಿ ಬಾತ್!

ಅಂದ ಹಾಗೆ ಲಾಕ್‌ಡೌನ್‌ಗೆ ಮುಂಚೆ ನಮ್ಮ ಮನೆಗೆ ಬರುತ್ತಿದ್ದ ಹೆಂಗಸು ಹಿಂದೂ ಹೆಸರನ್ನು ಹೊತ್ತ ಕಿರಿಸ್ತಾನಿ. ಮೇಲ್ನೋಟಕ್ಕೆ ರಕ್ತಹೀನತೆಯಿದೆ ಎನ್ನಬಹುದು. ಮತಾಂತರಗೊಂಡು ಹಾಗಾದಳೋ ಅಥವಾ ಮತಾಂತರಗೊಂಡೂ ಹೊಟ್ಟೆಗಿಲ್ಲದೇ ಹಾಗೇ ಉಳಿದಳೋ ಗೊತ್ತಿಲ್ಲ. ನಿರೀಕ್ಷಿತ ಲಾಭವಂತೂ ಸಿಕ್ಕಿಲ್ಲ ಎಂಬುದು ದಿಟ. ಒಮ್ಮೆ ಊಟ ಮಾಡಿ ಹಣ್ಣು ತಿನ್ನಬೇಕೆನ್ನುವಷ್ಟರಲ್ಲಿ ಕೆಲಸಕ್ಕೆ ಬಂದಳು. ಶಾಲೆಗೆ ರಜೆ ಎಂದು ಪುಟ್ಟ ಮಗನನ್ನೂ ಕರೆತಂದಿದ್ದಳು. ಐದು ವರ್ಷದ ಅವಳ ಮಗನಿಗೆ ಹಣ್ಣು ನೀಡಿದೆ.

ಅವನಮ್ಮ ಅಷ್ಟು ಹೊತ್ತಿಗೆ ಮನೆಯ ಬೇರೊಂದು ಭಾಗದಲ್ಲಿ ಕಸ ಗುಡಿಸುತ್ತಿದ್ದಳು. ಕೈ ಚಾಚುವ ಮುನ್ನ ಅದು ಪ್ರಸಾದವೇ ಕೇಳಿದ. ನಾವು ಸೇವಿಸುವ ಆಹಾರವೆಲ್ಲವೂ ದೇವರೇ ಕರುಣಿಸುತ್ತಾನೆಂಬ ಅರ್ಥದಲ್ಲಿ ಹೌದೆಂದೆ. ಊಟವಿನ್ನೂ ಮಾಡಿರದ ಮಗು ಹಣ್ಣು ನಿರಾಕರಿಸಿದ. ಯಾಕೆಂದು ಕೇಳಿದೆ. ಯೇಸು ಶಾಪ ಕೊಡುತ್ತಾರೆಂದ. ನನ್ನ ಮನೆಯಲ್ಲಿ ನಾನೇ ತ್ಯಾಜ್ಯನಾಗಿದ್ದೆ.

ನಿರಾಕರಿಸಲ್ಪಟ್ಟಿದ್ದೆ, ಅಸ್ಪೃಶ್ಯನಾಗಿಬಿಟ್ಟಿದ್ದೆ. ಅವನಮ್ಮನನ್ನು ಕರೆದು ಕಾರಣ ಕೇಳಿದೆ. ಫಾದರ್ ಬೈಯುತ್ತಾರೆಂದಳು.
ಲಾಕ್‌ಡೌನ್ ಅವಧಿಯಲ್ಲಿ, ಎರಡೂ ಸಂಸಾರಗಳ ಸುರಕ್ಷತೆಗಾಗಿ, ಅವಳನ್ನು ಬರಬೇಡವೆಂದು ಹೇಳುವಾ ಗ ನನ್ನ ಶಕ್ತಿಮೀರಿಯೇ ಸಹಾಯ ಮಾಡಿದ್ದೆವು. (ಲಾಕ್‌ಡೌನ್ ಗೆ ಮುಂಚೆಯೂ, ನನ್ನಾಕೆ ಅವಳಿಗೂ, ಆಕೆಯ ಮಗನಿಗೂ ಔದಾರ್ಯವನ್ನು ತೋರುತ್ತಲೇ ಬಂದಿದ್ದಳು. ಇದನ್ನು ಬರೆಯುವಾಗ ಹಿಂಸೆಯಾಗುತ್ತಿದೆ. ಆದರೆ ಸಾಂದರ್ಭಿಕ ವಾಗಷ್ಟೇ ಹೇಳುತ್ತಿದ್ದೇನೆ.) ನೀನು ವಾಪಸ್ ಹಿಂದುವಾಗು, ಹಣ ನೀಡುತ್ತೇನೆ ಎಂದು ಹೇಳಿಬಿಡಲೇ ಎಂಬ ಆಲೋಚನೆ ಬಂತು.

ಆ ಆಲೋಚನೆಯನ್ನು ಅನುಷ್ಠಾನಕ್ಕೆ ತರಲು ನನ್ನ ಧರ್ಮ ನೀಡಿದ ಸಂಸ್ಕಾರ ಅಡ್ಡ ಬಂತು. ಸೇವಾ ಮನೋಭಾವದಿಂದ, ಇದ್ದ ಪ್ರತಿಷ್ಠಿತ ಉದ್ಯೋಗವನ್ನು ಬಿಟ್ಟು ದಲಿತರ ಅನುಕೂಲಕ್ಕಾಗಿ ಅವರ ಸಮೂಹದ ಕ್ಲಿನಿಕ್ ತೆರೆದಿರುವ ನನ್ನ ಸ್ವಜಾತಿ ವೈದ್ಯ-ಮಿತ್ರರಿಗೆ ನಮ್ಮ ಕೆಲಸದವಳ ಬಗ್ಗೆ ಅಪೌಷ್ಠಿಕತೆಗಾಗಿ ಅವಳಿಗೆ ಉಚಿತವಾಗಿ ಶುಶ್ರೂಷೆ ನೀಡುತ್ತಾರೆ. ಅವರೂ ಆಕೆಯ ದಾರಿದ್ರ್ಯ ವನ್ನು ನನ್ನಲ್ಲಿ ಪ್ರಸ್ತಾಪಿಸಿದ್ದರು.

ಅವಳ ಭೀಕರ ಪರಿಸ್ಥಿತಿಯ ಲಾಭ ಪಡೆದು ಅವಳನ್ನು ಸ್ವಧರ್ಮಕ್ಕೆ ಕರೆತರುವುದು ನನಗಾಗದ ಕೆಲಸ. ಮತ್ತೊಂದು ವಿಚಾರ: ಲಾಕ್‌ಡೌನ್ ಕಾರಣದಿಂದ ಬೀದಿಗೆ ಬಿದ್ದ ಲಕ್ಷಾಂತರ ಜನಕ್ಕೆ ಹಿಂದೂ ಸಮಾಜ ಹೆಗಲು ಕೊಟ್ಟು ನಿಂತಿತು. ಆ ಸತ್ಕಾರ್ಯ ಇನ್ನೂ ಮುಂದುವರಿದಿದೆ. ಒಂದು ಸಣ್ಣ ಉದಾಹರಣೆ ನೀಡುವೆ. ಅವರು ನನ್ನ ಸಂಬಂಧಿಯೇ. ಮಧ್ಯಮ ವರ್ಗಕ್ಕೆ ಸೇರಿದ ಅವರ ಜಾತಿ ಯನ್ನು ಸಾರುವ ಸಂಕೇತ ಮುಖದಲ್ಲಿ ದಟ್ಟವಾಗಿದೆ.

ನೋಡಿದವರ‍್ಯಾರಾದರೂ ಥಟ್ಟನೆ ಕರ್ಮಠ ಬ್ರಾಹ್ಮಣನೆಂದು ತೀರ್ಮಾನಿಸಬಹುದು. ಅವರ ಪರಿಚಯದ ವ್ಯಕ್ತಿಯ
ಮಗಳಿಗೆ ಅವಳ ಗಂಡ ತಲಾಖ್ ಘೋಷಿಸಿದ್ದ. ಲಾಕ್‌ಡೌನ್ ಬೇರೆ. ಆಕೆಯ ಸಂಸಾರಕ್ಕೆ ಇವರು ಹೇರಳವಾಗಿ ಸಹಾಯ
ನೀಡಿದರು. ಅದನ್ನು ಗೌಪ್ಯವಾಗಿಡಲು ಮರೆಯಲಿಲ್ಲ. ಅದರ ಸುಳಿವು ಸಿಕ್ಕ ಒಬ್ಬರು ನನಗೆ ಮಾಹಿತಿ ನೀಡಿದರು. ಇದು
ವಿಕ್ಟೊರಿಯಾಳ ರಹಸ್ಯದಂತಲ್ಲ. ನನ್ನ ದೇಶದ ಹೆಗ್ಗಳಿಕೆ.