ಅವಲೋಕನ
ನಾರಾಯಣ ಭಟ್ ಹುಳೇಗಾರು
ಮಲೆನಾಡಿನ ಹವ್ಯಕರ ಮನೆಮನೆಗಳಲ್ಲಿ ಈಗಾಗಲೇ ಅಡಕೆ ಕೊಯ್ಲು ಪ್ರಾರಂಭವಾಗಿದೆ. ಸುಮಾರು 25-30 ವರ್ಷಗಳ ಹಿಂದೆ ಹೋದಾಗ ಕೊನೆ ಕೊಯ್ಲು ಮತ್ತು ಅಡಕೆ ಸುಲಿಯುವುದು ಒಂದು ಸಮಸ್ಯೆಯಾಗಿರದೆ ಅದೊಂದು ಜನಪದ ಸಂಭ್ರಮವಾಗಿತ್ತು.
ಹಬ್ಬದಷ್ಟೇ ಕುಶಿ, ಉತ್ಸಾಹ ಮನೆತುಂಬ ತುಂಬಿಕೊಳ್ಳುತ್ತಿತ್ತು. ಆದರೆ ಇಂದು ಅಯ್ಯೋ, ಅಡಕೆ ಕೊಯ್ಲು ಬಂತಲಪ್ಪ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸೂತಕದ ಪರಿಸ್ಥಿತಿಯು ಉಂಟಾಗಿದೆ. ಲಾಗಾಯ್ತಿನಿಂದ ದುರ್ಗ, ನಾರಣಿ, ಗಣಪ ಮತ್ತು ಕೂರ ಇವರನ್ನೇ ನಂಬಿಕೊಂಡು ದಿನದೂಡಿದ ಹವ್ಯಕರು ಇಂದು ಏಕ್ ದಂ ಸಮಸ್ಯೆಯ ಕಾದಿಗೆಯೊಳಗೆ ಸಿಕ್ಕಿ ಕೊಂಡಂತಾಗಿದ್ದಾರೆ.
ಕಂಬಳಿ ಗುಡುರುಹಾಕಿ ಜಿಬಿರುಗಣ್ಣು ಬಿಡಿಸುತ್ತ ಎದ್ದ ಚಳಿಗಾಲದ ಸೂರ್ಯ, ಅಡಕೆ ಮರಗಳ ಚಂಡೆಯ ಮೇಲೆಲ್ಲಾ ಬೆಳಕು ಚಿಮುಕಿಸುತ್ತ ಮೇಲೆದ್ದು ಬರುತ್ತಿದ್ದಂತೆ, ಇಬ್ಬನಿಯಿಂದ ತೊಯ್ದ ಅಡಕೆ ಹೆಡೆಗಳು ಸಾಣೆ ಹಿಡಿದ ಕತ್ತಿಯಂತೆ ಪಳಪಳ
ಹೊಳೆಯುತ್ತಿದ್ದವು. ಇಬ್ಬನಿಯ ಮಣಿಹೊತ್ತ ಸಾಲಿಂಗದ ಬಲೆಗಳು ತೋಟದ ತುಂಬ ಸಿಂಗಾರದ ತೋರಣ ಕಟ್ಟಿದ್ದವು. ತೋಟದ ತುಂಬೆಲ್ಲ ಬಿದ್ದ ಹಂಡ – ಹುಂಡ ಬಿಸಿಲು ಕೋಲುಗಳು, ಹಣ್ಣಾಗಿ ಬಿದ್ದ ಗೋಟುಗಳು, ಜೋಲುತ್ತಿರುವ ಮೆಣಸಿನ ಕರೆಗಳು,
ಇವೆಲ್ಲವುದರ ಜತೆಗೆ ಬಿಸಿಲಿನ ತುಣುಕುಗಳನ್ನು ತೇಲಿಸಿಕೊಂಡು ಹರಿಯುತ್ತಿರುವ ಜುಳುಜುಳು ತಲೇವಣಿ.
ಒಟ್ಟಾರೆ ತೋಟದ ತುಂಬ ನೆರಳು – ಬಿಸಿಲಿನಾಟದ ಸುಂದರ ನೋಟ. ಗೊನೆಹೊತ್ತ ಭಾರಕ್ಕೆ ಬಡಿವಾರದಿಂದ ತೊನೆಯುತ್ತಿರುವ ಅಡಕೆ ಮರಗಳ ಮೇಲೆ ಕಣ್ಣು ಹಾಯಿಸುತ್ತ, ರಸ್ತೆ ಬದಿಯ ಪಾಗಾರದ ಮೇಲೆ ಕುಕ್ಕುರು ಗಾಲಿನಲ್ಲಿ ಚಳಿ ಕಾಯಿಸುತ್ತಾ ಕುಳಿತ
ಗಣಪತಿ ಭಟ್ಟರು- ‘ಅಲ್ಲೋ ಮಾರಾಯ, ಅಡಕೆ ಎಲ್ಲಾ ಗೋಟಾಗಿ ಉದರಕ್ಕೆ ಡದ್ದು. ಕೊನೆ ಕೊಯ್ಸೋಣ ಅಂತ ಅಂದ್ರೆ ಒಬ್ಬಾ ನೊಬ್ರು ಸಿಕ್ತ್ವಲ್ಯಲಾ, ಎಂತ ಮಾಡಕ್ಕೇನಪ್ಪ’- ಎಂದು ಪಕ್ಕದಲ್ಲೆ ಕುಳಿತ ತಿಮ್ಮಣ್ಣ ಭಟ್ಟರ ಹತ್ತಿರ ಜೋರಾಗಿ ಹೇಳುತ್ತಾ, ಅಡಿಕೆ ಮರದಷ್ಟೇ ಎತ್ತರದ ಪ್ರಶ್ನಾರ್ಥಕ ದೃಷ್ಟಿ ಬೀರಿದರು.
ತಿಮ್ಮಣ್ಣ ಭಟ್ಟರೂ ಸಹ ‘ಹೌದಾ ಮಾರಾಯ ಒಳ್ಳೆ ಗೋಟಾಳಿಗೆ ಬಂದು ಬಿಡ್ತು, ಎಮ್ಮನೆ ತೋಟ್ದಾಗೂ ಪೂರಾ ಉದುರ್ತಾ ಇದ್ದು,
ಹೆಕ್ಕೋರೂ ಬೇರೆ ಗತಿಯಿಲ್ಲೆ’ ಎಂದು ಹೆಗಲ ಮೇಲಿನ ಸಾಟಿ ಪಂಚೆ ಒಂದು ಸಾರಿ ಕುಡುಗಿ ಕವಳ ತುಪ್ಪಿ, ಬಾಯಿ ಒರೆಸಿ ಕೊಂಡರು. ಇವರ ಮಾತನ್ನು ಕೇಳುತ್ತ ಕಟ್ಟೆಯ ಮೇಲೆ ನಿಂತಿದ್ದ ಚನ್ನಕೇಶವ ಭಟ್ಟರು ಕಟ್ಟೆಯಿಂದ ಕೆಳಗೆ ಹಾರಿ ಹೆಗಲ ಮೇಲಿನ ಸಾಟಿ ಪಂಚೆಯನ್ನು ತಲೆಗೆ ಸುತ್ತಿ ಇವರಿಬ್ಬರ ಸಮಸ್ಯೆಗೆ ಅವರೂ ದನಿಗೂಡಿಸುತ್ತಾ ಹೌದು, ಒಂದು ಪಕ್ಷ ಗೊನೆ ಕೊಯ್ಯುವವನು ಸಿಕ್ಕರೆ ನೇಣು ಹಿಡಿಯುವವನು (ಹಗ್ಗದ ಮೇಲೆ ಇಳಿಬಿಡುವ ಅಡಕೆ ಗೊನೆಯನ್ನು ಕೆಳಗೆ ನಿಂತು ಹಿಡಿದುಕೊಳ್ಳುವವನು.
ಇದು ಒಂದು ಕಲೆ. ಎಲ್ಲರಿಗೂ ಬರುವುದಿಲ್ಲ) ಸಿಗುವುದಿಲ್ಲ. ಇಬ್ಬರೂ ಸಿಕ್ಕರೆ ಉದುರು (ಕೊಯ್ಯುವಾಗ ನೆಲಕ್ಕೆ ಬೀಳುವ ರಾಶಿ ರಾಶಿ ಅಡಕೆ) ಹೆಕ್ಕುವವರು ಸಿಗುವುದಿಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅಡಕೆ ಕೊಯ್ಲು ಒಂದು ಮಹಾ ಯಜ್ಞವೇ ಆಗಿದೆ ಅಂತ ಅವರೂ ಸಹ ಬಿಸಿಲಿಗೆ ಬೆನ್ನೊಡ್ಡಿ ಕುಳಿತರು. ಹೌದು, ಮಲೆನಾಡಿನ ಎಲ್ಲಾ ಹವ್ಯಕರ ಸಮಸ್ಯೆಯಿದು.
ಕೊನೆ ಕೊಯ್ಲು ಬಂತೆಂದರೆ ಆಳು ಕಾಳುಗಳಿಗಾಗಿ ಹುಡುಕುವುದೇ ಒಂದು ತಲೆಹೊಡೆತ. ಕಾರಣ ದುರ್ಗ – ಗಣಪರ ತೊಡೆಗಳು ಮರ ಹತ್ತಿ – ಇಳಿದು ಅಡಕೆ ದಬ್ಬೆಗಳಂತಾಗಿಬಿಟ್ಟಿವೆ. ಬೆನ್ನು ಬಾಗಿ ಸೊಂಟದಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಸಲೀಸಾಗಿ ಹೋಗುತ್ತಿದ್ದ ಕೊನೆಕೊಯ್ಲು ಈಗ ಹಠಾತ್ತನೇ ನಿಂತಂತಾಗಿದೆ.
ಇಂದು ನಮ್ಮೂರಿನ ಕಪ್ಪು ಹಸುರಿನ ಕಾಡುಗಳ ಮಧ್ಯೆ ದಾರಿ ಸಿಗಿದುಕೊಂಡು ಹಸಿರು ಪತ್ತಲ ಉಟ್ಟ ಮೈಮೇಲೆಲ್ಲಾ ಕೆಂಪು ಧೂಳನ್ನು ದಪ್ಪಗೆ ಹೊದೆಸುತ್ತಾ ಬರುವ ಕೆಂಪು ಬಸ್ಸುಗಳು, ದಿವಸವೂ ಎರಡು ಮೂರು ಸಾರಿ ಭರ್ರಂತೆ ಬಂದು ಹೋಗುತ್ತವೆ. ಗಣಪ ದುರ್ಗರ ಮನೆಯ ಮುಂದೆಯೇ ಬಸ್ ಸ್ಟಾಪ್ ಇದೆ. ಇವರ ಮಕ್ಕಳಿಗೆ ಈಗ ಹಾಳೆ ಟೋಪ್ಪಿ ಇಲ್ಲ ಬದಲಾಗಿ ಹ್ಯಾಟ್. ಮೊಣಕಾಲ ಮೇಲಿನ ಪಂಚೆಗೆ ಬದಲಾಗಿ ಪ್ಯಾಂಟು. ಬರಿಗಾಲಿನ ನಡಗೆಗೆಲ್ಲ ಆಧುನಿಕ ಶೂ. ಅಲ್ಲದೆ ಮನೆಯ ಮುಂದೆ ಹ್ಯಾಂಗರಿನಲ್ಲಿ ಬಣ್ಣ ಬಣ್ಣದ ಅಂಗಿಗಳು ನೇತಾಡುತ್ತಿರುತ್ತವೆ.
ಪೇಟೆಯ ಮಸಾಲೆ ದೋಸೆ, ಚೌ ಚೌ ನ ಗಮಲು ಇವರ ಮನೆಯಿಂದಲೂ ಬರುತ್ತಿದೆ. ಪೇಟೆಯಲ್ಲಿ ತಿಂಗಳಿಗೆ 1000-2000 ರುಪಾಯಿ ಸಂಬಳ ಪಡೆಯುವ ಸಾಮಾನ್ಯ ಕೆಲಸವೂ ಅವರಿಗೆ ಗತ್ತಿನದಾಗಿ ಕಾಣುತ್ತದೆ. ಆದರೆ ಅದೇ ಅಡಕೆ ಕೊಯ್ಲಿನ ಸೀಜನ್ ನಲ್ಲಿ ದಿನಕ್ಕೆ 2000-3000 ದುಡಿಯುವ ಕೊನೆ ಕೊಯ್ಲು ಅವರಿಗೆ ಅವಮಾನದ ವೃತ್ತಿಯಾಗಿದೆ.
ಮನೆಯ ಕೋಳಿಗೆ ಸಾಂಚಿದ ದುರ್ಗನ ದೋಟಿ ಈಗ ಬಿಸಿಲಿನಲ್ಲಿ ಒಣಗುತ್ತಿದೆ, ಹಗ್ಗ ಲಡ್ಡಾಗುತ್ತಿದೆ, ಕತ್ತಿ ಸಿಕ್ಕಿಸುವ ಕೊಕ್ಕೆ ತುಕ್ಕು ಹಿಡಿಯುತ್ತಿದೆ. ತುಂಡು ಪಂಚೆ ಉಟ್ಟುಕೊಂಡು ಕಟ್ಟೆಯ ಮೇಲೆ ಚೂಪಗೆ ಕೂತ ಗಣಪ ಮುಂದಕ್ಕೆ ಬಾಗಿ ಹಣೆಯ ಮೇಲೆ ಕೈ
ಮರೆ ಮಾಡಿಕೊಂಡು ಮಂಜರುಗಣ್ಣಿನಿಂದ ದೋಟಿಯ ಉದ್ದಕ್ಕೂ ದೃಷ್ಟಿ ಹಾಯಿಸಲು ಪ್ರಯತ್ನ ಪಡುತ್ತಿದ್ದಾನೆ. ಅಷ್ಟು ಹೊತ್ತಿಗೆ ಹಾರನ್ ಮಾಡುತ್ತಾ ಬಂದ ಬಸ್ಸಿಗೆ ಕೂಲಿಂಗ್ ಗ್ಲಾಸ್ ಧರಿಸಿದ ಗಣಪನ ಮಗ ಕೃಷ್ಣಮೂರ್ತಿ ಬಸ್ಸಿಗೆ ಕೈ ಮಾಡಿ ನಿಲ್ಲಿಸಿ, ಬಸ್ ಹತ್ತಿ ಭರ್ರನೆ ಹೋಗುವುದನ್ನು ನೋಡುತ್ತಾ ಗಣಪ ಯಥಾಸ್ಥಾನದಲ್ಲಿ ಆಸೀನನಾಗಿ, ಮುಂಡು ಬೀಡಿಗಾಗಿ ತಡಕಾಡುತ್ತಾ ಒಂದು ನಿಟ್ಟುಸಿರು ಬಿಡುವುದಷ್ಟೇ ಅವನ ಕೆಲಸವಾಗಿದೆ.
ನಮ್ಮೂರಿನ ಕೆಂಪು ಬಸ್ಸಿನ ಧೂಳು ಮುಸುಕಿರುವುದು ಕೇವಲ ದುರ್ಗಾಗಣಪರಿಗೆ ಮಾತ್ರ ಅಲ್ಲಾ, ಗಣಪತಿ ಭಟ್ಟರಿಗೂ ತಿಮ್ಮಣ್ಣ ಭಟ್ಟರಿಗೂ ಮುಸುಕಿದೆ. ಪರಾವಲಂಬನೆಯಲ್ಲಿ ಬದುಕನ್ನು ಇಲ್ಲಿಯವರೆಗೆ ದೂಡುತ್ತ ಬಂದ ಇವರಿಗೆ ಇದ್ದಕ್ಕಿದ್ದ ಹಾಗೆ ಪಂಚೇರು ಆದ ಸ್ಥಿತಿ ಆಗಿದೆ. ಎಲ್ಲಾ ರಂಗದಲ್ಲೂ ಸಮಸ್ಯೆಗಳು ಇದ್ದೇ ಇವೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನದೆಯಾ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಸಾಕಷ್ಟು ಸಂಘ – ಸಂಸ್ಥೆಗಳು ಈ ದಿಕ್ಕಿನಲ್ಲಿ ಸಂಶೋಧನೆ ಮಾಡುತ್ತಿದ್ದರೂ ಸರಿಯಾದ ಫಲಿತಾಂಶ ಬಂದಿಲ್ಲ. ಇನ್ನು ಮುಂದೆ ಖಂಡಿತಾ ದುರ್ಗ-ಗಣಪರ ಮಕ್ಕಳು ಕೊನೆ ಕೊಯ್ಯಲು ಸಿಗುವುದಿಲ್ಲ ಎಂಬ ಸತ್ಯ ಗೊತ್ತಾಗಬೇಕಿದೆ. ಅಲ್ಲೊಬ್ಬ ಇಲ್ಲೊಬ್ಬ ಅಪ್ಪನ ವೃತ್ತಿಯನ್ನು ಅವಲಂಬಿಸಿದರೂ, ವೃತ್ತಿ ಶ್ರದ್ಧೆ ಕಂಡು ಬರುವುದಿಲ್ಲ. ಜೀವನ ಮಾಡಬೇಕಲ್ಲ ಎನ್ನುವ ಅನಿವಾರ್ಯಕ್ಕೆ ವಾರ ದಲ್ಲಿ 1-2 ಕೆಲಸ ಅಷ್ಟೆ. ಆದರೂ ತಿಂಗಳ ಮೊದಲೆ ಅವರನ್ನು ಬುಕ್ ಮಾಡಿಕೊಳ್ಳಬೇಕಾಗುತ್ತದೆ.
ಬಂದರೆ ಬಂದ್ರು ಬಿಟ್ಟರೆ ಬಿಟ್ರು. ಒಟ್ಟಿನಲ್ಲಿ ಬೆಳೆಗಾರರು ಅವರಿಗೆ ಅಡ್ಜಸ್ಟ್ ಆಗದೆ ಬೇರೆ ಗತಿಯಲ್ಲದಂತಾಗಿದೆ. ಸುಲಭವಾದ ಪರಿಹಾರವೆಂದರೆ ನಾವೇ ದುರ್ಗ – ಗಣಪರಾದರೆ ಕೊಯ್ಲಿನ ಸಮಸ್ಯೆಗೆ ಉತ್ತರ ಹುಡುಕಲು ಸಾಧ್ಯ. ನಮ್ಮ ಮನೆಯ ಕೆಲಸವನ್ನು
ನಾವೇ ಮಾಡಿಕೊಳ್ಳುವುದು ಅವಮಾನವೇನೂ ಅಲ್ಲ. ಊರಿಗೆ 3-4 ಜನ ಇಂತವರು ತಯಾರಾದರೆ ಸಮಸ್ಯೆಗೆ ಜಾಗವೇ ಇರುವುದಿಲ್ಲ. ನಾವು ಮಾಡುವ ಈ ಕೆಲಸವನ್ನು ನೋಡಿ ಗಣಪ ದುರ್ಗರ ಮಕ್ಕಳ ಮನಸ್ಸು ಪರಿವರ್ತನೆಯಾದೆರೆ ಆಶ್ಚರ್ಯ
ಪಡಬೇಕಾಗಿಲ್ಲ. ಈ ಒಂದು ಕೆಲಸವು ಅವರಿಗೆ ಗೌರವಾಗಿಯೇ ಕಂಡು ಅದನ್ನೊಂದು ಕಲೆಯಾಗಿ ಸ್ವೀಕರಿಸಲು ಸಾಧ್ಯ.
ನಮ್ಮ ಮನೆಯ ತೋಟದ ಗೊನೆಗಳನ್ನು ನಾವೇ ಕೊಯ್ಯುವಂತಾದರೆ ಆರ್ಥಿಕವಾಗಿಯೂ ಸುಧಾರಿಸಿಕೊಳ್ಳಲು ಸಾಧ್ಯ. ಅಡಕೆ ಸುಲಿಯುವುದು ಸಹ ಇತ್ತೀಚಿನ ದಿನಗಳಲ್ಲಿ ಒಂದು ಸಮಸ್ಯೆಯಾಗಿಯೇ ಕಾಡುತ್ತಿತ್ತು. ಈ ಹಿಂದೆ ಮೈಯಾಳು (ಪರಸ್ಪರ ಸುಲಿಯುವುದು) ಮಾಡಿಕೊಂಡು ಸುಲಿಯುವಾಗ ಸಮಸ್ಯೆ ಇರಲಿಲ್ಲ. ಮಹಿಳೆಯರು ಸುಲಿಯುವ ಕಾಯಕದಲ್ಲಿ ವಿಶೇಷವಾಗಿ ಭಾಗವಹಿಸುತ್ತಿದ್ದರಿಂದ ಆರ್ಥಿಕ ಸ್ವಾವಲಂಬನೆ ಹೊಂದಲು ಉತ್ತಮ ದಾರಿಯಾಗಿತ್ತು. ಆದರೆ ಈಗ ಹವ್ಯಕರ ಜನಸಂಖ್ಯೆಯೇ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ, ಇದ್ದವರೂ ಊರು ಬಿಟ್ಟು ಪರ ಊರಿನಲ್ಲಿ ಉತ್ತಮ ಕೆಲಸದಲ್ಲಿರುವುದು
ಮತ್ತೊಂದೆಡೆ.
ಈಗ ಊರಿನಲ್ಲಿರುವವರು ವಯಸ್ಸಾದ ತಂದೆತಾಯಂದಿರು. ಸಂತೋಷದ ಸಂಗತಿಯೆಂದರೆ ಉತ್ತಮ ತಂತ್ರಜ್ಞಾನವನ್ನು
ಅಳವಡಿಸಿಕೊಂಡ ಶೇ.೮೦ರಷ್ಟು ಗುಣಮಟ್ಟದ ಅಡಕೆ ಸುಲಿಯುವ ಯಂತ್ರ ಬಂದಿರುವುದು ಆಶಾದಾಯಕ ಸಂಗತಿಯಾಗಿದೆ. ಅಡಕೆ ಬೆಳೆಗಾರರ ಅನುಕೂಲಕ್ಕೆ ಹುಟ್ಟಿಕೊಂಡ ಅನೇಕ ಸಂಘ – ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಅಡಕೆ ಬೆಳೆಗಾರರ
ದೃಷ್ಟಿಯಿಂದ ಉತ್ತಮ ಸಂಶೋಧಕರನ್ನು ನೇಮಿಸಿ ಉತ್ತಮ ವೇತನ ನೀಡಿ ಗುಣಮಟ್ಟದ ಯಂತ್ರಗಳನ್ನು ಕಂಡುಹಿಡಿಯುವಲ್ಲಿ ಮುತುವರ್ಜಿಯನ್ನು ವಹಿಸಿದಾಗ ಮಾತ್ರ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯ.
ಇನ್ನಾದರೂ ಅಡಕೆ ಬೆಳೆಗಾರರು ಕೇವಲ ಕವಳದ ತಬಕಿನೆದುರು ದುಂಡು ಕಟ್ಟೆಯ ಪರಿಷತ್ತು ಮಾಡಿಕೊಂಡು ತಮ್ಮೆಲ್ಲ ಸಮಸ್ಯೆಗಳನ್ನು ಜಗಿಯುತ್ತಾ ಕೂರದೆ, ಬೆಳೆಗಾರರ ಅನೂಕೂಲಕ್ಕೆ ಇರುವ ಸಂಘ – ಸಂಸ್ಥೆಗಳ ಹಾಗೂ ಸಂಶೋಧನಾ ಕೇಂದ್ರಗಳ ಮೇಲೆ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಡ ಹೇರಿದಾಗ ಮಾತ್ರ ಭವಿಷ್ಯ ಆಶಾದಾಯಕವಾಗಬಹುದು.