Thursday, 12th December 2024

ಲೈಟ್‌ ಬಲ್ಬ್‌ಗಳೇಕೆ ಸುಟ್ಟು ಹೋಗುವವಮ್ಮ, ಮಿಕ್ಸಿ ಏಕೆ ಹಾಳಾಗುವುದಮ್ಮ !!

ಶಿಶಿರ ಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ನ್ಯೂಯಾರ್ಕ್ ಸಿಟಿಯಲ್ಲಿ ಅಥವಾ ನ್ಯೂಜರ್ಸಿ ಸಿಟಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಸ್ವಲ್ಪ ದೊಡ್ಡ ಜಾಗವಿರುವ ಮನೆ ಬೇಕೆಂದರೆ ನ್ಯೂಯಾರ್ಕ್‌ನಿಂದ ಸ್ವಲ್ಪ ದೂರವೇ ಮನೆ ಮಾಡಬೇಕಾಗುತ್ತದೆ. ನ್ಯೂಯಾರ್ಕ್ ಎಂದರೆ ಪರಮ ತುಟ್ಟಿಯ ಊರು. ಅಮೆರಿಕಕ್ಕೆ ಬಂದ ಹೊಸತರಲ್ಲಂತೂ ಬರುವ ಸಂಬಳಕ್ಕೆ ಅಲ್ಲಿ ಮನೆ ಬಾಡಿಗೆಗೆ ಪಡೆಯುವುದು ಎಂದರೆ ಬರುವ ದುಡಿದದ್ದ ನ್ನೆಲ್ಲ ಬಾಡಿಗೆಗೇ ಹಾಕಬೇಕು.

ಸಂಬಳದ ಅರ್ಧಕ್ಕಿಂತ ಜಾಸ್ತಿ ಬಾಡಿಗೆ ಕೊಟ್ಟರೂ ಸಿಗುವ ಮನೆ ಚಪ್ಪಲಿ ಕಳಚಿ ಒಳಗೆ ಹೋಗಿ ಮುಟ್ಟುವುದರೊಳಗೆ ಮುಗಿದು ಬಿಡುವಂಥದ್ದು. ಹಾಗಂತ ಕಡಿಮೆ ಬಾಡಿಗೆಯಿರುವ ಜಾಗಗಳೂ ನ್ಯೂಯಾರ್ಕ್ ನಗರದಲ್ಲಿದೆ. ಆದರೆ ಅವು ವಲಸಿಗರಿಗೆ ಉಳಿದುಕೊಳ್ಳಲು ಸಹ್ಯವಾಗುವ ಜಾಗಗಳಲ್ಲ. ಅಮೆರಿಕ ಹೊರ ಜಗತ್ತಿಗೆ ಎಷ್ಟೇ ಝಗಮಗವೆನ್ನಿಸಿದರೂ ಎಲ್ಲ ನಗರಗಳ ಕೆಲವೊಂದು ಪ್ರದೇಶಗಳು ಹಗಲಲ್ಲಿ ಕೂಡ ಹೋಗುವಂತಿಲ್ಲ.

ಅಂತಹ ಸ್ಥಳಗಳಲ್ಲಿ, ಅದರಲ್ಲೂ ಹೊರದೇಶದವರೆಂದರೆ ಹಗಲಲ್ಲಿ ಗನ್ ತೋರಿಸಿ ಲೂಟಿ ಮಾಡಲಾಗುತ್ತದೆ. ಹೀಗೆ ಕ್ರಿಮಿನಲ್ ವ್ಯವಹಾರಗಳು, ಡ್ರಗ್‌ ಹಾವಳಿ ಇರುವ ಸ್ಥಳಗಳಲ್ಲಿ ಬಾಡಿಗೆ ಏನೋ ಕಡಿಮೆ ಆದರೆ ಅವು ಉಳಿದುಕೊಳ್ಳಲು ಯೋಗ್ಯವಾದ ಸ್ಥಳಗಳಲ್ಲ. ಅದರಲ್ಲಿಯೂ ಮದುವೆ ಆಗಿದ್ದರೆ, ಮಕ್ಕಳಿದ್ದರೆ ಅಂತಹ ಜಾಗದಲ್ಲಿ ಉಳಿದುಕೊಳ್ಳಲು ಅಸಾಧ್ಯವೇ. ಈ ಕಾರಣಕ್ಕೆ ಸಾಮಾನ್ಯವಾಗಿ ನ್ಯೂಯಾರ್ಕ್ನಲ್ಲಿ ಕೆಲಸ ಮಾಡುವ ಬಹುತೇಕರು ಒಂದೋ ನ್ಯೂಯಾರ್ಕ್ ನ ಉತ್ತರದಲ್ಲಿ ಇಪ್ಪತ್ತು ಮೂವತ್ತು ಮೈಲಿ-ಊರಾಚೆ ಅಥವಾ ದಕ್ಷಿಣದಲ್ಲಿರುವ ನ್ಯೂಜರ್ಸಿ ರಾಜ್ಯದ ಊರುಗಳಲ್ಲಿ ಉಳಿದುಕೊಳ್ಳುವುದು ಮತ್ತು ಕೆಲಸಕ್ಕೆ ನ್ಯೂಯಾರ್ಕ್ ನಗರಕ್ಕೆ ಹೋಗಿ ಬರುವುದು ಸಾಮಾನ್ಯ.

ಅಮೆರಿಕಕ್ಕೆ ಬಂದಾಗ ನಾನು ಮನೆ ಮಾಡಿ ಉಳಿದುಕೊಂಡ ಊರಿನ ಹೆಸರು ನ್ಯೂಜರ್ಸಿಯ ಎಡಿಸನ್. ಎಡಿಸನ್ ಎಂದಾಕ್ಷಣ ವಿeನವನ್ನು ಓದಿದ್ದ ಎಂಥವರಿಗಾದರೂ ಮೊದಲು ನೆನಪಾಗುವುದು ಥಾಮಸ್ ಆಲ್ವಾ ಎಡಿಸನ್. ನಾನು ಅಲ್ಲಿ ಮನೆ ಮಾಡಿ ಬಹಳ ದಿನದ ವರೆಗೆ ಆ ಎಡಿಸನ್‌ಗೂ ನಾನುಳಿದುಕೊಂಡ ಎಡಿಸನ್ ಊರಿಗೂ ಸಂಬಂಧವಿದೆ ಎಂದು ಅವಗಾಹನೆಗೆ ಬಂದಿರಲಿಲ್ಲ.

ನಮ್ಮ ಮನೆಯ ಹಿಂದೆ ಕೆಲವೇ ಮೀಟರ್ ದೂರದಲ್ಲಿ – ಕೂಗಳತೆಯಲ್ಲಿ ಮೆನ್ಲೋ ಪಾರ್ಕ್ ಎನ್ನುವ ಒಂದು ಬೃಹತ್ ಮಾಲ್ ಇತ್ತು. ಸಾಮಾನ್ಯವಾಗಿ ವೀಕೆಂಡ್ ಬಂತೆಂದರೆ ಅಲ್ಲಿ ಹೋಗಿ ಸಮಯ ಕಳೆಯುವುದು, ಮೂವಿ ನೋಡುವುದು, ಹಾಳು ಮೂಳು ತಿನ್ನುವುದು ಮಾಡುತ್ತಿದ್ದ ಅಯಾಚಿತ ಕೆಲಸ. ಹೀಗೆಯೇ ಒಂದು ದಿನ ಆ ಮಾಲ್‌ನಲ್ಲಿ ಓಡಾಡುವಾಗ ಒಂದು ಚಿಕ್ಕ ಲೈಬ್ರರಿ ರೀತಿಯ ಹಲವು ಪುಸ್ತಕಗಳಿಟ್ಟ ಒಂದು ಚಿಕ್ಕ ಕೋಣೆ ಕಾಣಿಸಿತು.

ಪುಸ್ತಕಗಳನ್ನು ಇಟ್ಟು ಬಾಗಿಲನ್ನು ತೆರೆದಿಟ್ಟ ಕೋಣೆ ಕಂಡರೆ ಸುಮ್ಮನಿರುವುದುಂಟೇ. ಒಳ ಹೊಕ್ಕು ನೋಡಿದರೆ ಅದೊಂದು ಚಿಕ್ಕ ಮ್ಯೂಸಿಯಂ. ಅಲ್ಲಿನ ಪುಸ್ತಕ ತಿರುವಿ ಹಾಕಿದಾಗ ತಿಳಿಯಿತು ನಾನಿರುವ ಈ ಎಡಿಸನ್ ಎನ್ನುವ ಊರು ಬೇರೆಯಲ್ಲ ಥಾಮಸ್ ಆಲ್ವಾ ಎಡಿಸನ್‌ನ ಹೆಸರಿನಲ್ಲಿರುವ ಎಡಿಸನ್ ಬೇರೆಯಲ್ಲವೆಂದು. ಅದೊಂದು ಚಿಕ್ಕ ಪುಸ್ತಕಗಳನ್ನು, ಫೋಟೋ ಗಳನ್ನು, ನಾಲ್ಕು ಕುರ್ಚಿ, ಒಂದಿಷ್ಟು ಅನಾದಿಕಾಲದ ಬಲ್ಬ ಪ್ರೊಟೋಟೈಪ್‌ಗಳನ್ನಿಟ್ಟ ಪುಟ್ಟ ಮ್ಯೂಸಿಯಂ.

ನಾವಿರುವ ಊರಿನ ಇತಿಹಾಸ ಧುತ್ತನೆ ನಮ್ಮೆದಿರುಗೆ ಬಂದು ನಿಂತಂತಾಗ ಆಗುವ ಅನುಭವವೇ ಬೇರೆ. ಚಿಕ್ಕಂದಿನಲ್ಲಿ ಬಲ್ಬ್ ಕಂಡುಹಿಡಿದವರು ಯಾರು? ಥಾಮಸ್ ಆಲ್ವಾ ಎಡಿಸನ್’ ಎಂದು ಊರಲು ಹೊಡೆದದ್ದು, ಪರೀಕ್ಷೆ ಬರೆದದ್ದು, ಪುಸ್ತಕದಲ್ಲಿ ಪ್ರಿಂಟಾದ ಆತನ ರೇಖಾ ಚಿತ್ರ ಎಲ್ಲವೂ ಸ್ಮೃತಿಪಟಲದಲ್ಲಿ-ಹಳೆಯ ಬ್ಲಾಕ್ ಅಂಡ್ ವೈಟ್ ಸಿನಿಮಾದಂತೆ ಬಂದು ಹೋದವು. ಅಲ್ಲದೇ ಇಷ್ಟು ದಿನ ಓಡಾಡಿಕೊಂಡ – ಈಗ ನಿಂತಿರುವ ಮೆನ್ಲೋ ಪಾರ್ಕ್ ಎನ್ನುವ ಮಾಲ್ ಒಂದು ಕಾಲದಲ್ಲಿ ಥಾಮಸ್ ಆಲ್ವಾ ಎಡಿಸನ್‌ನ ಲ್ಯಾಬೊರೇಟರಿ ಇದ್ದ ಜಾಗವಾಗಿತ್ತು ಎಂದು ತಿಳಿದಾಗ ಅಕ್ಷರಶಃ ರೋಮಾಂಚನದ ಅನುಭವ.

ಅಲ್ಲಿ ಇತಿಹಾಸದ ಚಿತ್ರಗಳು ಮತ್ತು ಪುಸ್ತಕಗಳೊಂದಿಗೆ ಒಂದು ಚಿಕ್ಕ ಕೈಪಿಡಿ ಇಡಲಾಗಿತ್ತು. ಅದರ ಹೆಸರು The Light Bulb & The untold story of planned obsolescence.  ಅದನ್ನು ಬರೆದವರ ಹೆಸರಿಲ್ಲ. ಇದೊಂದು ಚಿಕ್ಕ ಕೈಪಿಡಿ ಬಿಚ್ಚಿಟ್ಟ ಇತಿಹಾಸವೇ ಹೊಸ ತೊಂದು ಜಗತ್ತನ್ನು ನನ್ನ ಮುಂದೆ ತೆರೆದಿಟ್ಟಿತು. ನಮ್ಮ ಕರಾವಳಿಯಲ್ಲಿ ಮಳೆಗಾಲವೆಂದರೆ-ಮಳೆ ಜೋರಾಗಿ
ಶುರುವಾಗುವುದಕ್ಕಿಂತ ಮೊದಲು ಕರೆಂಟ್ ಹೋಗುವುದು ಸಾಮಾನ್ಯ. ಮಳೆಗಾಲದಲ್ಲಿ ಕರೆಂಟ್ ಹೋಯಿತೆಂದರೆ ಅದು
ದೊಡ್ಡ ಮಳೆ ಬರುವ ಮುನ್ಸೂಚನೆ.

ಕರೆಂಟ್ ಅನ್ನು ಮಳೆ ಶುರುವಾಗುತ್ತಿದ್ದಂತೆ ಕೆಇಬಿ ಅವರೇ ತೆಗೆದರೆ ಸರಿ, ಇಲ್ಲದಿದ್ದರೆ ಮಳೆ ಗಾಳಿಯೇ ಮರಗಳು ಎಲೆಕ್ಟ್ರಿಕ್ ತಂತಿಗಳ ಮೇಲೆ ಬೀಳಿಸಿ, ಒಂದೆರಡು ಟ್ರಾನ್ಸ್ ಫಾರ್ಮರ್ ಹೊಟ್ಟಿ ಹೋಗುವಂತೆ ನೋಡಿಕೊಂಡು ಕೆಇಬಿ (ಕೆಪಿಟಿಸಿಎಲ್‌) ಅವರ ನಿರ್ಲಕ್ಷ್ಯವನ್ನು ಪ್ರಶ್ನಿಸುತ್ತವೆ. ಕರೆಂಟ್ ಇರಲಿ ಬಿಡಲಿ, ಅಲ್ಲಿ ಬೀಳುವ ಸಿಡಿಲು ಮಿಂಚುಗಳಿಂದಾಗಿ ತಂತಿಯಲ್ಲಿ ಕರೆಂಟ್ ಹರಿದು ಮನೆಯ ಟಿವಿ, ಫ್ಯಾನ್‌ಗಳು ಸುಡುವುದು ತೀರಾ ಸಾಮಾನ್ಯ.

ಪ್ರತೀ ಮಳೆಗಾಲ ಮುಗಿಯುವುದರ ಒಳಗೆ ಏನಿಲ್ಲವೆಂದರೆ ಎರಡು ಡಜನ್ ಲೈಟ್ ಬಲ್ಬಗಳು ಸುಟ್ಟು ಹೋಗಲೇ ಬೇಕು. ಮೊದಲಿ
ನಿಂದಲೂ ಬಲ್ಬ ಹಾಳಾಗುವುದು, ಕೆಲವೊಮ್ಮೆ ಅದರ ತಂತಿ ನೇತಾಡುವುದನ್ನು ಸ್ವಲ್ಪ ಬಗ್ಗಿಸಿ ಇನ್ನೊಂದು ತಂತಿಗೆ ತಾಗುವಂತೆ
ಮಾಡಿ ಬೆಳಕು ಮಾಡುವುದು ಇವೆಲ್ಲ ಕರಾವಳಿಯ ಅಷ್ಟೇ ಏಕೆ ನಮ್ಮೆಲ್ಲರ ಜೀವನದ ಅನುಭವವೇ. ಆಗೆಲ್ಲ ಏಳುತ್ತಿದ್ದ ಪ್ರಶ್ನೆ
ಒಂದೇ, ಏಕೆ ಈ ಬಲ್ಬ ಹಾಳಾಗುತ್ತದೆ.

ಸುಟ್ಟುಹೋಗದಂತೆ ಬಲ್ಬ ತಯಾರಿಸಲು ಸಾಧ್ಯವೇ ಇಲ್ಲವೇ? ಥಾಮಸ್ ಆಲ್ವಾ  ಎಡಿಸನ್ ಬಲ್ಬ ಕಂಡುಹೋಡಿದ ನಂತರ ಆತ ಅಭಿವೃದ್ಧಿ ಪಡಿಸಿದ ಬಲ್ಬಗಳು ಸುಮಾರು ಎರಡು ಸಾವಿರ ತಾಸು ಉರಿಯುತ್ತಿದ್ದವಂತೆ ಎಂದು ಓದಿ ತಿಳಿದಿದ್ದೆ. ಆದರೆ ನಮ್ಮ ಮನೆಯಲ್ಲಿರುವ ಯಾವುದೇ ಬಲ್ಬ ಬೇಸಿಗೆಯಲ್ಲಿ ಕೂಡ ಎರಡು ಮೂರು ತಿಂಗಳಿಗಿಂತ ಜಾಸ್ತಿ ಬಾಳಿಕೆ ಬರುತ್ತಿರಲಿಲ್ಲ. ಆಗೆಲ್ಲ
ನನ್ನ ತಂದೆ ಹೇಳುತ್ತಿದ್ದರು- ಅಯ್ಯೋ ಮೊದಲೆಲ್ಲ ಒಳ್ಳೆ ಬಾಳಿಕೆ ಬರುತ್ತಿತ್ತು-ಈಗೀಗಿನ ಬಲ್ಬ ಹೀಗೆಯೇ? ವಿಜ್ಞಾನ ಮುಂದು
ವರಿದಂತೆ ಯಾವುದೇ ಆವಿಷ್ಕಾರಗಳು ಇನ್ನಷ್ಟು ಮಾರ್ಪಾಟು ಕಂಡು ಉತ್ತಮವಾಗುತ್ತ ಹೋಗುತ್ತವೆ ಎನ್ನುವುದು ನಮ್ಮಸಹಜ ನಂಬಿಕೆ.

ಆದರೆ ಇದಕ್ಕೆ ವ್ಯತಿರಿಕ್ತವಾದ ಈಗೀಗ ವಸ್ತುಗಳು ಬಹುಬೇಗ ಕೆಟ್ಟುಹೋಗುವುದೇಕೆ? ಈ ಪ್ರಶ್ನೆಗಳಿಗೆ ಉತ್ತರವೆನ್ನುವಂತೆ ಇನ್ನೊಂದು ಜಗತ್ತನ್ನು ಹುಡುಕಿ ಹೋಗುವಂತೆ ಪ್ರೇರೇಪಿಸಿದ್ದು ಆ ಚಿಕ್ಕ ಬಲ್ಬ ಇತಿಹಾಸದ ಕೈಪಿಡಿ. ಅಮೆರಿಕದಲ್ಲಿ ಸುಮಾರು ಅರವತ್ತು ಸಾವಿರ ಫೈರ್‌ಸ್ಟೇಷನ್ ಗಳಿವೆ. ಆದರೆ ಕ್ಯಾಲಿಫೋರ್ನಿಯಾದ ಲಿವರ್‌ಮೋರ್ ಫೈರ್ ಸ್ಟೇಷನ್ ಮಾತ್ರ ಒಂದು ವಿಚಿತ್ರ ಕಾರಣಕ್ಕೆ ಹೆಸರುವಾಸಿ. ಅದಕ್ಕೆ ಕಾರಣ ಆ ಫೈರ್ ಸ್ಟೇಷನ್ ನಲ್ಲಿರುವ ಒಂದು (ಅ)ಸಾಮಾನ್ಯ ಬಲ್ಬ್.

ಈ ಬಲ್ಬ್ ಕಳೆದ 120 ವರ್ಷದಿಂದ ಉರಿಯುತ್ತಿದೆ. ಕೆಲವೇ ಸಲ ವೈರಿಂಗ್ ಮತ್ತು ಇತರ ಕಾರಣಕ್ಕಾಗಿ ಮಾತ್ರ ಈ ಬಲ್ಬ್ ಅನ್ನು ಆರಿಸಲಾಗಿದ್ದು ಬಿಟ್ಟರೆ ಇದು 1901ರಿಂದ ಇಂದಿನವರೆಗೆ ನಿರಂತರವಾಗಿ ಬೆಳಕು ಕೊಡುತ್ತಿದೆ. ಇದು ಜಗತ್ತಿನ ಅತೀ ದೀರ್ಘ ಕಾಲ ಉರಿಯುತ್ತಿರುವ ಬಲ್ಬ್ ಎಂದು ಗಿನ್ನಿಸ್ ಬುಕ್ ಆಫ್ ವರ್ಡ್ ರೆಕಾರ್ಡ್‌ನಲ್ಲಿ ಕೂಡ ದಾಖಲಾಗಿದೆ. ಈ ಲೈಟ್ ಬಲ್ಬ್ ನೋಡಲು ಪ್ರತೀ ದಿನ ಸಾಗರೋಪಾದಿಯಾಗಿ ಈ ಫೈರ್ ಸ್ಟೇಷನ್‌ಗೆ ಜನರು ಭೆಟ್ಟಿ ನೀಡುತ್ತಾರೆ.

https://www.centennialbulb.org/cam.htm ಈ ಲಿಂಕ್‌ನಲ್ಲಿ ಈ ಬಲ್ಬನ ಲೈವ್ ಚಿತ್ರ ನೋಡಬಹುದು. ಇದು ಇಂದಿಗೂ-ಈಗಲೂ ಉರಿಯುತ್ತಲೇ ಇದೆ. 2001ರಲ್ಲಿ ನೂರು ವರ್ಷ ಉರಿಯುವುದರ ಮೂಲಕ ಶತಮಾನ ಉರಿದ ಮೊದಲ ಲೈಟ್ ಬಲ್ಬ್ ಎಂದೇ ಪ್ರಖ್ಯಾತಿಯಾಯಿತು. ಈ ಲೈಟ್ ಬಲ್ಬ್ನ  ಶತಮಾನದ ಹಬ್ಬವನ್ನು ಆಚರಿಸಲು ಬರೋಬ್ಬರಿ 9000 ಮಂದಿ ಅಲ್ಲಿ ಸೇರಿದ್ದರು. ಈ ಬಲ್ಬ ತಯಾರಾದದ್ದು ಎಲ್ಲಿ, ಇದರ ಫಿಲಮೆಂಟ್ ಅನ್ನು ತಯಾರಿಸಿದ್ದು ಯಾರು ಎಂಬ ಎಲ್ಲ ಜಾತಕ ಅಲ್ಲಿ ಲಭ್ಯ.

ಅಷ್ಟೊಂದು ದೀರ್ಘ ಕಾಲ ಬಾಳಿಕೆ ಬರುವ ಬಲ್ಬಗಳನ್ನು ಕಂಡುಹಿಡಿದರೂ ನಂತರ ಬಂದ ಲೈಟ್ ಬಲ್ಬ್ ಗಳು ಏಕೆ ಇಷ್ಟು ಕಡಿಮೆ ಬಾಳುತ್ತಿವೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ಒಂದು ಕರಾಳ ಇತಿಹಾಸ ನಮ್ಮೆದುರಿಗೆ ಬಂದುನಿಲ್ಲುತ್ತದೆ.
ಡಿಸೆಂಬರ್ 24, 1920. ಸ್ವಿಟ್ಜರ್‌ಲ್ಯಾಂಡ್‌ನ ಜಿನೆವಾದ ಒಂದು ಮುಚ್ಚಿದ ಕೋಣೆಯಲ್ಲಿ ಒಂದಿಷ್ಟು ಕೋಟ್ ಧರಿಸಿದ ಜೆಂಟಲ್ ‌ಮನ್‌ಗಳು ಸೇರುತ್ತಾರೆ. ಅದು ಆಧುನಿಕ ಜಗತ್ತಿನ ಮೊದಲ ಜಾಗತಿಕ ಬ್ಯುಸಿನೆಸ್ ಕಾರ್ಟೆಲ್ ರಹಸ್ಯ ಮೀಟಿಂಗ್. ಆ ಸಮಯದಲ್ಲಿ ಬಲ್ಬ್ ಎಂದರೆ ಇಂದಿನ ಮೊಬೈಲ್ ಫೋನ್ ಅನ್ನು ಕೂಡ ಮೀರಿದ ಆವಿಷ್ಕಾರ.

ಬಲ್ಬ್ ಗೆ ಎಲ್ಲಿಲ್ಲದ ಬೇಡಿಕೆಯಿದ್ದ ಕಾಲವದು. ಇಂದು ಮೊಬೈಲ್ ತಯಾರಿಸುವ ಕಂಪನಿಗಳಂತೆ ಆಗಿನ ಕಾಲದಲ್ಲಿ ಬಲ್ಬ್ ತಯಾರಿಸಲು ಎಲ್ಲಿಲ್ಲದ ಪೈಪೋಟಿ. ಹಣವೆಂದರೆ ಬಲ್ಬ ಕಾರ್ಖಾನೆ ಎನ್ನುವ ದಿನಗಳವು. ಹೀಗೆ ಅಂದು ಸೇರಿದ ಆ ಕೋಟ್‌ಧಾರಿ ಗಳ ಉದ್ದೇಶ – ಜಗತ್ತಿನ ಹಲವು ರಾಷ್ಟ್ರಗಳಲ್ಲಿನ ಬಲ್ಬ ತಯಾರಿಕೆಯನ್ನು ವ್ಯವಸ್ಥಿತವಾಗಿ ಪೇಟೆಂಟ್‌ಗಳ ಮೂಲಕ ನಿಯಂತ್ರಿಸು ವುದು ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿ – ದೇಶಗಳಲ್ಲಿ ತಯಾರಾಗುತ್ತಿದ್ದ ಬಲ್ಬ್ ಗಳ ಮಾರಾಟದ ಮೇಲೆ ವ್ಯಾವಹಾರಿಕ ಹಿಡಿತ ಸಾಧಿಸುವುದು. ಇದಕ್ಕೆ ಆ ಗುಂಪು ಒಂದು ಕಂಪನಿಯನ್ನು ಹುಟ್ಟುಹಾಕುತ್ತದೆ.

ಅದುವೇ Phoe bus,inc. 1881 ರಲ್ಲಿ ಎಡಿಸನ್ ತಯಾರಿಸಿದ್ದ ಬಲ್ಬ್ ಪ್ರೋಟೋಟೈಪ್‌ಗಳು 1500 ತಾಸು ಬಾಳುತ್ತಿದ್ದವು.
ನಂತರ ಈ ಕಾರ್ಟೆಲ್ ಕಂಪನಿ ಹುಟ್ಟುವ ಸಮಯದಲ್ಲಿ ಅಭಿವೃದ್ಧಿ ಪಡಿಸಿದ ಬಲ್ಬ್ ಗಳು 2500 ತಾಸು ಉರಿಯುವವಾಗಿದ್ದವು. ಒಂದು ನಮೂನೆಯಂತೂ ಬರೋಬ್ಬರಿ ಒಂದು ಲಕ್ಷ ತಾಸು ಉರಿಯುವ ಸಾಮರ್ಥ್ಯ ಹೊಂದಿತ್ತು. ಹೀಗೆ ಹೆಚ್ಚು ಹೆಚ್ಚು ಬಾಳಿಕೆಯ ಬಲ್ಬಗಳು ವ್ಯಾವಹಾರಿಕವಾಗಿ ಒಳ್ಳೆಯ ಬೆಳವಣಿಗೆ ಯಾಗಿರಲಿಲ್ಲ. ಕಾರ್ಟೆಲ್ ಕಂಪನಿ ಕ್ರಮೇಣ ಬಲ್ಬ್ ಕಂಪನಿಗಳ ಮೇಲೆ ಹಿಡಿತ ಸಾಧಿಸುವುದರ ಜತೆ ಎಲ್ಲ ಕಂಪನಿಗಳು ಕಡಿಮೆ ಬಾಳಿಕೆಯ ಬಲ್ಬ್ ಗಳನ್ನು ಕಂಡಿಹಿಡಿಯುವಂತೆ ಒತ್ತಡ ತಂದವು.

ಕಡಿಮೆ ಬಾಳುವ ಬಲ್ಬ್ ಗಳನ್ನು ತಯಾರಿಸುವುದು ಹೇಗೆ ಎನ್ನುವ ಬಗ್ಗೆ ನೂರಾರು ಪ್ರಯೋಗಗಳಾದವು. ಈ Phoebus ಕಂಪನಿ ಸಮಯ ಕಳೆದಂತೆ ಜಗತ್ತಿನ ಎಲ್ಲ ಬಲ್ಬ್ ಕಾರ್ಖಾನೆಗಳು ಕಡಿಮೆ ಬಾಳುವ ಬಲ್ಬ್ ಗಳನ್ನಷ್ಟೇ ತಯಾರಿಸುವಂತೆ ನೋಡಿ ಕೊಂಡವು. ಇದರಿಂದಾಗಿ ಕೆಲವೇ ಸಮಯದಲ್ಲಿ ಬಲ್ಬ್ ಮಾರಾಟ ದುಪ್ಪಟ್ಟು ಹೆಚ್ಚಿತ್ತು. ಕೇವಲ ಎರಡೇ ವರ್ಷದಲ್ಲಿ ತಯಾ ರಾಗುವ ಬಲ್ಬ್ ನ ಬಾಳಿಕೆಯನ್ನು 2500 ತಾಸಿನಿಂದ 1500 ತಾಸಿಗೆ ಇಳಿಯುವಂತೆ ನೋಡಿಕೊಳ್ಳಲಾಯಿತು.

ಆಮೇಲೆ ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿ ತಯಾರಾ ಗುವ ಎಲ್ಲ ಬಲ್ಬ್ ಗಳು ಕೇವಲ 1000 ತಾಸಿಗಿಂತ ಕಡಿಮೆ ಬಾಳು ವಂತಾದವು. ಈ ಕಂಪನಿಯ ಯಶಸ್ಸಿನ ನಂತರ ಹುಟ್ಟಿಕೊಂಡದ್ದು ಆಧುನಿಕ ಬ್ಯುಸಿನೆಸ್ ಮಾಡೆಲ್‌. ತಯಾರಿಸುವ ಯಾವುದೇ ವಸ್ತು ಹಾಳಾಗಬೇಕು- ಈ ಉದ್ದೇಶವನ್ನು ಗಮನದಲ್ಲಿಟ್ಟು ಕೊಂಡೇ ಹೆಚ್ಚಿನ ಕಂಪನಿಗಳು ಆಮೇಲೆ ಕೆಲಸ ಮಾಡಲು ಶುರು ಮಾಡಿದವು. ಸಹಜ ಸ್ಪರ್ಧೆಯಿಂದಾಗಿ ಉತ್ತಮ-ಬಾಳಿಕೆ ಬರುವ ಉತ್ಪನ್ನಗಳು ಅವಿಷ್ಕಾರವಾಗುತ್ತಿದ್ದಂತೆ ಅದೆಲ್ಲ ಕಂಪನಿ ಗಳನ್ನು ಅಂಕೆಯಲ್ಲಿಟ್ಟು ಒಂದು ಮಿತಿ ನಿರ್ಮಿಸುವ ದೊಡ್ಡ ಕಂಪನಿಗಳು ಮೇಲ್‌ಸ್ತರದಲ್ಲಿ ಹುಟ್ಟಿಕೊಂಡವು.

ಟೆಂಟ್‌ಗಳನ್ನು ದೊಡ್ಡ ಮೊತ್ತದ ಹಣ ಕೊಟ್ಟು ಖರೀದಿಸುವುದು, ಆ ಮೇಲೆ ವಸ್ತುವಿನ ಮಾರಾಟ, ಬಾಳಿಕೆ ಇವೆಲ್ಲವನ್ನು ಕೇಂದ್ರಿತ ವಾಗಿ ನಿಯಂತ್ರಿಸುವುದು ಮತ್ತು ಕಂಪನಿಗಳಿಂದ ಯಥೇಚ್ಛ ವ್ಯಾವಹಾರಿಕ ಲಾಭ ಪಡೆಯುವುದು ಅಂದಿನಿಂದ ನಡೆದು ಕೊಂಡು ಬಂದ ತೆರೆಮರೆಯ ವ್ಯವಹಾರ. ಒಂದು ಚಿಕ್ಕ ಭಾಗ ಹಾಳಾದಲ್ಲಿ ಅಸೆಂಬ್ಲಿಯ ಒಂದಿಡೀ ಭಾಗವೇ ಹೆಚ್ಚು ಹಣ ತೆರೆದು ಬದಲಿಸುವಂತಿರಬೇಕು. ರಿಪೇರಿ ಕಷ್ಟವಾಗಬೇಕು- ತುಟ್ಟಿಯಾಗಬೇಕು.

ವಸ್ತು ಕೆಟ್ಟಲ್ಲಿ ಗ್ರಾಹಕ ಹೊಸತನ್ನೇ ಖರೀದಿಸು ವಂತಾಗಬೇಕೇ ವಿನಃ ರಿಪೇರಿ ಬಗ್ಗೆ ಯೋಚನೆ ಕೂಡ ಮಾಡಬಾರದು. ರಿಪೇರಿ ಗಿಂತ ಹೊಸತು ಅಗ್ಗ ಎನ್ನುವ ವಾತಾ ವರಣ ನಿರ್ಮಾಣವಾಗಬೆಕು. ಅದಾಗದಿದ್ದಲ್ಲಿ ಅಂತಹ ಅವಿಷ್ಕಾರ ಗಳನ್ನು ಹಿಂದೆ
ಮುಂದೆ ನೋಡದೇ ಕಂಪನಿ ಗಳು ಮೂಲೆಗುಂ ಪಾಗಿಸುತ್ತವೆ. ಇಲ್ಲವೇ ಹಾಳಾಗಿಸುವುದು ಹೇಗೆ ಎನ್ನುವ ಅವಿಷ್ಕಾರವಾದಂತೂ
ಅದನ್ನು ತಯಾರಿಸಲು ಒಪ್ಪುವುದಿಲ್ಲ. ಹಲವಾರು ಕಂಪನಿಗಳು ಹೀಗೆ ಒಂದು ಸಮಯದ ನಂತರ ಹಾಳಾಗುವಂತೆ ನೋಡಿ ಕೊಳ್ಳಲು ಬೇರೆ ಬೇರೆ ರೀತಿಯ ಮಾರ್ಗಗಳನ್ನು ಅನುಸರಿಸತೊಡಗಿದವು.

ಕ್ವಾಲಿಟಿ ಇರಬೇಕು ಆದರೆ ಅತ್ಯಲ್ಪ ಸಮಯದಲ್ಲಿ ಪುನಃ ಖರೀದಿಸುವ ಸ್ಥಿತಿ ನಿರ್ಮಾಣವಾಗಬೇಕು ಎನ್ನುವುದರ ಸುತ್ತ ನಡೆಯುವ ಅನ್ವೇಷಣೆಗಳು ನಿರಂತರವಾಗಿ ನಡೆದುಕೊಂಡು ಬಂದವು. ಇನ್ನೊಂದು ಉದಾಹರಣೆ ಕೊಡುತ್ತೇನೆ. ಇಂಕ್‌ಜೆಟ್ ಪ್ರಿಂಟರ್ ಅನ್ನು ನಿಮ್ಮಲ್ಲಿ ಹಲವರು ಬಳಸಿರುತ್ತೀರಿ. ಈ ಇಂಕ್‌ಜೆಟ್ ಪ್ರಿಂಟರ್‌ನ ಪ್ರಿಂಟ್ ಹೆಡ್‌ಅನ್ನು ಆಗಾಗ ಸ್ವಚ್ಛ ಮಾಡಬೇ ಕಾಗುತ್ತದೆ. ಹೀಗೆ ಸ್ವಚ್ಛ ಮಾಡಿದ ನಂತರ ಪ್ರಿಂಟರ್ ಒಳಗಡೆ ಒಂದೆರಡು ಹನಿ ಇಂಕ್ ತೊಟ್ಟಿಕ್ಕುವುದು ಸಾಮಾನ್ಯ.

ಕೆಲ ದಶಕಗಳ ಹಿಂದೆ ಈ ಒಂದು ವಿಚಾರವನ್ನು ಗ್ರಹಿಸಿದ ಪ್ರಿಂಟರ್ ಕಂಪನಿಗಳು ಇಂಕ್ ಹೆಡ್‌ನ ಕೆಳಗಡೆ ಒಂದು ಬಟ್ಟೆಯಂತಹ ವಸ್ತುವನ್ನು ಇಟ್ಟು ಅಲ್ಲಿ ತೊಟ್ಟಿಕ್ಕುವ ಇಂಕ್ ಶೇಖರಣೆಯಾಗುವಂತೆ ನೋಡಿಕೊಂಡವು. ಕ್ರಮೇಣ ಹೀಗೆ ಶೇಖರಣೆಯಾದ ಇಂಕ್ ಗಟ್ಟಿಯಾಗಿ ಹೆಡ್‌ಗೆ ತಾಗುವಂತೆ ಡಿಸೈನ್ ಮಾಡಲಾ ಯಿತು. ಆಗ ಈ ಚಿಕ್ಕ ಪ್ಯಾಡ್ ಬದಲಿಸಬೇಕಿತ್ತು, ಇಲ್ಲದಿದ್ದರೆ ಪ್ರಿಂಟರ್ ಕೆಲಸಮಾಡುತ್ತಿರಲಿಲ್ಲ.

ಆದರೆ ಈ ಪ್ಯಾಡ್ ಬದಲಿಸು ವುದಕ್ಕೆ ಇಡೀ ಪ್ರಿಂಟರ್ ಬಿಚ್ಚಬೇಕಿತ್ತು. ಕೈಯಲ್ಲಿ ಬಿಚ್ಚಿದರೆ ಮತ್ತೆ ಕೂಡಿಸುವುದು ಅಸಾಧ್ಯ
ವಾಗುವಂತೆ ವಿನ್ಯಾಸಗೊಳಿ ಸಲಾಗುತ್ತಿತ್ತು. ಹಾಗಾಗಿ ಒಂದು ಸಮಯದ ನಂತರ ಇಂಕ್‌ಜೆಟ್ ಪ್ರಿಂಟರ್ ಅದೆಷ್ಟೇ ನಾಜೂ
ಕಿನಲ್ಲಿ ಬಳಸಿದರೂ ಬಿಸಾಕಲೇ ಬೇಕಿತ್ತು ಇಲ್ಲವೇ ಹೊಸ ಪ್ರಿಂಟರ್‌ಗಿಂತ ಹೆಚ್ಚಿನ ಹಣ ಕೊಟ್ಟು ಕಂಪನಿಯ ಮೂಲಕವೇ ರಿಪೇರಿ
ಮಾಡಿಸಬೇಕಿತ್ತು.

ಇಂದಿಗೂ ಎಲ್ಲ ಪ್ರತಿಷ್ಠಿತ ಕಂಪನಿಗಳು, ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಈ planned obsolescence ಅನ್ನು ಗಮನದಲ್ಲಿಟ್ಟು ಕೊಂಡೇ ತಮ್ಮ ವಸ್ತುಗಳನ್ನು ತಯಾರಿಸುತ್ತವೆ. ಎಲೆಕ್ಟ್ರಾನಿಕ್ ವಸ್ತುಗಳಾದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ಸಾಫ್ಟ್ವೇರ್ ಅಪ್‌ಡೇಟ್‌ಗಳ ಮೂಲಕ ಒಂದು ಸಮಯದ ನಂತರ ಸರಿಯಾಗಿ ಕೆಲಸ ನಿರ್ವಹಿಸದಂತೆ ಮಾಡುವ ಹಲವು ಉದಾಹರಣೆಗಳು ಆಗೀಗ ಸುದ್ದಿಯಾಗುತ್ತಲೇ ಇರುತ್ತವೆ.

ಇದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ ಜಗತ್ತಿನ ಅತ್ಯುತ್ತಮ ಬ್ರ್ಯಾಂಡ್ ಎಂದೇ ಹೆಸರು ವಾಸಿಯಾದ ಆಪಲ್ ಮೊಬೈಲ್ ಫೋನ್. 2017 ಹೊಸ ಸಾಫ್ಟ್ವೇರ್ ಅಪ್ ಡೇಟ್ ಒಂದು ಈ ಕಂಪನಿ ಬಿಟ್ಟಿತ್ತು. ಈ ಅಪ್‌ಡೇಟ್ ಪಡೆದ ಹಳೆಯ ಆಪಲ್ ಫೋನ್ ‌ಗಳು ಒಮ್ಮಿಂದೊಮ್ಮೆಲೆ ನಿಧಾನವಾಗಿ ಬಿಟ್ಟವು. ಹೀಗೆ ಫೋನ್ ನಿಧಾನವಾಗಿ ಪ್ರತಿಕ್ರಿಯಿಸುವುದರಿಂದ ಗ್ರಾಹಕರು ಹಳೆಯ ಫೋನ್ ಬದಲಿಸುವಂತಹ ಸ್ಥಿತಿ ನಿರ್ಮಾಣವಾಯಿತು.

ಪ್ರಪಂಚದ ಹಲವು ದೇಶಗಳಲ್ಲಿ ಗ್ರಾಹಕರು ಆಪಲ್ ಕಂಪನಿಯ ಈ ಕುಚೋದ್ಯ ವನ್ನು ಖಂಡಿಸಿದವು. ಅಲ್ಲ ಗ್ರಾಹಕರು ಆಪಲ್ ಕಂಪನಿಯ ಮೇಲೆ ಕೇಸ್ ಜಡಿದರು. ಇದನ್ನು ಆಪಲ್ ಕಂಪನಿ ಕೂಡ ನಂತರದಲ್ಲಿ ಒಪ್ಪಿಕೊಂಡು ಕಡಿಮೆ ದರದಲ್ಲಿ ಬ್ಯಾಟರಿ ಬದಲಿಸಿ ಇದನ್ನು ಸರಿಮಾಡಿಕೊಳ್ಳಬಹುದು ಎಂದು ತೇಪೆ ಹಚ್ಚುವ ಕೆಲಸ ಮಾಡಿತು. ಹೀಗೆ ನೂರಾರು ಉದಾಹರಣೆಗಳು ನಮ್ಮೆದುರಿಗೆ ಕಾಣಸಿಗುತ್ತವೆ. ಕಂಪನಿಗಳ ಇಂತಹ ವ್ಯವಹಾರಗಳಿಂದಾಗಿ, ಕುಚೋದ್ಯಗಳಿಂದಾಗಿ ಗ್ರಾಹಕನ ಮೇಲೆ ಹೊರೆ ಉಂಟಾಗುವುದು ಒಂದು ಕಡೆಯಾದರೆ ಇದೆಲ್ಲದರಿಂದ ಉಂಟಾಗುವ ಘನತ್ಯಾಜ್ಯ- ವಾಯು-ಜಲ ಹೀಗೆ ಪರಿಸರ ಮಾಲಿನ್ಯ ಇನ್ನೊಂದು ಕಡೆ.

ಅಲ್ಲದೆ, ಇದೇ ಕಾರಣಕ್ಕೆ ನಮ್ಮ ಸುತ್ತಲಿನ ರಿಪೇರಿ ಅಂಗಡಿಗಳು ನಮಗರಿವಿಲ್ಲದಂತೆ ಇಂದು ಮುಚ್ಚುತ್ತಿವೆ. ರಿಪೇರಿ ಮಾಡಿಸು
ವುದು ಎನ್ನುವುದೇ ಒಂದು ಓಬಿರಾಯನ ಕಾಲದ ವಿಚಾರ ಎನ್ನುವಂತಾಗಿದೆ. ರಿಪೇರಿಗಿಂತ ಹೊಸದು ಖರೀದಿಸುವುದೇ ಸರಿ ಎಂಬಂತಾಗಿಬಿಟ್ಟಿದೆ. ಮನುಷ್ಯನ ಸ್ವಾರ್ಥ ಮತ್ತು ವ್ಯಾವಹಾರಿಕ ಕಾರಣದಿಂದ ನಾವು ಕಟ್ಟಿಕೊಂಡ ವ್ಯವಸ್ಥೆ ಹೇಗೆಲ್ಲ ಕೆಲಸ ಮಾಡುತ್ತದೆಯಲ್ಲವೇ? ಚಂದಿರನೇತಕೆ ಓಡುವನಮ್ಮ ಎನ್ನುವ ಧಾಟಿಯ ಕೇಳುವ ಪ್ರಶ್ನೆ-ಲೈಟ್ ಬಲ್ಬಗಳೇಕೆ ಸುಟ್ಟುಹೋಗು ವವಮ್ಮ, ಮಿಕ್ಸಿ ಏಕೆ ಹಾಳಾಗುವುದಮ್ಮ ಎಂಬಿತ್ಯಾದಿ.

ಎಲ್ಇ‌ಡಿ ಬಲ್ಬಗಳು, ದೀರ್ಘ ಕಾಲ ಬಾಳುವ ಬಲ್ಬಗಳು ಈಗ ಲಭ್ಯ. ಅದಕ್ಕೆ ಕಾರಣ ಇಂದು ಹೆಚ್ಚಿನ ಪ್ರಮಾಣದಲ್ಲಿ ಬಲ್ಬ್ ಮಾರಲು ಈ ಕಂಪನಿಗಳು ಅನ್ಯ ಮಾರ್ಗವನ್ನು ಅನುಸರಿಸುತ್ತಿವೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು. ಅಥವಾ ಇಂದು ಬಲ್ಬ್ ಅಂತಹ ಚಾಲ್ತಿ ಲಾಭ ತರುವ ವಸ್ತುವೇ ಅಲ್ಲ. ಒಟ್ಟಾರೆ ಹಾಳಾಗಲು ಒಪ್ಪದ ವಸ್ತುಗಳು ಬ್ಯುಸಿನೆಸ್ ಒಂದರ ದುರಂತ – ಇದು ಆಧುನಿಕ ವ್ಯವಹಾರ-ವ್ಯಾಪಾರ. ಬಹುತೇಕ ಕಂಪನಿಗಳ ಇಂತಹ ಸಂಯೋಜಿತ ವ್ಯವಹಾರದ ಇನ್ನೊಂದು ಮುಖ ನಿಮ್ಮ
ಮುಂದಿಡುವ, ಆ ನಿಟ್ಟಿನಲ್ಲಿ ಒಂದಿಷ್ಟು ತಿಳಿದುಕೊಳ್ಳುವಂತೆ ಪ್ರೇರೇಪಿಸುವ ಪ್ರಯತ್ನವೇ ಈ ಲೇಖನ.

ಅಂದಹಾಗೆ ಈ ಲೇಖನದಲ್ಲಿ 120 ವರ್ಷದಿಂದ ಉರಿಯುತ್ತಿರುವ ಬಲ್ಬನ ಬಗ್ಗೆ ಮೊದಲು ಹೇಳಿದ್ದಾನಲ್ಲ. ಆ ಬಲ್ಬ್ ಉರಿಯು ತ್ತಿರುವ ಲೈವ್ ಬಿತ್ತರಿಸುವ ವಿಡಿಯೊ ಕ್ಯಾಮರಾ ಕಳೆದ ಒಂದು ದಶಕದ ಮೂರು ಬಾರಿ ಹಾಳಾಗಿ ಬದಲಾಗಿಸಲಾಗಿದೆಯಂತೆ. ಇದಕ್ಕೆ ಕಾರಣ ನಿಮಗೆ ಈಗ ಅರ್ಥವಾಗಿರುತ್ತದೆ ಬಿಡಿ.