ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಕುತೂಹಲ ಮೂಡಿಸಿದ್ದ ಗ್ರಾಮ ಹಬ್ಬಕ್ಕೆ ಈಗಾಗಲೇ ತೆರೆಬಿದ್ದಿದೆ. ಈ ಬಾರಿಯ ಗ್ರಾ.ಪಂ ಚುನಾವಣೆಯಲ್ಲಿ ಬಹುತೇಕ ಯುವ ಮುಖಗಳೇ ಕಣದಲ್ಲಿದ್ದರಿಂದ ಸಾಕಷ್ಟು ಮಹತ್ವ ಮತ್ತು ರಂಗು ಪಡೆದುಕೊಂಡಿತು.
ಒಂದೇ ಮನೆಯ ಸದಸ್ಯರು ವಿಭಿನ್ನ ಪಕ್ಷದಲ್ಲಿ ಗೆದ್ದಿರುವುದು, ತರಕಾರಿ ವ್ಯಾಪಾರಿ ಮಹಿಳೆ ಚುನಾವಣೆಯಲ್ಲಿ ಸತತವಾಗಿ ಗೆದ್ದು ಬಂದಿರುವುದು, ತೀರಾ ಕಡಿಮೆ ಖರ್ಚಿನಲ್ಲಿ ಚುನಾವಣೆ ಎದುರಿಸಿರುವುದು,ಕೇರಳದ ಕೊಲ್ಲಂನಲ್ಲಿ ಕಸಗುಡಿಸುವ ಮಹಿಳೆ ಪಂಚಾಯತ್ ಅಧ್ಯಕ್ಷ ಸ್ಥಾನ ಅಲಂಕರಿಸಿರುವುದು ಹೀಗೆ ಹತ್ತು ಹಲವು ವೈಶಿಷ್ಟ್ಯಗಳಿಗೆ ಈ ಬಾರಿಯ ಸ್ಥಳೀಯ ಸಂಸ್ಥೆ
ಚುನಾವಣೆ ಸಾಕ್ಷಿಯಾಗಿದೆ.
ಇನ್ನು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟು ಬಹುತೇಕ ಸ್ಥಾನಗಳಿಗೆ ಈ ಬಾರಿ ಎಸ್‌ಡಿಪಿಐ ತನ್ನ ಅಭ್ಯರ್ಥಿ ಗಳನ್ನು ಹಲವಾರು ಕಡೆ ಕಣಕ್ಕಿಳಿಸಿದೆ.ಇವು ಕಾಂಗ್ರೆಸ್ ಗೆ ಈ ಬಾರಿ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೋರಂ ಫಾರ್ ಡಿಗ್ನಿಟಿ(ಕೆಎಫ್‌ಡಿ) ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದ ಸಂಘಟನೆಯ ಮೇಲೆ ಮೈಸೂರು ಕ್ಯಾತಮಾರನಹಳ್ಳಿ ಗಲಭೆ,ಉದಯಗಿರಿ ಗಲಭೆ, ಸಂಘಟನೆಯ ಫಂಡ್ ಗಾಗಿ ಮೈಸೂರಿನ ಹುಣಸೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರನ್ನು ಅಪಹರಿಸಿ ಹಣಕಾಸಿನ ಬೇಡಿಕೆಯಿಟ್ಟು ಪೋಷಕರು ಹಣ ನೀಡಲು ನಿರಾಕರಿಸಿದಾಗ ವಿದ್ಯಾರ್ಥಿಗಳಿಬ್ಬರನ್ನು ಹತ್ಯೆೆಗೈದ ವಿಚಾರ ಸೇರಿದಂತೆ
ರಾಜ್ಯದಲ್ಲಿ ಹಲವಾರು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿದ್ದ ಕೆಎಫ್‌ಡಿಯನ್ನು ನಿಷೇಧಿಸಬೇಕೆಂಬ ಆಗ್ರಹ ರಾಜ್ಯವ್ಯಾಪಿ ಮೊಳಗಿದ ಹಿನ್ನೆೆಲೆಯಲ್ಲಿ ಅಂದಿನ ಬಿಜೆಪಿ ಸರಕಾರ ಕೆಎಫ್‌ಡಿಯನ್ನು ನಿಷೇಧಿಸಿತ್ತು.
ಕೆಎಫ್‌ಡಿ ನಿಷೇಧವಾದ ಬಳಿಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೆಸರಿನಲ್ಲಿ ರೂಪಾಂತರಗೊಂಡ ಸಂಘಟನೆಗೆ
ರಾಜಕೀಯ ಶಕ್ತಿಯೊಂದು ಬೇಕೆಂಬ ಹಿನ್ನೆಲೆಯಲ್ಲಿ ರೂಪುಗೊಂಡ ಪಕ್ಷವೇ ಇದೇ ಎಸ್‌ಡಿಪಿಐ. ಹಲವಾರು ಹಿಂದೂ ಕಾರ್ಯ ಕರ್ತರ ಹತ್ಯೆ ಸೇರಿದಂತೆ ಉಗ್ರ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪ ಹೊತ್ತಿರುವ ಪಿಎಫ್‌ಐಯನ್ನು ನಿಷೇಧಿಸ ಬೇಕೆಂಬ ಆಗ್ರಹಗಳು ಕೂಡ ಇತ್ತೀಚಿನ ದಿನಗಳಲ್ಲಿ ಬಲವಾಗಿವೆ.
ಆರಂಭದಿಂದ ಇತ್ತೀಚಿನವರೆಗೂ ಪಿಎಫ್‌ಐ, ಎಸ್‌ಡಿಪಿಐ ಬಗ್ಗೆ ಮೃದು ಧೋರಣೆ ತಾಳಿರುವ ಕಾಂಗ್ರೆಸ್ ಹಲವಾರು ಬಾರಿ ಒಳ ಒಪ್ಪಂದದಿಂದಾಗಿ ಚುನಾವಣಾ ಸಂದರ್ಭದಲ್ಲಿ ಎಸ್‌ಡಿಪಿಐ ಪಕ್ಷದ ಲಾಭ ಪಡೆದುಕೊಂಡಿರುವುದಲ್ಲದೆ ಮೈತ್ರಿಯನ್ನು ಸಾಧಿಸಿತ್ತು. ಈ ಬೆಂಬಲಕ್ಕೆ ಪೂರಕವಾಗಿ ಕಳೆದ ಬಾರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ಮೇಲಿದ್ದ ಹಲವಾರು ಕೋಮು ಗಲಭೆ ಪುಂಡಾಟ ಸೇರಿದಂತೆ ಗಂಭೀರ ಪ್ರಕರಣಗಳ ಮೊಕದ್ದಮೆಗಳನ್ನು ಹಿಂಪಡೆದಿತ್ತು.
ಇದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಸಿದ್ದರಾಮಯ್ಯ ಸರಕಾರ ಬಲವಾಗಿ ಸಮರ್ಥಿಸಿಕೊಂಡಿತ್ತು.ಇದಾದ ಬಳಿಕ ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಹತ್ಯಾಯತ್ನದಲ್ಲೂ ಈ ಸಂಘಟನೆ ಕಾರ್ಯಕರ್ತರ ಪಾತ್ರ ಕಂಡು ಬಂದಿತ್ತು. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಎಸ್‌ಡಿಪಿಐ ತನ್ನ ಬೇರು ಗಟ್ಟಿಗೊಳಿಸುತ್ತಲೇ ಬರುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ನ ಸ್ಥಾನಗಳನ್ನು ಕಸಿದುಕೊಂಡು ತನ್ನ ಸ್ಥಾನವನ್ನು ವೃದ್ಧಿಸಿಕೊಂಡು ಬರುತ್ತಿದೆ.
ಇದಕ್ಕೆ ನಿದರ್ಶನವೆಂಬಂತೆ 2011ರಲ್ಲಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ರಾಜ್ಯದಲ್ಲಿ 39 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಎಸ್‌ಡಿಪಿಐ 2015ರಲ್ಲಿ 69 ಸ್ಥಾನಗಳನ್ನು ಗಳಿಸಿತ್ತು. ಬಳಿಕ ಮೊನ್ನೆ ನಡೆದ ಚುನಾವಣೆಯಲ್ಲಿ 223 ಸ್ಥಾನಗಳನ್ನು ಗಳಿಸುವ ಮೂಲಕ ಮೂರು ಪಟ್ಟು ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಇದಾದ ಬಳಿಕ ಬೆಳ್ತಂಗಡಿಯ ಉಜಿರೆಯಲ್ಲಿ ವಿಜಯೋತ್ಸವ ವೇಳೆ ಇದೇ ಪಕ್ಷದ ಕಾರ್ಯಕರ್ತರು ಪಾಕ್ ಪರ ಜೈಕಾರ ಹಾಕಿರುವುದು ಒಂದು ರೀತಿಯಲ್ಲಿ ಆತಂಕದ ಬೆಳವಣಿಗೆಯ ಜೊತೆ ಕಾಂಗ್ರೆಸ್ ಎಸ್ ಡಿ ಪಿ ಐ ಬಗೆಗಿನ ಮೃದು ಧೋರಣೆಯನ್ನು ಇದೇ ರೀತಿ ತಾಳಿದ್ದೇ ಆದಲ್ಲಿ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಕೇರಳ ಮಾದರಿ ರೂಪುಗೊಂಡರು ಅಚ್ಚರಿಪಡಬೇಕಾಗಿಲ್ಲ