Friday, 22nd November 2024

ಪದಚ್ಯುತಿ ಎಂಬ ’ಪ್ರಹಸನ’ಕ್ಕೆ ಬಿಎಸ್’ವೈ ಅವರೇ ಮುಖ್ಯ ಅತಿಥಿ !

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಖ್ಯಮಂತ್ರಿ ಹುದ್ದೆಯಿಂದ ಇನ್ನೇನು ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ. ಇಂತಹದೊಂದು ಮಾತು ರಾಜ್ಯ ಬಿಜೆಪಿಯ ಪಡಸಾಲೆಯಲ್ಲಿ ನಿರಂತರವಾಗಿ ಅನುರಣಿಸುತ್ತಲೇ ಇದೆ. ಕುತೂಹಲದ ಸಂಗತಿ ಎಂದರೆ ಅದು ಕೇಳಿದಾಗ ಲೆಲ್ಲ ಯಡಿಯೂರಪ್ಪ ಎಂದಿಗಿಂತ ಹೆಚ್ಚು ಬಲಿಷ್ಠರಾಗಿ ಹೊರಹೊಮ್ಮಿದ್ದಾರೆ.

ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಗೇರಿದವರನ್ನು ಕೆಳಗಿಳಿಸುವ ಯತ್ನ ಹೊಸತಲ್ಲ, ಇದಕ್ಕೆ ಪೂರಕವಾದ ಮಾತುಗಳೂ ಹೊಸತಲ್ಲ. ಆದರೆ ಮಾತಿನರ ಮನೆಯಲ್ಲಿ ಯಡಿಯೂರಪ್ಪ ಅವರಷ್ಟು ಬಾರಿ ಅಧಿಕಾರ ಕಳೆದುಕೊಳ್ಳುವ ಮಾತುಗಳನ್ನು ಮತ್ತೊಬ್ಬರು ಕೇಳಿಲ್ಲ. 90ರಿಂದ 92ರವರೆಗೆ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಹಾಗೂ 96ರಿಂದ 99ರವರೆಗೆ ಮುಖ್ಯಮಂತ್ರಿ ಯಾಗಿದ್ದ ಜೆ.ಎಚ್.ಪಟೇಲರ ವಿರುದ್ದ ಪದೇ ಪದೆ ಭಿನ್ನಮತ ಮೇಲೇಳುತ್ತಿತ್ತು.

ಹಾಗೆಯೇ ಅದು ತಾರಕಕ್ಕೇರಿದಾಗಲೆಲ್ಲ: ಅವರ ಪದಚ್ಯುತಿಯ ಮಾತು ಕೇಳಿ ಬರುತ್ತಿತ್ತು. ವ್ಯತ್ಯಾಸವೆಂದರೆ, ಬಂಗಾರಪ್ಪ ಹಾಗೂ ಪಟೇಲರ ವಿರುದ್ಧ ಹೋರಾಡುತ್ತಿದ್ದವರು ಯಾರು ಎಂಬುದು ಸ್ಪಷ್ಟವಾಗಿತ್ತು. ಆದರೆ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತಿದ್ದರೂ, ಅವರ ವಿರುದ್ಧ ನಿಂತಿರುವ ನಿಜವಾದ ಶಕ್ತಿಗಳು ಕಣ್ಣಿಗೆ ಕಾಣುತ್ತಿಲ್ಲ.

ಅಂದ ಹಾಗೆ ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಶುರುವಿನ ಅಪಸ್ವರ ಶುರುವಾಯಿತು. ಅವರಿಗೆ ಎಪ್ಪತ್ತೈದು
ವರ್ಷವಾಗಿದೆ. ಪಕ್ಷದ ನೀತಿಗೆ ಇದು ಅಪವಾದ. ಹೀಗಾಗಿ ಸದ್ಯದ ಅವರನ್ನು ಕೆಳಗಿಳಿಸಲು ಬಿಜೆಪಿ ಹೈಕಮಾಂಡ್ ಬಯಸುತ್ತಿದೆ ಎಂಬ ಮಾತು ಕೇಳಿ ಬರತೊಡಗಿತು. ಇದಾದ ನಂತರ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಯವರೆಗೆ ಯಡಿಯೂರಪ್ಪ ಅವರು ಗದ್ದುಗೆಯಲ್ಲಿ ಉಳಿಯಲಿದ್ದಾರೆ. ಆನಂತರ ಕೆಳಗಿಳಿಯಲಿದ್ದಾರೆ ಎಂಬ ಮಾತು ತೇಲಿ ಬಂತು.

ಆನಂತರ: ಇಲ್ಲ, ಇಲ್ಲ ಕರ್ನಾಟಕದ ಹಲ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ತನಕ ವರಿಷ್ಠರು ಕಾದು ನೋಡುತ್ತಾರೆ. ಆನಂತರ ಮುಖ್ಯಮಂತ್ರಿ ಹುದ್ದೆಗೆ ಹೊಸ ನಾಯಕ ಬರುವುದು ನಿಶ್ಚಿತ ಎಂದು ಕೆಲ ಹಿರಿಯ ಸಚಿವರೇ ಆಪ್ತ ಮಾತುಕತೆಗಳಲ್ಲಿ ಪಿಸುಗುಟ್ಟ ತೊಡಗಿದರು. ಆದರೆ ಈ ಯಾವ ಮಾತುಗಳಿಗೂ ಶಕ್ತಿ ದೊರೆಯಲಿಲ್ಲ. ಕೊನೆಗೆ ಯಡಿಯೂ ರಪ್ಪ ಅವರನ್ನು ಪದಚ್ಯುತಗೊಳಿಸಲಾಗುತ್ತದೆ ಎಂಬ ಮಾತುಗಳು ಹೊಸ ರೂಪು ಪಡೆದು ಮೇಲೆದ್ದು ಬಂದವು.

ಯಡಿಯೂರಪ್ಪ ಅವರ ಜಾಗಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಇಲ್ಲವೇ ಸುರೇಶ್ ಅಂಗಡಿ ಅವರನ್ನು ತರಲು ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದು ಇದಕ್ಕೆ ಸಾಕ್ಷಿ. ಆದರೆ ಕೆಲವೇ ಕಾಲದಲ್ಲಿ ಈ ಮಾತು ಶಕ್ತಿ ಕಳೆದುಕೊಂಡಿತು. ಆದರೆ ಮಾತಿನರಮನೆಯಲ್ಲಿ ಬೇರೆ ಮಾತುಗಳು ಕೇಳಿ ಬರತೊಡಗಿತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಸಿಎಂ ಹುದ್ದೆಗೆ ತರಲು ಕೇಂದ್ರದ ನಾಯಕರು ಉತ್ಸುಕರಾಗಿದ್ದಾರೆ ಎಂಬುದು ಈ ಮಾತು.

ಎಷ್ಟೇ ಆದರೂ ಸವದಿ ಅವರು ಪ್ರಧಾನಿ ನರೇಂದ್ರಮೋದಿ ಯವರ ಸಹೋದರನ ಸಂಪರ್ಕದಲ್ಲಿರುವವರು. ಕರ್ನಾಟಕ
– ಮಹಾರಾಷ್ಟ್ರದ ಶುಗರ್ ಲಾಬಿಯ ಸಪೋರ್ಟು ಹೊಂದಿರುವವರು, ಇದೇ ಕಾರಣಕ್ಕಾಗಿ ಅವರಿಗೆ ಲಕ್ಕು ಕುದುರಬಹುದು ಎಂಬುದು ಈ ಮಾತುಗಳ ಹಿಂದಿನ ವರಸೆ. ಕಾಕತಾಳೀಯವೆಂದರೆ ಇಂತಹ ಮಾತುಗಳು ಕೇಳಿ ಬರುವ ಕಾಲದ ಒಮ್ಮೆ ಲಕ್ಷ್ಮಣ ಸವದಿ ಅವರು ಸಾರಿಗೆ ಇಲಾಖೆಯ ಪ್ರಪೋಸಲ್ಲುಗಳನ್ನು ಜತೆ ದೆಹಲಿಗೆ ಹೋದರು.

ಇಷ್ಟಾಗಿದ್ದೇ ತಡ, ಪಕ್ಷದ ವರಿಷ್ಠರು ಸವದಿ ಅವರನ್ನು ಕರೆಸಿಕೊಂಡಿದ್ದಾರೆ. ಇನ್ನೇನು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆ ಯಿಂದ ಕೆಳಗಿಳಿಸಿ ಸವದಿ ಅವರನ್ನು ತಂದು ಕೂರಿಸುತ್ತಾರೆ ಎಂಬ ಮಾತುಗಳು ಸಮುದ್ರದ ಅಲೆಯಂತೆ ಅಪ್ಪಳಿಸ ತೊಡಗಿದವು. ಈ ಅಲೆಯ ಬಿರುಸಿಗೆ ಸ್ವತಃ ಸವದಿ ಅವರೇ ಕಕ್ಕಾಬಿಕ್ಕಿಯಾದರು. ಅಷ್ಟೇ ಅಲ್ಲ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ತಮ್ಮ ದೆಹಲಿ ಭೇಟಿಯ ಕಾರಣವನ್ನು ವಿವರಿಸಿದರು.

ಅವರು ಹೇಳಿದ್ದನ್ನು ಕೇಳಿದ ಮೇಲೆ ಯಡಿಯೂರಪ್ಪ ಅವರು ಒಂದು ಬಾರಿ ದೆಹಲಿಗೆ ಹೋಗಿದ್ದಕ್ಕೇ ಸಿಎಂ ಆಗಿದ್ದೀರಿ. ಮತ್ತೊಂದು ಬಾರಿ ಹೋದರೆ ಪಿಎಂ ಆಗಿ ಬಿಡುತ್ತೀರಿ ಎಂದು ಸವದಿ ಅವರನ್ನು ನಗಿಸಿ ಕಳಿಸಿದರು. ಇದಾದ ನಂತರ ಪಂಚಮ ಸಾಲಿ ಲಿಂಗಾಯತ ಸಮುದಾಯದ, ಪ್ರಬಲ ಹಿಂದುವಾದಿಯೂ ಆಗಿರುವ ಬಸನಗೌಡ ಪಾಟೀಲರನ್ನು ಸಿಎಂ ಹುದ್ದೆ ಮೇಲೆ ತಂದು ಕೂರಿಸಲು ಹೈಕಮಾಂಡ್ ಬಯಸಿದೆ. ಹೀಗಾಗಿ ಸದ್ಯದ ಯಡಿಯೂರಪ್ಪ ಸೀಟು ಬಿಟ್ಟು ಕೊಡಬೇಕು ಎಂಬ ಕೂಗೆದ್ದಿತು. ಆದರೆ ಈ ಕೂಗು ಜೀವಂತವಿರುವಾಗಲೇ ಹೊಸ ಥಿಯರಿಯೊಂದು ಓಡಿ ಬಂದು ನೆಲೆಯಾಗಲು ಯತ್ನಿಸುತ್ತಿದೆ.

ಅದರ ಪ್ರಕಾರ ಬಿಜೆಪಿ ವರಿಷ್ಠರು ಹೊಸ ಸೂತ್ರ ರಚಿಸಿದ್ದಾರೆ. ಈ ಸೂತ್ರದ ಪ್ರಕಾರ ಯಡಿಯೂರಪ್ಪ ಅವರನ್ನು ಒಪ್ಪಿಸಿ ಯಾವು ದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ ನೇಮಕ ಮಾಡಲಿದ್ದಾರೆ. ಮತ್ತು ಅವರು ತೆರವು ಮಾಡಲಿರುವ ಜಾಗಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ತಂದು ಕೂರಿಸಲಿದ್ದಾರೆ. ಅಷ್ಟೇ ಅಲ್ಲ, ಬೇರೆ ಪಕ್ಷಗಳಿಂದ ಬಂದು ಮಂತ್ರಿಗಳಾದವರಿದ್ದಾರಲ್ಲ? ಈ ಪೈಕಿ ಹಲವರಿಗೆ ಕೊಕ್ ಕೊಟ್ಟು ಕೇವಲ ಆರು ಮಂದಿಗಷ್ಟೇ ಮಂತ್ರಿ ಸ್ಥಾನ ನೀಡುವ ಲೆಕ್ಕ ವರಿಷ್ಠರಿಗಿದೆ ಎಂಬುದು ಸದ್ಯದ ಥಿಯರಿ.

ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತ ನಂತರ ಇಂತಹ ಡಜನ್ನು ಥಿಯರಿಗಳು ಮೇಲೆದ್ದು ಬಂದರೂ, ಮತ್ತು ಇಂತಹ ಮಾತುಗಳು ತೇಲಿ ಬರಲು ಪೂರಕವಾದ ಹಲವು ಕಾರಣಗಳಿದ್ದರೂ ಬಗೆಹರಿಯದೆ ಉಳಿದ ಒಂದು ಪ್ರಶ್ನೆಯಡಿಯೂರಪ್ಪ ಅವರ ಖುರ್ಚಿಯನ್ನು ಕಾಯುತ್ತಿದೆ.

ಅದೆಂದರೆ: ರಾಜ್ಯ ಬಿಜೆಪಿಯಲ್ಲಿ ಅವರಿಗೆ ಪರ್ಯಾಯ ನಾಯಕ ಯಾರು? ಎಂಬುದನ್ನು ಕಂಡುಕೊಳ್ಳಲು ಖುದ್ದು ಬಿಜೆಪಿ ಹೈಕಮಾಂಡ್‌ಗೆ ಸಾಧ್ಯ ಆಗದಿರುವುದು. ಯಡಿಯೂರಪ್ಪ ಅವರಂತೆ ರಾಜ್ಯದ ಜನರಿಗೆ ಒಪ್ಪಿತವಾಗುವ ಇನ್ನೊಬ್ಬ ನಾಯಕ ಯಾರು? ಎಂದು ಗುರುತಿಸಲು ಸಾಧ್ಯವಾಗದಿರುವ ಕಾರಣಕ್ಕಾಗಿಯೇ ಅದು ಪರ್ಯಾಯ ನಾಯಕನ ವಿಷಯದಲ್ಲಿ ಚಕಾರ ಎತ್ತದೆ ಮೌನವಾಗಿರುವುದು. ಹಾಗೊಂದು ವೇಳೆ ಅದು ಪ್ರಯತ್ನವನ್ನೇ ಮಾಡಿಲ್ಲ ಎನ್ನುವುದಾದರೆ, ಯತ್ನಾಳ್ ಅವರಂತಹ
ನಾಯಕರು ಪದೇ ಪದೇ ನಾಯಕತ್ವ ಬದಲಾವಣೆಯ ಕೂಗು ಹಾಕುತ್ತಿರಲಿಲ್ಲ.

ಹೈಕಮಾಂಡ್ ಆ ಪ್ರಯತ್ನದಲ್ಲಿದೆ ಎಂಬ ಕಾರಣಕ್ಕಾಗಿಯೇ ಯತ್ನಾಳ್ ಅವರಂತವರು ಬಹಿರಂಗವಾಗಿ ಮಾತನಾಡುತ್ತಾರೆ. ಇಲ್ಲದಿದ್ದರೆ ಅವರೇಕೆ ಸುಖಾ ಸುಮ್ಮನೆ ಮಾತನಾಡುತ್ತಾರೆ? ಆದರೆ ಇಂತಹ ಪ್ರಯತ್ನಗಳೆಲ್ಲದರ ನಡುವೆ ಬಿಜೆಪಿ ಹೈಕಮಾಂಡ್‌ ಗಿರುವ ಒಂದು ಎಚ್ಚರಿಕೆ ಎಂದರೆ, ಯಡಿಯೂರಪ್ಪ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಹುzಯಿಂದ ಕೆಳಗಿಳಿಸಿದರೆ ಪ್ರಬಲ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಬಹುದು ಎಂಬುದು.

1990ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ವೀರೇಂದ್ರ ಪಾಟೀಲರನ್ನು ಪದಚ್ಯುತಗೊಳಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಇದುವರೆಗೆ ಮರಳಿ ಲಿಂಗಾಯತರ ವಿಶ್ವಾಸ ಗಳಿಸಲು ಸಾಧ್ಯವಾಗಿಲ್ಲ. ಅಂದ ಹಾಗೆ ಅವತ್ತು ವೀರೇಂದ್ರ ಪಾಟೀಲರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ಗೆ ಒಂದು ಕಾರಣವಾದರೂ ಇತ್ತು. ಅವರ ಆರೋಗ್ಯ ಹದಗೆಟ್ಟ ಕಾರಣಕ್ಕಾಗಿ ಪರ್ಯಾಯ ನಾಯಕನನ್ನು ಆಯ್ಕೆ ಮಾಡಬೇಕಾಯಿತು ಎಂಬುದು ಈ ಕಾರಣ.

ಆದರೆ ಇಂತಹ ಕಾರಣವನ್ನು ಲಿಂಗಾಯತ ಸಮುದಾಯ ಒಪ್ಪಲಿಲ್ಲ. ಹೀಗಿರುವಾಗ ಕಾರಣವಿಲ್ಲದೆ ಯಡಿಯೂರಪ್ಪ
ಅವರನ್ನು ಕೆಳಿಗಿಳಿಸಿದರೆ ಆ ಸಮುದಾಯ ಒಪ್ಪುತ್ತದೆಯೇ? ಇದು ಬಿಜೆಪಿ ಹೈಕಮಾಂಡ್‌ನ ಸದ್ಯದ ಯೋಚನೆ. ಅದು ಇಂತಹ ಯೋಚನೆಯಲ್ಲಿದೆ ಎಂಬುದನ್ನು ಅರಿಯುವುದು ಕಷ್ಟದ ಮಾತೇನಲ್ಲ. ರಾಜ್ಯ ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರ ಬೀಡು ಬೀಸಾಗಿ ಬ್ಯಾಟಿಂಗ್ ಮಾಡುತ್ತಿರು ವುದೇ ಇದಕ್ಕೆ ಸಾಕ್ಷಿ.

ಶುರುವಿನಲ್ಲಿ ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದು ವರಿಯಲಿದ್ದಾರೆ ಎಂದು ಹೇಳಿದರು. ಆನಂತರ ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆದಾಗ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ನಾಯಕತ್ವ ಬದಲಾವಣೆಯ ಮಾತನಾಡಿದ್ದಾರೆ ಎಂದಾಗ ಈ ಮಾತುಗಳನ್ನಾಡಲು ಯತ್ನಾಳ್ ಯಾರು? ಅಂತ ಝಾಡಿಸಿ ಬಿಟ್ಟರು.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವವರು ಇಂತಹ ಮಾತುಗಳನ್ನಾಡುತ್ತಾರೆ ಎಂದರೆ ಅದರ ಹಿಂದಿರುವುದು ವರಿಷ್ಠರ ಧ್ವನಿ ಎಂದೇ ಅರ್ಥ. ಅರ್ಥಾತ್, ನಾಯಕತ್ವದ ವಿಷಯದಲ್ಲಿ ಮಗುವನ್ನು ಚಿವುಟುತ್ತಿರುವುದು, ತೊಟ್ಟಿಲನ್ನು ತೂಗುತ್ತಿರುವುದು ಒಂದೇ ಕೈ. ಈ ಮಧ್ಯೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಗುತ್ತದೆ ಎಂಬ ಕೂಗು ಮೇಲೆಳುತ್ತದಲ್ಲ? ಆಗೆಲ್ಲ ರಾಜ್ಯ ಬಿಜೆಪಿಯ ಮುಂದೆ ಹೊಸ ಟಾಸ್ಕು ಬಂದು ನಿಂತಿರುತ್ತದೆ. ಸದ್ಯದ ಎದುರಾಗಲಿರುವ ಜಿಲ್ಲಾ ಪಂಚಾಯ್ತಿ ಚುನಾವಣೆ ಅಂತಹ ಲೇಟೆಸ್ಟ್ ಟಾಸ್ಕು.

ಇದನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸದೆ ರಾಜ್ಯ ಬಿಜೆಪಿಗೆ ಬೇರೆ ದಾರಿಯಿಲ್ಲ. ಈ ಮಧ್ಯೆ ತಮಿಳುನಾಡಿನಲ್ಲಿ, ಪಶ್ಚಿಮಬಂಗಾಳದಲ್ಲಿ ಸದ್ಯದ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಇಂತಹ ಕಾಲದಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿ ಯನ್ನು ಬದಲಿಸುವುದು ಒಳ್ಳೆಯ ಸಂದೇಶವನ್ನು ರವಾನಿಸುವುದಿಲ್ಲ ಎಂಬುದು ಹೈಕಮಾಂಡ್ ಯೋಚನೆ. ಇಂತಹ ಎಲ್ಲ ಕಾರಣಗಳಿಗಾಗಿ ಯಡಿಯೂರಪ್ಪ ಅವರ ಖುರ್ಚಿ ದಿನ ಕಳೆದಂತೆ ಭದ್ರವಾಗುತ್ತಾ ನಡೆದಿದ್ದರೆ, ರಾಜ್ಯ ಬಿಜೆಪಿಯಲ್ಲಿ ಕಣ್ಣಿಗೆ ಕಾಣುವಂತೆ ಒಂದು ಟ್ರೆಂಡ್ ಶುರುವಾಗಿದೆ.

ಅದೆಂದರೆ ಯಡಿಯೂರಪ್ಪ ಅವರ ವಿಶ್ವಾಸವನ್ನು ಗಳಿಸಿಕೊಂಡೇ ಭವಿಷ್ಯದ ಸಿಎಂ ಆಗಬೇಕು ಎಂಬ ಪ್ರಯತ್ನ ಹಲವರಿಂದ ನಡೆದಿರುವುದು. ಇಂತವರು ಬಹಿರಂಗವಾಗಿ ಅತಿರಥ – ಮಹಾರಥ ನಾಯಕರೇ. ಆದರೆ ಸ್ವಯಂ ಶಕ್ತಿಯಿಂದ ಬಿಜೆಪಿಯ ಇಮೇಜ್ ಹೆಚ್ಚಿಸಲು ಇವರಿಗೆ ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಇಂತವರದೊಂದು ಟೋಳಿ ಯಡಿಯೂರಪ್ಪ ಅವರ ವಿಶ್ವಾಸ ಗಳಿಸಲು ಹರಸಾಹಸ ಮಾಡುತ್ತಿದೆ. ಖುದ್ದು ಯಡಿಯೂರಪ್ಪ ಅವರು ಒಪ್ಪಿದರೆ ತಾವೇ ಭವಿಷ್ಯದ ನಾಯಕರಾಗಲು ಯಾವ ಸಮಸ್ಯೆ ಇಲ್ಲ ಎಂಬುದು ಅವರ ಯೋಚನೆ.

ಅವರ‍್ಯಾರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕೆಂದರೆ ಅಗತ್ಯವಿರಲಿ, ಇಲ್ಲದಿರಲಿ, ಇಂತವರು ದಿನ ಬೆಳಗಾದರೆ ಯಡಿಯೂರಪ್ಪ ಅವರ ಸುತ್ತ ಗಿರಕಿ ಹೊಡೆಯುತ್ತಾರೆ. ಯಡಿಯೂರಪ್ಪನವರ ಜತೆ ಹಸನ್ಮುಖಿಯಾಗಿ ನಿಂತು ಸೆಲ್ಫಿ ಹೊಡೆಸಿ ಕೊಂಡರೆ ಸಾಕು ಎಂದು ಕಾತರಿಸುತ್ತಾರೆ. ಈ ಹೊಸ ಟ್ರೆಂಡನ್ನು ಹುಟ್ಟು ಹಾಕಿರುವವರೆಲ್ಲರಿಗೂ ಒಂದು ವಿಷಯ ಸ್ಪಷ್ಟವಾಗಿದೆ. ಯಾವುದಾದರೂ ಹಗರಣಗಳ ಬಲೆಯಲ್ಲಿ, ಅದಕ್ಕೆ ತಗಲುವ ಕಾನೂನಿನ ಬಲೆಯಲ್ಲಿ ಸಿಲುಕದೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವುದು ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ.

ಹೀಗಾಗಿ ಅಂತಹ ಬೆಳವಣಿಗೆ ನಡೆಯಲಿ ಎಂದು ಕಾಯುವುದನ್ನು ಹೊರತು ಪಡಿಸಿದರೆ ಬೇರೆ ಮಾರ್ಗವಿಲ್ಲ ಎಂಬುದು ಈ ವಿಷಯ; ಪರಿಣಾಮ? ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವದ ಮಾತು ಬಗೆಹರಿಯದ ಪ್ರಹಸನವಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲ, ಖುದ್ದು ಯಡಿಯೂರಪ್ಪನವರೇ ಮುಖ್ಯ ಅತಿಥಿಯಾಗಿ ಕುಳಿತು ಈ ಪ್ರಹಸನವನ್ನು ಎಂಜಾಯ್ ಮಾಡುತ್ತಿzರೆ.