ಅಭಿಮತ
ಡಾ.ಕೆ.ಪಿ.ಪುತ್ತೂರಾಯ
ಗಂಡ ಆಫೀಸಿಗೆ ಹೊರಟು ಹೋದ ಮೇಲೆ, ಕೆಲವು ಹೆಂಗಸರಿಗೆ ಬಹಳ ಹೊತ್ತು ಸುಮ್ಮನಿರೋಕಾಗಲ್ಲ.
ಇದೇ ಅವಸ್ಥೆಯಿಂದ ಬಳಲುತ್ತಿರುವ ಪಕ್ಕದ ಮನೆಯ ಹೆಂಗಸರನ್ನು ಕರೆದು ಮಾತನಾಡಿಸುತ್ತಾರೆ, ಏನ್ರೀ ನಿಮಗೆ ಸಮಾಚಾರ ಗೊತ್ತಾಯಿತಾ? ಇಲ್ಲ ಏನದು ಹೇಳಿ ಎಂದು ಕಿವಿ ಅಗಲ ಮಾಡಿಕೊಂಡು, Compound ಗೋಡೆಯ ಬಳಿ ನಿಂತಿರುವ ಆ ಹೆಂಗಸಿಗೆ, ಈ ಹೆಂಗಸು ಹೇಳ್ತಾಳೆ; ನಮ್ಮ ಹಿಂದಿನ ಮನೆಯ ಶೆಟ್ಟರ ಹುಡುಗಿ, ಅವರ ಮುಂದಿನ ಮನೆಯ ಭಟ್ರ ಹುಡುಗನ ಜತೆ ಓಡಿ ಹೋದ ಳಂತೆ.
ಹೌದಾ, ಪ್ರಾಯಕ್ಕೆ ಬಂದ ಮಕ್ಕಳಿಗೆ ಸಕಾಲದಲ್ಲಿ ಮದುವೆ ಮಾಡದಿದ್ದರೆ ಹೀಗೆ ಆಗೋದು ನೋಡಿ! ಅಂದ ಹಾಗೆ, ನಿಮ್ಮ ಅಕ್ಕನ ಮಗಳಿಗೆ ಮದುವೆ ಆಯ್ತಾ? ಕೊನೆಗೂ ಆಯ್ತು ಬಿಡಿ. ಹುಡುಗ ಏನು ಮಾಡ್ಕೂಂಡಿದ್ದಾನೆ? – ಹೀಗೆ ಆರಂಭಗೊಳ್ಳುವ ಸುದ್ದಿ
ಸಮಾಚಾರಗಳ ವಿನಿಮಯ. ಮುಂದುವರಿಯುತ್ತಾ ಇಬ್ಬರಿಗೂ ಸಮಯ ಹೋದುದೇ ತಿಳಿಯದು. ಇದು ಇವರಿಬ್ಬರ ನಡುವೆ ಮಾತ್ರವಲ್ಲ, ದಾರಿಯಲ್ಲಿ, ದೂರವಾಣಿ ಯಲ್ಲಿ, ಪಾರ್ಕಿನಲ್ಲಿ, ಸಭೆ ಸಮಾರಂಭಗಳಲ್ಲಿ, ಎಲ್ಲೆಂದರಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಪರಿಚಯಸ್ಥರ ನಡುವೆ ನಡೆಯುವ ಒಂದು ಚಟುವಟಿಕೆ.
ಇದಕ್ಕೆ ಗಂಡಸರು ಹೊರತಾಗಿಲ್ಲವಾದರೂ ಗಾಸಿ- ಮಾಡೋದರಲ್ಲಿ ಹೆಂಗಸರಷ್ಟೇ ಮೇಲುಗೈ ಎಂಬುದು ಊರಿಗೆ ಗೊತ್ತಿರುವ ವಿಚಾರ ಹಾಗೂ ಹೆಂಗಸರು ಒಪ್ಪಿಕೊಳ್ಳುವ ವಿಚಾರ. ಇಷ್ಟಕ್ಕೂ ಗಾಸಿಪ್ ಎಂದರೇನು? ತಮ್ಮ ಕಣ್ಣೆದುರು ಇಲ್ಲದವರ ಬಗ್ಗೆ ಅವರ
ಎದುರು ಹೇಳಲಾಗದ್ದನ್ನು, ಅವರ ಅನುಪಸ್ಥಿತಿಯಲ್ಲಿ ಬಾಯ್ತುಂಬ ಹೇಳಿ ಬಾಯ್ತುರಿಕೆಯನ್ನು ಶಮನ ಮಾಡಿಕೊಳ್ಳುವ ಒಂದು ಪ್ರಕ್ರಿಯೆ ಇದು. ಬಾಯಿಯಿಂದ ಬಾಯಿಗೆ ಹರಡಿರುವ ಕಾರಣ ಇದರಲ್ಲಿ ಸತ್ಯಾಸತ್ಯಾಗಳೆಲ್ಲವೂ ಮೈಗೂಡಿಕೊಂಡಿರಬಹುದು. ಈ ಗಾಸಿಪ್‌ಗಳು ನಮ್ಮ ಶತ್ರುಗಳ, ಇಲ್ಲವೇ ನಮಗೆ ಇಷ್ಟವಿಲ್ಲದವರ ಬಗ್ಗೆ ಇದ್ದರಂತೂ, ಹಾಲಿಗೆ ಜೇನು ಸೇರಿಸಿದಷ್ಟು ಸವಿಯಾಗಿರು
ತ್ತದೆ.
ಇಷ್ಟಕ್ಕೂ ಕಾರಣ ಮನುಷ್ಯನ ನಾಲಿಗೆಗೆ 2 ಚಪಲಗಳು, ಒಂದು ತಿನ್ನುವ ಚಪಲ ಇನ್ನೂಂದು ಮಾತನಾಡುವ ಚಪಲ. ಎರಡಕ್ಕೂ ಇತಿಮಿತಿಗಳಿರಬೇಕು. ಇಲ್ಲವಾದರೆ ಅಪಾಯ ತಪ್ಪಿದ್ದಲ್ಲ. ಆದುದರಿಂದಲೇ, ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಸರ್ವಕಾಲಿಕ ಸತ್ಯವಾಗಿದೆ. ಮೇಲಾಗಿ ಮನುಷ್ಯ ಸಂಘ ಜೀವಿ. ಇತರರ ಒಡನಾಟವಿಲ್ಲದೆ ಇರಲಾರ, ಅಂತೆಯೇ ತರರ ಬಗ್ಗೆ ಹೇಳಲು ಹಾಗೂ ಕೇಳಲು ಇಷ್ಟ ಪಡುತ್ತಾನೆ.
ಮನುಷ್ಯನ ಈ ಸ್ವಭಾವವೇ ಗಾಸಿಪ್‌ಗೆ ಮೂಲ ಕಾರಣ. ಗಾಸಿಪಿಂಗ್ ಬರೇ ಹೆಂಗಸರಿಗೆ ಮಾತ್ರವಲ್ಲ ಗಂಡಸರಿಗೂ ಪ್ರಿಯವಾದ ವಿಷಯವೇ, ಆದರೆ, ಇವರಿಬ್ಬರೂ ಮಾತನಾಡುವ ವಿಷಯಗಳು ಮತ್ತು ಅವಧಿಗಳು ಮಾತ್ರ ಬೇರೆ ಬೇರೆ. ಗಾಸಿಪಿಂಗ್‌ಗೆ ಯಾವತ್ತೂ ವಿಷಯಗಳ ಅಭಾವವೆಂದಿಲ್ಲ ನಗಣ್ಯ ವಿಷಯಗಳಿಂದ ಹಿಡಿದು, ಅಂತಾರಾಷ್ಟ್ರೀಯ ವಿಚಾರಗಳವರೆಗೆ, ಪಾಕಶಾಸ್ತ್ರದಿಂದ
ಹಿಡಿದು ರಾಜಕೀಯದವರೆಗೆ, ಅದು ವಿಸ್ತರಿಸಬಹುದು.
ನಟನಟಿಯರಿಂದ ಹಿಡಿದು ಮನೆಕೆಲಸದಾಕೆಯವರೆಗೆ, ಗಂಡನಿಂದ ಹಿಡಿದು ಬಂಧುಮಿತ್ರರವರೆಗೆ, ಅದು ಯಾರನ್ನೂ ಬಿಟ್ಟಿಲ್ಲ. ಅಂತೆಯೇ ಗಾಸಿಪಿಂಗ್‌ಗೆ ಸ್ಥಳ ಸಮಯ ಸಂದರ್ಭಗಳ ಕಟ್ಟುಪಾಡುಗಳಿಲ್ಲ. ಸುಶ್ರಾವ್ಯವಾದ ಸಂಗೀತ ಕಚೇರಿ ಇಲ್ಲವೇ ಗಂಭೀರ ವಾದ ಸಭೆ ಸಮಾರಂಭದ ಮಧ್ಯೆಯೂ ಅದು ನಿರಾತಂಕವಾಗಿ ನಿರರ್ಗಳವಾಗಿ ನಡೆಯಬಹುದು. ಈ ಸೀರೆ ಎಲ್ಲಿಂದ ತಗೊಂಡ್ರಿ, ಎಂಬ ಪ್ರಶ್ನೆಯಿಂದ ಹಿಡಿದು, ನಾನು ಸಾರು ಮಾಡುವಾಗ ಬೇಳೇನೆ ಹಾಕಿಲ್ಲಾರೀ, ಯಾಕಂದ್ರೆ ನಮ್ಮ ಯಜಮಾನ್ರಿಗೆ Gas Trouble ಒಂದು ಕಾಲದಲ್ಲಿ ನನ್ನ ಜಡೆ ಎಷ್ಟು ಉದ್ದ ಇತ್ತು, ಅಂತೀರಿ ಈಗ ನೋಡಿ ಒಳ್ಳೆ ಕೊತ್ತಂಬರಿ ಸೊಪ್ಪುತರ ಆಗಿದೆ, ಮುಂತಾದ ವಿಷಯಗಳಿಗೆ ಹಾರುತ್ತಾ ಮಾತು ಮುಂದುವರಿಯುತ್ತದೆ.
ಕೆಲವರಂತೂ, ಗಾಸಿಪಿಂಗ್ ಹೆಸರಲ್ಲಿ ಪೋಲಿ ಹಾಸ್ಯಗಳನ್ನು ಹೇಳುತ್ತಾ, ಬಾಯ್ತುಂಬ ನಕ್ಕು ತಮ್ಮ ಮನದಾಸೆಯನ್ನು ಪೂರೈಸಿ ಕೊಳ್ಳುವುದುಂಟು, ಸಂಬಂಧಿಗಳ ಮತ್ತು ಸ್ನೇಹಿತರ ಕುರಿತಾದ ಗಾಸಿಪಿಂಗ್‌ಗಳು ಸರ್ವೇ ಸಾಮಾನ್ಯ. ಗಾಸಿಪಿಂಗ್‌ನ ಉದ್ದೇಶ ಸಾಮಾನ್ಯವಾಗಿ ಇತರರನ್ನು ತಮಗಿಂತ ಕೀಳು ಎಂದು ಬಿಂಬಿಸುವ ಪ್ರಯತ್ನ. ಇಲ್ಲವೇ ಅವರ ದುರ್ಗುಣ, ದೌರ್ಬಲ್ಯಗಳನ್ನು ವರ್ಣಿಸಿ ಮಜಾ ತೆಗೆದುಕೊಳ್ಳುವ ರೀತಿ.
ಇದು ಇಬ್ಬರ ನಡುವೆ ನಡೆಯುವ ಗುಸು ಗುಸು ಮಾತುಕತೆಯಿಂದ ಹಿಡಿದು ಕೆಲವೊಮ್ಮೆ ಅನೇಕರು ಭಾಗವಹಿಸುವ ಪ್ರಹಸನವೂ
ಆಗಬಹುದು. ಹಾಗೆಂದು ಗಾಸಿಪ್‌ನಂಥ ಹಾಳು ಹರಟೆಯಿಂದ, ಸಮಯ ಹಾಳು, ಮನಃ ಶಾಂತಿ ಮಾಯ ಹಾಗೂ ಎಂದೂ
ಅಪಾಯಕಾರಿ ಎಂಬ ಭಾವನೆಯೂ ತಪ್ಪು. ಸುಳ್ಳು ಸುದ್ದಿ ಹರಡುವ, ಇನ್ನೊಬ್ಬರ ಮನೆ ಹಾಳು ಮಾಡುವ, ಇಲ್ಲವೇ ಮನ ನೋಯಿಸುವ ವ್ಯಕ್ತಿಯ ಗೈರುಹಾಜರಿಯಲ್ಲಿ ಅವನ ತೇಜೋವಧೆ ಮಾಡುವ, ಗಾಸಿಪ್‌ಗಳು ಕೆಟ್ಟದ್ದು ನಿಜ.
ಆದರೆ ನಿಜಾಂಶಗಳನ್ನು ಹೊಂದಿರುವ, ಒಳ್ಳೆಯದನ್ನು ಕಲಿತುಕೊಳ್ಳಬಹುದಾದ ಯಾರಿಗೂ ಹಾನಿ ಉಂಟು ಮಾಡದ ಗಾಸಿಪ್
ಗಳಿಂದ ಅನೇಕ ಲಾಭಗಳೂ ಇವೆ ಎಂಬುದು ವೈಜ್ಞಾನಿಕವಾಗಿ ಸಾಬೀತಾದ ಸತ್ಯ. ಗಾಸಿಪಿಂಗ್ ಎಂದರೆ, ಹೆಚ್ಚಿನವರಿಗೆ ಇಷ್ಟ. ಕಾರಣ ಅದು ಮಾನಸಿಕ ಒತ್ತಡದಿಂದ ನಮ್ಮನ್ನು ಬಿಡಿಸಿ ಮನಸ್ಸನ್ನು ರಿಲಾಕ್ ಗೊಳಿಸುತ್ತದೆ. ಗಾಸಿಪ್‌ಗಳನ್ನು ಚಪ್ಪರಿಸೋ ದರಿಂದ ಮನಸ್ಸು ಹಗುರವಾಗುತ್ತದೆ.
ಗಾಸಿಪಿಂಗ್‌ನಿಂದ ಪರಸ್ಪರ ಸ್ನೇಹ, ಆತ್ಮೀಯತೆ, ನಂಬಿಕೆಗಳು ವೃದ್ಧಿಯಾಗುತ್ತವೆ. ಗಾಸಿಪ್ ಮೂಲಕ ನಮಗೆ ತಿಳಿಯದಿರುವ ಅನೇಕ ಹೊಸ ವಿಷಯಗಳು ಗೊತ್ತಾಗುತ್ತವೆ. ಆ ಹುಡುಗಿ ನೋಡಿ ದೇವಸ್ಥಾನದಲ್ಲಿ ಪೂಜೆಗೆ, ಮಿನಿ ¤ Skirt Sleveless blouse ನ್ನ ಹಾಕಿಕೊಂಡು ಬಂದಿದ್ದಾಳೆ’ ಎಂಬ ಗಾಸಿಪ್ ನಿಂದ ಸ್ಥಳ ಸಂದರ್ಭಗಳಿಗೆ ಹೊಂದುವ ಉಡುಪುಗಳನ್ನು ಧರಿಸಬೇಕು, ಎಂಬ ವಸ ಸಂಹಿತೆಯನ್ನು ತಿಳಿಸಿಕೊಡುತ್ತದೆ.
ಇತರರ ಜತೆ ಹೇಳಿಕೊಳ್ಳುವುದರಿಂದ, ನಮ್ಮ ಕೆಲವಾರು ಕಷ್ಟಗಳು ಹಂಚಿಹೋಗುತ್ತವೆ ಹಾಗೂ ಇತರರನ್ನು ಕೇಳಿಸಿಕೊಳ್ಳುವು ದರಿಂದ ಅವರ ವೇದನೆಗಳೂ ಮಾಯ ವಾಗುತ್ತವೆ. ಕಾಲಹರಣ (Time pass) ಮಾಡಲು, ಗಾಸಿಪಿಂಗ್‌ನಷ್ಟು ಸುಲಭ ವಿಧಾನ ಬೇರೊಂದಿಲ್ಲ; ಆದರೆ, ಒಂದು ಮಾತು ನೆನಪಿರಲಿ, ಇತರರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಕಮೆಂಟ್ ಮಾಡುವವರು ನಮ್ಮ ಬಗ್ಗೆಯೂ, ನಮ್ಮ ಗೈರು ಹಾಜರಿಯಲ್ಲಿ ಕಮೆಂಟ್ ಮಾಡಿಯೇ ಮಾಡುವವರು ಎಂಬುದು ಶತಸಿದ್ಧ ಮಾತ್ರವಲ್ಲ, ಆತ್ಮೀಯ ಸ್ನೇಹವನ್ನು ಸೃಷ್ಟಿಸುವಲ್ಲಿ ಹಾಗೂ ಒಂದು ಪರಿಚಯ ಉತ್ತಮ ಸ್ನೇಹವಾಗೋದನ್ನ, ತಪ್ಪಿಸುವಲ್ಲಿ, ಗಾಸಿಪಿಂಗ್ ಕಾರಣ
ವಾಗಬಹುದು.
ಗಾಸಿಪಿಂಗ್‌ನ ಪರಿಣಾಮವಾಗಿ ಗಂಡ – ಹೆಂಡತಿಯರ, ಬಂಧು – ಮಿತ್ರರ ಸಂಬಂಧಗಳು ಕೆಟ್ಟು ಹೋಗಿರೋದು ನಮಗೆಲ್ಲಾ ತಿಳಿದಿರುವ ವಿಚಾರವೇ, ಇದೇ ಕಥಾ ವಸ್ತುವನ್ನಾಧರಿಸಿ, ರೂಪಿತಗೊಂಡಿರುವ ಕಥೆ – ಕಾದಂಬರಿಗಳು ಚಲನಚಿತ್ರಗಳು ಅದೆಷ್ಟಿಲ್ಲ! ಹಾಳಾದ ಮನೆಗಳೆಷ್ಟಿಲ್ಲ! ಆದುದರಿಂದ ನಮಗೆ ನಾವೇ ಒಂದು ನಿರ್ಬಂಧವನ್ನು ಹೇರೋಣ, ಇತರರ ಬಗ್ಗೆ ಅವರ ನಡವಳಿಕೆ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇರುವ ಟೀಕೆ ಟಿಪ್ಪಣಿ ಮಾಡುವ ನ್ಯಾಯಾಧೀಶರು ನಾವಾಗಬೇಕಿಲ್ಲ.
ನಮ್ಮ ಆತ್ಮೀಯರ ನಡೆ – ನುಡಿಗಳು ನಮಗೆ ಸರಿ ಎನಿಸದಿದ್ದರೆ, ಅವನ್ನು ಅವರಿಗೆ ನೇರವಾಗಿ ನಯವಾಗಿ ಹೇಳಿಬಿಡೋಣ. ಅವು ಕೊಂಚ ವಿಚಿತ್ರ – ಭಿನ್ನವಾಗಿದ್ದಲ್ಲಿ, ಇವೆಲ್ಲಾ ವ್ಯಕ್ತಿತ್ವದ ವೈಧ್ಯವೆಂದು ತಿಳಿದು ಸುಮ್ಮನಾಗಿ ಬಿಡೋಣ. ಹೊರತಾಗಿ ಅವರೆದುರು ಹೇಳಬೇಕಾದುದನ್ನು ಅವರ ಗೈರುಹಾಜರಿಯಲ್ಲಿ ಹೇಳೋದು, ಚರ್ಚಿಸೋದು, ಹೇಳಿ ಮಜಾ ಪಟ್ಟುಕೊಳ್ಳುದು ಸಭ್ಯತೆಯೂ ಅಲ್ಲ, ಸೌಜನ್ಯತೆಯೂ ಅಲ್ಲ.
ನಮ್ಮ ನೇರ ಮಾತುಗಳು ಆರಂಭದಲ್ಲಿ ಸ್ವಲ್ಪ ಕಮ್ಮಿ ಎನಿಸಿದರೂ, ಒಮ್ಮೆ ನಾವು ನಂಬಲಾರ್ಹ ವ್ಯಕ್ತಿ ಎಂದು ಸಾಬೀತಾದೊಡನೆ ಎಲ್ಲರೂ ನಮ್ಮ ಸ್ನೇಹಕ್ಕಾಗಿ ಹಾತೊರೆಯುತ್ತಾರೆ. ಒಟ್ಟಿನಲ್ಲಿ ಗಾಸಿಪಿಂಗ್ ಎಂಬುದು ಒಂದು ಕುರುಕಲು ತಿಂಡಿ ಇದ್ದಂತೆ, ತಿಂದಷ್ಟು ಇನ್ನಷ್ಟು ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುವಂತೆ, ಮುಂದುವರಿಯುತ್ತಲೇ ಇರುತ್ತದೆ, ಇದು ಒಂತರಾ ತುರಿಕೆ ಯಂತೆ, ತುರಿಸಿದಷ್ಟು ಮಜಾ ನೀಡುತ್ತಾ ಹೆಚ್ಚೆಚ್ಚು ತುರಿಕೆಯನ್ನು ಬೇಡುತ್ತಾ ಬಲು ಬೇಗ ಗುಣವಾಗದ ದೊಡ್ಡ ಗಾಯವನ್ನೇ ಉಂಟು ಮಾಡುವ ಸಂದರ್ಭವೂ ಉಂಟು.
ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ, ಹೀಗಾಗಲೂ ಬಿಡದೆ ಮನಸ್ಸನ್ನು ಗಾಸಿಪಿಂಗ್ ಎಂಬ ಚಟದಿಂದ ಮುಕ್ತಗೊಳಿಸಲು ಸಾಧ್ಯ.
ಗಾಸಿಪಿಂಗ್ ಇರಲಿ ಆದರೆ, ಹಿತ ಮಿತವಾಗಿರಲಿ, ಸಮಯೋಚಿತವಾಗಿರಲಿ, ಸಂದರ್ಭೋಚಿತ ವಾಗಿರಲಿ. ಒಟ್ಟಿನಲ್ಲಿ ನಮ್ಮ ಮಾತುಗಳು ಅನಗತ್ಯ, ಅಸಂಬದ್ಧ ವಿಚಾರಗಳ ಮೇಲೆ ವ್ಯರ್ಥವಾಗಿ ಸಮಯದ ಕಾಲಹರಣವಾಗದಿರಲಿ. ಕಾರಣ, ಮಾತು ಭಗವಂತನು ನಮಗೆ ನೀಡಿದ ಒಂದು ಅಮೂಲ್ಯವಾದ ವರ. ಇದರ ಸದುಪಯೋಗವಾಗಬೇಕೇ ಹೊರತು ಎಂದೂ ದುರುಪ ಯೋಗವಾಗಬಾರದು.