Sunday, 15th December 2024

ಭೋಳೆ ಭವಾನಿರಾಯನ ಭಾಷಣ ವೈಖರಿ

ಪ್ರಾಣೇಶ್‌ ಪ್ರಪಂಚ

ಗಂಗಾವತಿ ಪ್ರಾಣೇಶ್

ಭವಾನಿ ಎಂಬೊಬ್ಬ ಗೆಳೆಯನಿದ್ದಾನೆ. ಗಾಬರಿಯಾದಿರಾ? ಭವಾನಿ ಎಂಬುದು ಹುಡುಗಿ ಹೆಸರಲ್ಲವೇ ಎಂದು. ಹೌದು, ಆದರೆ ಇವನು ಭವಾನಿರಾವ್. ಬಹಳ ಕಾಲ ಮಕ್ಕಳಾಗದೆ, ಮದುವೆಯಾಗಿ ಹನ್ನೆರೆಡು ವರ್ಷಗಳ ಮೇಲೆ ಅವನ ತಂದೆ – ತಾಯಿಗಳು ತುಳಜಾಭವಾನಿಗೆ ಹರಕೆ ಕಟ್ಟಿಕೊಂಡ ಮೇಲೆ ಹುಟ್ಟಿದವನಾದ್ದರಿಂದ ಅವನಿಗೆ ಭವಾನಿ ಎಂದೇ ನಾಮಕರಣ ಮಾಡಲಾಯಿ ತಂತೆ.

ಅವನ ತಂದೆ ಪೀರಲದೇವರಿಂದ ಹಿಡಿದು ಪರಮೇಶ್ವರನವರೆಗೂ, ಕೋಲ್ಕತಾದ ಕಾಳಿಯಿಂದ ಹಿಡಿದು, ಕೃಷ್ಣನ ಉಡುಪಿಯ ವರೆಗೂ ಹನ್ನೆರೆಡು ವರ್ಷ ಎಲ್ಲ ಊರುಗಳನ್ನು ಸುತ್ತಿದ್ದರು. ಅದರಿಂದಾಗಿ ಇವರ ಅಡ್ಡಾಡಿದ ರೈಲು, ಬಸ್ಸು, ಟ್ಯಾಕ್ಸಿ ಗಳಿಗೆ ಲಾಭವಾಯಿತೇ ವಿನಃ ಇವರಿಗೆ ಸಂತಾನ ಲಾಭವಾಗಲಿಲ್ಲ. ಕಡೆಗೆ ಮುಂದೆ ಭಾರತದ ನಕಾಶೆ ಗೋಡೆಗೆ ಇಳಿಬಿಟ್ಟು, ಕಣ್ಣು ಮುಚ್ಚಿಕೊಂಡು ಗಂಡ – ಹೆಂಡತಿ ಇಬ್ಬರೂ ದೂರದಿಂದ ಅಂದರೆ, ಮನೆಯಲ್ಲಿಯೇ ಗೋಡೆಯ ನಕಾಶೆದೆಡೆಗೆ ನಡೆಯುತ್ತಾ ಬಂದು ಬಲಗೈಯಿಂದ ನಕಾಶೆಗೆ ಕುಂಕುಮ ಹಚ್ಚುತ್ತಿದ್ದರು.

ನಂತರ ಕಣ್ಣಿಗೆ ಕಟ್ಟಿಕೊಂಡಿದ್ದ ಬಟ್ಟೆ ಬಿಚ್ಚಿ ಕುಂಕುಮ ಹತ್ತಿದ್ದ ದೇವರಿರುವ ಆ ಊರಿಗೆ ಹೋಗಿ ಅಲ್ಲಿನ ದೇವರಿಗೇ ಹನ್ನೊಂದು, ಇಪ್ಪತ್ತೊಂದು ದಿನ ಸೇವೆ ಮಾಡುತ್ತಿದ್ದರು. ಹಾಗೆ ಕುಂಕುಮ ಲಾಭ ಪಡೆದು ವರ ಕೊಟ್ಟಾಕಿ ತುಳಜಾಭವಾನಿ. ಹೀಗಾಗಿ ಅವನು ಗಂಡುಮಗನಾದರೂ ಅವನಿಗೆ ಭವಾನಿ ಎಂದೇ ನಾಮಕರಣ ಮಾಡಿದ್ದರು. ಏಕೆಂದರೆ, ಎಲ್ಲಾ ಕ್ಷೇತ್ರಗಳ ಹೆಸರು ಗಳಿಗೂ
ನನಗೆ ಗಂಡಸು ಮಗ ಹುಟ್ಟಿದರೆ ನಿನ್ನ ಹೆಸರೇ ಇಡ್ತೀನಿ ಎಂಬ ಆಮಿಷ ತೋರಿಸಿದ್ದರು. ಆ ಆಮಿಷಕ್ಕೆ ಬಲಿಯಾದಾಕಿ ತುಳಜಾ ಭವಾನಿ.

ಹೀಗಾಗಿ ನನ್ನ ಗೆಳೆಯ ಗಂಡಾದರೂ ಭವಾನಿ. ಅವನ ಹೆಸರನ್ನು ನಾನು ರಸ್ತೆ, ಮಾರ್ಕೇಟ್, ಸಿನಿಮಾ ಥೇಟರ್‌ಗಳಲ್ಲಿ ಜೋರಾಗಿ ಕೂಗುವಂತಿರಲಿಲ್ಲ. ಕೂಗಿದರೆ, ಕನಿಷ್ಠ ನಾಲ್ಕೈದು ಜನ ಹುಡುಗಿಯರು ನನ್ನ ಕಡೆ ಕೆಕ್ಕರಿಸಿ ನೊಡಿದ್ದೂ ಉಂಟು. ಒಮ್ಮೊಮ್ಮೆ ಅವರ ಲವರ್‌ಗಳು, ಗಂಡಂದಿರು ನನ್ನನ್ನು ಹೊಡೆಯಲು ಬಂದದ್ದೂ ಉಂಟು. ಹೀಗಾಗಿ ನಾನು ಅವನನ್ನು ಕೂಗುವುದನ್ನು ಬಿಟ್ಟು, ಕಣ್ಣಿನಿಂದಲೇ ಗುರುತಿಸಿ ಅವನ ಪಕ್ಕವೇ ಹೋಗಿ ನಿಂತು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದೆ. ಕಣ್ಣಿಗೆ ಕಾಣಿಸು ವಂತೆ ನಿಲ್ಲು ಮಾರಾಯ, ನಿನ್ನ ಹೆಸರು ಕೂಗುವಂತೆ ಮಾಡಿ, ನನ್ನನು ಕಂಡವರಿಂದ ಒದೆಸಬೇಡ ಎಂದೇ ಅವನಿಗೆ ವಿನಂತಿ ಮಾಡಿಕೊಳ್ಳುತ್ತಿದ್ದೆ.

ಪರೀಕ್ಷೆಯಲ್ಲೂ ಅಷ್ಟೆ. ಅವನು ಬರೆದ ಉತ್ತರ ಪತ್ರಿಕೆಗಳಿಗೆ ಪಾಪ. ಹುಡುಗಿ ಎಂದು ತಿಳಿದು ಪೇಪರ್ ಚೆಕ್ ಮಾಡುವವರು ಹೆಚ್ಚು ಮಾರ್ಕ್ಸ್ ಹಾಕುತ್ತಿದ್ದರು. ಇಂಟರ್‌ವ್ಯೂವ್‌ಗಳಲ್ಲೂ ಹುಡುಗಿ ಎಂದು ಮೊದಲು ಕರೆದು, ಇವನನ್ನು ನೋಡಿ ಸಂದರ್ಶ ಕರು ಪೆಚ್ಚಾಗುತ್ತಿದ್ದರು. ಹೀಗಾಗಿ ಎಂಜಿನೀಯರಿಂಗ್ ಓದಿ ಕಂಟ್ರ್ಯಾಕ್ಟರ್ ಆದ. ಭವಾನಿರಾವ್ ಎಂದು ಹೆಸರು ಬದಲಾಯಿಸಿ ಕೊಂಡರೂ ಭವಾನಿ ಎಂದರೆ ಹೆಣ್ಣು, ರಾವ್ ಆಕೆಯ ಗಂಡನ ಹೆಸರಿರಬೇಕೆಂದು ಅಲ್ಲೂ ಟೆಂಡರ್‌ಗಳನ್ನು ತನ್ನ ಹೆಸರಿಗೆ ಗಿಟ್ಟಿಸಿಕೊಂಡು ಶ್ರೀಮಂತ ನಾದ.

ಊರಿನ ಎಲ್ಲ ಸಂಘ – ಸಂಸ್ಥೆಗಳಲ್ಲೂ ಅಗ್ರಸ್ಥಾನ, ಗೌರವ ಸದಸ್ಯತ್ವ ಇವನಿಗೆ. ಹಣ ಬಂದಂತೆಲ್ಲ ಮೌಢ್ಯ, ದಡ್ಡತನ, ದುಡುಕು, ಕೋಪ, ಜತೆಜತೆಗೆ ಬಿ.ಪಿ., ಶುಗರ್ ಇವನನ್ನು ಅರಸಿಕೊಂಡು ಬಂದವು. ಸದಾ ಮರಳು, ಸಿಮೆಂಟ್, ಸೈಟು, ಕುಷನ್ನು ಪದಗಳನ್ನೇ ಆಡುತ್ತಿದ್ದು, ಬೇರೆ ಶಬ್ದಗಳನ್ನೇ ಅರಿಯದವನಂತೆ, ಆಡದವನಂತೆ ಆಗಿಹೋದ.

ಮತ್ತೊಬ್ಬ ರಿಟಾಯರ್ಡ್ ಕಾಂಟ್ರ್ಯಾಕ್ಟರ್‌ನ ಮಗಳನ್ನು ಮದುವೆಯಾದ, ಆಕೆಯೂ ಎರಡು ಹೆಣ್ಣುಗಳನ್ನು ಹೆತ್ತು, ಗಜಗಮನೆ
ಯಾಗಿ ಇವನ ವಿಶಾಲವಾದ ಮನೆತುಂಬಿದಳು. ಆಕೆ ಕೂತಳೆಂದರೆ, ನಾಲ್ಕೆ ದು ಜನ ನಿಲ್ಲಬೇಕಾಗಿತ್ತು. ಅಷ್ಟು ಸ್ಥಳವನ್ನು ಆಕೆಯ ದೇಹ ಆಕ್ರಮಿಸುತ್ತಿತ್ತು. ಆಕೆ ಆಕ್ರಮಿಸಿದ ಜಾಗ ನೋಡಿದರೆ ಸಾಕು, ಈಕೆಯೊಬ್ಬ ಕಂಟ್ರ್ಯಾಕ್ಟರ್‌ನ ಹೆಂಡತಿ ಎನಿಸಿಬಿಡುತ್ತಿತ್ತು. ಮನೆ ತುಂಬಿದ ಮಡದಿ ಎಂದು ಈ ಅರ್ಥದಲ್ಲಿಯೂ ನಾವು ಹೇಳಬಹುದು.

ಭವಾನಿರಾವ್‌ಗೆ ಹಣ ಹೆಚ್ಚಾದಂತೆ ರೋಗಗಳೂ, ರೋಗಗಳು ಹೆಚ್ಚಾದಂತೆ ದೇವರ ಮೇಲೆ ಭಕ್ತಿಯೂ ಹೆಚ್ಚಾಗಲಾರಂಭಿಸಿತು.
ಮನೆಯಿಂದ ಎತ್ತಲಿಗೆ ಹೋಗಲಿಕ್ಕೂ ಜಾತಕ, ಶಾಸ್ತ್ರ, ರಾಹುಕಾಲಗಳನ್ನು ಗಮನಿಸಲು ಶುರು ಮಾಡಿದ. ಪೇಪರ್ ಬಂದ ಕೂಡಲೇ ತನ್ನ ದಿನಭವಿಷ್ಯ ಓದಿಯೇ, ದೇಶದ ಭವಿಷ್ಯದ ವಿಷಯಗಳನ್ನು ಓದುತ್ತಿದ್ದ. ತನ್ನ ಮನೆಯ ಕಿಟಕಿಯಿಂದ ಕಾಣುವ ಗುಡ್ಡಕ್ಕೂ ನಮಸ್ಕರಿಸುತ್ತಿದ್ದ. ಕಾರ್‌ನಲ್ಲಿ ಪ್ರಯಾಣಿಸುವಾಗಲಂತೂ ಎದುರಿಗೆ ಬರುವ ಲಾರಿಗಳು ಮಾರುತಿ ಟ್ರಾನ್ಸ್‌ಪೋರ್ಟ್, ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ ಎಂದು ಬರೆದಿದ್ದು ಅಲ್ಲಿ ಮಾರುತಿ, ವೆಂಕಟೇಶ್ವರನ ಚಿತ್ರ ಬಿಡಿಸಿದ್ದರೆ ಅವಕ್ಕೂ ಕೈ ಮುಗಿಯು ತ್ತಿದ್ದ.

ಕೈ ಬೆರಳಿಗೆಲ್ಲ ರಾಘವೇಂದ್ರ, ಶಿರಡಿ ಸಾಯಿಬಾಬಾ, ವೆಂಕಟೇಶ್ವರ, ಆಂಜನೇಯನ ಪದಕಗಳಿರುವ ಉಂಗುರಗಳು, ಅವಕ್ಕೆಲ್ಲ
ನಿಮಿಷಕ್ಕೊಮ್ಮೆ ಲೊಚ ಲೊಚ ಮುದ್ದಿಸುತ್ತಾ, ಐದು ಸೆಕೆಂಡುಗಳಿಗೊಮ್ಮೆ ಕಣ್ಣಿಗೊತ್ತಿಕೊಳ್ಳುತ್ತಿದ್ದ. ಕಂಟ್ರ್ಯಾಕ್ಟರ್‌ನಾಗಿ ಹೆಸರು ಮಾಡಿದ್ದರಿಂದ ಹಣ, ಹೆಸರು ಗಳಿಸಿ, ರಾಜಕೀಯಕ್ಕೆ ಇಳಿಯುವ ಮೂರ್ಖತನವನ್ನು ಮಾತ್ರ ಮಾಡಲಿಲ್ಲ. ಇದು ಆತ ನಂಬಿದ್ದ ದೈವ ಕೃಪೆ ಎನ್ನಬಹುದು. ಊರಲ್ಲಿ ಯಾವುದೇ ಗುಡಿ, ಚರ್ಚ್, ಮಸೀದಿ ಕಟ್ಟಿದರೂ ಈತನ ಚಂದಾ ಹಣವಿಲ್ಲದೆ ಅವು ಮೇಲೆ ಏಳುತ್ತಿರಲಿಲ್ಲ.

ಒಮ್ಮೊಮ್ಮೆ ತಿರುಪತಿ, ಮಂತ್ರಾಲಯ, ಶ್ರೀಶೈಲ, ಶೃಂಗೇರಿ ಮೂಲಮಠದವರು ತಮ್ಮ ಶಾಖಾಮಠಗಳನ್ನು ನಮ್ಮೂರಲ್ಲಿ ಕಟ್ಟಿಸಿ ದರೂ ಅದರ ಮೇಲುಸ್ತುವಾರಿ, ಹಣಕಾಸಿನ ನಿರ್ವಹಣೆಯನ್ನು ಭವಾನಿರಾವ್‌ಗೆ ಕೊಡುತ್ತಿದ್ದರು. ದೇವರ ದುಡ್ಡನ್ನು ನಮ್ಮ ಭವಾನಿ ಸರ್ಪ ಕಾಯ್ದಂತೆ ಕಾಯುತ್ತಿದ್ದ. ತನ್ನ ಕೈಯಿಂದಲೇ ಹಾಕುತ್ತಿದ್ದನಾಗಲೀ, ಅವರು ಕಳಿಸುವ ಹಣವನ್ನು ಅಪ್ಪಿತಪ್ಪಿ ಯೂ ತನಗಾಗಿ ಬಳಸಿಕೊಳ್ಳುತ್ತಿರಲಿಲ್ಲ. ಆದರೆ ಈತನನ್ನು ಭಾಷಣಕ್ಕೆ ಮಾತ್ರ ವಿನಂತಿಸಿಕೊಳ್ಳಬಾರದು.

ಶಬ್ದಾಡಂಬರವಿಲ್ಲ, ಹಾಗೆಯೇ ಆಡಬೇಕಾದ್ದು ಯಾವುದು, ಆಡಬಾರದೆಂಬುದು ಯಾವುದು ಎಂಬ ಭೇದವೂ ಇಲ್ಲ. ಮೆದುಳನ್ನು ಬೀಗಹಾಕಿ ಮುಚ್ಚಿಟ್ಟು, ನಾಲಿಗೆ ಹೊರಳಿದಂತೆಲ್ಲ, ಬಾಯಿಯ ಸ್ನಾಯುಗಳೆಲ್ಲ ಭರ್ಜರಿ ಎಕ್ಸರ್‌ಸೈಜ್ ಆಗುವಂತೆ
ಮಾತನಾಡಿಬಿಡುತ್ತಿದ್ದ. ಹೆಣ್ಣು ಮಕ್ಕಳಿದ್ದಾರೆ ಸಭೆಯಲ್ಲಿ ಎಂಬುದನ್ನು ಯೋಚಿಸದೇ, ಒಳಗೆ ಸುಳಿಯುವಂತೆ ಹೆಣ್ಣು ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ ಎಂಬ ವಚನವನ್ನು ಅಕ್ಷರಶಃ ಪಾಲಿಸಿ, ಕೇವಲ ಆತ್ಮಗಳಿಗೆ ಮಾತ್ರ ನಾನು ಹೇಳುತ್ತಿದ್ದೇನೆ ಎಂಬ ಅಲೌಕಿಕತೆಗೆ ಹೋಗಿ ಮಾತನಾಡುತ್ತಿದ್ದ.

ಹೆಚ್ಚಾಗಿ ಈತ ಮಾತನಾಡುತ್ತಿದ್ದುದೇ ಧಾರ್ಮಿಕ ಸಭೆಗಳಲ್ಲಿ. ಯಾವ ಸ್ವಾಮಿಗಳು ಬಂದರೂ ಈತನ ಬಂಗಲೆಯಲ್ಲಿಯೇ ಅವರ
ವಸತಿ. ಬಂಗಲೆ ಮೇಲ್ಭಾಗದಲ್ಲಿ ಸ್ವಾಮಿಗಳ ಸನ್ನಿಧಾನ ಎಂಬ ಪ್ರತ್ಯೇಕ ಕೋಣೆಯನ್ನೇ ಕಟ್ಟಿಸಿದ್ದ. ಆ ಕೋಣೆಗೆ ಕಸ ಬಳಿಯೋ ತಿಮ್ಮಕ್ಕನ ವಿನಃ ಬೇರಾರಿಗೂ ಪ್ರವೇಶವಿಲ್ಲ. ಸ್ವತಃ ನಮ್ಮ ಭವಾನಿ ರಾಯನೇ ಒಳಗೆ ಹೋಗುತ್ತಿದ್ದಿಲ್ಲ. ಇದು ಕೇವಲ ಸ್ವಾಮಿಗಳಿಗೆ ಹಾಗೂ ತಿಮ್ಮಕ್ಕನಿಗೆ ಮಾತ್ರ ಮೀಸಲಿರುವ ಕೋಣೆ ಎಂದು ಎಷ್ಟೋ ಸಾರಿ ಭಾಷಣದಲ್ಲಿಯೇ ಹೇಳಿ, ಜನರನ್ನು, ಸ್ವಾಮಿಗಳನ್ನು ತಬ್ಬಿಬ್ಬುಗೊಳಿಸಿದ್ದೂ ಉಂಟು.

ಆಡಬೇಕೆಂದೇ ಪಾಪ ಆಡುತ್ತಿರಲಿಲ್ಲ. ಆಡುವಾಗ ಬಂದು ಬಿಡುತ್ತಿತ್ತು. ಸ್ವಾಮಿಗಳು ಬಳ್ಳಾರಿಗೆ ಬಂದರೆಂದರೆ ಮುಗಿಯಿತು. ಅಲ್ಲಿಂದ ಗಂಗಾವತಿಗೆ ಬರಲು ಭವಾನಿರಾಯನ ಕಾರಿನಲ್ಲಿ ಸ್ವಾಮಿಗಳು ಕೂರಲೇಬೇಕು. ಒಲ್ಲೆನೆಂದರೆ? ಕೈಕಾಲು ಕಟ್ಟಿ ಕಾರಿ ನೊಳಗೆ ಕೂರಿಸಿಕೊಳ್ಳುತ್ತಿದ್ದ, ಕೂತ ಮೇಲೆ ಆ ಪಾದಗಳನ್ನು ಕಣ್ಣೀರಿನಿಂದ ತೊಳೆಸುತ್ತಿದ್ದ. ಸ್ವಾಮಿಗಳಿಗೆ ಕಾಣಿಕೆ ಕೊಡು ವಾಗಲೂ ಅಷ್ಟೆ. ಎಷ್ಟು ಕೊಡಲಿ ಸ್ವಾಮಿ? ಎಂದೇ ವಿನಯನಾಗಿ ಕೇಳುತ್ತಿದ್ದ. ವಿಶ್ವಾಮಿತ್ರರು ಹರಿಶ್ಚಂದ್ರನಿಗೆ ಹೇಳಿದಂತೆ ಒಂದು ಮದಗಜದ ಮೇಲೆ ಆಜಾನುಬಾಹು ವ್ಯಕ್ತಿಯೊಬ್ಬ ನಿಂತು ರೊಯ್ಯನೆ ಕವಣೆ ಕಲ್ಲನ್ನು ಬೀಸಿದರೆ, ಅದು ಎಷ್ಟು ಮೇಲಕ್ಕೆ ಹೋಗು ತ್ತದೆಯೋ ಅಷ್ಟು ಎತ್ತರದ ರಾಶಿ ಹೊನ್ನು ಕೊಡು ಎಂದು ಕೇಳಿದರೆ, ಮಹದಪ್ಪಣೆ ಸ್ವಾಮಿ ಧನ್ಯನಾದೆ ಎಂದು ಹರಿಶ್ಚಂದ್ರ ನಂತೆಯೇ ಒಪ್ಪಿ ಕೊಟ್ಟೇ ಬಿಡುವಂಥ ವ್ಯಕ್ತಿ.

ಆದರೆ ಈಗಿನ ಸ್ವಾಮಿಗಳಿಗೆ ಪ್ರಧಾನಿ ಮೋದಿಯ ಭಯ. ಆಧಾರ ಕಾರ್ಡ್, ಪಾನ್ ಕಾರ್ಡ್, ಅಕೌಂಟ್ ನಂಬರ್, ಐ.ಟಿ ರಿಟರ್ನ್ಸ್ ಫೈಲ್ ಕಾಪಿಗಳನ್ನು ಹೊಂದಿಸಲಾಗದ್ದಕ್ಕೆ ಏನೋ, ಕಮ್ಮಿಯೇ ಕೇಳುತ್ತಿದ್ದರು. ಇಂತಿರಲು ಭವಾನಿರಾಯನಿಗೆ ತಿರುಪತಿಯವರೇ ನಮ್ಮೂರಲ್ಲಿ ವೆಂಕಟೇಶ್ವರ ಸ್ವಾಮಿ ಮಂದಿರ ಕಟ್ಟಿಸಲು ತಿರುಪತಿಯಿಂದಲೇ ಹಣ ಕೊಡುವುದಾಗಿಯೂ, ಭವಾನಿರಾಯರೇ ಮುಂದೆ ನಿಂತು ಅದರ ನಿರ್ಮಾಣದ ಸಮಸ್ತ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದೂ ಆಜ್ಞೆ ಮಾಡಿದಾಗ, ನಮ್ಮ ಭವಾನಿರಾಯ ನಿಗೆ ತಾನು ಹುಟ್ಟಿದ್ದೇ ಸಾರ್ಥಕವೆನಿಸಿತಲ್ಲದೆ, ತಾನು ಹುಟ್ಟಿದ್ದೇ ಈ ಮಂದಿರ ನಿರ್ಮಾಣಕ್ಕೆ ಎಂಬುದಾಗಿ ಭಾವಿಸಿ, ಹಗಲು – ರಾತ್ರಿ ಮುಂದೆ ನಿಂತು ಒಂದು ಪೈಸೆ ಪೋಲಾಗದಂತೆ ಅವರು ಕಳಿಸುವ ಹಣದ ಜತೆಗೆ ತನ್ನ ಹಣವನ್ನೂ ಸೇರಿಸಿ ಇನ್ನಷ್ಟು ವೈಭವೋ ಪೇತವಾಗಿ ಮಂದಿರ ನಿರ್ಮಾಣಕ್ಕೆ ನಿಂತ.

ಅದೇ ಬೇರೆಯವರಾಗಿದ್ದರೆ, ತಿರುಪತಿಯಿಂದ ಬರುವ ಕಂತಿನ ಹಣದಲ್ಲಿ ಮೊದಲು ಆ ಕಂಟ್ರ್ಯಾಕ್ಟರ್ ತನಗೊಂದು ಭವ್ಯ ಬಂಗಲೆ
ಕಟ್ಟಿಸಿಕೊಂಡು, ಆ ಬಂಗಲೆಯಲ್ಲಿದ್ದು ಉಪಜೀವನಕ್ಕೊಂದು ತನ್ನ ಹೆಸರಲ್ಲಿ ಲಾಡ್ಜ್ ಕಟ್ಟಿಸಿಕೊಂಡು, ಆಮೇಲೆ ಹಣ ಉಳಿದರೆ ವೆಂಕಟೇಶ್ವರ ಮಂದಿರಕ್ಕೆ ಕೆಲಸ ಶುರು ಮಾಡುತ್ತಿದ್ದ. ಹದಿನೈದು ದಿನಕ್ಕೊಮ್ಮೆ ‘ಕೆಲಸ ನಿಂತಿದೆ, ಹಣ ಬಿಡುಗಡೆ ಮಾಡಿ’ ಎಂದು ವೆಂಕಟೇಶ್ವರ ಪಾದಪದ್ಮಗಳಿಗೆ ಅಹವಾಲು ಸಲ್ಲಿಸಿ ತನ್ನ ಪಾದಗಳನ್ನು ತನ್ನ ಊರಲ್ಲಿ ಗಟ್ಟಿಯಾಗಿ ಊರುವಂತೆ ನೋಡಿ ಕೊಳ್ಳುತ್ತಿದ್ದ.

ಆದರೆ ನಮ್ಮ ಭವಾನಿರಾಯ ಅರ್ಧಕ್ಕರ್ಧ ಮಂದಿರ ತನ್ನ ಹಣದಲ್ಲೇ ಕಟ್ಟಿಸಿ, ನಿಮಗೆ ಅನುಕೂಲವಾದಾಗ, ನಿಮಗೆ ಆ ಸ್ವಾಮಿ
ತಿಳಿವಳಿಕೆ ಕೊಟ್ಟಷ್ಟು ಹಣ ಕಳಿಸಿರಿ, ಕೆಲಸ ಮುಗಿಯುತ್ತ ಬಂದಿದೆ. ತಿರುಪತಿಗೆ ಈ ಕರೋನಾ ಸಮಯದಲ್ಲಿ ಭಕ್ತರ ನಿರ್ಬಂಧ ದಿಂದಾಗಿ ಹಣದ ಅಡಚಣೆ ಆಗಿರಬಹುದು. ಚಿಂತೆಯಿಲ್ಲ, ಕೈಲಾದಷ್ಟು ಕಳಿಸಿರಿ ಎಂದು ಅವರಿಗೇ ಸಮಾಧಾನ ಹೇಳುತ್ತಿದ್ದ. ‘ನನ್ನ ತಿರುಪತಿ ತಿಮ್ಮಪ್ಪ ಸ್ವಾಮಿಗೆ ಕುಬೇರನ ಸಾಲ ತೀರಿಸುವಲ್ಲಿ ನಾನೂ ಕಿಂಚಿತ್ ಸೇವೆ ಮಾಡುತ್ತಿದ್ದೇನೆಂದು ಸ್ವಾಮಿಯ ಏಕಾಂತ ಸೇವೆಯಲ್ಲಿ ಆತನ ಕಿವಿಗೆ ಮುಟ್ಟಿಸಿರಿ ಸಾಕು, ಧನ್ಯನಾದೆ ಎನ್ನುತ್ತಿದ್ದ.

ಇಂತಹ ನಿಸ್ಪಹ ಜೀ ಭವಾನಿರಾಯ ಕೋಟಿಗಳ ವೆಚ್ಚದಲ್ಲಿ ಸ್ವಾಮಿಗೆ ಭವ್ಯ ದೇಗುಲ ಕಟ್ಟಿಸಿ, ಅವರಾಗೆ ಕೊಟ್ಟಿದ್ದಕ್ಕೆ ಕೇವಲ ಲಕ್ಷ ಸ್ವೀಕರಿಸಿ, ಅಲಕ್ಷ್ಯದಿಂದ ಅತ್ತ ಸರಿಸಿದ. ಪ್ರತಿಷ್ಠಾಪನೆಗೆ ಅನೇಕ ಶ್ರೀಗಳು ಬಂದರು. ಮೂರು ದಿನ, ಮೂರು ಹೊತ್ತು ಜನ ಉಂಡುಂಡು ಮಂದಿರದಲ್ಲೆ ಮಲಗಿದರು. ಎಚ್ಚರವಾದಾಗ ದೇವರ ದರ್ಶನವನ್ನು ಮಾಡಿದರು. ಕೆಲವರಂತೂ  ಕೂತಲ್ಲೆ ಕೈ ಮುಗಿದರು. ಕೊನೆಯ ದಿನ, ಅನೇಕ ಶ್ರೀಗಳು ಸೇರಿ ನಮ್ಮ ಭವಾನಿಯರಾಯನಿಗೆ ಸನ್ಮಾನ ಮಾಡಿದರು.

ಅವರ ಪಾದಗಳಿಗೆ ಅಡ್ಡಬಿದ್ದೆ, ಮಲಗಿದ್ದಲ್ಲಿಯೇ ಹಾರ ಹಾಕಿಸಿಕೊಂಡ ನಾಗಲಿ, ಅವರ ಪಾದಬಿಟ್ಟು ಏಳಲಿಲ್ಲ. ಕಣ್ಣೀರಿನಿಂದ ನೆಲವೆಲ್ಲವನ್ನು ತೋಯಿಸಿಬಿಟ್ಟಿದ್ದ. ಸನ್ಮಾನಕ್ಕೆ ಉತ್ತರವಾಗಿ, ದೇವಸ್ಥಾನ ಕಟ್ಟಲು ವಹಿಸಿದ ಕಷ್ಟಗಳ ಅನುಭವ ಹೇಳುವಂತೆ ಒತ್ತಾಯಿಸಿದಾಗ, ನಾಲ್ಕು ಮಾತನಾಡಲು ಎದ್ದು ನಿಂತು ನಾಲ್ಕು ನಿಮಿಷ ಹೋ.. ಎಂದು ಅತ್ತು ಮಾತು ಶುರು ಮಾಡಿದ. ನನ್ನ ಊರ ಬಾಂಧವರೇ, ಎಲ್ಲರ ದೈವಭಕ್ತಿಗೆ ಮೆಚ್ಚಿ ಯಂಕಪ್ಪ ನಮ್ಮೂರಿಗೆ ಬಂದ.

ಇದನ್ನು ಕಟ್ಟಿಸುವಾಗ ಶ್ರೀ ವೆಂಕಟೇಶ್ವರ ಸ್ವಾಮಿ ನನ್ನ ವೈಯುಕ್ತಿಕ ಜೀವನದಲ್ಲೂ ಅನೇಕ ಮಾರ್ಪಾಡು, ಪವಾಡಗಳನ್ನು ಮಾಡಿದ. ನನಗಿಬ್ಬರು ಹೆಣ್ಣು ಮಕ್ಕಳು ನಿಮಗೆ ಗೊತ್ತೇ ಇದೆ. ಮಂದಿರ ಕಟ್ಟಿಸಲು ಮೊದಲು ಬುನಾದಿ ತೋಡಿಸಲು ಶ್ರೀಮಠ ದವರು ಮೂರು ಲಕ್ಷ ಕಳಿಸಿದರು. ನನ್ನ ಇಬ್ಬರು ಹೆಣ್ಣು ಮಕ್ಕಳ ಮದುವೆ ನಿಶ್ಚಯವನ್ನು ಅದ್ಧೂರಿಯಾಗಿ ಮಾಡಿದೆ, ನಂತರ ಪಿಲ್ಲರ್ ಗಳನ್ನು ಎಬ್ಬಿಸಿ ನಿಲ್ಲಿಸುವಾಗ, ಐದು ಲಕ್ಷ ಕಳಿಸಿದರು. ನನ್ನ ಮಕ್ಕಳ ಮದುವೆಗೆ ಬೇಕಾದ ವಸ್ತ್ರ, ಒಡವೆಗಳನ್ನು ಖರೀದಿಸಿದೆ.

ಮುಂದೆ ಲಿಂಟಲ್, ಆರ್.ಸಿ.ಸಿ ಲೇವಲ್‌ಗೆ ಬಂದಾಗ ಹತ್ತು ಲಕ್ಷ ಕಳಿಸಿದರು. ಮಕ್ಕಳಿಬ್ಬರ ಮದುವೆಯನ್ನೂ ವಿಜೃಂಭಣೆ ಯಿಂದ ಮಾಡಿದೆ. ನೀವೆಲ್ಲ ನೋಡಿದಿರಿ. ಮುಂದೆ ಕರೆಂಟ್, ವೈರಿಂಗ್, ನಲ್ಲಿ ನೀರುಗಳ, ಪೈಪ್ ಲೈನಿಂಗ್ ಕೆಲಸ ಬಂದಾಗ ಐದು ಲಕ್ಷ ಬಂತು. ಅಳಿಯ, ಮಕ್ಕಳು ದುಬೈ, ಸಿಂಗಾಪುರ ಹನಿಮೂನ್‌ಗೆ ಹೋಗಿ ಬಂದರು. ಜನರಲ್ಲಿ ಗುಜುಗುಜು ಶುರುವಾಯಿತು. ಸ್ವಾಮಿ ಗಳೇ ಸದ್ದು ಎಂದು ಜೋರಾಗಿ ಕೂಗಿ, ಜನಗಳಿಗೆ ಸಮಜಾಯಿಷಿ ನೀಡಿದರು. ವಾನಿರಾಯನ ಮಾತಿಗೆ, ನೀವು ಯಾರೂ ಪರೀರ್ಥ ಮಾಡಿಕೊಳ್ಳೋದು ಬೇಡ, ಅವರ ವ್ಯಕ್ತಿತ್ವ, ಮನಸ್ಸು ಎಂಥದೆಂದು ನಮಗೆಲ್ಲ ಗೊತ್ತಿದೆ.

ಅವರ ಮಾತಿನ ಅರ್ಥ, ವೆಂಕಟೇಶ್ವರ ದೇವಸ್ಥಾನಕ್ಕೆ ಕಳಿಸಿದ ದುಡ್ಡಿನಲ್ಲಿ ಅವರು ತಮ್ಮ ಮಕ್ಕಳ ಮದುವೆ ಮಾಡಿಲ್ಲ,
ದೇವಸ್ಥಾನದ ಪುಣ್ಯ ಕಾರ್ಯಕ್ಕೆ ಕೈ ಹಚ್ಚಿದ ಕೂಡಲೇ ಅವರ ಕೌಟುಂಬಿಕ ಕಾರ್ಯಗಳನ್ನೂ ಆ ವೆಂಕಟೇಶ್ವರ ಸ್ವಾಯೇ ಲೀಲಾ ಜಾಲವಾಗಿ ನಡೆಸಿ ಇವರನ್ನು ಐಕ ಜವಾಬ್ದಾರಿ, ಚಿಂತೆಗಳಿಂದ ಮುಕ್ತಗೊಳಿಸಿದ ಎಂಬರ್ಥವಾದ, ದೇವಸ್ಥಾನದ ಕಟ್ಟಡ ಮೇಲೇರಿ ದಂತೆಲ್ಲ ಇವರ ಜವಾಬ್ದಾರಿಗಳನ್ನು ಕೆಳಗಿಳಿಸುತ್ತಾ, ಇವರ ಭಾರವನ್ನು ಕಡಿಮೆ ಮಾಡಿದ ಎಂದು ಅರ್ಥೈಸಿಕೊಳ್ಳಬೇಕು ಎಂದು ಅಪ್ಪಣೆ ಕೊಡಿಸಿದಾಗ ಸಭೆಯ ಅರ್ಧ ಜನ ಚಪ್ಪಾಳೆ ಹೊಡೆದರೆ, ಇನ್ನರ್ಧ ಜನ ‘ಹಾಗಿರಲಿಕ್ಕಿಲ್ಲ’ ಎಂದು ಕಣ್ಣು ಹೊಡೆದರು.

ಸುಮ್ಮನಿರದ ಭೋಳೇ ಭವಾನಿರಾಯ ಸ್ವಾಮಿಗಳು ನಾನು ಏನು ಮಾಡಿದರೂ ಹೀಗೆ ನನ್ನನ್ನು ಸಮರ್ಥಿಸಿಕೊಳ್ಳುತ್ತಾರೆ. ನನ್ನ ಪುಣ್ಯ ದೊಡ್ಡದು ಎಂದು ಸಾಷ್ಟಾಂಗ ನಮಸ್ಕಾರ ಮಾಡಿದ.