Thursday, 12th December 2024

ಸಾಮಾಜಿಕ ಮಾಧ್ಯಮಗಳಲ್ಲಿ ಭಕ್ತರು ಮತ್ತು ಗುಲಾಮರು

ಅವಲೋಕನ

ಚಂದ್ರಶೇಖರ ಬೇರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಬಳಕೆ ಮತ್ತು ಚಲಾವಣೆಯಲ್ಲಿರುವ ಹೆಸರುಗಳ ಪೈಕಿ ‘ಭಕ್ತರು ಮತ್ತು ಗುಲಾಮರು’
ಎಂಬೆರಡು ನಾಮಾವಳಿಗಳು ವಿಶೇಷವಾಗಿ ಕಂಡುಬರುತ್ತಿದ್ದು, ಭಾರತದಲ್ಲಿ ಇದೊಂದು ವಿಲಕ್ಷಣ ಬೆಳವಣಿಗೆ.

ಭಕ್ತರು ಮತ್ತು ಗುಲಾಮರು ಎಂಬುದು ಎರಡು ರಾಜಕೀಯ ಪಕ್ಷಗಳ ಬೆಂಬಲಿಗರಾಗಿರುವವರು ಪರಸ್ಪರ ಟೀಕೆಗೆ, ಅವಹೇಳನಕ್ಕೆ
ಇಟ್ಟುಕೊಂಡಿರುವ ಹೆಸರುಗಳು. ಹಾಗಾದರೆ ಇಲ್ಲಿ ಭಕ್ತರು ಮತ್ತು ಗುಲಾಮರು ಯಾರು ಎಂದರೆ ಬಿಜೆಪಿಯ ಸಮರ್ಥಕರು ‘ಭಕ್ತರು’ ಎಂದೆನಿಸಿಕೊಂಡರೆ ಕಾಂಗ್ರೆಸ್ ಪಕ್ಷದ ಸಮರ್ಥಕರು ‘ಗುಲಾಮರು’ ಎನಿಸಿಕೊಂಡರು. ಹಾಗಾಗಿ ಈ ಎರಡು ವರ್ಗಗಳನ್ನು
ಅದೇ ಹೆಸರಿನಲ್ಲಿ ಯಥಾ ವತ್ತಾಗಿ ಉಲ್ಲೇಖಿಸಿ ಬರವಣಿಗೆ ಮುಂದುವರಿಸುವುದು ಸೂಕ್ತ ಎನಿಸುತ್ತದೆ.

ರಾಜಕೀಯ ಪಕ್ಷಗಳ ಬೆಂಬಲಿಗರ ನಡುವಿನ ಮಾರಾಮಾರಿ ಕೇವಲ ಭಾರತದಲ್ಲಿ ಮಾತ್ರ ಕಂಡುಬರುವಂತದಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲೂ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಆದರೆ ಭಾರತದಲ್ಲಿ ಸ್ವಲ್ಪ ಭಿನ್ನವಾಗಿ ಕಾಣಿಸಿಕೊಂಡಿದೆ.
‘ಭಕ್ತರು ಮತ್ತು ಗುಲಾಮರು’ ಎಂಬ ಹೆಸರುಗಳು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರೊಂದಿಗೆ ಜೋಡಣೆಗೊಂಡಿದ್ದೇ ವಿಶೇಷ. ಬಿಜೆಪಿ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಹೆಚ್ಚಿನ ಅಭಿಮಾನ, ನಿಷ್ಠೆ ವ್ಯಕ್ತಪಡಿಸಿದ್ದಕ್ಕಾಗಿ ಅವರ
ಬೆಂಬಲಿಗರನ್ನು ಟ್ರೋಲ್ ಮಾಡಲು ಭಕ್ತರು ಎಂದು ಕರೆದಿರಬಹುದು ಮತ್ತು ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್, ಅದರಲ್ಲೂ ವಂಶಾಡಳಿತಕ್ಕೆ ನಿಷ್ಠರಾಗಿ ಅಥವಾ ವಿಧೇಯರಾಗಿರುವ ಸಮೂಹವನ್ನು ಟ್ರೋಲ್ ಮಾಡಲು ಗುಲಾಮರು ಎಂದು ಕರೆದಿರ
ಬಹುದು.

ಇವೆರಡರಲ್ಲಿ ಮೊದಲನೆಯದಾಗಿ ಚಲಾವಣೆಯಾದ ಹೆಸರು ಯಾವುದು ಎಂಬುದು ತಿಳಿಯದು. ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಯಾವುದೇ ನಿರ್ಧಾರಗಳನ್ನು ಅಥವಾ ಹೇಳಿಕೆಗಳನ್ನು ಬಿಜೆಪಿಯ ಬೆಂಬಲಿಗರು ಸಮರ್ಥಿಸಿಕೊಂಡರೆ ಕಾಂಗ್ರೆಸ್ ನಾಯಕರು ಅದರಲ್ಲೂ ಗಾಂಧಿ ಪರಿವಾರದ ನಾಯಕರ ಯಾವುದೇ ನಿರ್ಧಾರ ಅಥವಾ ಹೇಳಿಕೆಗಳನ್ನು ಕಾಂಗ್ರೆಸ್ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಾರೆ. ತಮ್ಮ ನಾಯಕರ ನಿರ್ಧಾರಗಳು, ಹೇಳಿಕೆಗಳು ಸರಿಯೋ ಅಥವಾ ತಪ್ಪೋ ಎಂಬ
ಬಗ್ಗೆ ಒಂದು ಕ್ಷಣ ಯೋಚಿಸಿ ವಿಮರ್ಶೆ ಮಾಡುವ ಗೋಜಿಗೂ ಹೋಗುವುದಿಲ್ಲ.

ಕ್ಷಣ ಮಾತ್ರದಲ್ಲಿ ಪರ ಮತ್ತು ವಿರೋಧಕ್ಕೆ ಸಮರ್ಥನೆಗಳು, ಚರ್ಚೆಗಳು ಆರಂಭವಾಗುತ್ತವೆ. ಬಿಜೆಪಿಯ ಸಮರ್ಥಕರು ಭಕ್ತರು ಎಂದು ಕರೆಯಿಸಿಕೊಳ್ಳುವುದರಲ್ಲೇ ಖುಷಿಪಟ್ಟರೆ ಕಾಂಗ್ರೆಸ್ ಸಮರ್ಥಕರಿಗೆ ಉಭಯ ಸಂಕಟ. ಅತ್ತ ಗುಲಾಮರು ಎಂದು
ಕರೆಯಿಸಿಕೊಳ್ಳುವಂತೆಯೂ ಇಲ್ಲ, ಇತ್ತ ಹಾಗೆ ಕರೆಸಿಕೊಳ್ಳದೆ ವಿಧಿಯೂ ಇಲ್ಲ. ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ
ವನ್ನು ಅತ್ಯಧಿಕವಾಗಿ ಆಕ್ರಮಿಸಿ ಕೊಂಡವರು ಭಕ್ತರು ಮತ್ತು ಗುಲಾಮರಾಗಿದ್ದು, ಅತೀ ಹೆಚ್ಚಿನ ಬಾರಿಗೆ ಟ್ರೆಂಡ್ ಆಗಿರುವ ಹ್ಯಾಶ್‌ಟ್ಯಾಗ್‌ಗಳ ಪೈಕಿ ಭಕ್ತ ಮತ್ತು ಗುಲಾಮ ಎಂಬ ಹೆಸರಿನ ಹ್ಯಾಶ್‌ಟ್ಯಾಗ್ ಗಳೂ ಸೇರಿಕೊಂಡಿವೆ.

ಈ ಹೆಸರುಗಳಲ್ಲಿ ಅತಿ ಭಯಂಕರ ವ್ಯಕ್ತಿಗತ ಟೀಕೆಗಳು, ಅವಹೇಳನಗಳು, ನಿಂದನಾತ್ಮಕ ಮತ್ತು ವ್ಯಕ್ತಿತ್ವಕ್ಕೆ ಅಪಚಾರ ಮಾಡು ವಂಥ ಅದೆಷ್ಟೋ ಆಕ್ಷೇಪಾರ್ಹ ಪೋಸ್ಟ್‌ಗಳು ವಿನಿಮಯಗೊಂಡಿದ್ದು, ಭಕ್ತರಿಗೆ ಉತ್ತರವಾಗಿ ಗುಲಾಮರು ಮತ್ತು ಗುಲಾಮರಿಗೆ ಪ್ರತ್ಯುತ್ತರವಾಗಿ ಭಕ್ತರು ಈ ಪೋಸ್ಟ್ ಗಳ ರೂವಾರಿಗಳು. ಇವುಗಳ ಪೋಷಕರು ರಾಜಕೀಯ ಪಕ್ಷಗಳು ಎಂಬುದು ನಿಸ್ಸಂಶಯ. ಇಂತಹ ಬೆಳವಣಿಗೆಗಳಿಂದಲೇ ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ಪರಸ್ಪರ ಗಲಾಟೆಗಳು, ಹೊಡೆದಾಟಗಳು ಸಾಮಾನ್ಯ ವಾಗಿ ಬಿಟ್ಟಿವೆ.

2014ರಿಂದ ಬಿಜೆಪಿಯ ನಾಗಾಲೋಟದ ಗೆಲುವು ಬಿಜೆಪಿ ಬೆಂಬಲಿಗರನ್ನು ಉತ್ತೇಜಿಸಿದರೆ ಕಾಂಗ್ರೆಸ್‌ನ ನಿರಂತರ ಸೋಲು ಕಾಂಗ್ರೆಸ್ ಬೆಂಬಲಿಗರನ್ನು ಹತಾಶೆಗೀಡು ಮಾಡಿರಬಹುದು. ಕೇಂದ್ರ ಸರಕಾರದ ಆಡಳಿತ ವೈಖರಿ ಮತ್ತು ಎಲ್ಲಾ ನಿರ್ಧಾರ ಗಳನ್ನು ಗುಲಾಮರು ವಿರೋಧಿಸುತ್ತಾರೆ. ಮೋದಿ ನಾಯಕತ್ವವನ್ನು ಅನ್ಯ ರಾಷ್ಟ್ರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಸ್ವದೇಶಿ ಅಥವಾ ವಿದೇಶಿ ನಾಯಕರುಗಳು ಟೀಕಿಸಿದರೆ ಗುಲಾಮರು ಸಂತಸಗೊಳ್ಳುತ್ತಾರೆ.

ಹಾಗೆಯೇ ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿಯ ಸಮಯದಲ್ಲಾದ ಸ್ವಾಭಾವಿಕ ತೊಂದರೆ ಗಳು, ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳ ರೇಟಿಂಗ್‌ನಲ್ಲಿ ಭಾರತದ ಆರ್ಥಿಕತೆಯ ಕುಸಿತದ ಉಲ್ಲೇಖದ ಬಗ್ಗೆ ಹಾಗೂ ಚುನಾವಣೆಯಲ್ಲಿ ಬಿಜೆಪಿ
ಗೆಲುವಿನ ಕ್ರೆಡಿಟ್ ಇಎಂಗೆ ಸಲ್ಲಬೇಕೆಂದು ಗುಲಾಮರು ಸಾಮಾಜಿಕ ಜಾಲತಾಣಗಳ ಮೂಲಕ ಅಬ್ಬರಿಸಿದರು. ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಮಸೂದೆಯ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಹೋರಾಟದ ವಿಚಾರವನ್ನು ಮುಂದಿಟ್ಟುಕೊಂಡು
ಟೀಕಿಸಲು ಗುಲಾಮರಿಗೆ ಸಿಕ್ಕ ಮತ್ತೊಂದು ಅವಕಾಶವಾಗಿದೆ.

ಆದರೆ ನರೇಂದ್ರ ಮೋದಿಯವರ ಕಾರ್ಯ ವೈಖರಿ ಮತ್ತು ಆ ಪ್ರಕಾರವಾಗಿ ಕೇಂದ್ರ ಸರಕಾರ ತೆಗೆದುಕೊಂಡ ಇಲ್ಲಿವರೆಗಿನ ನಿರ್ಧಾರಗಳು ಹಾಗೂ ಕಾಂಗ್ರೆಸ್‌ನ ಇತ್ತೀಚೆಗಿನ ಸಾಲು – ಸಾಲು ಸೋಲುಗಳು ಭಕ್ತರು ಸಂಭ್ರಮಿಸುವಂತೆ ಮಾಡಿತ್ತು. ಪ್ರಧಾನಿ ಮೋದಿಯವರ ಜನ್ಮ ದಿನವನ್ನು ನಿರುದ್ಯೋಗಿ ದಿನ ಎಂದು ಗುಲಾಮರು ಆಚರಿಸಿದರೆ, ಸೋನಿಯಾ ಗಾಂಧಿಯವರ ಜನ್ಮ
ದಿನವನ್ನು ಬಾರ್ ಡ್ಯಾನ್ಸರ್ ದಿನ, ಭ್ರಷ್ಟಾಚಾರ ವಿರೋಧಿ ದಿನ (ಕಾಕತಾಳೀಯ ಎಂಬಂತೆ ಡಿಸೆಂಬರ್ 9 ಸೋನಿಯಾ ಗಾಂಧಿ ಯವರ ಜನ್ಮ ದಿನವೂ ಹೌದು, ಭ್ರಷ್ಟಾಚಾರ ವಿರೋಧಿ ದಿನವೂ ಹೌದು), ರಾಹುಲ್ ಗಾಂಧಿ ಜನ್ಮ ದಿನವನ್ನು ಪಪ್ಪು ದಿನ, ಮೂರ್ಖರ ದಿನ ಎಂದು ಭಕ್ತರು ಆಚರಿಸಿದರು.

ಈಗ ಹೊಸದಾಗಿ ಭಕ್ತರು ಮತ್ತು ಗುಲಾಮರ ಮಧ್ಯೆ ಕರೋನಾ ಲಸಿಕೆ ಮತ್ತು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ವಿಚಾರವಾಗಿ ಪರಸ್ಪರ ಕಾದಾಟ ಆರಂಭವಾಗಿದೆ. ಕರೋನಾ ಲಸಿಕೆಯನ್ನು ಮೊದಲು ನರೇಂದ್ರ ಮೋದಿಯವರೇ ಹಾಕಿಸಿ ಕೊಳ್ಳಬೇಕು ಎಂಬುದು ಪ್ರತಿಪಕ್ಷಗಳು ಮತ್ತು ಗುಲಾಮರ ಕೂಗು. ಭಕ್ತರು ಮತ್ತು ಗುಲಾಮರ ನಡುವೆ ದೊಡ್ಡ ಕಂದಕ ಸೃಷ್ಟಿ ಯಾಗಲು ಸಾಮಾಜಿಕ ಜಾಲ ತಾಣಗಳ ವಿವೇಚನಾ ರಹಿತ ಬಳಕೆಯೇ ಕಾರಣ ಎಂದರೆ ತಪ್ಪಾಗಲಾರದು.

ದೇಶದಲ್ಲಿ ವೈಚಾರಿಕ ಭಿನ್ನಾಭಿಪ್ರಾಯಕ್ಕಿಂತಲೂ ಹೊರತಾದ ಟೀಕೆ ಟಿಪ್ಪಣಿಗಳು ಮೇಳೈಸುತ್ತಿದೆ. ಯಾವುದೇ ಪಕ್ಷದ ಬೆಂಬಲಿಗರು ಅಥವಾ ವಿಚಾರಧಾರೆಗಳ ಸಮರ್ಥಕರಾಗಿದ್ದರೂ ಸರಿಯಾದ ರೀತಿಯಲ್ಲಿ ಚಿಂತಿಸಿ, ವಿಮರ್ಶೆ ಮಾಡಿ ಪ್ರತಿಕ್ರಿಯಿಸುವ ಅಥವಾ ಸಮರ್ಥನೆ ಮಾಡಿಕೊಳ್ಳುವ ಬದಲು ಅವಿವೇಕಿಗಳಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವರ್ತಿಸುವುದು ಸ್ವೀಕಾರರಾರ್ಹವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮನಸೋಇಚ್ಛೆ ಉಪಯೋಗಿಸಿಕೊಳ್ಳುವುದರಲ್ಲಿ ಭಾರತೀಯರೇ ಮುಂದು ಮತ್ತು ಇದು ಬೌದ್ಧಿಕ ದಿವಾಳಿತನ ಎಂದರೆ ತಪ್ಪಾಗಲಾರದು.

ರಚನಾತ್ಮಕ ಟೀಕೆಗಳು ಸುಧಾರಣೆಯ ಅವಕಾಶವನ್ನು ಕಲ್ಪಿಸುತ್ತದೆ ಮತ್ತು ರಾಜಕೀಯ ಪಕ್ಷಗಳನ್ನು ಬಲಪಡಿಸುತ್ತದೆ ಎಂಬು ದನ್ನು ಅರಿಯಲು ಪಕ್ಷದ ಮುಖಂಡರು ಮತ್ತು ಬೆಂಬಲಿಗರು ವಿಫಲರಾಗಿದ್ದಾರೆ. ಯಾವುದೇ ವಿಚಾರದ ಬಗ್ಗೆ ಪಕ್ಷದ ಅಗ್ರ ಪಂಕ್ತಿಯ ನಾಯಕರು ಒಮ್ಮೆ ಉಸುರಿದರೆ ನಂತರದ ಕೆಲಸವನ್ನು ಬೆಂಬಗಲಿಗರು ಮತ್ತು ಸಮರ್ಥಕರು ನಿಷ್ಠೆಯಿಂದ ಮಾಡು ತ್ತಾರೆ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷದವರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೆ ನಿದರ್ಶನ ಪ್ರಸ್ತುತ ಭಕ್ತರು ಮತ್ತು ಗುಲಾಮರ ನಡವಳಿಕೆಗಳು. ಇದು ನಿಜವಾಗಲೂ ಬೆಂಬಲಿಗರ ಅಪ್ರಬುದ್ಧತೆ ಮತ್ತು ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡಂತೆ.

ದೇಶದೊಳಗೆ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನು ಅಭಿವ್ಯಕ್ತಿಗೊಳಿಸಲು ಅತ್ಯಂತ ಕೆಳ ಮಟ್ಟಕ್ಕೆ
ಇಳಿಯುವುದು ಸೂಕ್ತವಲ್ಲ. ಆದರೆ ಭಾರತದಲ್ಲಿ ಇದೊಂದು ಅನಪೇಕ್ಷಿತ ಪ್ರವೃತ್ತಿಯಾಗಿದ್ದು, ಒಂದು ವರ್ಗ ಸಂಭ್ರಮಿಸಲೇ ಬೇಕು ಎಂದು ಸಂಭ್ರಮಿಸಿದರೆ ಇನ್ನೊಂದು ವರ್ಗ ವಿರೋಧ ಮಾಡಲೇ ಬೇಕು ಎಂದು ವಿರೋಧಿಸುವಂತಿದೆ. ಸಾಮಾಜಿಕ ಮಾಧ್ಯಮಗಳ ಪೈಕಿ ಫೇಸ್‌ಬುಕ್‌ನಲ್ಲಿ ಅಸಭ್ಯ, ಅಪ್ರಬುದ್ಧ ಮತ್ತು ವಿವಾದಾತ್ಮಕ ಪೋಸ್ಟ್ ಗಳು ಸಾಮಾನ್ಯವಾಗಿ ಕಂಡು ಬರುತ್ತಿದ್ದರೆ ಸಭ್ಯರು ಮತ್ತು ಪ್ರಬುದ್ಧರ ಸಾಮಾಜಿಕ ಮಾಧ್ಯಮವಾಗಿ ಟ್ವಿಟರ್ ಗುರುತಿಸಿಕೊಂಡಿತ್ತು.

ಆದರೆ ಕೆಲವು ಅಧಿಕ ಪ್ರಸಂಗಿಗಳು ಈಗ ಟ್ವಿಟರ್‌ಗೂ ಲಗ್ಗೆಯಿಟ್ಟು ಅಲ್ಲೂ ಪಾರಮ್ಯ ಸಾಧಿಸಿದ್ದಾರೆ. ಲೋಪ ರಹಿತ ಶುದ್ಧ
ಕನ್ನಡದಲ್ಲಿ ಬರೆಯಲು ಗೊತ್ತಿಲ್ಲದವರೂ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಟಿಪ್ಪಣಿ ಮತ್ತು ಲೇವಡಿಗಳಲ್ಲಿ ತೊಡಗಿಸಿ ಕೊಂಡು ಕನ್ನಡವನ್ನು ಇನ್ನಷ್ಟು ಕುಲಗೆಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋವರ‍್ಸ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಲೈಕ್ಸ್‌ಗಳನ್ನು ಪಡೆಯುವ ಸಲುವಾಗಿ ಮನ ಬಂದಂತೆ ಅಭಿವ್ಯಕ್ತಿಗೊಳಿಸಲಾಗುತ್ತಿದೆ. ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ವ್ಯಾಖ್ಯೆಗೆ ಅರ್ಥವೇ ಇಲ್ಲದಂತಾಗಿದೆ.

ಭ್ರಷ್ಟರು, ಸಮಾಜ ಬಾಹಿರ ವ್ಯಕ್ತಿಗಳು ಮುಂತಾದವರ ಪರ ವಕಾಲತ್ತು ವಹಿಸುವುದು ಸಾಮಾನ್ಯವಾಗಿದ್ದು, ಇದು ಭ್ರಷ್ಟರನ್ನು ಇನ್ನಷ್ಟು ಭ್ರಷ್ಟತೆಗೆ ಪೋಷಿಸಿದಂತಾಗುತ್ತದೆ. ಯಾವುದೇ ಮಹತ್ವದ ವಿಚಾರಗಳು ವಿಷಯಾಂತರಗೊಳ್ಳುತ್ತಿರುವುದು ಸಾಮಾಜಿಕ ಮಾಧ್ಯಮಗಳಿಂದಲೇ ಎಂದರೆ ತಪ್ಪಾಗಲಾರದು. ಸರಿ ತಪ್ಪುಗಳನ್ನು ವಿಮರ್ಶೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೇ ತಮ್ಮ ನಾಯಕರ ಪರ ವಕಾಲತ್ತು ವಹಿಸುವುದರಿಂದ ರಾಷ್ಟ್ರೀಯ ಹಿತಾಸಕ್ತಿ ಕಡೆಗಣನೆ ಆಗುತ್ತಿದೆ ಮತ್ತು ಭಾರತದ ನೈಜ ಸಮಸ್ಯೆಗಳು ಆದ್ಯತೆಯನ್ನು ಕಳೆದುಕೊಂಡಿದೆ.

ಸಮರ್ಥನೆಯ ಭರದಲ್ಲಿ ವೈಚಾರಿಕತೆ ದಿವಾಳಿಯಾಗುತ್ತಿದೆ ಮತ್ತು ಜನತೆ ವಿಚಾರ ಶೂನ್ಯರಾಗುತ್ತಿರುವುದನ್ನು ಮೈ ಮರೆತಿದ್ದಾರೆ. ವಿವೇಚನೆ ಇಲ್ಲದ ನಡವಳಿಕೆಯಿಂದಾಗಿ ರಾಜಕೀಯ ನಾಯಕರು ಜನರನ್ನು ಯಥೇಚ್ಛವಾಗಿ ದುರುಪಯೋಗಪಡಿಸಿಕೊಳ್ಳು ತ್ತಿದ್ದಾರೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎನ್ನುವುದನ್ನು ಹಿಂದಿನಿಂದಲೂ ನಿರೂಪಿಸಿಕೊಂಡು ಬಂದಿ ರುವ ರಾಷ್ಟ್ರ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತಲೂ ಯಾವುದು ಸರಿ, ಯಾವುದು ತಪ್ಪು ಎಂಬ ಬಗ್ಗೆ ಚರ್ಚೆ ಯಾಗಬೇಕು.

ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ನಮ್ಮೊಳಗಿದ್ದು, ಯಾವುದನ್ನು ಹೆಚ್ಚು ಉಪಯೋಗಿಸುವೆಯೋ ಅದು ಬೆಳೆಯುತ್ತಾ ಹೋಗುತ್ತದೆ. ಹಾಗೆಯೇ ಮೌಲ್ಯಗಳು ಇರುವುದು ನಮ್ಮ ವ್ಯಕ್ತಿತ್ವದಲ್ಲೇ ಹೊರತು ವಿವೇಕತನವನ್ನು ಬಲಿ ಕೊಡುವುದರಲ್ಲಿ
ಅಲ್ಲ. ದೇಶದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಂದ ಮತ್ತು ರಾಜಕೀಯ ಸಮರಗಳಿಂದಲೇ ನಾವು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ವೈಚಾರಿಕಾ ಭಿನ್ನಾಭಿಪ್ರಾಯ ಏನೇ ಇದ್ದರೂ ಅದನ್ನು ಸೂಕ್ತ ರೀತಿಯಲ್ಲಿ ಅಭಿವ್ಯಕ್ತಿ
ಗೊಳಿಸಬೇಕು.

ಬಿಜೆಪಿಯ ಬೆಂಬಲಿಗರು ಭಕ್ತರು ಮತ್ತು ಕಾಂಗ್ರೆಸ್ ಬೆಂಬಲಿಗರು ಗುಲಾಮರು ಎಂಬ ಹೆಸರಿನಲ್ಲಿ ಕಚ್ಚಾಡಿಕೊಳ್ಳುತ್ತಿರುವುದು ಕೆಟ್ಟ ಸಂಪ್ರದಾಯ. ಈ ರಾಜಕೀಯ ಮೇಲಾಟದಲ್ಲಿ ಅದೆಷ್ಟೋ ಸ್ನೇಹ ಸಂಬಂಧಗಳು ಹಾಳಾಗಿವೆ. ಅಂತಿಮವಾಗಿ ಉಳಿಯು ವುದು ಮನುಷ್ಯ ಸಂಬಂಧಗಳೇ ಹೊರತು ರಾಜಕೀಯ ಸಂಬಂಧಗಳಲ್ಲ. ರಾಜಕೀಯ ನಾಯಕರನ್ನು ಮೆಚ್ಚಿಸಲಿಕ್ಕಾಗಿ ಸ್ವಾಭಿ ಮಾನವನ್ನು ಬಲಿ ಕೊಟ್ಟು ಪ್ರಜ್ಞಾಹೀನರಂತೆ ವರ್ತಿಸುವುದು ದುರದೃಷ್ಟಕರ.