Sunday, 15th December 2024

ರೋಲೆಕ್ಸ್ ಎಂಬ ರೋಲ್‌ ಮಾಡೆಲ್

ನಾಡಿಮಿಡಿತ

ವಸಂತ ನಾಡಿಗೇರ

ಅನಾಥನಿಂದ ವಿಶ್ವ ವಿಖ್ಯಾತ ಕನಸಿಗೆ ಕಾಸು ಬೇಕಿಲ್ಲ ಛಲವೇ ಬಲ ಗುಣ‘ಮಟ್ಟ’ದಲ್ಲಿ ರಾಜಿ ಇಲ್ಲಪರಿಪೂರ್ಣತೆಯೇ ಯಶಸ್ಸಿನ ಒರತೆ ಕೆರೆಯ ನೀರನು ಕೆರೆಗೆ ಚೆಲ್ಲು ಈ ಎಲ್ಲವನ್ನೂ ಒಟ್ಟುಗೂಡಿದರೆ ಬರುವ ಹೆಸರು ಹ್ಯಾನ್ಸ್ ವಿಲ್ಸ್‌ಡಾರ್ಫ್‌ ಮತ್ತು ರೋಲೆಕ್ಸ್.
ರೋಲೆಕ್ಸ್ ಎಂದರೆ ಗೊತ್ತು.

ಅತ್ಯಂತ ದುಬಾರಿ,  ಐಷಾರಾಮಿ, ಜನಪ್ರಿಯ ವಾಚ್ ಬ್ರ್ಯಾಂಡ್. ಆದರೆ ಯಾರೀ ಹ್ಯಾನ್ಸ್ ಎಂದಿರಾ ? ಆತನೇ ರೋಲೆಕ್ಸ್‌ನ ರೂವಾರಿ. ಈ ಕಂಪನಿಯ ಸಂಸ್ಥಾಪಕ. ರೋಲೆಕ್ಸ್ ವಾಚ್ ಇಂದೇನಾಗಿದೆಯೋ ಅದಕ್ಕೆ ಕಾರಣಕರ್ತ. ಕನಸುಗಾರ, ಛಲಗಾರ, ವಿಷನರಿ, ಪರ್ಫೆಕ್ಷನಿಸ್ಟ್, ಕೊಡುಗೈ ದೊರೆ – ಹೀಗೆ ಏನು ಬೇಕಾದರೂ ಹೇಳಿ. ಅದಕ್ಕೆ ಅನ್ವರ್ಥಕನಾದಂಥ ವ್ಯಕ್ತಿ.

ನಾವೆಲ್ಲ ಸಮಯದ ಗೊಂಬೆಗಳು, ಕಾಲಕ್ಕೆ ತಕ್ಕಂತೆ ಕುಣಿಯಬೇಕು. ಆದರೆ ಸಮಯವನ್ನು ಸೂಚಿಸುವ ಆ ಸಾಧನದ ಚಹರೆಯನ್ನೇ ಸಂಪೂರ್ಣವಾಗಿ ಬದಲಿಸಿದ ಕೀರ್ತಿ ಇವರದು. ಅದ್ಭುತವಾದ ಕಂಪನಿಯನ್ನು ಹುಟ್ಟುಹಾಕಿ, ಅದನ್ನು ಜನಪ್ರಿಯ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಹೊರಹೊಮ್ಮುವ ಮಟ್ಟಕ್ಕೆ ಬೆಳೆಸಿ, ಕೊನೆಗೆ ತನ್ನಿಡೀ ಕಂಪನಿಯನ್ನು ಒಂದು ಟ್ರಸ್ಟ್ ಆಗಿ ಪರಿವರ್ತಿಸಿ ಸಕಲ ಸಂಪತ್ತು ಮತ್ತು ಕಾರುಬಾರನ್ನು ಅದಕ್ಕೆ ಒಪ್ಪಿಸಿದ ಧೀಮಂತ.

ಹ್ಯಾನ್ಸ್ ವಿಲ್ಸ್‌ಡಾ- ಹಾಗೂ ರೋಲೆಕ್ಸ್ ಕಂಪನಿಯ ಕಥೆಯನ್ನು ಕೇಳಿದರೆ ನಿಜಕ್ಕೂ ರೋಮಾಂಚನವಾಗುತ್ತದೆ. ಅದೊಂದು ಅದ್ಭುತ, ರೋಚಕ ಕಥೆ. ಕನಸು, ಛಲ, ಪರಿಶ್ರಮ, ದೂರದೃಷ್ಟಿ, ಗುಣಮಟ್ಟ, ಪರಿಪೂರ್ಣತೆ, ಕೊನೆಗೆ ಒಂದು ನಿರಾಳಭಾವ – ಇವೆಲ್ಲವೂ ಆ ಕಥೆಯಲ್ಲಿದೆ. ಆ ಕಾರಣಕ್ಕೇ ರೋಲೆಕ್ಸ್ ಎಂಬ ರೋಲ್ ಮಾಡೆಲ್ ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದು.

ಅವರ ಜೀವನ ನಡೆದುಬಂದ ದಾರಿಯನ್ನೊಮ್ಮೆ ಅವಲೋಕಿಸಿದರೆ ಇದರ ಪರಿಚಯ ಇನ್ನು ಚೆನ್ನಾಗಿ ಆದೀತು. ಹ್ಯಾನ್ಸ್ ವಿಲ್ಸ್‌ಡಾರ್ಫ್ ಹುಟ್ಟಿದ್ದು 1881ರ ಮಾರ್ಚ್ 24 ರಂದು. ಜರ್ಮನಿಯಲ್ಲಿ. ಚಿಕ್ಕ ವಯಸ್ಸಿನಲ್ಲೇ ತಾಯಿ ತೀರಿಕೊಂಡರು. 12ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡು ತಂದೆ ತಾಯಿ ಇಲ್ಲದ ತಬ್ಬಲಿಗಳಾದರು. ಅನಾಥರಾದರು. ಹಾಗೆಂದು ಇವರ ಕುಟುಂಬ ಬಡತನದ ಬೇಗೆಯಲ್ಲೇನೂ ಬೇಯುತ್ತಿರಲಿಲ್ಲ. ಆದರೆ ಪಾಲಕರಿಬ್ಬರೂ ಕಾಲವಾದಾಗ ಇವರ ಚಿಕ್ಕಪ್ಪಂದಿರು ಆಸ್ತಿಯನ್ನೆಲ್ಲ ಮಾರಾಟ ಮಾಡಿದರು.

ಹ್ಯಾನ್ಸ್ ಮತ್ತು ಇತರ ಒಡಹುಟ್ಟಿದವರು ಬೋರ್ಡಿಂಗ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಬೇಕಾಯಿತು. ಒಂದು ಶಿಕ್ಷಣ ಅಂತ ಪೂರೈಸಿ ಅಲ್ಲಿಂದ ಸ್ವಿಜರ್ಲೆಂಡ್‌ಗೆ ಹೋದರು. ಅಲ್ಲಿ ಅದೂ ಇದೂ ಅಂತ ಒಂದಷ್ಟು ಕೆಲಸ ಮಾಡಿದ ಬಳಿಕ, ‘ಲಾ ಚಾಕ್ಸ್ ಡಿ ಫಾಂಡ್ಸ್’ ಎನ್ನುವ ಕಂಪನಿಯಲ್ಲಿ ತಳವೂರಿದರು. ಅದೊಂದು ಗಡಿಯಾರ ಉತ್ಪಾದಕ ಕಂಪನಿ. ಅಲ್ಲಿ ಕೆಲಸ ಮಾಡುತ್ತ ಮಾಡುತ್ತ ಗಡಿಯಾರಗಳ ಬಗ್ಗೆ ಒಂದು ರೀತಿಯ ಮೋಹ ಬೆಳೆಯಿತು.

ಹಾಗೆಯೇ ತಮ್ಮ ಜೀವನವನ್ನು ಗಡಿಯಾರದ ಮುಳ್ಳಿಗೆ ಹೋಲಿಸಿಕೊಂಡರು. ಯಾಕೋ ಅದು ನಿಂತಲ್ಲೇ ನಿಂತುಬಿಟ್ಟಿದೆ
ಎಂದೆನಿಸಿತು. ತಮ್ಮ ಬದುಕಿನ ಗಡಿಯಾರಕ್ಕೆ ಕೀಲಿ ಕೊಡಬೇಕು, ಅದು ಮುಂದಕ್ಕೆ ಓಡಬೇಕು, ಅದೂ ಸರಿಯಾದ ದಿಕ್ಕಿನಲ್ಲಿ
ಎಂಬ ಕನಸು ಮತ್ತು ದೃಢನಿಶ್ಚಯ ಮನೆಮಾಡಿತು. ಆಗ ಅವರು ಅಲ್ಲಿಂದ ನೇರ ಲಂಡನ್‌ಗೆ ಹೊರಟು ನಿಂತರು.
ಅಷ್ಟೊತ್ತಿಗಾಗಲೇ ಹ್ಯಾನ್ಸ್‌ಗೆ 30 ವರ್ಷ ವಯಸ್ಸಾಗಿತ್ತು.

ಕೈಯಲ್ಲಿ ಒಂದಷ್ಟು ಹಣವಿತ್ತು. ತಮ್ಮ ಕನಸಿನ ಹಕ್ಕಿಯ ರೆಕ್ಕೆ ಬಿಚ್ಚಿ ಹಾರಲು ಇದೇ ಸಕಾಲ ಎಂದು ನಿರ್ಧರಿಸಿದರು. ಭಾವ ನೊಂದಿಗೆ ಸೇರಿಕೊಂಡು 1905ರಲ್ಲಿ ವಿಲ್ಸ್‌ಡಾರ್ಫ್‌ ಆಂಡ್ ಡೇವಿಸ್ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿದರು. ಬಿಡಿ ಭಾಗಗಳನ್ನು ತರಿಸಿಕೊಂಡು ಗಡಿಯಾರಗಳನ್ನು ತಯಾರಿಸಿ ಮಾರಾಟ ಮಾಡುವ ಸಣ್ಣ ಉದ್ಯಮವದು. ಯಾರಾದರೂ ಒಂದು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದರೆ ಎಲ್ಲರೂ ಅಲ್ಲಿಗೇ ನುಗ್ಗುವುದು. ಆದರೆ ಅನೇಕರು ಅಲ್ಲಿ ಏಗಲಾರದೆ ಮುಗ್ಗರಿಸುವುದು ಸಹಜ. ಪರಿಣಾಮ ಏನು ಗೊತ್ತೆ? ಇಬ್ಬರಿಗೂ ಲಾಭ ಹಂಚಿಕೆಯಾಗುತ್ತದೆ.

ಇಲ್ಲವೆ ಇಬ್ಬರೂ ಮುಳುಗುತ್ತಾರೆ. ಅಥವಾ ಒಬ್ಬನು ಬಾಗಿಲು ಮುಚ್ಚಿಕೊಂಡು ಹೋಗುತ್ತಾನೆ. ಎಲ್ಲೆಡೆ ಇದೇ ಕಥೆ, ಇದೇ ವ್ಯಥೆ. ಯಾರೂ ಹೊಸತನ್ನು ಹೊಸೆಯಲೊಲ್ಲರು. ವಿಭಿನ್ನವಾಗಿ ಯೋಚಿಸಲೊಲ್ಲರು. ಎಲ್ಲರೂ ಕಾಪಿಕ್ಯಾಟ್‌ಗಳು. ಆದರೆ ಹ್ಯಾನ್ಸ್‌ಗೆ ಈ ಅಪಾಯವೂ ಗೊತ್ತಿತ್ತು. ಆ ಏಕತಾನತೆಯೂ ಬೇಸರ ತರಿಸಿತ್ತು. ಏನಾದರೂ ಹೊಸದು, ಬೇರೆಯದನ್ನು ಮಾಡಬೇಕೆಂಬ ತುಡಿತ ಇತ್ತು. ತಮ್ಮದೇ ಆದ ಬ್ರ್ಯಾಂಡಿನ ವಾಚ್ ಅನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎಂಬ ಮಹದಾಸೆ ಇತ್ತು. ಆದರೆ ಅದಕ್ಕೊಂದು ಚೆಂದದ ಹೆಸರು ಹುಡುಕ ಬೇಕಾಗಿತ್ತು.

ಒಂದು ದಿನ ಹೀಗೇ ಪ್ರಯಾಣ ಮಾಡುತ್ತಿರುವಾಗ ಒಂದು ಅಚ್ಚರಿ ನಡೆಯಿತು. ವಾಹನದಲ್ಲಿ ಕುಳಿತು ಲಂಡನ್ನಿನ ಬೀದಿಯಲ್ಲಿ ಸಂಚರಿಸುತ್ತಿರುವಾಗ, ಹ್ಯಾನ್ಸ್‌ಗೆ ಅದೆಲ್ಲಿಂದ ಆ ಪದ ಹೊಳೆಯಿತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಯಾರೋ ಬಂದು ಅವರ ಕಿವಿಯಲ್ಲಿ ‘ರೋಲೆಕ್ಸ್’ ಎಂದು ಉಸುರಿದಂತೆ ಭಾಸವಾಯಿತು. ಆರ್ಕಿಮಿಡೀಸ್‌ನ ಯುರೇಕಾದಂತೆಯೇ ಇವರೂ ರೋಲೆಕ್ಸ್ ಎಂದು ಉದ್ಗರಿಸಿದರು. ಹಾಗೆಂದು ರೋಲೆಕ್ಸ್‌ನ ಅರ್ಥ ಏನು ಎಂದು ಕೇಳಿದರೆ ಅವರಿಗೂ ಗೊತ್ತಿರಲಿಲ್ಲ.

ಸರಳವಾಗಿ, ಸುಲಭವಾಗಿ ಉಚ್ಚರಿಸುವಂತಿದೆ. ಇದೇ ಭಾಷೆಯ ಪದ ಎಂಬ ಘಾಟು ಅದರಲ್ಲಿರಲಿಲ್ಲ. ಒಂದು ರೀತಿ ಭಾಷಾತೀತ ಪದ ಅದಾಗಿತ್ತು. ಅಷ್ಟೇ. ಅದೇ ಹೆಸರು ನಿಕ್ಕಿ ಆಯಿತು. 1908ರಲ್ಲಿ ಆ ಹೆಸರನ್ನು ರಿಜಿಸ್ಟರ್ ಮಾಡಿಸಿದ್ದೂ ಆಯಿತು. ಅದಾದ ಬಳಿಕ ಹ್ಯಾನ್ಸ್ ಕಣ್ಣು ನೆಟ್ಟಿದ್ದು ಗಡಿಯಾರಗಳ ರೂಪ, ಸ್ವರೂಪದ ಮೇಲೆ. ಆ ಕಾಲದಲ್ಲಿ ಈಗಿನಂತೆ ಕೈಗಡಿಯಾರಗಳಿರಲಿಲ್ಲ. ರಿಸ್ಟ್ ವಾಚ್ ಅನ್ನುತ್ತೇವಲ್ಲ. ಅಂದರೆ ಮುಂಗೈಗೆ ಕಟ್ಟಿಕೊಳ್ಳುವಂಥವು. ಆ ಗಡಿಯಾರಗಳು ಆಕಾರದಲ್ಲಿ ದೊಡ್ಡದಾಗಿದ್ದವು. ರಿಸ್ಟೋ ವಾಚ್ ಎಂದು ಹೇಳಲಾಗುತ್ತಿತ್ತು. ಅವನ್ನು ಜೇಬಿನಲ್ಲಿ ಇಟ್ಟುಕೊಳ್ಳಲಾಗುತ್ತಿತ್ತು.

ಇಲ್ಲವೆ ಪ್ಯಾಂಟಿನ ಲೂಪ್‌ಗೆ ಇಳಿಬಿಡಬೇಕಾಗಿತ್ತು. ಹ್ಯಾನ್ಸ್ ಮೊದಲು ಕೈಹಾಕಿದ್ದು ಇದರ ಸುಧಾರಣೆಗೆಯತ್ತಲೇ. ಕೈಗೆ ಕಟ್ಟು ವಂಥ ರಿಸ್ಟ್ ವಾಚ್‌ಗಳನ್ನು ರೋಲೆಕ್ಸ್ ಹೆಸರಲ್ಲಿ ಉತ್ಪಾದಿಸಿ ಮಾರುಕಟ್ಟೆಗೆ ಪರಿಚಯಿಸೇ ಬಿಟ್ಟರು. ಅದು ಎಲ್ಲರ ಗಮನ ಸೆಳೆಯಿತು. ಜನಪ್ರಿಯವಾಯಿತು. ಅಲ್ಲಿಂದ ಅವರ ವಾಚ್ ಉದ್ಯಮದ ಪಯಣ ಆರಂಭವಾಯಿತು. 1915ರಲ್ಲಿ ರೋಲೆಕ್ಸ್ ವಾಚಸ್ ಕಂಪನಿ ಲಿಮಿಟೆಡ್ ಎಂದು ಹೆಸರು ಬದಲಾಯಿಸಲಾಯಿತು. ಆಗೆಲ್ಲ, ಅಷ್ಟೇ ಏಕೆ, ಈಗಲೂ ಸ್ವಿಜರ್ಲೆಂಡ್ ದೇಶವು ಚಾಕೊಲೇಟ್ ಮತ್ತು ವಾಚ್‌ಗಳಿಗೆ ಫೇಮಸ್. ಆದರೆ ಇವರ ಕಂಪನಿ ಆರಂಭವಾಗಿದ್ದು ಲಂಡನ್‌ನಲ್ಲಿ. ಮುಂದೆ ಇವರೂ ಕೂಡ
ಜಿನೀವಾದಲ್ಲಿ ಕಚೇರಿ ಆರಂಭಿಸಿದರು.

ಕಂಪನಿಯ ಕಾರ್ಪೊರೇಟ್ ಹೆಸರು ‘ಮಾಂಟ್ರೆಸ್ ರೋಲೆಕ್ಸ್ ಎಸ್‌ಎ’ ಎಂದು ಬದಲಾವಣೆ ಗೊಂಡಿತು. ಈಗ ರೋಲೆಕ್ಸ್ ವಾಚ್
ನೋಡಿದವರಿಗೆ ಗೊತ್ತು. ಅದನ್ನು ಎಲ್ಲರೂ ಗುರುತಿಸುವುದು ಅದರ ಲೋಗೋದಿಂದ. ಐದು ಕೋಡುಗಳಂತಿರುವ ರಚನೆಗಳುಳ್ಳ ಕಿರೀಟವನ್ನು 1925ರಲ್ಲಿ ಅದರ ಟ್ರೇಡ್‌ಮಾರ್ಕ್ ಆಗಿ ಅಳವಡಿಸಿ ಕೊಳ್ಳಲಾಯಿತು. ಕಂಪನಿಯು ಒಂದು ಹಂತಕ್ಕೆ ಬಂದು ನಿಂತ ಬಳಿಕ, ಹ್ಯಾನ್ಸ್ ಗೆ ಅವರ ಮುಂದಿನ ಹಾದಿ, ಗುರಿ ಸ್ಪಷ್ಟವಾಗಿ ಗೋಚರಿಸಿತ್ತು.

ಗುಣಮಟ್ಟ, ಪರಿಪೂರ್ಣತೆ, ನಾವೀನ್ಯತೆ ಮತ್ತು ಅನುಪಮತೆ – ಕಂಪನಿಯ ಹೆಗ್ಗುರುತಾಗಬೇಕು; ತಮ್ಮ ಉತ್ಪನ್ನಗಳು ಉಳಿದವು ಗಳಿಗಿಂತ ವಿಭಿನ್ನವಾಗಿ, ವಿಶೇಷವಾಗಿ ನಿಲ್ಲಬೇಕೆಂಬುದೇ ಅವರ ಹೆಬ್ಬಯಕೆಯಾಗಿತ್ತು. ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ರಾದರು. ಈ ಕಂಪನಿ ಈಗ ರೋಲೆಕ್ಸ್, ಟುಡೋರ್, ಆಯಿಸ್ಟರ್, ಪ್ರೊಫೆಷನಲ್ ಮತ್ತು ಸೆಲಿನಿ ಎಂಬ ವಾಚ್‌ಗಳನ್ನು ಉತ್ಪಾದಿಸು
ತ್ತಿದೆ. 2019ರ ಅಂಕಿಆಂಶಗಳ ಪ್ರಕಾರ ವಾರ್ಷಿಕ 8 ಲಕ್ಷ ವಾಚುಗಳು ಉತ್ಪಾದನೆಯಾಗಿವೆ.

4000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅತಿ ಮೌಲ್ಯಯುತ ಬ್ರ್ಯಾಂಡ್‌ಗಳ ಪೈಕಿ ರೋಲೆಕ್ಸ್ 71ನೇ ಸ್ಥಾನದಲ್ಲಿದೆ. ದುಬಾರಿ ವಾಚಿನ ಬೆಲೆ 3,71,000 ಪೌಂಡ್. ಈ ವಾಚುಗಳಿಗೆ ಐದು ವರ್ಷಗಳ ವಾರಂಟಿ ಇದೆ. ಉತ್ಪನ್ನದ ಬಗ್ಗೆ ವಿಶ್ವಾಸ ಇರುವುದರಿಂದ ಮಾತ್ರ ಇದು ಸಾಧ್ಯ. ಕೈಗಡಿಯಾರಗಳ ನಿಖರತೆ ಎಷ್ಟಿದೆ ಅಂದರೆ ದಿನಕ್ಕೆ +2 ನಿಂದ -2 ಸೆಕೆಂಡ್ ವರೆಗೆ ಮಾತ್ರ ಸಮಯದ ವ್ಯತ್ಯಾಸ ಆಗಬಹುದಷ್ಟೇ. ಹಾಗೆಂದು ಇವು ಯಾವವೂ ಕ್ವಾರ್ಟ್ಜ್ ವಾಚುಗಳಲ್ಲ. ಎಲ್ಲವೂ ಮೆಕ್ಯಾನಿಕಲ್. ಆದರೂ ಆ ನಿಖರತೆ ಇರುತ್ತದೆ. ಹಾಗಿದ್ದರೆ ರೋಲೆಕ್ಸ್ ವಾಚುಗಳು ಇಷ್ಟು ಜನಪ್ರಿಯ ವಾಗಲು, ಅವು ಅಷ್ಟೊಂದು ದುಬಾರಿಯಾಗಲು ಕಾರಣವೇನು? ಈ ಪರಿಯ ವಿಶ್ವಾಸಕ್ಕೆ ಕಾರಣವಾದರೂ ಏನು? ಇದಕ್ಕೆ ಉತ್ತರ ಸ್ಪಷ್ಟ. ಕಂಪನಿಯಲ್ಲಿರುವ ಕೆಲಸದ ಸಂಸ್ಕೃತಿ ಮತ್ತು ರೀತಿ ನೀತಿ.

ಗುಣಮಟ್ಟ ಮತ್ತು ಪರಿಪೂರ್ಣತೆಯಲ್ಲಿ ಯಾವುದೇ ರಾಜಿ ಇಲ್ಲದಿರುವದು ಈ ಪೈಕಿ ಪ್ರಮುಖವಾದುದು. ಹೊಸತನ, ಕೌಶಲ ಮತ್ತು ಜ್ಞಾನದಾಹ. ಬಿಲ್ಟ್ ಟು ಲಾಸ್ಟ್, ಅಂದರೆ ಕಡೆಯತನಕ ನಡೆಯುವಂಥವು ಎಂಬುದು ಕಂಪನಿಯ ತತ್ತ್ವ. ಇದಕ್ಕಾಗಿ ವಾಚ್ ಉತ್ಪಾದನೆ ಮಾಡುವ ಕೆಲಸಗಾರರು, ಎಂಜಿನಿಯರ್‌ಗಳು ಹಾಗೂ ವಿನ್ಯಾಸಗಾರರು ಕೂಡಿ ಕೆಲಸ ಮಾಡುತ್ತಾರೆ. ರೋಲೆಕ್ಸ್ ವಾಚ್‌ನಲ್ಲಿರುವ ಕಣಕಣವೂ ಕಂಪನಿಯ ಸ್ವಂತದ್ದು ಎಂಬುದು ಈ ಪರಿಪೂರ್ಣತೆಗೆ ಮತ್ತೊಂದು ಕಾರಣ. ನಾವು ಒಂದು ಕಾರು, ಮೊಬೈಲ್‌ಗಳನ್ನು ಖರೀದಿಸುತ್ತೇವೆ ಎಂದಿಟ್ಟುಕೊಳ್ಳೋಣ.

ಅವುಗಳ ಎಷ್ಟೋ ಬಿಡಿಭಾಗಗಳನ್ನು ಹೊರಗಡೆಯಿಂದ ತರಿಸಿಕೊಳ್ಳಲಾಗುತ್ತದೆ. ಗುಣಮಟ್ಟದ ಪರೀಕ್ಷೆ ಇರಬಹುದಾದರೂ ಅವು ಸಂಪೂರ್ಣ ವಿಶ್ವಾಸಾರ್ಹ ಎಂಬ ಖಾತರಿ ಇರುವುದಿಲ್ಲ. ಆದರ ರೋಲೆಕ್ಸ್ ನಲ್ಲಿ ಈ ಚಾನ್ಸೇ ಇಲ್ಲ. ಅದು ಪ್ರತಿಯೊಂದರಲ್ಲೂ ಆತ್ಮನಿರ್ಭರ. ವಾಚ್‌ನ ಮುಖ್ಯ ಅಂಗವಾದ ಮೂವ್ ಮೆಂಟ್ ಮತ್ತಿತರ ಯಾಂತ್ರಿಕ ಬಿಡಿಭಾಗಗಳು ಅವರಲ್ಲೇ ತಯಾರಾಗುತ್ತವೆ. ಕೇಸು, ಡಯಲ್ಲು ಎಲ್ಲವೂ ಸ್ವಂತದ್ದು. ಸಾಮಾನ್ಯವಾಗಿ ರೋಲೆಕ್ಸ್ ವಾಚುಗಳಲ್ಲಿ ಚಿನ್ನ, ವಜ್ರ ಮತ್ತು ಹರಳುಗಳನ್ನು ಬಳಸುತ್ತಾರೆ.

ಅವೆಲ್ಲವನ್ನೂ ಕಂಪನಿ ಯಲ್ಲೇ ಎರಕ ಹೊಯ್ಯಲಾಗುತ್ತದೆ. ಅವರದೇ ಆದ ಸ್ವಂತ ತರಬೇತಿ ಕೇಂದ್ರವಿದೆ. ಇಲ್ಲಿ ತಂತ್ರಜ್ಞಾನ, ಕೌಶಲ, ಜ್ಞಾನ ಎಲ್ಲವನ್ನೂ ವರ್ಗಾಯಿಸುತ್ತಾರೆ. ಕೇವಲ ವ್ಯಾವಹಾರಿಕ ಯಶಸ್ಸು, ಲಾಭ ಇವುಗಳು ಮಾತ್ರವಲ್ಲದೆ ಉದ್ಯೋಗಿಗಳ
ಯೋಗಕ್ಷೇಮಕ್ಕೂ ಆದ್ಯತೆ ಮತ್ತು ಒತ್ತು ಕೊಡಲಾಗುತ್ತದೆ. ಕಂಪನಿಯ ಕೆಲವು ಪ್ರಥಮಗಳ ಬಗ್ಗೆ ಇಲ್ಲಿ ಉಲ್ಲೇಖಿಸಲೇಬೇಕು.
ರಿಸ್ಟ್‌ವಾಚ್ ಸರ್ಟಿಫಿಕೇಟ್ ಪಡೆದ ಮೊದಲ ಕಂಪನಿ ಜಲನಿರೋಧಕ ಅಂದರೆ ವಾಟರ್ ಪ್ರೂಫ್‌ ವಾಚ್ ತಯಾರಿಸಿದ ಮೊದಲ ಕಂಪನಿ ಇದು. ಇದಕ್ಕಾಗಿ ಆಳ ಸಮುದ್ರಯಾನ ಕೈಗೊಳ್ಳುವವರಿಗೆ, ಈಜುಪಟುಗಳಿಗೆ ರೋಲೆಕ್ಸ್ ವಾಚ್ ಕಟ್ಟಿ ಕಳುಹಿಸಿ ಪರೀಕ್ಷಿಸ ಲಾಗಿದೆ.

ಎಡ್ಮಂಡ್ ಹಿಲರಿ ಮೌಂಟ್ ಎವರೆಸ್ಟ್ ಆರೋಹಣ ಮಾಡಿದಾಗ ಅವರ ಕೈಯಲ್ಲಿ ರೋಲೆಕ್ಸ್ ವಾಚ್ ಇತ್ತು. ಅಂದರೆ ಅಂಥ ಎತ್ತರ ಮತ್ತು ವಿರಳ ವಾಯು ಇರುವ ಪ್ರದೇಶದಲ್ಲಿ ಅದು ಕೆಲಸ ಮಾಡುತ್ತದೆ. ಅಯಸ್ಕಾಂತೀಯ ಪ್ರಭಾವ ನಿರೋಧಕವಾದವು.
ಇದರಿಂದಾಗಿ ಸಮಯದ ನಿಖರತೆ ಹೆಚ್ಚುತ್ತದೆ. ಮೊದಲೆಲ್ಲ ವಾಚುಗಳಿಗೆ ಕೀಲಿ ಕೊಡಬೇಕಿತ್ತು. ಆಟೊಮ್ಯಾಟಿಕ್ ಆಗಿ ನಡೆಯು ವಂಥ ವಾಚು ಮೊದಲು ತಯಾರಿಸಿದ್ದು ರೋಲೆಕ್ಸ್. ದಿನಾಂಕವನ್ನು ತೋರಿಸುವ ಹಾಗೂ ಅವು ತಾನೇ ತಾನಾಗಿ ಬದಲಾಗುವ ಸೌಲಭ್ಯ ಎರಡು ಟೈಮ್ ಝೋನ್ ತೋರಿಸುವ ಸೌಲಭ್ಯದ ಮೊದಲ ವಾಚ್ ಈ ರೀತಿ ರೋಲೆಕ್ಸ್‌ನ ಪ್ರಥಮಗಳು, ಹೆಗ್ಗಳಿಕೆಗಳಿಗೆ
ಎಣೆಯಿಲ್ಲ.

ಆದರೆ ಇದರಾಚೆಗೂ ಕಂಪನಿ ಹಲವು ವೈಶಿಷ್ಟ್ಯ ಗಳನ್ನು ಹೊಂದಿರುವುದು ಕೂಡ ಉಲ್ಲೇಖಾರ್ಹ. ಮೊತ್ತ ಮೊದಲನೆಯದಾಗಿ, ಈ ಕಂಪನಿ ನಡೆಯುತ್ತಿರುವುದು ಚಾರಿಟೆಬಲ್ ಟ್ರಸ್ಟ್ ಮೂಲಕ. ಹ್ಯಾನ್ಸ್ ವಿಲ್ಸ್‌ಡಾರ್ಫ್‌ ಅವರ ಪತ್ನಿ ಫ್ರಾರೆನ್ಸ್ ಅವರು 1944ರಲ್ಲಿ ಮೃತಪಟ್ಟಾಗ ಬಹುವಾಗಿ ದುಃಖಿತರಾದರು. ಆಕೆಯ ನೆನಪಿನಲ್ಲಿ ಟ್ರಸ್ಟ್ ಸ್ಥಾಪಿಸಿದರು. ಅದರ ಮೂಲಕ ಸಾಕಷ್ಟು ದಾನ ಧರ್ಮದ ಕೆಲಸಗಳನ್ನು ಮಾಡಲಾಗುತ್ತಿದೆ. ಇಂಥ ಸಾರ್ಥಕ ಮತ್ತು ಯಶಸ್ವಿ ಜೀವನ ನಡೆಸಿದ ವಿಲ್ಸ್ ಡಾರ್ಫ್‌ 1960ರಲ್ಲಿ ನಿಧನರಾದರು. ಅವರ ಮರಣಾನಂತರ ಕಂಪನಿಯನ್ನು ಹ್ಯಾನ್ಸ್ ವಿಲ್ಸ್ ಡಾರ್ಫ್‌ ಫೌಂಡೇಶನ್ ಮುನ್ನಡೆಸುತ್ತಿದೆ.

ಇದು ಸ್ವಿಜರ್ಲೆಂಡ್‌ನಲ್ಲಿ ನೋಂದಾಯಿತ ವಾದ ಟ್ರಸ್ಟ್. ಇದಕ್ಕೆ ತೆರಿಗೆ ಇಲ್ಲ. ಕಂಪನಿಯು ತನ್ನ ವಹಿವಾಟು ಕುರಿತು ಮಾಹಿತಿ ಯನ್ನೇನೂ ಹಂಚಿಕೊಳ್ಳುವುದಿಲ್ಲ. ಆದರೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಲಾಭವೃದ್ಧಿ, ಲಾಭ ಬಡುಕತನದ ಮನೋಭಾವ ಇಲ್ಲ. ಬಂದ ಹಣವನ್ನು ಮತ್ತೆ ಕಂಪನಿಯ ವ್ಯವಹಾರಕ್ಕೆ ಬಳಸಲಾಗುತ್ತದೆ.

ಶೇ.90ರಷ್ಟು ಹಣವನ್ನು ದಾನ ಧರ್ಮ, ಸಮಾಜಸೇವೆಗೆ ಬಳಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತವೆ. ಆದರೆ ಅದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಏಕೆಂದರೆ ಈ ಕುರಿತು ಕಂಪನಿಯೂ ಮಾಹಿತಿ ಹಂಚಿಕೊಳ್ಳುವುದಿಲ್ಲ. ಆದರೆ ಅದು ಕೈಗೊಂಡಿರುವ ಸಮಾಜಮುಖಿ ಕಾರ್ಯ ಗಳು ಮಾತ್ರ ಲೆಕ್ಕವಿಲ್ಲದಷ್ಟು. ಬ್ಲಡ್ ಬ್ಯಾಂಕ್‌ಗಳನ್ನು ಆರಂಭಿಸಿದೆ. ಹಿರಿಯ ನಾಗರಿಕರಿಗೆ ನೆರವು ನೀಡುತ್ತಿದೆ.

ಯುರೋಪಿನಾದ್ಯಂತ ವಿದ್ಯಾರ್ಥಿಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತಿದೆ. ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುತ್ತದೆ. ಪ್ರಮುಖ ಟೆನಿಸ್ ಟೂರ್ನಿಗಳನ್ನು, ಆಸ್ಕರ್ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದೆ. ಹಲವಾರು ಪ್ರಶಸ್ತಿಗಳನ್ನು  ನೀಡುತ್ತಿದೆ. ತರಬೇತಿ ನೀಡುವುದು, ಸಂಸ್ಥೆಗಳನ್ನು ನಡೆಸುವುದು – ಹೀಗೆ ಅದರ ಕಾರ್ಯಗಳು ಬಹುಮುಖಿ
ಯಾಗಿವೆ. ಬಹತೇಕ ಕಂಪನಿಗಳು ತಮ್ಮ ಲಾಭದಲ್ಲಿ ಒಂದಂಶವನ್ನು ಸಮಾಜ ಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಅದಕ್ಕೆ ಸಾಕಷ್ಟು ಪ್ರಚಾರವನ್ನೂ ಪಡೆಯುತ್ತಿರುವಾಗ ರೋಲೆಕ್ಸ್ ಕಂಪನಿ ನಡೆಸುವ ಟ್ರಸ್ಟ್ ಮಾತ್ರ ಆದಾಯದ ಬಹು ಅಂಶವನ್ನು ಇಂಥ ಸೇವಾ ಕಾರ್ಯಗಳಿಗೆ ನೀಡುತ್ತಿರುವುದೂ ವಿಶೇಷವೇ.

ನಾಡಿಶಾಸ್ತ್ರ
ನಾವು ಸಮಯದ ಗೊಂಬೆಗಳು
ಎಂದು ಕುಳಿತರೆ ತೀರದು ಗೋಳು
ಸಮಯಕ್ಕೇ ಕೀಲಿಕೊಟ್ಟವರು
ನಮಗೆ ರೋಲ್ ಮಾಡೆಲ್ ಆಗಬಲ್ಲರು.