Friday, 20th September 2024

ಉದುರಿತು ನಾಲ್ಕು ವಿಕೆಟ್‌, ಇನ್ನೂ 208 ಹಿನ್ನಡೆಯಲ್ಲಿ ಭಾರತ

ಬ್ರಿಸ್ಬೇನ್‌: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸೀಸ್‌ ನಡುವಿನ ಗವಾಸ್ಕರ್‌-ಬಾರ್ಡರ್‌ ಟ್ರೋಫಿಯ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಭಾರತ ಭೋಜನ ವಿರಾಮದ ವೇಳೆಗೆ ನಾಲ್ಕು ವಿಕೆಟ್ ನಷ್ಟಕ್ಕೆ 161 ರನ್‌ ಗಳಿಸಿದೆ. ಇದು ಮೂರನೇ ದಿನದ ಇತ್ತೀಚಿನ ಹೈಲೈಟ್ಸ್‌. ಮೊದಲ ಇನ್ನಿಂಗ್ಸ್’ನಲ್ಲಿ ಆತಿಥೇಯ ತಂಡ 369 ರನ್ನುಗಳಿಗೆ ಆಲೌಟಾಗಿದೆ.

ಎರಡನೇ ಇನ್ನಿಂಗ್ಸ್’ನಲ್ಲಿ ಬ್ಯಾಟಿಂಗ್‌ ಮಾಡಲಿಳಿದ ಭಾರತದ ಆಟಗಾರರಿಂದ ಅರ್ಧಶತಕ ಸಿಡಿದಿಲ್ಲ. ಆರಂಭಿಕ ರೋಹಿತ್‌ ಶರ್ಮಾ ಸರ್ವಾಧಿಕ 44 ಹೊಡೆದು ಔಟಾದರು. ಬಳಿಕ, ಚೇತೇಶ್ವರ ಪೂಜಾರ (25), ನಾಯಕ ಅಜಿಂಕ್ಯ ರಹಾನೆ ದೀರ್ಘ ಜತೆಯಾಟ ನೀಡದೆ, ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿ, ವಿಕೆಟ್‌ ಒಪ್ಪಿಸಿದ್ದು, ತಂಡ ಇನ್ನು 208 ರನ್‌ ಹಿನ್ನಡೆಯಲ್ಲಿದೆ. ಮಯಾಂಕ್‌ ಅಗರ್ವಾಲ್‌ ಹಾಗೂ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಬೌಂಡರಿ, ಸಿಕ್ಸರ್‌ಗಳಿಂದಲೇ ರನ್‌ ಗತಿ ಏರಿಸುತ್ತಲೇ ಇದ್ದಾರೆ. ಇವರಿಬ್ಬರಿಂದ ದೀರ್ಘ ಇನ್ನಿಂಗ್ಸ್‌ ಬರಬೇಕಾಗಿದೆ.

ಟೀಂ ಇಂಡಿಯಾದ ನಾಲ್ಕು ವಿಕೆಟ್‌ಗಳನ್ನು ಆಸೀಸ್‌ ಬೌಲರುಗಳು ತಲಾ ಒಂದರಂತೆ ಹಂಚಿಕೊಂಡರು. ಆರಂಭಿಕ ಗಿಲ್‌ ಪ್ಯಾಟ್‌ ಕಮ್ಮಿನ್ಸ್ ಗೆ ಬಲಿಯಾದರು. ರೋಹಿತ್‌ ವಿಕೆ‌ಟ್‌ ಲಿಯೋನ್‌ ಪಾಲಾಯಿತು. ಚೇತೇಶ್ವರ ಪೂಜಾರ ಹ್ಯಾಜಲ್‌ವುಡ್‌ ಗೆ ವಿಕೆ‌ಟ್‌ ಒಪ್ಪಿಸಿದರು. ಅಂತಿಮವಾಗಿ ನಾಯಕ ರಹಾನೆ ಸ್ಟಾರ್ಕ್‌ ಮೋಡಿಗೆ ಒಳಗಾದರು.

ಇದಕ್ಕೂ ಮುನ್ನ ಸೀಮಿತ ಬೌಲಿಂಗ್‌ ಶಕ್ತಿಯನ್ನು ಬಳಸಿಕೊಂಡು ಕೊನೆಯ ಟೆಸ್ಟ್ ಆಡಲಿಳಿದ ಭಾರತ ಆರಂಭದಲ್ಲೇ ಡೇವಿಡ್‌ ವಾರ್ನರ್‌ ವಿಕೆಟ್‌ ಉರುಳಿಸಿ ಆಘಾತ ನೀಡಿತು. ವನ್‌ ಡೌನ್‌ ಆಟಗಾರ ಮಾರ್ಕಸ್‌ ಲ್ಯಾಬುಶ್ಗನ್ನೆ ಇನ್ನಿಂಗ್ಸ್‌ನ ಏಕೈಕ ಶತಕ ಬಾರಿಸಿದರು. ನಾಯಕ ಟಿಮ್‌ ಪೇನ್‌ ಅರ್ಧಶತಕ ಬಾರಿಸಿ, ತಂಡದ ಮೊತ್ತ ಮುನ್ನೂರರ ಗಡಿ ದಾಟಿಸಿದರು. ಬಳಿಕ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌(36), ಕೀಪರ್‌ ಬ್ಯಾಟ್ಸ್ಮನ್‌ ಮ್ಯಾಥ್ಯೂ ವೇಡ್‌(45), ಕ್ಯಾಮರೂನ್‌ ಗ್ರೀನ್‌ (47) ಮತ್ತು ಕೊನೆಯಲ್ಲಿ ವೇಗಿ ಸ್ಟಾರ್ಕ್‌ ಹಾಗೂ ಲಿಯೋನ್‌ ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿ ತಂಡದ ಮೊತ್ತವನ್ನು 350 ರ ಗಡಿ ದಾಟಿಸಿದರು.

ಟೆಸ್ಟ್‌ ಗೆ ಪಾದಾರ್ಪಣೆ ಮಾಡಿದ ಟಿ.ನಟರಾಜನ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಮೂರು ವಿಕೆ‌ಟ್‌ ಕಿತ್ತರು. ಶಾರ್ದೂಲ್‌ ಠಾಕೂರ್‌ ಸಹ ಮೂರು ವಿಕೆಟ್‌ ಕಿತ್ತು, ವಿಕೆಟ್‌ ಬೇಟೆಗೆ ಸಾಥ್‌ ನೀಡಿದರು. ಏಕೈಕ ವಿಕೆ‌ಟ್‌ ಸಿರಾಜ್‌ ಪಾಲಾಯಿತು.

ಅನನುಭವಿ ಬೌಲಿಂಗ್‌ ಪಡೆ ಘಾತಕ ಪ್ರದರ್ಶನ ನೀಡಿದರೂ, ಹಲವು ಕ್ಯಾಚುಗಳನ್ನು ಬಿಟ್ಟ ಕಾರಣ, ಆಸೀಸ್‌ ಸರಾಗವಾಗಿ ರನ್ ಪೇರಿಸಲು ಸಾಧ್ಯವಾಯಿತು. ಮುಖ್ಯವಾಗಿ ಲ್ಯಾಬುಶ್ಗನ್ನೆ ಕ್ಯಾಚನ್ನ ನಾಯಕ ರಹಾನೆ ಬಿಟ್ಟಿದ್ದು, ತಂಡಕ್ಕೆ ದುಬಾರಿಯಾಗಿತು. ಪರಿಣಾಮ, ಆಟಗಾರನಿಂದ ಶತಕ(108) ಹೊರಹೊಮ್ಮಿತ್ತು.

ಈಗಾಗಲೇ ಮೂರು ಟೆಸ್ಟ್’ಗಳಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದು, ಮೂರನೇ ಟೆಸ್ಟ್‌ ಡ್ರಾ ಆಗಿದೆ. ಈ ಪಂದ್ಯದಲ್ಲಿ ಜಯಿಸುವವರು ಕಪ್‌ ಎತ್ತಲಿದ್ದಾರೆ. ಅದರಲ್ಲೂ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲದ ಕಾರಣ, ಸಹಜವಾಗಿ ಟೀಂ ಇಂಡಿಯಾ ಸರಣಿ ಗೆಲ್ಲಬಹುದೆಂಬ ಮಹದಾಸೆ ಸಹಜವಾಗಿಯೇ ಕ್ರೀಡಾ ಅಭಿಮಾನಿಗಳಲ್ಲಿ ಮನೆ ಮಾಡಿದೆ.