ಅವಲೋಕನ
ಪ್ರಕಾಶ್ ಶೇಷರಾಘವಾಚಾರ್
ವಾಜಪೇಯಿ ಅವರ ಆಪ್ತ ಕಾರ್ಯದರ್ಶಿಯಾಗಿ ಬಹಳ ಕಾಲ ಜತೆಗೆ ಇದ್ದ ಶಕ್ತಿ ಸಿನ್ಹರವರು ‘ವಾಜಪೇಯಿ – ಇಯರ್ಸ್ ದಟ್ ಚೇಂಜ್ಡ್ ಇಂಡಿಯಾ’ ತಮ್ಮ ಕಾಲಾವಧಿಯ ಅನುಭವ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಅನೇಕ ಸೋಜಿಗ ಸಂಗತಿಗಳ ಮತ್ತು ಆಸಕ್ತಿಕರವಾದ ರಾಜಕೀಯ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿ ಅಂದಿನ ಹಲವಾರು ನಾಯಕರ ನಿಜವಾದ ಬಣ್ಣವನ್ನು ತೆರೆದಿಟ್ಟಿದ್ದಾರೆ.
ವಾಜಪೇಯಿಯವರ ಉದಾತ್ತ ಗುಣ ಮತ್ತು ಎತ್ತರದ ನಾಯಕತ್ವದ ಮುಂದೆ ಪ್ರಾದೇಶಿಕ ಪಕ್ಷದ ಪಾಳೇಗಾರರು ಕುಬ್ಜರಾಗಿದ್ದರು. ಅನೇಕ ವೈರುಧ್ಯಗಳ ಪಕ್ಷಗಳ ನೆರವಿನಿಂದ ಅಧಿಕಾರ ನಡೆಸಿ ದೇಶವನ್ನು ಅಭಿವೃದ್ಧಿಯ ಪಥಕ್ಕೆ ಕೊಂಡ್ಯೊದ್ದ ವಾಜಪೇಯಿ ಯವರ ಮೇಲಿನ ಗೌರವ ದುಪ್ಪಟ್ಟಾಗುತ್ತದೆ.
ವಾಜಪೇಯಿಯವರ ಹಾಸ್ಯ ಪ್ರಜ್ಞೆ; ವಾಜಪೇಯಿಯವರ ಹಾಸ್ಯಪ್ರಜ್ಞೆಯ ಬಗ್ಗೆ ವಿವರಿಸಿರುವ ಘಟನೆಗಳು ಅವರ ವ್ಯಕ್ತಿತ್ವಕ್ಕೆ
ಮತ್ತಷ್ಟು ಹೊಳಪು ನೀಡುತ್ತದೆ. ವಾಜಪೇಯಿಯವರು ಮತ್ತೊಬ್ಬರನ್ನು ಉದ್ದೇಶಿಸಿ ಹಾಸ್ಯ ಮಾಡದೆ ತಮ್ಮ ಮೇಲೆಯೇ ಹಾಸ್ಯ ಸಂಗತಿಗಳನ್ನು ಹೇಳುತ್ತಿದ್ದರಂತೆ. 98ರಲ್ಲಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ತರುವಾಯ ದೆಹಲಿಯ ಫೈಓವರ್ ಉದ್ಘಾಟನೆಯಲ್ಲಿ ಭಾಗಿಯಾಗಿರುತ್ತಾರೆ.
ಕಾರ್ಯಕ್ರಮದ ನಿರೂಪಕರು ವಾಜಪೇಯಿಯವರನ್ನು ಭೂತಪೂರ್ವ ಪ್ರಧಾನ ಮಂತ್ರಿ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ವಾಜಪೇಯಿಯವರ ಭಾಷಣದ ಸರದಿ ಬಂದಾಗ ಅವರು ನಾನು ಮಾಜಿ ಪ್ರಧಾನಿ ಎಂದು ಗೊತ್ತಿತ್ತು ಆದರೆ ಭೂತ ಯಾವಾಗ ಆದೆ? ಎಂದು ಪ್ರಶ್ನಿಸಿ ಇಡಿ ಸಭೆಯನ್ನು ನಗೆಗಡಲಿನಲ್ಲಿ ಮುಳುಗಿಸುತ್ತಾರೆ.
ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಅಮೆರಿಕಾ ಪ್ರವಾಸದಲ್ಲಿ ಇರುತ್ತಾರೆ. ಹಲ್ಲು ನೋವಿಗಾಗಿ ವೈದ್ಯರನ್ನು ಕಾಣುತ್ತಾರೆ. ದಂತ
ವೈದ್ಯರು ನನ್ನ ಹಲ್ಲು ನೋವಿನ ಇತಿಹಾಸದ ಬಗ್ಗೆ ಪ್ರಶ್ನೆಗಳ ಸರಮಾಲೆಯನ್ನು ಹಾಕುತ್ತಿದ್ದರೆ ನನ್ನ ಮುಖದ ಭೂಗೋಳ
ಬದಲಾಗುತ್ತಿತ್ತುಎಂದು ಹಾಸ್ಯಮಯವಾಗಿ ಅಲ್ಲಿನ ವೈದ್ಯರು ಕೇಳುತ್ತಿದ್ದ ಪ್ರಶ್ನೆಯಿಂದ ತಮಗಾಗುತ್ತಿದ್ದ ಕಿರಿಕಿರಿಯನ್ನು
ವಿವರಿಸುತ್ತಾರೆ.
ಭಾರತದಂತಹ ಬೃಹತ್ ಮತ್ತು ನೂರಾರು ಕೋಟಿ ಜನಸಂಖ್ಯೆಯ ದೇಶದಲ್ಲಿ ಹತ್ತಾರು ಪಕ್ಷಗಳ ಸಮ್ಮಿಶ್ರ ಸರಕಾರ ಎಂತಹ ಅನಾಹುತ ಮಾಡಬಹುದು ಮತ್ತು ಪ್ರಾದೇಶಿಕ ಪಕ್ಷಗಳ ಮುಖಂಡರು ತಮ್ಮ ರಾಜ್ಯಗಳ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ಹೇಗೆ ಸ್ವಂತ ಬೇಳೆ ಬೇಯಿಸಿ ಕೊಳ್ಳುತಿದ್ದರು ಎಂದು ಘಟಾನುಘಟಿ ರಾಜ್ಯ ನಾಯಕರುಗಳ ಬಂಡವಾಳವನ್ನು ಚೆನ್ನಾಗಿಯೇ ಬಿಚ್ಚಿಟ್ಟಿದ್ದಾರೆ.
1996ರಿಂದ 99ರವರೆಗೆ ಒಂದು ರಾಜ್ಯಗಳಿಗೆ ಸೀಮಿತವಾಗಿದ್ದ ಪಕ್ಷಗಳ ಮುಖಂಡರುಗಳು ದೇಶದ ಹಿತವನ್ನು ಬಲಿಕೊಟ್ಟು ತಮ್ಮ
ರಾಜಕೀಯ ಹಿತವನ್ನು ಕಾಪಾಡಿಕೊಳ್ಳಲು ನಡೆಸುತ್ತಿದ್ದ ಕುತಂತ್ರದಿಂದ ದೇಶ 10 ವರ್ಷ ಹಿಂದಕ್ಕೆ ಹೋಗಿದ್ದರಲ್ಲಿ ಯಾವುದೇ
ಅನುಮಾನವಿಲ್ಲ.
ಚಂದ್ರಬಾಬು ನಾಯ್ಡು; ಚಂದ್ರಬಾಬು ನಾಯ್ಡು ಒಬ್ಬ ಸ್ವಾರ್ಥಿ ಮತ್ತು ತನ್ನ ಸ್ವಂತ ಬಲದ ಮೇಲೆಯೇ ನಂಬಿಕೆ ಇಲ್ಲದಿದ್ದ ಅಭದ್ರ ನಾಯಕ. ಈ ಮಹಾನುಭಾವ 1996ರಲ್ಲಿ ಯುನೈಟೆಡ್ ಫ್ರಂಟ್ ಛೇರ್ಮನ್ ಕೇಂದ್ರದಲ್ಲಿ ಯುನೈಟೆಡ್ ಫ್ರಂಟ್ ಸರಕಾರ ರಚನೆ ಮಾಡಿದರೆ ತನ್ನ ಪಕ್ಷದಿಂದ ಸಚಿವ ಸಂಪುಟಕ್ಕೆ ಯಾರ ಹೆಸರನ್ನು ಕೊಡಲು ಸಿದ್ಧವಿರಲಿಲ್ಲ. ಕಡೆಗೆ ಅತ್ಯಂತ ಕಿರಿಯ ಸದಸ್ಯೆ ರೇಣುಕಾ ಚೌಧರಿ ಹೆಸರನ್ನು ಸೂಚಿಸುತ್ತಾರೆ. ಆಕೆ ತನ್ನ ವರ್ಣರಂಜಿತ ವ್ಯಕ್ತಿತ್ವದಿಂದ ದೆಹಲಿಯ ವಲಯದಲ್ಲಿ ಜನಪ್ರಿಯರಾಗಿ ನಾಯ್ಡುರವರ ಕೆಂಗಣ್ಣಿಗೆ ಕಾರಣವಾಗುತ್ತಾರೆ. 98ರ ಲೋಕಸಭಾ ಚುನಾವಣೆಗೆ ಟಿಕೇಟೆ ಕೊಡುವುದಿಲ್ಲ ಮತ್ತು ರಾಜ್ಯಸಭೆಗೂ ನಾಮಕರಣ ಮಾಡುವುದಿಲ್ಲ. ಬೇಸತ್ತ ರೇಣುಕಾ ಚೌಧರಿಯವರು ಟಿಡಿಪಿ ತೊರೆದು ಕಾಂಗ್ರೇಸ್ ಸೇರುತ್ತಾರೆ.
98ರಲ್ಲಿ ಟಿಡಿಪಿ ಲೋಕಸಭೆಗೆ 12 ಸೀಟುಗಳನ್ನು ಗೆಲ್ಲುತ್ತದೆ.
ಬಿಜೆಪಿ 4 ಸೀಟು ಗೆದ್ದು ಶೇಕಡಾ 18ರಷ್ಟು ಮತ ಗಳಿಸಿರುತ್ತದೆ. ಚಂದ್ರಬಾಬು ನಾಯ್ಡುರವರು ವಾಜಪೇಯಿ ಸರಕಾರಕ್ಕೆ ಬೆಂಬಲ
ಸೂಚಿಸುತ್ತಾರೆ. ಆದರೆ ಯಾರನ್ನಾದರೂ ಮಂತ್ರಿ ಮಾಡಬೇಕಾಗುತ್ತದೆ ಎಂದು ಎಷ್ಟೇ ಒತ್ತಡ ಹಾಕಿದರೂ ಕೇಂದ್ರ ಸಂಪುಟ ಸೇರಲು ಸುತರಾಂ ಒಪ್ಪುವುದಿಲ್ಲ.
ಆದರೆ 2014ರಲ್ಲಿ ವಿಧಿಯಿಲ್ಲದೆ ಕೇಂದ್ರ ಸಂಪುಟಕ್ಕೆ ಟಿಡಿಪಿ ಸದಸ್ಯರ ಸೇರ್ಪಡೆಗೆ ಒಪ್ಪಿಗೆ ನೀಡುತ್ತಾರೆ. ಕುಟಂಬದ ಹಿಡಿತ ದಲ್ಲಿರುವ ಪ್ರಾದೇಶಿಕ ಪಕ್ಷದ ನಾಯಕರು ಕೇಂದ್ರದಲ್ಲಿ ತಮ್ಮ ಪಕ್ಷದಿಂದ ಯಾರಾದರು ಸಚಿವರಾದರೆ ಪರ್ಯಾಯಾ ಶಕ್ತಿ ಕೇಂದ್ರ ಹುಟ್ಟುತ್ತದೆ. ಮುಂದೆ ತಮಗೆ ತೊಂದರೆಯಾಗಬಹುದು ಎಂದು ಕೇಂದ್ರದಲ್ಲಿ ಮಂತ್ರಿ ಮಾಡಲು ಯಾರ ಹೆಸರನ್ನು ಸೂಚಿಸುತ್ತಲೇ ಇರಲ್ಲಿಲ್ಲವಂತೆ.
ಕುಮಾರಿ ಜಯಲಲಿತಾ; 1998ರ ಎನ್ಡಿಎ ಸರಕಾರದ ಭಾಗವಾಗಿದ್ದ ಅಣ್ಣಾ ಡಿಎಂಕೆ ನಾಯಕಿ ಜಯಲಲಿತಾರವರು
ವಾಜಪೇಯಿಯವರಿಗೆ ಕೊಟ್ಟ ಕಿರುಕುಳ ಹಾಕುತ್ತಿದ್ದ ಒತ್ತಡ ಅಷ್ಟಿಷ್ಟಲ್ಲಾ. ವಾಜಪೇಯಿ ಯವರಿಗೆ ಈಕೆ ದೊಡ್ಡ ತಲೆನೋವಾಗಿ
ಪರಿಣಮಿಸಿದ್ದರು. ತನ್ನ ಮೇಲೆ ದಾಖಲಾಗಿದ್ದ ಭ್ರಷ್ಟಾಚಾರದ ಪ್ರಕರಣಗಳಿಂದ ಪಾರಾಗುವ ಅಜೆಂಡಾ ಹೊರತು ಪಡಿಸಿ ಮತ್ತೇನು ಆಕೆಗೆ ಇರಲಿಲ್ಲ. ಅಣ್ಣಾ ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯ ಆರ್.ಕೆ.ಕುಮಾರ್ ರವರು ಹಣಕಾಸು ರಾಜ್ಯ ಸಚಿವರಾಗಿರುತ್ತಾರೆ.
ಭ್ರಷ್ಟಚಾರದ ಹಲವು ಪ್ರಕರಣಗಳಲ್ಲಿ ಮೊಕದ್ದಮೆ ಮತ್ತು ತನಿಖೆ ಎದುರಿಸುತ್ತಿದ್ದ ಜಯಲಲಿತಾರವರನ್ನು ಕಾಪಾಡುವುದೇ ಇವರ ಪ್ರಮುಖ ಕೆಲಸವಾಗಿತ್ತು. ಎಷ್ಟೇ ಬೆವರು ಸುರಿಸುತ್ತಿದ್ದರೂ ಜಯಲಲಿತಾ ರನ್ನು ಸಮಾಧಾನ ಮಾಡಲು ಸಾಧ್ಯವೇ ಆಗಲಿಲ್ಲ. ಇವರ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದರು 1999 ಅಕ್ಟೋಬರ್ ನಲ್ಲಿ ತೀರಿಕೊಂಡರು.
ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆ ತರಲು ಸುಗ್ರೀವಾಜ್ಞೆಯ ಮೂಲಕ ಹೊಸ ನೀತಿಯನ್ನು ಜಾರಿಗೆ ತರುತ್ತಾರೆ. ಜಯಲಲಿತಾ
ಅವರಿಗೆ ಸದಾ ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವುದೇ ಉದ್ದೇಶವಾಗಿದ್ದ ಕಾರಣ ವಿದ್ಯುತ್ ಸುಧಾರಣಾ ಆದೇಶ
ರೈತವಿರೋಧಿ ನಾವು ಬೆಂಬಲಿಸುವುದಿಲ್ಲ ಎಂದು ಘೋಷಿಸುತ್ತಾರೆ. ಅಂದಿನ ವಿದ್ಯುತ್ ಸಚಿವರಾಗಿದ್ದ ಕುಮಾರ ಮಂಗಳಂ ರವರು ಈ ಆದೇಶಕ್ಕೆ ಒಪ್ಪಿಗೆ ನೀಡಿದ್ದೇ ಕೇಂದ್ರ ಕಾನೂನು ಸಚಿವ ತಂಬಿದೊರೈ ಎಂದಾಗ ಪಾಪ ತಂಬಿದೊರೈ ಸಂಕಟ ಹೇಳತೀರದು.
ಅಯ್ಯಯೋ ನಾನು ಆದೇಶವನ್ನು ಕೇವಲ ಕಾನೂನಾತ್ಮಕ ದೃಷ್ಟಿಯಿಂದ ನೋಡಿದ್ದು ರಾಜಕೀಯವಾಗಿ ಅಲ್ಲ ಎಂದು ಅಮ್ಮಾವರ ಅವಕೃಪೆಯಿಂದ ಪಾರಾಗಲು ಹೆಣಗಾಡುತ್ತಾರೆ. ವಾಜಪೇಯಿ ಮೆಚ್ಚಿದ ದೇವೆಗೌಡರು; ವಾಜಪೇಯಿ ಯವರು
ದೇವೆಗೌಡರ ಗಟ್ಟಿತನ ಮತ್ತು ದೃಢವಾದ ನಿರ್ಧಾರಗಳನ್ನು ಬಹುವಾಗಿ ಮೆಚ್ಚುತ್ತಿದ್ದರಂತೆ. 96ರಲ್ಲಿ ಪ್ರಧಾನಿ ಯಾದಾಗ
ದೇವೆಗೌಡರು ಯೂರಿಯಾ ಬೆಲೆಯನ್ನು ಹೆಚ್ಚಳ ಮಾಡುತ್ತಾರೆ.
ಸಂಸತ್ತಿನಲ್ಲಿ ದೊಡ್ಡ ಗದ್ದಲವಾಗುತ್ತದೆ. ಬಿಜೆಪಿ ಸಹಿತ ತಮ್ಮ ಸಮ್ಮಿಶ್ರ ಸರಕಾರದ ಭಾಗಿ ಪಕ್ಷಗಳ ಮುಖಂಡರು ಗಳು ಬೆಲೆಯೇರಿಕೆಯನ್ನು ಹಿಂತೆಗೆದು ಕೊಳ್ಳಲು ಬಾರಿ ಒತ್ತಡ ಹೇರುತ್ತಾರೆ. ಆದರೆ ಗೌಡರು ಮಾತ್ರ ಜಗ್ಗುವುದಿಲ್ಲ. ಕಾಂಗ್ರೇಸ್ ಬೆಂಬಲದಿಂದ ಸರಕಾರ ನಡೆಸುತ್ತಿದ್ದರೂ ಒತ್ತಡಕ್ಕೆ ಮಣಿಯದೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ.
ಪ್ರಾದೇಶಿಕ ಪಕ್ಷಗಳ ಅವಾಂತರಗಳು; ಸಮತಾ ಪಾರ್ಟಿಗೆ ಬಿಹಾರದ ಆರ್ಜೆಡಿ ಸರಕಾರ ವಜಾ ಮಾಡಿ ರಾಷ್ಟ್ರಪತಿ ಆಡಳಿತ
ಹೇರಬೇಕು. ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. 1998ರಲ್ಲಿಯೂ ಅದೇ ಬೇಡಿಕೆ 2014ರಲ್ಲಿಯೂ ನಿತೀಶ್ ಕುಮಾರ್
ರವರದು ಅದೇ ಬೇಡಿಕೆ. ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಳದ ಅಂದಿನ ಎಡರಂಗ ಸರಕಾರವನ್ನು ವಜಾ ಮಾಡಿ
ರಾಷ್ಟ್ರಪತಿ ಆಡಳಿತ ಹೇರಬೇಕು. ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಉದ್ದಿಮೆಗಳಲ್ಲಿ ಹೆಚ್ಚು ಹೆಚ್ಚು ಬಂಡವಾಳ ಹೂಡಬೇಕು ಮತ್ತು ತೃಪ್ತಿಯಾಗದಷ್ಟು ರೈಲ್ವೆ ಮಾರ್ಗ ಮತ್ತು ಹೊಸ ರೈಲುಗಳ ಬೇಡಿಕೆ.
ಜಯಲಲಿತಾರವರಿಗೆ ಡಿಎಂಕೆ ಸರಕಾರವನ್ನು ವಜಾ ಮಾಡಬೇಕು ಹಾಗೂ ತಮ್ಮ ಮೇಲೆ ನಡೆಯುತ್ತಿದ್ದ ಭ್ರಷ್ಟಾಚಾರದ
ಮೊಕದ್ದಮೆಗಳನ್ನು ಹಳ್ಳ ಹತ್ತಿಸುವುದೇ ಪ್ರಮುಖ ಅಜೆಂಡಾ. ಬಹಿರಂಗವಾಗಿ ರಾಜ್ಯದ ಸಮಸ್ಯೆಗಳ ಉಚ್ಚಾರ ವಾಜಪೇಯಿ ಬಳಿ
ಹೋದಾಗ ಅವುಗಳ ಬಗ್ಗೆ ಚಕಾರವೆತ್ತುತ್ತಿರಲಿಲ್ಲವಂತೆ.
ಉತ್ತರ ಪ್ರದೇಶದಲ್ಲಿದ್ದ ಕಾಶಿಪುರವನ್ನು ಉತ್ತರಕಾಂಡ ಸೇರಿಸಲು ಉದ್ದೇಶಿಸಿದಾಗ ಸಮ್ಮಿಶ್ರ ಸರಕಾರದ ಭಾಗವಾಗಿದ್ದ
ಅಕಾಲಿದಳ ಸುತರಾಂ ಒಪ್ಪಲಿಲ್ಲ. ಇವರ ಒತ್ತಡದ ಪರಿಣಾಮ ಉತ್ತರಾಕಾಂಡ ರಾಜ್ಯವು 5 ವರ್ಷಗಳ ನಂತರ 2003ರಲ್ಲಿ
ರಚನೆಯಾಯಿತು. 2020 ರಲ್ಲಿಯೂ ಕೂಡಾ ಅಕಾಲಿದಳ ತನ್ನ ಸ್ವಂತ ಹಿತಾಸಕ್ತಿಗೆ ಹೆಚ್ಚು ಒತ್ತು ನೀಡುವ ಗುಣವನ್ನು ಚಾಚೂ ತಪ್ಪದೆ ಕಾಪಾಡಿಕೊಂಡಿದೆ. ಆದರೆ ಈಗ ಇವರ ಹಠವನ್ನು ಕೇಳುವ ನಾಯಕತ್ವ ಇಲ್ಲದ ಕಾರಣ ಎನ್ಡಿಎ ಕೂಟದಿಂದ
ನಿರ್ಗಮಿಸಬೇಕಾಯಿತು.
ಪಿ.ಚಿದಂಬರಂ; 1996ರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ ಆರ್ಥಿಕ ಪರಿಸ್ಥಿತಿಗೆ ತಾತ್ಕಾಲಿಕ ಪರಿಹಾರದ ರೂಪದಲ್ಲಿ ಸಾರ್ವಜನಿಕ
ಉದ್ದಿಮೆಗಳಿಗೆ ಹಣಕಾಸು ವರ್ಷ ಮುಗಿಯುವ ಮುನ್ನವೇ ಲಾಭಾಂಶವನ್ನು ಘೋಷಿಸಿ ತನ್ನ ಬೊಕ್ಕಸವನ್ನು ತುಂಬಿಕೊಂಡು
ವಿತ್ತೀಯ ಕೊರತೆಯನ್ನು ಇಳಿಸುವ ತಂತ್ರ ಗಾರಿಕೆಯನ್ನು ಪಿ.ಚಿದಂಬರಂ ಮಾಡುತ್ತಾರೆ.
2014ರಲ್ಲಿಯೂ ಅವರು ಮಧ್ಯಂತರ ಬಜೆಟ್ ಮಂಡನೆ ಮಾಡಿದಾಗ ಎನ್ಪಿಎ ಗಳನ್ನು ಒತ್ತಡದ ಸಾಲಗಳು ಎಂದು ವರ್ಗಿಕರಿಸಿ ಶೇಕಡಾ 1ರಷ್ಟು ವಿತ್ತೀಯ ಕೊರತೆಯನ್ನು ಹತ್ತಿಕ್ಕಿದ್ದರು. ವಾಸ್ತವ ಸ್ಥಿತಿಯನ್ನು ಮರೆಮಾಚಿ ಸಮಸ್ಯೆಗಳನ್ನು ಮುಂದೂಡಿ
ಹೊಸ ಸರಕಾರದ ತಲೆಮೇಲೆ ಭಾರ ಹೊರೆಸಿದ್ದರು. 16 ವರ್ಷವಾದರೂ ನರಿ ಬುದ್ಧಿ ಮಾತ್ರ ಬದಲಾಗಲೇ ಇಲ್ಲ.ನರೇಂದ್ರ
ಮೋದಿ; ಭಾರತ ಅಣುಸ್ಫೋಟವನ್ನು ಕೈಗೊಂಡ ಸಂದರ್ಭದಲ್ಲಿ ದೇಶದ ಮೇಲೆ ನಿರ್ಬಂಧಗಳನ್ನು ಹೇರಿದಾಗ ಅಂದಿನ ಬಿಜೆಪಿ
ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿಯವರು ಮತ್ತು ಸುಷ್ಮ ಸ್ವರಾಜ್ ಅವರು ವ್ಯಾಪಕವಾಗಿ ಅಮೆರಿಕಾ ಪ್ರವಾಸ ಕೈಗೊಂಡು ಅನಿವಾಸಿ ಭಾರತೀಯರು ದೇಶದ ನೆರವಿಗೆ ಬರಲು ಉತ್ತೇಜಿಸುತ್ತಾರೆ.
ಅಂದು ಶೈಶಾವಸ್ಥೆಯಲ್ಲಿ ಇದ್ದ ಡಿಜಿಟಲ್ ಮೀಡಿಯಾವನ್ನು ಗರಿಷ್ಠವಾಗಿ ಉಪಯೋಗಿಸಿಕೊಂಡು ಅಮೆರಿಕದ ಭಾರತೀಯ ರನ್ನು ಸಂರ್ಪಕಿಸಿ ಭಾರತ ಸರಕಾರ ಬಿಡುಗಡೆ ಮಾಡಿದ್ದ ರಿಸರ್ಜಂಟ್ ಬಾಂಡ್ನಲ್ಲಿ ಹಣ ಹೂಡಿಸಲು ಯಶಸ್ವಿಯಾಗುತ್ತಾರೆ. ಅಷ್ಟೇ ಅಲ್ಲದೆ ಸಾವಿರಾರು ಈ ಮೇಲ್ಗಳನ್ನು ಅಮೆರಿಕಾ ಆಡಳಿತಕ್ಕೆ ಭಾರತದ ಪರವಾಗಿ ಕಳುಹಿಸುವಂತೆ ಮಾಡಿ ಅಮೆರಿಕಾ ಸರಕಾರ ಭಾರತದ ಮೇಲಿನ ನಿರ್ಬಂಧದ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡುವುದರಲ್ಲಿ ನರೇಂದ್ರ ಮೋದಿ ಮುಖ್ಯ ಭೂಮಿಕೆಯನ್ನು ವಿವರಿಸುತ್ತಾರೆ.
ಪ್ರಮೋದ್ ಮಹಾಜನ್; ಎಂತಹ ಬುದ್ಧಿವಂತರು ಕೆಲವು ಸಂದರ್ಭದಲ್ಲಿ ತಮಗೆ ಅರಿವೇ ಇಲ್ಲದೆ ತಪ್ಪು ಮಾಡುತ್ತಾರೆ.
ಪ್ರಮೋದ್ ಮಹಾಜನ್ರವರು ಪ್ರಧಾನಿಯವರ ರಾಜಕೀಯ ಕಾರ್ಯದರ್ಶಿಯಾಗಿರುತ್ತಾರೆ. ಮಹಾರಾಷ್ಟ್ರದಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ತೆರಳಿರುತ್ತಾರೆ. ಆದರೆ ತಮ್ಮ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಿಲ್ಲ. ಲಾಭದಾಯಕ ಹುದ್ದೆ ಹೊಂದಿರುವ ಕಾರಣಕ್ಕೆ ಅವರ ನಾಮಪತ್ರ ತಿರಸ್ಕಾರವಾಗುವುದು ನಿಶ್ಚಿತವಾಗಿತ್ತು. ಕೂಡಲೇ ಅವರನ್ನು ಶಕ್ತಿಸಿನ್ಹಾರವರು ಎಚ್ಚರಿಸಿ ನಾಮಪತ್ರ ಸಲ್ಲಿಸುವ ಮುನ್ನ ರಾಜೀನಾಮೆ ನೀಡುವಂತೆ ಮಾಡುತ್ತಾರೆ.
ಭಾರತದ ಪ್ರಜಾಪ್ರಭುತ್ವದ ವೈರಧ್ಯವನ್ನು ಪ್ರಮೋದ್ ಮಹಾಜನ್ರವರು ಅತ್ಯಂತ ರಸವತ್ತಾಗಿ ಚೀನಾದಲ್ಲಿ ನಡೆದ
ಘಟನೆಯನ್ನು ಲೋಕಸಭೆಯಲ್ಲಿ ವಿವರಿಸುತ್ತಾರೆ. 1996ರ ಯುನೈಟೆಡ್ ಫ್ರಂಟ್ ಸರಕಾರವಿದ್ದ ಸಂದರ್ಭದಲ್ಲಿ ಭಾರತದ
ಸಂಸತ್ ಸದಸ್ಯರ ನಿಯೋಗವೊಂದು ಚೀನಾಗೆ ಭೇಟಿ ನೀಡಿರುತ್ತದೆ.ಅಲ್ಲಿನ ಅಧಿಕಾರಿಗಳು ಪ್ರಮೋದ್ ಮಹಾಜನ್ರಿಗೆ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಹೇಗಿದೆ ಎಂದು ಪ್ರಶ್ನೆ ಮಾಡಿದಾಗ ಅವರು ನಾನು ವಿವರಿಸುತ್ತಾರೆ. ನಾನು ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಪಕ್ಷದ ಸದಸ್ಯ. ಆದರೆ ವಿರೋಧ ಪಕ್ಷ.
ಕಾಂಗ್ರೇಸ್ ಸದಸ್ಯರನ್ನು ತೋರಿಸಿ ಇವರು ಎರಡನೇ ದೊಡ್ಡ ಪಕ್ಷ ವಿರೋಧ ಪಕ್ಷದಲ್ಲಿ ಇದೆ. ಆದರೆ ಆಡಳಿತ ಪಕ್ಷಕ್ಕೆ ಬೆಂಬಲ ಕೊಡುತ್ತಿದೆ. ಸಿಪಿಐ (ಎಂ) ಸದಸ್ಯರನ್ನು ತೋರಿಸಿ ಇವರದು ಮೂರನೆ ಅತಿ ದೊಡ್ಡಪಕ್ಷ ಸರಕಾರವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಸರಕಾರದಲ್ಲಿ ಇಲ್ಲ. ಮಹಾರಾಷ್ಟ್ರ ಗೋಮಾಂತಕ ಪಕ್ಷದ ಸದಸ್ಯರಾದ ರಮಾಕಾಂತ್ ಖಲಾಪ್ರವರನ್ನು ತೋರಿಸಿ ಇವರ ಪಕ್ಷದ ಏಕೈಕ ಸದಸ್ಯರು. ಆದರೆ ಇವರೇ ಸರಕಾರ. ಸಭೆಯಲ್ಲಿ ಇದ್ದವರು ಇವರ ವಿವರಣೆ ಮಾಡಿದ ಶೈಲಿಗೆ ಹೊಟ್ಟೆ ಹುಣ್ಣಾಗು ವಷ್ಟು ನಕ್ಕಿದ್ದರು.
ಇಡೀ ಪುಸ್ತಕದಲ್ಲಿ ಎಲ್ಲಿಯೂ ತಮ್ಮನ್ನು ವೈಭವೀಕರಿಸಿಕೊಳ್ಳದೆ ಕೇವಲ ವಾಜಪೇಯಿಯರ ಕೌಶಲ್ಯತನ ಮೇರು ನಾಯಕತ್ವ
ಮತ್ತು ಸಮ್ಮಿಶ್ರ ಸರಕಾರದ ಗೊಂದಲಗಳನ್ನು ಜಾಣ್ಮೆೆಯಿಂದ ನಿರ್ವಹಿಸಿದ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟು ಎಲ್ಲಿಯೂ
ಬೇಸವಾಗದಂತೆ ಬರೆದಿದ್ದಾರೆ.