Friday, 22nd November 2024

ಶಾರ್ದೂಲ ಘರ್ಜನೆ: ಭಾರತ ಶಿಬಿರದಲ್ಲಿ ಸುಂದರ ಕಾಂಡ

ಭಾರತ ಕ್ರಿಕೆಟ್ ತಂಡವೀಗ ಕುಸಿಯುವ ಸೌಧವಲ್ಲ; ಕೊನೆವರೆಗೆ ಹೋರಾಡುವ ಯೋಧ

ಪಿ.ಎಂ.ವಿಜಯೇಂದ್ರ ರಾವ್

ಮನೆಯೊಡತಿ ಹೊರಗಾಗಿರುವಾಗ, ಸೂಚನೆ ಕೊಡದೇ ಬಂದಿಳಿದ ಅತಿಥಿಗಳಿಗೆ ಆತಿಥ್ಯವನ್ನು ಯಾರು ಮಾಡಬೇಕು? ಅತಿಥಿ
ಗಳು ಬಂದಿಳಿದಿರುವುದು ಬೇರೆ ಅಪರೂಪಕ್ಕೆ. ವಿಧಿ ಇಲ್ಲದೆ, ಬಲಿಯದ ಮಕ್ಕಳಿಂದ ಅಡುಗೆಯನ್ನು ಆಗಷ್ಟೇ ಹೇಳಿಕೊಟ್ಟು ಮಾಡಿಸದೇ ಬೇರೆ ದಾರಿಯೇ ಇಲ್ಲ. ಆ ನೂತನ ‘ಅಡುಗೆ ಪ್ರಯೋಗ’ವೇ, ಅಚ್ಚರಿಯಾಗುವಂತೆ ಸಫಲವಾಗಿ, ಅತಿಥಿಗಳು ಸಂತಸ ದಿಂದ ರುಚಿಯಾದ ಊಟ ಮಾಡಿ ಪ್ರಶಂಸಿಸುವುದನ್ನು ಊಹಿಸಿಕೊಳ್ಳಿ.

ಇದೇ ಕತೆಯನ್ನು ಕರೋನಾ ಛಾಯೆಯಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಕ್ರಿಕೆಟ್ ತಂಡಕ್ಕೆ ಸೇರಿರುವ
ಹುಡುಗರಿಗೆ ಹೋಲಿಕೆ ಮಾಡಬಹುದು. ತಂಡದ ಘಟಾನುಘಟಿಗಳು ಅನಿರೀಕ್ಷಿತವಾಗಿ ಒಬ್ಬರ ನಂತರ ಮತ್ತೊಬ್ಬರಂತೆ,
ಗಾಯಾಳುಗಳಾಗಿ ತಂಡದಿಂದ ಹೊರಬೀಳುತ್ತಿದ್ದಾರೆ. ಪ್ರಸಕ್ತ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ರಕ್ಷಿಸುವ ಹೊಣೆ ಹೊಸಬರ ಹೆಗಲ
ಮೇಲಿದೆ.

ಶ್ರದ್ಧೆಯಿಂದ ಹೊಸ ಜವಾಬ್ದಾರಿ ನಿರ್ವಹಿಸಿದ ಮಕ್ಕಳಂತೆ ತಂಡದ ನವ ಸದಸ್ಯರು ತಮ್ಮ ಹೊಣೆಯನ್ನು ಹಗುರ ಮಾಡಿಕೊಂಡಿ ದ್ದಾರೆ. ಇದೀಗ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ನ ಮೂರನೇ ದಿನದ ಆಟ ಮುಕ್ತಾಯವಾಗಿದೆ. ಒಂದು ಹಂತದಲ್ಲಿ, ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದ ಭಾರತ ತಂಡವನ್ನು ಮೇಲೆತ್ತಿದವರು ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್.

ಪ್ರಸಕ್ತ ಪ್ರವಾಸದ ಎಲ್ಲಾ ಪ್ರಕಾರಗಳಲ್ಲೂ ಉಭಯ ತಂಡಗಳೂ ಸಮ-ಸಮವಾಗೇ ಸೆಣಸುತ್ತಿವೆ. ಏಕದಿನ ಸರಣಿಯಲ್ಲಿ ಆಸ್ಟ್ರೇಲಿ
ಯಾ ಗೆದ್ದರೆ, ಟಿ-20ಯಲ್ಲಿ ಭಾರತ ಮೇಲುಗೈ ಸಾಧಿಸಿತು. ಮೊದಲ ಟೆಸ್ಟ್‌‌ನಲ್ಲಿ ದಯನೀಯವಾಗಿ ಶರಣಾದ ಅತಿಥಿಗಳು ಎರಡನೆಯ ಟೆಸ್ಟ್‌‌ನಲ್ಲಿ ಅಷ್ಟೇ ಅಂತರದಿಂದ ಗೆದ್ದರು.

ಮೂರನೆಯ ಟೆಸ್ಟ್‌ ಡ್ರಾ ಆದರೂ ಮೈ ನವಿರೇಳಿಸುವಲ್ಲಿ ವಿಫಲವಾಗಲಿಲ್ಲ. ರಾಜಕೀಯ ಇತಿಹಾಸದಲ್ಲಿ ಭಾರತ ಹೇಗೆ ಆಕ್ರಮಣ ಕಾರಿ ಪ್ರವೃತ್ತಿ ಪ್ರದರ್ಶಿಸಿಲ್ಲವೋ, ಅದೇ ಸೌಮ್ಯ ನೀತಿ ಅನುಸರಿಸಿಯೇ ನಮ್ಮ ಕ್ರಿಕೆಟಿಗರು ಕ್ರಿಕೆಟ್ ಅಭಿಮಾನಿಗಳ ಮನಗಳನ್ನು ಗೆದ್ದರು. ಆ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಗೂಟ ಹೊಡೆದು ನಿಲ್ಲುವುದಕ್ಕೆ ಹೆಸರು ಮಾಡಿದ ಚೇತೇಶ್ವರ ಪೂಜಾರ ಮಂದಗತಿ
ಯಿಂದ ನವಜಾತ ಕ್ರಿಕೆಟ್ ಅಭಿಮಾನಿಗಳ ಅನಾದರಕ್ಕೆ ತುತ್ತಾಗಬೇಕಾಯಿತು.

ಹೊಸ ಹುಡುಗರು ಹುಟ್ಟಿಸಿದ ಹೊಸ ಭರವಸೆ : ಚೇತೇಶ್ವರ ಪೂಜಾರ ಅವರ, ಆಮೆನಡಿಗೆಯ ಬ್ಯಾಟಿಂಗ್‌ನಿಂದ ಬೇಸರ ಗೊಂಡ ಅದೇ ಅಭಿಮಾನಿಗಳು, ನಶ್ವರ ಜಗತ್ತಿನಲ್ಲಿ ಶಾಶ್ವತವಾಗಿ ಇರಬಹುದಾದದ್ದು ಪೂಜಾರನ ಬ್ಯಾಟಿಂಗ್ ಒಂದೇ ಎಂದು ನಂಬಿ, ಟೆಸ್ಟ್ ಕ್ರಿಕೆಟ್‌ನಲ್ಲಿ ನಿಧಾನವೇ ಪ್ರಧಾನ ಎಂಬುದನ್ನು ಮನಗಂಡರು. ಅರ್ಧ ಶತಕ ಗಳಿಸಿ ಆತ ಔಟಾದ ನಂತರವೂ ಆತನನ್ನೂ ನಾಚಿಸುವಂತೆ ಸಾಧಿಸಿದ್ದು ಗಾಯಗೊಂಡ ‘ವೀರಾಂಜನೇಯ’ ಹನುಮ ವಿಹಾರಿ ಮತ್ತು ಅಶ್ವಿನಿ ದೇವತೆಯಾಗಿ ರೂಪುಗೊಂಡ ರವಿಚಂದ್ರನ್ ಅಶ್ವಿನ್.

ಭಾರತ 200 ರನ್ ಗಳಿಸಲೂ ಶಕ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದ ಮಾಜಿ ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್, ಬೆಂಗಳೂರು ಪ್ರಳಯದಲ್ಲಿ ಮುಳುಗಿ ಹೋಗುವುದೆಂದು ನುಡಿದಿದ್ದ ಜ್ಯೋತಿಷಿಯಂತೆ ಹಾಸ್ಯಾಸ್ಪದನಾದ. ರಿಕಿ ಬ್ಯಾಟ್ ಮಾಡುತ್ತಿದ್ದುದು ಮೂರನೇ ಕ್ರಮಾಂಕದಲ್ಲಿ. ಟೆಸ್ಟ್‌‌ನಲ್ಲಿ ಆ ಸ್ಥಾನಕ್ಕೆ ವಿಶೇಷವಾದ ಮಹತ್ವವಿದೆ.

ಭಾರತ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡ ಇಬ್ಬರು ಅಸಾಮಾನ್ಯ ಮೂರನೇ ಕ್ರಮಾಂಕದ ದಾಂಡಿಗರೆಂದರೆ ರಾಹುಲ್ ದ್ರಾವಿಡ್ ಮತ್ತು ಪೂಜಾರ. ಅವರ ಸಾಧನೆಯ ಅಂಕಿ ಅಂಶಗಳೇ ಅವರ ಪರವಾಗಿ ವಾದಿಸುತ್ತವೆ. ಆರಂಭಿಕ ಆಟಗಾರರು ಭದ್ರವಾದ ಬುನಾದಿ ಹಾಕುವಲ್ಲಿ ವಿಫಲರಾದರೆ ನಂಬರ್ 3 ದಾಂಡಿಗನಿಗೆ ಹೆಚ್ಚಿನ ಹೊರೆ ಬಿತ್ತು ಎಂದೇ ಅರ್ಥ. ಇನಿಂಗ್ಸ್ ಸ್ಥಿರಗೊಳಿಸುವಲ್ಲಿ ಮೊದಲ ಮೂವರು ಬ್ಯಾಟ್ಸ್ಮನ್ಗಳ ಜವಾಬ್ದಾರಿ ಹೆಚ್ಚಿನದು. ಮುದ್ರಾಧಾರಣೆಯ ಉಪಮೆ ಕೊಡಬಹುದಾದರೆ, ಮೊದಲ ಕೆಲವು ಭಕ್ತರ ಚರ್ಮ ಸುಟ್ಟು ಹೋಗುತ್ತದೆ. ಅದಕ್ಕೆ ಎದೆ ಕೊಡುವವರದ್ದು ಗಂಡೆದೆಯೇ ಸರಿ. ಹೊಸ ಚೆಂಡು ತನ್ನ ಹೊಳಪು ಕಳೆದುಕೊಳ್ಳುವ ತನಕವಾದರೂ ಆ ಮೂವರು ಹೆಚ್ಚು ಹೊತ್ತು ನಿಲ್ಲಬೇಕು.

ತಡವಾಗಿ ತಂಡಕ್ಕೆ ಸೇರ್ಪಡೆಗೊಂಡ ರೋಹಿತ್ ಶರ್ಮಾನ ಆಗಮನದವರೆಗೂ ಭಾರತಕ್ಕೆ ಈ ಸರಣಿಯಲ್ಲಿ ಉತ್ತಮ ಆರಂಭ
ಸಿಕ್ಕಿರಲಿಲ್ಲ. ಚೆನ್ನಾಗಿಯೇ ಆಡುತ್ತಿದ್ದ ರೋಹಿತ್ (ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಪ್ರಕಾರ)
ಬೇಜವಾಬ್ದಾರಿ ಹೊಡೆತಕ್ಕೆ ಔಟಾದರು. ಆದರೆ, ರೋಹಿತ್ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಅಂಥದೇ ಬಾಲ್ ಎದುರಿಸುವಾಗ ಅಂಥದೇ ಸ್ಟ್ರೋಕ್ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.

ಇದು ಟಿ-20 ರೂಪಿಸಿದ ಮನೋಸ್ಥಿತಿ ಎನ್ನಲಾಗದು. ಟಿ-20 ಮ್ಯಾಚ್ ನಲ್ಲಾದರೆ ಸ್ಫೂರ್ತಿ ತುಂಬಲು ಚಿಯರ್ ಲೀಡರ್‌ಗಳಿರುತ್ತಾರೆ. ಬೌಂಡರಿ/ಸಿಕ್ಸರ್ ಬಾರಿಸಿದರೆ, ವಿಕೆಟ್ ಬಿದ್ದರೆ ಮೈಮೇಲೆ ಬಂದವರಂತೆ ಕುಣಿಯುತ್ತಾರೆ. ಟೆಸ್ಟ್‌‌ನಲ್ಲಿ ಅವರ ನೆರಳೂ ಕಾಣದು. ಕೋವಿಡ್ ಕಾರಣದಿಂದ ಪ್ರೇಕ್ಷಕರ ಸಂಖ್ಯೆಯೂ ಬೆರಳೆಣಿಕೆಯಷ್ಟೇ ಇದೆ. ಪ್ರಸಕ್ತ ಟೆಸ್ಟ್‌‌ನಲ್ಲಿ   ಮಿಂಚಿರುವ ರೆಲ್ಲರೂ ಐಪಿಎಲ್‌ನಲ್ಲಿ ಪಾಲ್ಗೊಂಡವರೇ. ಅದರ ಪ್ರಭಾವ ಅವರ ಮೇಲೂ ಆಗಿಲ್ಲವೇಕೆ? ಅನುಭವಿ ಆಟಗಾರರ ಅನುಪಸ್ಥಿತಿಯನ್ನು ಯಶಸ್ವಿಯಾಗಿ ತುಂಬಿರುವ ಮೊಹಮದ್ ಸಿರಾಜ್, ಠಾಕೂರ್, ನವದೀಪ್ ಸೈನಿ, ನಟರಾಜನ್, ವಾಷಿಂಗ್ಟನ್ ಸುಂದರ್ ಇವರೆಲ್ಲರೂ ಹುರಿದುಂಬಿಸಲ್ಪಡಬೇಕಾದವರು.

ಆಟೋರಿಕ್ಷಾ ಚಾಲಕನ ಮಗನಾದ ಸಿರಾಜ್ ಸತ್ತ ತಂದೆಯನ್ನು ನೋಡಲು ಹೋಗಲಾಗಲಿಲ್ಲ. ಆತ ಎದುರಿಸಬೇಕಾದದ್ದು ಹೊಸದಾಗಿ ಪದಾರ್ಪಣೆ ಮಾಡುವ ಆಟಗಾರ ಎದುರಿಸಬೇಕಾದ ಸವಾಲಷ್ಟೇ ಅಲ್ಲ. ಬೌಂಡರಿ ಬಳಿ ಫೀಲ್ಡ್ ಮಾಡುವಾಗ
ಕೇಳಬೇಕಾದ ವರ್ಣಬೇಧ ಅಸಹ್ಯ ನುಡಿಗಳನ್ನು. ಅದರಿಂದ ವಿಚಲಿತನಾಗದೆ ಸಾಧನೆಗೈದ ಸಿರಾಜ್‌ಗೆ ನ್ಯಾಯ ಮತ್ತು ಶ್ರೇಯಸ್ಸು
ಸಿಗಲಿ. ತೂಕ ಹೆಚ್ಚೆಂಬ ಕಾರಣಕ್ಕೆ ಜೂನಿಯರ್ ಕ್ರಿಕೆಟ್‌ನಲ್ಲಿ ನಿರಾಸೆ ಅನುಭವಿಸಿದ್ದ ಠಾಕೂರ್‌ಗೆ ಸ್ಥೈರ್ಯ ತುಂಬಿದ್ದು. ದೂರದ
ಪಲ್ಘಾರ್ನಿಂದ ಮುಂಬೈಗೆ ರೈಲಿನಲ್ಲಿ (ಕೆಲವೊಮ್ಮೆ ಕಿಟ್ಟನ್ನು ತಲೆಯ ಮೇಲೆ ಹೊತ್ತುಕೊಂಡೇ) ಪ್ರಯಾಣಿಸಿ ಈ ಹಂತಕ್ಕೆ ಬೆಳೆದ ಆತನ ಶ್ರಮಕ್ಕೂ ಹೆಚ್ಚಿನ ದೊರಕಲಿ.

ಹರಿಯಾಣಾದ ಕರ್ನಲ್ ಹುಡುಗ ಸೈನಿ, ಆರ್‌ಸಿಬಿ ಅಭಿಮಾನಿಗಳಿಗೂ ಪರಿಚಿತನೇ. ಸೈನಿಯ ತಂದೆಯ ತಂದೆ ಸ್ವಾತಂತ್ರ್ಯ
ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸರ ಹೆಗಲಿಗೆ ಹೆಗಲು ನೀಡಿದವರು ಎಂದು ಹೇಳಲಾಗುತ್ತದೆ. ಉನ್ನತ ಮಟ್ಟದಲ್ಲಿ ಸಿಕ್ಕ
ಎರಡನೇ ಅವಕಾಶ ಬಳಸಿಕೊಳ್ಳುವಲ್ಲಿ ಆತನಿಗೆ ಫಿಟ್ನೆಸ್ ತೊಡಕಾಗಿದೆ.

ಅವನಿಗೂ ಶುಭವಾಗಲಿ. ನಾಯಕ ವಿರಾಟ್ ಕೊಹ್ಲಿಯಾದರೋ ಮುನ್ನವೇ ಕ್ರಿಕೆಟ್‌ನಿಂದ ರಜಾ ಪಡೆದು ಭಾರತಕ್ಕೆ ವಾಪಸ್ ಆಗಿ
ಸಂಸಾರದ ಸುಖದಲ್ಲಿದ್ದಾನೆ. ತಂದೆಯಾಗಿ ಮೂರು ತಿಂಗಳಾದರೂ ಪತ್ನಿಯನ್ನಾಗಲೀ, ನವಜಾತ ಶಿಶುವನ್ನಾಗಲಿ ದರ್ಶಿಸುವ ಭಾಗ್ಯ ನಟರಾಜನ್‌ಗೆ ಬಂದಿಲ್ಲ. ವಾಹನ ಚಾಲಕರಾಗಿ ಸಲ್ಲಿಸುವ ಈತನ ತಂದೆಯ ಕಷ್ಟ ಕಾರ್ಪಣ್ಯ ಈಗಷ್ಟೇ ಕೊನೆಗಾಣುತ್ತಿದೆ. ದೊರಕಿದ ಮೊದಲ ಅವಕಾಶದಲ್ಲೇ ಬೆನ್ನುತಟ್ಟಿಸಿಕೊಂಡ ಈತನಿಗೂ, ಕಷ್ಟಪಟ್ಟೇ ಮುಂದೆ ಬಂದು ಮೂರೇ ದಿನದಲ್ಲಿ ನಾಡಿನ ಕ್ರೀಡಾಭಿಮಾನಿಗಳ ಮನಸ್ಸು ಅಲಂಕರಿಸಿರುವ ಸುಂದರ್‌ಗೂ ಮತ್ತಷ್ಟು ಜಯ ಲಭಿಸಲಿ.

ಆಸ್ಟ್ರೇಲಿಯಾ ತಂಡ ಹೊರದೇಶದಲ್ಲಿ (ಓವಲ್‌ನಲ್ಲಿ) ಆಡಿದ ತನ್ನ ಪ್ರಥಮ ಟೆಸ್ಟ್‌ (1880) ಬಿಟ್ಟರೆ, ತಂಡವೊಂದರ ಮುಖ್ಯ ಬೌಲರ್ ಗಳು ಒಟ್ಟಾರೆಯಾಗಿ ಗಳಿಸಿದ ವಿಕೆಟ್ ಲೆಕ್ಕದಲ್ಲಿ ಇಷ್ಟು ಅನನುಭವಿಗಳು ಒಂದು ಟೆಸ್ಟ್‌‌ನಲ್ಲಿ ಆಡುತ್ತಿರುವುದು ಇದೇ ಮೊದಲು. ಅವರೆಲ್ಲರೂ ಕಡುಬಡತನದಿಂದ ಬಂದವರೆಂಬುದು ಅಷ್ಟೇ ಗಮನಾರ್ಹ. ಆ ಹಿನ್ನೆಲೆಯೇ ಅವರಿಂದು ಕ್ರಿಕೆಟ್‌ನ ಕ್ಲಿಷ್ಟಕರ ಪರಿಸ್ಥಿತಿಗೆ ಸರಾಗವಾಗಿ ಹೊಂದಿಕೊಂಡು ಕೆಚ್ಚೆದೆಯ ಪ್ರದರ್ಶನ ನೀಡುತ್ತಿದ್ದಾರೆ.

ಸೋಲು ಅಸಂಭವ 
ಕ್ರಿಕೆಟ್ ಅಮೋಘ ಅನಿಶ್ಚಿತತೆಗೆ ಮತ್ತೊಂದು ಹೆಸರು. ಮುಂಚೂಣಿ ಆಟಗಾರರು ಹೊರಬೀಳದಿದ್ದರೆ ಈ ಪ್ರತಿಭಾವಂತ ದಿಟ್ಟರಿಗೆ ಸದ್ಯಕ್ಕಂತೂ ಅವಕಾಶ ಸಿಗುತ್ತಿರಲಿಲ್ಲ. ಹೊರ ಹೋದವರು ಹಿಂತಿರುಗಿದ ನಂತರ ತಮಗೆ ಮತ್ತೆ ಅವಕಾಶ ಸಿಕ್ಕೀತೆ ಎಂಬ ಅನಿಶ್ಚಿತತೆ ಈ ಹುಡುಗರನ್ನು ಕಾಡದಿರಲಿ. ಉಳಿದ ಇನ್ನೆರಡು ದಿನಗಳ ಆಟದಲ್ಲಿ ಅವರು ಇನ್ನಷ್ಟು ಹುಮ್ಮಸ್ಸಿನಿಂದ ಆಡಿ ತಂಡಕ್ಕೆ ಕೊಡುಗೆ ನೀಡಲಿ.

ಮೂರನೇ ಟೆಸ್ಟ್‌‌ನಂತೆ ಈ ಟೆಸ್ಟ್‌ ಕೂಡ ಡ್ರಾ ಆದರೂ ಬಾರ್ಡರ್-ಗವಾಸ್ಕರ್ ಟ್ರೋಫಿ ನಮ್ಮಲ್ಲೇ ಉಳಿಯುತ್ತದೆ. ಸದ್ಯ ನಮ್ಮ ಹುಡುಗರ ಬದ್ಧತೆ ನೋಡಿದರೆ, ಭಾರತ ಸೋಲುವುದಂತೂ ಅಸಂಭವ.

ಸುಂದರ್‌ಗೆ ವಾಷಿಂಗ್ಟನ್ ಅಂಟಿದ್ದು ಹೇಗೆ?
ಕ್ರಿಕೆಟ್ ಪ್ರೇಮಿಯಾದ ಸುಂದರ್‌ನ ತಂದೆ ಬಡತನದ ಬವಣೆಯಲ್ಲಿದ್ದುದರಿಂದ ಆತನಿಗೆ ಕ್ರಿಕೆಟ್ ಆಡಲು ಪ್ರೋತ್ಸಾಹ ನೀಡಿ,
ಆರ್ಥಿಕವಾಗಿಯೂ ಸಹಾಯ ನೀಡಿದವರು ಸಮೀಪದಲ್ಲಿ ವಾಸವಿದ್ದ ವಾಷಿಂಗ್ಟನ್ ಹೆಸರಿನ ಮಿಲಿಟರಿ ಆಫೀಸರ್. ಸುಂದರ್ ಹುಟ್ಟುವ ಮುನ್ನ ಕಾಲವಾದ ಅವರ ನೆನಪಿಗೆ ಸುಂದರ್ ಹೆಸರಿನ ಮುಂದೆ ಆಫೀಸರ್ ವಾಷಿಂಗ್ಟನ್ ಹೆಸರನ್ನೂ ಜೋಡಿಸ ಲಾಯಿತಂತೆ.

ತಂಡದ ಬಾಲವೆಲ್ಲಿದೆ? 
ಸಿಂಪಲ್ ಆಗಿ ಅನ್ನ, ಸಾರು, ಪಲ್ಯ ಮಾಡಿ ಅಂದರೆ ಜತೆಗೆ ಪಾಯಸನೂ ಮಾಡ್ತೀವಿ ಅಂತ ಉತ್ಸಾಹ ಮೆರೆವ ಮಕ್ಕಳಂತೆ,
ಬೌಲಿಂಗ್ ವಿಭಾಗದಲ್ಲಿ ಸಮರ್ಪಕವಾಗೇ ತಮ್ಮ ಜವಾಬ್ದಾರಿ ನಿರ್ವಹಿಸಿದ್ದ ಇವರಿಬ್ಬರೂ, ಮುಂಚೂಣಿ ಬ್ಯಾಟ್ಸಮನ್
ಗಳಿಗಿಂತ ತಾವೇ ಹೆಚ್ಚು ರನ್ ಗಳಿಸಿದ್ದು, ತಂಡದ ಬಾಲವಿರುವುದು ಹಿಂದಲ್ಲ ಮುಂದೆ ಎಂಬಂತೆ ಮಾಡಿದ್ದಾರೆ