ಪಂದ್ಯಶ್ರೇಷ್ಠ: ರಿಷಬ್ ಪಂತ್
ಸರಣಿಶ್ರೇಷ್ಠ: ಪ್ಯಾಟ್ ಕಮ್ಮಿನ್ಸ್
ಬ್ರಿಸ್ಬೇನ್: ಈ ಟೆಸ್ಟ್ ಪಂದ್ಯ ಡ್ರಾಗೊಂಡರೂ ಟೀಂ ಇಂಡಿಯಾ ಸೋಲುತ್ತಿರಲಿಲ್ಲ. ಈ ಬಾರಿಯೂ ಬಾರ್ಡರ್ -ಗವಾಸ್ಕರ್ ಟ್ರೋಫಿ ಟೀಂ ಇಂಡಿಯಾ ಬಳಿಯೇ ಇರುತ್ತಿತ್ತು. ಆದರೆ, ಅದಕ್ಕೆ ಸ್ವತಃ ಭಾರತೀಯರೇ ಸಿದ್ದರಿರಲಿಲ್ಲವೇನೋ, ಕೊನೆಯ ದಿನ ಕೂಡ ಗೆಲ್ಲುವ ಮನಸ್ಥಿತಿಯಲ್ಲೇ ಆಡಿತು. ಕಾರಣ, ಸೋಲರಿಯದ ಟೆಸ್ಟ್ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಇದುವರೆಗೂ ತಮ್ಮ ನಾಯಕತ್ವದಲ್ಲಿ ಸೋಲನ್ನೇ ಕಂಡವರಲ್ಲ. ಇಂದಿನ ಗೆಲುವಿನ ಮೂಲಕ ರಹಾನೆ ಸೋಲರಿಯದ ಸರದಾರನಾಗಿ ಮೂಡಿಬಂದರು.
ಅಂತೆಯೇ, ಗಾಬ್ಬಾ ಅಂಗಳದಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ತಂಡ ಮೂರು ವಿಕೆಟ್ ಅಂತರದಲ್ಲಿ ಪಂದ್ಯ ಗೆದ್ದು, 2-1 ಅಂತರದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿ ಗೆದ್ದು ಬೀಗಿದೆ.
ಗೆಲುವಿಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ 328 ರನ್ ಗುರಿ ಪಡೆದ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾ ದರು.
ಪೂಜಾರ- ಗಿಲ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು. ತನ್ನ ಎರಡನೇ ಅರ್ಧಶತಕ ಬಾರಿಸಿದ ಶುಭ್ಮನ್ ಗಿಲ್ ಕೇವಲ ಒಂಬತ್ತು ರನ್ ಅಂತರದಲ್ಲಿ ಚೊಚ್ಚಲ ಶತಕ ತಪ್ಪಿಸಿಕೊಂಡರು. 91 ರನ್ ಗಳಿಸಿ ಲಯಾನ್ ಗೆ ವಿಕೆಟ್ ಒಪ್ಪಿಸಿದರು. ತಾಳ್ಮೆಯುತ ಬ್ಯಾಟಿಂಗ್ ನಡೆಸಿದ 56 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.
ವೇಗವಾಗಿ ಆಡುವ ಇರಾದೆ ತೋರಿದ ನಾಯಕ ರಹಾನೆ 22 ರನ್ ಗಳಿಸಿ ಔಟಾದರು. ಮಯಾಂಕ್ ಆಟವೂ 9 ರನ್ ಗೆ ಅಂತ್ಯ ವಾಯಿತು. ಆದರೆ ಕೀಪರ್ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಜಯ ಒದಗಿಸಿದರು.
ಆಸೀಸ್ ಪರ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ನಥನ್ ಲಯಾನ್ ಎರಡು ಮತ್ತು ಹ್ಯಾಜಲ್ ವುಡ್ ಒಂದು ವಿಕೆಟ್ ಪಡೆದರು.
ಟೀಂ ಇಂಡಿಯಾದ ಗೆಲುವಿನ ಸಂಭ್ರಮಾರಣೆ ವೇಳೆ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರು, ಆಸೀಸ್ ಸ್ಪಿನ್ನರ್ ನಥನ್ ಲಿಯೋನ್ಗೆ ಅವರ ನೂರನೇ ಟೆಸ್ಟ್ ಪಂದ್ಯದ ನೆನಪಿಗಾಗಿ ಭಾರತೀಯ ತಂಡದ ಜರ್ಸಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು.